
ಪಳ ಪಳ ಪಳ ಪಳ ಹೊಳೆಯುತ್ತಿರುವ ಚುಕ್ಕಿ
ನೀ ಹೊರಟಿದ್ದೀಯ ಎಲ್ಲಿಗೆ ನುಗ್ಗಿ ನುಗ್ಗಿ ಹಿಗ್ಗಿ..?!!!
ಸಂದುಗೊಂದು ನುಸುಳಿಕೊಂಡು ಎತ್ತ ಓಡುವೀ ಹೀಗೆ?
ಮಿಂಚುಹುಳುವು ಬೆದರಿಯಾವ ನಿನ್ನ ನೋಡಿ ಕಡೆಗೆ
ನದಿಯ ಮೇಲೆ ಬೆರಳ ಚಾಚಿ ನೀರು ಬೆಳ್ಳಿ ಕುಲುಮೆ
ಹೊಲವ ಸಾಗಿ ತೆನೆಯ ತೂಗಿ ಪರುವತಗಳತ್ತಿ ಜಾರಿದಿರಿಮೆ
ಬಾನುಬಳಗ ಹರೆಯದಲ್ಲೂ ತೋರದಾದ ಬೆಳಗ
ಹೊತ್ತು ನಡೆದಿಹೆ ಎತ್ತ ನೆಡಲು ಪೂರ್ವದೆಡೆಯ ಪಯಣಿಗ
ಬೆಚ್ಚಿಬಿದ್ದು ನಿನ್ನೆ ನೋಡುತಿರಲು
ಒಂಟಿ ತಾರೆ ಮಿನುಗು ಕೋಟಿ ತಾರೆಗೂ ಮಿಗಿಲು
ಇರುಳ ರಾಜ
ಭರದಿ ಭುವಿಯ ಪಯಣ ಯಾರ ನೋಡ್ವ ತವಕ
ನಿನ್ನ ಲೋಕಕ್ಕಿಂತ ಭಿನ್ನ ಏನು? ಈ ಮಣ್ಣಲೋಕ
ಬಾನು ಭುವಿಯ ಒಂದು ಮಾಡುವ ಭವ್ಯ ನಡಿಗೆ
ಹಿಂದೆ ಕುಲಕೋಟಿ ಜಗತ್ತು ಹೊರಟಿದೆ ಮೆರವಣಿಗೆ
ಯಾರ ಜನನ ಯಾವ ಸುದಿನ ಯಾರು ಇತ್ತ ಆಮಂತ್ರಣ
ನಾನೂ ಕಾದೆ ಅಷ್ಟುದಿನವು ನೋಡಿ ಮುಗಿಲ ಚಿತ್ರಣ
ಪ್ರೀತಿಗಾಗಿ ಶಾಂತಿಗಾಗಿ ಬರುವನೊಬ್ಬ ಕರ್ತನು
ಅವನ ನೋಡ ಹೋದರೆ ತಿಳಿಸು ನಾನು ಕೂಡ ಬರುವೆನು.
ಇಗ್ನೇಷಿಯಸ್ ಸಂತೋಷ್