ಮಾನವ ಜೀವನ ಅತ್ಯದ್ಭುತವಾದುದು. ಇದು ದೇವರ ಅಪಾರ ಹಾಗೂ ಉದಾರ ಕೊಡುಗೆ. ಯಾವ ವಿಜ್ಞಾನವೂ ಸಹ ಇದಕ್ಕಿಂತ ಶ್ರೇಷ್ಠವಾದ ಕೊಡುಗೆಯನ್ನು ಎಂದಿಗೂ ಕೊಡಲಾಗದು. ಆದ್ದರಿಂದ ಇದನ್ನು ತಾತ್ಸಾರ ಮಾಡದೆ ಇದರ ಸದುಪಯೋಗಪಡೆದುಕೊಂಡು ಉತ್ತಮ ಹಾಗೂ ಉಪಯುಕ್ತವಾದ ಗುರಿಯತ್ತ ಸಾಗಿದರೆ ಈ ಜೀವನದಲ್ಲಿ ಸುದೀರ್ಘ ಸಂತೃಪ್ತಿಯನ್ನು ಅನುಭವಿಸಿ ಅಂತಿಮವಾಗಿ ಪೂರ್ಣ ಪ್ರಶಾಂತತೆಯ ತಾಣವನ್ನು ತಲುಪಿ ಪುನೀತನಾಗಬಹುದು. ಒಂದು ವೇಳೆ ತಾತ್ಸಾರ ಮಾಡಿ ದುರುಪಯೋಗ ಮಾಡಿಕೊಂಡರೆ ಈ ಮಾನವನ ಬದುಕು ಶಾಶ್ವತ ಗೊಂದಲದ ಗೂಡಾಗಿ ಸುಮಧುರವಾದ ಈ ಮಾನವ ಜೀವನ ವ್ಯರ್ಥವಾದೀತು! ಈ ಕಾರಣ ಕಾಲ ಮಿಂಚಿಹೋಗವ ಮುನ್ನ ತಾತ್ಸಾರ ಮಾಡದೆ ಮಾನವನ ಅಂತರಂಗದಲ್ಲಿ ಉದುಗಿ ಹೆಮ್ಮರವಾಗುತ್ತಿರುವ ಈ ತಾತ್ಸಾರದಿಂದ ಅತಿ ಶೀರ್ಘವಾಗಿ ಹೊರಬರಬೇಕಾಗಿದೆ. ಇಲ್ಲದಿದ್ದಲ್ಲಿ ಈ ಬದುಕು ನಿಷ್ಪ್ರಯೋಜಕವಾದೀತು. ಹಾಗಾದರೆ ಈ ತಾತ್ಸಾರ ಎಂದರೇನು?
ತಾತ್ಸಾರ ಎಂದರೆ ಮಾನವ ತನ್ನ ದಿನನಿತ್ಯದ ಕರ್ತವ್ಯದಕಡೆಗೆ ಸರಿಯಾಗಿ ಗಮನಹರಿಸದಿರುವುದು. ನಾಳೆ ಮಾಡೋಣ ಎಂದು ಉದಾಸಿನ ಮಾಡುವುದು. ತಾತ್ಸಾರ ಎಂದರೆ ಮಾಡುವ ಕೆಲಸದಲ್ಲಿ ತಲ್ಲೀನರಾಗದೆ ಬೇಡದ ವಿಷಯದೆಡೆಗೆ ಗಮನಹರಿಸಿ ಕಾಲಹರಣಮಾಡುವುದು. ತಾತ್ಸಾರ ಎಂದರೆ ಮಾಡುವ ಕೆಲಸದಲ್ಲಿ ಶ್ರದ್ಧಾಹೀನತೆ ಹಾಗೂ ಕಾಳಜಿರಹಿತವಾದ ವರ್ತನೆ. ಅಂದರೆ ಮಾನವ ತನ್ನ ಕರ್ತವ್ಯವವನ್ನು ನಿಷ್ಠ್ಟೆ, ಪ್ರಾಮಾಣಿಕತೆಯಿಂದ ಮಾಡುವ ಬದಲು ಅವಶ್ಯಕತೆ ಇಲ್ಲದುದರ ಕಡೆಗೆ ತನ್ನ ಗಮನವನ್ನು ಹರಿಸಿ ಸಮಯವನ್ನು ವ್ಯರ್ಥಮಾಡಿ ಮತ್ತೊಬ್ಬರಿಗೆ ಬೇಸರ ಹಾಗೂ ನಷ್ಟವನ್ನುಂಟುಮಾಡುವುದೆ ಆಗಿದೆ. ಇದು ಲೌಕಿಕ ಕಾರ್ಯಗಳಿಗೆ ಮಾತ್ರವಲ್ಲ ಆಧ್ಯಾತ್ಮಿಕ ಕಾರ್ಯಗಳಿಗೂ ಅನ್ವಯಿಸುತ್ತದೆ. ಈ ಕಾರಣ ಜ್ಞಾನಿಯೊಬ್ಬನು “ದೈವಾಜ್ಞೆಯನ್ನುಪಾಲಿಸುವವನು ತನ್ನನ್ನೇ ಕಾಪಾಡಿಕೊಳ್ಳುವನು; ದೈವವಾರ್ತೆಯ ಬಗ್ಗೆ ಅಜಾಗ್ರತನಾಗಿರುವವನು ಸಾಯುವನು” (ಜ್ಞಾನೋಕ್ತಿಗಳು ೧೯:೧೬) ಎನ್ನುತ್ತಾನೆ.
ತಾತ್ಸಾರ ಮಾನವನ ಸೃಜನಾತ್ಮಕ ಕಾರ್ಯಗಳಿಗೆ ಅಡ್ಡಗಾಲು. ಒಂದು ಕ್ಷಣದ ತಾತ್ಸಾರ ಮಾನವನ ಇಡೀ ಜೀವನವನ್ನು ಕತ್ತಲೆಯ ಕೂಪಕ್ಕೆ ತಳ್ಳಬಹುದು ಹಾಗೂ ಇಡೀ ಜೀವನ ವ್ಯರ್ಥವಾಗಿ ಹೋಗಬಹುದು. ಒಬ್ಬ ನುರಿತ ಅಭಿಯಂತರನ ತಾತ್ಸಾರ ಅತ್ಯುತ್ತಮವಾದ ಕಟ್ಟಡದ ವಿನ್ಯಾಸವನ್ನೇ ಬದಲಿಸಿ ಗೊಂದಲ ಸೃಷ್ಟಿಸಬಹುದು. ಒಬ್ಬ ನುರಿತ ವೈದ್ಯನ ತಾತ್ಸಾರ ಒಬ್ಬ ರೋಗಿಯ ಜೀವನವನ್ನು ಅಂತ್ಯಗೊಳಿಸಬಹುದು. ಕುಟುಂಬದಲ್ಲಿ ತಂದೆ-ತಾಯಿಯರ ತಾತ್ಸಾರ ಮಕ್ಕಳನ್ನು ಶೀಲರಹಿತರನ್ನಾಗಿ ಮಾಡಿ ಅವರ ಜೀವನವನ್ನು ಅಧೋಗತಿಗಿಳಿಸಬಹುದು.
ಒಬ್ಬ ಶಿಕ್ಷಕನ ತಾತ್ಸಾರ ಒಂದು ರಾಷ್ಟ್ರವನ್ನೇ ನಾಶಮಾಡಬಹುದು. ಹೀಗೆ ತಾತ್ಸಾರ ಮಾನವ ಕುಲವನ್ನೇ ಅವನತಿಗೆ ದೂಕಬಹುದು. ಇಂಥಹ ದೋರಣೆಯನ್ನು ಕಂಡಿಸಿ ಪ್ರವಾದಿ ಯೆರೇಮೀಯನು “ಸರ್ವೇಶ್ವರನು ನೇಮಿಸಿದ ಕೆಲಸವನ್ನು ನಿರ್ವಹಿಸುವುದರಲ್ಲಿ ಅಲಸ್ಯನಾಗಿರುವವನು ಶಾಪಗ್ರಸ್ತನು” (ಯೆರೇಮೀಯ ೪೮:೧೦) ಎನ್ನುತ್ತಾನೆ. ಹಾಗೆಯೇ ನುರಿತ ಧರ್ಮೋಪದೇಶಕನೊಬ್ಬನು “ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲ ಪೂರ್ಣಶಕ್ತಿಯಿಂದ ಮಾಡು. ಏಕೆಂದರೆ ನೀನು ಹೋಗಲಿಕ್ಕಿರುವ ಪಾತಾಳದಲ್ಲಿ ಯಾವ ಯೋಜನೆಯೂ ತಿಳುವಳಿಕೆಯೂ ಜ್ಞಾನವೂ ಇರುವುದಿಲ್ಲ” (ಉಪದೇಶಕ ೯:೧೦) ಎನ್ನುತ್ತಾನೆ.
ತಾತ್ಸಾರ ಮಾನವನ ಮನಸ್ಸನ್ನು ಚಂಚಲಗೊಳಿಸುವುದರಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆ. ಅದು ಮಾನವನು ತಾನು ಮಾಡಬೇಕಾದ ಕಾಯಕದಲ್ಲಿ ಶ್ರದ್ಧೆಯನ್ನು ಕಳೆದುಕೊಳ್ಳುವಂತೆ ಪ್ರೇರೆಪಿಸುತ್ತದೆ. ಮನಸ್ಸಿನ ಸ್ಥಿರತೆಯನ್ನು ಅಸ್ಥಿಗೊಳಿಸಿ ಚಿದ್ರಮಾಡುತ್ತದೆ. ಅದು ಮಾನವ ತಾನು ಮಾಡುತ್ತಿರುವ ಅಥವಾ ಮಾಡಬೇಕಾಗಿರುವ ಕೆಲಸವನ್ನು ಬಿಟ್ಟು ಮತ್ತೊಬ್ಬರು ಮಾಡುತ್ತಿರುವ ಕಾಯಕದಲ್ಲಿ ಮೂಗುತೂರಿಸುವಂತೆ ಪ್ರಚೋದಿಸುತ್ತದೆ. ಅಂಥವರಿಗೆ “ನೀವು ಆಲಸಿಗಳಾಗಿರಬಾರದು; ವಿಶ್ವಾಸದಿಂದಲೂ ತಾಳ್ಮೆಯಿಂದಲೂ ದೈವ ವಾಗ್ದಾನಗಳನ್ನು ಬಾಧ್ಯವಾಗಿಸಿಕೊಂಡವರನ್ನು ಅನುಸರಿಸಬೇಕು” (೬:೧೨) ಎನ್ನುತ್ತದೆ ಬೈಬಲಿನಲ್ಲಿರುವ ಹಿಬ್ರಿಯರಿಗೆ ಬರೆದ ಪತ್ರಿಕೆ.
ತಾತ್ಸಾರದಿಂದ ಎಚ್ಚೆತ್ತುಕೊಳ್ಳದ ಮಾನವ ಅಪಾರ ನಷ್ಟವನ್ನು ಅನುಭವಿಸಬೇಕಾಗುತ್ತದೆ. “ತನ್ನ ನಿಶ್ಚಿತ ಕಾಲಯಾವಾಗ ಬರುವುದೆಂದು ಮಾನವನಿಗೆ ತಿಳಿಯದು. ಮೀನುಗಳು ಮೋಸದ ಬಲೆಗೂ, ಹಕ್ಕಿಗಳು ಉರುಲುಬಲೆಗೂ ಸಿಕ್ಕಿ ಬೀಳುವಂತೆ ನರಮಾನವರು ತಮ್ಮ ಮೇಲೆ ತಟ್ಟನೆ ಬೀಳುವ ಕಾಲಪಾಶಕ್ಕೆ ಸಿಕ್ಕಿಕೊಳ್ಳುತ್ತಾರೆ” (ಉಪದೇಶಕ ೯:೧೨) ಎಂದು ಸುಜ್ಞಾನಿಯು ಎಚ್ಚರಿಸುತ್ತಾನೆ. ಈ ಕಾರಣ ತಾತ್ಸಾರದ ಕೊಳಕಿನಿಂದ ಶುದ್ಧಗೊಳ್ಳಬೇಕಾದರೆ ಮೈಕೊಡವಿಕೊಂಡು ಮೇಲೆದ್ದರೆ ಸಾಲದು. ಆತ್ಮಕ್ಕೆ ಅಂಟಿರುವ ಜಿಡ್ಡನ್ನೂ ಸಹ ಜಾಡಿಸಬೇಕು. ಹಲವು ಬಾರಿ ಇದರಲ್ಲಿ ಮಾನವ ಸೋಲುವುದು ಖಚಿತ ಆದರೆ ಎದೆಗುಂದದೆ ಮರಳಿ ಪ್ರಯತ್ನವ ಮಾಡಿ ದೇವರಿಗೆ ಶರಣಾಗಿ ವಿಶ್ವಾಸದಿಂದ ಪ್ರಾರ್ಥಿಸಿದರೆ ತಾತ್ಸಾರದ ಪ್ರಪಾತದಲಿದ್ದರೂ ಪುಟಿದೇಳಬಹುದು. ಒಮ್ಮೆ ತಾತ್ಸಾರದ ಕತ್ತಲೆ ಸರಿದು ಶ್ರದ್ಧೆಯ ಬೆಳಕು ದೇಹಾತ್ಮಗಳನ್ನು ಆವರಿಸಿದರೆ ಜೀವನ ಜೋಕಾಲಿ ಚಾಲನೆಗೊಂಡು ದೈವೀಸ್ಪಂದನದಲ್ಲಿ ಮಿಂದು ನವಸಂಚಲನೆಯನ್ನು ಉಂಟುಮಾಡುತ್ತದೆ. ಯಾಕೆಂದರೆ “ಮನುಷ್ಯನ ಆತ್ಮ ಸರ್ವೇಶ್ವರನು ಕೊಟ್ಟ ದೀಪ; ಅಂತರಂಗವನ್ನೆಲ್ಲ ಶೋಧಿಸಬಲ್ಲದು ಅದರ ಪ್ರಕಾಶ” (ಜ್ಞಾನೋಕ್ತಿ ೨೦:೨೭) ಎಂಬ ಅಭಯವನ್ನಿಯುತ್ತಾನೆ ಸುಜ್ಞಾನಿ.
ಫಾದರ್ ವಿಜಯ್ ಕುಮಾರ್ ಪಿ
(೧೯೯೩ರಲ್ಲಿ ಗುರುದೀಕ್ಷೆಯನ್ನು ಪಡೆದ ಇವರು ಪ್ರಸ್ತುತ ಬಳ್ಳಾರಿ ಧರ್ಮಕ್ಷೇತ್ರದಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಡಾಕ್ಟರೇಟ್ ಪದವಿದಾರರು ಮತ್ತು ಹವ್ಯಾಸಿ ಬರಹಗಾರರು. ಅನೇಕ ಧಾರ್ಮಿಕ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ).