ಪ್ರಕೃತಿಯ ಸಹೋದರಿ ಹೆಣ್ಣು

Advertisements
Share

ಈ ಮನುಷ್ಯ ಅನ್ನೊ ಸ್ವಾರ್ಥ ಜೀವಿ ತಾನು ಜನಿಸಿದ್ದು ಹೇಗೆ ಎಂದು ನಿಖರವಾಗಿ ಅರಿಯುವಲ್ಲಿ ಇವತ್ತಿಗೂ ವಿಫಲವಾಗಿದ್ದಾನೆ, ವಿಜ್ಞಾನ ಒಂದೇಳಿದ್ರೆ ಧಾರ್ಮಿಕ ಕಥೆಗಳು ಇನ್ನೊಂದು ತೆರನಾಗಿ ಹೇಳುತ್ತವೆ. ಪ್ರತಿಯೊಂದರಲ್ಲೂ ಪ್ರತಿಯೊಬ್ಬರಲ್ಲೂ ಒಂದೊಂದು ತರಹದ ಭಿನ್ನ ಭಿನ್ನ ಬದುಕಿನ ವ್ಯವಹಾರಗಳು ನಮ್ಮ ಕಣ್ಣ ಮುಂದೆ ಕಾಣುತ್ತೇವೆ. ಊಟ-ಉಪಚಾರ, ಸುಖ-ದುಃಖ, ಹಸಿವು-ಅಳಲು, ನೋವು-ನಲಿವು, ಪ್ರೀತಿ-ಪ್ರೇಮ, ನಂಬಿಕೆ-ಮೋಸ, ಮತ್ತು ಇನ್ನಿತರೆ ಕೊಡು-ಕೊಳ್ಳುವಿಕೆಯ ವಿಚಾರ, ವ್ಯವಹಾರಗಳು ನಮ್ಮ ದೈನಂದಿನ ಬದುಕಿನಲ್ಲಿ ಯಾವ ಮತ್ತು ಯಾರ ಆಪೇಕ್ಷಣೆಯೂ ಇಲ್ಲದೆ ಗತಿಸಿ ಹೋಗುತ್ತವೆ. ಆದ್ರೆ ಜಗತ್ತಿನ ಸೃಷ್ಟಿಗೆ ಕಾರಣವಾದ ಏಕೈಕ ಜೀವಿ ಅಂದ್ರೆ ಅದು ಹೆಣ್ಣು. ಅದೊಂದು ಜೀವ ದೈವತ್ವಕ್ಕೆ ಸಮನಾದದಾಗಿದೆ. ಅವಳೊಂದು ನಿಷ್ಕಲ್ಮಶ ಹೃದಯದವಳು ಅವಳಲ್ಲಿ ಯಾವುದರ ಬಗೆಗಿನ ದೂರು ಇಲ್ಲ. ಒಂದು ವೇಳೆ ಇದ್ದರೆ, ಅದು ತನ್ನ ಮೇಲೆ ಪುರುಷ ಮಾಡುವ ದೌರ್ಜನ್ಯ ಮತ್ತು ಶೋಷಣೆ ವಿರುದ್ಧ ಮಾತ್ರವಾಗಿದೆ. ಇಂದಿಗೂ ಪುರುಷನ ಶೋಷಣೆ, ದಬ್ಬಾಳಿಕೆಯಿಂದ ಹೊರಬರಲು ಹರಸಾಹಸ ಪಡುತ್ತಿದ್ದಾಳೆ. ಅದೊಂದು ವಿಷಯ ಮಾತ್ರ ನನ್ನನು ಇನ್ನಿಲ್ಲದಂತೆ ಕಾಡುತ್ತದೆ. ನಾನು ಹೆಚ್ಚಾಗಿ ಮೌಢ್ಯದ ವಿರೋಧಿ, ದೇವರು ಇದ್ದನೋ ಇಲ್ಲವೋ ಎಂದು ನಾನಿಲ್ಲಿ ನನ್ನ ವಾದವನ್ನ ಮಂಡಿಸಲಾರೆ. ಅದರ ಗೋಜಿಗೂ ನಾ ಹೋಗಲಾರೆ, ಅದು ಅವರರ ಕಲ್ಪನೆಗೆ, ಅವರವರ ಮೆದುಳಿಗೆ ಬಿಟ್ಟದ್ದು. ಆದರೆ ನನಗೆ ನನ್ನ ಮನಸ್ಸಿನ ದೇವರ ಮೇಲೆ ಅಪಾರ ನಂಬಿಕೆ ಇದೆ, ಅಂತೆಯೇ ಹೆಣ್ಣು ಅನ್ನೋ ವ್ಯಕ್ತಿತ್ವಕ್ಕೂ ಕೂಡ ಅಷ್ಟೇ ಪ್ರಾಮುಖ್ಯತೆಯನ್ನ ಕೊಡುತ್ತೇನೆ.

ನನ್ನ ದೃಷ್ಟಿಯಲ್ಲಿ ಕಣ್ಣಿಗೆ ಕಾಣುವ ಇನ್ನೊಂದು ದೇವರು ಎಂದರೆ ಅದು ಹೆಣ್ಣೇ ಆಗಿದ್ದಾಳೆ. ಕಾರಣ ಇಷ್ಟೇ; ಅವಳು ತುಂಬಾ ಮೃದು, ಕಷ್ಟವನ್ನು, ಎಲ್ಲಾ ಕಿರುಕುಳಗಳನ್ನು ಎಲ್ಲರಿಂದಲೂ, ಎಲ್ಲದರಿಂದಲೂ ಸಹಿಸಿಕೊಂಡು ಯಾರ ಮೇಲೆಯೂ ಆಪಾದನೆ ಹೊರಿಸಲಾರದೇ ಮೌನ ತಾಳುತ್ತಾಳೆ. ಮೌನ ಮತ್ತು ನಾಚಿಕೆ ಅವಳ ಸ್ವಭಾವ ಮತ್ತು ಅವಳ ಲಕ್ಷಣ. ಅವಳ ಇನ್ನೊಂದು ಮುಖದ ಬಗ್ಗೆ ಹೇಳುವುದಾದರೆ ಅವಳು ಪ್ರಕೃತಿಗೆ ಸಮಾನದವಳಾಗಿದ್ದಾಳೆ. ಪ್ರಕೃತಿಯಾ ಸಹೋದರಿಯಾಗಿದ್ದಾಳೆ ಎಂದರೂ ತಪ್ಪಾಗಲಾರದು. ಅಂತೆಯೇ ತಾಳ್ಮೆ ಮೀರಿದರೆ, ಪ್ರಕೃತಿಯಂತೆಯೇ ಜಗತ್ತನ್ನೇ ನಾಶ ಮಾಡುತ್ತಾಳೆ ಎನ್ನುವುದರಲ್ಲಿ ಕಿಂಚಿತ್ತೂ ಸಂಶಯವಿಲ್ಲ. ಅವಳು ವಿನಃ ಕಾರಣ ಇಲ್ಲಸಲ್ಲದ ವಿಚಾರಕ್ಕೆ ತಲೆ ಹಾಕುವುದಾಗಲಿ, ಅನಗತ್ಯ ಕೃತ್ಯವನ್ನ ಸಾಧಿಸುವುದಕ್ಕಾಗಲಿ ಹೋಗಲಾರಳು. ಆದರೆ ಒಂದಂತೂ ನಾವು ಗಮನಿಸಿದ್ದೇವೆ ಪ್ರಾಚೀನ ಕಾಲದಿಂದಲೂ ನಡೆದು ಬಂದ ಸಂಗತಿ ಮತ್ತು ಹೆಮ್ಮೆಯ ವಿಷಯವೇನೆಂದರೆ, ಸಹನೆ, ಗೌರವ, ಪ್ರೀತಿ, ಕರುಣೆಯೊಂದಿಗೆ ವರ್ತಿಸಿದರೆ ಅವಳು ತಾಯಿಯಾಗುತ್ತಾಳೆ, ಅಕ್ಕ-ತಂಗಿಯಾಗುತ್ತಾಳೆ, ಮಡದಿಯೂ ಆಗುತ್ತಾಳೆ. ಆದರೆ ಅವಳ ದೃಷ್ಟಿಗೆ ಸ್ವಲ್ಪವೂ ತಪ್ಪು ಕಾಣಿಸಿದರೆ ಕೊನೆಗೆ ಮಾನವನ ಅಂತ್ಯಕ್ಕೆ ಅವಳೇ ನಾಂದಿಯಾಡುತ್ತಾ ಇತಿಹಾಸದಲ್ಲಿ ಇಂತಹ ಹತ್ತು ಹಲವು ಘಟನೆಗಳು ಸಾಕಷ್ಟು ನಡೆದಿವೆ.

ಪುರುಷ ಪ್ರಧಾನವಾದ ಈ ಜಗತ್ತಿನಲ್ಲಿ, ಹೆಣ್ಣು ಎಷ್ಟೋ ಕಿರುಕುಳಗಳನ್ನ ಮೆಟ್ಟಿ ನಿಂತು ಎಷ್ಟೋ ಸಾಧನೆಗಳನ್ನ ಮಾಡಿದ್ದಾಳೆ, ಮಾಡುತ್ತಲೇ ಇದ್ದಾಳೆ. ನಮ್ಮ ಪೂರ್ವಿಕರ ಸಮಾಜಕ್ಕೆ ಹೋಲಿಸಿದರೆ ಇತ್ತೀಚಿನ ದಿನಗಳಲ್ಲಿ ಮಹಿಳೆ ಸ್ವಲ್ಪ ಪುರುಷರ ದೌರ್ಜನ್ಯದಿಂದ, ಹಿಂಸೆಯಿಂದ ವಿಶ್ರಾಂತಿ ಪಡೆದಿದ್ದಾಳೆ ಎನ್ನಬಹುದು. ಕಾರಣ ಅವಳ ಮೇಲಿನ ದೌರ್ಜನ್ಯ, ಕಿರುಕುಳ, ಶೋಷಣೆ, ಸ್ವಲ್ಪ ಮಟ್ಟಿಗೆ ಸುಧಾರಿಸಿವೆ. ಭಾರತ ಸಂವಿಧಾನವು ಮಹಿಳೆಗೆ ರಕ್ಷಣೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸತಿ ಸಹಗಮನ ಪದ್ಧತಿ, ದೇವದಾಸಿಯಂತಹ ಅಂದಿನ ಕೆಲವು ಅನಿಷ್ಠ ಪದ್ಧತಿಗಳು ಇಂದಿಗೂ ನೆನದರೆ ಸಾಕು ಮತ್ತೆ ನಮ್ಮ ಮನಸಿಗೆ ಕಲ್ಲೆಸೆದು ಘಾಸಿಮಾಡಿದಂತಾಗುತ್ತವೆ. ಇಲ್ಲಿಯವರೆಗೂ ಲಿಂಗ ಅಸಮಾನತೆಯನ್ನು ಮತ್ತು ಮಹಿಳೆಯರ ವಿರುದ್ಧದ ಹಿಂಸೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ನಾವು ಬಹುದೂರದವರೆಗೆ ಸಾಗಿ ಬಂದಿದ್ದೇವೆ. ಹೆಣ್ಣು ಕೇವಲ ಒಂದೇ ಪಾತ್ರವನ್ನ ವಹಿಸುವುದಿಲ್ಲ ಅವಳೊಂದು ವಿಸ್ಮಯ ಮತ್ತು ಅದ್ಭುತ. ಹೆಣ್ಣಿನ ಸೃಷ್ಟಿಯನ್ನ ಯಾವ ಕವಿ ವರ್ಣಿಸಿದರೂ ಅದು ಕೊನೆಯಾಗದು. ಅವಳ ಮನದ ರೂಪಕ್ಕೆ, ಮತ್ತು ಅವಳ ನಿಷ್ಕಲ್ಮಶ ಹೃದಯಕ್ಕೆ ಯಾವ ದೇವತೆಗಳು ಸಮಾನಗಲು ಸಾಧ್ಯವೇ ಇಲ್ಲ ಎಂಬ ಮಾತನ್ನ ನಾನು ಅತ್ಯಂತ ಸವಾಲಿನಿಂದ ಹೇಳುತ್ತೇನೆ.

ಇನ್ನೊಂದು ದುರಂತ ಮತ್ತು ದುಃಖದ ಸಂಗತಿ ಏನೆಂದರೆ ಹೆಣ್ಣು ದಿನಬೆಳಗಾದ್ರೆ ಸಾಕು ವಿಶ್ವದಾದ್ಯಂತ ಬಹು ಹಂತಗಳಲ್ಲಿ ಭಾವನಾತ್ಮಕ, ಮಾನಸಿಕ ಹಿಂಸಾತ್ಮಕ, ಮತ್ತು ಲೈಂಗಿಕ ಅಳಲಿಗೆ ತುತ್ತಾಗುತ್ತಿದ್ದಾಳೆ. ದಿನಬೆಳಗಾದರೆ ಸಾಕು ವಾರ್ತೆಗಳಲ್ಲಿ, ಪತ್ರಿಕೆಗಳಲ್ಲಿ ಹೆಣ್ಣಿನ ಮೇಲಿನ ಅತ್ಯಾಚಾರದ ವಿಷಯಗಳು, ವರದಕ್ಷಿಣೆ ಕಿರುಕುಳದ ವಿಚಾರಗಳು, ಹೀಗೆ ಹತ್ತು ಹಲವು ಕೃತ್ಯಗಳು ನಡೆಯುತ್ತಿರುವ ಸುದ್ದಿಗಳನ್ನು ಓದುತ್ತೇವೆ. ಆದರೆ ಇದೆಲ್ಲ ಅಂತ್ಯವಾದ ದಿನವಂತೂ ಸ್ವರ್ಗವನ್ನೇ ಭೂಲೋಕ ನಾಚಿಸಿ ಸಾಹಸ ಮೆರೆಯುತ್ತದೆ. ಮನೆಯ ಹೊರಗೆ ಮತ್ತು ಒಳಗೆ ಮಹಿಳೆಯರ ಕುರಿತಾದ ವರ್ತನೆಯಲ್ಲಿ ಕಳೆದ ಸುಮಾರು ವರ್ಷಗಳಿಂದಲೂ ಸಾಕಷ್ಟು ಬದಲಾವಣೆಯನ್ನು ತೋರಿವೆ. ಆದರೆ ಪಿತೃಪ್ರಧಾನ ರಾಷ್ಟ್ರಗಳು ಹಾಗೂ ಸಮಾಜದ ಹಿಂಜರಿತದ ಮನಸ್ಥಿತಿಯಿಂದಾಗಿ ಲಿಂಗ ಅಸಮಾನತೆಯನ್ನು ಇಂದಿಗೂ ಆಚರಿಸಲಾಗುತ್ತಿದೆ. ಅಮೆರಿಕದ ಮಾಜಿ ಸರ್ವೋಚ್ಚ ನ್ಯಾಯಾಲಯದ ಮಹಿಳಾ ನ್ಯಾಯಮೂರ್ತಿಗಳಾದ Joan Ruth Bader Ginsburg ರವರು ಲಿಂಗ ಸಮಾನತೆಯ ಬಗ್ಗೆ ಈ ರೀತಿ ಹೇಳುತ್ತಾರೆ; “ನಾನು ಲಿಂಗಕ್ಕೆ ಯಾವುದೇ ಉಪಕಾರವನ್ನು ಕೇಳುವುದಿಲ್ಲ. ನಮ್ಮ ಕತ್ತಿನ ಮೇಲಿಟ್ಟ ಪಾದಗಳನ್ನ(ಒತ್ತಡವನ್ನು)ತೆಗೆದುಹಾಕಿರಿ ಎಂದು ಮಾತ್ರ ನಮ್ಮ ಸಹೋದರ ಬಂಧುಗಳಲ್ಲಿ ಕೇಳುತ್ತೇನೆ”. ಮಹಾತ್ಮರ ಬಾಯಲ್ಲಿನ ಮಾತುಗಳೇ ಹೀಗೆ ಮನುಕುಲದ ಮನವನ್ನ ಕಲುಕಿಬಿಡುತ್ತವೆ. ಅವರ ವಾಕ್ಯದ ಸಾಲುಗಳು ಕಡಿಮೆ ಇದ್ದರು, ಅವರ ಮಾತುಗಳನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡು ಅರಿತುಕೊಂಡರೆ, ಒಂದು ಹೊಸ ಗ್ರಂಥವನ್ನೇ ರಚಿಸಬಹುದಾಗಿದೆ. ಕಿರುಕುಳ ನೋವು ಸಂಕಟ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅಸಮಾನತೆಯ ಕುರಿತು ಹಂಚಿಕೊಳ್ಳಲು ವಿಶ್ವದಾದ್ಯಂತ ಮಹಿಳೆಯರಲ್ಲಿ ಹಲವಾರು ಕಥೆಗಳಿವೆ, ಅವನ್ನೆಲ್ಲ ನಾವು ಆಲಿಸಿ ಅವರ ಭದ್ರತೆಗೆ ಸಾಕ್ಷಿಯಾಗೋಣ ಎನ್ನುವುದು ನನ್ನ ಕಳಕಳಿಯ ಪ್ರಾರ್ಥನೆಯಾಗಿದೆ.

ಮಹಿಳೆಯರು ತಮ್ಮ ಮನೆಗಳಲ್ಲಿ ಮತ್ತು ಕೆಲಸದ ಸ್ಥಳಗಳಲ್ಲಿ ಅಸಮಾನತೆಯನ್ನು ಎದುರಿಸಬೇಕಾಗುತ್ತದೆ. ಪುರುಷ ಪ್ರಧಾನವಾದ ಈ ಜಗತ್ತಿನಲ್ಲಿ ಮಹಿಳೆಯರು ಏಷ್ಟೋ ಸಾಧನೆಗಳನ್ನು ಮಾಡಿದರೂ ಅವರು ಸಾಕಷ್ಟು ಸವಾಲುಗಳನ್ನ ಎದುರಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ವೃತ್ತಿಪರ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಕೆಲಸದ ಸ್ಥಳಗಳಲ್ಲಿ ಮಹಿಳೆಯರು ಅನುಭವಿಸುತ್ತಿರುವ ಲೈಂಗಿಕ ಕಿರುಕುಳ ವಿಭಿನ್ನ ರೂಪಗಳನ್ನ ಪಡೆದುಕೊಳ್ಳುತ್ತಿದೆ ಎನ್ನೋದು ವಿಷಾದದ ಸಂಗತಿ ಇವೆಲ್ಲ ವಿಚಾರ ಮತ್ತು ದೌರ್ಜನ್ಯಗಳು ಅವಳ ಮಾನಸಿಕ ಆಘಾತಕ್ಕೆ ಕಾರಣವಾಗುವುದಲ್ಲದೆ ಅವರ ಗೌರವಯುತ ಜೀವನ ನಡೆಸುವ ಹಕ್ಕನ್ನೇ ಕಿತ್ತುಕೊಂಡಂತಾಗುತ್ತದೆ. ಒಂದು ಕ್ಷಣ ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಹಿಳೆಗೆ ಇನ್ನಾದರೂ ಒಳ್ಳೆ ಬದುಕನ್ನು ತನ್ನಿಷ್ಟ ಬಂದಂತೆ ಕಟ್ಟಿಕೊಳ್ಳುವ ಸ್ವಾತಂತ್ರ್ಯ ಇಲ್ಲವೇನೋ ಎಂದೆನಿಸುತ್ತದೆ. ಇದಕ್ಕೆ ಉದಾಹರಣೆಯಾಗಿ ಒಂದು ಅಚ್ಚರಿಯ ಸಂಗತಿಯನ್ನ ನಾ ಹೇಳಬಲ್ಲೆ. ಮೊನ್ನೆ ದುಬೈನಲ್ಲೊಬ್ಬ ರಾಜ ಯಾವುದೋ ಒಂದು ಸಣ್ಣ ಅರ್ಥವಿಲ್ಲದ ವಿಚಾರಕ್ಕೆ ಸಂಬಂಧಪಟ್ಟಂತೆ ತನ್ನ ಸ್ವಂತ ಮಗಳನ್ನೇ ಗೃಹಬಂಧನದಲ್ಲಿಟ್ಟು ಅವಳ ಸ್ವಾತಂತ್ರ್ಯವನ್ನ ಕಸಿದುಕೊಂಡಿರುವುದು ತುಂಬಾ ದುಃಖಕರ ಸಂಗತಿ. ಅವಳಿಗೆ ಅಲ್ಲಿ ಎಲ್ಲಾ ತರಹದ ಸೌಕರ್ಯಗಳು ಆತ ಒದಗಿಸಿಕೊಟ್ಟಿದ್ದಾನೆ. ಅವಳು ಈಗ ಇರುವುದು ಬಂಗಾರದ ಅರಮನೆಯಲ್ಲಿ, ಆದರೂ ಅವಳಿಗೆ ಅದು ಬಂಧಿಖಾನೆಯಾಗಿದೆ. ಅದನ್ನ ಸ್ವತಃ ಅವಳೇ ಒಂದು ವಿಡಿಯೋ ಮಾಡಿ ಮಾತಾಡಿ ಅದನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ. ಇದು ವಿಶ್ವದ ಮಾನವ ಹಕ್ಕುಗಳ ಸಮುದಾಯದ ಕೆಂಗಣ್ಣಿಗೂ ಗುರಿಯಾಗಿದೆ. ಇದು ಒಬ್ಬ ದೈತ್ಯ ರಾಜಕುಮಾರನ ಮಗಳ ಕಥೆಯಾದದ್ದಕ್ಕೆ ಇಷ್ಟೊಂದು ಗಮನ ಸೆಳೆದಿದೆ. ಆದರೆ ಇಂತಹ ಸಾಕಷ್ಟು ಬೇಸರದ ಕೃತ್ಯಗಳು ಎಲ್ಲಾ ತರಹದ, ಎಲ್ಲಾ ವರ್ಗದ ಮಹಿಳೆಯರ ಮೇಲೆ ನಡೆಯುತ್ತಲೇ ಇವೆ; ಆದರೆ ಅವುಗಳೆಲ್ಲಾ ಬೂದಿ ಮುಚ್ಚಿದ ಕೆಂಡದಂತಾಗಿವೆ. ನಮ್ಮ ಕಣ್ಣಿಗೆ ಕಾಣ ಸಿಗುವುದಿಲ್ಲವಷ್ಟೇ.

“ಯಾತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ” ಮಹಿಳೆಯರನ್ನು ಎಲ್ಲಿ ಗೌರವಿಸಲಾಗುತ್ತದೆಯೋ, ಅಲ್ಲಿ ದೈವತ್ವವು ಅರಳುತ್ತದೆ ಎಂಬುವುದು ಬಹಳ ಸ್ಪಷ್ಟವಾದ ವಿವರಣೆಯಾಗಿದೆ. ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಅವರ ಬದುಕನ್ನು ತಮ್ಮಿಷ್ಟ ಬಂದಂತೆ ರೂಪಿಸಿಕೊಳ್ಳುವ ಹಕ್ಕು ಇದೆ. ಆದೇ ರೀತಿ ಸಮಾಜಕ್ಕೆ ಕೆಡುಕಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಕೂಡ ಅವರ ಮೇಲಿರುತ್ತದೆ. ಅಂತೆಯೇ ನಾವು ನೀವೆಲ್ಲ ಇಂದು ಹೆಣ್ಣಿನ ಮೇಲಿನ ಶೋಷಣೆಗಳನ್ನು ತಡೆಯುವಲ್ಲಿ ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಳ್ಳೋಣ ಮತ್ತು ಅವಳಿಗೂ ಸಮಾನ ಬದುಕನ್ನು ದೊರಕಿಸಿಕೊಡೋಣ. ಅದಕ್ಕಾಗಿ ಎಲ್ಲರೂ ಬದ್ಧರಾಗೋಣ ಎಂದು ತಮ್ಮೆಲ್ಲರಲ್ಲಿ ವಿನಂತಿಸಿಕೊಳ್ಳುತ್ತಾ, ಸಮಾಜದ ಪ್ರತಿಯೊಬ್ಬ ಮಹಿಳೆಯರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯವನ್ನು ಕೋರುತ್ತೇನೆ.

ಶಿವಮೂರ್ತಿ, ರಾಯಚೂರು

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram