ಮುಲ್ಲಾ ನಸ್ರುದ್ದೀನನಿಗೆ ಅಂದು ಬೆಳಗ್ಗೆಯೇ ಮದುವೆ ನಡೆಯಿತು. ಅದೇ ರಾತ್ರಿ ನದಿಯ ಈ ದಡದಿಂದ ಆ ದಡಕ್ಕೆ ಮುಲ್ಲಾ ನಸ್ರುದ್ದೀನ್ ಮತ್ತು ಅವನ ವಧು ನೆಂಟರಿಷ್ಟರೊಂದಿಗೆ ದೋಣಿಯಲ್ಲಿ ಪ್ರಯಾಣ ಮಾಡುತ್ತಿದ್ದರು. ಆಗ ದಿಢೀರನೆ ಬಿರುಗಾಳಿ ಬಂದೆರಗಿತು. ನದಿಯಲ್ಲಿ ಪ್ರವಾಹ ಬಿರುಸಾಗಿದ್ದಿತು. ಇವರೆಲ್ಲ ಪ್ರಯಾಣ ಮಾಡುತ್ತಿದ್ದ ದೋಣಿ ತಲ್ಲಣಿಸಿ ಹುಲ್ಲಿನಂತೆ ಅಲುಗಾಡಿತು. ಹೊಸ ಗಂಡಹೆಂಡತಿಯಾದಿಯಾಗಿ ದೋಣಿಯಲ್ಲಿ ಇದ್ದ ಎಲ್ಲರಿಗೂ ಮರಣಭಯ ಆವರಿಸಿಕೊಂಡಿತು! ಆದರೆ ಮುಲ್ಲಾ ಮಾತ್ರ ಯಾವ ಭಯವೂ ಇಲ್ಲದೆ ಶಾಂತವಾಗಿದ್ದ. ಇದನ್ನು ಗಮನಿಸಿದ ಅವನ ಹೆಂಡತಿ, “ನಿಮಗೆ ಭಯವೆನ್ನಿಸ್ತಾ ಇಲ್ವಾ?” ಎಂದು ಗಂಡನನ್ನು ಅಚ್ಚರಿಯಿಂದ ಕೇಳಿದಳು. ಮುಲ್ಲಾ ನಸ್ರುದ್ದೀನ್ ಯಾವ ಉತ್ತರವನ್ನೂ ನೀಡದೆ ತನ್ನ ಸೊಂಟದಲ್ಲಿದ್ದ ಕತ್ತಿಯನ್ನು ತೆಗೆದು ಹೆಂಡತಿಯ ಗಂಟಲನ್ನು ಚುಚ್ಚಿ ಇರಿಯುವ ಹಾಗೆ ಹತ್ತಿರ ಬಂದ. ಹೆಂಡತಿ ವಿಚಲಿತಳಾಗಲಿಲ್ಲ. ಆಗ ಮುಲ್ಲಾ ನಸ್ರುದ್ದೀನ್ ತನ್ನ ಹೆಂಡತಿಯನ್ನು ನೋಡಿ ಕೇಳಿದ: “ಯಾಕೆ, ನಿಂಗೆ ಸ್ವಲ್ಪಾನೂ ಭಯ ಆಗ್ಲಿಲ್ವಾ?” ಅದಕ್ಕೆ ಅವನ ಹೆಂಡತಿ, “ಈ ಕತ್ತಿಯೇನೂ ಖಂಡಿತವಾಗಿಯೂ ತುಂಬಾ ಅಪಾಯಕಾರಿಯಾದ್ದೇ ಆಗಿರಬಹುದು. ಆದರೆ ಅದನ್ನು ಹಿಡಿದುಕೊಂಡಿರುವವರು ನನ್ನ ಮೇಲೆ ತುಂಬಾ ಪ್ರೀತಿ-ಪ್ರೇಮ ಆಸೆ ಇಟ್ಟಿರೊ ನನ್ನ ಗಂಡ. ಆದ್ದರಿಂದ ನನಗೆ ಭಯವಾಗಲಿಲ್ಲ’ ಎಂದಳು.
“ಹಾಗೆಯೇ ನನಗೂ, ಈ ಬಿರುಗಾಳಿ ಅಲೆಗಳು ಬೇಕಾದರೆ ಅಪಾಯಕಾರಿ ಯಾಗಿರಬಹುದು. ಆದರೆ ಇದನ್ನು ಆಡಿಸುತ್ತಿರುವ ಅಲ್ಲಾಹ್ ಕರುಣಾಮಯಿ, ಆದ್ದರಿಂದ ನನಗೆ ಭಯ ಇಲ್ಲ ಎಂದ ಮುಲ್ಲಾ ನಸ್ರುದ್ದೀನ್.
ಸಂಗ್ರಹ ಇನ್ನಾ