
ಬರೆಯಬೇಕೆನ್ನುವ ಅಂತರಾಳದ
ಮಾತುಗಳನ್ನು
ಬರೆಯಲಾಗದೆ ಬರೆಯುತ್ತಿದ್ದೇನೆ
ಬಿತ್ತ ಎಲ್ಲ ಬೀಜಗಳು ಮಣ್ಣಿನಲ್ಲಿ
ಮೊಳಕೆಯೊಡೆಯದಂತೆ
ಹೌದು
ನೋಡುವ ನಿನ್ನ ಕಣ್ಣುಗಳಿಗೆ
ಅದೆಂಥ ಮಾಯವಿತ್ತೋ
ಯಾರಿಗೂ ಕಾಣದು ನಿನಗೆ
ಕಾಣಿಸಿ ಬಿಡುತ್ತಿತ್ತು ಸ್ವಷ್ಟವಾಗಿ
ನಿಕರವಾಗಿ
ಮೂರ್ತವಾಗಿ..!
ಕಣ್ಣೀರೊಳಗಿನ ದುಗುಡ
ಕಡು ಮುಖದೊಳಗೆ ಆಡಗಿ ಕೂತ ಹಸಿವು
ಅಸಹಾಯಕತೆಯಲ್ಲಿದ್ದ ಅವಮಾನ
ಅನಾಥ ಪ್ರಜ್ಜೆಯಲ್ಲಿದ್ದ ಒಂಟಿತನ
ಮಾತುಗಳಲ್ಲಿರಬೇಕಾದ ಪಕ್ವತೆ
ಕೊಟ್ಟ ಮಾತಿಗೆ ಇರಬೇಕಾದ ದೃಢತೆ?
ಅದೇಗೆ ಇವೆಲ್ಲವೂ ಕಾಣಿಸದಂತೆ ನಮಗೆ
ಕಾಣಿಸಿಬಿಡುತ್ತಿತ್ತು ನಿನಗೆ?
ಅದು ನಿನ್ನ ಒಳದೃಷ್ಟಿಯೇ
ಸೂಕ್ಷ್ಮ ದೃಷ್ಟಿಯ ಪರಿಜ್ಞಾನವೇ
ಅಥವಾ
ತಾಯ್ತನದ ಅಂತಃಕರಣವೇ?
ನಿಜಕ್ಕೂ ಈ ಅರಿವಿನ ನಿನ್ನ ಬದುಕು
ನನ್ನ ಮಾತಿಗೆ ಸಿಗದ ಬಾನು!
ಇನ್ನೊಂದು ಮಾತು
ನಿನ್ನದ್ದು ‘ನಿನ್ನ’ ಮೀರಿದ ಬದುಕು
ನಿನ್ನ ಆರಾಮ ವಲಯವ ದಾಟಿ
ಇನ್ನೊಬ್ಬರ ಒಳಿತಿಗೆ ನಡೆದ
ನಿನ್ನ ಹೆಜ್ಜೆಗಳೆಷ್ಟೋ?
ಹೆಗಲೇರಿಸಿಕೊಂಡ ಗಂಡಾಂತರಗಳೆಷ್ಟೋ!
ತಪ್ಪಿದವರನ್ನು ತಿದ್ದಿ ತೀಡಿ ಸಲಹಿದೇಷ್ಟೋ
ಕೆಲವೊಮ್ಮೆ
ಸಹಾಯ ಹಸ್ತ ಚಾಚಲಾಗದೆ
ಅಸಹಾಯಕತೆಯಲ್ಲಿ ಕಳೆದ
ನಿದ್ರಹೀನ ನಿನ್ನ ರಾತ್ರಿಗಳು..
ಹತ್ತಾರುವರ್ಷಗಳ ಅನಾರೋಗ್ಯದಲ್ಲೂ ತಾಳ್ಮೆಯಿಂದ
ಸಹಿಸಿಕೊಂಡ ತೀವ್ರ ನೋವುಗಳು?..
ಎಲ್ಲವೂ ಕೂಡಿಕೊಂಡ
ಎಣಿಕೆಗೆ ಸಿಗದ
ತೀರರಹಿತ ಸಾಗರ ಬದುಕು ನಿನ್ನದು
ಕೆದಕಿದಷ್ಟೂ ವಿಸ್ತಾರವಾಗುವ ಕವಿತೆಯ
ಹತ್ತಾರು ಸಾಲುಗಳು ನೀನು
ಅದಕ್ಕೆ ಇಂದು ನಾನು
ನಿನ್ನ ಪ್ರಜ್ಜೆ
ನಿನ್ನ ಸೂಕ್ಷ್ಮ
ನಿನ್ನ ಮಾತು
ನಿನ್ನ ನಡೆ
ನಿನ್ನ ನೋಟ
ನಿನ್ನ ಕನ್ನಡಿ…
ಜೋವಿ
ಫಾದರ್ ವಿನೋದ್ ಪಾಲ್ ಮೂಲತಃ ಹಾರೋಬೆಲೆ ಊರಿನವರು. ದನಿ ಮಾಧ್ಯಮ ಮನೆಯ ಸ್ಥಾಪಕರು. ಹವ್ಯಾಸಿ ಬರಹಗಾರರು. ಪ್ರಸ್ತುತ ಮಾನ್ವಿ ಎಂಬ ಚಿಕ್ಕ ಪಟ್ಟಣದಲ್ಲಿರುವ ಲೊಯೋ ಪದವಿ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.