ಉತ್ತರಹಳ್ಳಿ ಅನ್ನಮ್ಮ ಬೆಟ್ಟದ ಅನ್ನಮ್ಮ ಮತ್ತು ದೂರದ ತಮಿಳುನಾಡಿನ ಕೆಥೋಲಿಕ ಕ್ರೈಸ್ತರ ಜನಪದ ದೈವ `ಮರಿತ್ತಿಯಮ್ಮಾಳ್’

Advertisements
Share

ಬೆಂಗಳೂರಿನ ಕೆಥೋಲಿಕ ಕ್ರೈಸ್ತರ ಜನಪದ ದೈವ ಉತ್ತರಹಳ್ಳಿಯ ಅನ್ನಮ್ಮ ಬೆಟ್ಟದ  ಅನ್ನಮ್ಮ. ಆ ಬೆಟ್ಡದ ಬುಡದಲ್ಲಿ ಸಾಧ್ವಿ ಅನ್ನಮ್ಮಳ ಕಲ್ಲು ಕಟ್ಟಡದ ಸಮಾಧಿ ಇದೆ. ಅದರ ಮೇಲೆ ಈಚೆಗೆ ಗ್ರೆನೈಟ್ ಕಲ್ಲನ್ನು ಹಾಸಲಾಗಿದೆ. ಸ್ಥಳೀಯ ಐತಿಹ್ಯಗಳು ಹೇಳುವಂತೆ, ನೂರಿನ್ನೂರು ವರ್ಷಗಳ ಹಿಂದೆ ಹೈದರಾಲಿಯೋ ಅಥವಾ ಟಿಪ್ಪು ಸುಲ್ತಾನನ ಕಾಲದಲ್ಲೋ, ಅವರ ಕೆಲವು ಕಾಮಾಂಧ ಸೈನಿಕರು ಬೆಟ್ಟದ ಬುಡದಲ್ಲಿ ನೆಲೆಸಿದ್ದ ಕ್ರೈಸ್ತ ವಿಶ್ವಾಸಿ ಸಾಧ್ವಿ ಅನ್ನಮ್ಮಳ ಸಂಗ ಬಯಸಿದಾಗ, ಆಕೆ ಓಡಿಹೋಗಿ ಬೆಟ್ಟ ಹತ್ತಿದಳು. ಆ ಸೈನಿಕರೂ ಅಲ್ಲಿಗೂ ಧಾವಿಸಿದಾಗ, ತನ್ನ ಶೀಲ ರಕ್ಷಿಸಿಕೊಳ್ಳಲು ಅಲ್ಲಿಂದ ಕೆಳಗೆ ಹಾರಿ ತನ್ನ ಪ್ರಾಣ ಬಿಟ್ಟಳು. ಈ ಅನಿರೀಕ್ಷಿತ ಬೆಳವಣಿಗೆಯಿಂದ ದಿಗ್ಮೂಢರಾಗಿ, ಸಾಧ್ವಿಯ ಸಾವಿಗೆ ಕಾರಣವಾದೆವಲ್ಲ ಎಂದು ಮರುಗಿದ ಆ ಸೈನಿಕರು, ಬೆಟ್ಟದ ಬುಡದಲ್ಲಿ ಅವಳ ಸಮಾಧಿ ಮಾಡಿ ಅದರ ಮೇಲೆ ಶಿಲುಬೆ ನೆಟ್ಟರು. ಸಾಧ್ವಿಯ ಸಾವಿನ ಸಮಾಚಾರ ತಿಳಿದ ಸುತ್ತಮುತ್ತಲಿನ ಕನ್ನಡ ಕ್ರೈಸ್ತ ರೈತಾಪಿ ಜನರು, ಆಕೆಯ ಸಮಾಧಿಗೆ ಧೂಪ, ದೀಪ ಉರಿಸುವ ಕ್ರಮ ರೂಢಿಸಿಕೊಂಡರು. ಕ್ರಮೇಣವಾಗಿ ಉತ್ತರಹಳ್ಳಿ ಅನ್ನಮ್ಮ ರೈತಾಪಿ ಕ್ರೈಸ್ತರ ಜನಪದರ ದೈವವಾದಳು. ಇತರ ರೈತಾಪಿ ಜನರೂ ಅವರೊಂದಿಗೆ ಸೇರಿಕೊಂಡರು. ಮುಂದೆ ಅದು ಇಂದಿನ ತಪಸ್ಸು ಕಾಲದ ಐದನೇ ಭಾನುವಾರದ ಶಿಲುಬೆ ಹಾದಿಯ, ನಂತರ ಜಾತ್ರೆಯ ಸ್ವರೂಪ ಪಡೆಯಿತು ಎನ್ನಲಾಗುತ್ತದೆ.

 ಕಲ್ಲರೈ ಕೋವಿಲ್:

ಬೆಂಗಳೂರಿನ ಉತ್ತರಹಳ್ಳಿಯ ಶಿಲುಬೆ ಬೆಟ್ಟದ ಅನ್ನಮ್ಮ ಇಲ್ಲಿ ಕೇವಲ ಸಮಾಧಿ ಸ್ವರೂಪದಲ್ಲಿರುವ ಜನಪದರ ದೈವ. ಆದರೆ, ಈ ತಮಿಳುನಾಡಿನ ತಿರುವಾರೂರ್ ಜಿಲ್ಲೆಯ ತಿರುತುರೈಪೂಂಡಿ ಸಮೀಪದಲ್ಲಿರುವ `ಮರಿತ್ತಿಯಮ್ಮಾಳ್ ಕಲ್ಲರೈ ಕೋವಿಲ್’ ಹೆಸರೇ ಹೇಳುವಂತೆ ‘ಮರಿತ್ತಿಯಮ್ಮಾಳ್ ಳ ಸಮಾಧಿ ಮಂದಿರ’. ಅವಳು ತಮಿಳುನಾಡಿನ ತಿರುತುರೈಪೂಂಡಿ ಪರಿಸರದ ಕೆಥೋಲಿಕ ಕ್ರೈಸ್ತರ ಜನಪದ ದೈವ ‘ಮರಿತಿಯಮ್ಮಾಳ್’. ಮಾತೆ ಮರಿಯಳ ತೀರ್ಥಕ್ಷೇತ್ರ ವೇಲಾಂಗಣಿಯ ಕೆಳಗೆ ತಮಿಳುನಾಡಿನ ಪೂರ್ವ ಕರಾವಳಿಯ ತೀರದಲ್ಲಿರುವ ಈ ಸಮಾಧಿ ದೇವಾಲಯಕ್ಕೆ ಅಲ್ಲಿನ ಜನರು ಜಾತಿ, ಧರ್ಮಗಳ ಭೇದಭಾವವಿಲ್ಲದೇ ನಡೆದುಕೊಳ್ಳುತ್ತಾರೆ. ಬೆಂಗಳೂರಿನ ಕ್ರೈಸ್ತ ಜನಪದರು ಮತ್ತು ಉತ್ತರಹಳ್ಳಿ ಸುತ್ತಮುತ್ತಲಿನ ಗ್ರಾಮಗಳ ಜನಪದರು, ಉತ್ತರಹಳ್ಳಿ ಅನ್ನಮ್ಮನ ಸಮಾಧಿಗೆ ಭೇಟಿಕೊಟ್ಟು, ಧೂಪದೀಪ ಹಚ್ಚಿ  ಹರಕೆ ತೀರಿಸುವಂತೆ, ಅಲ್ಲಿನ ಜನಪದರು ಮರಿತ್ತಿಯಮ್ಮಾಳ್ ಸಮಾಧಿಗೆ ಭೇಟಿಕೊಟ್ಟು, ಧೂಪದೀಪ ಉರಿಸಿ ಹರಕೆ ಹೊತ್ತು, ಅವು ಈಡೇರಿದ ನಂತರ ಬಂದು ಹರಕೆ ತೀರಿಸುತ್ತಾರೆ.  `ಮರಿತ್ತಿಯಮ್ಮಾಳ್ ಕಲ್ಲರೈ ಕೋವಿಲ್’ನ ದೈವ ಸನಿಹದ ಕಳ್ಳಕುಡಿ, ನೆಡುಂಬಾಲಂ ಮೊದಲಾದ ಗ್ರಾಮಗಳ ಗ್ರಾಮಸ್ಥರ ಕುಲದೈವವಾಗಿದೆ. ಈ `ಮರಿತ್ತಿಯಮ್ಮಾಳ್ ಕಲ್ಲರೈ ಕೋವಿಲ್’ಗೆ ಕೆಥೋಲಿಕ ಕ್ರೈಸ್ತರಲ್ಲದೇ ಹಿಂದುಗಳು ಮತ್ತು ಮುಸ್ಲಿಂ ರು ನಡೆದುಕೊಳ್ಳುತ್ತಾರೆ. ಪ್ರತಿ ಭಾನುವಾರ ಸಾಯಂಕಾಲ ಮಸ್ಲಿಂ ಯುವತಿಯರು ಈ ದೇವಾಲಯಕ್ಕೆ ಬಂದು ತಮಗೆ ಯಾವ ಅಡೆತಡೆಯಿಲ್ಲದೆ ಮದುವೆಯಾಗಲೆಂದು ಕೋರಿಕೊಳ್ಳುತ್ತಾರೆ. ಅನೇಕರು ಆರೋಗ್ಯ ಭಾಗ್ಯ ಕರುಣಿಸು ಎಂದು ಮತ್ತೆ ಕೆಲವರು ತಮ್ಮ ವ್ಯಾಪಾರ ವ್ಯವಹಾರದ ಹೊಸ ಪ್ರಯತ್ನಗಳಿಗೆ ಯಾವ ಆತಂಕಗಳು ಬರಕೂಡದೆಂದು ಕೋರಿಕೆ ಸಲ್ಲಿಸುತ್ತಾರೆ. ಅವರ ಕೋರಿಕೆಗಳು ನೆರವೇರಿವೆ ಎಂದು ಹೇಳಲಾಗುತ್ತದೆ.

 ಜನಪದರ ದೈವವಾದ ಬಗೆ:

ತುಂಬಾ ವರ್ಷಗಳ ಹಿಂದೆ ಜಮೀನ್ದಾರ ಪದ್ಧತಿ ಜಾರಿಯಲ್ಲಿದ್ದಾಗ, ತಿರುತುರೈಪೂಂಡಿ ಸುತ್ತಮುತ್ತಲಿನ ನೂರಾರು ಎಕರೆ ಹೊಲಗದ್ದೆಗಳು ಎನ್.ಎಸ್.ರಾಮಲಿಂಗ ಮೊದಲಿಯಾರ್ ಅವರಿಗೆ ಸೇರಿದ್ದವು. ಅವರ ಜಮೀನುಗಳಲ್ಲಿ, ನಾಡಾರ್ ಸಮುದಾಯದವರು ಮತ್ತು ಇನ್ನಿತರ ಬಡವರು ಹಾಗೂ ದಲಿತರು ಕೆಲಸ ಮಾಡುತ್ತಿದ್ದರು. ಮಳೆಗಾಲದಲ್ಲಿ ಈ ಜಮೀನುಗಳಲ್ಲಿನ ಕೃಷಿ ಕೆಲಸಕ್ಕೆಂದು ತಮಿಳುನಾಡಿನ ವಿವಿಧ ಭಾಗಗಳಿಂದ ಕೃಷಿ ಕಾರ್ಮಿಕರು ವಲಸೆ ಬರುತ್ತಿದ್ದರು. ಅವರು ನೆಲೆನಿಂತ ಎತ್ತರದ ಪ್ರದೇಶಗಳೇ ಇಂದಿನ ವಿವಿಧ ಹಳ್ಳಿಗಳ ಉಪಸ್ಥಿತಿಗೆ ಕಾರಣವೆನ್ನಲಾಗುತ್ತದೆ. ಸರಿಯಾದ ಸಾರಿಗೆ ಸೌಲತ್ತುಗಳಿಲ್ಲದ ಆ ಕಾಲದಲ್ಲಿ ತಮಿಳುನಾಡಿನ ದಕ್ಷಿಣದ ಜಿಲ್ಲೆಗಳಲ್ಲಿನ ಕೆಥೋಲಿಕ ಕ್ರೈಸ್ತರು, ಅಂದಿನ ಪದ್ಧತಿಯಂತೆ ಗುಂಪು ಗುಂಪುಗಳಲ್ಲಿ ಪವಿತ್ರ ಯಾತ್ರಸ್ಥಳವಾದ ವೇಲಾಂಗಣಿಗೆ ನಡೆದು ಹೋಗುತ್ತಿದ್ದರು. ಆವರು ಕಾಡಿನಲ್ಲಿ, ಕಾಲುದಾರಿಯಲ್ಲಿ, ಹೊಲಗದ್ದೆಗಳ ಬದುವಿನಲ್ಲಿ ಸಾಗುವಾಗ ಅನಿವಾರ್ಯವಾಗಿ ಈ ಜಮೀನ್ದಾರ ಮೊದಲಿಯಾರ್ ಅವರಿಗೆ ಸೇರಿದ್ದ ಜಮೀನುಗಳಲ್ಲಿ ಹಾಯ್ದು ಹೋಗಬೇಕಾಗುತ್ತಿತ್ತು. ಅಂಥ ಒಂದು ಗುಂಪಿನಲ್ಲಿ ಒಬ್ಬ ವೃದ್ಧ ಮತ್ತು ಯುವತಿಯೊಬ್ಬಳು ಇದ್ದರು. ಮಳೆಗಾಲದಲಿ ಜಮೀನ್ದಾರರ ಜಮೀನಿನಲ್ಲಿ ನಡೆದು ಸಾಗುವಾಗ ಆ ಯುವತಿಗೆ ಸಿಡುಬುರೊಗ ಬಂದಿತು. ಅಲ್ಲಿ ಸರಿಯಾದ ಚಿಕಿತ್ಸೆ ಸಿಗದೇ ಅವಳು ಅಸುನೀಗಿದಳು. ಯಾತ್ರಾರ್ಥಿಗಳು, ಜಮೀನ್ದಾರನಿಗೆ ಹೆದರಿ ಅಲ್ಲೇ ಜಮೀನಿನ ಒಂದು ಮೂಲೆಯಲ್ಲಿ ತರಾತುರಿಯಲ್ಲಿ ಗುಂಡಿತೋಡಿ ಶವದ ಭೂಸ್ಥಾಪನೆ ಮಾಡಿ ಸಮಾಧಿ ಮೇಲೊಂದು ಶಿಲುಬೆಯನ್ನು ನೆಟ್ಟು ಅವಸರದಿಂದ ಮುಂದೆ ಸಾಗಿಬಿಟ್ಟರು.

ಕನಸಿನಲ್ಲಿ ಕಾಣಿಸಿಕೊಂಡ ಕನ್ಯೆ:

ನೂರಾರು ಎಕರೆ ಜಮೀನುಗಳ ಒಡೆಯರಾದ ಶ್ರೀಮಂತ ಜಮೀನ್ದಾರರ ಮುಂದೆ ಕೆಲಸಗಾರರು ತಲೆ ಎತ್ತಿ ನಡೆಯವುದಲ್ಲ, ನಿಂತು ಮಾತನಾಡುವುದೇ ಕಷ್ಟವಾಗಿರುವ ಅಂದಿನ ಸಾಮಾಜಿಕ ಸಂದರ್ಭದಲ್ಲಿ ಅವರ ಜಮೀನಿನಲ್ಲಿ ನಡೆದ ಈ ಘಟನೆ, ಜಮೀನ್ದಾರ ಎನ್.ಎಸ್.ರಾಮಲಿಂಗ ಮೊದಲಿಯಾರ್ ಅವರಿಗೆ ಗೊತ್ತೆ ಆಗುವುದಿಲ್ಲ. ಒಂದು ದಿನ ಸಂಜೆಯ ಮಬ್ಬುಗತ್ತಲಲ್ಲಿ ಎತ್ತರದ ದಿನ್ನೆಯ ಮೇಲಿರುವ ತಮ್ಮ ಮಹಡಿ ಮನೆಯಲ್ಲಿ ಕುರ್ಚಿಯೊಂದರ ಮೇಲೆ ಕುಳಿತು ತಮ್ಮ ಜಮೀನಿನತ್ತ ದೃಷ್ಟಿ ಹರಿಸಿದಾಗ ದೂರದ ತಮ್ಮ ಜಮೀನಿನ ಒಂದು ಮೂಲೆಯಲ್ಲಿ ಮಿಣುಕು ದೀಪದ ಸೊಡರು ಕಾಣಿಸಿತು. ಜನವಸತಿ ಇಲ್ಲದ ಆ ಪ್ರದೇಶದಲ್ಲಿ ಮತ್ತೆ ಮತ್ತೆ ದೀಪ ಕಾಣಿಸಿಕೊಂಡದ್ದು ಅವರಿಗೆ ಅಚ್ಚರಿ ಮೂಡಿಸಿತು. ಅದೇ ಸಂದರ್ಭದಲ್ಲಿ ಜಮೀನ್ದಾರರ ವಿರುದ್ಧ ಚೆನೈ ನ್ಯಾಯಾಲಯದಲ್ಲಿ ಪ್ರಕರಣವೊಂದರ ವಿಚಾರಣೆ ನಡೆದಿತ್ತು. ನ್ಯಾಯಾಲಯದಲ್ಲಿನ ಪ್ರಕರಣದಲ್ಲಿ ಏನು ತೀರ್ಪು ಬರುವುದೋ ಎಂಬ ಆತಂಕದಲ್ಲಿ ಮಲಗಿದ ಮೊದಲಿಯಾರ್ ಅವರ ಕನಸಿನಲ್ಲಿ ಯುವತಿಯೊಬ್ಬಳು ಕಾಣಿಸಿಕೊಂಡು, `ತೀರ್ಪು ನಿಮ್ಮ ಪರವಾಗಿ ಬರುತ್ತದೆ, ಧೈರ್ಯದಿಂದಿರಿ. ಆದರೆ, ನನಗೊಂದು ಉಪಕಾರ ಮಾಡಬೇಕು. ನಾನು ಮಳೆಬಿಸಿಲಲ್ಲಿ ಬಳಲುತ್ತಿದ್ದೇನೆ. ನನ್ನ ಸಮಾಧಿಯನ್ನು ಕಲ್ಲುಕಟ್ಟಡದಿಂದ ಕಟ್ಟಬೇಕು’ ಎಂದು ಹೇಳಿದಳು. ಕನಸಿನಲ್ಲಿ ಕಾಣಿಸಿಕೊಂಡ ಆ ಯುವತಿಯ ಬಾಯಿ ಮಾತಿನ ಹಾರೈಕೆಯಂತೆ ನ್ಯಾಯಾಲಯದ ತೀರ್ಪು ಜಮೀನ್ದಾರ ಮೊದಲಿಯಾರರ ಪರವಾಗಿಯೇ ಬಂದಿತು!

ಈ ಬೆಳವಣಿಗೆಯಿಂದ ವಿಚಲಿತರಾದ ಜಮೀನ್ದಾರ ಮೊದಲಿಯಾರರು, ತಮ್ಮ ಜಮೀನಿನ ಒಬ್ಬ ನಾಡಾರ್ ಕೆಲಸದಾಳನ್ನು ಕರೆದು, ತಮಗೆ ದೀಪದ ಬೆಳಕು ಕಾಣಿಸಿಕೊಂಡ ಜಮೀನಿನತ್ತ ಕೈ ತೋರಿಸಿ, `ಅಗೋ, ಅಲ್ಲಿ ಯಾವುದಾದರು ಸಮಾಧಿ ಇದೆಯೆ? ನೋಡಿಕೊಂಡು ಬಾ’ ಎಂದು ಅಟ್ಟಿದರು. ಆ ಕೆಲಸದಾಳು, ಜಮೀನ್ದಾರರು ತೋರಿಸಿದ ಜಮೀನನ ಹತ್ತಿರ ಹೋಗಿ ಅಲ್ಲಿದ್ದ ಸಮಾಧಿಯನ್ನು ಕಂಡು, ಓಡಿ ಬಂದು ಸಮಾಧಿ ಇರುವ ಬಗ್ಗೆ ಮಾಹಿತಿ ನೀಡುತ್ತಾನೆ. ಅಷ್ಟು ಮಾಹಿತಿ ಸಿಕ್ಕಿದ್ದೇ ತಡ, ಜಮೀನ್ದಾರ ಮೊದಲಿಯಾರ್ ಅವರು ಆ ಸಮಾಧಿಗೆ ಒಂದು ಕಲ್ಲು ಕಟ್ಟಡ ಕಟ್ಟುವಂತೆ ಸೂಚಿಸುತ್ತಾರೆ. ಅವರ ನಿರ್ದೇಶನದಂತೆ ಅಲ್ಲೊಂದು ಸಮಾಧಿ ಕಟ್ಟಡ ನಿರ್ಮಾಣವಾಗುತ್ತದೆ!

ಆರಾಧನೆಯ ಕ್ರಮ:

ಕಾಲಾಂತರದಲ್ಲಿ ಜಮೀನ್ದಾರರಿಗೆ ಸೇರಿದ್ದ ಜಮೀನಿನಲ್ಲಿ ಅಲ್ಲಲ್ಲಿ ಎತ್ತರದ ಪ್ರದೇಶಗಳಲ್ಲಿ ಕೃಷಿ ಕಾರ್ಮಿಕರ ಕಟ್ಟಿಕೊಂಡ ಗುಂಪು ಗುಡಿಸಲುಗಳು, ಕಲ್ಲುಮಣ್ಣಿನ ಗಟ್ಟಿಯಾದ ಮನೆಗಳಾದವು. ಆ ಮನೆಗಳು ಕ್ರಮೇಣವಾಗಿ ಗ್ರಾಮಗಳ ರೂಪ ತಳೆದವು. ಜಮೀನುದಾರರ ಭೂಮಿಗಳು ಊಳುವವರ ಪಾಲಾದವು. ಆ ಮಾರ್ಗದಲ್ಲಿ ಹೋಗಿಬರುವ ಜನರು ಸಮಾಧಿಯ ಮೇಲೆ ಹೂವು ಇರಿಸಿ ಆದರಿಸತೊಡಗಿದರು. ಸಂತೆಗೆ ಹೋಗುವವರು ದನಕರುಗಳು ಒಳ್ಳೆಯ ಬೆಲೆಗೆ ಮಾರಾಟವಾಗಲಿ ಎಂದು ಕೋರಿಕೊಳ್ಳತೊಡಗಿದರು. ಅವರ ಕೋರಿಕೆಗಳು ಈಡೇರಿದಾಗ, ಹೂವು, ಕಾಸು ಇರಿಸತೊಡಗಿದರು. ಆ ಕಾಸುಗಳನ್ನು ಕೂಡಿಡುತ್ತಾ ಮುದುಕಿಯೊಬ್ಬಳು ಅಲ್ಲಿಯೇ ನೆಲೆಸಿ ಅದರ ಸುತ್ತ ಕಾಡುಕಸ ಬೆಳೆಯದಂತೆ  ನೋಡಿಕೊಂಡಳು. ಹಾಗೂ ದಿನವೂ ಕಸ ಗುಡಿಸಿ ಅಲ್ಲಿನ ಪರಿಸರವನ್ನು ಕಸಕಡ್ಡಿಗಳಿಂದ ಮುಕ್ತಗೊಳಿಸಿ ಆ ಪರಿಸರಕ್ಕೊಂದು ಗಾಂಭೀರ್ಯ ಬರುವಂತೆ ಮಾಡಿದಳು. ಸಮಾಧಿಯನ್ನು ಮೂರು ಸುತ್ತು ಸುತ್ತುವುದು ಆರಾಧನೆಯ ಒಂದು ಕ್ರಮವಾಗಿ ರೂಢಿಗೆ ಬಂದಿತು. ಸಮಾಧಿಯ ಮೇಲಿನ ಮಾಲೆಗಳಲ್ಲಿನ ಹೂವು ಸುಲಭವಾಗಿ ಕಿತ್ತರೆ ಕೇಳಿದ ಕೋರಿಕೆ ಸುಲಭವಾಗಿ ನೆರವೇರುವುದು. ಇಲ್ಲಿದಿದ್ದರೆ ಕಷ್ಟ ಕಟ್ಟಿಟ್ಟದ್ದು ಎಂಬ ನಂಬಿಕೆ ಜನರಲ್ಲಿ ನಲೆಯೂರಿತು. ಮುಂದೆ ಕಳ್ಳಕುಡಿಯ ಗ್ರಾಮದ ಕ್ರೈಸ್ತರು ಒಂದು ಸಂಘ ಮಾಡಿಕೊಂಡು, ಈ ಸಮಾಧಿ ದೇವಾಲಯದ ಉಸ್ತುವಾರಿ ನೋಡಿಕೊಳ್ಳತೊಡಗಿದರು. ಸಮೀಪದ ತಿರುಕುರೈ ಪೂಂಡಿ ಗ್ರಾಮದ ಚರ್ಚಿನ ವಿಚಾರಣಾ ಗುರುಗಳ ಸಹಕಾರದಲ್ಲಿ ಸಮಾಧಿ ಸ್ಥಳದಲ್ಲಿ ವರ್ಷಕ್ಕೊಮ್ಮೆ ಸೇರಿ ವಾರ್ಷಿಕ ಹಬ್ಬ ಆಚರಿಸತೊಡಗಿದರು. ಹಬ್ಬದ ಸಂದರ್ಭದಲ್ಲಿ ಅನ್ನದಾನವೂ ಆರಂಭವಾಯಿತು. ಮೇ ತಿಂಗಳ ಕೊನೆಯವಾರದಲ್ಲಿ ನಡೆಯುವ ವಾರ್ಷಿಕ ಹಬ್ಬದಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸುತ್ತಾರೆ.

ಆರಾಧ್ಯ ಕುಲದೈವ :

ಇಲ್ಲಿ ತುಂಬು ಜೀವನ ನಡೆಸಬೇಕಿದ್ದ ಹದಿಹರೆಯದ ಯುವತಿ ಪಾಪ, ಪುಣ್ಯಗಳ ಅರಿವಿಲ್ಲದೇ ಕಾಯಿಲೆಗೆ ತುತ್ತಾಗಿ ಮರಣಿಸಿ, ಅನಾಥವಾಗಿ ಸಮಾಧಿಯಾಗಿದ್ದಾಳೆ. ಅವಳು ತಾನು ರೋಗದಿಂದ ಬಸವಳಿದು ಸತ್ತರೂ, ಈಗ ತನ್ನನ್ನು ಆದರಿಸುವವರಿಗೆ ಆರೋಗ್ಯ ಭಾಗ್ಯ ಕರುಣಿಸುವ ಜನಪದ ದೈವವಾಗಿದ್ದಾಳೆ. ಅನಾಥಳಾದರೂ ಸುತ್ತಲು ನೆಲೆಸಿರುವ ಜನರ ಕನಸಿನಲ್ಲಿ ಕಾಣಿಸಿಕೊಳ್ಳುತ್ತಾ ಹೊಸ ಸಂಬಂಧಗಳನ್ನು ಬೆಸೆಯುತ್ತಾ ಅವರಿಗೆ ಆದರಣೀಯಳಾಗಿದ್ದಾಳೆ. ಕಳ್ಳಕುಡಿ ಗ್ರಾಮಸ್ಥರಿಗೆ ಈ ಸಮಾಧಿ `ನಮ್ಮ ಪೂರ್ವಜರು ಬಿಟ್ಟುಹೋದ ಸ್ಮಾರಕ’ವಾಗಿದ್ದರೆ,  ಸಮಾಧಿಯಲ್ಲಿರುವ ಯುವತಿ ಅವರ ‘ಕುಲದೈವ’ವಾಗಿದ್ದಾಳೆ!

ಅಡೆತಡೆಗಳ ಹಾದಿ :

ಇಂದು ಈ ಮರಿತ್ತಿಯಮ್ಮಾಳ್ ಸಮಾಧಿ ದೇವಾಲಯ `ಮರಿತ್ತಿಯಮ್ಮಾಳ್ ಕಲ್ಲರೈ ಕೋವಿಲ್’ದ ಉಸ್ತುವಾರಿಯನ್ನು ಹೊತ್ತುಕೊಂಡು ಅದರ ಅಭಿವೃದ್ಧಿಗೆ ಸಮೀಪದ ಕಳ್ಳಕುಡಿ ಗ್ರಾಮಸ್ಥರ ಸಂಘವು ಶ್ರಮಿಸುತ್ತಿದ್ದರೂ, ಅದು ಕ್ರಮಿಸಿದ ಹಾದಿ ಹೂವಿನೆ ಹಾಸಿಗೆಯಾಗಿರಲಿಲ್ಲ. ಕಳೆದ ಶತಮಾನದ ೮೦ರ ದಶಕದ ಆದಿಯಲ್ಲಿ ಪಾಕ್ಯಸ್ವಾಮಿ ನಾಡಾರ್ ಎಂಬುವವರು, ಈ ಸಮಾಧಿ ಗುಡಿ -`ಮರಿತ್ತಿಯಮ್ಮಾಳ್ ಕಲ್ಲರೈ ಕೋವಿಲ್’ ನನ್ನದು ಎಂದು ಆರೋಪಿಸಿ ಕೋರ್ಟ್ ಕಟ್ಟೆ ಹತ್ತಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, `ಇದು ಎಲ್ಲರಿಗೂ ಸೇರಿದ್ದು, ಅದರ ಉಸ್ತುವಾರಿ ಕಳ್ಳಕುಡಿ ಗ್ರಾಮಸ್ಥರು ಅದರ ಅಭಿವೃದ್ಧಿಗೆ ರಚಿಸಿಕೊಂಡಿರುವ ಸಂಘದ ಕಾರ್‍ಯಕಾರಿ ಸಮಿತಿಗೆ ಸೇರಿದ್ದು ಎಂದು’ ತೀರ್ಪು ನೀಡಿತ್ತು. ಇದರಿಂದ ಮುಖಭಂಗ ಅನುಭವಿಸಿದ ಪಾಕ್ಯಸ್ವಾಮಿ ನಾಡಾರ್, `ಇದು ಹಿಂದುಗಳ ಸಮಾಧಿ ಗುಡಿ. ಇದು ಕ್ರೈಸ್ತರಿಗೆ ಸೇರಿದ್ದಲ್ಲ’ ಎಂದು ಸ್ಥಳೀಯ ಹಿಂದೂಗಳ ತಲೆತುಂಬಿದಾಗ ಆ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಮೂಡಿತು. ಕಾವಡಿ ಹೊತ್ತು ತಂದ ಹಿಂದೂಗಳು, ಇದು ‘ಮರಿತ್ತಿಯಮ್ಮಾಳ್ ಕಲ್ಲರೈ ಕೋವಿಲ್’ ಅಲ್ಲ, ‘ಮಾರಮ್ಮಾಳ ಕಲ್ಲರೈ ಕೋವಿಲ್’ ಎಂದು ವಾದಿಸತೊಡಗಿದರು. ಈ ದೇವಾಲಯದ ಹಕ್ಕಿನ ಕುರಿತ ಪ್ರಕರಣ ಮತ್ತೆ ನ್ಯಾಯಾಲಯದ ಮೆಟ್ಟಿಲೇರಿತು. ಎರಡನೇ ಬಾರಿಯೂ ನ್ಯಾಯಾಲಯ ಈ ಮರಿತ್ತಿಯಮ್ಮಾಳ ಸಮಾಧಿ ದೇವಾಲಯ (ಮರಿತ್ತಿಯಮ್ಮಾಳ್ ಕಲ್ಲರೈ ಕೋವಿಲ್) ಸ್ಥಳೀಯ ಕ್ರೈಸ್ತ ಸಮುದಾಯದವರಿಗೆ ಸೇರಿದ್ದು ಎಂದು ತೀರ್ಪು ನೀಡಿ ಸ್ಥಳೀಯ ಕೆಥೋಲಿಕ ಕ್ರೈಸ್ತರ ಸಾಂಪ್ರದಾಯಿಕ ಹಕ್ಕನ್ನು ಎತ್ತಿ ಹಿಡಿಯಿತು.

ಹಾದಿ ಬದಲಿಸಿದ ಹೆದ್ದಾರಿ:

ಪೂರ್ವ ಕರಾವಳಿ ಹೆದ್ದಾರಿ ಅಗಲಗೊಳಿಸುವ ಪ್ರಸಂಗ ಬಂದಾಗ, ಈ `ಮರಿತ್ತಿಯಮ್ಮಾಳ್ ಕಲ್ಲರೈ ಕೋವಿಲ್’ನ ಅಸ್ತಿತ್ವಕ್ಕೆ ಸಂಚಕಾರ ಬಂದಿತ್ತು. ಅದನ್ನು ಸ್ಥಳಾಂತರಿಸುವ ಪ್ರಸ್ತಾವನೆಗೆ ಚಾಲನೆ ಸಿಕ್ಕಾಗ ಆ ಸಮಾಧಿ ದೇವಾಲಯದ ಸುತ್ತಲಿನ ಗ್ರಾಮಸ್ಥರು ಅದಕ್ಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು. ಸಮಾಧಿ ದೇವಾಲಯದ ‘ಸ್ಥಳಾಂತರ’ ಜನರ ಭಾವನೆಗೆ ಧಕ್ಕೆ ತರುತ್ತದೆ ಎಂಬುದನ್ನು ಮನಗಂಡ ಅಧಿಕಾರಿಗಳು, ನಂತರ ಹೆದ್ದಾರಿಯ ದಿಕ್ಕನೇ ಬದಲಿಸಿದರು! ಇಂದು ಕಳ್ಳಕುಡಿ ಗ್ರಾಮದ ಕ್ರೈಸ್ತರೇ -`ಮರಿತ್ತಿಯಮ್ಮಾಳ್ ಕಲ್ಲರೈ ಕೋವಿಲ್’ನ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಅದರ ಅಭಿವೃದ್ಧಿಗೆ ರಚಿಸಿಕೊಂಡಿರುವ ಸಂಘದ ಕಾರ್‍ಯಕಾರಿ ಸಮಿತಿ ದೇವಾಲಯದ ನಿರ್ವಹಣೆಯ ಜೊತೆಗೆ ಆದಾಯ, ವೆಚ್ಚಗಳ ಲೆಕ್ಕಪತ್ರಗಳನ್ನು ನೋಡಿಕೊಳ್ಳುತ್ತಿದೆ. ಮುಂದಿನ ಅಭಿವೃದ್ಧಿ ಕಾರ್‍ಯಗಳಿಗೆ ಅನುವಾಗುವಂತೆ, ದೇವಾಲಯದ ಆದಾಯದಿಂದ ಸಮಾಧಿಯ ಹತ್ತಿರ ಸ್ವಲ್ಪ ಜಮೀನನ್ನು ಖರೀದಿಸಲಾಗಿದೆ. ಊರ ಜನರ ಅಪಾರ ಆಸಕ್ತಿಯಿಂದ ಮರಿತ್ತಿಯಮ್ಮಾಳ್ ಸಮಾಧಿ ದೇವಾಲಯ, ಅಭಿವೃದ್ಧಿ ಪಥದತ್ತ ದಾಪುಗಾಲಿಡುತ್ತಿದೆ.

ಯತ್ರಾರ್ಥಿಗಳ ತಂಗುದಾಣ :

ಈ ಮರಿತ್ತಿಯಮ್ಮಾಳ್ ಸಮಾಧಿ ಗುಡಿ – `ಮರಿತ್ತಿಯಮ್ಮಾಳ್ ಕಲ್ಲರೈ ಕೋವಿಲ್’ ಬರೀ ತನ್ನಷ್ಟಕ್ಕೆ ತಾನು ನಿಂತಿಲ್ಲ. ಅದು ಕೆಥೋಲಿಕ ಕ್ರೈಸ್ತರ ಪವಿತ್ರ ಕ್ಷೇತ್ರ ಆರೋಗ್ಯ ಮಾತೆ ಮರಿಯಳ ವೇಲಾಂಗಣಿ ಕ್ಷೇತ್ರದೊಂದಿಗೂ ಅವಿನಾಭಾವ ಸಂಬಂಧ ಬೆಳಿಸಿಕೊಂಡಿದೆ. ದಕ್ಷಿಣ ತಮಿಳುನಾಡು ಜಿಲ್ಲೆಗಳಿಂದ ಪಾದ ಯಾತ್ರೆಯಲ್ಲಿ ವೇಲಾಂಗಣಿಗೆ ಹೋಗುವ ಯಾತ್ರಾರ್ಥಿಗಳು ತಪ್ಪದೇ ಈ ಮರಿತ್ತಿಯಮ್ಮಾಳ್ ಗುಡಿಗೆ ಭೇಟಿಕೊಟ್ಟು, ಹರಕೆ ಸಲ್ಲಿಸಿ ತಮ್ಮ ಯಾತ್ರೆಯನ್ನು ಮುಂದುವರಿಸುತ್ತಾರೆ. ಇಲ್ಲಿ ತಂಗುವ ಯಾತ್ರಾರ್ಥಿಗಳಿಗೆ ಮತ್ತು ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಬರುವ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ, ದಾಸೋಹ ಏರ್ಪಡಿಸಲು ಅನುಕೂಲವಾಗುವಂತೆ ಅದಕ್ಕಾಗಿ ದವಸ ಧಾನ್ಯಗಳನ್ನು ಗುಡಿಯ ಉಸ್ತುವಾರಿ ಸಮಿತಿಗೆ ಒಪ್ಪಿಸುವುದು, ಪೂರೈಸುವುದು ಧರ್ಮಭೀರು ಭಕ್ತರಿಗೆ ಒಂದು ಹೆಮ್ಮೆಯ ಸಂಗತಿಯಾಗಿದೆ.

ಫ್ರಾನ್ಸಿಸ್. ಎಂ.ನಂದಗಾವ್. ಎಂ..

ನಂದನ, ೨ಎಂ.೨೨೫ ಸೆಕೆಂಡ್ ಮೇಯಿನ್,

ಕಸ್ತೂರಿನಗರ, ಎನ್ ಜಿ ಇ ಎಫ್ ಪೂರ್ವ,

ಕಲ್ಯಾಣನಗರ ಪೋಸ್ಟ್,

ಬೆಂಗಳೂರು-೫೬೦೦೪೩

 

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram