ಫಾದರ್.ಡಾ.ದಯಾನಂದ ಪ್ರಭು

Advertisements
Share

ಫಾದರ್. ಡಾ. ದಯಾನಂದ ಪ್ರಭು ಅವರು ಕನ್ನಡ ಕ್ರೈಸ್ತ ಸಾಹಿತಿಗಳಲ್ಲಿ ಒಬ್ಬರು. ಇವರು ಮೈಸೂರಿನ ಧರ್ಮಕ್ಷೇತ್ರಕ್ಕೆ ಸೇರಿದ ಗುರುಗಳು. ಇವರು ಪ್ರಸ್ತುತವಾಗಿ ಮೈಸೂರಿನ ಮೆಟಗಳ್ಳಿ ಎಂಬ ಊರಿನ ಸಂತ ಜೂದ್ ತೆದೆಯಸ್ ದೇವಾಲಯದಲ್ಲಿ ವಿಚಾರಣೆಯ ಗುರುವಾಗಿ ತಮ್ಮ ಸೇವೆಯನ್ನು ನಿರ್ವಹಿಸುತ್ತಿದ್ದಾರೆ. ವಂದನೀಯ ಫಾದರ್ ದಯಾನಂದ ಪ್ರಭು 23.11.1948ರಲ್ಲಿ ಮೈಸೂರಿನಲ್ಲಿ ಜನಿಸಿದರು ಇವರ ಪೂರ್ವಜರು ಮಂಗಳೂರಿನವರು. ಮೈಸೂರಿಗೆ ಬಂದು ನೆಲೆಸಿ ಕೆಲವು ದಶಕಗಳಾಗಿವೆ. ತಂದೆ ಶ್ರೀ ಮಾರ್ಟಿನ್ ಡಿಸೋಜ. ತಾಯಿ ಶ್ರೀಮತಿ ರೋಸ್ ಮೇರಿ. ದಂಪತಿಗಳ ಆರು ಜನ ಮಕ್ಕಳಲ್ಲಿ ದಯಾನಂದ ಪ್ರಭು ಅವರು ಮೂರನೇಯವರಾಗಿದ್ದಾರೆ. ಅವರ ಒಬ್ಬ ತಂಗಿ ನಿರ್ಮಲ ಮಾತೆಯ (SಒಒI) ಧಾರ್ಮಿಕ ಸಭೆಯಲ್ಲಿ ಕನ್ಯಾಸ್ತ್ರೀ ಆಗಿ ಕ್ರಿಸ್ತ ಪ್ರಭುವಿನ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಶಾಲೆಯ ಪಾಠ ಪ್ರವಚನಗಳ ಜೊತೆಗೆ ತಂದೆ ತಾಯಿಯರ ನಿಷ್ಠೆ, ನಿಯಮ ಬದ್ಧ ಬದುಕು, ಪೂಜೆ ಪುರಸ್ಕಾರಗಳು ಇವರ ಮುಗ್ಧಮನಸ್ಸಿನ ಮೇಲೆ ಅಚ್ಚೊತ್ತಿದ್ದವು. ಶಾಲೆಯ ದಿನಗಳಲ್ಲೇ ಕಥೆ, ಕಾದಂಬರಿಗಳನ್ನು ಓದುವ ಗೀಳು ರೂಢಿಸಿಕೊಂಡದ್ದು, ಕಣ್ಣಿಗೆ ಬಿದ್ದ ಕಥೆಗಳನ್ನೆಲ್ಲಾ ಓದುವ, ಕವನಗಳನ್ನು ಕಂಠ ಪಾಠ ಮಾಡುವುದು, ‘ದೂತ’, ಮತ್ತು ‘ಕರ್ನಾಟಕತಾರೆ’ಗಳನ್ನು ತಪ್ಪದೆ ಓದುತ್ತಿದ್ದ ಹವ್ಯಾಸವನ್ನು ಬಾಲ್ಯದಿಂದಲೇ ರೂಢಿಸಿಕೊಂಡಿದ್ದರೆಂಬುದು ಅವರ ಸಹೋದರಿಯಿಂದ ತಿಳಿಯಿತು. ವಂದನೀಯರಾದ ವಲೇರಿಯನ್ ಡಿಸೋಜ, ಮಾರ್ಸೆಲ್ ಪಿಂಟೊ ಮತ್ತು ಫಾ.ಐ.ಅಂತಪ್ಪ ಈ ಪ್ರಮುಖರ ಲೇಖನಗಳು ಇವರ ಮನಸ್ಸಿಗೆ ಮೆಚ್ಚುಗೆಯಾಗಿದ್ದವು. ಹೀಗೆ ನೂರಾರು ವಿಚಾರಗಳನ್ನು ಮನಸ್ಸಿನೊಳಗೆ ತುಂಬಿಕೊಂಡು ಬರೆಯಲು ಪ್ರಾರಂಭಿಸಿದರು. ಬಾಲ್ಯದಲ್ಲಿ ಬರೆದದ್ದೆಲ್ಲಾ ಲೇಖನಗಳಾಗಬೇಕೆಂದಿಲ್ಲ. ಬರವಣಿಗೆಯನ್ನು ಕುದುರಿಸುವ ಮಾರ್ಗದತ್ತ ಕರೆದೊಯ್ಯುವ ಸಾಧನಗಳಾಗಬೇಕಷ್ಟೆ ಎಂಬುದು ಇವರ ಆಸಕ್ತಿಯಿಂದ ತಿಳಿಯಬಹುದು.

ಫಾ. ದಯಾನಂದ ಪ್ರಭು ಅವರು ಒಂಬತ್ತನೇ ತರಗತಿಯಲ್ಲಿ ಓದುತ್ತಿರುವಾಗಲೇ ತಮ್ಮ ಅಣ್ಣ ಶ್ರೀ ಸಿಲ್ವೆಸ್ಟರ್ ಅವರ ಸಹಾಯದಿಂದ ‘ಪೊಟಾಕ್ ಮಾರ್’ (ಹೊಟ್ಟೆಗೆ ಹೊಡೆತ) ಎಂಬ ಕಥೆಯೊಂದನ್ನು ತಮ್ಮ ಮಾತೃ ಭಾಷೆ ಕೊಂಕಣಿಯಲ್ಲಿ ಬರೆದು ‘ರಾಕ್ಣೋ’ ವಾರ ಪತ್ರಿಕೆಗೆ ಕಳಿಸಿದರು ಅದು ಆ ಪತ್ರಿಕೆಯ ಮಕ್ಕಳ ವಿಭಾಗದಲ್ಲೇ ಪ್ರಕಟವಾಗಿತ್ತು ಅದನ್ನು ಕಂಡ ಬಾಲಕ ಪ್ರಭುವಿಗೆ ಆನಂದವಾಯಿತು. ಇದರಿಂದ ಪರೋಕ್ಷವಾಗಿ ಬರೆಯಲು ಪ್ರೇರಿತರಾದರು. ಅಂದಿನಿಂದ ಇವರ ಬರವಣಿಗೆ ಪ್ರಾರಂಭವಾಯಿತೆನ್ನಬಹುದು. ಮೈಸೂರಿನ ಕಿರಿಯ ಗುರುಮಠವನ್ನು ಪ್ರವೇಶಿಸಿದ್ದ ದಯಾನಂದಪ್ರಭು ತಮ್ಮ ಭಾವನೆಗಳಿಗೆ ಚಾಲನೆ ಕೊಡಲು ಪ್ರಾರಂಭಿಸಿದರು. ಯಾವ ಪತ್ರಿಕೆಗಳನ್ನು ಓದಿ ಪ್ರೇರಿತರಾಗಿದ್ದರೋ ಅದೇ ಪತ್ರಿಕೆಗಳಿಗೆ ನಿರಂತರವಾಗಿ ಬರೆಯುತ್ತಾ ಹೋದರು. ಮುಂದೆ ಬೆಂಗಳೂರಿನ ಸಂತ ರಾಯಪ್ಪರ ಹಿರಿಯ ಗುರುಮಠಕ್ಕೆ ಬರುವ ಹೊತ್ತಿಗಾಗಲೇ ಇವರ ಕೈ ಪಳಗಿ, ಬರವಣಿಗೆ ರೂಢಿಸಿತ್ತು. ಬರೆದು, ಹರಿದು, ತಿದ್ದಿ, ತೀಡಿ ಕೈ ಫಳಗಿಸಿಕೊಂಡ ವಂದನೀಯರು ಡೀಕನ್ ಆಗಿ ಹೊರ ಬರುವ ಹೊತ್ತಿಗಾಗಲೇ ಸುಮಾರು 400 ಸಣ್ಣ ಪುಟ್ಟ ಲೇಖನಗಳನ್ನು ಬರೆದಿದ್ದರು.

ಪ್ರಥಮ ವರ್ಷದ ದೈವಶಾಸ್ತ್ರ ವಿದ್ಯಾರ್ಥಿಯಾಗಿದ್ದಾಗಲೇ ಇಂಗ್ಲೀಷಿನ ‘ಎಕ್ಸೈಲ್ಡ್’ ಎಂಬ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದರು. ಅದನ್ನು ‘ಕ್ರಿಸ್ತ ಗುರು ಕೊಲೆಗಾರರೆ’ ಎಂಬ ಹೆಸರಿನಲ್ಲಿ ಕರ್ನಾಟಕ ತಾರೆ ಪ್ರಕಟಿಸಿತ್ತು. ಆಮೇಲೆ 1976ರಲ್ಲಿ ಅದು ಪುಸ್ತಕ ರೂಪದಲ್ಲಿ ಪ್ರಕಟವಾಯಿತು. ಇದೇ ಪುಸ್ತಕ 1977ರಲ್ಲಿ ‘ಗಡಿಪಾರು’ ಎಂಬ ಹೆಸರಿನಿಂದ ಮರುಮುದ್ರಣಗೊಂಡಿತು. ಕನ್ನಡ ಭಾಷೆಯನ್ನು, ಸಾಹಿತ್ಯವನ್ನು, ಪ್ರೀತಿಸುವ ಈ ಸಹೃದಯ ಕ್ರೈಸ್ತ ಲೇಖಕ-ಗುರು, ಕನ್ನಡಕ್ಕೆ ತಮ್ಮನೇ ತಾವು ಅರ್ಪಿಸಿಕೊಂಡು ಸುಮಾರು ಒಂದು ದಶಕಕ್ಕೂ ಮೀರಿ ಬರೆಯುತ್ತಾ ಬಂದಿದ್ದಾರೆ. ಕ್ರೈಸ್ತ ಧವರ್i ಪ್ರಚಾರ ಕಾರ್ಯ ನಡೆಯಬೇಕೆಂದರೆ ಕನ್ನಡದಲ್ಲಿ ಕ್ರೈಸ್ತ ಸಾಹಿತ್ಯ ಅಪಾರವಾಗಿ ಬೆಳೆಯಬೇಕು ಎಂಬ ಅಕಾಂಕ್ಷೆಯಿಂದ ಕ್ರೈಸ್ತಧರ್ಮ ಸಂಬಂಧಿತ ಕೃತಿಗಳನ್ನು ರಚಿಸುತ್ತಾ ಬಂದಿರುವರು. ಗಡಿಪಾರು’ (1977), ‘ಕ್ರಿಸ್ತ ನೆಡೆಗೆ’ (1977), ‘ಯೇಸು ಮತ್ತು ನಾನು’ (1978), ‘ಗೊಲ್ಗೊಥ’ (1987), ‘ಹದಿಹರೆಯದ ರೂಪರೇಷೆಗಳು’ (1989), ‘ಮೈಸೂರ್ ಸಂಸ್ಥಾನದ ಕ್ರೈಸ್ತರ ಇತಿಹಾಸ’ (1994) ‘ಮಾರಕರೋಗ ಏಡ್ಸ್’ (1994), ‘ಧ್ಯಾನ ಸಂಗಮ’ (1996), ‘ಯೇಸು ಕ್ರಿಸ್ತರ ಕೊನೆಯ 24 ಗಂಟೆಗಳು’, ‘ಮಾತೆ ಮೇರಿಯಲ್ಲಿ ಪ್ರಾಮಾಣಿಕ ಭಕ್ತಿ’ (2000), ‘ಕ್ರೈಸ್ತಜನಪದ ಗೀತೆಗಳು’ (1984), ‘ಕಪಟಮುಖಿ’ (1988) ‘ಭುವನಜ್ಯೋತಿ’( 2006) ಕೃತಿಗಳನ್ನು ಬರೆದಿದ್ದಾರೆ. ‘ಸಂಸ್ಕಾರ ವಿಧಿಗಳು ಮತ್ತು ವಿವಿಧ ಸಂದರ್ಭಗಳ ಆಶೀರ್ವಚನಗಳು’ (1982) ಎಂಬ ಆಶೀರ್ವಚನ ಪುಸ್ತಕವನ್ನು ಇತರರೊಡನೆ ಕೂಡಿ ಬರೆದಿದ್ದಾರೆ. ಸ್ವತಃ ಲೇಖಕರಾದ ಪ್ರಭುಗಳು ‘ಕ್ರೈಸ್ತ ಜನಪದ ಗೀತೆಗಳು’ (1983) ಮತ್ತು ‘ಕಪಟಮುಖಿ’ (1987) ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ಅಷ್ಟೇ ಅಲ್ಲ ‘ದೂತ’ ಪತ್ರಿಕೆಯ ಸಂಪಾದಕ-ಪ್ರಕಾಶಕ-ವ್ಯವಸ್ಥಾಪಕರಾಗಿ ಸುಮಾರು 12 ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿ, ದೂತನನ್ನು ಪೋಷಿಸಿ ಬೆಳೆಸಿದ್ದಾರೆ.

‘ಗಡೀಪಾರು’ ಒಂದು ವಿಶಿಷ್ಟವಾದ ಕೃತಿ. ಇದನ್ನು ಓದಿದ ಯಾರು ಇದೊಂದು ಅನುವಾದ ಎಂದು ಹೇಳಲಾಗದ ರೀತಿ ಅನುವಾದಗೊಂಡಿರುವುದೇ ಇದರ ವೈಶಿಷ್ಟ್ಯ. ಪಾಪನಿವೇದನೆಯ ಸಮಯದಲ್ಲಿ ಕೊಲೆಗಡುಕ ಕ್ರೈಸ್ತನೊಬ್ಬ ತಾನೆಸಗಿದ ಕೊಲೆಯ ಬಗ್ಗೆ ಕ್ರೈಸ್ತ ಗುರುವಿಗೆ ಹೇಳಿ ಪ್ರಾಯಶ್ಚಿತ ಸ್ವೀಕರಿಸುತ್ತಾನೆ. ಕ್ರೈಸ್ತ ಗುರು ಆ ಗುಟ್ಟನ್ನು ವಿಶ್ವಾಸದಿಂದ ಗೋಪ್ಯವಾಗಿಟ್ಟುಕೊಳ್ಳುತ್ತಾನೆ. ಪೋಲಿಸರು ಆ ಕೊಲೆಗಾರನ ಬಗ್ಗೆ ಮಾಹಿತಿ ಸಂಗ್ರಹಿಸುವ ಸಲುವಾಗಿ ಗುರುವನ್ನು ಬಂಧಿಸಿ ವಿಚಾರಿಸುತ್ತಾರೆ. ಹಾಗಾದರೂ ಗುಟ್ಟು ರಟ್ಟಾಗುವುದೇ ಇಲ್ಲ ಈ ಹಿನ್ನೆಲೆಯಲ್ಲಿ ರಚಿತವಾದ ಇಂಗ್ಲೀಷ್ ಕೃತಿಯ ಕನ್ನಡಾನುವಾದವೇ ಗಡೀಪಾರು. ಕಲ್ಕತ್ತದ ಇ.ಲೇ. ಜೋಲಿ ಎಂಬುವರು ಬರೆದ ‘ಅhಡಿisಣ is ಣhe ತಿಚಿಥಿ’ ಎಂಬ ಪುಸ್ತಕದ ಕನ್ನಡನುವಾದವೇ ‘ಕ್ರಿಸ್ತನೆಡೆಗೆ’. ಸರಳ ಸುಂದರ ಶೈಲಿಯಲ್ಲಿ ಅನುವಾದವಾಗಿರುವ ಈ ಕೃತಿಯ ಐದು ಸಾವಿರ ಪ್ರತಿಗಳು ವಿತರಣೆಯಾಗಿವೆ ಎಂದರೆ ಆ ಕೃತಿಯ ಮಹತ್ವವೇನೆಂದು ತಿಳಿಯುತ್ತದೆ. ಸುಮಾರು 168 ಪುಟಗಳ ಈ ಕೃತಿ ಭಗವಾನ್ ಯೇಸು ಪ್ರಭುವನ್ನು ಯಥಾವತ್ತಾಗಿ ಚಿತ್ರಿಸಿ, ಕಥೋಲಿಕ ಧರ್ಮಸಭೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ. ಯೇಸುವಿನ ಶಿಷ್ಯನಾಗಿ ಕ್ರೈಸ್ತ ಜೀವನವನ್ನು ಜೀವಿಸಲಿಚ್ಚಿಸುವವನು ಏನೆಂದು ತಿಳಿದುಕೊಳ್ಳತಕ್ಕದ್ದು ಎಂಬುವುದನ್ನು ಈ ಪುಸ್ತಕದಲ್ಲಿ ಸರಳವಾಗಿ ನಿರೂಪಿಸಲಾಗಿದೆ. ‘ಯೇಸು ಮತ್ತು ನಾನು’ ಪ್ರಥಮ ಪರಮಪ್ರಸಾದ ಸ್ವೀಕರಿಸುವ ಮಕ್ಕಳಿಗಾಗಿ ತಯಾರಿಸಿದ ಕೃತಿ. ಕೇವಲ ಆರು ವರ್ಷಗಳಲ್ಲಿ ಇದರ 1500 ಪ್ರತಿಗಳು ಮಾರಾಟವಾಗಿವೆ ಎಂದರೆ ಈ ಕೃತಿಯ ಉಪಯುಕ್ತತೆ ಎಷ್ಟೆಂದು ಊಹಿಸಿ! ಅಂಗೈ ಅಗಲದ 40 ಪುಟಗಳಿರುವ ಈ ಕೈಪಿಡಿಯಲ್ಲಿ ಪ್ರಧಾನವಾಗಿ ಎರಡು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಧರ್ಮದ ಅತೀ ಮುಖ್ಯ ವಿಷಯಗಳನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದ್ದು, ಪ್ರಶ್ನೋತ್ತರ ನಿರೂಪಣೆ ಇದೆ. ಎರಡನೆಯ ಭಾಗದಲ್ಲಿ ಮಕ್ಕಳು ಕಂಠಪಾಠ ಮಾಡಬೇಕಾದ ಪ್ರಾರ್ಥನೆಗಳನ್ನು ಕೊಡಲಾಗಿದೆ. ಅಲ್ಲಲ್ಲಿ ರೇಖಾ ಚಿತ್ರಗಳಿದ್ದು ಮಕ್ಕಳ ಕುತೂಹಲವನ್ನು ಕೆರಳಿಸುತ್ತದೆ. ‘ಗೊಲ್ಗೊಥಾ’ ಯೇಸು ಪ್ರಭುವಿನ ಅಂತ್ಯಕಾಲದ ಕಥೆಯನ್ನೊಳಗೊಂಡ ಪುಸ್ತಕ. 74 ಪುಟಗಳ ಈ ಕೃತಿ ಫಾದರ್ ದಯಾನಂದ ಪ್ರಭು ಅವರ ಯಶಸ್ಸಿಗೆ ಕಾರಣವಾಗಿದೆ. ಯೇಸುಕ್ರಿಸ್ತನ ಅಂತ್ಯವನ್ನು ಚಿತ್ರಿಸುವ ಗೊಲ್ಗೊಥಾ ಒಂದು ಹೃದಯಸ್ಪರ್ಶಿಯಾದ ಕೃತಿ. ಒಟ್ಟು ಕೃತಿಗೆ ನೀಳ್ಗತೆಯ ಓಟ ಸಿದ್ಧಿಸಿದೆ. ಒಳಗಿರುವ ಚಿತ್ರಗಳು ಪರಿಣಾಮಾಕಾರಿಯಾಗಿವೆ. ನಿರಪರಾಧಿಯಾದ ಏಸುವನ್ನು ಯೆಹೂದ್ಯ ಮುಖಂಡರು ಶಿಲುಬೆಗೇರಿಸಿದ ವೃತ್ತಾಂತವನ್ನು ನೆನೆದಾಗಲೆಲ್ಲ ಮನಸ್ಸು ಕರಗಿ ನೀರಾಗುತ್ತದೆ.

ಯೇಸುವಿನ ಕರುಣಾರಸಭರಿತವಾದ ಅಂತ್ಯಕಾಲದ ಬಗ್ಗೆ ಖಚಿತವಾಗಿ ತಿಳಿಯಬೇಕೆಂದು ಬಯಸುವ ಎಲ್ಲಾ ಸಹೃದಯರಿಗೂ ಈ ಕೃತಿ ಪ್ರಿಯವೆನಿಸುವುದರಲ್ಲಿ ಸಂಶಯವಿಲ್ಲ ಎಂದು ಡಾ.ಕೆ.ಅನಂತರಾಮು ಅವರು ಆಡಿರುವ ಮಾತುಗಳಲ್ಲಿ ಸತ್ಯವಿದೆ. ‘ಹದಿಹರೆಯದ ರೂಪುರೇಷೆಗಳು’ ಕೃತಿಯಲ್ಲಿ ಹದಿಹರೆಯದವರ ರೂಪುರೇಷೆಗಳ ವಿವರವಾದ ವಿವರಗಳಿದ್ದು, ಹದಿಹರೆಯದವರ ಕೆಲವು ವಿಶಿಷ್ಟ ನಡತೆ ಮತ್ತು ಪಿಡುಗುಗಳನ್ನು ಗುರುತಿಸುತ್ತಾ, ವಿದ್ಯೆಯಿಂದ ಹಿಡಿದು ವಿವಾಹದವರೆಗಿನ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿ ಯುವ ಜನತೆಗೆ ಮಾರ್ಗದರ್ಶನ ನೀಡಿದ್ದಾರೆ. ಹದಿಹರೆಯದವರಲ್ಲಿ ಸಹಜವಾಗಿ ಕಾಣಿಸಿಕೊಳ್ಳುವ ದೈಹಿಕ ಬದಲಾವಣೆಗಳು, ಮಾನಸಿಕ ಗೊಂದಲಗಳು, ಅವರ ಕನಸುಗಳು ವಾಸ್ತವಗಳು, ಮೊದಲಾದವುಗಳನ್ನು ಗಮನದಲ್ಲಿಟ್ಟುಕೊಂಡು ಬರೆದ ಕೈಪಿಡಿ. ಈ ಪುಸ್ತಕ ಕೇವಲ ಯುವ ಜನಾಂಗವನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡಿಲ್ಲ. ಹೆತ್ತವರು, ಪೋಷಕರು, ಉಪಾಧ್ಯಾಯರು ಮಿಕ್ಕ ಹಿರಿಯರಿಗೂ ಕೆಲವು ಭಾರಿ ಕಿವಿ ಮಾತನ್ನು ಹೇಳುವಂತ್ತಿದೆ ಈ ಹೊತ್ತಿಗೆ. ‘ದೂತ 60’ ಎಂಬ ಸ್ಮರಣ ಸಂಚಿಕೆಯೊಂದನ್ನು ಸುಂದರವಾಗಿ ಹೊರತಂದು ದೂತ ನಡೆದುಬಂದ ದಾರಿಯನ್ನು ಗುರುತಿಸುವ ಮಹಾತ್ಕಾರ್ಯ ಮಾಡಿರುವ ಈ ಗುರುಗಳು 1985ರಲ್ಲಿ ಕನ್ನಡದಲ್ಲಿ ಎಂ.ಎ.ಪದವಿಗಳಿಸಿದ್ದಾರೆ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಹಾಗೂ ಇತಿಹಾಸದಲ್ಲಿ ಎಂ.ಎ.ಪದವಿ ಪಡೆದಿದ್ದಾರೆ. ಕ್ರೈಸ್ತ ಹಬ್ಬಗಳನ್ನು ಕುರಿತು ಕನ್ನಡ ವಿಶ್ವಕೋಶಕ್ಕೆ ಲೇಖನ ಬರೆದು ಕೊಟ್ಟಿದ್ದಾರೆ. ರೇಡಿಯೋದಲ್ಲಿ ಕ್ರಿಸ್‍ಮಸ್ ಭಾಷಣ, ಮಕ್ಕಳ ಮಂಟಪದ ಕಾರ್ಯಕ್ರಮ ಹಾಗೂ ಚಿಂತನೆಗಳನ್ನು ಬರೆದುಕೊಟ್ಟಿದ್ದಾರೆ. ಸುಮಾರು 10-12 ಹಾಡುಗಳನ್ನು ಬರೆದು ಕ್ರೈಸ್ತ ಸಂಗೀತ ಸಾಹಿತ್ಯದಲ್ಲೂ ಕೈಯಾಡಿಸಿದ್ದಾರೆ. ಬರೆಯುವ ಪ್ರತಿಭೆಯನ್ನು ದೇವರು ಕೊಟ್ಟದ್ದು ಅದನ್ನು ದೇವರ ಮಹಿಮೆಗಾಗಿಯೇ ಉಪಯೋಗಿಸುವುದು ನನ್ನ ಕರ್ತವ್ಯ ಎಂದು ವಿನಯದಿಂದ ಹೇಳುವ ವಂದನೀಯರು ಬೈಬಲ್ಲಿನ ಹೊಸ ಒಡಂಬಡಿಕೆಯ ಮೂರು ಪತ್ರಗಳನ್ನು ಮತ್ತು ನಾಲ್ಕು ಪ್ರವಾದಿಗಳ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ತರಂಗ ಮತ್ತು ವಾರಪತ್ರಿಕೆಯಲ್ಲೂ ಇವರು ಲೇಖನಗಳನ್ನು ಬರೆದಿರುವರು. ಮೈಸೂರು ವಿಶ್ವವಿದ್ಯಾಲಯದ ‘ಕ್ರಿಶ್ಚಿಯಾನಿಟಿ’ ಎಂಬ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ಸುಮಾರು ಮೂರು ವರ್ಷಗಳ ಸೇವೆಯನ್ನು ಸಲ್ಲಿಸುವ ಮೂಲಕ ತಮ್ಮ ಕ್ರೈಸ್ತವಿಚಾರ ಧಾರೆಯನ್ನು ಹಂಚಿಕೊಂಡಿದ್ದಾರೆ. ವಂದನೀಯ ಫಾದರ್ ದಯಾನಂದ ಪ್ರಭುರವರು ಶಾಂತ ಸ್ವಭಾವದ ಸಹೃದಯಿ. ಯುವಕರೊಂದಿಗೆ ಬಹುಕಾಲವನ್ನು ಕಳೆಯುತ್ತಿದ್ದ ಇವರು ಹದಿಹರೆಯದವರಿಗೆ ಕಿವಿ ಮಾತು ಹೇಳುವ ಕೃತಿ ರಚಿಸಿ, ಯುವಕರ ಕೃತಜ್ಞತೆಗೆ ಪಾತ್ರರಾಗಿದ್ದಾರೆ. ಅಲ್ಲದೇ ಇತ್ತೀಚೆಗೆ ಅವರು ರಚಿಸಿರುವ ‘ಸಚಿತ್ರ ಬೈಬಲ್’ ಎಂಬ ಬೈಬಲ್ ಆಧಾರಿತ ಪುಸ್ತಕ ಸರ್ವರ ಮನಸೆಳೆದಿರುವುದು ಸಂತಸದ ಸಂಗತಿ. ಫಾದರ್ರವರ ಸಹೋದರ ಸಿಲ್ವೆಸ್ಟರ್ ಅವರು ಕೊಂಕಣಿಯ ಪ್ರಖ್ಯಾತ ಲೇಖಕರಾದರೆ; ಡಾ.ದಯಾನಂದ ಪ್ರಭುರವರು ಕನ್ನಡ ಕ್ರೈಸ್ತ ಲೇಖಕರಲ್ಲಿ ಒಬ್ಬರು.

ಯೇಸುಕ್ರಿಸ್ತರಲ್ಲಿ ವಿಶ್ವಾಸವೆಂದರೆ ಅದೊಂದು ದೇವರ ಕೊಡುಗೆ. ಯಾರೂ ದೇವರ ಕುರಿತು ಆಳವಾಗಿ ತಿಳಿದುಕೊಳ್ಳಲು ಬಯಸುತ್ತಾನೋ ಆತನು ದೇವರ ಬೆಳಕನ್ನು ಸ್ವೀಕರಿಸಲು ಪಾತ್ರ ಮತ್ತು ಸ್ವಾರ್ಥ ತ್ಯಾಗದಿಂದ ಸ್ವಯಂ ಸಿದ್ಧನಾಗಬೇಕು ಎಂದು ನಂಬಿರುವ ವಂದನೀಯ ಫಾದರ್ ದಯಾನಂದ ಪ್ರಭು ಹಮ್ಮು ಬಿಮ್ಮಿಲ್ಲದೆ, ಬೀಗದೆ, ಕನ್ನಡ ಚಳುವಳಿ ಸಕ್ರಿಯಾವಾದ ಕ್ರಿಯಾತ್ಮಕ ಚಳುವಳಿಯಾಗಬೇಕೆ ಹೊರತು, ಕೇವಲ ಹೆಸರು ಮತ್ತು ಭಾಷೆ ಎಂಬ ಶುಲ್ಕ ಧೋರಣೆಯಾಗಬಾರದು ಎಂದು ನುಡಿಯುತ್ತಾ, ಕ್ರೈಸ್ತ ಸಾಹಿತ್ಯಲೋಕದ ಕಣ್ಮಣಿಯಾಗಿದ್ದಾರೆ ಮತ್ತು ಕನ್ನಡ ಕ್ರೈಸ್ತರ ಚಿಲುಮೆಯಾಗಿದ್ದಾರೆ. ಇವರು ಇನ್ನೂ ಅಧಿಕವಾಗಿ ಕನ್ನಡ ಸಾಹಿತ್ಯವನ್ನು ಬೆಳೆಸಲಿ ಎಂದು ಹಾರೈಸುವ.

ಡಾ. ಸಿಸ್ಟರ್ ಪ್ರೇಮ (ಎಸ್.ಎಮ್.ಎಮ್.ಐ)

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram