
ಪ್ರವೀಣ್ ನನ್ನ ಆತ್ಮೀಯ ಸಹಪಾಠಿ. ವಯಸ್ಸಿನಲ್ಲಿ ಎರಡು ತಿಂಗಳ ಮಟ್ಟಿಗೆ ಹಿರಿಯವನಾದರೂ, ಜೆಸ್ವಿಟ್ಸ್ ಬಳಗದಲ್ಲಿ ಅವನು ನನಗೆ ಕಿರಿಯವ (ಹಿರಿಯ ಕಿರಿಯ ಎಂಬುವುದು ನಾವು ಯೇಸುಸಭೆ ಸೇರಿದ ದಿನಾಂಕವನ್ನು ಆಧಾರಿಸುತ್ತದೆ) ಸರಳತೆಯ ಸಾಕ್ಷಾತ್ ರೂಪವೇ ಆಗಿದ್ದ ಪ್ರವೀಣ್ ಬಗ್ಗೆ ಹೇಳಬೇಕೆಂದರೆ ಮನಸ್ಸಿನ ಕಪಾಟಿನಲ್ಲಿ ತುಂಬಿಕೊಂಡಿರುವ ಸಾವಿರಾರು ನೆನಪುಗಳನ್ನು ಹೆಕ್ಕಿ ತೆಗೆಯುವ ಕಾರ್ಯ ಮಾಡಲೇ ಬೇಕೇನೋ!
ಪ್ರವೀಣ್ ಒಬ್ಬ ಪ್ರೀತಿಯ ಮನುಷ್ಯ. ಕತ್ತಲನ್ನು ಬೆಳಕಾಗಿಸಿಬಿಡುವ ಜಾದುಗಾರ. ಕಠಿಣ ಪರಿಸ್ಥಿತಿಯನ್ನು ತಿಳಿಯಾಗಿಸಿಬಿಡುವ ಹರಿಯುವ ತೊರೆ. ಗ್ರಹಿಕೆಗೆ ಹತ್ತಿರವಾದಷ್ಟು ದೂರವಾಗುವ ಅಪ್ರತಿಮ ಹೋರಾಟಗಾರ, ಕ್ರಮಿಸಿದಷ್ಟು ದೂರ ಎನ್ನಿಸಿಬಿಡುವ ವಿಸ್ಮಯ ಕಾಲುದಾರಿ, ಕುಡಿದಷ್ಟು ಬಾಯಾರಿಕೆ ಹೆಚ್ಚಿಸುವ ದಾಹ, ಮೀಟಿದಷ್ಟು ಬರಿದಾಗದ ಸಂಗೀತ.
ಅವನು ಹುಟ್ಟಿದ್ದು 1979ರಲ್ಲಿ. ಶಿಲ್ವೆಪುರ ಅವನ ಹುಟ್ಟೂರು. ಅಂಜಲ ಮೇರಿ ಮತ್ತು ತೋಬಿಯಾಸ್‍ರವರ 5ನೇ ಪುತ್ರನಾಗಿ ಜನಿಸಿದ ಪ್ರವೀಣ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸೆಕ್ರೆಡ್ ಹಾರ್ಟ್ ಶಾಲೆಯಲ್ಲಿ ಮುಗಿಸಿ, ಪದವಿ ಪೂರ್ವ ಶಿಕ್ಷಣವನ್ನು ಬೆಂಗಳೂರಿನ ಸಂತ ಜೋಸೆಫ್‍ರವರ ಕಾಲೇಜಿನಲ್ಲಿ ಪಡೆದು, 1997ರಲ್ಲಿ ಯೇಸುಸಭೆ ಎಂಬ ಧಾರ್ಮಿಕ ಸಭೆಯನ್ನು ಪ್ರವೇಶಿಸಿದನು. ನಂತರ ಯೇಸುಸಭೆಯ ‘ಪ್ರವೇಶಿಕ’ ಶಿಕ್ಷಣವನ್ನು ಪಡೆದು, ವಿಜ್ಞಾನ ವಿಷಯದಲ್ಲಿ ಧಾರವಾಡದಲ್ಲಿರುವ ಕಿಟಲ್ ಕಾಲೇಜಿನಿಂದ ಪದವಿಯನ್ನು ಪಡೆದನು. ನಂತರ ಪ್ರವೀಣ್ ತತ್ವಶಾಸ್ತ್ರದಲ್ಲಿ ಶಿಕ್ಷಣ ಮುಗಿಸಿ, ವಕೀಲ ವೃತ್ತಿಯನ್ನು ಬಯಸಿ, ಮಂಗಳೂರಿನಲ್ಲಿರುವ ಎಸ್.ಡಿ.ಎಂ ಕಾಲೇಜಿನಲ್ಲಿ ಎಲ್.ಎಲ್.ಬಿ ಆರ್ಹತೆಯನ್ನು ಪಡೆದನು. ಯಾಜಕದೀಕ್ಷೆಯನ್ನು ಪಡೆಯಲು ಮುಖ್ಯವಾಗಿ ಬೇಕಿದ್ದ ದೈವಶಾಸ್ತ್ರವನ್ನು ಕಲಿತು, 2013ರಲ್ಲಿ ಯಾಜಕದೀಕ್ಷೆಯನ್ನು ಪಡೆದನು. ನಂತರ ಎಲ್.ಎಲ್.ಎಮ್ ಶಿಕ್ಷಣವನ್ನು ಮುಗಿಸಿ, ಕ್ರೈಸ್ಟ್ ಕಾಲೇಜಿನಲ್ಲಿ ಕಾನೂನು ವಿದ್ಯಾರ್ಥಿಯಾಗಿ ಸಂಶೋಧನೆಗೆ ಕೈಹಾಕಿದ್ದನು. ಕೊನೆಗೆ ಸಂತ ಜೋಸೆಫ್ ಕಾನೂನು ಮಹಾವಿದ್ಯಾಲಯದ ನಿರ್ದೇಶಕನಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದನು.
ಪ್ರವೀಣ್‍ನಲ್ಲಿ ‘ಆತ್ಮವಿಶ್ವಾ’ವು ತುಂಬಿತುಳುಕುತ್ತಿತ್ತು. ಈ ಆತ್ಮವಿಶ್ವಾಸದ ಜತೆಗೆ ಭಂಡ ಧೈರ್ಯವು ಸೇರಿ ಮುನ್ನುಗ್ಗುವ ಪ್ರವೃತ್ತಿಯು ದೈತ್ಯಾಕಾರವಾಗಿ ಅವನಲ್ಲಿ ಬೆಳೆದಿತ್ತು. ‘ಆಗಲ್ಲ’, ‘ಬೇಡ’, ‘ಸಾಧ್ಯವಿಲ್ಲ’ ಎಂಬ ನಕಾರಾತ್ಮಕ ಪದಗಳು ಅವನ ಬದುಕಿನ ನಿಘಂಟಿನಲ್ಲಿ ಹುಡುಕಿದರೂ ಸಿಗುತ್ತಿರಲಿಲ್ಲ. ಬಂಡೆಯನ್ನು ಬಡಿದು ನೀರು ಬರಿಸುವಂಥ ಅಪ್ರತಿಮ ವಿಶ್ವಾಸ ಅವನ ವ್ಯಕ್ತಿತ್ವವನ್ನು ಬದಲಾಯಿಸಿಬಿಟ್ಟಿತ್ತು ಎಂಬ ಮಾತು ತಪ್ಪಾಗಲಾರದು. ಇದು ಹಳ್ಳಿಯಿಂದ ಬಂದಿದ್ದ ಪ್ರವೀಣ್‍ನನ್ನು ಒಂದು ಪ್ರತಿಷ್ಠಿತ ಲಾ ಕಾಲೇಜು ನಿರ್ವಹಿಸುವ ಮಟ್ಟಿಗೆ ಬೆಳೆಸಿದಲ್ಲದೇ, ಅವನಲ್ಲಿದ್ದ ಅಪ್ರತಿಮ ಹೋರಾಟಗಾರನ್ನು ಬಡಿದು ಎಚ್ಚರಿಸಿ ಜನಪರ ಹೋರಾಟಗಳ ಭಾಗವಾಗುವಂತೆ ಅವನನ್ನು ಬೀದಿಗೆ ಎಳೆದು ತಂದಿತ್ತು.
ಪ್ರವೀಣ್ ಒಬ್ಬ ಉತ್ತಮ ಕತೆಗಾರನಾಗಿದ್ದ. ಕತೆ ಹೇಳುವ ಕೌಶಲ್ಯವನ್ನು ಭಗವಂತನಿಂದ ಸ್ವಲ್ಪ ಜಾಸ್ತಿನೇ ಪಡೆದಿದ್ದ. ಅನುಭವಗಳನ್ನು ಕತೆಯಾಗಿಸುತ್ತಿದ್ದ, ಕತೆಗಳನ್ನು ಅನುಭವಗಳನ್ನಾಗಿಸುತ್ತಿದ್ದ ಪ್ರವೀಣ್, ಕಲ್ಪಿತ ಕತೆಗಳಿಗೆ ರೋಚಕಗಳನ್ನು ತುಂಬಿಸಿ ಕತೆಗಳಿಗೆ ಜೀವತುಂಬುತ್ತಿದ್ದ. ಇಂತಹ ಕತೆಗಳನ್ನು ಉಪಯೋಗಿಸಿಕೊಂಡು ಜನರಲ್ಲಿ ‘ಜಾಗೃತಿ’ ಮತ್ತು ‘ಭಯ’ ಎರಡನ್ನು ವಿಸ್ತರಿಸುತ್ತಿದ್ದ. ಅಬ್ಬಾ ! ಎರಡು ಮೂರು ಪದಗಳೇ ಕಾದಂಬರಿಯನ್ನು ಬರೆಯುವಂತ ಬುದ್ಧಿಶಕ್ತಿ, ಸೃಜಶೀಲತೆ, ಕೌಶಲ್ಯ ಅವನಲ್ಲಿತ್ತು. ಕತೆಯ ಒಂದು ಎಳೆಯನ್ನು ಇಟ್ಟುಕೊಂಡು ಒಂದು ನಾಟಕವನ್ನು ಬರೆಯುವಂತಹ ಜೀವಂತಿಕೆ, ಸಂವೇದನಾಶೀಲತೆ ಆಳವಾಗಿ ಅವನಲ್ಲಿ ಬೇರೂರಿತ್ತು. 
ಬಡವರ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿದ್ದ ಪ್ರವೀಣ್, ಸಾಮಾನ್ಯವಾಗಿ ಧಾರ್ಮಿಕರಲ್ಲಿ ಕಾಡುವ ಭಯವನ್ನು ಬಿಟ್ಟು, ನ್ಯಾಯಪರ ಹೋರಾಟಗಳಲ್ಲಿ ಭಾಗವಹಿಸುತ್ತಿದ್ದ. ಮುಂದೆ ಹೋರಾಟಗಳೇ ಅವನ ಜೀವನವಾಗಿಬಿಡಬಹುದೆಂಬ ಸುಳಿವು ನಮಗೆ ಅವನಲ್ಲಿ ಕಾಣದೇ ಇರಲಿಲ್ಲ. ವ್ಯವಸ್ಥೆಗಳನ್ನು ಸ್ವಚ್ಚಗೊಳಿಸುವ ಏಕೈಕ ಸಾಧನ ಶಿಕ್ಷಣ, ಸಂಘಟನೆ, ಹೋರಾಟ ಎಂಬುದನ್ನು ಅರಿವಿದ್ದ ಪ್ರವೀಣ್ ಅದನ್ನು ಕಾರ್ಯರೂಪಗೊಳ್ಳಿಸಲು ಹಗಲಿರುಳು ಕಲಿತು ತನ್ನನ್ನೇ ಸಿದ್ಧಮಾಡಿಕೊಳ್ಳುತ್ತಿದ್ದ. ಕೊನೆಗೆ ತನ್ನೊಳಗೆ ಹುದುಗಿಕೊಂಡಿದ್ದ ಕ್ಯಾನ್ಸರ್ ಎಂಬ ರೋಗಕ್ಕೆ ಶರಣಾಗದೆ ಧೈರ್ಯವಾಗಿ ಅದರ ವಿರುದ್ಧ ಹೋರಾಡುತ್ತಲೇ ಕಾಲವಾದ. ಸೋತಿದ್ದು ಸಾವೋ ಪ್ರವಿಣೋ ಎಂಬ ಗೊಂದಲ ಬರಿಸುವ ಮಟ್ಟಕ್ಕೆ ಹೋರಾಟ ನಡೆಸಿದ. ಹೌದು ಪ್ರವೀಣ್, ಸಾವಿಗೆ ಅಧಿಕಾರ ಇದಿದ್ದು ನಿನ್ನ ದೇಹದ ಮೇಲೆ ಮಾತ್ರ, ನಿನ್ನ ಅತ್ಮವನ್ನು ಅದು ಎಂದೂ ಮುಟ್ಟಲಾಗಲಿಲ್ಲ ಎಂದು ಆಪ್ತನ ಕಣ್ಣುಗಳಿಂದ ನಿನ್ನನ್ನು ಕಂಡ ನಾನು ಧೈರ್ಯವಾಗಿ ಹೇಳಬಲ್ಲೆ.
ಮಾಹಿತಿಗಳನ್ನು ಸಂಗ್ರಹಿಸುವುದರಲ್ಲಿ ಖ್ಯಾತಿ ಪಡೆದಿದ್ದ ಪ್ರವೀಣ್, ಮಾಹಿತಿಗಳನ್ನು ತದೇಕ ಚಿತ್ತದಿಂದ ವಿಶ್ಲೇಷಿಸಿ ವರ್ತಮಾನವನ್ನು ಸ್ಪಷ್ಟವಾಗಿ ನಿರೂಪಿಸುತ್ತಿದ್ದ. ಜತೆಗೆ ವರ್ತಮಾನದಲ್ಲಿ ಮತ್ತು ಮುಂದೆ ತಲೆದೋರುವ ಸಮಸ್ಯೆಗಳನ್ನು ಊಹಿಸಿ ಪರಿಹಾರದ ದಾರಿಯನ್ನು ಸಹ ನಿಖರವಾಗಿ ತಿಳಿಸುತ್ತಿದ್ದ. ಈ ಕಾರಣದಿಂದಾಗಿ, ಅನೇಕರು ಪವೀಣ್‍ನನ್ನು ಸಲಹೆಗಾರನಾಗಿ ನೇಮಿಸಿಕೊಂಡಿದ್ದರು. ಜನರ ನಂಬಿಕೆಯನ್ನು ಹುಸಿಗೊಳಿಸದೆ, ಉತ್ತಮ ಸಲಹೆಸೂಚನೆಗಳನ್ನು ನೀಡಿ, ಪ್ರಬುದ್ಧ ನಿರ್ಧಾರಗಳನ್ನು ಕೈಗೊಳ್ಳಲು ಸಹಾಯಮಾಡುತ್ತಿದ್ದ.
ಪ್ರವೀಣ್ ಒಬ್ಬ ಉತ್ತಮ ವಾಗ್ಮಿಯಾಗಿದ್ದ. ಕೇಳುವ ಜನರ ನಾಡಿಮಿಡಿತವನ್ನು ಬಹುಬೇಗ ಅರ್ಥಮಾಡಿಕೊಂಡು ಮಾತನಾಡುವ ಜಾಣ್ಮೆ ಅವನಲ್ಲಿತ್ತು. ಜತೆಗೆ ಜನರ ನುಡಿಗಟ್ಟುಗಳನ್ನು ಬಳಸಿ ಮಾತನಾಡುವ ಪ್ರತಿಭೆ ಅವನಿಗೆ ಸುಲಭವಾಗಿ ಸಿದ್ಧಿಸಿತ್ತು. ಈ ಕಾರಣಕ್ಕಾಗಿಯೇ, ಇವನ ಮಾತುಗಳು ಜನರ ಎದೆಯ ಹೊಲಗಳಿಗೆ ಸಲೀಸಾಗಿ ಇಳಿದು ಹೋಗಿಬಿಡುವ ಬೀಜಗಳಾಗುತ್ತಿದ್ದವು. ಹೌದು ಇನ್ನೊಬ್ಬರ ಮುಖದ ಮೇಲೆ ನಗುವನ್ನು ಭರಿಸಲು ತನ್ನನ್ನೇ ‘ಮೂರ್ಖ’ ಮಾಡಿಕೊಳ್ಳುವ ಪ್ರವೃತಿ, ತನ್ನ ಸ್ವಂತ ತಂದೆಯ ಮೇಲೆ ಹಾಸ್ಯಗಳನ್ನು ಕಟ್ಟಿ ಮನರಂಜಿಸುತ್ತಿದ್ದ ರೀತಿ ಸ್ಮರಣೀಯ.
ಪ್ರವೀಣ್ ಒಬ್ಬ ನಾಟಕಗಾರನಾಗಿದ್ದ, ಬರಹಗಾರನಾಗಿದ್ದ, ವಕೀಲನಾಗಿದ್ದ, ಹೋರಾಟಗಾರನಾಗಿದ್ದ ಹೀಗೆ ಹತ್ತಾರು ಪ್ರತಿಭೆಗಳನ್ನು ತುಂಬಿಕೊಂಡಿದ್ದ ಪ್ರವೀಣ್ ಎಂದೂ ಗರ್ವದಿಂದಾಗಲಿ, ಉದ್ದಟತನದಿಂದಾಗಲಿ ವರ್ತಿಸಲಿಲ್ಲ. ಸರಳತೆ, ಲವಲವಿಕೆ, ನಿಷ್ಠೆ, ಮಾನವೀಯತೆಗಳ ಸಾಕಾರವಾಗಿದ್ದ ಪ್ರವೀಣ್ ನಮ್ಮ ಹೆಮ್ಮೆಯೂ ಹೌದು.
ಆಳವಾಗಿ ಬೇರೂರಿದ್ದ ಸಸಿ ಇರುವಷ್ಟು ಕಾಲ ಎಷ್ಟು ಫಲಭರಿತವಾಗಿ ಬದುಕಬಹುದು ಎಂಬ ರೂಪಕಕ್ಕೆ ಪ್ರವೀಣ್ ಉತ್ತಮ ನಿದರ್ಶನ. ಅವನ ಬದುಕಿನ ಕನ್ನಡಿಯ ಮುಂದೆ ನಿಂತು ನಮ್ಮನೇ ನಾವು ನೋಡಿಕೊಳ್ಳಬೇಕಾಗಿರುವುದು ಈ ಕಾಲದ ಅನಿವಾರ್ಯತೆಗಳಲ್ಲೊಂದು.
- ಜೋವಿ
ಹೆಸರಿಗೆ ತಕ್ಕಂತೆ ಎಲ್ಲರಿಗೂ ಹ್ರುದಯವಂತರು.
ಫ಼ಾದರ್ ಪ್ರವೀಣ್ ಹ್ರುದಯರಾಜ್.
ನನ್ನ ಜೊತೆಯಲ್ಲಿ ಗೌರೆನಹಳ್ಳಿಯಲ್ಲಿ ನೀಡಿದ
ಸೇವೆ ನನ್ನ ಮನದಾಳದಲ್ಲಿ ಹಚ್ಚ ಹಸಿರಾಗಿದೆ.