
ವಿಪರೀತ ವಿಕಾರ ವಿಲಕ್ಷಣ ಆಕಾರ
ಮನುರೂಪ ಕಳೆದುಕೊಂಡ ಶವಾಗಾರ !
ಕೈ ಕಾಲುಗಳಿಗೆ ಕಟ್ಟುಪಾಡಿನ ಕೋಳ ಬಿಗಿದಿತ್ತು
ಬಲ್ಲಿದನ ಆಕ್ರೊಶ ಕೆನ್ನೆಗೆ ಬಡಿದಿತ್ತು
ಮುಳ್ಳಿನ ಮೊನಚು ಆರೋಪಗಳು ಹಣೆಗೆ ಹೆಣೆದಿದ್ದವು,
ಬರೆ-ಬಾಸುಂಡೆಗೆ ಕಿಚ್ಚಿನ ಉಗುಳು ಮೆತ್ತಿತ್ತು
ತೂಕದ ತೊಲೆ ಹೊತ್ತು..
ತೂಗುವೆಡೆ ನಡೆ ಎಂದು ತೀರ್ಪಿಟ್ಟರು !
ಅಷ್ಟಕ್ಕೂ ಅವರ ಅಪರಾಧವೇನು?
ಬಡಪಾಯಿ ಸಂಗಡ ಊಟಮಾಡಿದುದು
ಆಲಯವನ್ನು ಸ್ವಚ್ಛ ಮಾಡಿದುದು
ವಿಶ್ವಾಸಿಗಳನ್ನು ಸ್ವಸ್ಥ ಪಡಿಸಿದ್ದು
ಪಾಪಗಳನ್ನು ಕ್ಷಮಿಸಿದ್ದು
ಸತ್ಯಕ್ಕೆ ಸಾಕ್ಷಿಯಂತಿದುದು
ದೇವರನ್ನು ನನ್ನ ತಂದೆ ಎಂದುದು !!
ಕೊನೆಗೂ ಅದನ್ನೆ ಸಾಧಿಸಿ,
ಸಾಯಿಸಿದರು.
ತಾನೇ ಹೊತ್ತ ತೊಲೆಯ ಮೇಲೆ
ಜಡಿದು ಬಿಟ್ಟರು.
ಸಂತೋಷ್ ಇಗ್ನೇಷಿಯಸ್