
ಆಗಲೇ ಮುಂಗೋಳಿ ಕೂಗಿ ಆಗಿದೆ. ಮೂಡಣದಲ್ಲಿ ರಂಗೇರಿದೆ. ಕತ್ತಲು ಕಳೆದು ಇನ್ನೇನೂ ಬೆಳಕು ಮೂಡಲು ದಿಗಂತದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಇಳೆಯ ಜನರಿಗೆ ಹುರುಪು ತುಂಬಲು ದಿನಪತಿ ಸಜ್ಜಾಗುತ್ತಿದ್ದ. ಬಾನ ತುಂಬ ಬೆಳಕಿನ ಮೆರವಣಿಗೆ ಹೊರಟಿದೆ. ಹಕ್ಕಿಗಳ ಇಂಚರವೂ ಕೇಳಿ ಬರಲಾರಂಭಿಸಿದೆ. ಪಕ್ಕದಲ್ಲೇ ಇದ್ದ ಗುಡಿಯಿಂದ ಎಂ. ಎಸ್. ಸುಬ್ಬುಲಕ್ಷ್ಮಿಯವರ ಕಂಚಿನ ಕಂಠದಿಂದ “ಕೌಸಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ| ಉತ್ತಿಶ್ಥ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್” ಸುಪ್ರಭಾತ ಕೇಳಬರುತ್ತಿತ್ತು. ಅದಕ್ಕಿಂತ ಸ್ವಲ್ಪ ಹೊತ್ತಿನ ಹಿಂದೆ ನೂರುಲ್ ಹುದಾ ಪಳ್ಳಿಯಿಂದ ಬೆಳಗ್ಗಿನ ಆಝಾನ್ ಬಾಂಗ್ ಕೂಡಾ ಕೇಳಿ ಬಂದಿತ್ತು. ಈ ಕಡೆಯಿಂದ , ಕೇಳಿ ಬಂದ ಇಗರ್ಜಿಯ ಗಂಟೆಯ ಸದ್ದಿಗೆ ತಡವಾಯಿತೇನೋ ಎಂದು ತಡಬಡಿಸಿ ಗಡಿಬಿಡಿಯಿಂದ ತಾನು ಮಲಗಿದ್ದ ಹರುಕು ಮುರುಕು ಚಾಪೆಯಿಂದ ಆರೋಗ್ಯಮ್ಮ ಒಮ್ಮೆಗೆ ಎದ್ದಳು. ನಿದ್ದೆಗೆ ಶುಭಮಸ್ತು ಹೇಳಿದ ಆಕೆ ಹಿಂದೆ ಮುಂದೆ ನೋಡದೆ, ಮುಖಕ್ಕೆ ನೀರೂ ಹಾಕದೇ ನೇರವಾಗಿ ತನ್ನ ನೆಚ್ಚಿನ ಪುಣ್ಯಕೋಟಿಯ ದರ್ಶನಕ್ಕೆಂದು ಕೊಟ್ಟಿಗೆಯ ಕಡೆ ಹೆಜ್ಜೆ ಹಾಕಿದಳು. ಆರೋಗ್ಯಮ್ಮಳ ದಿನಚರಿ ಆರಂಭವಾಗುವುದೇ ಪುಣ್ಯಕೋಟಿಯ ದರ್ಶನದಿಂದ. ಆ ಸಾಧು ಪ್ರಾಣಿಯ ಮುಖದರ್ಶನದಿಂದ ಇಡೀಯ ದಿನ ನಿರಾತಂಕವಾಗಿ ಸಾಗುತ್ತದೆ ಎಂಬ ಅಳವಾದ ನಂಬಿಕೆ ಅವಳದ್ದು.
ಹೆಜ್ಜೆ ಸಪ್ಪಳದಿಂದಲೇ ಬಂದವಳು ಆರೋಗ್ಯಮ್ಮನೆಂದೇ ತಿಳಿದ, ಕೊಟ್ಟಿಗೆಯ ನೆಲದ ಮೇಲೆ ಮರದ ದಿಮ್ಮಿಗಳಂತೆ ಬಿದ್ದುಕೊಂಡಿದ್ದ ಹಸುಗಳು ಚಂಗನೇ ನೆಗೆದು ಸಂತಸವನ್ನು ವ್ಯಕ್ತಪಡಿಸಿದವು. ಅವುಗಳ ಕೊರಳುಗಳಲ್ಲಿ ಕಟ್ಟಿದ ಗಂಟೆಗಳ ಸಪ್ಪಳ ಕೊಟ್ಟಿಗೆಯ ತುಂಬಾ ಮಾರ್ದನಿಸಿತು. ಪುಣ್ಯಕೋಟಿಯ ದರ್ಶನಕ್ಕೆ ಹಾತೊರೆಯುತ್ತಿದ್ದ ಆರೋಗ್ಯಮ್ಮಳ ಕಂಗಳು ಪುಣ್ಯಕೋಟಿಯನ್ನು ಕಂಡಾಕ್ಷಣ ರವಿಯ ಆಗಮನದಿಂದ ಹೂ ಅರಳುವಂತೆ ಅರಳಿತು. ಮೂಕ ಪ್ರಾಣಿಯೊಂದಿಗೆ ಆರೋಗ್ಯಮ್ಮಳಿಗೆ ಏನೋ ಕರುಳ ಬಳ್ಳಿಯಂಥಾ ಸಂಬಂಧ.
ಕೊಟ್ಟಿಗೆಯ ಮಗ್ಗುಲಿಗಿದ್ದ ಪಡಸಾಲೆಯಲ್ಲಿ ಚಳಿಯಿಂದ ಮುದುರಿಕೊಂಡು ಗೋಣಿಯೊಂದನ್ನು ಮೈತುಂಬಾ ಹೊದ್ದು ಮಲಗಿದ್ದ ‘ಮೂಗ’ನು, ದನಗಳ ಕೊರಳಿಗೆ ಕಟ್ಟಿದ್ದ ಗಂಟೆಗಳು ಮಾಡಿದ ಸದ್ದಿಗೆ ಚೆಂಡು ಪುಟಿಯುವಂತೆ ಎದ್ದು ಕುಳಿತ. ಕಣ್ಣು ಮಿಟುಕಿಸಿತ್ತಾ ಕೊಟ್ಟಿಗೆಯ ಬಾಗಿಲ ಬಳಿ ಬಂದ. ಇನ್ನೂ ನಿದ್ರೆಯಿಂದ ಸರಿಯಾಗಿ ಎಚ್ಚರಗೊಳ್ಳದ ಆತ ಆರೋಗ್ಯಮ್ಮಳನ್ನು ದಿಟ್ಟಿಸುತ್ತಾ ನಿಂತ. ಪುಣ್ಯಕೋಟಿಯ ದರ್ಶನಕ್ಕೆಂದು ಬಂದಿದ್ದ ಆರೋಗ್ಯಮ್ಮ ಮಾತ್ರ ಧನ್ಯತೆ ತುಂಬಿದ ಕಂಗಳಿಂದ ಪುಣ್ಯಕೋಟಿಯನ್ನೇ ನೋಡುತ್ತಾ, “ಒಂದು ಹೊತ್ಗೆ ಊಟಕ್ಕೂ ಅಲೆಯುವಂತಹ ಕಷ್ಟದ ಸಮಯದಾಗ ನನ್ಗೆ ಭಾಗ್ಯದಾತೆಯಂತೆ ಬಂದ್ಳಲ್ಲ ತಾಯೇ” ಮನಸ್ಸಿನಲ್ಲೇ ಹೇಳಿಕೊಳ್ಳುತ್ತಾ ಪುಣ್ಯಕೋಟಿಯ ತಲೆಯನ್ನು ತೀಡುತ್ತಿದ್ದಂತೆ ಯಜಮಾನಿಯ ಮನಸ್ಸನ್ನು ಅರಿತಂತೆ ಪುಣ್ಯಕೋಟಿ ಖುಷಿಯಿಂದ ತಲೆಯಾಡಿಸತೊಡಗಿತ್ತು.
ಹೀಗೆ ದಿನಕ್ಕೆ ತೊಡಗಿದ ಆರೋಗ್ಯಮ್ಮ “ಏ ಬೇಗಾ ಕೊಟ್ಗೆ ಕ್ಲೀನ್ ಮಾಡಿ ಹಾಲ್ ಕರ್ದು, ನಾಷ್ಟ ಹಾಕ್ಸುಕೊಂಡು, ಹಸುಗಳ್ನ ತೊರೆದಿಂಡಿಗೆ ಹೊಡ್ಕೊಂಡು ಹೋಗು” ಮೂಗನಿಗೆ ಆಜ್ಞಾಪಿಸುತ್ತಾ ಕೊಟ್ಟಿಗೆಯ ಹೂರ ನಡೆದಳು. ಯಜಮಾನಿಯ ಮಾತಿಗೆ ತಲೆಯಾಡಿಸುತ್ತಾ ಕೊಟ್ಟಿಗೆಯ ತಿಪ್ಪೆಯನ್ನು ಬಳಿಯಲು ಸಜ್ಜಾದ ಮೂಗ.
ಪುಣ್ಯಕೋಟಿಯು ಒಂದು ಅಸಾಮಾನ್ಯ ಹಸುವೆಂದು ಊರಿಗೆ ಊರೇ ಮಾತನಾಡಿಕೊಳ್ಳುತ್ತಿತ್ತು. ಗೋವಿನ ಹಾಡಿನಲ್ಲಿ ಬರುವ ಪುಣ್ಯಕೋಟಿಯ ಹೆಸರು ಆರೋಗ್ಯಮ್ಮಳ ಹಸುಗೆ ಹೇಗೆ ಬಂದಿತ್ತೋ ಗೊತ್ತಿಲ್ಲ. ಆದರೆ ಸಾಕ್ಷಾತ್ ಪುಣ್ಯಕೋಟಿಯೇ ಮೈದಾಳಿದಂತಿತ್ತು ಆ ಹಸು. ಇಡೀ ತಾಲ್ಲೂಕಲ್ಲೇ ಯಾವ ಹಸುವೂ ಕೊಡದಷ್ಟು ಹಾಲನ್ನು ಕೊಡುತ್ತಾ ಎಲ್ಲರ ಮನೆ ಮಾತಾಗಿತ್ತು. ಜಿಲ್ಲೆಯಲ್ಲಿ ನಡೆದ ಅತಿ ಹೆಚ್ಚು ಹಾಲು ಕೊಡುವ ಹಸುಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಬಂದಿದ್ದ ಹತ್ತಾರು ಹಸುಗಳನ್ನು ಹಿಂದಿಕ್ಕಿ, ಸುಮಾರು ೫೦ ಲೀಟರ್ ಹಾಲು ನೀಡಿ ದಾಖಲೆ ಬರೆದಿತ್ತು ಈ ಪುಣ್ಯಕೋಟಿ. ಬ್ಯಾಂಕಿನಿಂದ ಸಾಲ ಪಡೆದು ಪುಣ್ಯಕೋಟಿಯನ್ನು ಖರೀದಿಸಿದ್ದರೂ ಇಂತಹ ಅಸಾಧಾರಣವಾದ ಹಸು ಸಿಕ್ಕಿದ್ದು ದೇವರ ಕೃಪೆಯೇ ವಿನಃ ಬೇರೇನೂ ಅಲ್ಲ ಎಂದು ಆರೋಗ್ಯಮ್ಮ ನಂಬಿದ್ದಳು. ಬಡತನದ ದವಡೆಗೆ ಸಿಕ್ಕಿ ಜರ್ಜರಿತಳಾಗಿದ್ದ ಆರೋಗ್ಯಮ್ಮಳಿಗೆ ಪುಣ್ಯಕೋಟಿಯು ಧಾರಾಳ ಹಾಲನ್ನು ನೀಡುವುದರ ಮೂಲಕ ಆಕೆಯ ಸ್ವಾಲಂಬನೆಯ ಬದುಕಿಗೆ ಅಡಿಪಾಯ ಹಾಕಿ ಕೊಟ್ಟಿತ್ತು. ಅವಳ ಉಜ್ವಲ ಭವಿಷ್ಯದ ಕಿಡಿಯನ್ನ ಅವಳಲ್ಲಿ ಹೊತ್ತಿಸಿತ್ತು. ಜತೆಗೆ ಹೆಸರು ಪ್ರತಿಷ್ಠೆ, ಪ್ರಶಸ್ತಿಗಳನ್ನು ಸಹ ತಂದುಕೊಟ್ಟಿತ್ತು. ಇದರಿಂದ ಚಿಕ್ಕ ಪುಟ್ಟ ಕಾರಣಕ್ಕೆಲ್ಲಾ ಕಾಲು ಕೆರೆದುಕೊಂಡು ಆರೋಗ್ಯಮ್ಮ ಬಳಿ ಜಗಳ ಮಾಡುತ್ತಿದ್ದ ಪಕ್ಕದ ಮನೆಯವರಿಗೆ ಮಾತ್ರ ಆರೋಗ್ಯಮ್ಮಳ ಆರ್ಥಿಕ ಚೇತರಿಕೆ ನುಂಗಲಾಗದ ತುತ್ತಾಯಿತು.
ಯಜಮಾನಿಯ ಪ್ರತಿದಿನದ ಚಟುವಟಿಕೆಗಳನ್ನು ಮೂಕ ಸಾಕ್ಷಿಯಂತೆ ನೋಡುತ್ತಿದ್ದ ಮೂಗನ ನಿಜವಾದ ಹೆಸರು ರಾಜ. ಬಾಯಿಬಾರದ ಕಾರಣ ಊರಿನವರು ಅವನನ್ನು ಮೂಗ ಎಂದೇ ಕರೆಯುತ್ತಿದ್ದರು. ಊರಿನವರ ಬಾಯಿಯಲ್ಲಿದ್ದ ಕತೆಯ ಪ್ರಕಾರ ರಾಜ ಸಣ್ಣವನಿರುವಾಗ ತನ್ನ ತಾಯಿಯ ಸಾವಿನ ಸುದ್ದಿಯನ್ನು ಕೇಳುತ್ತಲೇ ತನ್ನ ವಾಕ್ ಸಾಮರ್ಥ್ಯವನ್ನು ಕಳೆದುಕೊಂಡಿದ್ದ. ಚಿಕ್ಕವಯಸ್ಸಿನಲ್ಲೇ ತಂದೆ ತಾಯಂದಿರನ್ನು ಕಳೆದುಕೊಂಡು ಅನಾಥನಾಗಿದ್ದ ರಾಜ ಅವರಿವರ ಮನೆಗಳಲ್ಲಿ ಜೀತಮಾಡುತ್ತಾ ಕೊನೆಗೆ ಆರೋಗ್ಯಮ್ಮಳ ಮನೆಯಲ್ಲಿ ಪುಣ್ಯಕೋಟಿ ಮತ್ತು ಇತರ ಹಸುಗಳ ಪಾಲನೆಗೆ ಸೇರಿಕೊಂಡ. ಎಲ್ಲಾ ಹಸುಗಳಿಂತ ಪುಣ್ಯಕೋಟಿಯ ಮೇಲೆ ಮೂಗನಿಗೂ ಸ್ವಲ್ಪ ಹೆಚ್ಚೇ ಪ್ರೀತಿ. ಪುಣ್ಯಕೋಟಿಯನ್ನು ನೆನೆದಾಗಲ್ಲ ಮೂಗನ ಮನಸ್ಸು ಸಂತೋಷದಿಂದ ಬಲೂನ್ನಂತೆ ಊದಿಕೊಳ್ಳುತ್ತದೆ. ಮೂಗ ಯಾರಿಗೂ ಹೇಳಿಕೊಳ್ಳಲಾಗದ ನೋವನ್ನು ಮೂಕ ಪುಣ್ಯಕೋಟಿಯ ಬಳಿ ಹೇಳಿಕೊಳ್ಳುತ್ತಾ ಹೃದಯವನ್ನು ಹಗುರ ಮಾಡಿಕೊಳ್ಳುತ್ತಿದ್ದ. ಪುಣ್ಯಕೋಟಿಯ ಕರುವು ಜಿಗಿಜಿಗಿದು ಅಮ್ಮನ ಬಳಿ ಬಂದಾಗ ಪುಣ್ಯಕೋಟಿ ತನ್ನ ಕರುವಿನ ಮೈಯನ್ನೆಲ್ಲಾ ಅಕ್ಕರೆಯಿಂದ ನೆಕ್ಕುತ್ತಾ ಹಾಲು ಉಣಿಸುತ್ತಿದ್ದ ದೃಶ್ಯವನ್ನು ಕಂಡು ಮೂಗ ಅತೀವ ಆನಂದದಿಂದ ಮೈಮರೆಯುತ್ತಿದ್ದ. ಚಿಕ್ಕಂದಿನಲೇ ತಾಯಿಯನ್ನು ಕಳೆದುಕೊಂಡಿದ್ದ ದುರ್ದೈವಿ ಮೂಗನಿಗೆ ಆ ಹಸುವಿನ ಮಮತೆಯನ್ನು ಕಂಡು ತನ್ನ ತಾಯಿಯ ಮಮತೆಯನ್ನು ನೆನಪಾಗುತ್ತಿತ್ತು. ಹೀಗೆ ಪುಣ್ಯಕೋಟಿಯ ಬಳಿ ಇದ್ದಾಗ ಮೂಗನ ಪ್ರತಿಯೊಂದು ಸನ್ನೆಯು ಮಾತಾಗಿ ಪುಣ್ಯಕೋಟಿಗೆ ಬಹುಬೇಗ ಅರ್ಥವಾಗಿ ಬಿಡುತ್ತಿತ್ತು. ಮೌನದಲ್ಲೇ ಇಬ್ಬರ ಸಂಭಾಷಣೆ ನಡೆದು, ಒಡನಾಟ ಬೆಳೆದು ಹೆಮ್ಮರವಾಗಿತ್ತು. ಈ ಸಂಬಂಧದ ಮೌನಭಾಷೆಗೆ ಮಾತೇ ಬೇಡವಾಗಿತ್ತು.
ಹೀಗೆ ದಿನಗಳು ಉರುಳಿದವು… ಪುಣ್ಯಕೋಟಿಯ ಕೆಚ್ಚಲು ಬತ್ತುತ್ತಾ ಬಂತು. ಹಾಲು ಕೊಡುವುದು ಕಡಿಮೆಯಾಯಿತು. ಜತೆಗೆ ಯಾವುದೋ ಒಂದು ಭಯಂಕರ ರೋಗದಿಂದ ಪುಣ್ಯಕೋಟಿ ನರಳತೊಡಗಿತ್ತು. ಆರೋಗ್ಯಮ್ಮ ಪಶುವೈದ್ಯರನ್ನು ಕರೆಸಿದಳು. ಪುಣ್ಯಕೋಟಿಯನ್ನು ಗುಣಪಡಿಸಲು ಪ್ರಯತ್ನಿಸಿದ ಅವರಿಂದ ಏನೂ ಮಾಡಲು ಸಾಧ್ಯವಾಗದೆ ಬಂದು ಹೋದರು. ಸಂತ ಅಂತೋಣಿಯವರ ಸನ್ನಿಧಾನಕ್ಕೆ ಹರಕೆ ಹೇಳಿದರೂ, ಪುಣ್ಯಕೋಟಿಯ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣಲಿಲ್ಲ. ಒಂದು ಕಾಲದಲ್ಲಿ ಬೋಗುಣಿ ತುಂಬಾ ಹಾಲನ್ನು ನೀಡುತ್ತಿದ್ದ ಪುಣ್ಯಕೋಟಿ ಈಗ ಸೊರಗಿದ್ದಾಳೆ. ಅವಳು ಕೊಡುತ್ತಿರುವ ಹಾಲು ಆರೋಗ್ಯಮ್ಮಳ ಮನೆಯ ದಿನನಿತ್ಯದ ಕಾಫಿ ಟೀಗೆ ಸಾಕಾಗುತ್ತಿರಲಿಲ್ಲ. ಈಗ ಬ್ಯಾಂಕಿನ ಸಾಲ ತೀರಿಸುವ ಪ್ರಶ್ನೆ ಬೇರೆ ಪೆಡಂಭೂತವಾಗಿ ಅರೋಗ್ಯಮ್ಮಳನ್ನು ಕಾಡಲು ಪ್ರಾರಂಭಿಸಿತ್ತು. ಈ ರೀತಿಯ ವಿಷಮ ಪರಿಸ್ಥಿತಿಯಿಂದ ಆರೋಗ್ಯಮ್ಮಳ ಆರೋಗ್ಯದ ಪರಿಸ್ಥಿತಿ ಕೂಡ ಹದಗೆಡಲು ಶುರು ಹತ್ತಿತ್ತು.
ಬೇಸಿಗೆ ಕಾಲವಾದರೂ ಮೋಡ ಕವಿದ ವಾತಾವರಣ. ಬಿಸಿಲಿಲ್ಲದ್ದರೂ ಧಗೆಯ ಅನುಭವ. ಒಂದು ಬಗೆಯ ಉಸಿರುಕಟ್ಟಿಸುವ ಬಿಗಿ ಪರಿಸ್ಥಿತಿ. ಇದ್ದಕ್ಕಿದ್ದಂತೆ ಪುಣ್ಯಕೋಟಿಯ ಸಾವಿನ ಸುದ್ದಿ ಕಾಡ್ಗಿಚ್ಚಿನಂತೆ ಊರೆಲ್ಲಾ ಹರಡಿತ್ತು. “ಅಯ್ಯೋ ಎಂಥಾ ಹಸು ಸತೋಯಿತ್ತಲ್ಲ..” ಎಂದು ಕೆಲವರು ಮರುಕ ಪಟ್ಟರೆ, ಇನ್ನು ಕೆಲವರು ಪುಣ್ಯಕೋಟಿಯ ಸಂಶಯಾಸ್ವದ ಸಾವಿನ ರಹಸ್ಯವನ್ನು ಭೇದಿಸಲು ಪ್ರಯತ್ನಿಸುತ್ತಿದ್ದರು. “ಹಸು ಮೇಯಿಸುವಾಗ ಮೂಗ ಎಸೆದ ಕಲ್ಲು ಪುಣ್ಯಕೋಟಿಯ ತಲೆಮೇಲೆ ಬಲವಾಗಿ ಬಿದ್ದುದ್ದರಿಂದ ಪುಣ್ಯಕೋಟಿ ಸತ್ತೋಯಿತಂತೆ” ಎಂದರು ಕೆಲವರು. “ಆರೋಗ್ಯಮ್ಮನಿಗೆ ಆಗದವರು ಯಾರೋ ಹಸುಗೆ ವಿಷ ಹಾಕಿ….” “ಬ್ಯಾಂಕಿನ ಪರಿಹಾರ ದುಡ್ಡಿನ ಆಸೆಗೆ ಆರೋಗ್ಯಮ್ಮಳೇ…..” ಹೀಗೆ ಅಂತೆಕಂತೆಗಳು ಪುಣ್ಯಕೋಟಿಯ ಸಾವಿನ ಸುತ್ತಾ ಹುಟ್ಟಿಕೊಂಡವು. ಯಾರಿಗೂ ಪುಣ್ಯಕೋಟಿಯ ಆಕಾಲಿಕ ಸಾವಿನ ನಿಖರವಾದ ಕಾರಣ ಗೊತ್ತಿರಲಿಲ್ಲ. ಮೂಗನಿಗೂ ಸಹ ಪುಣ್ಯಕೋಟಿಯ ಆಕಸ್ಮಿಕ ಸಾವು ಒಂದು ನಿಗೂಢ ಪ್ರಶ್ನೆಯಾಗಿ ಉಳಿದಿತ್ತು. ತಾನು ಅತಿಯಾಗಿ ಪ್ರೀತಿಸುತ್ತಿದ್ದ ಹಸುವಿನ ಮರಣದಿಂದ ಮೂಗ ಗರಬಡಿದವನಂತಾಗಿದ್ದ. ಇನ್ನೊಂದು ಕಡೆ, ಪುಣ್ಯಕೋಟಿಯ ಏಕಾಏಕಿ ಸಾವು ಅರೋಗ್ಯಮ್ಮಳನ್ನು ನಿಸ್ತೇಜಗೊಳಿಸಿತ್ತು., ಅವಳ ಬದುಕಲ್ಲೂ ಮೋಡ ಕವಿದ ವಾತಾವರಣ ತುಂಬಿತ್ತು.
ಕೆಲ ದಿನಗಳ ನಂತರ, ಪುಣ್ಯಕೋಟಿಯ ಆಕಸ್ಮಿಕ ಸಾವಿನಿಂದ ಉಂಟಾದ ನಷ್ಟವನ್ನು ತುಂಬಲು ಬ್ಯಾಂಕಿನವರು ಕಳುಹಿಸಿಕೊಟ್ಟ ಪರಿಹಾರ ಧನ ಆರೋಗ್ಯಮ್ಮನ ಕೈಸೇರಿತ್ತು. ಪರಿಹಾರ ಹಣದಿಂದ ಅರೋಗ್ಯಮ್ಮ ಇನ್ನೊಂದು ಹಸುವನ್ನು ಖರೀದಿಸುವಳೆಂಬ ನಿರೀಕ್ಷೆ ಕೆಲವರಲ್ಲಿತ್ತು. ಆದರೆ ಆ ಊಹೆ ಸುಳ್ಳಾಯಿತು. ಪುಣ್ಯಕೋಟಿಯ ಕರುವು ಕೂಡ ಮನೆಯಿಂದ ಮಾಯವಾಗಿತ್ತು. ಬ್ಯಾಂಕಿನಿಂದ ಬಂದ ಪರಿಹಾರ ಹಣವನ್ನು ಆರೋಗ್ಯಮ್ಮ ಏನು ಮಾಡಿದಳು ಎಂದೂ ಯಾರಿಗೂ ಗೊತ್ತಾಗಲಿಲ್ಲ. ಆದರೆ ಆ ದುಡ್ಡು ಹೇಗೋ ಖರ್ಚಾಗಿತ್ತು. ಈಗೀಗಂತೂ ಆರೋಗ್ಯಮ್ಮ ಕೊಟ್ಟಿಗೆಗೆ ಹೋಗುವುದನ್ನೇ ನಿಲ್ಲಿಸಿಬಿಟ್ಟಿದ್ದಳು. ಪುಣ್ಯಕೋಟಿ ಸತ್ತುದಕ್ಕೆ ಆರೋಗ್ಯಮ್ಮ ಚಿಂತಿತಳಾಗಿದ್ದಾಳೆಂದು ಊರವರೆಲ್ಲ ಭಾವಿಸಿದರು. ಅವಳ ದು:ಸ್ಥಿತಿಗೆ ಮಮ್ಮಲ ಮರುಗಿದರು.
ದಿನಗಳು ಉರುಳಿ ತಿಂಗಳಾದವು. ಖಿನ್ನಳಾಗಿದ್ದ ಆರೋಗ್ಯಮ್ಮ ಚೇತರಿಸಿಕೊಳ್ಳಲೇ ಇಲ್ಲ. ದಿನದ ಬಹು ಸಮಯ ಪಡಸಾಲೆಯ ಮೇಲೆ ಸುಮ್ಮನೇ ಧ್ಯಾನಸ್ಥಳಾಗಿ ಕುಳಿತುಬಿಡುತ್ತಿದ್ದಳು. ಮೈಮೇಲೆ ಪರಿವೆ ಇರಲಿಲ್ಲ. ಕೆಲವೊಮ್ಮೆ ತನಗೆ ಅರಿವಿಲ್ಲದಂತೆ ಏನೇನೋ ಮಾತಾಡುತ್ತಿದ್ದಳು. ಅವಳನ್ನು ಮೌನವಾಗಿಸಿರುವುದು ಪಾಪಪ್ರಜ್ಞೆಯೋ ಅಥವಾ ದು:ಖವೋ ಎಂಬ ನಿಖರವಾದ ಕಾರಣ ತಿಳಿಯಲು ಹಲವರು ಪ್ರಯತ್ನಪಟ್ಟರು. ಏನೂ ಪ್ರಯೋಜನ ಆಗಲಿಲ್ಲ.
ಹೀಗೆ ಒಂದು ದಿನ ಆರೋಗ್ಯಮ್ಮ ಮನೆಯ ಮುಂಭಾಗದ ಪಡಸಾಲೆ ಮೇಲೆ ಸುಮ್ಮನ್ನೇ ಕುಳಿತಿದ್ದಳು. ಸಂಜೆ ಚರ್ಚ್ನ ಘಂಟೆಯ ನಿನಾದ. ಆರೋಗ್ಯಮ್ಮ ಒಮ್ಮೆಲೇ ಎಚ್ಚರಗೊಂಡಳು. ಕಷ್ಟದ ಸಮಯದಲ್ಲಿ ತನ್ನ ಮಕ್ಕಳೆಲ್ಲಾ ತನ್ನನ್ನು ಬಿಟ್ಟು ಹೋದಾಗ ದುಃಖಿತಳಾಗಿದ್ದ ಆರೋಗ್ಯಮ್ಮಳಿಗೆ, “ದುಃಖಿಸಬೇಡ… ನೀನು ಕಳೆದುಕೊಂಡಿದ್ದು ಇನ್ನೊಂದು ರೂಪದಲ್ಲಿ ನಿನ್ನಲ್ಲಿಗೆ ಬಂದೇ ಬರುತ್ತೆ, ಕಳೆದುಕೊಳ್ಳಲೆಂದೇ ಕೆಲವು ನಮ್ಮ ಬದುಕಲ್ಲಿ ಬರುತ್ತವೆ. ಕೈ ತಪ್ಪಿ ಹೋದುದಕ್ಕೆ ಚಿಂತಿಸದಿರು. ಯಾವುದೂ ನಮ್ಮೊಂದಿಗೆ ಶಾಶ್ವತವಾಗಿ ಇರಲಾರದು. ಮೊದಲು ನೀನು ಈ ಮೋಹದಿಂದ ಪಾರಾಗು”. ಯಾರೋ ಹೇಳಿದ ಮಾತು ಮನಸ್ಸಿನಲ್ಲಿ ಕೇಳಿಸಲಾರಂಭಿಸಿತು. ಚೆಂಡು ಪುಟಿದೇಳುವಂತೆ ಮೇಲೆದ್ದ ಆರೋಗ್ಯಮ್ಮ ಗುಡಿಸಲಿನೆಡೆ ವೇಗದಲ್ಲಿ ಹೆಜ್ಜೆ ಹಾಕಿದಳು…
- ಜೋವಿ