
ಮನುಷ್ಯ ಒಂಟಿಯಾಗಿ ಜೀವಿಸಲಾರ. ಸಂಘ ಜೀವಿಯಾಗಿ ಬದಕಲು ಬಯಸುತ್ತಾನೆ. ತನ್ನ ಗುಂಪುಗಳನ್ನು ಗುರುತಿಸಿಕೊಳ್ಳಲು ಜಾತಿ (ಹೆಸರು) ಹುಟ್ಟಿಕೊಂಡಿರಬಹುದೆಂಬ ಕಲ್ಪನೆಯಿದೆ. ವೇದ ಶಾಸ್ತ್ರಗಳು ಇದಕ್ಕೆ ಆಧಾರವಾಗಿವೆ. ತುಂಬಾ ಜಾತಿ (ಗುಂಪು)ಗಳಿರುವುದರಿಂದಲೇ ಜಾತಿಗೆ ಅತೀತವಾಗಿ ಜಾತ್ಯತೀತ ದೇಶವಾಗಿ ಭಾರತ ಹೊರಹೊಮ್ಮಿದ್ದು. ಸಂವಿಧಾನವೂ ಕಾಲಕ್ಕೆ ತಕ್ಕಂತೆ ರಚನೆಯಾಗಿರುವುದು ಸರಿಯಷ್ಟೆ. ಅಂದರೆ ‘ಜಾತಿ’ ಇದೆ ಎಂಬುದು ಒಪ್ಪಿತ ಸತ್ಯ. ಒಪ್ಪಿಕೊಳ್ಳುವುದು ಅನಿವಾರ್ಯ. ಈ ‘ಜಾತಿ’ ಯನ್ನು ತೊಲಗಿಸಲು ಹಲವರ ಪ್ರಯತ್ನಗಳು ಮಣ್ಣು ಪಾಲಾಗಿ ಹತ್ತಕ್ಕೆ ಮತ್ತೊಂದು ಸೇರಿಕೊಳ್ಳುತ್ತಿರುವ ಸಂಗತಿ ನಮ್ಮ ಮುಂದಿರುವ ನಗ್ನ ಸತ್ಯ. ಹೀಗಿದ್ದೂ ಜಾತಿ-ಉಪಜಾತಿಗಳೊಳಗಿನ ಮೇಲು ಕೀಳೆಂಬ ಭಾವನೆಗಳ ದಳ್ಳುರಿ ಹೆಚ್ಚಿರುವುದೂ ಸುಳ್ಳಲ್ಲ. ಇಂದಿನ ಜಾತಿ ರಾಜಕಾರಣ, ಮೀಸಲಾತಿಗಳನ್ನು ಗಮನಿಸಿದರೆ, ಜಾತಿ ಹಿಂದೆಯೂ ಇತ್ತು, ಇಂದೂ ಇದೆ, ಮುಂದೆಯೂ ಇರುತ್ತದೆ. ಹಿಂದೆಂದಿಗಿಂತಲೂ ಇಂದು ಜಾತಿಯ ಮಹತ್ವ ಹೆಚ್ಚಿದ್ದು ಹಿಂದುಳಿದವರೆನಿಸಿಕೊಂಡು ಸರ್ಕಾರದ ಸೌಲಭ್ಯ ಪಡೆಯಲು ಹರಸಾಹಸ ಪಡುತ್ತಿವೆ ಹಲವು ಗುಂಪುಗಳು(ಜಾತಿ). ವಾಸ್ತವ ಹೀಗಿರುವಾಗ ‘ಜಾತಿ’ ತೊಲಗಿಸುವೆವು ಎಂಬ ವೇದಿಕೆಗಳಲ್ಲಿನ ಮಾತುಗಳಿಗೆ ಅರ್ಥವೇ ಇಲ್ಲ. ಜಾತಿ ಮತ್ತು ಧರ್ಮಕ್ಕೆ ಅಂತಹ ವ್ಯತ್ಯಾಸವೇನೂ ಇಲ್ಲ. ಎರಡೂ ಮಾರಕವೇ. ಇವೆರಡೂ ಬರೇ ನಮ್ಮ ಸಂಪ್ರದಾಯಗಳಾಗಿ ಮಾತ್ರ ಇದ್ದಿದ್ದರೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಕೆಲವು ಧರ್ಮಗಳು ತಮ್ಮ ಸಂಪ್ರದಾಯವನ್ನು ಇನ್ನೊಂದು ಸಮುದಾಯದ ಮೇಲೆ ಒತ್ತಾಯ ಪೂರ್ವಕವಾಗಿ ಹೇರಲು ಹೊರಟಿರುವುದು ಇನ್ನೊಂದು ರೀತಿಯ ಸಂಘರ್ಷವನ್ನು ಹುಟ್ಟು ಹಾಕಿದೆ. ಸರಕಾರ ‘ಲವ್ ಜಿಹಾದ್’ನ್ನು ನಿಷೇಧಿಸುವ ಸಲುವಾಗಿ ಮತಾಂತರ ನಿಷೇಧವನ್ನು ಇನ್ನಷ್ಟು ಬಿಗಿಗೊಳಿಸಿದೆ. ಪ್ರೀತಿ ಮಾಡಲಿಕ್ಕೂ ಜಾತಿ ನೋಡಿಕೊಂಡೇ ಆಯ್ಕೆಮಾಡಿಕೊಳ್ಳಬೇಕಾಗಿದೆ. ಜಾತೀಯತೆ ಅಳಿಯಲು ಅಂತರ್ಜಾತಿ ವಿವಾಹವನ್ನು ಬೆಂಬಲಿಸಬೇಕೆಂದು ಹೇಳುತ್ತಿದ್ದವರೇ ಈಗ ಜಾತಿ ಪೋಷಣೆಯ ರಾಜಕಾರಿಣಿಗಳು. ಇವರೆಲ್ಲ ಜಾತೀಯತೆಯ ಮೌಢ್ಯದಲ್ಲಿ ಮುಳುಗಿದವರೇ.
ಸಂವಿಧಾನ ಮತ್ತು ಜಾತೀಯತೆ
ಭಾರತದ ಸಂವಿಧಾನವು ಅತಿ ಪವಿತ್ರ ದಾಖಲೆ. ಅದು ಇಡೀ ವಿಶ್ವಕ್ಕೊಂದು ಮಾದರಿ. ದೇಶವು ಅಳವಡಿಸಿಕೊಂಡಿರುವ ಪ್ರಜಾಪ್ರಭುತ್ವದ ವ್ಯವಸ್ಥೆಯಡಿ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ಕಲ್ಪಿಸಿದೆ. ಆದರೆ ಈಗ ದೇಶವನ್ನು ಪ್ರಜಾಪ್ರಭುತ್ವದ ಹಾದಿಯಲ್ಲಿ ಮುನ್ನಡೆಸುವ ಜವಾಬ್ದಾರಿ ಹೊತ್ತ ನಮ್ಮ ರಾಜಕೀಯ ಮುಖಂಡರು ಜಾತಿರಾಜಕಾರಣದಲ್ಲಿ ಮುಳುಗಿರುವುದು ವಿಪರ್ಯಾಸ. ಜಾತಿ ಸಂಘರ್ಷ, ಅಶಾಂತಿ ನೆಲೆಯೂರುವಂತಾಗಿದೆ. ಚುನಾಯಿತ ರಾಜಕಾರಿಣಿಗಳ ಸರಕಾರವು ಒಂದೊಂದು ಜಾತಿಗೂ ಒಂದೊಂದು ಸವಲತ್ತು ನೀಡುತ್ತ ಜಾತಿಯ ಕರ್ಮಕಾಂಡವನ್ನು ಪೋಷಿಸುತ್ತಿದೆ. ಭಾರತವು ಬಹು ಸಂಸ್ಕೃತಿ ಮತ್ತು ನೂರಾರು ಭಾಷೆಗಳನ್ನು ಮಾತನಾಡುವ ಜನರನ್ನು ಒಳಗೊಂಡಿರುವ ದೇಶ. ವಿವಿಧ ಪಂಗಡ ಮತ್ತು ಧರ್ಮಗಳಿಂದ ಕೂಡಿದ ಒಕ್ಕೂಟ ರಾಷ್ಟ್ರ. ಮೇಲ್ನೋಟಕ್ಕೆ ಹಿಂದು ರಾಷ್ಟ್ರವೆನಿಸಿಕೊಂಡರೂ ವಿವಿಧ ಧರ್ಮಗಳಿಗೆ ಸೇರಿದ ನಾನಾ ಪಂಗಡದವರು ವಾಸಿಸುವ ಸರ್ವ ಧರ್ಮಗಳ ರಾಷ್ಟ್ರ ನಮ್ಮದು. ಆದರೆ ಕೆಲವು ಆಯ್ದ ರಾಜಕಾರಣಿಗಳ ಗುಂಪಿನವರಿಂದ ದೇಶ ಇಂದು ಜಾತಿಯ ಅಂಧಕಾರದಲ್ಲಿ ತತ್ತರಿಸುವಂತಾಗಿದೆ. ದಲಿತ/ಬ್ರ್ರಾಹ್ಮಣ ಎಂಬ ಕಲ್ಪಿತ ಪರಿಕಲ್ಪನೆಗಳಲ್ಲೇ ದೇಶದ ಆಡಳಿತ ವ್ಯವಸ್ಥೆ ಇಂದು ಹಳಿ ತಪ್ಪುವ ಸ್ಥಿತಿಗೆ ತಲುಪಿದೆ. ದಲಿತರನ್ನು ಉದ್ದರಿಸುವ ರಾಜಕೀಯ ಪ್ರೇರಿತ ಸಂಘಟನೆಗಳು ಒಂದೆಡೆಯಾದರೆ, ಮತ್ತೊಂದೆಡೆ ಅವರನ್ನು ದಮನಗೊಳಿಸುವ ಸಂಘಟನೆಗಳು, ಸಂಘರ್ಷಣೆಗಳು. ಇಂದು ಜಾತಿ ಸಂಘರ್ಷಣೆಗಳು ದೇಶದಾದ್ಯಂತ ಜರುಗುತ್ತಿವೆ. ಧರ್ಮ, ಜಾತಿ ಹೆಸರಿನಲ್ಲಿ ಜನರ ನಡುವೆ ಗೋಡೆ ಕಟ್ಟುವ ಕೆಲಸದಲ್ಲಿ ನಮ್ಮ ರಾಜಕಾರಣಿಗಳು ಸದಾ ಮುಂದು. ಜಾತ್ಯತೀತ ರಾಷ್ಟ್ರದಲ್ಲಿ ಇಂದು ಜಾತಿ ಸಂಪ್ರದಾಯಗಳೇ ಹೆಚ್ಚು ಮಹತ್ವ ಪಡೆದುಕೊಂಡಿವೆ. ದೇಶದಲ್ಲಿ ಜಾತಿ ಸಂಪ್ರದಾಯಗಳು ಎಲ್ಲಿಯವರೆಗೆ ಮುಂದುವರೆಯುವೋ ಅಲ್ಲಿಯವರೆಗೆ ದೇಶ ಜಾಗತಿಕ ಮಟ್ಟದಲ್ಲಿ ಹೊಂದುವ ಪ್ರಗತಿ ಕುಂಠಿತವಾಗುತ್ತದೆ. ಸಂವಿಧಾನದಲ್ಲಿ ಅಳವಡಿಸಿರುವ ಪ್ರಜಾಸತ್ತಾತ್ಮಕ ಸ್ವಾತಂತ್ರ್ಯವನ್ನು ನಮ್ಮ ರಾಜಕಾರಿಣಿಗಳು ದುರುಪಯೋಗ ಮಾಡಿಕೊಂಡು ಶ್ರೀಸಾಮಾನ್ಯ ಪ್ರಜೆಗಳ ಹಕ್ಕುಗಳನ್ನು ಹಂತ ಹಂತವಾಗಿ ಮೊಟಕುಗೊಳಿಸುವ ತಂತ್ರಗಾರಿಕೆಯನ್ನು ಅನುಸರಿಸುವಂತಿದೆ. ಶುಕ್ಲ ಪಕ್ಷದ ಚಂದ್ರನಂತೆ ತಮ್ಮನ್ನು ಬಿಂಬಿಸಿಕೊಳ್ಳುವ ರಾಜಕಾರಣಿಗಳು ತಾವು ಶುದ್ಧ ಹಸ್ತರು ಎಂದು ಬಾಯಲ್ಲಿ ಹೇಳಿದರೆ, ಅವರ ಲೆಕ್ಕಾಚಾರವೇ ಬೇರೆಯಾಗಿರುತ್ತದೆ. ರಹಸ್ಯವಾಗಿ ರೂಪಿಸುವ ತಂತ್ರಗಳಿಗೆ ಶತೃಗಳೂ ತಲೆದೂಗಬೇಕು.
ಸಂವಿಧಾನದ ಹಕ್ಕುಗಳನ್ನು ಬಳಸಿಕೊಂಡು ಹಲವರ ಶೋಷಣೆಯ ಮೂಲಕ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದೇ ಅವರ ಗುರಿ. ಶಾಸನಗಳನ್ನು ರೂಪಿಸುವ ಕೈಗಳೇ ಕಳಂಕಿತಗೊಂಡು ಕೊಳಕಾಗಿರುವುದರಿಂದ ಅವರು ಇನ್ನೆಂತಹ ಜನಪರ ಶಾಸನಗಳನ್ನು ರೂಪಿಸಿ ಅನುಷ್ಟಾನಕ್ಕೆ ತರಬಲ್ಲರು? ಇದು ಶ್ರೀಸಾಮಾನ್ಯರನ್ನು ಕಾಡುವ ಪ್ರಶ್ನೆಯಾಗಿದೆ. ಇದುವರೆಗೂ ಅಳವಡಿಕೆಯಾಗಿರುವ ಬಹುತೇಕ ಶಾಸನಗಳು ಅವರ ಪರವಾಗಿವೆಯೇ ಹೊರತು ಶ್ರೀಸಾಮನ್ಯ ಪ್ರಜೆಗಳ ಹಿತವನ್ನು ಕಾಪಾಡುವ ಶಾಸನಗಳಲ್ಲ. ಪ್ರಜೆಗಳ ಸರ್ವತೋಮುಖ ಅಭಿವೃದ್ಧಿಯ ಹಿತವನ್ನು ಕಾಪಾಡುವ ಶಾಸನಗಳು ಕ್ಷೀಣಿಸುತ್ತಿವೆ.
ಅಂದಿನ ರಾಜಕಾರಣಿಗಳೇ ಬೇರೆ, ಇಂದಿನ ರಾಜಕಾರಣಿಗಳೇ ಬೇರೆ. ಅಂದಿನ ರಾಜಕಾರಣಿಗಳಲ್ಲಿ ನಿಜವಾದ ದೇಶಭಕ್ತಿಯಿತ್ತು, ಬದ್ದತೆಯಿತ್ತು, ಒಂದು ಉದ್ದೇಶಿತ ಗುರಿಯಿತ್ತು. ಪ್ರತಿಯೊಂದು ನಡೆಂ ನುಡಿಯಲ್ಲಿ ಪ್ರಮಾಣಿಕತೆ ಎದ್ದು ಕಾಣುತ್ತಿತ್ತು. ತಮ್ಮನ್ನು ಚುನಾಯಿಸಿ ಜವಾಬ್ದಾರಿ ಸ್ಥಾನಕ್ಕೇರಿಸಿದ ಶ್ರೀ ಸಾಮಾನ್ಯರಿಗೆ ಏನಾದರೊಂದು ರೀತಿಯಲ್ಲಿ ಅನುಕೂಲವಾಗುವಂತಹ ಕೆಲಸಗಳನ್ನು ಮಾಡಬೇಕೆಂಬ ಉತ್ಸಾಹದ ತುಡಿತವಿತ್ತು. ಸಂಸತ್ತಿನಲ್ಲಾಗಲಿ, ಸಾರ್ವಜನಿಕ ಕ್ಷೇತ್ರಗಳಲ್ಲಾಗಲಿ ಅವರು ಮಾಡುತ್ತಿದ್ದ ಭಾಷಣಗಳಲ್ಲಿ ಅದನ್ನೇ ಪ್ರತಿಪಾದಿಸುತ್ತಿದ್ದರು. ಅವರ ಕ್ಷೇತ್ರಾಭಿವೃದ್ಧಿ ಮತ್ತು ಜನರ ಕ್ಷೇಮಾಭಿವೃದ್ಧಿಯನ್ನು ಕುರಿತೇ ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ತಮ್ಮ ಪಕ್ಷ ಹಾಗು ತಮ್ಮನ್ನು ಸಭ್ಯರೆಂದು, ಪ್ರಮಾಣಿಕರೆಂದು ಬಿಂಬಿಸಿಕೊಳ್ಳಲು ವಿರೋಧಪಕ್ಷದವರನ್ನು ವಿನಾಕಾರಣ ತೆಗಳುತ್ತಿರಲಿಲ್ಲ. ಆಡಳಿತ ಪಕ್ಷದವರಾಗಲಿ, ವಿರೋಧಪಕ್ಷದವರಾಗಲಿ ಯಾರೂ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರಲಿಲ್ಲ. ಎಲ್ಲರೂ ಸಂವಿಧಾನಕ್ಕೆ ಗೌರವ ನೀಡುತ್ತಿದ್ದರು. ಭವಿಷ್ಯದಲ್ಲಿ ಭಾರತವನ್ನು ಒಂದು ಪ್ರಭಲ ಪ್ರಜಾಶಕ್ತಿಯ ರಾಷ್ಟ್ರವನ್ನಾಗಿಸಲು ಅಂದಿನ ಭಾರತದ ಪ್ರಪ್ರಥಮ ಪ್ರಧಾನ ಮಂತ್ರಿ ನೆಹರೂರವರು ತಮ್ಮ ಹದಿನೇಳು ವರ್ಷಗಳ ಸುಧೀರ್ಘ ಆಳ್ವಿಕೆಯಲ್ಲಿ ಪ್ರಜಾಪ್ರಭುತ್ವಕ್ಕೆ ಭದ್ರವಾದ ಬುನಾದಿಯನ್ನೇ ಹಾಕಿದವರು. ಆದರೆ ಇಂದಿನ ರಾಜಕಾರಿಣಿಗಳು ಪ್ರಜಾಪ್ರಭುತ್ವವನ್ನು ದುರುಪಯೋಗ ಮಾಡಿಕೊಂಡು ತಮ್ಮ ಕಾರ್ಯ ಸಾಧನೆ ಮಾಡಿಕೊಳ್ಳುತ್ತಿದ್ದಾರೆ. ಏನೇ ಮಾಡಿದರೂ ಅದರಲ್ಲಿ ಸ್ವಾರ್ಥವೇ ತುಂಬಿರುತ್ತದೆ. ಸಮಾಜದ ಒಂದು ಧರ್ಮದವರನ್ನು ಓಲೈಸುವ ಮತ್ತೊಂದು ಧರ್ಮದವರನ್ನು ತುಳಿಯುವ ಮತ್ತು ಅವರನ್ನು ಸಮಾಜಘಾತುಕರೆಂದು ಬಿಂಬಿಸುವ ರಾಜಕೀಯ ಕಸರತ್ತುಗಳು ಇಂದಿನ ರಾಜಕಾರಿಣಿಗಳಲ್ಲಿ ರಾರಾಜಿಸುತ್ತಿವೆ.
ನಮ್ಮ ದೇಶದ ರಾಜಕಾರಿಣಿಗಳು ರಾಷ್ಟ್ರದ ಹಿತೈಷಿಗಳಾಗದ ಹೊರತು, ದೇಶದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗುವುದಿಲ್ಲ. ಸಂವಿಧಾನದ ಪಾಲಕರು, ಕಾವಲುಗಾರರು, ಜವಾಬ್ದಾರರು ಎಲ್ಲ ನಮ್ಮ ರಾಜಕಾರಣಿಗಳೇ. ಇಂದಿನ ನಮ್ಮ ರಾಜಕಾರಣಿಗಳ ಮನೋಗತವೇ ಬದಲಾಗಿದೆ. ಸಂವಿಧಾನ ಬದ್ದರಾಗಿ ನಡೆದುಕೊಂಡು ರಾಷ್ಟ್ರ ನಿರ್ಮಾಣಕ್ಕೆ ಕಾಯಾ, ವಾಚಾ ಹಾಗು ನಿಷ್ಪಕ್ಷಪಾತವಾಗಿ ದುಡಿಯುತ್ತೇವೆಂದು ಸಂವಿಧಾನವನ್ನು ಮುಟ್ಟಿ ವಾಗ್ದಾನ ಮಾಡಿದವರೇ ಇಂದು ಅದರ ಉಲ್ಲಂಘನೆ ಮಾಡುತ್ತಿದ್ದಾರೆ. ಮಾಡಿದ ವಾಗ್ದಾನಕ್ಕೆ ಬೆಲೆಯೇ ಇಲ್ಲವಾಗಿದೆ.
ರಾಜಕಾರಿಣಿಗಳು ಮತ್ತು ಸಂವಿಧಾನ
ಇನ್ನು ದೇಶ ಕಾಲಕಾಲಕ್ಕೆ ಅಳವಡಿಸಿಕೊಳ್ಳುತ್ತಿರುವ ಶಾಸನಗಳತ್ತ ಗಮನ ಹರಿಸಿದರೆ, ಅವುಗಳಲ್ಲಿ ಕೆಲವು ಪ್ರಜೆಗಳಿಗೆ ಪೂರಕವಾಗಿರುವ ಬದಲು ಮಾರಕವಾಗಿವೆ. ಭಾರತವು ಶ್ರೀಸಾಮಾನ್ಯ ಪ್ರಜೆಗಳನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನದಡಿ ರಚಿಸಿರುವ ಶಾಸನಗಳು ರಾಜಕಾರಣಿಗಳನ್ನೇ ಓಲೈಸುವಂತಿವೆ. ಶ್ರೀಸಾಮಾನ್ಯ ಪ್ರಜೆಗಳ ಹಕ್ಕುಗಳನ್ನು ಬದಿಗೆ ಸರಿಸಿದೆ. ಅಂದರೆ ರಚಿಸಿರುವ ಶಾಸನಗಳು ರಾಜಕಾರಣಿಗಳ ಪರವಾಗಿಯೇ ಇವೆ ಎಂದು ಹೇಳಿದರೆ ತಪ್ಪಲ್ಲ. ಒಬ್ಬ ರಾಜಕಾರಣಿಗೆ ಸಲ್ಲುವಷ್ಟು ಘನತೆ ಗೌರವ, ಒಬ್ಬ ಶ್ರೀಸಾಮಾನ್ಯನಿಗೆ ಸಲ್ಲುತ್ತಿಲ್ಲ. ಕೇವಲ ಮತ ಬ್ಯಾಂಕ್ಗಾಗಿ ಶ್ರೀಸಾಮಾನ್ಯನನ್ನು ಬಳಸಿಕೊಳ್ಳಲಾಗುತ್ತಿದೆ. ಅವನಿಗೆ ಒಂದಷ್ಟು ಹಣ ನೀಡಿ ಮತ ಪಡೆದರೆ ಅಲ್ಲಿಗೆ ತಾವು ಋಣ ಮುಕ್ತರಾದಂತೆ, ಮುಂದೆ ಅವನ ಗೊಡವೆ ನಮಗೇತಕ್ಕೆ ಎಂದು ಭಾವಿಸುವ ರಾಜಕಾರಣಿಗಳೇ ಹೆಚ್ಚು. ಅಂಥಹವರು ಸಮಾಜಕ್ಕೆ ಹೇಗೆ ಒಳಿತನ್ನು ಮಾಡಬಲ್ಲರು? ತಾವು ಖರ್ಚು ಮಾಡಿದ ಹಣಕ್ಕೆ ನೂರಷ್ಟು ಸಂಪಾದಿಸುವ ಗುರಿ ಹೊತ್ತ ರಾಜಕಾರಣಿಗಳೇ ಹೆಚ್ಚು. ಹಣ ಪಡೆದು ಓಟು ಹಾಕುವುದನ್ನು ಪ್ರಜೆಗಳು ನಿಲ್ಲಿಸಬೇಕು. ಭ್ರಷ್ಟ ರಾಜಕೀಯ ನಾಯಕರನ್ನು ಸೋಲಿಸಬೇಕು.
ಅದೂ ಅಲ್ಲದೆ ಸಂವಿಧಾನದಡಿ ರಚಿಸಿರುವ ಶಾಸನಗಳೆಲ್ಲ ರಾಜಕಾರಿಣಿಗಳ ಪರವಾಗಿಯೇ ಇವೆ ಎಂಬುದಕ್ಕೆ ದೇಶದಲ್ಲಿ ಜರುಗುತ್ತಿರುವ ಇಂದಿನ ಅಸಮಾನತೆಯ ಸಂಘರ್ಷಗಳೇ ಪುಷ್ಟಿ ನೀಡುತ್ತವೆ. ಸಂವಿಧಾನಲ್ಲಿ ಅಳವಡಿಕೆಯಾಗಿರುವ ಶ್ರೀಸಾಮಾನ್ಯ ನಾಗರೀಕರ ಹಕ್ಕುಗಳನ್ನು ಕಾಯ್ದುಕೊಳ್ಳಲು ದೇಶದಲ್ಲಿ ಆಡಳಿತ ನಡೆಸುವ ರಾಜಕಾರಿಣಿಗಳು ಅಷ್ಟು ಪರಿಗಣನೆಗೆ ತೆಗೆದುಕೊಂಡಂತೆ ಕಾಣುತ್ತಿಲ್ಲ.
ಸಂವಿಧಾನದಲ್ಲಿ ಅಳವಡಿಕೆಯಾಗಿರುವ ಈ ಕೆಳಗಿನ ಶಾಸನಗಳು ರಾಜಕಾರಣಿಗಳ ಪರವಾಗಿಯೇ ಇವೆ ಎಂಬುದರ ಬಗ್ಗೆ ಒಂದಷ್ಟು ಬೆಳಕು ಚೆಲ್ಲುತ್ತದೆ.
ದೇಶದ ಸಂವಿದಾನದಲ್ಲಿರುವಂತೆ ಒಬ್ಬ ರಾಜಕಾರಣಿ ಒಂದು ಚುನಾವಣೆಗೆ ಒಟ್ಟಿಗೆ ಎರಡು ಕ್ಷೇತ್ರಗಳಲ್ಲಿ ನಿಲ್ಲಬಹುದು. ಆದರೆ ಒಬ್ಬ ಸಾಮಾನ್ಯ ಪ್ರಜೆ ಒಂದು ಚುನಾವಣೆಗೆ ಎರಡು ಕ್ಷೇತ್ರದಲ್ಲಿ ಮತ ಚಲಾಯಿಸುವಂತಿಲ್ಲ. ಕ್ರಿಮಿನಲ್ ಅಥವಾ ಬೇರೆ ಅಪರಾಧದಿಂದ ಶಿಕ್ಷೆಗೊಳಗಾಗಿ ಜೈಲಿನಲ್ಲಿದ್ದರೆ ಅಂತಹವರು ಮತ ಹಾಕುವ ಹಕ್ಕನ್ನು ಕಳೆದುಕೊಂಡಿರುತ್ತಾರೆ. ಯಾವ ಅಭ್ಯರ್ಥಿಯು ಮತ ಹಾಕುವಂತಿಲ್ಲ, ಅವರಿಗೆ ಅಲ್ಲಿಂದಲೇ ಮತ ಚಲಾಯಿಸಲು ಅವಕಾಶ ಮಾಡಿಕೊಡುವುದೂ ಇಲ್ಲ. ಅದರೆ ರಾಜಕೀಯ ಅಭ್ಯರ್ಥಿಗಳಿಗೆ ಹಾಗಿಲ್ಲ. ಅವರು ಜೈಲಿನಲ್ಲಿದ್ದುಕೊಂಡೇ ಚುನಾವಣೆಯನ್ನು ಎದುರಿಸಬಹುದು. ತಮ್ಮ ಪ್ರಭಾವ ವರ್ಚಸ್ಸು ಬಳಸಿ ಬಿಡುಗಡೆಗೂ ಪ್ರಯತ್ನಿಸಬಹುದು. ಆದರೆ ಸಾಮಾನ್ಯ ಪ್ರಜೆಗಳು ಯಾರಾದರೂ ಅಪರಾಧಿಗಳಾಗಿ ಒಮ್ಮೆ ಜೈಲಿಗೆ ಹೋಗಿ ಬಂದರೆ, ಅವರ ಜೀವನದ ಕಥೆ ಅಲ್ಲಿಗೆ ಮುಗಿದಂತೆ. ಅವರು ಎಲ್ಲಾ ಸಾಮಾಜಿಕ ಅವಕೃಪೆಗಳಿಗೆ ಗುರಿಯಾಗಬೇಕಾಗುತ್ತದೆ. ಶಿಕ್ಷೆ ಪೂರೈಸಿ ಜೈಲಿನಿಂದ ಬಿಡುಗಡೆಯಾದರೂ ಜೀವನ ಪರ್ಯಂತ ಅವರಿಗೆ ಸರಕಾರಿ ನೌಕರಿ ಇಲ್ಲ. ಯಾವುದಾದರೂ ಖಾಸಗಿ ವೃತ್ತಿ ಕೈಗೊಂಡು ಜೀವಿಸಬೇಕಾಗುತ್ತದೆ. ಅದರೊಂದಿಗೆ ಜೀವನ ಪರ್ಯಂತ ಸಮಾಜದಿಂದ ಅವಮಾನ ಮತ್ತು ನಿಂದನೆ ಎದುರಿಸಬೇಕಾಗುತ್ತದೆ. ಆದರೆ ರಾಜಕಾರಿಣಿಗಳಿಗೆ ಹಾಗಿಲ್ಲ. ಒಬ್ಬ ಪ್ರಜೆಗೆ ಸಿಗದ ಗೌರವ ಜೈಲು ಶಿಕ್ಷೆಗೊಳಗಾದ ರಾಜಕೀಯ ಖೈದಿಗೆ ಸಿಗುತ್ತದೆ. ಅವರು ಯಾವುದೇ ಪ್ರಕರಣದಲ್ಲಿ ಸಿಲುಕಿ ಎಷ್ಟೇ ಸಲ ಜೈಲಿಗೆ ಹೋಗಿ ಬಂದರೂ ಚುನಾವಣೆಗೆ ನಿಲ್ಲಬಹುದು. ಬಯಸಿದಂತೆ ಶಾಸಕ, ಸಂಸದ, ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ, ರಾಷ್ಟ್ರಪತಿ ಅಗಬಹುದು. ಶ್ರೀ ಸಾಮಾನ್ಯನು ಬ್ಯಾಂಕ್ನಲ್ಲಿ ಕೆಲಸಕ್ಕೆ ನೇಮಕಗೊಳ್ಳಬೇಕಾದರೆ, ಕನಿಷ್ಟ ಪಕ್ಷ ಪದವಿ ಪಡೆದಿರಬೆಕು. ಆದರೆ ರಾಜಕಾರಿಣಿಗಳು ಪದವಿಯೇ ಇಲ್ಲದೆ ಚುನಾವಣೆಯಲ್ಲಿ ಗೆದ್ದು ಹಣಕಾಸಿನ ಮಂತ್ರಿ ಆಗಬಹುದು. ಇನ್ನು ಸಾಮಾನ್ಯರಿಗೆ ಸೇನೆಯಲ್ಲಿ ಕೆಲಸ ಸಿಗಬೇಕಾದರೆ, ಕನಿಷ್ಟ ವಿದ್ಯಾರ್ಹತೆ ಇರಬೇಕು, ಕನಿಷ್ಟ ಎತ್ತರ, ತೂಕದ ಜೊತೆಗೆ ಆಯ್ಕೆ ಸಮಯದಲ್ಲಿ ಸೂಚಿಸಿದ ದೂರವನ್ನು ಓಡಿ ಕ್ರಮಿಸಬೇಕು, ತಮ್ಮ ದೈಹಿಕ ಸಾಮಥ್ರ್ಯವನ್ನು ಸಾಬೀತು ಪಡಿಸಬೇಕು. ಅಂತಹ ಮಾನದಂಡಗಳನ್ನು ಪೂರೈಸುವ ಅರ್ಹತೆಗಳಿದ್ದರೆ ಮಾತ್ರ ಸೈನ್ಯದಲ್ಲಿ ನೇಮಕಗೊಳ್ಳಲು ಸಾಧ್ಯ. ಆದರೆ ವಿದ್ಯೆಯೇ ಇಲ್ಲದ ರಾಜಕಾರಿಣಿಗಳು ಸಣ್ಣಗಿದ್ದರೂ, ಗಿಡ್ಡಗಿದ್ದರೂ ದಢೂತಿಯಾಗಿದ್ದರೂ ರಕ್ಷಣಾ ಸಚಿವರಾಗಬಹುದು. ಅವರ ಮೇಲೆ ಎಷ್ಟೇ ಕೇಸುಗಳಿದ್ದರೂ ಪೋಲೀಸ್ ಚೀಫ್, ಅಂದರೆ ಗೃಹಮಂತ್ರಿ ಆಗಬಹುದು. ನೋಡಿ! ದೇಶದ ರಾಜಕಾರಿಣಿಗಳು ಎಂತಹ ಸುದೈವಿಗಳು, ಸಾಮಾನ್ಯ ಪ್ರಜೆಗಳು ಎಂತಹ ಅವಕೃಪೆಗೊಳಗಾದವರು ಎಂಬುದಕ್ಕೆ ಇದೊಂದು ಪುಟ್ಟ ಅವಲೋಕನ ಮಾತ್ರ.
ರಾಜಕಾರಿಣಿಗಳು ಮತ್ತು ಜನಪ್ರಿಯತೆ
ರಾಜಕೀಯ ಕಣಕ್ಕಿಳಿದ ವ್ಯಕ್ತಿಗಳೆಲ್ಲ ಅಸಮಾನ್ಯರೇ. ಒಮ್ಮೆ ರಾಜಕೀಯಕ್ಕಿಳಿದರೆ, ಅವರು ಅಲ್ಲಿ ನುರಿತ ರಾಜಕೀಯ ತಜ್ಞರಾಗಿ ಬಿಡುತ್ತಾರೆ. ರಾಜಕೀಯ ಕ್ಷೇತ್ರದ ಸಕಲ ಗುಣಲಕ್ಷಣಗಳು, ತಂತ್ರಗಳು, ವಿದ್ಯೆಗಳು ಅವರಲ್ಲಿ ಕರಗತವಾಗುತ್ತವೆ. ಸ್ವಾಮಿ ಕಾರ್ಯಗಳಿಂದ ಸ್ವಕಾರ್ಯಗಳನ್ನು ಸಾಧಿಸಿಕೊಳ್ಳುವುದರ ಜೊತೆಗೆ ಹಣ ಆಸ್ತಿ, ಐಶ್ವರ್ಯ ಅಂತಸ್ತು ಅವರಿಗೆ ಕೂಡಿಕೊಳ್ಳುತ್ತದೆ. ಜೀವನದಲ್ಲಿ ಭದ್ರತೆ ಒದಗುತ್ತದೆ. ಇಷ್ಟೆಲ್ಲವನ್ನು ರಾಜಕೀಯ ಮಾಡುತ್ತಲೇ ಸಾಧಿಸಿಕೊಳ್ಳುತ್ತಾರೆ. ಇನ್ನೂ ವಿವರವಾಗಿ ಹೇಳಬೇಕಾದರೆ, ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆದಂತೆ. ರಾಜಕೀಯ ವ್ಯಕ್ತಿಗಳಿಗೆ ಯಾವುದೂ ಅಸಾಧ್ಯವಲ್ಲ. ಅವರು ಕೈಹಾಕಿದ ಕಾರ್ಯಗಳೆಲ್ಲ ಸಕ್ಸಸ್, ಸೋಲೇ ಇಲ್ಲ. ಅದಕ್ಕೆ ಹೇಳುವುದು ರಾಜಕಾರಣಿಗಳು ಸೋತರೂ ಸೋಲರಿಯದ ಸರದಾರರು ಎಂದು. ಸೋಲೇ ಗೆಲುವಿಗೆ ಸೋಪಾನವಿದ್ದಂತೆ ಎಂದು ಹೇಳುವ ಮಾತು ಅವರನ್ನು ಕುರಿತೇ ಆಗಿದೆ ಅಲ್ಲವೆ?
ರಾಜಕೀಯದಲ್ಲಿ ಯಾರೂ ಶತೃಗಳಲ್ಲ, ಎಲ್ಲರೂ ಸ್ನೇಹಿತರೆ. ಶತೃಗಳು ಸ್ನೇಹಿತರಾಗುತ್ತರೆ, ಸ್ನೇಹಿತರು ಶತೃಗಳಾಗುತ್ತಾರೆ. ಮಾತಿನಲ್ಲಿ ನಿಸ್ಸೀಮರು. ಅವರು ಮಾತುಗಳು ಬೆಣ್ಣೆಯಲ್ಲಿ ಕೂದಲು ತೆಗೆದಂತೆ. ಮಾತೇ ಬಂಡವಾಳ, ಮಾತಿನಲ್ಲೇ ಮಂಟಪ ಕಟ್ಟುತ್ತಾರೆ, ಕೆಡವುತ್ತಾರೆ. ಎಲ್ಲವನ್ನು ಮಾತಿನ ಮೂಲಕವೇ ಸಾಧಿಸಿಕೊಳ್ಳುತ್ತಾರೆ. ಇನ್ನು ಹಗರಣಗಳು ರಾಜಕಾರಣಿಗಳಿಗೆ ಕಟ್ಟಿಟ್ಟ ಬುತ್ತಿ ಇದ್ದಂತೆ. ಹಣ ಮಾಡಲು ಹೋಗಿ ಹಗರಣಗಳಲ್ಲಿ ಸಿಕ್ಕಿಕೊಂಡ ರಾಜಕಾರಿಣಿಗಳನ್ನು ಕಂಡಿದ್ದೇವೆ. ಏನೇ ಮಾಡಿದರೂ ಅದರಲ್ಲಿ ಸ್ವಾರ್ಥ ತುಂಬಿರುತ್ತದೆ. ಈ ಹಗರಣಗಳು ರಾಜಕೀಯ ವ್ಯಕ್ತಿಗಳಿಗೆ ಸೋಪಾನಗಳಿದ್ದಂತೆ. ಯಾವುದೇ ಹಗರಣದಲ್ಲಿ ಸಿಲುಕಿಕೊಂಡರೂ ಫೀನಿಕ್ಸ್ ಪಕ್ಷಿಗಳಂತೆ ಎದ್ದು ಬರುತ್ತಾರೆ. ಟಿ.ವಿ. ನ್ಯೂಸ್ ಚಾನಲ್ಗಳನ್ನು ಹೆಚ್ಚು ಜನರು ವೀಕ್ಷಿಸಿದಷ್ಟೂ ಅದರ ಟಿಆರ್ಪಿ ವ್ಯಾಲ್ಯೂ ಹೆಚ್ಚಿದಂತೆ ರಾಜಕಾರಣಿಗಳೂ ಕೂಡ. ಹಗರಣಗಳಲ್ಲಿ ಸಿಲುಕಿದಷ್ಟೂ ರಾಜಕೀಯದಲ್ಲಿ ಹೆಚ್ಚು ಮಿಂಚುತ್ತಾರೆ. ಅವಕಾಶಗಳನ್ನು ಬಳಸಿಕೊಂಡು ರಾಜಕೀಯದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯುತ್ತಾರೆ. ರಾಜಕೀಯ ಅವರಿಗೆ ಚದುರಂಗ ಇದ್ದಂತೆ.
ಇತ್ತೀಚೆಗೆ ಜನರಲ್ಲಿ ಒಂದಷ್ಟು ಕುತೂಹಲ ಮತ್ತು ಆಸಕ್ತಿ ಮೂಡಿಸಿದ ಪ್ರಸಂಗವೊಂದರ ಕುರಿತು ಹೇಳಲಿಚ್ಚಿಸುತ್ತೇನೆ. ತಮಿಳು ನಾಡಿನ ಮಾಜಿ ಮುಖ್ಯ ಮಂತ್ರಿ ದಿವಂಗತ ಜಯಲಲಿತಾರ ಪರಮಾಪ್ತೆ ಶಶಿಕಲಾ ಅವರು ಬೆಂಗಳೂರು ಜೈಲಿನಿಂದ ಬಿಡುಗಡೆಯಾದರಷ್ಟೆ. ಅವರು ಬಿಡುಗಡೆಯಾಗಿದ್ದು ಚೆನ್ನೈಗೆ ತೆರಳಿದ್ದು ಪತ್ರಿಕೆಯಲ್ಲಿ ಒಂದು ವಿಶೇಷ ಸುದ್ದಿಯಾಗಿ ಓದುಗರ ಕುತೂಹಲ ಕೆರಳಿಸಿತ್ತು. ಒಂದು ವೇಳೆ ಬೇರೆ ಯರಾದರೂ ಜೈಲಿನಿಂದ ಬಿಡುಗಡೆಯಾಗಿದ್ದರೆ ಯಾರಿಗೂ ಗೊತ್ತಾಗುತ್ತಿರಲಿಲ್ಲ, ಅದು ಅಷ್ಟು ಪ್ರಚಾರವೂ ಆಗುತ್ತಿರಲಿಲ್ಲ. ಸಾಮಾನ್ಯವಾಗಿ ಜೈಲಿನಿಂದ ಬಿಡುಗಡೆಯಾದವರು ಅವಮಾನದಿಂದ ಕುಗ್ಗಿಹೋಗಿ ಮುಖ ಮುಚ್ಚಿಕೊಂಡು ಸದ್ಧಿಲ್ಲದೆ ತೆರಳುತ್ತಾರಷ್ಟೆ.
ತಮಿಳು ನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಅಕ್ರಮ ಆಸ್ತಿ ಗಳಿಕೆಯಲ್ಲಿ ಅವರ ಪರಮಾಪ್ತೆ ಹಾಗು ಜನಪ್ರಿಯ ನಾಯಕಿ ಶಶಿಕಲಾ ನಟರಾಜನ್ (ಪತಿ ನಟರಾಜನ್ ತೀರಿಕೊಂಡಿದ್ದಾರೆ) ಸಹ ಭಾಗಿಯಾಗಿದ್ದು ಎಲ್ಲರಿಗೂ ತಿಳಿದ ವಿಚಾರವೇ. ತಮ್ಮ ಅಧಿಕಾರವನ್ನು, ಜನಪ್ರಿಯತೆಯನ್ನು ದುರುಪಯೋಗ ಮಾಡಿಕೊಂಡು ಅಕ್ರಮವಾಗಿ ಆಸ್ತಿ ಗಳಿಸಿದ ಪ್ರಕರಣದಲ್ಲಿ ಇಬ್ಬರೂ ಅಪರಾಧಿಗಳೆಂದು ಸಾಬೀತಾಗಿತ್ತು. ಕೆಲವು ತಿಂಗಳುಗಳ ಕಾಲ ಸುಪ್ರೀಮ್ ಕೋರ್ಟ್ ತನ್ನ ತೀರ್ಪನ್ನು ಪ್ರಕಟಿಸದೆ ಕಾದಿರಿಸಿತ್ತು. ಅಷ್ಟರಲ್ಲಿ ಜಯಲಲಿತ ನಿಧನರಾದರು. ಪ್ರಕರಣದಲ್ಲಿ ಎರಡನೇ ಅಪರಾಧಿ ಶಶಿಕಲಾಗೆ ಶಿಕ್ಷೆ ಜಾರಿಯಾಗಿ ಅವರನ್ನು ಸುಪ್ರೀಮ್ ಕೋರ್ಟ್ ನಿರ್ದೇಶನದಂತೆ ಬೆಂಗಳೂರು ಜೈಲಿನಲ್ಲಿ ಇರಸಿಲಾಗಿತ್ತು.
ತಮಿಳು ನಾಡಿನ ರಾಜಕೀಯದಲ್ಲಿ ಜಯಲಲಿತಾ ನಂತರದ ಸ್ಥಾನ ಇದ್ದುದು ಶಶಿಕಲಾಗೆ. ಜಯಲಲಿತಾ ನಿಧನದ ನಂತರ ಸುಪ್ರೀಮ್ ಕೋರ್ಟ್ ತೀರ್ಪು ಪ್ರಕಟಿಸಿದ್ದರಿಂದ ಶಶಿಕಲಾಗೆ ಒಲಿಯಲಿದ್ದ ಮುಖ್ಯಮಂತ್ರಿ ಪದವಿ ಕೈತಪ್ಪಿಹೋಯಿತು. ಒಂದು ವೇಳೆ ಶಶಿಕಲಾ ಅರೆಸ್ಟ್ ಆಗದಿದ್ದರೆ, ಅವರೇ ತಮಿಳು ನಾಡಿನ ಮುಖ್ಯಮಂತ್ರಿಯಾಗಿ ಬಿಡುತ್ತಿದ್ದರು. ಮುಂದಿನ ಮುಖ್ಯಮಂತ್ರಿ ಅವರೇ ಎಂದು ನೂರಕ್ಕೆ ನೂರರಷ್ಟು ಖಾತ್ರಿಯೂ ಆಗಿತ್ತು. ಎ.ಐ.ಎ.ಡಿ.ಎಂ.ಕೆ ಪಕ್ಷವೇ ಅವರ ಹಿಡಿತದಲ್ಲಿತ್ತು. ಅವರ ಮಾತನ್ನು ಕೇಳದವರು ಅಲ್ಲಿ ಯಾರೂ ಇರಲಿಲ್ಲ. ಶಶಿಕಲಾ ವಿರುದ್ಧ ಸುಪ್ರೀಮ್ ಕೋರ್ಟ್ ತೀರ್ಪು ನೀಡಿದ್ದರಿಂದ ನಾಲ್ಕು ವರ್ಷಗಳ ಕಾಲ ಅವರು ಜೈಲು ಶಿಕ್ಷೆ ಅನುಭವಿಸಬೇಕಾಗಿ ಬಂತು. ಅವರ ಬಿಡುಗಡೆ ಸಂದರ್ಭದಲ್ಲಿ ಅವರ ಅನುಯಾಯಿಗಳು ಮುಗಿಬಿದ್ದರು. ಅವರ ಬಿಡುಗಡೆಯೊಂದಿಗೆ ಅವರು ಎಸಗಿದ್ದ ಅಪರಾದವೆಲ್ಲ ಕೊಚ್ಚಿಕೊಂಡು ಹೋಯಿತು. ಅವರಿಗೆ ದೊರೆತ ಸ್ವಾಗತ ಅದ್ದೂರಿ. ಆ ಸ್ವಾಗತವು ಅವರು ನಾಲ್ಕು ವರ್ಷಗಳಷ್ಟು ಕಾಲ ಜೈಲಿನಲ್ಲಿ ಶಿಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದ್ದಕ್ಕೋ ಅಥವಾ ಅವರ ಜನಪ್ರಿಯತೆಯ ಪ್ರತೀಕವಾಗಿಯೋ ಅಂತು ಅವರಿಗೆ ಭವ್ಯ ಸ್ವಾಗತವೇ ದೊರೆಯಿತು. ಯಾವುದೋ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿ ಸ್ವಕ್ಷೇತ್ರಕ್ಕೆ ಮರಳುವ ಸಂದರ್ಭದಲ್ಲಿ ಜನರು ಸಾದಕರಿಗೆ ನೀಡುವ ಅದ್ದೂರಿ ಗೌರವ ಸ್ವಾಗತದಂತೆ ಜನರು ಅವರನ್ನು ದಾರಿಯುದ್ದಕ್ಕೂ ನಿಂತು ಸ್ವಾಗತಿಸಿದರು. ನಾಡಿನ ಜನರಿಗೆ ದ್ರೋಹ ಬಗೆದು ಅಕ್ರಮವಾಗಿ ದೋಚಿದ ಹಣ, ಒಡವೆ ವಸ್ತುಗಳಲ್ಲಿ ಭಾಗಿ ಎಂಬ ಆರೋಪ ಸಾಬೀತಾಗಿ ಜೈಲು ಶಿಕ್ಷೆಯನ್ನು ಅನುಭವಿಸಿ ಬಂದವಳಿಗೆ ಎಂಥಹ ಭವ್ಯ ಸ್ವಾಗತ? ಇದುವೇ ಒಬ್ಬ ಶ್ರೀಸಾಮಾನ್ಯ ವ್ಯಕ್ತಿಗೂ ರಾಜಕಾರಿಣಿಗೂ ಇರುವ ವ್ಯತ್ಯಾಸ. ಮನುಷ್ಯನ ಗ್ರಹಗತಿಗಳು ಎಷ್ಟು ಬೇಗ ಬದಲಾಗಿ ಬಿಡುತ್ತವೆ? ಅಪರಾಧಿಗಳಾದವರು ನಿರಪರಾಧಿಗಳಾಗುತ್ತಾರೆ, ನಿರಪರಾಧಿಗಳು ಅಪರಾಧಿಗಳಾಗುತ್ತಾರೆ. ರಾಜಕೀಯವೆಂದರೆ ಹಾಗೆಯೇ ಏನೋ? ರಾಜಕಾರಣಿಗಳೇ ಹಾಗೇನೋ?
ಸಮಾಜದ ಎಲ್ಲ ಪ್ರಜೆಗಳೂ ರಾಜಕಾರಣಿಗಳಾಗಿ ಗದ್ದುಗೆಗೆ ಏರಲು ಸಾಧ್ಯವಿಲ್ಲ. ಆದರೆ ಸಂವಿಧಾನದ ಶಾಸನ ನಿಮಯಗಳು ಪ್ರಜೆಗಳಿಗೂ, ರಾಜಕಾರಣಿಗಳಿಗೂ ಒಂದೇ ಇರಬೇಕಲ್ಲವೆ? ಸಾಮಾನ್ಯ ಪ್ರಜೆಗಳಿಗೆ, ರಾಜಕಾರಣಿಗಳಿಗೆ ಒಂದೇ ನಿಯಮ ಎಂದು ಅಳವಡಿಸಲಾಗುವುದೋ ಅಂದು ದೇಶದ ಸಂವಿಧಾನಕ್ಕೊಂದು ಅರ್ಥ ಬಂದೀತು.
ಎಲ್.ಚಿನ್ನಪ್ಪ, ಬೆಂಗಳೂರು.