ಮತದಾನ: ಅಂದು – ಇಂದು

Advertisements
Share

ಕಳೆದ ತಿಂಗಳು ಜರುಗಿದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ರಾಜ್ಯದ ಅಧಿಕಾರ ಹಿಡಿದಿದೆಯಷ್ಟೆ. ಈಗ ಅದರ ಮುಂದಿರುವ ಮುಖ್ಯ ಸವಾಲುಗಳೆಂದರೆ, ಚುನಾವಣೆ ಸಮಯದಲ್ಲಿ ನೀಡಿರುವ ಆಶ್ವಾಸನೆಗಳನ್ನು ಒಂದೊಂದಾಗಿ ಕಾರ್ಯರೂಪಕ್ಕೆ ತರುವುದು. ಕಾಂಗ್ರೆಸ್ ಪಕ್ಷವು ತಾನು ನೀಡಿದ (Guarantee) ಆಶ್ವಾಸನೆಗಳನ್ನು ಎಷ್ಟರ ಮಟ್ಟಿಗೆ ಎಷ್ಟು ಸಮಯದಲ್ಲಿ ಅನುಷ್ಟಾನಕ್ಕೆ ತರುತ್ತದೆ ಎಂದು ಕಾದು ನೋಡುವ ಪರಿ ನಮ್ಮದು.

ಅದು ಒಂದು ಕಡೆಗಿರಲಿ. ಕಳೆದ ತಿಂಗಳು ಮತ ಹಾಕುವಾಗ 1970-80ರ ದಶಕದಲ್ಲಿದ್ದ ಬ್ಯಾಲೆಟ್ ಪೇಪರ್‍ನಲ್ಲಿ ಮತ ಹಾಕುತ್ತಿದ್ದ ವಿಧಾನವು ನೆನಪಿಗೆ ಬಂತು. ಅವಿಷ್ಕಾರಗೊಂಡ ಇಂದಿನ ತಂತ್ರಜ್ಞಾನದಲ್ಲಿ ಬ್ಯಾಲೆಟ್ ಪೇಪರ್ ಮರೆಯಾಗಿ ಅದರ ಸ್ಥಾನದಲ್ಲಿ ವಿದ್ಯುನ್ಮಾನ ಮತ ಯಂತ್ರವು ಬಂದಿದೆ. ಆ ವಿಧಾನ ಜಾರಿಯಲ್ಲಿದ್ದ ಸಮಯದಲ್ಲಿ ನಾನು ಅನೇಕ ಸಲ ಎಲೆಕ್ಷನ್ ಡ್ಯೂಟಿಯಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಸೆಕೆಂಡ್ ಮತ್ತು ಪಸ್ಟ್ ಪೋಲಿಂಗ್ ಆಫೀಸರ್ ಆಗಿಯೂ ಒಮ್ಮೆ ಪ್ರೆಸೈಡಿಂಗ್ ಆಫೀಸರ್ ಆಗಿಯೂ ಕೆಲಸ ಮಾಡಿದ್ದೇನೆ. ವಿಧಾನಸಭೆ, ಲೋಕಸಭೆ ಹಾಗು ಸ್ಥಳೀಯ ಕಾರ್ಪೊರೇಷನ್ ಎಲೆಕ್ಷನ್‍ಗಳಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ನಾನು ಸರಕಾರಿ ಸೇವೆಯಲ್ಲಿರುವಾಗಲೇ ವಿದ್ಯುನ್ಮಾನ ಮತ ಯಂತ್ರಗಳು ಬಳಕೆಗೆ ಬಂದರೂ (1990 ದಶಕ) ನಾನು ಆ ತಂತ್ರಜ್ಞಾನದ ಸಮಯದಲ್ಲಿ ಕಾರ್ಯ ನಿರ್ವಹಿಸದೇ ಇದ್ದರೂ ಮತ ಹಾಕಿದ್ದೇನೆ. ಮತ ಹಾಕುವುದು ಅಂದಿಗೂ ಇಂದಿಗೂ ಒಂದೇ, ಆದರೂ ಇಂದಿನ ವಿದ್ಯುನ್ಮಾನ ಯಂತ್ರದಲ್ಲಿ ಮತ ಹಾಕುವ ವಿಧಾನವೇ ಬೇರೆ. ಕಳೆದ ತಿಂಗಳು ನಾನು ಮತಹಾಕುವಾಗ ಬಂದ ನೆನಪೇ ಈ ಲೇಖನಕ್ಕೆ ಸ್ಪೂರ್ತಿ.

ಎಲೆಕ್ಷನ್ ಕಮಿಷನರ್ ಈಗ ಎಲ್ಲಾ ಮತದಾರರಿಗೆ ಗುರುತಿನ ಚೀಟಿ ವಿತರಿಸಿರುವುದು ಸರಿಯಷ್ಟೆ. ಇದರಿಂದ ಮತದಾರರು ಎಲೆಕ್ಷನ್ ಸಮಯದಲ್ಲಿ ಅಧಿಕಾರಿಗಳ ಮುಂದೆ ತಮ್ಮ ಐಡೆಂಟಿಟಿ ಹೇಳಿಕೊಳ್ಳುವ ಅಥವಾ ಅಧಿಕಾರಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಗೋಜು ಇಲ್ಲ. ಅದರ ಬದಲು ಅವರು ನೀಡಿರುವ ಐಡೆಂಟಿಟಿ ಕಾರ್ಡೇ ಆ ಕೆಲಸ ಮಾಡುತ್ತದೆ. ಬ್ಯಾಲೆಟ್ ಪೇಪರ್ ಚಾಲ್ತಿಯಲ್ಲಿದ್ದ ಕಾಲಘಟ್ಟದಲ್ಲಿ ಮತ ಹಾಕಲು ಬಂದ ವ್ಯಕ್ತಿಯ ಐಡೆಂಟಿಟಿಯನ್ನು ಗುರುತಿಸಿವುದು ಪಸ್ಟ್ ಪೋಲಿಂಗ್ ಆಫೀಸರ್‍ನ ಕರ್ತವ್ಯವಾಗಿತ್ತು. ಓಟು ಮಾಡಲು ಬಂದ ವ್ಯಕ್ತಿಯ ಹೆಸರು, ತಂದೆ/ಗಂಡನ ಹೆಸರು ಹಾಗು ವಾಸವಾಗಿರುವ ಮನೆಯ ನಂಬರ್ ಹಾಗೂ ಬೀದಿಯನ್ನು ವಿಚಾರಿಸಿ ನಮ್ಮಲ್ಲಿರುವ ಮತದಾರರ ಪಟ್ಟಿಯೊಂದಿಗೆ ತಾಳೆ ಮಾಡಿ ಖಾತ್ರಿಪಡಿಸಿಕೊಳ್ಳಬೇಕಾಗಿತ್ತು. ಸಂಶಯ ಬಂದರೆ, ಕ್ರಾಸ್ ಕೊಶ್ಚನ್ ಮಾಡಬೇಕಿತ್ತು ಅಥವಾ ವ್ಯಕ್ತಿಯನ್ನು ಇತರರಿಂದ ತಿಳಿದುಕೊಂಡು ಮತದಾನ ಮಾಡಲು ಅನುಮತಿ ನೀಡಬೇಕಾಗಿತ್ತು. ನಂತರ ಸೆಕೆಂಡ್ ಪೋಲಿಂಗ್ ಆಫೀಸರ್ ಡ್ಯೂಟಿ ಎಂದರೆ ವ್ಯಕ್ತಿಯ ಸಹಿ ಪಡೆದು ಬ್ಯಾಲೆಟ್ ಪೇಪರ್ ನೀಡುವುದು. ಥರ್ಡ್ ಪೋಲಿಂಗ್ ಆಫೀಸರ್ ವ್ಯಕ್ತಿಯ ಎಡಗೈ ತೋರುಬೆರಳಿಗೆ ಶಾಯಿಯಲ್ಲಿ ಗುರುತು ಮಾಡಿ ಬ್ಯಾಲೆಟ್ ಪೇಪರನ್ನು ಮಡಚಿ ಅವನ ಕೈಗೆ ಕೊಡುವುದು. ನಂತರ ವ್ಯಕ್ತಿ ಭೂತ್‍ಗೆ ತೆರಳಿ ತಾನು ಇಚ್ಛಿಸಿದ ಅಭ್ಯರ್ಥಿಗೆ ರಬ್ಬರ್ ಸ್ಟಾಂಪ್ ಒತ್ತುವುದರ ಮೂಲಕ ಓಟು ಮಾಡುವುದು ನಂತರ ಬ್ಯಾಲೆಟ್ ಪೇಪರನ್ನು ಅದೇ ರೀತಿ ಮಡಚಿ ತಂದು ಬಾಕ್ಸ್ ನಲ್ಲಿ ಹಾಕುವುದು. ಬ್ಯಾಲೆಟ್ ಪೇಪರ್ ಮೂಲಕ ಓಟಿಂಗ್ ಎಂದರೆ ಇಷ್ಟೆಲ್ಲ ಧೀರ್ಘ ಪ್ರಕ್ರಿಯೆಗಳಿದ್ದವು. ಆದರೆ ಇಂದು ಮುಂದುವರೆದ ತಂತ್ರಜ್ಞಾನ ಯುಗದಲ್ಲಿ ಅದು ಮರೆಯಾಗಿ ಇಂದು ಡಿಜಿಟಲ್ ಯುಗ ಆರಂಭಗೊಂಡಿದೆ. ಕಾಗದ ಸಹಿತ ವಹಿವಾಟಿಗೆ ವಿದಾಯ ಹೇಳಿದೆ.

ನನ್ನ ಸೇವಾದಿಯಲ್ಲಿ ಜರುಗಿದ ಘಟನೆಯೊಂದನ್ನು ಇಲ್ಲಿ ವಿವರಿಸಿದ್ದೇನೆ. ಒಮ್ಮೆ ಬೆಂಗಳೂರಿನ ಶಾಂತಿನಗರದ ಸರಕಾರಿ ಶಾಲೆಯಲ್ಲಿ ನಾನು ಎಲೆಕ್ಷನ್ ಡ್ಯೂಟಿಗೆ ನಿಯೋಜಿತನಾಗಿದ್ದೆ. ನನ್ನದು ಅಲ್ಲಿ ಪಸ್ಟ್ ಪೋಲಿಂಗ್ ಆಫೀಸರ್ ಡ್ಯೂಟಿ. ಮತದಾರರು ಸಾಲಾಗಿ ನನ್ನ ಬಳಿಗೆ ಬಂದು ತಮ್ಮ ಹೆಸರು, ತಂದೆ/ಗಂಡನ ಹೆಸರು ಮನೆ ನಂ. ಮತ್ತು ಕ್ರಾಸ್‍ನ್ನು ಹೇಳಿದ ಮೇಲೆ ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಹುಡುಕಿ ಕಂಡು ಹಿಡಿದು ಅಲ್ಲಿದ್ದ ಅಧಿಕಾರಿ ಹಾಗು ಅಭ್ಯರ್ಥಿಗಳಿಗೆ ಕೇಳಿಸುವಂತೆ ಮತದಾರರ ಹೆಸರು ಮತ್ತು ಕ್ರಮಸಂಖ್ಯೆಯನ್ನು ಜೋರಾಗಿ ಹೇಳಬೇಕಿತ್ತು. (ಅದೇ ವಿಧಾನ ಈಗಲೂ ಜಾರಿಯಲ್ಲಿದೆ) ನಾನು ಹೇಳಿದ ವಿವರವನ್ನು ಪ್ರತಿನಿಧಿಗಳು ತಮ್ಮ ಮತದಾರರ ಪಟ್ಟಿಯಲ್ಲಿ ಪರಿಶೀಲಿಸುತ್ತಿದ್ದರು. ಹೊಂದಾಣಿಕೆಯಾಗದಿದ್ದ ಪಕ್ಷದಲ್ಲಿ ಆಕ್ಷೇಪಣೆ ಮಾಡುತ್ತಿದ್ದರು. ಒಮ್ಮೆ ಒಬ್ಬ ವ್ಯಕ್ತಿ ಓಟು ಮಾಡಲು ನನ್ನ ಬಳಿಗೆ ಬಂದ. ಅವನ ವಯಸ್ಸು ಸುಮಾರು 22-23 ವರ್ಷ ಇರಬಹುದು. ಅಭ್ಯರ್ಥಿಯ ಪ್ರತಿನಿಧಿಗಳು ತನಗೆ ಮೊದಲೇ ನೀಡಿದ್ದ ಕ್ರಮ ಸಂಖ್ಯೆಯ ಸ್ಲಿಪ್ ಹಿಡಿದು ಬಂದಿದ್ದ. ಅವನು ತಂದಿದ್ದ ಸ್ಲಿಪ್ ತೆಗೆದುಕೊಂಡು ಮತದಾರರ ಪಟ್ಟಿಯಲ್ಲಿ ಅವನ ಹೆಸರನ್ನು ಹುಡುಕಿದೆ. ಹೆಸರು ಸಿಕ್ಕರೂ ಅವನ ವಯಸ್ಸಿನಲ್ಲಿ ವ್ಯತ್ಯಾಸ ಕಂಡು ಬಂತು. ಮತದಾರರ ದಾಖಲೆ ಪಟ್ಟಿಯಲ್ಲಿ ಅವನ ವಯಸ್ಸು 29 ವರ್ಷ ಎಂದಿದ್ದು, ಆದರೆ ಅವನ ಮುಖ ನೋಡಿದರೆ ಅಷ್ಟು ವಯಸ್ಸಾದಂತೆ ಕಾಣಲಿಲ್ಲ. ಕೇಳಿದ್ದಕ್ಕೆ ತಾನು ವಾಸವಾಗಿರುವ ಮನೆಯ ನಂ. ಬೀದಿ ಮತ್ತು ಅಕ್ಕಪಕ್ಕದವರ ಹೆಸರನ್ನು ಸರಿಯಾಗಿಯೇ ಹೇಳಿದ. ಪಕ್ಕದಲ್ಲಿದ್ದ ಪ್ರತಿನಿಧಿಗಳತ್ತ ಕಣ್ಣಾಡಿಸಿದೆ. ಅವರು ಮೌನವಾಗಿಯೇ ಒಕೆ ಎಂದರು. ಅವನು ಓಟು ಮಾಡಿ ತೆರಳಿದ. ಆಗ ಸಮಯ 10 ಗಂಟೆ. ಜನರೆಲ್ಲರೂ ಸರತಿ ಸಾಲಿನಲ್ಲಿ ಬಂದು ಓಟು ಮಾಡಿ ಹೋಗುತ್ತಿದ್ದರು. ಮಧ್ಯಾಹ್ನ 4.00 ಗಂಟೆ ಇರಬಹುದು. ಮತ್ತೊಮ್ಮೆ ಅದೇ ವ್ಯಕ್ತಿ ಓಟು ಮಾಡಲು ಬಂದ. ಓಟು ಮಾಡಿದವರನ್ನು ಅವರ ಬೆರಳು ನೋಡಿ ಗುರುತಿಸಬೇಕಾಗಿತ್ತೇ ಹೊರತು ಮುಖ ನೋಡಿ ಗುರುತಿಸಲಾಗುತ್ತಿರಲಿಲ್ಲ. ಈಗ ಆತ ತನ್ನ ಬಟ್ಟೆ ಬದಲಾಯಿಸಿದ್ದ ಮತ್ತು ಕಣ್ಣಿಗೆ ಕನ್ನಡಕ ಹಾಕಿದ್ದ. ನಾನು ಅವನ ಕೈ ಬೆರಳನ್ನು ಪರಿಶೀಲಿಸಿದೆ. ಬೆರಳಲ್ಲಿ ಶಾಯಿ ಗುರುತು ಇರಲಿಲ್ಲ. ಯಾವುದೋ ಕೆಮಿಕಲ್ಸ್ ಹಚ್ಚಿ ಶಾಯಿ ಗುರುತು ಇಲ್ಲದಂತೆ ಮಾಡಿಕೊಂಡು ಬಂದಿದ್ದ ಅವನು ತಂದುಕೊಟ್ಟ ಸ್ಲಿಪ್ ಪರಿಶೀಲಿಸಿದೆ. ಸರಿಯಾಗಿತ್ತು. ಕ್ರಾಸ್ ಕೊಶ್ಚನ್‍ಗೆ ಸರಿಯಾಗೇ ಉತ್ತರಿಸಿದ. ನನಗಂತೂ ಅವನ ಮೇಲೆ ಅನುಮಾನ, ಇವನು ಎರಡನೇ ಸಲ ಓಟು ಮಾಡಲು ಬಂದಿದ್ದಾನೆಂದು. ಅಷ್ಟರಲ್ಲಿ ಪ್ರತಿನಿಧಿಗಳು, “ಸಾರ್ ಇವರಿಗೆ ಓಟು ಮಾಡಲು ಬಿಡಬೇಡಿ, ಇವರು ಎರಡನೇ ಸಲ ಓಟು ಮಾಡಲು ಬಂದಿದ್ದಾರೆ” ಎಂದರು. ಅಂತೂ ನನ್ನ ಅನುಮಾನಕ್ಕೆ ಅವರು ಪೂರಕ ಧ್ವನಿಯಾದರು. ಪ್ರೆಸೈಡಿಂಗ್ ಆಫೀಸರ್‍ಗೆ ಆ ವ್ಯಕ್ತಿಯನ್ನು ತೋರಿಸಿ “ Sir, this man is attempting to vote second time, he has already casted his vote . Please enquire him” ಎಂದೆ. ಅವನ ಜಂಗಾಬಲವೇ ಉಡುಗಿ ಹೋಯಿತು. ಮರು ಮಾತಾಡಲಿಲ್ಲ. ಪ್ರೆಸೈಡಿಂಗ್ ಆಫೀಸರ್ ಅವಣನ್ನು ಕರೆದು ತಮ್ಮ ಬಳಿ ಕೂರಿಸಿಕೊಂಡರು. ಸಂಜೆ ಐದು ಗಂಟೆಗೆ ವೋಟಿಂಗ್ ಪ್ರಕ್ರಿಯೆ ಮುಕ್ತಾಯಗೊಂಡ ಮೇಲೆ ನಾನು ಅವರಿಗೆ “ಅವನ ಮೇಲೆ ಒಂದು ಕಂಪ್ಲೇಂಟ್ ರೆಡಿ ಮಾಡಿ, ಪೊಲೀಸಿನವರಿಗೆ ಹ್ಯಾಂಡೋವರ್ ಮಾಡೋಣ” ಎಂದೆ. ಪ್ರೆಸೈಡಿಂಗ್ ಆಫೀಸರ್ ಎದ್ದು ಬಂದು ಮೆಲ್ಲಗೆ “ಕಂಪ್ಲೇಂಟ್ ಏನೋ ಕೊಡ ಬಹುದು, ಆದರೆ ಅದಕ್ಕೊಂದು ಪ್ರೊಸೀಜರ್ ಇದೆ. ಇಲ್ಲಿ ಇರುವವರೆಲ್ಲ ಸಾಕ್ಷಿಯಾಗಬೇಕು, ಮುಂದೆ ಕೋರ್ಟ್‍ಗೂ ನಾವೇ ಅಲೆದಾಡಬೇಕು. ಇರಲಾರದೆ ಇನ್ನಷ್ಟು ಕೆಲಸವನ್ನು ನಾವೇ ಮೇಲೆಳೆದುಕೊಂಡಂತೆ” ಎಂದರು. ಅಂತೂ ಅವನ ಅದೃಷ್ಟ ಚೆನ್ನಾಗಿತ್ತು ಆಪತ್ತಿನಿಂದ ತಪ್ಪಿಸಿಕೊಡ.

ಆಗಿನ ಮತದಾನ ಪದ್ದತಿಯಲ್ಲಿ ಕೆಲವು ಪುಂಡರು ಅಭ್ಯರ್ಥಿಗಳಿಂದ ಹಣ ಪಡೆದು ಇನ್ನೊಬ್ಬರ ಹೆಸರಿನಲ್ಲಿ ಬೋಗಸ್ ಓಟು ಮಾಡುವ ದಂದೆಗಳು ತೆರೆಮರೆಯಲ್ಲಿ ಜರುಗುತ್ತಿದ್ದವು. ಇಂದು ಓಟರ್ಸ್ ಐಡೆಂಟಿಟಿ ಕಾರ್ಡ್‍ಗಳು ಬಂದು ಬೋಗಸ್ ಓಟುಗಳಿಗೆ ಕಡಿವಾಣ ಬಿದ್ದರೆ, ಅಭ್ಯರ್ಥಿಗಳು ಮತದಾನದ ಹಕ್ಕನ್ನೇ ಹಣಕ್ಕೆ ಪಡೆದು ಅವರು ತಮ್ಮ ಪರವೇ ಮತ ಚಲಾಯಿಸುವಷ್ಟು ಪ್ರಭುತ್ವ ಅವರ ಮೇಲೆ ಮೆರೆದಿದ್ದಾರೆ. ಹಣವೇ ಸರ್ವಸ್ವ, ಹಣವೇ ಎಲ್ಲವನ್ನು ನಿಯಂತ್ರಿಸುತ್ತದೆ. ಮತದಾರ ತನ್ನ ಪ್ರಜಾಪ್ರಭುತ್ವದ ಹಕ್ಕನ್ನು ಹಣಕ್ಕಾಗಿ ಮಾರಿಕೊಂಡು ತನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ಓಟು ಮಾಡುವಷ್ಟು ಭ್ರಷ್ಟತನ ಅವನಲ್ಲಿ ತುಂಬಿಕೊಂಡಿದೆ.

ಎಲ್.ಚಿನ್ನಪ್ಪ, ಬೆಂಗಳೂರು.

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram