ಕಥೋಲಿಕ ಮಹಿಳೆಯರಿಗಿದು ಸಂಭ್ರಮದ ಕಾಲ

Advertisements
Share

ಎಲ್ಲರೊಳಗೊಂದಾಗು ಮಂಕುತಿಮ್ಮಪ್ರತಿವರ್ಷದಂತೆ ಈ ವರ್ಷವೂ ಮಾರ್ಚ್ ಎಂಟು ಬಂದಿದೆ. ಅಂದು, ಎಲ್ಲೆಡೆ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಅದು, ರಾಜಕೀಯ, ಆರ್ಥಿಕ, ಸಾಮಾಜಿಕ, ಕ್ರೀಡೆ, ವೈದ್ಯಕೀಯ ಮೊದಲಾದ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧಿಸಿದ ಮೈಲಿಗಲ್ಲುಗಳನ್ನು ಮಗದೊಮ್ಮೆ ಜಗತ್ತಿನ ಮುಂದೆ ತೆರೆದಿಡುವ ಸಂಭ್ರಮದ ದಿನ. ಇದರೊಂದಿಗೆ ಮಹಿಳಾ ದಿನದ ಆಚಾರಣೆ ಎಂದರೆ, ಮಹಿಳೆಯರು ಇನ್ನು ಮುಂದೆ ಸಾಗಬೇಕಾದ ಗುರಿ ಸಾಧನೆಯ ಸಿದ್ಧತೆಗಳ ಬಗ್ಗೆ ಚಿಂತನ ಮಂಥನ ನಡೆಸುವ ಕಾಲವೂ ಹೌದು.
ಆಧುನಿಕ ಜಗತ್ತಿನಲ್ಲಿ ನಮ್ಮ ನಾಡಿನ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದಂತೆ, ಪುರುಷರ ಪರಮಾಧಿಕಾರ ಎಂದು ಪರಿಗಣಿಸಲಾಗುತ್ತಿದ್ದ ಪೂಜಾರಿಕೆ ವೃತ್ತಿಯನ್ನು ಕೈಗೊಳ್ಳುತ್ತಿದ್ದಾರೆ ಮತ್ತು ಮಠಮಾನ್ಯಗಳ ನೇತೃತ್ವವನ್ನೂ ವಹಿಸುತ್ತಿದ್ದಾರೆ. ಪೂಜೆ ಪುರಸ್ಕಾರಗಳೊಂದಿಗೆ ಹೋಮಗಳನ್ನೂ ಮಾಡುತ್ತಿದ್ದಾರೆ, ಸಂಸ್ಕಾರಗಳನ್ನು ನಡೆಸಿಕೊಡುತ್ತಿದ್ದಾರೆ. ಪುರಾತನ ಕಾಲದಲ್ಲಿ ಈಜಿಪ್ತ, ಸುಮೇರಿಯನ್ ಮೊದಲಾದ ಸಂಸ್ಕøತಿಗಳಲ್ಲಿ ಮಹಿಳಾ ಪೂಜಾರಿಣಿಯರು ಇದ್ದರು, ಎಂದು ಹೇಳಲಾಗುತ್ತದೆ. ಆದರೆ, ಬಹುತೇಕ ಸಮಾಜಗಳಲ್ಲಿ ದೇವಾಲಯದ ಗರ್ಭಗುಡಿಗಳಿಂದ, ಮಸೀದಿ, ಚರ್ಚ ಪೂಜಾಂಕಣಗಳಿಂದ ಮಹಿಳೆಯರನ್ನು ಇನ್ನೂ ದೂರವಿರಿಸಲಾಗಿದೆ.
ಜನಸಂಖ್ಯಾ ಸ್ಫೋಟದಿಂದ ಪ್ರಪಂಚ ಬಸವಳಿಯುತ್ತಿದ್ದರೂ, ಸರ್ಕಾರಗಳ ಕಾನೂನುಬದ್ಧ ಗರ್ಭಪಾತವನ್ನು ವಿರೋಧಿಸುವ ರೋಮನ್ ಕಥೋಲಿಕ ಚರ್ಚಅನ್ನು ಕಟ್ಟಾ ಸಂಪ್ರದಾಯವಾದಿಗಳ ಚರ್ಚು ಎಂದು ಗುರುತಿಸಲಾಗುತ್ತದೆ. ಆದರೆ, ಈ ಸಾಲಿನ ಮಹಿಳಾ ದಿನಚರಣೆಯ ದಿನ, ಅಂಥ ಕಟ್ಟಾ ಸಂಪ್ರದಾಯದ ಕಥೋಲಿಕ ಚರ್ಚಿಗೆ ಸೇರಿರುವ ಕ್ರೈಸ್ತ ಮಹಿಳೆಯರಿಗೆ ತುಂಬಾ ವಿಶೇಷವಾದ ದಿನವಾಗಿದೆ. ಈ ದಿನ ಕಥೋಲಿಕ ಕ್ರೈಸ್ತ ಮಹಿಳೆಯರು ಎಲ್ಲಿಲ್ಲದ ಸಂಭ್ರಮವನ್ನು ಹಂಚಿಕೊಳ್ಳುವ ದಿನವಾಗಿದೆ.
ಮೂಲತಃ ಪುರುಷ ಪ್ರಾಬಲ್ಯವನ್ನು ಹೊಂದಿರುವ ಕಥೋಲಿಕ ಕ್ರೈಸ್ತರ ಧಾರ್ಮಿಕ ಕ್ಷೇತ್ರದಲ್ಲಿ ದೊಡ್ಡ ದೊಡ್ಡ ಸುಧಾರಣೆಗಳಿಗೆ, ಪ್ರಮುಖ ಬದಲಾವಣೆಯ ಮಾರ್ಗಗಳಿಗೆ ಇಂಬು ಕೊಡುವ ಮಹತ್ವದ ಘಟನೆಗಳು ಈ ವರ್ಷದ ಆರಂಭದಿಂದಲೇ ಬಿಚ್ಚಿಕೊಳ್ಳತೊಡಗಿವೆ. ಅದರಿಂದ ಕಥೋಲಿಕ ಧರ್ಮಸಭೆಯಲ್ಲಿ ಅರ್ಧದಷ್ಟು ಸಂಖ್ಯಾ ಬಾಹುಳ್ಯವುಳ್ಳ ಕಥೋಲಿಕ ಮಹಿಳೆಯರು ಸಂತೋಷ, ಸಂಭ್ರಮ ಪಡುವಂತಾಗಿದೆ.
ಜಗತ್ತಿನಾದ್ಯಂತ ಹರಡಿರುವ ಕಥೋಲಿಕ ಕ್ರೈಸ್ತರ ವಿಶ್ವಗುರು ಪೋಪ ಫ್ರಾನ್ಸಿಸ್ ಅವರು, ಮಹಿಳೆಯೊಬ್ಬಳಿಗೆ ಕಥೋಲಿಕ ಧರ್ಮ ಸಭೆಯ ನೀತಿ ನಿರೂಪಣೆಗಳಲ್ಲಿ, ನಿತ್ಯದ ಆಗುಹೋಗುಗಳಲ್ಲಿ ಸಕ್ರಿಯವಾಗಿ ಪಾಲುಗೊಳ್ಳಲು ಬೇಕಾದ ಅವಕಾಶದ ಪ್ರಮುಖ ಬಾಗಿಲೊಂದನ್ನು ತೆರೆದಿದ್ದಾರೆ. ಇಂಥ ಪ್ರಗತಿಪರ ಧೋರಣೆಯ ದಿಟ್ಟ ಹೆಜ್ಜೆ ಇರಿಸಿ, ತಾವು ಪ್ರಗತಿಪರ ಧೋರಣೆಯ ಪೋಪರು ಎಂದು ಮಗದೊಮ್ಮೆ ಜಗತ್ತಿಗೆ ಸ್ಪಷ್ಟಸಂದೇಶ ಸಾರಿದ್ದಾರೆ.
ಫ್ರಾನ್ಸ ಮೂಲದ, 52 ವರ್ಷದ ಸಿಸ್ಟರ್ ನತಾಲಿಯ ಬೆಕ್ವೆರ್ಟ ಅವರು, ವಿಶ್ವಗುರು ಪೋಪ್ ಅವರ ನಿವಾಸ ಹಾಗೂ ರೋಮನ್ ಕಥೋಲಿಕ ಪಂಥದ ಪ್ರಧಾನ ಕೇಂದ್ರವಾಗಿರುವ ವ್ಯಾಟಿಕನ್‍ನಲ್ಲಿ ಧರ್ಮಾಧ್ಯಕ್ಷರ (ಬಿಷಪ್ಪರುಗಳ) ಸಮುದಾಯದಲ್ಲಿ ಬೆರೆಯುವ, ಅವರೊಂದಿಗೆ ಕುಳಿತುಕೊಳ್ಳುವ ಅರ್ಹತೆ ಪಡೆದಿದ್ದಾರೆ. ಕಥೋಲಿಕ ಕ್ರೈಸ್ತ ಪಂಥದ ವಿಶ್ವಗುರು ಪೋಪ್ ಫ್ರಾನ್ಸಿಸ್ ಅವರು, ಸಿಸ್ಡರ್ ನತಾಲಿಯ ಅವರನ್ನು ಧರ್ಮಾಧ್ಯಕ್ಷರ ಸಮಾಲೋಚನಾ ಮಹಾಮಂಡಳಿಯ (ಸಿನೋಡ್‍ನ) ಉಪಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ.

ಮಹಿಳೆಯರ ಮೇಲಣ ವಿಶ್ವಾಸದ ಪ್ರತೀಕ :
ವಿಶ್ವಗುರು ಪೋಪರಿಗೆ ಸಲಹೆ ಸೂಚನೆ ನೀಡುವ ಧಮಾಧ್ಯಕ್ಷರ ಸಮಾಲೋಚನಾ ಮಂಡಳಿಯ ಉಪಕಾರ್ಯದರ್ಶಿಯಾಗಿ ಸಿಸ್ಟರ್ ನತಾಲಿಯ ಅವರನ್ನು ನೇಮಕ ಮಾಡಿ, ಪ್ರಸಕ್ತ ಸಾಲಿನ ಫೆಬ್ರವರಿ 6 ರಂದು ಆದೇಶ ಹೊರಡಿಸಲಾಗಿದೆ. ಈ ಕುರಿತ ನಿರ್ಧಾರ ಕಾಕತಾಳಿಯ ಎಂಬಂತೆ, ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನಕ್ಕೆ ಸರಿಯಾಗಿ ಒಂದು ತಿಂಗಳ ಹಿಂದೆ ಈ ನೇಮಕವಾಗಿದೆ.
ತಮ್ಮ ನೇಮಕದ ಕುರಿತಂತೆ ಹೇಳಿಕೆ ನೀಡಿರುವ ಸಿಸ್ಟರ್ ನತಾಲಿಯ ಅವರು, `ಈ ನೇಮಕವು ಕಥೋಲಿಕ ಧರ್ಮಸಭೆಯು, ಮಹಿಳಾ ಸಮುದಾಯದ ಮೇಲೆ ಇಟ್ಟಿರುವ ವಿಶ್ವಾಸದ ಪ್ರತೀಕ’ ಎಂದು ಬಣ್ಣಿಸಿದ್ದಾರೆ.
ಇದನ್ನು ಮಹಿಳೆಯರ ಕರ್ತವ್ಯ ನಿರ್ವಹಣಾ ಸಾಮಥ್ರ್ಯವನ್ನು ಜಾಗತಿಕವಾಗಿ ಮಾನ್ಯ ಮಾಡಿದ ಪೋಪರ ನಡೆ ಎಂದು ಜಗತ್ತಿನ ವಿವಿಧ ದೇಶಗಳಲ್ಲಿನ ಪ್ರಜ್ಞಾವಂತರು ಶ್ಲಾಘಿಸುತ್ತಿದ್ದಾರೆ.

ಧರ್ಮಾಧ್ಯಕ್ಷರ ಮಹಾಮಂಡಳಿಗೆ ಮಹಿಳಾ ಕಾರ್ಯದರ್ಶಿ:
ಅಚ್ಚರಿ ಎನ್ನಿಸುವಂತೆ, ಸಿಸ್ಟರ್ ನತಾಲಿಯ ಅವರ ನೇಮಕದ ಹಿಂದೆಯೇ, ಕೇವಲ ಹದಿನೈದು ದಿನಗಳ ಅಂತರದಲ್ಲಿ, ಇದೇ ಸಾಲಿನ ಫೆಬ್ರವರಿ 23 ರಂದು ಜರ್ಮನಿಯ ಕಥೋಲಿಕ ಧರ್ಮಸಭೆಯ ಧರ್ಮಾಧ್ಯಕ್ಷರ ಮಹಾಮಂಡಳಿಯು (ಜರ್ಮನ್ ಕಥೋಲಿಕ ಬಿಷಪ್ಸ್ ಕಾನ್ಫರನ್ಸ್) ಯಾವುದೇ ಧಾರ್ಮಿಕ ಸಂಸ್ಥೆ -ಕಾನ್ವೆಂಟ್, ಸಭೆಗೆ (ಕಾಂಗ್ರಿಗೇಷನ್) ಅಥವಾ ಸಂಘಟನೆ (ಧಾರ್ಮಿಕ ಸೇವಾ ಸಂಸ್ಥೆ) ಗಳ ಸದಸ್ಯಳಲ್ಲದ ಒಬ್ಬ ಸಾಮಾನ್ಯ ಮಹಿಳೆಯನ್ನು, ಮಂಡಳಿಯ ಅತ್ಯುನ್ನತ ಅಧಿಕಾರದ ಗದ್ದಿಗೆಯ ಮೇಲೆ ಕೂರಿಸಲು ಆಯ್ಕೆ ಮಾಡಿಕೊಂಡಿದೆ.
ವಿಶ್ವಗುರು ಪೋಪ್ ಫ್ರಾನ್ಸಿಸ್ ಅವರು, `ನಮ್ಮ ಬೇಡಿಕೆಗಳಿಗೆ ಕಿವಿಗೊಡುತ್ತಿದ್ದಾರೆ ಜಗತ್ತಿನ ಒಳಿತಿಗಾಗಿ, ಉದ್ಧಾರಕ್ಕಾಗಿ ಶ್ರಮಿಸುವ ಕೈಂಕರ್ಯದಲ್ಲಿ ಮಹಿಳೆಯರು ಮತ್ತು ಪುರುಷರು ಸರಿಸಮನಾಗಿ ಜವಾಬ್ದಾರಿ ಹಂಚಿಕೊಳ್ಳುವಲ್ಲಿ, ಹೆಜ್ಜೆ ಇರಿಸುತ್ತಿರುವ ಕಥೋಲಿಕ ಧರ್ಮಸಭೆ ಮಹಿಳೆಯರಿಗೆ ಅವಕಾಶಗಳನ್ನು ತರೆದಿಡುತ್ತಿದೆ’ ಎಂದಿದ್ದಾರೆ.
ಕಳೆದ ಬಾರಿಯ ಸಿನೋಡ್ ಸಭೆಯಲ್ಲಿ, ಕಥೋಲಿಕ ಧರ್ಮಸಭೆಯ ವಿವಿಧ ಆಡಳಿತಾತ್ಮಕ ಹುದ್ದೆಗಳಲ್ಲಿ, ನಾಯಕತ್ವದ ಸ್ಥಾನಗಳಲ್ಲಿ ಮಹಿಳೆಯರಿಗೆ ಸೂಕ್ತ ಅವಕಾಶ ಒದಗಿಸಬೇಕೆಂದು ಆಗ್ರಹಪಡಿಸಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಕೊಳ್ಳಬಹುದು.
ಜೊತೆಗೆ, ಮುಂದಿನ ವರ್ಷ 2022 ವರ್ಷದಲ್ಲಿ ಆಯೋಜಿಸಿರುವ, ವಿಶ್ವದ ಎಲ್ಲೆಡೆಯಿಂದ ಬರುವ ಧರ್ಮಾಧ್ಯಕ್ಷರು ಭಾಗವಹಿಸಲಿರುವ ಸಿನೋಡ್‍ನ ಮುಂದಿನ ಮಹಾ ಅಧಿವೇಶನದಲ್ಲಿ (ಆರ್ಡಿನರಿ ಜನರಲ್ ಅಸೆಬ್ಲಿ),’ ಉದ್ದೇಶ, ಭಾಗವಹಿಸುವಿಕೆ, ಸಾಮುದಾಯಿಕತೆ’ ವಿಷಯಗಳ ಕುರಿತು ಚರ್ಚಿಸುವಂತೆ ನಿರ್ದೇಶಿಸಿ, ಪೋಪ್ ಫ್ರಾನ್ಸಿಸ್ ಅವರು ಸೂಚನೆ ನೀಡಿದ್ದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.
ಕಳೆದ ವರ್ಷ 2020ರಲ್ಲಿ ಆರು ಜನ ಮಹಿಳೆಯರನ್ನು ವ್ಯಾಟಿಕನ್‍ನ ಆರ್ಥಿಕ ಮಂಡಳಿಗೆ ನೇಮಕ ಮಾಡಿ ಪೋಪ್ ಫ್ರಾನ್ಸಿಸ್ ಅವರು ಆದೇಶ ಹೊರಡಿಸಿದ್ದರು. ಈ ಆರ್ಥಿಕ ಮಂಡಳಿಯು, ಪೋಪ್ ಅವರ ಕಚೇರಿಯ, ಕಥೋಲಿಕ ಧರ್ಮಸಭೆಯ ಹಣಕಾಸಿನ ವ್ಯವಹಾರಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿದೆ.

ಧರ್ಮಸಭೆಯ ನಿಯಮಾವಳಿಗಳ ಬದಲಾವಣೆ :
ಪ್ರಸಕ್ತ 2021ರ ಆದಿ ಭಾಗದಲ್ಲಿ, ಜನವರಿ ತಿಂಗಳಲ್ಲಿ, ರೋಮನ್ ಕಥೋಲಿಕ ಕ್ರೈಸ್ತ ಪಂಥದ ಕೆಲವು ಧಾರ್ಮಿಕ ನಿಯಮಾವಳಿಗಳಲ್ಲಿ ಬದಲಾವಣೆಗಳನ್ನು ತಂದಿದ್ದಾರೆ. ಈ ಬದಲಾವಣೆಗಳ ಪರಿಣಾಮವಾಗಿ, ಪೂಜೆಯ ಸಂದರ್ಭದಲ್ಲಿ ಕೇವಲ ಪುರುಷ ಯಾಜಕರು ಮಾತ್ರ ವಿಶ್ವಾಸಿಗಳಿಗೆ ಪ್ರಸಾದಿಸುತ್ತಿದ್ದ ಸತ್ಪ್ರಸಾದ (ಕ್ರಿಸ್ತ ಶರೀರ) ವನ್ನು ಇನ್ನು ಮುಂದೆ ಕನ್ಯಾಸ್ತ್ರೀಯರು ವಿತರಿಸಬಹುದಾಗಿದೆ. ಮತ್ತು ಪೂಜಾ ವೇದಿಕೆಯ ವಿವಿಧ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಬಹುದಾಗಿದೆ. ಇಂಥ ಮುಕ್ತ ಪ್ರಗತಿಪರ ಆಚರಣೆಗಳು ಪಾಶ್ಚಿಮಾತ್ಯ ದೇಶಗಳಲ್ಲಿ ಮತ್ತು ಭಾರತವೂ ಸೇರಿದಂತೆ, ಲ್ಯಾಟಿನ ಸಂಪ್ರದಾಯ ಪಾಲಿಸುವ ಚರ್ಚುಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿವೆ.
ಪೋಪ್ ಫ್ರಾನ್ಸಿಸ್ ಅವರು, ಕಥೋಲಿಕ ಧರ್ಮಸಭೆಯಲ್ಲಿ ಮಹಿಳೆಯರು, `ಬಹು ಮುಖ್ಯ ಭೂಮಿಕೆ ವಹಿಸುವರು’ ಎಂಬುದರಲ್ಲಿ ನಂಬಿಕೆ ಇರಿಸಿಕೊಂಡಿದ್ದಾರೆ. ಪೋಪರ ಈ ನಡೆ ಬದಲಾವಣೆಗಳಿಗೆ ಒಪ್ಪದ ಸಂಪ್ರದಾಯ ಶರಣರನ್ನು, ಇಂದಲ್ಲ ನಾಳೆ, ಧಾರ್ಮಿಕ ಕ್ಷೇತ್ರದಲ್ಲಿ ಮಹಿಳೆಯರು ಪಾಲ್ಗೊಳ್ಳುವ ಸಾಧ್ಯತೆಯನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿಗೆ ದೂಡಿದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇಷ್ಟಾದರೂ, ಪುರುಷರಷ್ಟೇ ಯಾಜಕರಾಗಿ (ಧರ್ಮಗುರುಗಳಾಗಿ/ ಪುರೋಹಿತರಾಗಿ) ಅಭಿಷೇಕಿತರಾಗುವ ಉಪಕ್ರಮದಲ್ಲ ಇನ್ನೂ ಯಾವುದೇ ಬದಲಾವಣೆಗಳಾಗಿಲ್ಲ. ಧಾರ್ಮಿಕ ಕಾನೂನಿನಲ್ಲಿದ್ದ `ಸಾಮಾನ್ಯ ಪುರುಷರು’ ಎಂಬ ಪದಪುಂಜವನ್ನು `ಸಾಮಾನ್ಯ ವ್ಯಕ್ತಿಗಳು’ ಎಂದು ಬದಲಿಸಲಾಗಿದೆ. ಈ ಚಿಕ್ಕ ಪದಪುಂಜಗಳ ಬದಲಾವಣೆಯು, ಮಹಿಳೆಯರೂ ಸಹ ಪೂಜಾ ಅಂಕಣವನ್ನು ಹತ್ತಿ ಪವಿತ್ರ ಗ್ರಂಥದ ವಚನಗಳನ್ನು ಓದಲು, ವಾಚಕರಾಗಲು (ಲೆಕ್ಟರ್) ಮತ್ತು ಪೀಠ ಸಹಾಯಕರಾಗಲು (ಅಕೋಲೈಟ್) ಅನುಮತಿ ಸಿಕ್ಕಂತಾಗಿದೆ.
ಪವಿತ್ರ ಗ್ರಂಥಗಳ ಓದುಗ, ಪ್ರಾರ್ಥನೆಗಳನ್ನು ಹೇಳಬಹುದು, ಚರ್ಚ ಪೂಜೆಯ ಸಂದರ್ಭದಲ್ಲಿ ಪವಿತ್ರ ಬೈಬಲ್ ಗ್ರಂಥದಲ್ಲಿನ ಕೀರ್ತನೆಗಳನ್ನು ಹಾಡಬಹುದಾಗಿದೆ. ಆದರೆ, ಬೈಬಲ್ಲಿನ ಹೊಸ ಒಡಂಬಡಿಕೆಯ ಶುಭಸಂದೇಶವನ್ನು ಓದುವುದು/ ವಾಚಿಸುವುದು ಮಾತ್ರ ಯಾಜಕರು ಮತ್ತು ಉಪ ಯಾಜಕರ ಕರ್ತವ್ಯವಾಗಿದೆ.
ಪೀಠ ಸಹಾಯಕರಾಗಿರುವವರು ಪೂಜಾಂಕಣದಲ್ಲಿ ಯಾಜಕರಿಗೆ ಮತ್ತು ಉಪಯಾಜಕರಿಗೆ ಸಹಾಯ ಸಲ್ಲಿಸಬಹುದು, ಪವಿತ್ರ ಸತ್ಪ್ರಸಾದವನ್ನೂ, ದ್ರಾಕ್ಷಾ ರಸವನ್ನು ವಿತರಿಸಬಹುದಾಗಿದೆ.
ಮಹಿಳೆಯರಿಗೂ ಉಪಯಾಜಕತನದ ಅವಕಾಶ ಕಲ್ಪಿಸಿಕೊಡಬೇಕು, ಚರ್ಚಿನಲ್ಲಿನ ಪೂಜಾವಿಧಿಗಳಲ್ಲಿ, ಪ್ರಧಾನ ಭೂಮಿಕೆಗಳಲ್ಲಿ ಕಾಣಿಸಿಕೊಳ್ಳುವ ಅವಕಾಶ ನೀಡಬೇಕು ಎಂಬ ಬೇಡಿಕೆಗೆ, ಕಥೋಲಿಕ ಕ್ರೈಸ್ತ ಪಂಗಡದ ವಿಶ್ವಗುರು ಪೋಪ್ ಫ್ರಾನ್ಸಿಸ್ ಅವರಿಂದ ಇದುವರೆಗೂ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ.

ಕಥೋಲಿಕ ಧರ್ಮಸಭೆಯ ಇತಿಹಾಸದಲ್ಲಿ ಇದೇ ಮೊದಲು :
ಪ್ರಸಕ್ತ 2021ರ ಸಾಲಿನ ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ, ಪೋಪ್ ಫ್ರಾನ್ಸಿಸ್ ಅವರು, ಧರ್ಮಾಧ್ಯಕ್ಷರ ಸಮಾಲೋಚನಾ ಮಹಾಮಂಡಳಿಗೆ (ಸಿನೋಡ್)ಗೆ ಮಹಿಳೆಯೊಬ್ಬಳನ್ನು ನೇಮಕ ಮಾಡಿ ಆದೇಶ ಹೊರಡಿಸಿದರು. ಸಿನೋಡ್ ಒಳಗೆ ಬರುವಂತೆ ಮಹಿಳೆಗೆ ಇದೇ ಮೊದಲ ಬಾರಿ ಬಾಗಿಲನ್ನು ತೆರೆಯಲಾಗಿದೆ.
ಸ್ಪೇನ್ ದೇಶದ ಯಾಜಕ ಫಾದರ್, ಲೂಯಿಸ್ ಮಾರ್ಟಿನ್ ಸ್ಯಾನ್ ಮಾರ್ಟಿನ ಅವರೊಂದಿಗೆ, ಫ್ರಾನ್ಸ ದೇಶದ ಕನ್ಯಾಸ್ತ್ರೀ ಸಿಸ್ಟರ್ ನತಾಲಿಯ ಬೆಕ್ವಿರ್ಟ್ ಅವರನ್ನು ಧರ್ಮಾಧ್ಯಕ್ಷರ ಸಮಾಲೋಚನಾ ಮಹಾಮಂಡಳಿಯ ಉಪಕಾರ್ಯದರ್ಶಿಗಳಾಗಿ ನೇಮಕ ಮಾಡಲಾಗಿದೆ. ಕಾರ್ಡಿನಲ್ ಮಾರಿಯೋ ಗ್ರೆಚ್ ಅವರು, ಈ ಮಹಾಮಂಡಳಿಯ ಪ್ರಧಾನ ಕಾರ್ಯದರ್ಶಿಗಳಾಗಿದ್ದಾರೆ. ಸಿಸ್ಟರ್ ನತಾಲಿಯ 2019 ರಿಂದ ಸಿನೋಡ್ ನ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದು ಅವರಿಗೆ ಮುಂಬಡ್ತಿ.
ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕಥೋಲಿಕ ಕ್ರೈಸ್ತ ಧರ್ಮಸಭೆಯಲ್ಲಿ ಇತಿಹಾಸದಲ್ಲಿಯೇ ಮೊದಲ ಬಾರಿ ಪೋಪ್ ಒಬ್ಬರು, ಧರ್ಮಾಧ್ಯಕ್ಷರ ಸಮಾಲೋಚನಾ ಮಹಾಮಂಡಳಿಗೆ (ಸಿನೋಡ್‍ಗೆ) ಮಹಿಳೆಯೊಬ್ಬರನ್ನು ಉಪಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಈ ನೇಮಕದ ಹಿನ್ನೆಲೆಯಲ್ಲಿ ಸಿಸ್ಟರ್ ನತಾಲಿಯ ಈ ಮಹಾಮಂಡಳಿಯಲ್ಲಿ ಮತ ಚಲಾಯಿಸುವ ಹಕ್ಕು ಪಡೆದಿರುತ್ತಾರೆ. ಈ ಮಹಾಮಂಡಳಿಯು ಪೋಪ್ ಅವರಿಗೆ ಸಲಹೆ ಸೂಚನೆ ನೀಡುತ್ತದೆ, ರೋಮನ್ ಕಥೋಲಿಕ್ ಧರ್ಮಸಭೆಯಲ್ಲಿನ ವಿವಾದಾತ್ಮಕ ಸಂಗತಿಗಳ ಕುರಿತು ಚರ್ಚಿಸಿ ಒಂದು ತೀರ್ಮಾನಕ್ಕೆ ಬರುತ್ತದೆ.
ಸಿಸ್ಟರ್ ನತಾಲಿಯ ಅವರ ನೇಮಕದಿಂದ ಇನ್ನು ಮುಂದೆ ಮಹಿಳೆಯರಿಗೂ ಯಾಜಕ ಸ್ಥಾನಮಾನ ಸಿಗುವ ಹಾದಿಯು ಸುಗುಮವಾಯಿತು, ಇದು ಆ ನಿಟ್ಟಿನ ಒಂದು ಮಹತ್ವದ ಹೆಜ್ಜೆ ಎಂದು ಪರಿಗಣಿಸುವಂತಿಲ್ಲ. ಆದರೆ, ಪೋಪ್ ಪ್ರಾನ್ಸಿಸ್ ಅವರ ಪ್ರಗತಿಪರ ಧೋರಣೆಗಳ ದೃಷ್ಟಿಕೋನದ ಈ ಹೆಜ್ಜೆಯನ್ನು, ಆ ಗುರಿ ಮುಟ್ಟುವಲ್ಲಿನ ಮೊದಲ ಹೆಜ್ಜೆಗಳಲ್ಲೊಂದು ಎಂದು ಗುರುತಿಸಬಹುದೇನೋ.

ಇಂಥದೇ ಮಗದೊಂದು ಬೆಳವಣಿಗೆ :
ಕಥೋಲಿಕ ಧರ್ಮಸಬೆಯಲ್ಲಿನ ಸಾಮಾನ್ಯ ಜನರ ಪಾಲಿಗೆ ಸಿಹಿ ಸುದ್ದಿಯಾಗುವ ಇಂಥದೇ ಬಗೆಯ ಮಗದೊಂದು ಬೆಳವಣಿಗೆ ಜರ್ಮನಿಯಿಂದ ವರದಿಯಾಗಿದೆ.
ಜರ್ಮನಿಯ ಕಥೋಲಿಕ ಧರ್ಮಾಧ್ಯಕ್ಷರ ಸಮಾಲೋಚನಾ ಮಂಡಳಿಯು (ಜರ್ಮನ್ ಕಥೋಲಿಕ್ ಬಿಷಪ್ಸ್ ಕಾನ್ಫರನ್ಸ್), ಫೆಬ್ರವರಿ 23ರಂದು, ಯಾವುದೇ ಧಾರ್ಮಿಕ ಸಭೆಗೆ ಸೇರದ ಒಬ್ಬ ಸಾಮಾನ್ಯ ಮಹಿಳೆಯನ್ನು ತನ್ನ ಉನ್ನತ ಆಡಳಿತಾತ್ಮಕ ಹುದ್ದೆಗೆ ನೇಮಕ ಮಾಡಿದೆ. ಈ ಮಹಿಳೆ ಬೀಟ್ ಗಿಲ್ಲಿಸ್, ದೈವಶಾಸ್ತ್ರ ತಜ್ಞೆ ಆಗಿದ್ದಾರೆ. ಈ ಸಮಾಲೋಚನಾ ಮಂಡಳಿಯ ಉನ್ನತ ಆಡಳಿತಾತ್ಮಕ ಹುದ್ದೆ- ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಗಳಿಸಿಕೊಂಡಂತಾಗಿದೆ.
ಈ ಜರ್ಮನಿಯ ಕಥೋಲಿಕ ಧರ್ಮಾಧ್ಯಕ್ಷರ ಸಮಾಲೋಚನಾ ಮಂಡಳಿಯ ಪ್ರಧಾನ ಆಡಳಿತ ಕಚೇರಿ ಬಾನ್ ನಲ್ಲಿದೆ. ಈ ನಡೆ ಜರ್ಮನಿಯ ಕಥೋಲಿಕ ಧರ್ಮಾಧ್ಯಕ್ಷರ ಸಮಾಲೋಚನಾ ಮಂಡಳಿಯು, ಆಧುನಿಕತೆಯತ್ತ ಹೊರಳುತ್ತಿರುವುದನ್ನು ಸೂಚಿಸುತ್ತದೆ ಎನ್ನಲಾಗುತ್ತಿದೆ. ಕಥೋಲಿಕ ಧರ್ಮಸಭೆಯ ವ್ಯವಸ್ಥೆಯಲ್ಲಿ ಮಹಿಳೆಯರಿಗೂ ನಾಯಕತ್ವದ ಅವಕಾಶಗಳನ್ನು ಕಲ್ಪಿಸಿಕೊಡಬೇಕು ಎಂಬ ಬೇಡಿಕೆಯೂ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಜರ್ಮನಿಯ ಧರ್ಮಾಧ್ಯಕ್ಷರ ಮುಖವಾಣಿ :
ಈಗ, ದೈವಶಾಸ್ತ್ರ ತಜ್ಞೆ ಬೀಟ್ ಗಿಲ್ಲಿಸ್, ಜರ್ಮನಿಯಲ್ಲಿರುವ ಸುಮಾರು 22 ಮಿಲಿಯನ್ ಕಥೋಲಿಕರ ಆಧ್ಯಾತ್ಮಿಕ ಹಸಿವನ್ನು ತಣಿಸುತ್ತಿರುವ ಜರ್ಮನಿಯ ಕಥೋಲಿಕ ಧರ್ಮಾಧ್ಯಕ್ಷರ ಸಮಾಲೋಚನಾ ಮಂಡಳಿಯ (ಡಿಬಿಕೆ) ಮುಖವಾಣಿಯ ಪಾತ್ರ ನಿಭಾಯಿಸಬೇಕಿದೆ. ಈ ಜರ್ಮನಿಯ ಧಾರ್ಮಿಕ ಮಂಡಳಿಯನ್ನು, ನಮ್ಮ ನಾಡಿನ ಭಾರತದ ಕಥೋಲಿಕ ಧರ್ಮಾಧ್ಯಕ್ಷರ ಸಮಾಲೋಚನಾ ಮಂಡಳಿ (ಸಿಸಿಬಿಐ)ಗೆ ಹೋಲಿಸಬಹುದು.
ಈ ಸಮಾಲೋಚನಾ ಮಂಡಳಿಯ ಈ ನಿರ್ಧಾರವನ್ನು, ಬಹುದಿನಗಳ ಬೇಡಿಕೆಯಾಗಿದ್ದ ಧರ್ಮಸಭೆಯ ಪ್ರಮುಖ ನಾಯಕತ್ವದ ಸ್ಥಾನಗಳಲ್ಲಿ ಮಹಿಳೆಯರಿಗೂ ಪಾಲು ಸಲ್ಲಬೇಕು ಎಂಬ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿನ ಒಂದು ಪ್ರಮುಖ ಹೆಜ್ಜೆ ಎಂದು ಬಣ್ಣಿಸಲಾಗುತ್ತಿದೆ.
ಸುಮಾರು 50 ವಸಂತಗಳನ್ನು ಕಂಡಿರುವ ಖ್ಯಾತ ದೈವಶಾಸ್ತ್ರ ವಿಶಾರದೆ, ಬೀಡ್ ಗಿಲ್ಲೀಸ್ ಜರ್ಮನಿಯ ಕಥೋಲಿಕ ಧರ್ಮಾಧ್ಯಕ್ಷರ ಸಮಾಲೋಚನಾ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾಗಿ ಇದೇ ಸಾಲಿನ ಜುಲೈ 1 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಸದ್ಯ ಅವರು, ಲಿಂಬರ್ಗ ಧರ್ಮಕ್ಷೇತ್ರದ ಯುವಕರ, ಕುಟುಂಬದ ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ರಮಗಳ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹೊಸ ಹುದ್ದೆಯಲ್ಲಿ ಅವರು ಬಹುದೊಡ್ಡ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗಿದೆ. ಧರ್ಮಾಧ್ಯಕ್ಷರು ಕೈಗೊಳ್ಳುವ ನಿರ್ಧಾರಗಳ ಜಾರಿ ಮಾಡುವುದು ಅವರ ಪ್ರಾಥಮಿಕ ಕರ್ತವ್ಯವಾಗಿದೆ.

ಸಾಮಾನ್ಯ ವ್ಯಕ್ತಿ ಧಾರ್ಮಿಕ ಮುಖಂಡರನ್ನು ನಿಭಾಯಿಸಬೇಕಾಗಿದೆ :
ಜರ್ಮನಿಯ ಕಥೋಲಿಕ ಧರ್ಮಾಧ್ಯಕ್ಷರ ಸಮಾಲೋಚನಾ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾಗಿರುವ ಬಿಟ್ ಗಿಲ್ಲಿಸ್ ಅವರು, ತಮ್ಮ ಹುದ್ದೆಯ ಜವಾಬ್ದಾರಿಯಲ್ಲಿ 27 ಧರ್ಮಾಧ್ಯಕ್ಷರನ್ನು ನಿಭಾಯಿಸಬೇಕಾಗಿದೆ. ಇದು ನಿಜದ ಅರ್ಥದಲ್ಲಿ ಪುರುಷರ ಜಗತ್ತಿನ ನಿರ್ವಹಣೆಯಂತೆ ಕಂಡರೆ ಅಚ್ಚರಿಯೇನಿಲ್ಲ.
ಕಳೆದ 24 ವರ್ಷಗಳಿಂದ ಫಾದರ್ ಹನ್ಸ್ ಲಾಂಜೆಂಡರ್‍ಫರ್ ಅವರು ಈ ಹುದ್ದೆಯಲ್ಲಿದ್ದರು. ಜರ್ಮನಿಯ ಕಥೋಲಿಕ ಧರ್ಮಕ್ಷೇತ್ರಗಳ ಒಕ್ಕೂಟದ (ಜರ್ಮನ್ ಡಯಾಸಿಸ್ ಫೆಡರೇಷನ್- ವಿಡಿಡಿ) ಆಡಳಿತವನ್ನೂ ನಿಭಾಯಿಸಬೇಕಾಗಿದೆ. ಈ ಒಕ್ಕೂಟದ ಒಂದು ಆರ್ಥಿಕ ವರ್ಷದ ವಹಿವಾಟು ಸುಮಾರು 146 ಮಿಲಿಯನ್ ಡಾಲರ್ ಎಂದು ಅಂದಾಜು ಮಾಡಲಾಗಿದೆ.
ಜರ್ಮನಿಯ ಕಥೋಲಿಕ ಧರ್ಮಾಧ್ಯಕ್ಷರ ಸಮಾಲೋಚನಾ ಮಂಡಳಿಯ (ಡಿಬಿಕೆ) ಅಧ್ಯಕ್ಷರಾಗಿರುವ ಲಿಂಬರ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು, ಜರ್ಮನಿಯ ಕಥೋಲಿಕ ಧರ್ಮಕ್ಷೇತ್ರಗಳ ಒಕ್ಕೂಟದ ವ್ಯವಹಾರಗಳ ಮೇಲುಸ್ತುವಾರಿ ಮಾಡುತ್ತಾರೆ.

ಪ್ರೊಟೆಸ್ಟಂಟ್ ಸಮುದಾಯಕ್ಕೆ ಇದು ಹೊಸದಲ್ಲ :
ಪ್ರೊಟೆಸ್ಟಂಟ್ ಧರ್ಮಸಭೆಗಳಲ್ಲಿ ಮಹಿಳೆಯರಿಗೆ ಆಡಳಿತಾತ್ಮಕ ಸ್ಥಾನಗಳಲ್ಲಿ, ಧಾರ್ಮಿಕ ನಾಯಕತ್ವದಲ್ಲಿ ಮಹಿಳೆಯರನ್ನು ಕಾಣುವುದು ಅಷ್ಟೇನು ಅಚ್ಚರಿಯ ಸಂಗತಿಯಲ್ಲ, ಹೊಸದೂ ಅಲ್ಲ. ಒಂದು ದಶಕದ ಹಿಂದೆಯೇ ಅಕ್ಟೋಬರ್ 10 2009ರಲ್ಲಿಯೇ, ಜರ್ಮನಿಯ ಪ್ರೊಟೆಸ್ಟಂಟ್ ಧರ್ಮಸಭೆಯ ಅಧ್ಯಕ್ಷತೆಯನ್ನು ಅಂದರೆ, ಪ್ರೊಟೆಸ್ಟಂಟ್ ಕ್ರೈಸ್ತ ಪಂಥದ ಧರ್ಮಕ್ಷೇತ್ರಗಳ (ಡಯಾಸಿಸ್) ಧರ್ಮಾಧ್ಯಕ್ಷರುಗಳ (ಬಿಷಪ್) ನೇತೃತ್ವವನ್ನು ಮಹಿಳೆಗೆ ಒಪ್ಪಿಸಲಾಗಿದೆ. ಕಥೋಲಿಕ ಕ್ರೈಸ್ತ ಪಂಥದಲ್ಲಿರುವಂತೆ ಪ್ರೊಟೆಸ್ಟಂಟ್ ಕ್ರೈಸ್ತರಲ್ಲಿ ಯಾಜಕ ಹುದ್ದೆಗೆ ಬ್ರಹ್ಮಚರ್ಯೆ ಪಾಲನೆ ಕಡ್ಡಾಯದ ನಿಬಂಧನೆಯಾಗಿಲ್ಲ.
ಆಗ ಸುಮಾರು 51 ವರ್ಷದ ವಿಚ್ಛೇದಿತೆಯಾಗಿದ್ದ ಮಾರ್ಗಟ್ ಕೆಸ್ಮನ್, ಜರ್ಮನಿಯ 25 ಮಿಲಿಯನ್ ಪ್ರೊಟೆಸ್ಟಂಟ್ ಕ್ರೈಸ್ತರನ್ನು ಧಾರ್ಮಿಕವಾಗಿ ಮುನ್ನಡೆಸುವ ಸ್ಥಾನದಲ್ಲಿ ಪ್ರತಿಷ್ಠಾಪನೆಗೊಂಡಿದ್ದರು. ಈ ಜರ್ಮನಿಯ ಪ್ರೊಟೆಸ್ಟಂಟ್ ಧರ್ಮಸಭೆಯ ಅಧ್ಯಕ್ಷತೆಯನ್ನು ನಿರ್ವಹಿಸುವ ಮೊದಲು ಆಕೆ, ಹತ್ತು ವರ್ಷಕ್ಕೂ ಅಧಿಕ ಕಾಲ ಹ್ಯಾನೋವರ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷೆಯಾಗಿ (ಬಿಷಪ್) ಕಾರ್ಯ ನಿರ್ವಹಿಸಿದ್ದರು.
ಅಧಿಕಾರ ವಹಿಸಿಕೊಳ್ಳುವ ಸಂದರ್ಭದಲ್ಲಿ, `ಪ್ರೊಟೆಸ್ಟಂಟ್ ಕ್ರೈಸ್ತ ಪಂಥದತ್ತ ಹೆಚ್ಚು ಹೆಚ್ಚು ಜನರನ್ನು ಕರೆತರುವ ನಿಟ್ಟಿನಲ್ಲಿ ನಾನು ಸಕ್ರಿಯವಾಗಿ ಶ್ರಮಿಸುವೆ’ ಎಂದು ಮಾರ್ಗಟ್ ಕೆಸ್ಮನ್ ಹೇಳಿಕೊಂಡಿದ್ದರು.
ಆದರೆ, ದುರಾದೃಷ್ಟ ಬೆನ್ನು ಬಿಡಲಿಲ್ಲ. ಪೊಲೀಸರು ಸ್ಥಳೀಯ ಮಾನದಂಡದ ಪ್ರಕಾರ, ಅವರು ಕುಡಿದು ವಾಹನ ಓಡಿಸಿದ್ದನ್ನು ಪತ್ತೆ ಹಚ್ಚಿದರು. ಆ ಪ್ರಕರಣದ ನಂತರ ಅವರು, ಫೆಬ್ರವರಿ 2010ರಲ್ಲಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಇಷ್ಟಾದ ಮೇಲೆ, ಅವರಿಗೆ ಹ್ಯಾನೋವರ್ ನಲ್ಲಿ ಸ್ಥಳೀಯ ಪ್ರೊಟೆಸ್ಟಂಟ್ ಚರ್ಚಿನಲ್ಲಿ ಪಾದ್ರಿಯಾಗಿ ಕೆಲಸಮಾಡಲು ಅವಕಾಶ ನೀಡಲಾಗಿತ್ತು.

ನಿರ್ಗಮನದ ಬಿಕ್ಕಟಿನಲ್ಲಿ ಕಥೋಲಿಕ ಧರ್ಮಸಭೆ :
ಇತ್ತೀಚೆಗಿನ ವರ್ಷಗಳಲ್ಲಿ ಜರ್ಮನಿಯ ಕಥೋಲಿಕ ಧರ್ಮಸಭೆಯು, ತನ್ನ ಸದಸ್ಯರನ್ನು ಅಧಿಕ ಪ್ರಮಾಣದಲ್ಲಿ ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದೆ. ಕಳೆದ ವರ್ಷ 2019ರಲ್ಲಿ 2,72,000 ಕಥೋಲಿಕ ಜನರು ಕಥೋಲಿಕ ಧರ್ಮಸಭೆಯನ್ನು ತೊರೆದು ಹೋಗಿದ್ದಾರೆ. ಸದಸ್ಯರ ನಿರ್ಗಮನದ ಬಿಕ್ಕಟ್ಟಿನಲ್ಲಿ ಧರ್ಮಸಭೆ ಮುಳುಗಿದೆ.
ಇದಕ್ಕೆ ಹಲವಾರು ಕಾರಣಗಳಿರಬಹುದು. ಪ್ರಮುಖವಾಗಿ ಯಾಜಕ ಬಳಗದವರಿಂದ ನಡೆದಿರುವ, ನಡೆಯುತ್ತಿರುವ ಲೈಂಗಿಕ ಕಿರುಕುಳದ ಪ್ರಕರಣಗಳಿಂದ ಕಥೋಲಿಕ ಜನತೆ ಬೇಸರಿಸಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿದ್ದವರು, ಇಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಜೊತೆಗೆ ಮುಚ್ಚಿಹಾಕುವ ಪ್ರಯತ್ನಗಳೂ ನಡೆದಿವೆ. ಇದರಿಂದ ಅಲ್ಲಿನ ಜನತೆ ರೋಸಿಹೋಗಿದ್ದಾರೆ.
ಮಹಿಳೆಯೊಬ್ಬರನ್ನು ಧರ್ಮಸಭೆಯ ಅತ್ಯನ್ನುತ ಸ್ಥಾನದಲ್ಲಿ ಕೂರಿಸಿರುವ ಸಂಗತಿ ಜರ್ಮನಿಯ ಕಥೋಲಿಕರಲ್ಲಿ ಧರ್ಮಸಭೆಯ ಬಗ್ಗೆ ಭರವಸೆ ಮೂಡಿಸಬಹುದು ಎನ್ನಲಾಗುತ್ತದೆ. ಅತ್ತ, ವ್ಯಾಟಿಕನ್‍ನಲ್ಲಿ ಪೋಪರು, ಕನ್ಯಾಸ್ತ್ರೀಯಳನ್ನು ಧರ್ಮಾಧ್ಯಕ್ಷರಿಗೆ ಸಮನಾಂತರವಾದ ಹುದ್ದೆಯನ್ನು ಕೊಟ್ಟಿರುವುದು, ದೈವಭೀರು ಯುವತಿಯರನ್ನು ಕನ್ಯಾಸ್ತ್ರೀ ಮಠಗಳತ್ತ (ಕಾನ್ವೆಂಟ್) ಮುಖ ಮಾಡುವಂತೆ ಮಾಡೀತು ಎಂದು ತರ್ಕಿಸಲಾಗುತ್ತಿದೆ,

ಪುರಸ್ಕಾರದಾಯಕವಾದ ಆಕರ್ಷಕ ವೃತ್ತಿ :
ಯುರೋಪಿನ ಬಹುತೇಕ ದೇಶಗಳಲ್ಲಿ, ಅದರಲ್ಲೂ ಮುಖ್ಯವಾಗಿ ಫ್ರಾನ್ಸ್ ನಂತಹ ಕಥೋಲಿಕರೇ ಅಧಿಕ ಸಂಖ್ಯೆಯಲ್ಲಿರುವ ದೇಶಗಳಲ್ಲಿನ ಕನ್ಯಾಸ್ತ್ರೀ ಮಠಗಳಲ್ಲಿ (ಕಾನ್ವೆಂಟ್) ವೃದ್ಧ ಕನ್ಯಾಸ್ತ್ರೀಯರಷ್ಟೇ ಉಳಿದುಕೊಂಡಿದ್ದಾರೆ. ಅಂಥವರ ಕಾಲವಾಗಿ ಮುಚ್ಚಿಹೋದ ಕನ್ಯಾಸ್ತ್ರೀ ಮಠಗಳನ್ನು ಬಾಡಿಗೆ ನೀಡಲಾಗುತ್ತಿದೆ, ಅದೂ ಸಾಧ್ಯವಾಗದಿದ್ದರೆ ಅವನ್ನು ಮಾರಾಟ ಮಾಡುವ ಪ್ರಯತ್ನಗಳೂ ನಡೆಯುತ್ತಿವೆ.
ಇದಲ್ಲದೇ, ಅನೇಕ ಕನ್ಯಾಸ್ತ್ರೀ ಮಠಗಳಿಗೆ ಸೇರಲು ಯುವತಿಯರು ಮುಂದೆ ಬರುತ್ತಿಲ್ಲ. ದಿನಗಳೆದಂತೆ ಒಂದಾದ ಮೇಲೆ ಇನ್ನೊಂದರಂತೆ, ಕನ್ಯಾಸ್ತ್ರೀ ಮಠಗಳು ಮುಚ್ಚುವ ಹಾದಿಯಲ್ಲಿವೆ.
ನಾವು ಈಗ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಜೀವಿಸುತ್ತಿದ್ದೇವೆ. ಇಂಥ ಜಗತ್ತಿನಲ್ಲಿ ಮಹಾತ್ವಾಕಾಂಕ್ಷೆಯ ವೃತ್ತಿಗಳತ್ತ ಯುವಜನತೆ ಮುಖಮಾಡಿ ನಿಂತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಕಥೋಲಿಕರ ವಿಶ್ವಗುರು ಪೋಪ್ ಅವರು ಮತ್ತು ಜರ್ಮನಿಯ ಕಥೋಲಿಕ ಧರ್ಮಾಧ್ಯಕ್ಷರ ಸಮಾಲೋಚನಾ ಮಂಡಳಿಯು ಕೈಗೊಂಡಿರುವ ಕ್ರಮಗಳನ್ನು ಕಥೋಲಿಕ ಮಹಿಳಾ ಲೋಕವನ್ನು ಓಲೈಸುವ ಕ್ರಮವೆಂದು ವಿಶ್ಲೇಷಿಸಲಾಗುತ್ತಿದೆ,
ಪೋಪರ ಮತ್ತು ಜರ್ಮನಿಯ ಕಥೋಲಿಕ ಧರ್ಮಾಧ್ಯಕ್ಷರ ಸಮಾಲೋಚನಾ ಮಂಡಳಿಯಂಥ ಧಾರ್ಮಿಕ ಸಂಘಟನೆಗಳು ಮುಂದೊಂದು ದಿನ ಉತ್ತಮ ಫಲಿತಾಂಶಗಳನ್ನು ತಂದುಕೊಡಬಹುದೆಂದು ನಿರೀಕ್ಷಿಸಲಾಗುತ್ತಿದೆ.

ಭಾರತದ ಮೊದಲ ಇಬ್ಬರು ಪ್ರೊಟೆಸ್ಟಂಟ್ ಮಹಿಳಾ ಬಿಷಪ್‍ರುಗಳು :
ಭಾರತದಲ್ಲೂ ನೂರಾರು ಪ್ರೊಟೆಸ್ಟಂಟ್ ಪಂಥದ ಸಭೆ(ಚರ್ಚು)ಗಳಿವೆ. ಅದರಲ್ಲಿ ಕೆಲವು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ಬಹುತೇಕ ಸಭೆಗಳು ಸ್ಥೂಲವಾಗಿ ಉತ್ತರ ಭಾರತ ಸಭೆ (ಚರ್ಚ ಆಫ್ ನಾರ್ಥ ಇಂಡಿಯಾ) ಮತ್ತು ದಕ್ಷಿಣ ಭಾರತ ಸಭೆ (ಚರ್ಚ ಆಫ್ ಸೌಥ ಇಂಡಿಯಾ) ಛತ್ರದಡಿ ಕಾರ್ಯನಿರ್ವಹಿಸುತ್ತಿವೆ.
ದೇಶದಲ್ಲಿಯೇ ಮೊದಲ ಬಾರಿ, ದಕ್ಷಿಣ ಭಾರತ ಸಭೆಯ ಆಂಧ್ರಪ್ರದೇಶದ ನಂದ್ಯಾಲ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರನ್ನಾಗಿ ಮಹಿಳೆಯೊಬ್ಬರನ್ನು ಪ್ರತಿಷ್ಠಾಪಿಸಿದ ಐತಿಹಾಸಿಕ ಘಟನೆ 2013ರಲ್ಲಿ ನಡೆದಿದೆ. ಒಟ್ಟು 4 ಮಿಲಿಯನ್ ವಿಶ್ವಾಸಿಗಳು ಅದರ- ಆ ಸಭೆಯ ಸದಸ್ಯರಾಗಿದ್ದಾರೆ.
ಅದಕ್ಕೂ ಮೊದಲು, ಕ್ರೈಸ್ತ ಧರ್ಮಸಭೆಗಳಲ್ಲಿ ಪ್ರಗತಿಪರ ಧೋರಣೆಯ ಸಭೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಆಂಗ್ಲಿಕನ್ ಸಭೆಯೂ ಸೇರಿದಂತೆ, ಪಾಶ್ಚಿಮಾತ್ಯ ಕ್ರೈಸ್ತ ಜಗತ್ತು ಇನ್ನೂ ಮೀನಮೇಷ ಎಣಿಸುತ್ತಿದ್ದ ಸಂದರ್ಭದಲ್ಲಿಯೇ, ಆಂಧ್ರ ಪ್ರದೇಶದ ಭದ್ರಾಚಲಂನ, ಗುಡ್ ಸಮರಿಟಿಯನ್ ಎವೆಂಜೆಲಿಕಲ್ ಲೂಥರನ್ ಚರ್ಚಗೇ ಸೇರಿದ, 85ರ ವಯೋಮಾನದ ಡಾ.ಕಟಾಕ್ಷಮ್ಮ ಅವರನ್ನು 1996ರಲ್ಲಿಯೇ, ಆ ಚರ್ಚಿನ ಸಭೆಯ ಬಿಷಪ್ ಎಂದು ನೇಮಕ ಮಾಡಲಾಗಿತ್ತು. ಏಶಿಯ ಭೂಖಂಡದಲ್ಲಿ ಮೊದಲ ಬಾರಿ ಈ ಸ್ಥಾನವನ್ನು ಅಲಂಕರಿಸಿದ್ದ ಮಹಿಳೆ ಎಂಬ ಖ್ಯಾತಿ ಅವರಿಗೆ ಸಲ್ಲುತ್ತದೆ. ವಯೋ ಸಹಜವಾಗಿ ಅಲ್ಪ ಸಮಯದಲ್ಲೇ ಅವರು ಕಾಲವಶರಾದರು. ಅವರ ಪೂರ್ತಿ ಹೆಸರು ಅಲಿವಳ್ಳಿ.ಎಸ್ ಕಟಾಕ್ಷಮ್ಮ. ಬಿಷಪ್ ಪದವಿಯಲ್ಲಿದ್ದ ಆಕೆಯ ಗಂಡ ಬಿಷಪ್ ಸತೀಶ್ ಪೌಲ್ ರಾಜ್ ಅವರ ಮರಣವಾದ ತಕ್ಷಣ ಕಟಾಕ್ಷಮ್ಮ ಅವರನ್ನು ಬಿಷಪ್ ರನ್ನಾಗಿ ನೇಮಕಮಾಡಲಾಗಿತ್ತು.
ದೇಶವಿದೇಶಗಳಲ್ಲಿ ದೈವಶಾಸ್ತ್ರದಲ್ಲಿ ಅಧ್ಯಯನ ನಡೆಸಿದ್ದ, ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ದಿಗುವಪಾಡು ಗ್ರಾಮದ ಎಗೋನಿ ಪುಷ್ಪಾ ಲಲಿತಾ (1956) ಅವರನ್ನು 1983ರಲ್ಲಿ ಡೀಕನ್ (ಸಹಾಯಕ ಯಾಜಕಿ) ಮತ್ತು 1984 ಪ್ರೀಸ್ಟ್ (ಯಾಜಕಳಾಗಿ) ಆಗಿ ಅಭಿಷೇಕಿತರಾಗಿದ್ದರು. ಮುಂದೆ, 2013ರ ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ, ಅವರನ್ನು ನಂದ್ಯಾಲ ಧರ್ಮಕ್ಷೇತ್ರದ ಧರ್ಮಾಧ್ಯಕ್ಷೆಯಾಗಿ ಅಭಿಷೇಕಿಸಲಾಯಿತು. ದೇಶದ ಮೊದಲ ಪ್ರೊಟೆಸ್ಟಂಟ್‍ರ ಸಿಎಸ್ ಐ ಸಭೆಯ ಮಹಿಳಾ ಧರ್ಮಧ್ಯಕ್ಷ ಎಂಬ ಹೆಗ್ಗಳಿಕೆ ಎಗೋನಿ ಪುಷ್ಪಾ ಲಲಿತಾ ಅವರ ಹೆಗಲಿಗೇರಿದೆ.

ಮಹಿಳಾ ಯಾಜಕಿಯರ ಹೆಜ್ಜೆ ಗುರುತುಗಳು :
ಭಾರತದ ಪ್ರೊಟೆಸ್ಟಂಟ್ ಪಂಥದ ಚರ್ಚುಗಳಲ್ಲಿ ಪೂಜಾಂಕಣವನ್ನು ಮಹಿಳೆಯರು ಏರುವುದು ಕಷ್ಟವಾಗಿದ್ದ ಸಮಯದಲ್ಲಿ, ಅವರು ಧರ್ಮಾಧ್ಯಕ್ಷರಾಗುವುದನ್ನು ಯಾಜಕರಾಗುವುದನ್ನು ಯೋಚಿಸುವುದೇ ಕನಸಿನ ಮಾತಾಗಿತ್ತು.
ಕಳೆದ ಶತಮಾನದ ಎಪ್ಪತ್ತು ಮತ್ತು ಎಂಬತ್ತರ ದಶಕಗಳಲ್ಲಿ ಪ್ರೊಟೆಸ್ಟಂಟ್ ಕ್ರೈಸ್ತ ಪಂಥದ ಧಾರ್ಮಿಕ ಸಭೆಗಳ ಮುಂದಾಳುಗಳು, ತಮ್ಮ ತಮ್ಮ ಧರ್ಮಾಧ್ಯಕ್ಷರುಗಳ ಸಮಾವೇಶಗಳಲ್ಲಿ (ಸಿನೋಡ್) ಈ ನಿಟ್ಟಿನಲ್ಲಿ ಚರ್ಚೆ ಆರಂಭಿಸಿದ್ದರು. ಅವುಗಳ ಫಲಶೃತಿಯಾಗಿ ಒಬ್ಬೊಬ್ಬರೇ ಮಹಿಳೆಯರು ಯಾಜಕರಾಗುವ ಅವಕಾಶಗಳು ತೆರೆದುಕೊಂಡವು.
ದಕ್ಷಿಣ ಭಾರತದ ಪ್ರೊಟೆಸಂಟ್ ಕ್ರೈಸ್ತ ಸಭೆಗಳ ಒಕ್ಕೂಟ – ಚರ್ಚ ಆಫ್ ಸೌಥ ಇಂಡಿಯಾ (ಸಿಎಸ್ ಐ)ಗೆ ಸೇರಿದ, ಬಷಪ್ ಕೆನೆತ್. ಇ. ಗಿಲ್ಲ ಅವರು 1952ರಲ್ಲಿ ಸ್ಥಾಪಿಸಿದ, ಸುವಾರ್ತಿಕರ ತಂಡವಾದ ಸಿಎಸ್ ಐ ಸಭೆಯ ಸಹೋದರಿಯರ ಸಭೆಯ ಸದಸ್ಯೆ ಎಲೆಜಬೆತ್ ಪೌಲ್ (1927-2001) ಅವರನ್ನು ಭಾರತದ ಪ್ರಥಮ ಮಹಿಳಾ ಉಪಯಾಜಕಿ (ಡಿಕನ್) ಎಂದು ಗುರುತಿಸಲಾಗುತ್ತದೆ. ತಮಿಳುನಾಡಿನ ಮೂಲದವರಾದ 1976ರ ಮೇ 6ರಂದು ಅವರನ್ನು ಉಪಯಾಜಕಿಯಾಗಿ ಅಭಿಷೇಕಿಸಲಾಗಿತ್ತು. ಮುಂದೆ 1987ರಲ್ಲಿ ಅವರನ್ನು ಯಾಜಕರ (ಪ್ರೀಸ್ಟ್)ನ್ನಾಗಿ ಅಭಿಷೇಕಿಸಲಾಗಿದೆ. ಎಲೆಜಬೆತ್ ಪೌಲ್ ಅವರು ಕೆಲವು ಸಮಯ ಬೆಂಗಳೂರಿನ ಯುನೈಟೆಡ್ ಥಿಯಾಲಾಜಿಕಲ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಪ್ರೊಟೆಸ್ಟಂಟ್ ಕ್ರೈಸ್ತ ಪಂಥದ ಮೊದಲ ಯಾಜಕಿ :
ದಕ್ಷಿಣ ಭಾರತದ ಪ್ರೊಟೆಸಂಟ್ ಕ್ರೈಸ್ತ ಸಭೆಗಳ ಒಕ್ಕೂಟ – ಚರ್ಚ ಆಫ್ ಸೌಥ ಇಂಡಿಯಾ (ಸಿಎಸ್ ಐ)ಗೆ ಸೇರಿದ, ತ್ರಿವೇಂದ್ರಮ್‍ನಲ್ಲಿ ಪ್ರಧಾನ ಪೀಠ ಹೊಂದಿರುವ, ದಕ್ಷಿಣ ಕೇರಳ ಧರ್ಮಕ್ಷೇತ್ರದ ಮರತಕವಲ್ಲಿ ಡೇವಿಡ್ (1950-2011) ಎಂಬುವವರನ್ನು ಭಾರತದ ಮೊದಲ ಕ್ರೈಸ್ತ ಯಾಜಕಿ (ಗುರು) ಎಂದು ಗುರುತಿಸಬಹುದಾಗಿದೆ. ಏಕೆಂದರೆ, ಅವರನ್ನು 1987ರಲ್ಲಿ, ಪೌಲ್ ಅವರಿಗಿಂತ ಮೊದಲು ಮಹಿಳಾ ಯಾಜಕಿಯನ್ನಾಗಿ ಅಭೀಷೇಕಿಸಲಾಗಿದೆ. ಇಂದು ತಮಿಳುನಾಡಿನ ಪ್ರೊಟೆಸ್ಟಂಟ್ ಪಂಥದ ಕ್ರೈಸ್ತರಲ್ಲಿ-ದಕ್ಷಿಣ ಭಾರತ ಚರ್ಚುಗಳಲ್ಲಿ ಇಂದು 110ಕ್ಕೂ ಅಧಿಕ ಮಹಿಳಾ ಯಾಜಕರಿದ್ದಾರೆ.

ಉತ್ತರ ಭಾರತದಲ್ಲಿ ಮಹಿಳಾ ಯಾಜಕರು :
ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ ಧಕ್ಷಿಣ ಭಾರತದ ಪ್ರೊಟೆಸ್ಟಂಟ್ ಚರ್ಚುಗಳಲ್ಲಿ ಮಹಿಳಾ ಯಾಜಕರ ನೇಮಕದ ಪ್ರಕ್ರಿಯೆ ಆರಂಭವಾಗಿದ್ದರೂ, ಅದು ಉತ್ತರ ಭಾರತದ ಪ್ರೊಟೆಟಸ್ಟಂಟ್ ಪಂಥದ ಚರ್ಚುಗಳಲ್ಲಿ ಪತ್ರಿಫಲನಗೊಳ್ಳಲು ಹೆಚ್ಚು ಸಮಯಾವಕಾಶ ತೆಗೆದುಕೊಂಡಿತು.
ಕಳೆದ 2015ರ ನವೆಂಬರ್ ತಿಂಗಳಲ್ಲಿ ಮಧ್ಯಪ್ರದೇಶದ ಇವ್ಯಾಂಜಲಿಕಲ್ ಲೂಥರನ್ ಚರ್ಚ್ (ಇಎಲ್ ಸಿ -ಎಂಪಿ), 1517ರಲ್ಲಿ ಆರಂಭವಾದ ಸುಧಾರಣಾ ಚಳುವಳಿಯ ಐದನೂರನೇ ವರ್ಷಾಚರಣೆಗೆ ಎರಡು ವರ್ಷಗಳು ಬಾಕಿ ಇರುವಾಗಲೇ ಐವರು ಮಹಿಳೆಯರನ್ನು – ಎಲ್. ಕೆ.ಖಖ, ಸುಂದೀಪಾ ಮಾರ್ಟಿನ್, ಎಲೆಜೆಬತ್ ಪ್ರಸಾದ್ ಮತ್ತು ಇಶಾ ಸ್ಮಿಥ -ಯಾಜಕರನ್ನಾಗಿ ಅಭಿಷೇಕಿಸಲಾಗಿದೆ.
ಇದರೊಂದಿಗೆ, ಯುನೈಟೆಡ್ ಇವ್ಯಾಂಜಲಿಕಲ್ ಲೂಥರನ್ ಚರ್ಚಸ್ ಇನ್ ಇಂಡಿಯಾ (ಯುಇ.ಎಲ್.ಸಿ.ಐ) ಸಭೆಯಲ್ಲಿನ ಮಹಿಳಾ ಯಾಜಕರ ಸಂಖ್ಯೆ 11ಕ್ಕೆ ತಲುಪಿದಂತಾಗಿದೆ. ಓಡಿಸಾ ರಾಜ್ಯದ ಎಮ.ಜಿ.ಬಸಂತಿ ಅವರು ಈ ಸಭೆಗೆ ಸೇರಿದ್ದ ಪ್ರಥಮ ಅಭಿಷಕ್ತ ಮಹಿಳಾ ಯಾಜಕಿ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ. ಅವರನ್ನು 1991ರಲ್ಲಿ ಯಾಜಕಳಾಗಿ ಅಭಿಷೇಕಿಸಲಾಗಿತ್ತು. ಛೋಟಾ ನಾಗಪುರ ಸಿ.ಎಸ್.ಐ ಧರ್ಮಕ್ಷೇತ್ರದಲ್ಲಿ, ತೀರ ಇತ್ತೀಚೆಗೆ ಎಂದರೆ ಮಾರ್ಚ್ 2021ರಲ್ಲಿ ಸೋಮ ಭಾಟ್ಕರ್ ಅವರನ್ನು ಯಾಜಕಿಯನ್ನಾಗಿ ಅಭಿಷೇಕಿಸಲಾಗಿದೆ. ಅವರನ್ನು ಹಿಂದಿನ ವರ್ಷದ ಜನವರಿ ತಿಂಗಳಲ್ಲಿ ಉಪಯಾಜಕಿಯನ್ನಾಗಿ ಅಭಿಷೇಕಿಸಲಾಗಿತ್ತು.
* * *
ಈ ಲೇಖನದ ಸಂಕ್ಷಿಪ್ತ ರೂಪವು, 2021ರ ಸಾಲಿನ ಮಾರ್ಚ್ ತಿಂಗಳ 7ರ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಭಾನುವಾರದ ಪುರವಣಿ, `ಸಾಪ್ತಾಹಿಕ ಸೌರಭ’ದಲ್ಲಿ ಪ್ರಕಟಗೊಂಡಿದೆ. – ಸಂಪಾದಕರು.
* * *

ಎಫ್.ಎಂ.ನಂದಗಾವ್

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram