ಸಾಲದೇ ನಿನದೊಂದು ದಿವ್ಯನಾಮ ಅ
ಕಾಲ ಮೃತ್ಯುವಿನ ಗಂಟಲಗಾಣ ಹರಿಯೆ // ಪಲ್ಲವಿ//
ರಣದೊಳಗೆ ದೇಹವ ಖಂಡತುಂಡವ ಮಾಡಿ
ರಣವನುತ್ತರಿಸಿ ಮರಣವ ತೋರಿದೆ
ಪ್ರಣವ ಗೋಚರನಾಗಿ ಲೀಲೆಯಿಂದಲಿ ಬಂದು
ಹೆಣಕೆ ಪ್ರಾಣವನು ತಂದಿತ್ತ ಮಹಾತುಮನೆ // ಪಲ್ಲವಿ//
ಇದು ಕನಕದಾಸರ ೧೭೫ ಕೀರ್ತನೆಗಳಲ್ಲಿ ಒಂದು. ಈ ಕೀರ್ತನೆ ಕನಕದಾಸನ ಜೀವನಕ್ಕೆ ನೇರವಾಗಿ ಸಂಬಂಧಪಟ್ಟಿದ್ದು ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಕಳೆದ ೧೬೬೮ ಮತ್ತು ೧೬೬೯ರಲ್ಲಿ ಯೇಸುಸಭೆಯ ಸ್ವಾಮಿ ಅಲ್ಮೇಡ್ ಅವರು ಬರೆದಿರುವ ಪತ್ರಗಳಲ್ಲಿ ಬರುವ `ರತ್ನಪ್ಪ’ ಒಮ್ಮೊಮ್ಮೆ ಮುತ್ತಪ್ಪ‘ ಎಂದು ಕರೆಯಿಸಿಕೊಳ್ಳುವ ಯೋಧನೊಬ್ಬನ ಪ್ರಸ್ತಾಪ ಬರುತ್ತದೆ. ಅದಕ್ಕೂ ಮೊದಲು, ಗೋವಾದಲ್ಲಿದ್ದ ಜೆಸುಯಿಟ್ ಪ್ರಾಂತೀಯ ಅಧಿಕಾರಿ ಸ್ವಾಮಿ ಓಲಿವಾ ಅವರಿಗೆ ಮೈಸೂರು ಮಿಷನ್ನಿನ ಸ್ವಾಮಿ ಮಾರ್ಟಿನೆಸ್ ಅವರು ಬರೆದ ಪತ್ರದಲ್ಲಿ ಸ್ಮರಾಲ್ಡೋ ಎಂಬ ವ್ಯಕ್ತಿಯ ಪ್ರಸ್ತಾಪವಿದೆ. ಲ್ಯಾಟಿನ್ ಭಾಷೆಯಲ್ಲಿ ಸ್ಮರಾಲ್ಡೋ ಎಂದರೆ ಹಸಿರು ಬಣ್ಣದ ರತ್ತ ಮುತ್ತು ಎಂದಾಗುವುದರಿಂದ ಈ ಎಲ್ಲ ಹೆಸರುಗಳನ್ನು ಒಬ್ಬನೇ ವ್ಯಕ್ತಿಯ ಕುರಿತದ್ದು ಎಂದು ಕ್ರೈಸ್ತ ಇತಿಹಾಸಕಾರ ಸ್ವಾಮಿ ಐ.ಅಂತಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕೆಲವೆಡೆ ಅವನನ್ನು `ಕಸ್ತೂರಿ‘ ಎಂದೂ ಕರೆಯಲಾಗಿದೆ ಎಂದು ಅವರು ಹೇಳುತ್ತಾರೆ.
ಸಾಂಬಳ್ಳಿ ಯುದ್ದದಲ್ಲಿ ತೋರಿದ ವೀರತನದ ಹೋರಾಟದಿಂದ ಆತ ಮೈಸೂರು ಅರಸರ ಗಮನ ಸೆಳೆದಿದ್ದ. ಸ್ಮರಾಲ್ಡೋ ಒಬ್ಬ ರಣಧೀರ. ಮೈಸೂರಿಗೂ ಮತ್ತು ಮಧುರೆಗೂ ಯುದ್ಧ ನಡೆಯುತ್ತಿದ್ದ ಕಾಲ ಅದು. ಇವೆರಡೂ ರಾಜ್ಯಗಳ ಗಡಿಬಾಗಿಲಂತಿತ್ತು ವಾಮಲೂರು. ಅದರ ನಾಯಕ ಗಟ್ಟ ಮುದಲಿಯಾರ್. ಆತ ಮಧುರೆ ನಾಯಕನ ನೆರವಿನಿಂದ ಯುದ್ಧಮಾಡಿ ಮೈಸೂರಿನಿಂದ ಸಾಂಬಳ್ಳಿಪುರವನ್ನು ವಶಪಡಿಸಿಕೊಂಡಿದ್ದ. ಆ ಸಂದರ್ಭದಲ್ಲಿ ನಮ್ಮ ಸ್ಮರಾಲ್ಡೋ ರಣರಂಗಕ್ಕಿಳಿದು ಸಾಂಬಳ್ಳಿ ಮೈಸೂರಿಗೆ ವಾಪಸ್ಸಾಗುವಂತೆ ಮಾಡುತ್ತಾನೆ. ಆಗ ಮೈಸೂರಿನ ಮಹಾರಾಜರಾಗಿದ್ದ ದೇವರಾಜ ಒಡೆಯರು (೧೬೫೯-೬೯) ಆತನ ಸಾಮರ್ಥ್ಯವನ್ನು ಮೆಚ್ಚಿ ತಳಿಗೆ ನಾಯಕನಾದ ಬಳಿಕ ಪದವಿಯಿಂದ ಪದವಿಗೆ ಏರಿಸುತ್ತಾರೆ. ಒಂದು ಪರಗಣಕ್ಕೆ ರಾಜಪ್ರತಿನಿಧಿಯಾಗಿಯೂ ನೇಮಿಸುತ್ತಾರೆ’ ಎಂದು ಆ ಪತ್ರದ ವಿವರಗಳನ್ನು ಸ್ವಾಮಿ ಅಂತಪ್ಪ ಅವರು ತಮ್ಮ ಪುಸ್ತಕ `ಶ್ರೀ ಕನಕದಾಸ, ಶ್ರೀ ತಿಮ್ಮಪ್ಪದಾಸ ಇವರು ಕ್ರೈಸ್ತರಾದರೆ?’ ಎಂಬ ಪುಸ್ತಕದಲ್ಲಿ (ಕಥೋಲಿಕ ಕ್ರೈಸ್ತರ ಕನ್ನಡ ಸಾಹಿತ್ಯ ಸಂಘ, ಬೆಂಗಳೂರು ೨೦೦೬,ಪುಟ ೧೧೩ರಲ್ಲಿ) ದಾಖಲಿಸಿದ್ದಾರೆ.
ಈ `ಮುತ್ತಪ್ಪ’ ಉದಾರಿಯಾಗಿದ್ದ. ಆತನ ಏಳಿಗೆಯನ್ನು ಕಂಡು ಕೆಲವರು ತೀವ್ರ ಅಸಮಾಧಾನಗೊಂಡಿದ್ದರು. ಶ್ರೀರಂಗಪಟ್ಟಣದಲ್ಲಿ ಕುಟುಂಬ ಸಮೇತ ವಾಸ ಮಾಡಲು ಅರಸರು ಕರೆ ಕಳುಹಿಸಿದಾಗ, ಅದಕ್ಕೊಪ್ಪದ ಆತ ಸ್ವಾಮಿ ದುವಾರ್ತೆ ಅವರು ಕೊಟ್ಟ ಸಲಹೆಯಂತೆ ಸಕಲ ಮೃತರ ಆತ್ಮಗಳಿಗೆ ಮೊರೆ ಹೋಗುತ್ತಾನೆ. ( ಅದರ ಪರಿಣಾಮವೋ ಎಂಬಂತೆ) ಮುಖದ ಮೇಲೆ ಹುಣ್ಣು ಹರಡಿಕೊಂಡು, ಪ್ರಯಾಣ ದುಸ್ಸಾಧ್ಯವಾಗುತ್ತದೆ. ಹೀಗೆ ರಾಜಾಜ್ಞೆಯಿಂದ ಆತ ತಪ್ಪಸಿಕೊಂಡ ಎಂದು ಸ್ವಾಮಿ ಅಂತಪ್ಪ ಅವರು ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ.
ಸಂತ ಅಂತೋಣಿಯವರ ಭಕ್ತಿಗೆ ಕೆಳಮಂಗಳ ಹೆಸರುವಾಸಿಯಾಗಿತ್ತು. ಅದರಂತೆಯೇ ಸಮೀಪದ ಬೆಟ್ಟದ ಅಲಸೂರು ಕೂಡ ಸಂತ ಅಂತೋಣಿಯವರ ಭಕ್ತಿಗೆ ಹೆಸರುವಾಸಿಯಾಗಿದೆ.
ಸ್ವಾಮಿ ಕೊರೆಯ ಅವರು `ಕಸ್ತೂರಿ’ ಹೆಸರಿನ ಯೋಧನ ಜೀವನದಲ್ಲಾದ ಪವಾಡವೊಂದನ್ನು ದಾಖಲಿಸಿದ್ದಾರೆ. `ಕಸ್ತೂರಿ’ ಎಂಬ ಹೆಸರಿನ ಯೋಧನೊಬ್ಬ ತೀವ್ರವಾಗಿ ಗಾಯಗೊಂಡಿದ್ದ ಅವನನ್ನು ಮನೆಗೆ ಸಾಗಿಸುವಾಗ ಅವನ ದೇಹಸ್ಥಿತಿ ತೀರಾ ಹದಗಟ್ಟಾಗ, ಅವನನ್ನು ಸಾಗಿಸುವುದರಲ್ಲಿ ಇನ್ನೇನು ಪ್ರಯೋಜನವಿಲ್ಲ ಎಂದುಕೊಂಡ ಅವನ ಸಂಗಡಿಗರು ಅವನನ್ನು ದಾರಿಯ ಮಧ್ಯೆ ಕಾಡಿನಲ್ಲಿಯೇ ಬಿಟ್ಟು ತೆರಳುತ್ತಾರೆ. ಇತ್ತ ಗಂಡನಿಗಾದ ಗತಿಯನ್ನು ತಿಳಿದ ಅವನ ಹೆಂಡತಿ, ತನ್ನ ಮೂವರು ಮಕ್ಕಳೊಂದಿಗೆ ಸಂತ ಅಂತೋಣಿ ಹೆಸರಿನ ಚರ್ಚಿಗೆ ತೆರಳಿ ಸಂತ ಅಂತೋಣಿಯವರಲ್ಲಿ ಗಂಡನ ಪ್ರಾಣ ರಕ್ಷಣೆಗಾಗಿ ಮೊರೆಯಿಡುತ್ತಾಳೆ . ಅಷ್ಟರಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಆ ಯೋಧ ನೇರವಾಗಿ ಸಂತ ಅಂತೋಣಿಯವರ ಚರ್ಚಿಗೆ ಬಂದು, ವರನ್ನು ಕೊಂಡಾಡ ತೊಡಗುತ್ತಾನೆ. ಮನೆಗೆ ತೆರಳದೇ ನೇರವಾಗಿ ಚರ್ಚಿಗೆ ಬಂದಿದ್ದ ಅವನು, ಕಾಡಿನಲ್ಲಿ ತನಗೆ ದರ್ಶನಕೊಟ್ಟ ಸಂತ ಅಂತೋಣಿಯವರು, ನನ್ನ ಹೆಸರನ್ನು ಕೂಗಿ ಕರೆದರು. ನನ್ನ ಕೈ ಹಿಡಿದು ಎಬ್ಬಿಸಿದರು. ಸ್ವಸ್ಥನಾಗಿರುವಿ ಇನ್ನು ಮನಗೆ ಹೋಗು ಎಂದು ನನ್ನನ್ನು ಕಳಹಿಸಿದರು’ ಎಂದು ಚರ್ಚಿನ ಸ್ವಾಮಿಗೆ ನಡೆದ ಪವಾಡದ ಬಗೆಗೆ ವಿವರಿಸುತ್ತಾನೆ. ಮೇಲೆ ಪ್ರಸ್ತಾಪಿಸಿದ ಕೀರ್ತನೆ ಇದನ್ನೆ ಹೇಳುತ್ತದೆ.
ಆ `ಕಸ್ತೂರಿ‘ ಎಂಬ ಹೆಸರಿನ ಯೋಧ ಮತ್ತಾರು ಅಲ್ಲ `ಮುತ್ತಪ್ಪ‘ ನಮ್ಮ `ಕನಕದಾಸ‘ ಎಂದು ಪ್ರತಿಪಾದಿಸುವ ಸ್ವಾಮಿ ಐ.ಅಂತಪ್ಪ ಅವರು, ಸಂತ ಅಂತೋಣಿಯವರನ್ನು ಕನಕದಾಸ ತನ್ನ ಕೀರ್ತನೆಯಲ್ಲಿ ಪ್ರಣವ ಎಂದು ಕರೆದಿದ್ದಾನೆ ಎಂದು ಹೇಳುತ್ತಾರೆ. ಅದೇ ಅವಧಿಯ ಆಸುಪಾಸಿನಲ್ಲಿ ದನಕರುಗಳಿಗೆ ರೋಗರುಜಿನ ಕಾಣಿಸಿಕೊಂಡಾಗ ಶ್ರೀಮಂತ ಕ್ರೈಸ್ತನೊಬ್ಬ ತನ್ನ ದನಕರುಗಳಿಗೆ ರೋಗಬಾಧೆ ತಗುಲದಿರಲಿ ಎಂದು ಕೆಳಮಂಗಳದ ಸಂತ ಅಂತೋಣಿ ಅವರಲ್ಲಿ ಬೇಡಿಕೊಂಡಾಗ ಅವನ ದನಕರುಗಳು ರಕ್ಷಣೆ ಪಡೆದ ಪವಾಡವೂ ನಡೆದಿದೆ. ಮುಂದೆ ೧೬೮೨ರಲ್ಲಿ ಮೈಸೂರು ಮರಾಠರ ನಡುವೆ ಯುದ್ಧ ಸಂಭವಿಸಿದಾಗ, ಕೆಳಮಂಗಳದ ಸಂತ ಅಂತೋಣಿವರ ಚರ್ಚು ಸೇರಿದಂತೆ ಹಲವಾರು ಚರ್ಚುಗಳು ನೆಲಸಮವಾಗಿದ್ದವು.ನಂತರ ಈ ಸಂತ ಅಂತೋಣಿಯವರ ಚರ್ಚು ಬೆಟ್ಟದ ಅಲಸೂರಿಗೆ ಸ್ಥಳಾಂತರಗೊಂಡಿರಬಹುದೆ?
ಬೆಟ್ಟದ ಅಲಸೂರಿನ ಆಸುಪಾಸಿನ ರೈತರು ಪೈರುಗಳ ದನಕರುಗಳ ರಕ್ಷಣೆಗೆ ಜಾತಿ ಮತ ಪಂಥಗಳನ್ನು ದೂರವಿಟ್ಟು ಸಂತ ಅಂತೋಣಿಯವರಿಗೆ ಮೊರೆಯಿಡುತ್ತಿರುವುದನ್ನು ಈಗಲೂ ಕಾಣಬಹುದು. ಸುತ್ತೆಲ್ಲ ಪ್ಲೇಗ್ ಕಾಣಿಸಿಕೊಂಡಾಗ, ಸಂತ ಅಂತೋಣಿಯವರ ಉಪಸ್ಥಿತಿಯ ಕಾರಣವಾಗಿ ಚರ್ಚಿನ ಸುತ್ತಲಿನ ಗ್ರಾಮಗಳಲ್ಲಿ ಪ್ಲೇಗ ಮಾರಿ ಕಾಲಿಟ್ಟಿರಲಿಲ್ಲವಂತೆ. ರಾತ್ರಿ ಇಲ್ಲಿ ಗಸ್ತು ತಿರುಗುವ ಸಂತ ಅಂತೋಣಿ ಅವರು ತಮಗೆ ರಕ್ಷಕರು ಎಂದು ಸುತ್ತಮುತ್ತಲಿನ ಗ್ರಾಮಸ್ಥರು ನಂಬಿದ್ದಾರೆ. ಹತ್ತಾರು ವರ್ಷಗಳ ಹಿಂದೆ ದೆವ್ವ, ಪಿಶಾಚಿ ಪೀಡಿತರುಅಧಿಕ ಸಂಖ್ಯೆಯಲ್ಲಿ ಇಲ್ಲಿಗೆ ಬಂದು ಉಪಶಮನ ಹೊಂದುತ್ತಿದ್ದುದನ್ನು ಕೆಲವು ಹಿರಿಯರು ಈಗಲೂ ನೆನಪಿಸಿಕೊಳ್ಳುತ್ತಾರೆ.
- ಫ್ರಾನ್ಸಿಸ್. ಎಂ.ನಂದಗಾವ. ಎಂ.ಎ.