ಖಲಿಸ್ತಾನ್ ಪ್ರತ್ಯೇಕ ಕೂಗಿನ ಐತಿಹಾಸಿಕ ಹಿನ್ನೆಲೆ
ಖಲಿಸ್ತಾನದ ಕಲ್ಪನೆಯು ಸಿಖ್ ಧರ್ಮದಲ್ಲಿ ಅತಿಯಾಗಿ ಬೇರೂರಿದ ಒಂದು ಹೋರಾಟದ ಕಿಡಿಯೆಂದೇ ಭಾವಿಸಲಾಗಿದೆ. ಮುಂದೊಂದು ದಿನ ಪ್ರತ್ಯೇಕ ದೇಶದ ಸ್ಥಾನಮಾನಗಳನ್ನು ಪಡೆಯುವುದರಲ್ಲಿ ಯಾವುದೇ ಸಂದೇಹಗಳಿಲ್ಲ ಎಂಬುವುದು ಅವರ ಅತಿಯಾದ ನಂಬಿಕೆ. ಆದರೆ ಭಾರತ ಸಂವಿಧಾನದ ಪ್ರಕಾರ ಇದೊಂದು ಪ್ರತ್ಯೇಕತೆ ಹೊಂದುವುದು ಅಸಾಧ್ಯವೆ ಸರಿ. ಒಂದು ಭಾಗದಿಂದ ಅವಲೋಕನೆ ಮಾಡಿ ನೋಡಿದಾಗ ಸಿಖ್ ಧರ್ಮದವರಲ್ಲಿ ಕೆಲವರದ್ದು ಮಾತ್ರ ಬೇಡಿಕೆಯೂ ಇದಾಗಿದೆ. ಅವರ ಕೂಗು ರಾಜಕೀಯ ಲಾಭ ಪಡೆಯುವ ಉದ್ದೇಶವು ಇರಬಹುದು ಎಂಬುದು ಹಲವು ತಜ್ಞರ ಅಭಿಪ್ರಾಯವಾಗಿದೆ. ಕಹಿಯಾದರೂ ಸತ್ಯಕ್ಕೆ ಹತ್ತಿರವಾಗಿದೆ.
ನಮ್ಮ ಭಾರತದ ಇತಿಹಾಸದ ಪುಟಗಳನ್ನು ತೆಗೆದು ನೋಡಿದಾಗ ಉತ್ತರ ಭಾರತವು ಮೊಘಲ್ ಆಳ್ವಿಕೆಯಲ್ಲಿ ಗುರು ಗೋಬಿಂದ್ ಸಿಂಗ್ ನೇತೃತ್ವದಲ್ಲಿ ಹೊರಹೊಮ್ಮಿದ ಸಿಖ್ ಧರ್ಮವು ಕ್ರಿ.ಶ ೧೫ ನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದಿದೆ.೧೯೪೭ ರಲ್ಲಿ ಅಖಂಡ ಭಾರತದ ವಿಭಜನೆಯ ನಂತರ ಪಂಜಾಬಿನಲ್ಲಿ ಸುಬಾ ಚಳುವಳಿ ಹೊರಹೊಮ್ಮಿತು. ಇದು ಪಂಜಾಬಿ ಮಾತನಾಡುವ ಸ್ವಾಯತ್ತ ಸಿಖ್ ರಾಜ್ಯದ ಸ್ಥಾಪನೆಗೆ ಕರೆ ನೀಡಿತು. ಇದನ್ನ ಸಿಖ್ ಪ್ರತ್ಯೇಕದ ಮುನ್ನುಡಿ ಎಂದರೆ ತಪ್ಪಾಗಲಾರದು.
೧೯೫೨ ರಲ್ಲಿ ಆಗಿನ ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಅವರು ಸಂವಿಧಾನ ವಿರೋಧಿಗಳನ್ನ ಮತ್ತು ಪಂಜಾಬಿ ಮಾತನಾಡುವ ರಾಜ್ಯದ ಬೇಡಿಕೆಯನ್ನು ಹತ್ತಿಕ್ಕುವುದಾಗಿ ಘೋಷಿಸಿದರು. ಇದು ಸಿಖ್ ಮತ್ತು ಹಿಂದೂಗಳ ನಡುವಿನ ವಿಭಜನೆಗೆ ಕಾರಣವಾಯಿತು. ಆದ್ದರಿಂದ ಅಂತಿಮವಾಗಿ ೧೯೬೬ ರಲ್ಲಿ ಪಂಜಾಬ್ ರಾಜ್ಯವನ್ನು ರಚಿಸಿ ಚಂಡೀಗಢವನ್ನು ಅದರ ರಾಜಧಾನಿಯನ್ನಾಗಿ ರಚಿಸಲಾಯಿತು.
ಆಪರೇಷನ್ ಬ್ಲೂಸ್ಟಾರ್ನ ಮಹತ್ವ ಮತ್ತು ಇಂದಿರಾ ಗಾಂಧಿ ಪಾತ್ರ
೧೯೭೦ ಮತ್ತು ೮೦ ರ ದಶಕದಲ್ಲಿ ಭಾರತದಲ್ಲಿ ಮತ್ತು ಡಯಾಸ್ಪೊರಾದಲ್ಲಿ (ಡಯಾಸ್ಪೊರಾ ಎಂದರೆ ಪ್ರಸ್ತುತ ಭಾರತದ ಹೊರಗೆ ವಾಸಿಸುತ್ತಿರುವ ಭಾರತೀಯ ಜನರ ಗುಂಪು) ಸಿಖ್ಖರಲ್ಲಿ ಖಲಿಸ್ತಾನ್ ಚಳವಳಿಯ ಅನುಯಾಯಿಗಳು ಮತ್ತೆ ಹೆಚ್ಚಿನ ಸಂಖ್ಯೆಯಲ್ಲಿ ಹೊರಹೊಮ್ಮಿದವು. ವಿದೇಶದಲ್ಲೂ ಕೂಡ ಖಲಿಸ್ತಾನ್ ಪ್ರತ್ಯೇಕದ ಕೂಗು ಹೆಚ್ಚಾಯ್ತು. ಸಿಖ್ ಬಂಡಾಯದ ನಾಯಕ ಜರ್ನೈಲ್ ಸಿಂಗ್ ಭಿಂದ್ರನ್ವಾಲೆಯು ಖಲಿಸ್ತಾನ ಕೂಗಿನ ರುವಾರಿ. ಇವನಿಗಿಂತ ಮೊದಲು ಖಲಿಸ್ತಾನದ ಬೇಡಿಕೆ ಇತ್ತಾದರೂ ಅಷ್ಟು ಪ್ರಚಾರವನ್ನು ಪಡೆದಿರಲಿಲ್ಲ. ಇವನು ಮೊದಲಿಗೆ ಖಲಿಸ್ತಾನ್ ವಿರೋಧಿಯಂತೆ ನಟಿಸಿ ಅಂದಿನ ಭಾರತ ಸರ್ಕಾರದ ವಿಶ್ವಾಸವನ್ನು ಗಳಿಸಿ, ಮುಂದೆ ತಾನು ಬೆಳೆದ ನಂತರ ಸಿಖ್ ಧರ್ಮದ ಪ್ರಮುಖ ನಾಯಕನಾದ. ಸಮಯ ಸಾಧಕನಾದ ಇವನು ಸರ್ಕಾರಕ್ಕೆ ಉಲ್ಟಾ ಹೊಡೆದು ಸ್ವತಃ ತಾನೇ ಸರ್ಕಾರದ ಬಳಿ ಖಲಿಸ್ತಾನದ ಬೇಡಿಕೆಯನ್ನಿಟ್ಟನು. ಇದು ಸರ್ಕಾರಕ್ಕೆ ನುಂಗಲಾರದ ತುತ್ತಾಯಿತು.
ನಂತರ ಇವನಿಂದ ಪ್ರೇರಣೆ ಗೊಂಡ ಜನರು ನಡೆಸಿದ ದಂಗೆಯು ಒಂದು ದಶಕಕ್ಕೂ ಹೆಚ್ಚು ಕಾಲ ನಡೆಯಿತು. ಭಾರತೀಯ ಸರ್ಕಾರದ ಹಿಂಸಾತ್ಮಕ ದಮನದಿಂದ ನಿಗ್ರಹಿಸಲಾಯಿತು. ಇದರಲ್ಲಿ ಪ್ರಮುಖ ಸಿಖ್ ನಾಯಕರು ಸೇರಿದಂತೆ ಸಾವಿರಾರು ಜನರು ಕೊಲ್ಲಲ್ಪಟ್ಟರು. ೧೯೮೪ ರಲ್ಲಿ ಪಂಜಾಬ್ನ ಅಮೃತಸರದಲ್ಲಿರುವ ಸಿಖ್ ಧರ್ಮದ ಪವಿತ್ರ ಸ್ಥಳವಾದ ಗೋಲ್ಡನ್ ಟೆಂಪಲ್ನಲ್ಲಿ ಆಶ್ರಯ ಪಡೆದಿದ್ದ ಪ್ರತ್ಯೇಕತಾವಾದಿಗಳನ್ನು ಹೊರಹಾಕಲು ಭಾರತೀಯ ಪಡೆಗಳು ದಾಳಿ ನಡೆಸಿದವು.
“OPERATION BLUESTAR” ಹೆಸರಿನಲ್ಲಿ ಕಾರ್ಯಾಚಣೆ ಮಾಡಲಾಯ್ತು. ಭಾರತೀಯ ಸರ್ಕಾರದ ಅಧಿಕೃತ ಅಂಕಿಅಂಶಗಳ ಪ್ರಕಾರ ಕಾರ್ಯಾಚರಣೆಯು ಸುಮಾರು ೪೦೦ ಜನರನ್ನು ಕೊಂದಿತು. ಆದರೆ ಸಿಖ್ ಗುಂಪುಗಳು ಸಾವಿರಾರು ಜನರನ್ನು ಕೊಲ್ಲಲಾಯಿತು ಎಂದು ಹೇಳುತ್ತಾರೆ. ಅದೇ ರೀತಿ ಸಿಖ್ ರ ಪ್ರಮುಖ ನಾಯಕ ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ಕೂಡ ಈ ಕಾರ್ಯಾಚಣೆಯಲ್ಲಿ ಹತ್ಯೆಯಾದ. ಇವನನ್ನು ಭಾರತ ಸರ್ಕಾರವು ಸಶಸ್ತ್ರ ದಂಗೆಯನ್ನು ಮುನ್ನಡೆಸಿದ ‘ಆಂತರಿಕ ಗಲಭೆಯ ನಾಯಕ’ ಎಂದು ಆರೋಪಿಸಿತು. (ಆ ಸಮಯದಲ್ಲಿಯೇ ಬಿಂದ್ರನ್ ವಾಲೆ ಅಮೃತ್ ಸರ ಟೆಂಪಲ್ ನ ಆಕ್ರಮಣ ಮಾಡಿಕೊಂಡು ಸರ್ಕಾರಕ್ಕೆ ಸವಾಲೆಸೆದಿದ್ದ).ಅಕ್ಟೋಬರ್ ೩೧,೧೯೮೪ ರಂದು ದೇವಾಲಯದ ಮೇಲೆ ದಾಳಿ ಮಾಡಲು ಆದೇಶಿಸಿದ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ಇಬ್ಬರು ಸಿಖ್ ಅಂಗರಕ್ಷಕರು ಹತ್ಯೆ ಮಾಡಿದರು. ಆಕೆಯ ಸಾವು ಸಿಖ್ ವಿರೋಧಿ ಸರಣಿ ದಂಗೆಗಳಿಗೆ ಪ್ರಚೋದಿಸಿತು. ಹಿಂದೂ ಗುಂಪುಗಳು ಉತ್ತರ ಭಾರತದಾದ್ಯಂತ ದಂಗೆಯೆದ್ದರು. ವಿಶೇಷವಾಗಿ ಹೊಸ ದೆಹಲಿಯಾದ್ಯಂತ ಮನೆಯಿಂದ ಮನೆಗೆ ಈ ದಂಗೆಯ ಕಿಡಿ ಹತ್ತಿಸಿದರು. ಸಿಖ್ಖರನ್ನು ಅವರ ಮನೆಗಳಿಂದ ಎಳೆದು ತಂದು ಹಲವರನ್ನು ಕೊಂದರು. ಇತರರನ್ನು ಜೀವಂತವಾಗಿ ಸುಟ್ಟುಹಾಕಿದರು. ಜೂನ್ ೨೩,೧೯೮೫ ರಂದು ಬಿಂದ್ರನ್ವಾಲೇ ಪಡೆ ಬಾಂಬ್ ಹಾಕಿ ಜನರಲ್ಲಿ ಭಯ ಹುಟ್ಟುವಂತೆ ಮಾಡಿತು. ಏರ್ ಇಂಡಿಯಾ ಫ್ಲೈಟ್ ನಲ್ಲಿ ಬಾಂಬ್ ಇಟ್ಟು ಇಡೀ ವಿಮಾನವನ್ನೇ ಸುಟ್ಟು ಹಾಕಿದ್ದರಿಂದ ವಿಮಾನದಲ್ಲಿದ್ದ ೩೨೯ ಜನರು ವಿಮಾನ ದುರಂತದಲ್ಲಿ ಸಾವನ್ನಪ್ಪಿದರು.
ಭಾರತ ಮತ್ತು ವಿದೇಶದಲ್ಲಿ ಸಿಖ್ಖರ ಹರಡುವಿಕೆ
೨೦೧೧ ರ ಭಾರತೀಯ ಜನಗಣತಿಯ ಪ್ರಕಾರ ಸುಮಾರು ೨೦.೮ ಮಿಲಿಯನ್ ಜನ ಸಿಖ್ಖರಿದ್ದಾರೆ. ಇದು ದೇಶದ ಜನಸಂಖ್ಯೆಯ ಶೇಕಡಾ ೧.೭ ರಷ್ಟಿದೆ. ಜನಗಣತಿಯ ಸಮಯದಲ್ಲಿ ಸುಮಾರು ೧೬ ಮಿಲಿಯನ್ ಸಿಖ್ಖರು ಉತ್ತರದ ರಾಜ್ಯವಾದ ಪಂಜಾಬ್ನಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ಅವರು ರಾಜ್ಯದ ಜನಸಂಖ್ಯೆಯ ಸುಮಾರು ೫೮ ಪ್ರತಿಶತವನ್ನು ಹೊಂದಿದ್ದಾರೆ. ಪ್ರಪಂಚದಾದ್ಯಂತ ಅಂದಾಜು ೩೫ ಮಿಲಿಯನ್ ಗೂ ಅಧಿಕ ಸಿಖ್ಖರಿದ್ದಾರೆ. ಆದರೆ ಭಾರತದ ನಂತರ ಕೆನಡ ದೇಶವು ಭಾರತದ ಹೊರಗೆ ಅತಿ ದೊಡ್ಡ ಸಿಖ್ ಸಮುದಾಯವನ್ನು ಹೊಂದಿರುವ ದೇಶವಾಗಿದೆ. ಕೆನಡಾದ ೨೦೨೧ ರ ಜನಗಣತಿಯಲ್ಲಿ ಸುಮಾರು ೭೭೦,೦೦೦ ಜನರು ತಮ್ಮ ಧರ್ಮವನ್ನು ಸಿಖ್ ಎಂದು ಒಪ್ಪಿಕೊಡಿದ್ದಾರೆಂದು ಕೆನಡಾ ದೇಶ ಹೇಳಿಕೊಂಡಿದೆ. ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ ೨೦೨೧ ರ ಜನಗಣತಿಯ ಪ್ರಕಾರ ಸುಮಾರು ೫೨೪,೦೦೦ ಸಿಖ್ಖರು ಎರಡೂ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ೨೦೨೧ ರ ಜನಗಣತಿಯ ಪ್ರಕಾರ ಆಸ್ಟ್ರೇಲಿಯಾದಲ್ಲಿ ಸುಮಾರು ೨೧೦,೦೦೦ ಜನರು ವಾಸಿಸುತ್ತಿದ್ದಾರೆ. US ಜನಗಣತಿಯು ಧರ್ಮವನ್ನು ದಾಖಲಿಸದಿದ್ದರೂ ತಮ್ಮ ದೇಶದಲ್ಲಿ ೨೦೦,೦೦೦ ರಿಂದ ೫೦೦,೦೦೦ ಸಿಖ್ಖರು ಇದ್ದಾರೆ ಎಂದು ಅಂದಾಜಿಸಿ ವರದಿ ಮಾಡಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಸಂಘಟನೆಯು ಹಲವಾರು ದೇಶಗಳಲ್ಲಿ ಖಲಿಸ್ತಾನ್ ಸ್ಥಾಪನೆಯ ಕುರಿತು ಅನಧಿಕೃತ ಜನಾಭಿಪ್ರಾಯ ಸಂಗ್ರಹಿಸಿದೆ. ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಚುನಾವಣೆ ಮತದಾನದ ಸಂದರ್ಭದಲ್ಲಿ ಖಲಿಸ್ತಾನ್ ಪರ ಮತ್ತು ಹಿಂದೂ ಬೆಂಬಲಿಗರ ನಡುವೆ ಘರ್ಷಣೆ ಆಗಿದೆ. ಕೆನಡಾ, ಆಸ್ಟ್ರೇಲಿಯಾ ಮತ್ತು ಯುಕೆ ಸಿಖ್ ಕಾರ್ಯಕರ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಭಾರತ ವಿನಂತಿಸಿದೆ. ವಿಶೇಷವಾಗಿ ಕೆನಡಾ ದೇಶದಲ್ಲಿರುವ ಸಿಖ್ಖರ ಮೇಲೆ ಕ್ರಮ ಕೈಗೊಳ್ಳಲು ಭಾರತ ಹೇಳಿದೆ. ಕಾರಣ ಅಲ್ಲಿ ಸಿಖ್ಖರ ಜನಸಂಖ್ಯೆಯು ಹೆಚ್ಚಾಗಿದೆ ಅಂದರೆ ಕೆನಡಾದಲ್ಲಿ ಸುಮಾರು ೨ ಪ್ರತಿಶತ ರಷ್ಟು ಸಿಖ್ಖರಿದ್ದಾರೆ. ಖಲಿಸ್ತಾನದ ಕರೆಗಳನ್ನು ಪುನರುಜ್ಜೀವನಗೊಳಿಸಿದ ೩೦ ವರ್ಷದ ಪ್ರತ್ಯೇಕತಾವಾದಿ ನಾಯಕ ಅಮೃತಪಾಲ್ ಸಿಂಗ್ ಬಂಧನದ ನಂತರ ಲಂಡನ್ನಲ್ಲಿ ಪ್ರತಿಭಟನಾಕಾರರು ಹೈಕಮಿಷನ್ನಿಂದ ಭಾರತೀಯ ಧ್ವಜವನ್ನು ಕೆಳಗಿಳಿಸಿ ಕಟ್ಟಡದ ಕಿಟಕಿಗಳನ್ನು ಒಡೆದು ಹಾಕಿದರು. ಇದು ಇತ್ತೀಚಿನ ಖಲಿಸ್ತಾನ್ ಪ್ರತ್ಯೇಕವಾದಿಗಳ ದಂಗೆಗೆ ಕಾರಣವಾದ ವಿಷಯವಾಗಿದೆ. ಆದರೆ ಇದೆಲ್ಲದರ ಹಿಂದೆ ರಾಜಕೀಯ ಪಕ್ಷಗಳ ಕೈವಾಡವಿದೆ ಎಂಬುದು ಮಾತ್ರ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಸಂವಿಧಾನವನ್ನ ಮೀರಿ ಪ್ರತ್ಯೇಕ ದೇಶ ಮಾಡಲು ಸಾಧ್ಯವೇ….!
ದೇಶದ ಯಾವುದೇ ಬಾಹ್ಯ ಮತ್ತು ಆಂತರಿಕ ಗಡಿಗಳ ವಿವಾದಕ್ಕೂ ಮತ್ತು ಬ್ರಿಟಿಷರಿಗೂ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧ ಇದ್ದೆ ಇರುತ್ತದೆ. ಅದಕ್ಕೆ ಮೂಲ ಕಾರಣ ಬ್ರಿಟಿಷರ ಒಡೆದಾಳುವ ನೀತಿಯನ್ನು ಅನುಸರಿಸಿದ್ದರು. ಭಾರತೀಯ ಸಂವಿಧಾನವನ್ನು ಜಾರಿಗೊಳಿಸಿದ ನಂತರ ಸಿಖ್ಖರನ್ನು ಸಂಘಟಿಸಲಾಗುತ್ತಿದೆ. ಸಿಖ್ಖರನ್ನು ಹಿಂದೂ ಧರ್ಮದ ಭಾಗವಾಗಿ ಆರ್ಟಿಕಲ್ ೨೫(೨)(ಬಿ) ಅಡಿಯಲ್ಲಿ ಸೇರಿಸಲಾಗುತ್ತದೆ ಎಂದು ಇದೇ ರೀತಿಯಲ್ಲಿ ಹೇಳಲಾಯಿತು. ಇದು “ಹಿಂದೂಗಳು ಉಲ್ಲೇಖಿಸುವುದನ್ನು ಒಳಗೊಂಡಂತೆ ಅರ್ಥೈಸಲಾಗುತ್ತದೆ” ಎಂದು ಅಸ್ಪಷ್ಟವಾಗಿ ವಿವರಿಸುತ್ತದೆ. ಸಿಖ್, ಜೈನ, ಬೌದ್ಧ ಧರ್ಮದ ವ್ಯಕ್ತಿಗಳು ಕೂಡ ಜೀವಿಸಲಿಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂವಿಧಾನ ರಚನೆಕಾರರು ಕೋಮುವಾದಿ ಕಲ್ಪನೆಯನ್ನು ಹೊಂದಿದ್ದರೆ, ಸಿಖ್ ಧರ್ಮವನ್ನು ಪ್ರತ್ಯೇಕ ಧರ್ಮವೆಂದು ಸೂಚ್ಯವಾಗಿ ಗುರುತಿಸುವಾಗ ಅವರು ಆರ್ಟಿಕಲ್ ೨೫(೧) ಅನ್ನು ಏಕೆ ಸೇರಿಸಿದರು ಎಂದು ಹೇಳುತ್ತದೆ. ಕೃಪಾನ್ಗಳನ್ನು ಧರಿಸುವುದು ಮತ್ತು ಕೊಂಡೊಯ್ಯುವುದನ್ನು ಸಿಖ್ ಧರ್ಮದ ವೃತ್ತಿಯಲ್ಲಿ ಸೇರಿಸಲಾಗುತ್ತದೆ. ಸಿಖ್ ಧರ್ಮವನ್ನು ಆರ್ಟಿಕಲ್ ೨೫(೧) ರಲ್ಲಿ ಧರ್ಮವೆಂದು ಗುರುತಿಸಲಾಗಿದೆ ಎಂದು ಖಲಿಸ್ತಾನ್ ಹೆಸರಿನ ಮೇಲೆ ಪ್ರತ್ಯೇಕತಾವಾದಿಗಳಿಗೆ ಸ್ಪಷ್ಟ ಮತ್ತು ವಿರೋಧಾತ್ಮಕ ಉತ್ತರಗಳು.
ಆದ್ದರಿಂದ ಈ ಹರಡಿದ ತಪ್ಪುಗ್ರಹಿಕೆಯ ಹಕ್ಕು ದ್ವೇಷ ಮತ್ತು ಜೀವಹಾನಿಗೆ ಕಾರಣವಾಗಿದೆ. ಆರ್ಟಿಕಲ್ ೨೫(೨)(ಬಿ) ಅನ್ನು ೪ ಧರ್ಮಗಳ ಮೇಲೆ ಜಾರಿಗೊಳಿಸಲು ಸಂಸತ್ತು ಜಾರಿಗೊಳಿಸಿದ ಕೆಲವು ಕಾನೂನುಗಳ ಉದ್ದೇಶಕ್ಕಾಗಿ ಸೇರಿಸಲಾಗಿದೆ. ಇವೆಲ್ಲ ಕಾರಣಗಳಿಂದ ಖಲಿಸ್ತಾನ್ ಕೂಗು ಹೆಚ್ಚಾಗುವುದಕ್ಕೆ ಕಾರಣವಾಯಿತು ಎಂದು ಊಹಿಸಲಾಗಿದೆ.
ಒಟ್ಟಾರೆ ಹೇಳವುದಾದರೆ ಅವರು ಸಂವಿಧಾನದಿಂದ ಮತ್ತು ಭಾರತ ದೇಶದಿಂದ ಪ್ರತ್ಯೇಕಗೊಂಡು ಸ್ವತಂತ್ರ ದೇಶ ಮಾಡಿಕೊಳ್ಳುವುದು ಅವರ ಮಹತ್ವಾಕಾಂಕ್ಷೆಯಾಗಿದೆ. ಭಾರತ ಸಂವಿಧಾನದ ಪ್ರಕಾರ ಇದು ಅಸಾಧ್ಯವೇ ಸರಿ. ಮುಂದೆ ಇದೇನಾದರೂ ಪ್ರತೇಕ ವಾಗಿದ್ದೆ, ನಿಜವಾದರೆ ದೇಶ ಇಬ್ಬಾಗವಾಗುತ್ತದೆ ಕಾರಣ ಬೇರೆ ರಾಜ್ಯಗಳು ಮತ್ತು ಧರ್ಮಗಳು ಇದರಿಂದ ಪ್ರೇರಣೆ ಗೊಂಡು ತಮಗೂ ಪ್ರತ್ಯೇಕ ದೇಶಬೇಕೆಂದು ಬೇಡಿಕೆ ಇಡಬಹುದು. ಇದರಿಂದಾಗಿ ಪ್ರಜಾಪ್ರಭುತ್ವದ ಆಶಯ, ಕನಸು ಮತ್ತು ಮನುಕುಲದ ನಾಶ ವಾಗುವುದರಲ್ಲಿ ಯಾವುದೇ ಸಂದೇಹ ವಿಲ್ಲವೆಂಬುವುದು ಇದರಿಂದ ಸ್ಪಷ್ಟವಾಗುತ್ತದೆ. ಕೊನೆಯಾದಗಿ ಹೇಳುವುದಾದರೆ ಈ ಚಳುವಳಿಯು ಅಷ್ಟು ಸುಭವಾಗಿ ಪರಿಹಾರವಾಗುವ ವಿಷಯವಲ್ಲ ಕಾರಣ ಇದು ಧರ್ಮಕ್ಕೆ ಸಂಬಂಧಪಟ್ಟದ್ದಾಗಿದೆ ಮತ್ತು ಇದರಲ್ಲಿ ರಾಜಕೀಯ ಪಕ್ಷಗಳ ಕೈವಾಡವು ಇದೆ.
ಜಿ ಶಿವಮೂರ್ತಿ
(ಜಿ ಶಿವಮೂರ್ತಿಯವರು ಮೂಲತಃ ರಾಯಚೂರು ಜೆಲ್ಲೆಯ ಗುಡದಿನ್ನಿಯವರು. ಬಿಎಸ್ಸಿ ಪದವಿಯನ್ನು ಪಡೆದುಕೊಂಡಿರುವ ಇವರು, ಕೆಎಎಸ್, ಪಿಎಸ್ಐ ಮತ್ತು ಯುಪಿಎಸ್ಸಿ ಆಕಾಂಕ್ಷಿಗಳಿಗೆ ಬೋಧನೆ ಮತ್ತು ಮಾರ್ಗದರ್ಶಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ಹವ್ಯಾಸಿ ಬರಹಗಾರರಾಗಿ ಕಥೆ, ಕವಿತೆ, ಲೇಖನಗಳನ್ನು ಬರೆಯುತ್ತಾರೆ).