ಮೂರು ರಾಯರ ಹಬ್ಬ

Advertisements
Share

ಜಾನುವಾರು ಜಂಗುಳಿ. ಅದೊಂಥರ ಜಾತ್ರೆ! ಗ್ರಾಮೀಣ ಪ್ರದೇಶಗಳಲ್ಲಿ ಆಗಾಗ್ಗೆ ನಡೆಯುತ್ತಿರುತ್ತದೆ. ಸಾವಿರಗಟ್ಟಲೆಯಲ್ಲಿ ದನ-ಕರುಗಳನ್ನು ವ್ಯಾಪಾರಕ್ಕೆಂದು ಒಂದು ದೊಡ್ಡ ಮೈದಾನದಲ್ಲಿ ಕಟ್ಟಿರುತ್ತಾರೆ. ಅದಕ್ಕೆ ದನದ ಜಾತ್ರೆಯೆಂದೇ ಹೆಸರು. ಅದು ಬಿಟ್ಟರೆ ಸಂಕ್ರಾಂತಿಯಲ್ಲಿ ದನಕರುಗಳನ್ನು “ಕಿಚ್ಚು ಹಾಯಿಸುವ” ಒಂದು ಪದ್ಧತಿ ಇದೆ.  ಊರಿನ ಎಲ್ಲ ದನಕರುಗಳು ಅಲ್ಲಿ ಸೇರುವುದರಿಂದ ಅಲ್ಲೂ ಜಾನುವಾರು ಜಂಗುಳಿ. ಕಿಚ್ಚು ಹಾಯಿಸುವುದು ಎಂದರೆ; ಊರಿನ ಪ್ರಮುಖ ಬೀದಿಯಲ್ಲಿ ಬೆಂಕಿ ಹಾಕಿ ದನಗಳನ್ನು ಹಾಯಿಸುತ್ತಾರೆ. ಇದೊಂದು ರೀತಿ ಊರಿನ ದೊಡ್ಡ ಕಾರ್ಯಕ್ರಮ. ಹಸು ಕರುಗಳನ್ನು ಮುಖ್ಯ ಬೀದಿಗೆ ಕರೆತರಬೇಕೆಂದು ಅವುಗಳನ್ನು ಆಕರ್ಷಕವಾಗಿ ಸಿಂಗರಿಸುವುದು ರೈತರಿಗೆ ಆ ದಿನದ ಅದಮ್ಯ ಕೆಲಸ.  ಕೃಷಿಯೇ ಜೀವಾಳವಾಗಿರುವ ಹಳ್ಳಿಗಳಲ್ಲಿ ಅವರ ಬದುಕಿನ ಅವಿಭಾಜ್ಯ ಭಾಗದಂತಿರುವ ದನಕರುಗಳಿಗೆ ವರ್ಷಕ್ಕೊಮ್ಮೆ ಸಿಂಗರಿಸುವ ಹಬ್ಬ ಇದ್ದರೆ, ಬಿಟ್ಟಾರೆಯೇ..! ಖಂಡಿತ ಇಲ್ಲ. ಸಂಕ್ರಾಂತಿ ಎಂಬುದು ಹಿಂದೂಗಳ ಹಬ್ಬವಾದರೂ, ಹಸುಕರುಗಳನ್ನು ಎಲ್ಲ ಧರ್ಮದವರು ಪೋಷಿಸುತ್ತಿರುತ್ತಾರೆ. ಹಸುಗಳ ಹಬ್ಬವನ್ನು ಹಿಂದುಗಳು ಸಂಕ್ರಾಂತಿಯಲ್ಲಿ ಆಚರಿಸಿದರೆ ಇತರರು ಇನ್ನೊಂದು ಹೆಸರಲ್ಲಿ. ಭಾರತದ ಹಳ್ಳಿಗಳೇ ಹಾಗೆ ‘ಹಬ್ಬಗಳ ಗೂಡು’. ಆಯಾ ಧರ್ಮ ಜಾತಿ ಪಂಥಗಳ ಅನುಸಾರ ಹಬ್ಬಗಳು ಆಚರಣೆಗೊಳ್ಳುತ್ತಿವೆ, ಗ್ರಾಮೀಣ ಬಾಳ್ವೆಗೆ ಹೊಸೆದು ಕೊಂಡಿರುವ ಹಬ್ಬಗಳ ಉದ್ದೇಶದಲ್ಲಿ ಸಾಮ್ಯತೆ ಇರುತ್ತದೆ. ನಾನು ಹೇಳಹೊರಡುತ್ತಿರುವುದೇನೆಂದರೆ ನಾನು ಒಬ್ಬ ಕ್ರೈಸ್ತ. ನಮ್ಮೂರಿನಲ್ಲಿ ೯೯% ಕ್ರೈಸ್ತರೆ. ಊರಿನವರು ಕೃಷಿ ಮೇಲೆ ಅವಲಂಬಿತರು; ಅಂದಮೇಲೆ ಜಾನುವಾರು ಜಂಗುಳಿ ಇರಲೇಬೇಕು. ನಮ್ಮೂರಲ್ಲೂ ಈ ಹಸುಗಳ ಹಬ್ಬ ನಡೆಯುತ್ತದೆ. ಆದರೆ ಅದನ್ನು ಮೂರು ರಾಯರ ಹಬ್ಬ ಎಂದು ಕರೆಯುತ್ತಾರೆ. ಮೂರು ರಾಯರ ಹಬ್ಬಕ್ಕೂ, ಅಂದು ಸಿಂಗಾರಗೊಂಡು ಆಚರಿಸುವ ಹಸುಗಳ ಹಬ್ಬಕ್ಕೂ ನೇರ ಸಂಬಂಧ ಇಲ್ಲದಿದ್ದರೂ, ಹಸುಗಳ ಹಬ್ಬವನ್ನು ಮೂರು ರಾಯರ ಹಬ್ಬದ ಅನ್ವರ್ಥವಾಗಿ ಆಚರಿಸಲಾಗುತ್ತದೆ. ಸಂಕ್ರಾಂತಿಯ ಆ ಪದ್ಧತಿಗೆ ಹೋಲಿಕೆ ಮಾಡಿದರೆ ಇಲ್ಲಿ ಕಿಚ್ಚು ಹಾಯಿಸುವುದಿಲ್ಲ. ಕೇವಲ ಹಸುಕರುಗಳನ್ನು ಸಿಂಗರಿಸಿ, ಊರಿಗೆ ಊರೇ ತಮ್ಮ ಜಾನುವಾರುಗಳನ್ನೂ ಬೀದಿಗಳಲ್ಲಿ ಸಾಲುಗಟ್ಟಿ ನಿಲ್ಲಿಸಿ ಧರ್ಮಗುರುಗಳಿಂದ ಪ್ರೋಕ್ಷಿಸಲ್ಪಡುವ ತೀರ್ಥಕ್ಕೆ ಮೈಯೊಡ್ಡಿ ನಿಲ್ಲುವ ಧಾರ್ಮಿಕ ಆಚರಣೆ.

ಮೂರು ರಾಯರ ಹಬ್ಬ, ಕ್ರಿಸ್ಮಸ್ ಹಬ್ಬದ ನಂತರ ಬರುವ ಮೊದಲ ದಾರ್ಮಿಕ ಹಬ್ಬ. ಕ್ರಿಸ್ತ ಜಯಂತಿಯ ೧೨ ನೇ ದಿನಕ್ಕೆ ಸರಿಯಾಗಿ ಈ ಹಬ್ಬ ಬರುತ್ತದೆಯಾದರೂ ಮುಂಬರುವ ಭಾನುವಾರದಂದು ಆಚರಿಸುವುದು ವಾಡಿಕೆ. ಈ ಹಬ್ಬವನ್ನು ಪೂರ್ವ ಕ್ರೈಸ್ತ ದೇಶಗಳು ಅತಿ ವಿಜೃಂಭಣೆಯಿಂದ ಆಚರಿಸುತ್ತವೆ ಎಂದು ಕೇಳಿದ್ದೇವೆ. ಮೂವರು ರಾಜರು ಪೂರ್ವದೇಶದಿಂದ ಬಂದರು ಎಂಬ ಉಲ್ಲೇಖಗಳೇ ಅದಕ್ಕೆ ಕಾರಣವಾಗಿದ್ದಾವು. ಏನೇ ಆಗಲಿ ಇದು “ಕ್ರಿಸ್ತನ ಅನೇಕ ಪ್ರಥಮಗಳ-ಸಂಗಮದ ಹಬ್ಬ” ಅಥವಾ ಕ್ರಿಸ್ತರು ದೈವಿಕ ಪ್ರಕೃತಿಯ ಕುರುಹುವಿನೊಂದಿಗೆ ಹಠಾತ್ ಬಹಿರಂಗಗೊಂಡ ದಿನವೆಂತಲೂ ಅರ್ಥೈಸಬಹುದು. ಅವುಗಳನ್ನು ಪಟ್ಟಿಮಾಡುವುದೇ ಆದರೆ; ಮೊದಲನೆಯದು, ಲೋಕಕ್ಕೆ ಬೆಳಕಾಗುವ ರಾಜನು ಈ ಕ್ರಿಸ್ತ ಎಂಬ ಸಂಕೇತವಾಗಿ ಮೂವರು ರಾಜರು ತಾರೆಯ ಬೆಳಕನ್ನು ಅನುಸರಿಸಿ ಬಂದು ಕ್ರಿಸ್ತನನ್ನು ಸಂಧಿಸಿ ಕ್ರಿಸ್ತನೆ ಜಗತ್ತಿನ ಮಹಾರಾಜ ಎಂದು ಪರಿಚಯಿಸಿದ ಹಬ್ಬ. ಇದೇ  ಮೂರು ರಾಯರ ಹಬ್ಬ. ಎರಡನೆಯದು, ಯೇಸು ಸ್ನಾನಿಕ ಅರಳಪ್ಪರಿಂದ ಸ್ನಾನದೀಕ್ಷೆ ಪಡೆದು ತನ್ನನ್ನೇ ಲೋಕಾರ್ಪಣೆಮಾಡಿಕೊಂಡ ದಿನ. ಮೂರನೆಯದು, ಕಾನಾ ಮದುವೆಯಲ್ಲಿ ನೀರನ್ನು ದ್ರಾಕ್ಷರಸವನ್ನಾಗಿ ಪರಿವರ್ತಿಸಿ ತನ್ನ ದೈವೀ ಗುಣವನ್ನು ಪ್ರಚುರಪಡಿಸಿದ ದಿನ. ಹೀಗೆ ಕ್ರಿಸ್ತನ ಮಹತ್ತರ ಪ್ರಥಮ ಹೆಜ್ಜೆಗಳ ಸಲುವಾಗಿ ಧರ್ಮಸಭೆ ಈ ಹಬ್ಬವನ್ನು ಆಚರಿಸುತ್ತದೆ. ಈ ಹಬ್ಬಕ್ಕೆ ಮೂರು ಅಂಶಗಳಿದ್ದರೂ ಮೂರು ರಾಯರ ಹಬ್ಬವೇ ಹೆಚ್ಚು ಪ್ರಚಲಿತವಾಗಿರುವುದು.

ಕ್ರಿಸ್ಮಸ್ ಹಬ್ಬದ ಸಂಭ್ರಮವನ್ನು ಮೂರು ರಾಯರು ಈ ದಿನದವರೆಗೂ ವಿಸ್ತರಿಸಿಕೊಂಡಿರುವುದಕ್ಕೆ ಇವರು ನಮಗೆ ಅಚ್ಚುಮೆಚ್ಚಿನವರು. ಕ್ರಿಸ್ಮಸ್ ಹಬ್ಬಕ್ಕೆಂದು ಕೊಟ್ಟಿಗೆಯನ್ನು ಕಟ್ಟಿ ಮೂಲೆಯಲ್ಲಿಡುತ್ತಿದ್ದ  ಮೂರು ರಾಯರ ಮೂರ್ತಿಗಳನ್ನು ಅಂದು ಬಾಲಯೇಸುವಿನ ಬಳಿ ಇಡುವ ಮೂಲಕ ಸಂಭ್ರಮಿಸುತ್ತೇವೆ. ಹಾಗಾಗಿ ಇದು ಮೂರು ರಾಯರು ಸಂದರ್ಶಿಸಿದ ಹಬ್ಬವೆಂದೇ ನಮ್ಮ ಮನಗಳಲ್ಲಿ ಗಟ್ಟಿಯಾಗಿ ನೆಲೆಯೂರಿದೆ.

ಆದರೆ ಮೂರು ರಾಯರು ಯೇಸುವನ್ನು ಸಂಧಿಸುವುದಕ್ಕೂ ಗ್ರಾಮೀಣಪ್ರದೇಶದಲ್ಲಿ ಆಚರಣೆಯಲ್ಲಿರುವಂತೆ ಜಾನುವಾರುಗಳನ್ನು ತೀರ್ಥದಿಂದ ಪ್ರೋಕ್ಷಿಸಿ ಆಶೀರ್ವದಿಸುವ ಇದೇ ದಿನಕ್ಕೂ ಅದ್ಯಾವ ಸಂಬಂಧ ಬೆಸೆದಿದೆಯೋ ಗೊತ್ತಿಲ್ಲ.. ಯೇಸು ಹುಟ್ಟಿದ್ದು ದನಕರುಗಳ ಮಧ್ಯೆ ಎಂದಾಗಲಿ ಮೂರು ರಾಯರು ಒಂಟೆಗಳ ಮೇಲೆ ಪ್ರಯಾಣಿಸಿ ಬಂದರು, ಒಂಟೆಗಳು ನಮ್ಮಲ್ಲಿ ಇಲ್ಲದ್ದರಿಂದ ದನಕರುಗಳ ರೂಪದಲ್ಲಿ ಅವುಗಳನ್ನೂ ಆಶೀರ್ವದಿಸಲಾಗುವುದು ಎಂದಾಗಲಿ ನಮ್ಮದೇ ಕಲ್ಪನೆಯಲ್ಲಿ ಆ ಅಚರಣೆಯನ್ನು ಅರ್ಥೈಸಿಕೊಂಡಿದ್ದೇವೆ. ಈ ಕಲ್ಪನೆ ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ತಿಳಿದಿಲ್ಲ. ಆದರೂ ಇದನ್ನು ಆಚರಿಸುವ ಆಸಕ್ತಿ ಮಾತ್ರ ಅಸಾಧಾರಣ.

ಹಳ್ಳಿಗರಿಗೆ ವ್ಯವಸಾಯವೇ ಜೀವನಾಧಾರವಾದ್ದರಿಂದ ದನಕರು ಕುರಿ ಮೇಕೆಗಳು ಅವರ ಅವಿಭಾಜ್ಯಭಾಗ. ವರ್ಷಕ್ಕೊಮ್ಮೆ ಅವುಗಳನ್ನು ಗೌರವಿಸಿ ಸತ್ಕರಿಸುವ ಹಬ್ಬವನ್ನು ಇನ್ನೆಷ್ಟು ಮುತುವರ್ಜಿಯಿಂದ ಮಾಡಿಯಾರು ಊಹಿಸಿ.  ಊಹಿಸುವುದೇನು? ಅಂತಹ ಪ್ರದೇಶದಿಂದ ಹುಟ್ಟಿ ಬಂದ ನನ್ನಂತವನಿಗೆ ಆ ಚಿತ್ರಣವನ್ನು ಕಟ್ಟಿಕೊಡುವುದು ಕಷ್ಟಕರವೇನಲ್ಲ. ವರ್ಷಪೂರ ಕಷ್ಟಪಟ್ಟು ಗೇಮೆ ಗೈಯುವ ಜಾನುವಾರುಗಳನ್ನು ಆದಷ್ಟು ಚೆಂದವಾಗಿ ಶೃಂಗರಿಸಿ ಮೆರವಣಿಗೆಗೆ ತರಬೇಕು ಎಂದು ಎಂತಹ ಬಡವನಿಗೂ ಅನಿಸದೇ ಇರದು!.

ನಾವು ತಿಂಗಳಿಗೊಮ್ಮೆ ಚೌರ ಮಾಡಿಸಿಕೊಂಡು ಅನಾಯಾಸವಾಗಿ ಇರುವುದಿಲ್ಲವೇ ಹಾಗೆ ವರ್ಷಕೊಮ್ಮೆ ಹಸುಗಳ ಕೊಂಬನ್ನು ನುಣುಪಾಗಿ ಒರೆದು, ಕೊಂಬನ್ನು ಅಂದಗೊಳಿಸುವುದರಿಂದ ಆರಂಭಗೊಳ್ಳುತ್ತಿತ್ತು ಕಾಳಜಿ. ಪುಷ್ಕಳ ಮೇವು, ಮೈ ತೊಳೆಯುವುದು, ಹೀಗೆ ಸಾಕಷ್ಟು ಸೌಕರ್ಯಗಳು ನಡೆದಿರುತಿದ್ದವು. ಇಷ್ಟು ದಿನ ಬೋರಿಡುತ್ತಿದ್ದ ಹಳ್ಳಿ ಆ ದಿನ ಪಟ್ಟಣದ ಮಾರ್ಕೆಟ್ ನಂತೆ ಮಾರ್ಪಡಾಗುತಿತ್ತು. ಪೀತಾಂಬರಗಳು, ಗಂಟೆ-ಗೆಜ್ಜೆಗಳು, ಕೊಂಬಿನಕಳಸ, ವರ್ಣರಂಜಿತ ಪೇಪರ್, ಮಾಲೆ ಸರಮಾಲೆಗಳು ಇತ್ಯಾದಿ ಇತ್ಯಾದಿಗಳನ್ನು ಊರಿನ ಪ್ರಮುಖ ವೃತ್ತದಲ್ಲಿ ಹರವಿಕೊಂಡ ಅಂಗಡಿಗಳು. ಮುತ್ತಿಗೆಹಾಕಿ ವ್ಯಾಪಾರಕ್ಕಿಳಿಯುವ ಜನರು, ಪರಸ್ಪರ ಏನೇನು ಅಲಂಕಾರಿಕ ವಸ್ತುಗಳನ್ನು ಕೊಂಡೆವು, ಆ ಅಂಗಡಿಯ ಬೆಲೆ ಈ ಅಂಗಡಿಯಲ್ಲಿನ ಬೆಲೆ ತಾಳೆ ಮಾಡಿ ತರುವಷ್ಟರಲ್ಲಿ ದೊಡ್ಡ ಡೀಲ್ ಮುಗಿಸಿದ ಅನುಭವ. ಅಂಗಡಿಯವರೇನು ಸಾಮಾನ್ಯರೇ? ಬೆಲೆಗೆ ತಕ್ಕ ಸಬೂಬು ಉಚಿತವಾಗಿ ಕೊಡುತ್ತಿದ್ದ. ಇವರೆಲ್ಲರೂ ಅದೇ ಊರಿನವರಲ್ಲ ಅಕ್ಕ ಪಕ್ಕದ ಊರಿನಲ್ಲಿರುವ ವ್ಯಾಪಾರಸ್ಥರು. ಈ ವಾರ್ಷಿಕ ದಿನವನ್ನು ಮುಂಗಡವಾಗಿ ಗೊತ್ತುಪಡಿಸಿಕೊಂಡು ಎಲ್ಲ ಅಲಂಕಾರಿಕ ಸಾಮಾನುಗಳೊಂದಿಗೆ ಹಾಜರಾಗುತ್ತಿದ್ದರು. ರಸ್ತೆಯ ಬದಿಯಲ್ಲಿ, ಮನೆಯ ಜಗುಲಿಗಳಲ್ಲಿ ಮಾರಗಲ ಜಾಗಸಿಕ್ಕರೆ ಸಾಕು ಥೇಟ್ ಅಂಗಡಿಗಳಂತೆ ಮಾಡಿಬಿಡುತ್ತಿದ್ದರು. ಹಿಂಬದಿ ಗೋಡೆಗೆ ತರಾವರಿ ಬಣ್ಣದ ಮಾಲೆಗಳನ್ನು ನೇತುಹಾಕಿ ಅಂಗಡಿಗೊಂದು ಅಂದ ಕೊಡುತ್ತಿದ್ದರು. ತಾವು ಹರವಿಟ್ಟುಕೊಂಡ ಅಂಗಡಿಯ ಅಳತೆಗಾಗಿ ಆ ಬದಿ ಈ ಬದಿಯಲ್ಲಿ ದನಕರುಗಳಿಗೆ ಕಟ್ಟುವ ಮೂಗುದಾರಗಳು, ಕರಿಹಗ್ಗವನ್ನು ಸಿಕ್ಕಿಸಿಬಿಟ್ಟು, ತಮ್ಮ ಮುಂದೆ ವಿವಿಧ ಬಣ್ಣದ ಡಬ್ಬಗಳು, ಕುಂಚ, ಬಲೂನು, ಚಿನಾರಿ ಕಾಗದ, ಮತ್ತು ಸೂರ್ಯಕಾಂತಿಯಂತೆ ಕಾಣುವ ಬಣ್ಣಬಣ್ಣದ ವಿನ್ಯಾಸಗಳನ್ನು ಬಿಡಿಸಿಟ್ಟುಕೊಂಡು ಅಪ್ಪಂದಿರೊಂದಿಗೆ ಬರುವ ಮುದ್ದು ಮಕ್ಕಳನ್ನು ಆಕರ್ಷಿಸಲು ಸಣ್ಣ ಪುಟ್ಟ ಅಟದ ಸಾಮಾನುಗಳನ್ನೂ ಇಟ್ಟುಕೊಂಡು ಗಲ್ಲಾಪೆಟ್ಟಿಯ ಮೇಲೆ ಕೂತುಬಿಟ್ಟರೆ ಭರ್ಜರಿ ವ್ಯಾಪಾರ ಶುರು. ಬಂದ ಅಷ್ಟು ಜನರ ಗುಂಪನ್ನು ಒಮ್ಮೆಲೇ ನಿಭಾಯಿಸಿ ಎಲ್ಲರಿಗೂ ಸಂಯಮದಿಂದ ಉತ್ತರಿಸಿ ವ್ಯವಹರಿಸುವ ಜಾಣ್ಮೆ ಈ ಶೆಟ್ಟರುಗಳಿಗೆ ಮಾತ್ರವೇ ಬಂದ ಜನ್ಮತ ಕಲೆ ಎಂದು ಭಾವಿಸುತ್ತೇನೆ.  ಇನ್ನು ಮುಂದಿನದೇನಿದ್ದರೂ ಆ ಊರಿನ ಸ್ಪರ್ಧಾ ಜಗತ್ತು.

ಊರಿಗೆ ಊರೇ ತಮ್ಮ ಮನೆಗಳ ಮುಂದೆ ದನಕರುಗಳ ಸಿಂಗಾರ ಕಾರ್ಯದಲ್ಲಿ ನಿರುತರಾಗಿದ್ದರೆ, ಆಟವಾಡುವ ಮಕ್ಕಳ ಒಂದು ದಂಡು ಬೀದಿ ಬೀದಿ ಭೇಟಿಕೊಟ್ಟು ಯಾರ ಕೈಂಕರ್ಯ ಹೆಚ್ಚು ಎಂದು ಅಂದಾಜಿಸಿ ಬರುತ್ತಿದ್ದರು. ಕೆಲವರಂತೂ ಮನೆಯ ಒಳ ಹಿತ್ತಲಿನಲ್ಲೇ ಹಸುಗಳನ್ನು ಸಿಂಗರಿಸುತ್ತಿದ್ದರು. ಏಕೆಂದರೆ ಇಂತಹ ದಂಡಿನಲ್ಲಿ ಎದುರಾಳಿಯ ಮಕ್ಕಳೇನಾದರೂ ಬಂದು ನೋಡಿಬಿಟ್ಟಾರು ಎಂಬ ಭಯ. ಅದು ಸ್ಪರ್ಧೆಯ ಮೊದಲೇ ಗುಟ್ಟು ಬಿಟ್ಟುಕೊಡದ ಗಟ್ಟಿ ನಿರ್ಧಾರ.

ಒಟ್ಟಾರೆ ಆ ಘಳಿಗೆಯವರೆಗೂ ಸಸ್ಪೆನ್ಸ್. ಆನಂತರದ ತೋರಿಕೆಯೇ ಬೇರೆ. ಅವರದು ಹೀಗಿತ್ತು, ಅವರದು ಹಾಗಿತ್ತು, ಇವರದ್ದು ಎಲ್ಲರಿಗಿಂತಲೂ ಜೋರಾಗಿತ್ತು ಎಂಬ ಊರವರ ಪ್ರಶಂಸೆಯನ್ನು ವಾರಗಟ್ಟಲೇ ಕೇಳುವ ಭಾಗ್ಯಕ್ಕೆ ತಾವು ಪಾತ್ರರಾಗಬೇಕು ಎಂಬುದೇ ಮೂಲ ಆಸೆ. ಸಾಕಷ್ಟು ಶಕ್ತಿಮೀರಿ ಇರುವ ಐಡಿಯಾನೆಲ್ಲ ಬಳಸಿ ಸಿದ್ಧತೆಯಲ್ಲಿ ತೊಡಗುತ್ತಿದ್ದರು. ಸಮಯ ಮೀರಿತೆನೋ ಎಂಬ ಗಾಬರಿಗೆ ಕೊನೆಗಳಿಗೆಯಲ್ಲಿ ಕಟ್ಟುತ್ತಿದ್ದ ಬಲೂನು, ಪೇಪರ್ ಮಾಲೆಗಳು ಆಕಾರ ಕಳೆದುಕೊಂಡು ಆಭಾಸ ಎನಿಸಿದರೂ “ಎಲ್ಲರ ಮನೆ ದೋಸೇನೂ ತೂತೆ” ಎಂಬ ಗಾದೆ ಇದ್ದೇ ಇದೆಯಲ್ಲ.

ಸಂಜೆ ಆಗುತ್ತಿದ್ದಂತೆ ಸರಿಯಾಗಿ ನಾಲ್ಕಕ್ಕೆ ದೇವಾಲಯದ ಗಂಟೆ ಬಾರಿಸುವುದರೊಂದಿಗೆ ಹಬ್ಬ, ಜಾತ್ರೆ, ಸ್ಪರ್ಧೆ, ಸಾಹಸದ ನಾಡಿಮಿಡಿತ ಹೆಚ್ಚಾಗುವುದು. ಊರಿನ ಎಲ್ಲ ದನಕರುಗಳು ಬಂದು ರಸ್ತೆಯುದ್ದಕ್ಕೂ ಸಾಲಾಗಿ ನಿಂತು ಗುರುವಿನ ಬರುವಿಕೆಗೆ ಕಾಯುವ ಸರದಿ. ರಸ್ತೆಯ ಆಜುಬಾಜಿನಲ್ಲಿ ನಿಲ್ಲುವ ಜಾನುವಾರುಗಳ ಸೌಂದರ್ಯದ ಲೆಕ್ಕಾಚಾರ ಆಗ ಶುರು.

ತಮ್ಮ ಇಡೀ ದಿನದ ಶ್ರಮದಾನ ಇಲ್ಲಿ ಪ್ರದರ್ಶನಕ್ಕಿಡಬೇಕಾಗಿತ್ತು. ದನಗಳನ್ನು ಮಾತನಾಡಿಸುವ ಶಬ್ದಗಳಿಂದ ನೆರೆದ ಜನರ ಗಮನವನ್ನು ತಮ್ಮ ಸಿಂಗಾರಗೊಂಡ ಎತ್ತುಗಳ ಮೇಲೆ ಸೆಳೆಯುವ ಮಂತ್ರ. ಬಲ್ಲವರಿಗೆ ಗೊತ್ತು ಅವರ ತಂತ್ರ. ನೆರೆದವರೆಲ್ಲರೂ ಒಂದೇ ಕಡೆ ನೋಡುತ್ತಿದ್ದಾರೆ ಎಂದಿಟ್ಟುಕೊಳ್ಳಿ, ಅಲ್ಲಾವುದೋ ಒಂದು ಬೆದರಿದ ಎತ್ತು ಗುಂಪನ್ನು ಚದುರಿಸಿ ಧೂಳೆಬ್ಬಿಸಿರುವುದು ಖಾತ್ರಿ. ಅದನ್ನು ಹಿಡಿದು ಹತೋಟಿಗೆ ತರುವಂತಹ ಸಾಹಸಮಯ ಪಟ್ಟುಗಳನ್ನು ಯುವಕರು ಮಾಡುತಿದ್ದರು. ಮಾಡಿ ಬೀಗುತ್ತಿದ್ದರು. ಆ ಹುಡುಗರು ಕಟ್ಟಿಕೊಳ್ಳುವ ಹೆಣ್ಮಕ್ಕಳು ಅತ್ತ ಸುಳಿದಾಡಿದರೋ ಆ ಪಟ್ಟುಗಳು ಇನ್ನಷ್ಟು ಖಡಕ್.

ಇದು ಹಸು-ಎತ್ತುಗಳ ಕಥೆಯಾದರೆ, ಕುರಿಮೇಕೆಗಳನ್ನು ಕಟ್ಟಿಕೊಂಡವರ ಕಥೆನೇ ಬೇರೆ. ಕುರಿ ಮೇಕೆಗಳು ಒಂದುಕಡೆ ನಿಲ್ಲುವ ಜಾತಿಯವಲ್ಲ. ಗುರುಗಳು ಬಂದು ಹೋಗುವವರೆಗೆ ಅವುಗಳನ್ನು ನಿಭಾಯಿಸುವ ಸಾಹಸ ಸವಾಲಿನ ಕೆಲಸ. ತೀರ್ಥ ಪ್ರೋಕ್ಷಣೆ ಮುಗಿದ ಮೇಲೆ ವಾಪಾಸು ಮನೆ ಸೇರುವ ಗೊಂದಲದಲ್ಲಿ ಯಾರದೋ ಕುರಿ ಮತ್ಯಾರದೋ ಕುರಿ ಮಂದೆಯೊಂದಿಗೆ ಸೇರಿ ತಪ್ಪಿಸಿಕೊಂಡಿರುತ್ತಿತ್ತು. ಅದನ್ನು ಹುಡುಕಿ ಎಳೆತರುವುದರೊಳಗೆ ಮೂರು ರಾಯರು ಸವೆದ ದಾರಿ, ದುಗುಡ ಎಲ್ಲ ಪರಿಚಯವಾಗಿಬಿಟ್ಟಿರುತ್ತದೆ. ಈ ಎಲ್ಲ ಸಂದಣೀಯ ಮಧ್ಯೆ ಎಮ್ಮೆಗಳ ದಂಡು ಬಂದು ಊರಿನ ಪ್ರಮುಖ ವೃತ್ತದ ಸುತ್ತ ನಿಂತು ಅರಚುತ್ತಿದ್ದರೆ ಯಮಧರ್ಮನಿಗೆ ಕೇಳಿಸದೇ ಇದ್ದಿತೇ?. ಅವನ ಪ್ರತಿನಿಧಿಯಾಗಿ ಎಮ್ಮೆಕಾಯುವ ಹುಡುಗ ಎಮ್ಮೆಯ ಮೇಲೇ ಕೂತು ಅವುಗಳನ್ನು ಸಮಾಧಾನ ಪಡಿಸುವ ವಿಧಿಯೇ ಯಮಯಾತನೆ. ಆದರೂ ಬೇಸರಿಸದ ಅವನು ಎಮ್ಮೆಗಳಂತೆ ನಿಧಾನವಾಗಿ ಬಂದ ಕೆಲಸ ಮುಗಿಸಿಕೊಂಡು ಹೋಗುತ್ತಿದ್ದವು. ಎಮ್ಮೆಗಳೇನೂ ಉಚಿತವಾಗಿ ಬಂದು ಹೋಗುವಂತವಲ್ಲ. ಇಡೀ ಊರನ್ನು ಗುಡಿಸಿ ಸಾರಿಸುವಷ್ಟು ಸಗಣಿ ಬಿಟ್ಟುಹೋಗುತ್ತಿದ್ದವು. ಈ ಹಬ್ಬಕ್ಕೆ ಅವುಗಳ ಬಳುವಳಿ ಅದು.

ಈ ಶೋ ನ ಕಡೆಗೆ ನಡೆಯುತ್ತಿದ್ದುದೇ ‘ಹೋರಿ’ ಆಟ. ಅದು ಒಂಟಿ. ಒಂಟಿ ಸಲಗವೇ ಸರಿ! ಅದರ ನೋಟ ಭಯಂಕರ. ಹೋರಿಯನ್ನು ಎಡ  ಬಲ ಎರಡೂ ಕಡೆ ಮೂಗುದಾರಕ್ಕೆ ಕಟ್ಟಿದ ಹಗ್ಗ ಹಿಡಿದ ಇಬ್ಬರ ನಡುವೆ ಬರುತ್ತಿದ್ದರೆ, ನೋಡಲು ನಿಂತ ಜನ ಹೆದರಿ ಓಡಿಹೋಗುತ್ತಿದರು. ಕಟ್ಟುಮಸ್ತಾದ ಮೈಕಟ್ಟು, ಬಿರ್ಗಣ್ಣಿನ ನೋಟ, ಊರಿನ ಎಲ್ಲ ಜಾನುವಾರುಗಳು ಆಲಂಕಾರಗೊಂಡು ಹಬ್ಬ ಆಚರಿಸಿದರೆ, ಹೋರಿ ಮಾತ್ರ ಚೂಪಾದ ತನ್ನ ಒಂದು ಕೊಂಬಿನ ತುದಿಗೆ ಕೇವಲ ನಿಂಬೆಹಣ್ಣನ್ನು ಸಿಕ್ಕಿಸಿಕೊಂಡು ಠೀವಿಯಿಂದ ಬರುವುದೇ ಅದಕ್ಕೆ ಅಲಂಕಾರ ಮತ್ತು ಅದರ ಅಹಂಕಾರ. ಹೆಚ್ಚೆಂದರೆ ಕತ್ತಿಗೊಂದು ಹಾರ. ಕುಸ್ತಿ ಅಂಕಣದತ್ತ ಜಟ್ಟಿಯನ್ನು ಕರೆತರುವಂತೆ ಬಾಸವಾಗುತ್ತಿತ್ತು. ಇದಕ್ಕೆ ತದ್ವಿರುದ್ಧ ನೋಡಿ ಜೋಡಿ ಎತ್ತುಗಳ ಆಟ. ಯೆತೇಚ್ಛವಾಗಿ ಖರ್ಚುಮಾಡಿ ಸಿಂಗಾರಗೊಂಡಿರುತ್ತವೆ. ಅವು ಮೈಬೆನ್ನ ಮೇಲೆ ಕವುದಿ ಹೊದ್ದು, ಕಾಲ್ಗೆಜ್ಜೆಗಳನ್ನು ಕಟ್ಟಿಕೊಂಡು, ಕಟ್ಟಿಗೆ ಕೊರಳ್ಗೆಜ್ಜೆ, ಸರ ಹಾಕಿಕೊಂಡು ಯಕ್ಷಗಾನ ಆಡುವವರಂತೆ ಹೆಜ್ಜೆಗಳನ್ನಾಕುತಾ ಬರುವ ಪರಿಯೇ ಪರಮಾನಂದ. ಥೇಟ್ ಪ್ಯಾಶನ್ ಶೋ. ವ್ಯಾಪಾರೀ ಶೆಟ್ಟರ ಊಟಕ್ಕೆ ಪಾಯಸ, ಪಲ್ಯ ಆದವರೆ ಈ ಎತ್ತುಗಳ ಧಣಿಗಳು. ಇಲ್ಲಿಗೆ ಆಟ ಮುಗಿಯಿತು ಅಂದುಕೊಳ್ಳುತ್ತೇವೆ, ಆದರೆ ಕ್ಲೈಮಾಕ್ಸ್ ಬೇರೇನೇ ಇದೆ.

ಅದೇನೆಂದರೆ, ಎಲ್ಲವನ್ನು ನೋಡಿ ಉನ್ಮಾದಗೊಂಡ ಕೆಲವು ಕುಡುಕ ಮಹಾಶಯರು ಸಿಕ್ಕ ಬೀದಿ ನಾಯಿಗೋ, ಸಾಕಿದ ಬೆಕ್ಕಿಗೋ ಅಲ್ಲಿ ಇಲ್ಲಿ ಉದುರಿ ಬಿದಿದ್ದ ಬಲೂನು, ಪೇಪರ್ ಅನ್ನು ಕಟ್ಟಿ ಗುರುಗಳ ಬಳಿ ಎಳೆದುತಂದು ಇವಕ್ಕೂ ನೀವು ತೀರ್ಥ ಪ್ರೋಕ್ಷಿಸಬೇಕೆಂದು ಆಗ್ರಹಿಸಿ, ನಾಯಿ ಜೊತೆ ತಾವೂ ಮಂಡಿಯೂರಿ ಆಶೀರ್ವಾದ ಪಡೆದು ಖುಷಿಪಡುತ್ತಿದ್ದರು. ಅಲ್ಲಿಗೆ ಎಲ್ಲವೂ ಶುಭಂ!

ಇಗ್ನೇಷಿಯಸ್ ಸಂತೋಷ್

 

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram