ಕ್ರೈಸ್ತ ಧಾರ್ಮಿಕ ಪಂಚಾಂಗದ ಪ್ರಕಾರ ಇದೀಗ ನಾವು ನಲವತ್ತು ದಿನಗಳ ಅವಧಿಯ ತಪಸ್ಸುಕಾಲವನ್ನು ಆಚರಿಸುತ್ತಿದ್ದೇವೆ. ಇತರ ಧಾರ್ಮಿಕ ಪರಿಭಾಷೆಯಲ್ಲಿನ ನೋಂಪಿ, ವ್ರತ, ನೇಮ, ದ್ಯಾವರು ಇತ್ಯಾದಿ ಆಚರಣೆಗಳಿಗೆ ಸರಿಸಮನಾಗಿ ಅಥವಾ ಇನ್ನೂ ಸ್ವಲ್ಪ ಕಠಿಣತಮವಾಗಿ ನಾವು ತಪಸ್ಸುಕಾಲವನ್ನು ಪರಿಭಾವಿಸುತ್ತೇವೆ. ಲತೀನ್ ಭಾಷೆಯಲ್ಲಿ ತಪಸ್ಸುಕಾಲವನ್ನು ಟೆಂಪುಸ್ ಕ್ವಾಡರ್ಜೆಸಿಮಾಲೆ(tempus quadragesimale) ಅಂದರೆ ನಲವತ್ತು ದಿವಸಗಳ ಅವಧಿ ಎಂದು ಕರೆಯಲಾಗಿದೆ. ಅದನ್ನೇ ನಾವು ತಪಸ್ಸುಕಾಲ ಎನ್ನುತ್ತಿದ್ದೇವೆ. ಯೇಸುಸ್ವಾಮಿ ಬೆಂಗಾಡಿನಲ್ಲಿ ನಲವತ್ತು ದಿನಗಳ ಉಪವಾಸವ್ರತ ಮಾಡಿದರೆಂದು ಪವಿತ್ರ ಶ್ರೀಗ್ರಂಥದ ಮೂಲಕ ಅರಿತಿರುವ ನಾವು ನಮ್ಮ ದೇಸೀಸಂಸ್ಕೃತಿಯ ನೇರದಲ್ಲಿ ಅದನ್ನು “ತಪಸ್ಸು” ಎಂದು ಕರೆದಿದ್ದೇವೆ. ನಮ್ಮ ದೇಶದ ಪರಿಭಾಷೆಯಲ್ಲಿ ತಪಸ್ ಎಂದರೆ ದಹಿಸುವುದು, ಉರಿಸುವುದು, ಸುಟ್ಟು ಬೂದಿ ಮಾಡುವುದು ಎಂಬರ್ಥವಿದೆ. ಕಾಮ ಕ್ರೋಧ ಲೋಭ ಮೋಹಾದಿ ಎಂಟು ದುರ್ಗುಣಗಳನ್ನು ಮೆಟ್ಟಿ ನಿಲ್ಲಲು ಸಾಧುಸಜ್ಜನರು ಒಂಟಿಕಾಲ ಮೇಲೆ ನಿಂತು ತಪಸ್ಸು ಮಾಡಿದರು, ನಾಲ್ಕೂ ಕಡೆ ಬೆಂಕಿ ಉರಿಸಿ ಸೂರ್ಯನ ಪ್ರಖರತೆಯ ಕೆಳಗೆ ನಿಂತು ತಪಸ್ಸು ಮಾಡಿದರು, ಎಲ್ಲವನ್ನೂ ತೊರೆದು ಬುಂಡೆಬುಂಡೆಯಾಗಿ ನಿಂತು ತಪಸ್ಸು ಮಾಡಿದರು ಎಂದು ಪುರಾಣ ಪುಣ್ಯಕತೆಗಳಲ್ಲಿ ಕೇಳಿ ತಿಳಿದಿದ್ದೇವೆ. ಮಧು ಮಾನಿನಿ ಲೋಲುಪತೆಗಳೆಂಬ ಮನಸಿನ ಕೊಳಕುಗಳನ್ನು ಉರಿಸಿ ಕಳೆದು ಸಂಪೂರ್ಣ ಸಜ್ಜನನಾಗುವ ಪ್ರಕ್ರಿಯೆಯಲ್ಲಿ ಕೊನೆಗೆ ದೇವರೇ ಇಳಿದುಬಂದು ತಾಪಸಿಯ ಗೆಳೆಯನಾಗುತ್ತಾನೆ, ಅದುವೇ ಮೋಕ್ಷಪ್ರಾಪ್ತಿ ಎಂದೂ ನಂಬಿದ್ದೇವೆ.
ನಮ್ಮ ಪೂರ್ವಜರು ಪವಿತ್ರ ಶ್ರೀಗ್ರಂಥವನ್ನು ಅನುವಾದಿಸುವಾಗ ನಮ್ಮ ನೆಲದ ಜಾಯಮಾನಕ್ಕೆ ಒಗ್ಗುವಂತೆ ತಪಸ್ಸುಕಾಲ ಎಂದು ಕರೆದಿರುವುದು ಅತ್ಯಂತ ಸೂಕ್ತವಾಗಿದೆ. ಪವಿತ್ರ ಬೈಬಲ್ ನಲ್ಲಿ ‘ನಲವತ್ತು ದಿನಗಳು’ ಎಂಬ ಪದಪ್ರಯೋಗಕ್ಕೆ ಬಹಳ ಮಹತ್ವವಿದೆ. ಅದೊಂದು ಒಡಪು, ಬಲು ನಿಗೂಢ. ಒಂದು ಅಗಣಿತ ಸಂಖ್ಯೆಯನ್ನು ಸೂಚಿಸುವಾಗ ನಾವು ‘ನೂರಾರು’ ಎಂದು ಬಳಕೆ ಮಾಡುತ್ತೇವೆ. ನೂರಾರು ವರ್ಷಗಳ ಹಿಂದಿನ, ನೂರಾರು ದೇಶಗಳ, ನೂರಾರು ಜನಪದ ಕತೆಗಳಲ್ಲಿ ಬರುವ, ನೂರಾರು ವಾದ್ಯಗಳನ್ನು ನುಡಿಸುತ್ತಾ, ನೂರಾರು ದಿಕ್ಕುಗಳಿಂದ, ನೂರಾರು ಮಕ್ಕಳು ಮೆರವಣಿಗೆ ಹೊರಟಿದ್ದಾರೆ.
ಬೈಬಲ್ ಕಾಲದಲ್ಲಿ ಸಹ ಅಂಥದೇ ಅಗಣಿತ ಸಂಖ್ಯೆಯು ನಲವತ್ತು ಎಂಬ ಹೆಸರಿನಲ್ಲಿ ಬಳಕೆಯಾಗಿದೆ. ಬೈಬಲ್ ಕಾಲದ ಸಾಂಸ್ಕೃತಿಕ ಪರಂಪರೆಯಲ್ಲಿ ನಲವತ್ತು ಎಂಬುದನ್ನು ನಾವು ನಮ್ಮ ನೂರಾರು ಎಂಬ ಭಾರೀಸಂಖ್ಯೆಯೊಂದಿಗೆ ಸಮೀಕರಿಸಿ ನೋಡಬೇಕು. ಹಾಗೆ ಗಮನಿಸಿದಾಗ ನಲವತ್ತು ಎಂಬುದು ದಶಮಾನದ ಎಣಿಕೆಯ 40 ಅಂಕಿ ಅಲ್ಲ, ಬದಲಿಗೆ ಅದೊಂದು ಅನೂಹ್ಯವೂ ಅನಂತವೂ ಆದ ದೊಡ್ಡ ಸಂಖ್ಯೆ ಎಂದು ಅರ್ಥವಾಗುತ್ತದೆ.
ನೋಹನ ಕಾಲದಲ್ಲಿ ಸರ್ವೇಶ್ವರಸ್ವಾಮಿಯು ಭೂಮಿಯ ಮೇಲೆ ನಲವತ್ತು ಹಗಲು ನಲವತ್ತು ರಾತ್ರಿ ಮಳೆ ಸುರಿಸಿದರು, ಮೋಶೆಯು ಸಿನಾಯ್ ಬೆಟ್ಟದ ಮೇಲೆ ನಲವತ್ತು ದಿನ ತಪ ಮಾಡಿ ದೇವರ ಹತ್ತು ಕಟ್ಟಳೆಗಳನ್ನು ಹೊತ್ತು ತಂದನು, ಪ್ರವಾದಿ ಎಲೀಯನು ನಲವತ್ತು ದಿನ ಪ್ರಯಾಣ ಮಾಡಿ ಹೋರೇಬ್ ಬೆಟ್ಟ ತಲಪಿದನು, ಪ್ರವಾದಿ ಯೋನನು ನಿನೆವೆ ಪಟ್ಟಣದ ಚೌಕದಲ್ಲಿ ನಿಂತು ಗಟ್ಟಿಯಾದ ಧ್ವನಿಯಲ್ಲಿ’ ಇನ್ನು ನಲವತ್ತು ದಿನ ಅಷ್ಟೇ, ನಲವತ್ತು ದಿನ ಕಳೆಯುತ್ತಿದ್ದ ಹಾಗೇ ಈ ನಿನೆವೆ ಎಂಬ ಪಟ್ಟಣವೇ ಇರುವುದಿಲ್ಲ’ ಎಂದು ಉದ್ಘೋಷಿಸುತ್ತಾನೆ. ಅದನ್ನು ಕೇಳಿದ್ದೇ ಆ ಪಟ್ಟಣದ ಜನರೆಲ್ಲ ಓಡಿಹೋಗಿ ದುಕೂಲಗಳನ್ನು ಬಿಸುಟು ತಲೆಯ ಮೇಲೆ ಬೂದಿ ಸುರಿದುಕೊಂಡು ಪರಿತಾಪಪಟ್ಟು ದೇವರಿಗೆ ಶರಣಾಗುತ್ತಾರೆ.
ಅದೇ ರೀತಿ ಬೈಬಲಿನ ಹೊಸ ಒಡಂಬಡಿಕೆಯಲ್ಲೂ ಯೇಸುಸ್ವಾಮಿಯು ಮರಳುಗಾಡಿನಲ್ಲಿ ನಲವತ್ತು ದಿನ ಉಪವಾಸ ಮಾಡಿದರು, ಅವರು ಪುನರುತ್ಥಾನರಾಗಿ ನಲವತ್ತನೇ ದಿನ ಸ್ವರ್ಗಾರೋಹಣರಾದರು ಎಂದು ಓದುತ್ತೇವೆ. ಸ್ತ್ರೀ ರೂಪ ಧನ ವಿಭವಗಳೆಂಬ ಅಷ್ಟೈಶ್ವರ್ಯ ಭೋಗ ಭಾಗ್ಯಗಳ ಪ್ರಲೋಭನೆಗಳನ್ನು ಜಯಿಸಿದ ನಂತರ ಭುವಿಯಲ್ಲಿ ಸಮರಸದ ಸಂದೇಶ ಪಸರಿಸುತ್ತಾರೆ. ನುಡಿದಂತೆ ನಡೆಯುತ್ತಾರೆ ಮಡಿಯುತ್ತಾರೆ. ಅವರ ಜೀವನವೇ ನಮಗೆ ಸಂದೇಶವಾಗಿದೆ. ಈ ತಪಸ್ಸುಕಾಲದ ನಲವತ್ತು ದಿನಗಳಲ್ಲಿ ನಾವೂ ಸಹ ಉಪವಾಸ ಮಾಡಬೇಕೆನ್ನುವುದೇ ಒಂದು ಪ್ರೇರಣೆ. ಉಪವಾಸವೆಂದರೆ ಊಟ ಬಿಡುವುದು ಎಂದಲ್ಲ. ಹೇಗೆ ಒಂದು ಹೊತ್ತು ಊಟ ಬಿಟ್ಟರೂ ಮನುಷ್ಯ ಬದುಕಬಲ್ಲನೋ ಹಾಗೆ ನಮಗೆ ಅಗತ್ಯವೆಂದು ನಾವು ಅಂದುಕೊಂಡಿರುವ ಎಷ್ಟೋ ಅಭ್ಯಾಸಗಳನ್ನು ನಾವು ವರ್ಜಿಸುವುದೇ ಉಪವಾಸ. ಹಾಸಿಗೆಯ ಮೇಲೆ ಮಲಗುವ ಬದಲು ಚಾಪೆಯ ಮೇಲೆ ಮಲಗುವುದೊಂದು ಉಪವಾಸ. ಕುಡಿಯುವುದನ್ನು ಬಿಡಿ, ಲೈಂಗಿಕ ಆಲೋಚನೆಗಳನ್ನು ಬಿಡಿ, ಅನಗತ್ಯ ಪ್ರವಾಸಗಳನ್ನೂ ಮೋಜಿನ ಔತಣಗಳನ್ನೂ ಆಡಂಬರದ ಬಟ್ಟೆಗಳನ್ನೂ ಬಿಡಿ, ನಿಮಗಿಂತ ಕೆಳಮಟ್ಟದ ಜನರಿಗೆ ಒಂದು ಸಂತೋಷದ ಊಟ ಕೊಡಿ, ಒಳ್ಳೆಯ ಬಟ್ಟೆ ಕೊಡಿ, ಸಿಡುಕದೆ ನಗುನಗುತ್ತಾ ಇರಿ, ಜಗಳ ಮತ್ತು ವಾದಗಳಿಂದ ದೂರವಿರಿ, ಒಬ್ಬರ ಹಿಂದೆ ಮಾತಾಡುವುದನ್ನು ಬಿಡಿ, ಇವೇ ನಿಜವಾದ ಉಪವಾಸ. ಇಂತಹ ಉಪವಾಸ ಮತ್ತು ತಪಸ್ಸಿನಿಂದ ಮಧು ಮಾನಿನಿ ಲೋಲುಪತೆ ನಾನುನನ್ನದು ಎಂಬ ಅನಗತ್ಯ ಕಲ್ಮಶಗಳನ್ನು ಸುಟ್ಟು ಬೂದಿಮಾಡಿ ನಗು, ಕರುಣೆ, ತ್ಯಾಗ, ಪ್ರೀತಿಯೆಂಬ ಒಡವೆಗಳನ್ನು ತೊಡುವುದೇ ನಿಜವಾದ ತಪಸ್ಸು.
ಅದು ನಲವತ್ತು ಎಂಬ ಅಂಕಿಸಂಖ್ಯೆಯ ಮಿತಿಯನ್ನು ಮೀರಿ ಅನಂತಕಾಲದವರೆಗೂ ವ್ಯಾಪಿಸಲಿ ಎಂದು ಹಾರೈಸೋಣ.
ಸಿ ಮರಿಜೋಸೆಫ್