ಪವಾಡ ಪುರುಷನ ಜಾತ್ರೆ

Advertisements
Share

ಪುಣ್ಯಕ್ಷೇತ್ರ ಬೆಟ್ಟದ ಆಲಸೂರು

ಜಾತ್ರೆ ಎಂದಾಕ್ಷಣ ನೆನೆಪಾಗುವುದೇ ಅಂಗಡಿಗಳ ಸಾಲು, ಬಣ್ಣ ಬಣ್ಣದ ತರಾವರಿ ಆಟಿಕೆಗಳು, ಬೇಕೆನಿಸುವ ತಿಂಡಿತಿನಿಸುಗಳು, ಪೊಂ ಪೊಂ ಸದ್ದಿನ ಐಸ್ ಕ್ರೀಮು ಗಾಡಿಗಳು ಇತ್ಯಾದಿ… ಹೀಗೆ ಹತ್ತು ಹಲವು ಚಿತ್ರಣಗಳು ಕಣ್ಣ ಮುಂದೆ ಹಾದುಹೋಗುತ್ತವೆ. ಇಂತಹದೇ ಜಾತ್ರೆಯ ವಿಶೇಷಗಳು ಬೆಟ್ಟದ ಆಲಸೂರು ಎಂಬ ಈ ಪುಟ್ಟಹಳ್ಳಿಯಲ್ಲೂ ನಡೆಯುತ್ತದೆ. ಬೆಟ್ಟದ ಆಲಸೂರು ಗ್ರಾಮ, ಕನಕಪುರ ತಾಲ್ಲೂಕಿನಿಂದ 20 ಕಿ. ಮಿ ದೂರದಲ್ಲಿದ್ದು, ದಕ್ಷಿಣ ಕರ್ನಾಟಕದ ಗಡಿ ಗ್ರಾಮಗಳಲ್ಲೊಂದು ಬೆಂಗಳೂರು ಮಹಾಧರ್ಮಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಹಾರೋಬಲೆಗೆ ಕೆಲವು ವರ್ಷಗಳ ಹಿಂದಿನವರೆಗೂ ಉಪಧರ್ಮಕೇಂದ್ರವೂ ಆಗಿತ್ತು. ಪವಿತ್ರವಾರಗಳಲ್ಲಿ ಹಾರೋಬಲೆಯಲ್ಲಿ ಜರುಗುವ ಮಹಿಮೆ ನಾಟಕವನ್ನು ನೋಡಲು ಬರುವ ಸಾವಿರಾರು ಭಕ್ತಾದಿಗಳು ಪಾಸ್ಖ ಹಬ್ಬ ಮುಗಿಸಿಕೊಂಡು ಅಲ್ಲಿಂದ 15 ಕಿಮೀ ದೂರದಲ್ಲಿರುವ ಅಲಸೂರಿಗೆ ಪ್ರಯಾಣಿಸಿ ಜಾತ್ರೆ ಮುಗಿಸಿಕೊಂಡು ತೆರಳುತ್ತಿದ್ದರು. ಸರಿಯಾದ ಸೌಕರ್ಯಗಳು ಕಾಣದ, ಕೇವಲ 2೦೦ ಜನಸಂಖ್ಯೆಯುಳ್ಳ ಕಡುಬಡತನದ  ಊರು. ಈ ಹಳ್ಳಿಯಲ್ಲಿ 15 ರಿಂದ 2೦ ಕುಟುಂಬಗಳು ಮಾತ್ರವೇ ಕ್ರೈಸ್ತರು.  ಇದೀಗ ಇಲ್ಲಿ ನಡೆಯುವ  ಜಾತ್ರೆಗೆ ಲಕ್ಷಕ್ಕೂ ಅಧಿಕ ಕ್ರೈಸ್ತರು ಸೇರುವುದು ಅಚ್ಚರಿ!. ಸಂತರ ಪವಾಡಗಳನ್ನು ಸ್ಮರಿಸಿ ತಮ್ಮ ಹರಕೆ ಕಾಣಿಕೆಗಳನ್ನು ಅರ್ಪಿಸಲು ರಾಜ್ಯದ ವಿವಿಧ ಸ್ಥಳಗಳಿಂದ ಜನರು ಇಲ್ಲಿಗೆ ಬಂದು ಪುನೀತರಾಗುತ್ತಾರೆ..

ಪವಾಡ ಪುರುಷ ಸಂತ ಅಂತೋಣಿ

ಅಂತೋಣಿ ಅವರು ಇಟಲಿ ದೇಶದ ಪಾದುವ ಎಂಬ ನಾಡಿನ ಒಬ್ಬ ಕ್ರೈಸ್ತ ಧರ್ಮಗುರು. 13 ನೇ ಶತಮಾನದಲ್ಲಿ ಜೀವಿಸಿದ್ದ ಇವರು, ಧರ್ಮಶಾಸ್ತ್ರದಲ್ಲಿ ಪರಿಣಿತಿಹೊಂದಿದ್ದರು. ಮತ್ತು ಸಮಾಜಕಾರ್ಯಗಳಲ್ಲಿ, ಪ್ರಾರ್ಥನೆಗಳಲ್ಲಿ ಧರ್ಮಪ್ರಚಾರದಲ್ಲಿ ತಮ್ಮನ್ನೇ ಅತಿ ನಿಷ್ಟೆಯಿಂದ ತೊಡಗಿಸಿಕೊಂಡಿದ್ದರು. ತಮ್ಮ ಪ್ರಾರ್ಥಾನಾಶಕ್ತಿ ಮತ್ತು ಅಗಾಧವಾದ ವಿಶ್ವಾಸದಿಂದ ಅನೇಕ ಪವಾಡಗಳನ್ನು ಮಾಡುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ. ಅದಕ್ಕಾಗಿಯೇ ಇವರನ್ನು ಪವಾಡ ಪುರುಷ ಎಂದು ಧರ್ಮಸಭೆ ನಾಮಕರಣ ಮಾಡಿದೆ. ತಮ್ಮ ಮರಣದ ನಂತರ ಅತಿ ಶೀಘ್ರದಲ್ಲೇ ಅಂದರೆ ಕಡಿಮೆ ಸಮಯದಲ್ಲೇ ಸಂತರ ಪದವಿಯನ್ನು ಧರಿಸಿದ ಒಬ್ಬ ಸಾಧ್ವಿ ಈ ಅಂತೋಣಿ. ಇವರ ಆದರ್ಶಮಯ ಜೀವನವೂ ಲೋಕಪ್ರಸಿದ್ಧಿ ಪಡೆದು, ಅನೇಕ ಧರ್ಮಕೇಂದ್ರಗಳು ಇವರನ್ನು ಪಾಲಕರನ್ನಾಗಿ ಅಂಗೀಕರಿಸಿವೆ. ಮಾತ್ರವಲ್ಲ ಅವುಗಳಲ್ಲಿ ಹಲವು ಪುಣ್ಯಕ್ಷೇತ್ರಗಳಾಗಿವೆ. ಭಾರತದಲ್ಲೂ ಅನೇಕ ಕಡೆ ಇವರ ಪುಣ್ಯಕ್ಷೇತ್ರಗಳಿವೆ. ಅವುಗಳಲ್ಲಿ ಬೆಟ್ಟದ ಆಲಸೂರು ಕೂಡ ಒಂದು.

ಬೆಟ್ಟದ ಅಲಸೂರಿನಲ್ಲಿ ವಾಡ

ಬೆಟ್ಟದ ಆಲಸೂರಿನಲ್ಲಿ ಒಬ್ಬ ರೈತನಿಗೆ ತಾನು ಹೊಲ ಉಳುವಾಗ ಸಂತ ಆಂತೋಣೀಯವರ ಒಂದು ಚಿಕ್ಕ ಮೂರ್ತಿ ಸಿಕ್ಕಿತು ಮತ್ತು ಅಲ್ಲಿಯೇ ಗುಡಿಯನ್ನು ಕಟ್ಟಿಸಿ ಆ ಮೂರ್ತಿಯನ್ನು ಸ್ಥಾಪಿಸಿದರು ಎಂದು ಪುರಾವೆಗಳಿವೆ. ಹಾರೋಬಲೆ ಧರ್ಮಕೇಂದ್ರದ ಗುರುಗಳಾಗಿದ್ದ ಸ್ವಾಮಿ ಪಿ. ಎಸ್. ಫರ್ನಾಂಡಿಸ್ ರವರು ಶಿಥಿಲಗೊಂಡಿದ್ದ ಸಂತ ಅಂತೋಣಿಯವರ ದೇವಾಲಯವನ್ನು ಹೊಸದಾಗಿ ಕಟ್ಟಿಸಿ ಪಾಸ್ಖಹಬ್ಬದ ನಂತರ ಬರುವ ಮೊದಲ ಮಂಗಳವಾರವನ್ನು ವಾರ್ಷಿಕ ಹಬ್ಬವನ್ನಾಗಿ ಆಚರಿಸಿ, ಪ್ರಾರ್ಥನೆ  ಪೂಜೆಯನ್ನು ಸಲ್ಲಿಸಿ ಬರುತ್ತಿದ್ದರು. 1932 ರಲ್ಲಿ ಈ ಮೊದಲ ವಾರ್ಷಿಕ ಹಬ್ಬ ಆರಂಭವಾಯಿತು.. ಇದು ಹೀಗೆ ಪ್ರಸಿದ್ಧಿ ಪಡೆದು ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುತ್ತ ಬಂದಿದೆ. ಕ್ರಮೇಣ ಈ ಪದ್ಧತಿ ಜಾತ್ರೆಯ ರೂಪತಾಳಿತು. ಅದರಲ್ಲೂ ಹಾರೋಬಲೆ, ತೆರೇಸಾಪುರ (ಕುಪ್ಪೆದೊಡ್ಡಿ), ಕನಕಪುರ, ಬೆಂಗಳೂರಿನಿಂದ ಮತ್ತು ತಮಿಳುನಾಡಿನ ಗಡಿ ಭಾಗಗಳಿಂದಲೂ ಬರುವ ಭಕ್ತಾದಿಗಳು ಅಧಿಕ. ಈ ಜಾತ್ರೆಗೆ ಬೇಟಿಕೊಡುವ ಹಾರೋಬಲೆಯವರು ಆ ಜಾತ್ರೆಗೆ ಸಿಧ್ಧತೆ ಮಾಡಿಕೊಳ್ಳುವುದೇ ಒಂದು ವಿಶೇಷ. ತಮ್ಮ ಊರುಗಳಿಂದ ಬೆಟ್ಟದ ಆಲಸೂರಿಗೆ 15 20 ಕೀ. ಮಿ ಕ್ರಮಿಸಬೇಕಾಗಿದ್ದರಿಂದ  ಎತ್ತಿನ ಗಾಡಿಗಳನ್ನೇ ಆಶ್ರಯಿಸಿದ್ದರು. ಎತ್ತಿನ ಗಾಡಿಗೆ ಕಾಮಾನುಕಟ್ಟಿ ಅದಕ್ಕೆ ಚಾದರ ಹೊದಿಸಿ, ಹುಲ್ಲಿನ ಹಾಸು ಮಾಡಿ, ಪಾತ್ರೆ ಪಗಡೆಗಳನ್ನು ಗಾಡಿಗೆ ಕಟ್ಟಿ ಮನೆಮಂದಿಯೆಲ್ಲ ಒಟ್ಟಿಗೆ ಕೂತು, ಸಾಲು ಸಾಲಾಗಿ ಹೊರಟ ಎತ್ತಿನ ಗಾಡಿಗಳು ರಾತ್ರಿ ಪೂರ ಪ್ರಯಾಣಿಸಿ ಆ ದಿನ ಮಂಗಳವಾರದಂದು ಅಲಸೂರಿನಲ್ಲಿ ಪ್ರಾರ್ಥನೆ, ಹರಕೆಗಳನ್ನು ಸಲ್ಲಿಸಿ, ಅಲ್ಲೇ ಅಡುಗೆ ತಯಾರು ಮಾಡಿ ಎಲ್ಲರೂ ಒಟ್ಟಿಗೆ ಭುಜಿಸಿ, ಬಂದ ಇತರೆ ಭಕ್ತಾದಿಗಳಿಗೂ ಉಣಲು ಬಡಿಸಿ ಸಂತೃಪ್ತರಾಗುತ್ತಿದ್ದರು. ದೇವಾಲಯದ ಆವರಣದಲ್ಲಿ ಅನೇಕ ಮರಗಳನ್ನು ಬೆಳೆಸಲಾಗಿದೆ. ನೀರಿಗಾಗಿ ಅಲಸೂರಿನ ಸಮೀಪವೇ ಹರಿಯುವ ಹಳ್ಳ ವರದಾನವಾಗಿದೆ. ಯಾತ್ರಿಗಳು ಅವನ್ನೇ ಆಶ್ರಯಿಸುತ್ತಾರೆ. ಅಪಾರ ಜನಸಂದಣಿಯ ನಡುವೆ ಸಾಲುಗಟ್ಟಿ ನಿಂತು ತಮ್ಮ ಪ್ರಾರ್ಥನೆ, ಕಾಣಿಕೆಗಳನ್ನು ಸಲ್ಲಿಸುವರು. ತಮ್ಮ ಮುಡಿ ಕೊಟ್ಟು ತಲೆ ಬೋಳಿಸಿಕೊಂಡು ಆರಕೆ ತೀರಿಸಿಕೊಳ್ಳುವ ಅನೇಕರು, ದೆವ್ವ ಉಚ್ಛಾಟನೆಗಳಿಗೆ ಏಟು ತಿನ್ನುವವರು ಕೆಲವರು. ಹಾಗೆಯೇ ಇದು ಬೇಸಿಗೆಯ ಸಮಯವಾದರಿಂದ ಅಲ್ಲಲಿ ನೀರು ಮಜ್ಜಿಗೆ ಪಾನಕಗಳನ್ನು ವಿತರಿಸುವ ಮಂದಿಗಳಿಗೂ ಕೊರತೆ ಏನಿಲ್ಲ. ಇತ್ತೀಚಿನ ದಿನಗಳಲ್ಲಿ ಎಲ್ಲ ರೀತಿಯ ಅನೇಕ ಅನುಕೂಲಗಳಿದ್ದು, ಬಸ್ಸಿನ ವ್ಯವಸ್ಥೆ, ನೀರುನಿಡಿ, ತಂಗು ಕೊಠಡಿಗಳು,  ಶೌಚಾಲಯಗಳು ಸುಧಾರಿತ ಸವಲತ್ತುಗಳಿವೆ. ದೊಡ್ಡ ಜನಸಂದಣಿ ನಡುವೆಯೂ ಎಲ್ಲರ ಪ್ರಾರ್ಥನೆ ಹರಕೆಗಳನ್ನು ಆಲಿಸುವ ಸಂತ ಅಂತೋಣಿಯವರು ತಮ್ಮ ಪವಾಡ ಶಕ್ತಿಯಿಂದ ನಮ್ಮ ಕುಂದು ಕೊರತೆಗಳನ್ನು ನೀಗಿಸುತ್ತಾರೆ. ಒಮ್ಮೆ ಭೇಟಿಕೊಡಿ. ಸಂತ ಅಂತೋಣಿಯವರ ಆಶೀರ್ವಾದವನ್ನು ಪಡೆದುಕೊಳ್ಳಿ.  ಬೆಟ್ಟದ ಆಲಸೂರಿನ ಜಾತ್ರೆಗೆ ಜಯವಾಗಲಿ

ಸಂತೋಷ್ ಇಗ್ನೇಷಿಯಸ್

 

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram