ಅದೊಂದು ದಿನ ರಾಜನು ಕುದುರೆಯನ್ನೇರಿ ತನ್ನ ರಾಜ್ಯದಲ್ಲಿ ತಿರುಗಾಟದಲ್ಲಿದ್ದನು. ದಾರಿಯುದ್ದಕ್ಕೂ ತನಗೆ ಸಿಕ್ಕಿದ ಬಹಳಷ್ಟು ಜನರ ಯೋಗಕ್ಷೇಮವನ್ನು ವಿಚಾರಿಸಿ ಮುಂದೆ ಸಾಗುತ್ತಿದ್ದನು. ರಸ್ತೆಯ ಎರಡೂ ಬದಿಗಳಲ್ಲಿ ಬೃಹತ್ ಮರಗಳು ಬೆಳೆದಿದ್ದವು. ಅಲ್ಲಿಂದ ಒಂದಷ್ಟು ಮುಂದೆ ಸರಿದಾಗ ರಾಜನು ಒಬ್ಬ ಮುದುಕನನ್ನು ಕಂಡನು. ಆತನು ಒಂದು ಮಾವಿನ ಮರದ ಸಸಿಯನ್ನು ನೆಡುತ್ತಿದ್ದನು. ರಾಜನು ಆ ವೃದ್ಧನಿದ್ದಲ್ಲಿ ಹೋಗಿ ಆತನಲ್ಲಿ ವಿಚಾರಿಸಿದನು: “ಅಜ್ಜಾ ನೀನೇನನ್ನು ಮಾಡುತ್ತಿರುವೆ”
ಆ ಮುದುಕ ಉತ್ತರಿಸಿದ: “ನಾನು ಮಾವಿನ ಮರದ ಸಸಿಯನ್ನು ನೆಡುತ್ತಿದ್ದೇನೆ” ರಾಜನಿಗೆ ಇವೆಲ್ಲವೂ ವಿಚಿತ್ರವೆಂಬಂತೆ ಕಂಡಿತು. ಆಶ್ಚರ್ಯದಿಂದಲೇ ರಾಜನು ಆತನಲ್ಲಿ ವಿಚಾರಿಸಿದನು: “ಆದರೆ ಅಜ್ಜಾ, ನಿನಗೆ ಇಷ್ಟು ವಯಸ್ಸಾಗಿದೆ. ನೀನು ಈ ಮಾವಿನ ಸಸಿಯನ್ನು ನೆಡುತ್ತಿರುವುದಾದರೂ ಯಾರಿಗಾಗಿ” ಈ ಗಿಡವು ಬೆಳೆದು ಮರವಾಗುವುದು ಯಾವಾಗ? ಅದರಲ್ಲಿ ಮಾವಿನ ಹಣ್ಣು ಬೆಳೆಯುವಾಗ ನೀನು ಸತ್ತು ಮಣ್ಣಾಗಿರುವೆ ನಿನಗೆ ಇದರಿಂದ ಆಗುವ ಲಾಭವಾದರೂ ಏನು?”
ರಾಜನ ಮಾತುಗಳನ್ನು ಆಲಿಸಿದ ಮುದುಕನು ನಗುತ್ತಾ ಹೀಗೆಂದ: “ರಾಜರೇ, ಇಲ್ಲಿ ಕಾಣುತ್ತಿರುವ ಮರಗಳೆಲ್ಲ ನಾನು ನೆಟ್ಟು ಬೆಳೆಸಿದವುಗಳಲ್ಲ. ಅವನ್ನು ನನ್ನ ತಾತ, ಮುತ್ತಾತ ಇವರುಗಳು ನೆಟ್ಟು ಬೆಳೆಸಿದವುಗಳು. ಈ ಗಿಡವೂ ಬೆಳೆದು ಮರವಾಗಿ ಅದರಲ್ಲಿ ಮಾವು ಸಿಗುವುದು, ಅವು ನನಗೇ ಸಿಗಬೇಕು, ನಾನೇ ಅವನ್ನ ಅನುಭವಿಸಬೇಕು ಎಂದೇನೂ ಇಲ್ಲ” ಆ ವೃದ್ಧನ ಮಾತುಗಳು ಕೇಳಿದ ರಾಜನು ಸಂತೋಷಪಟ್ಟನು.