ತಪಸ್ಸು ಕಾಲ

Advertisements
Share

ಕಥೋಲಿಕ ಕ್ರೈಸ್ತ ಪಂಚಾಗದ ಆರಾಧನಾ ವಿಧಿಯಲ್ಲಿ ಕ್ರಿಸ್ತಜಯಂತಿಯ ಕಾಲದ  ನಂತರ ಬರುವ ವಿಶೇಷ ಕಾಲವೇ ತಪಸ್ಸು ಕಾಲ. ಇದು ಪ್ರತಿಯೊಬ್ಬ ಕ್ರೈಸ್ತ ಭಕ್ತನಿ/ಳಿಗೂ ವರದಾನದ ಸುರಿಮಳೆಯ ಕಾಲ. ತ್ರೈಏಕ ದೇವರ ಅನಂತ ಪ್ರೀತಿಯ ಅಂತರಾಳವನ್ನು ಅರಿತುಕೊಳ್ಳಲು ಸುಪ್ರಸ್ನತೆಯ ಕಾಲ. ಪ್ರಭು ಯೇಸು ಕ್ರಿಸ್ತರ ಹಿಂಬಾಲಕರು ಕ್ರೈಸ್ತ ಧರ್ಮದ ಸತ್ವಭರಿತವಾದ ಅಧ್ಯಾತ್ಮಿಕತೆಯ ಆಂತರಿಕ ತಿರುಳನ್ನು ಅರಿತುಕೊಳ್ಳಬೇಕಾದರೆ ತಪಸ್ಸು ಕಾಲದ ಮಹತ್ವವನ್ನು ಅರಿತುಕೊಳ್ಳುವುದು ಸೂಕ್ತ.

ಹಿನ್ನೆಲೆ

ದೇವರು ಮನುಕುಲವನ್ನು ತಮ್ಮ ರೂಪದಲ್ಲಿ ಹಾಗೂ ಹೋಲಿಕೆಯಲ್ಲಿ ಸೃಷ್ಟಿಸಿದರು ಎಂದು ಬೈಬಲ್ ಗ್ರಂಥದ ಪ್ರಥಮ ಪುಸ್ತಕವಾದ ಆದಿಕಾಂಡದ ಪ್ರಥಮ ಅಧ್ಯಾಯದಲ್ಲಿ “ಸೃಷ್ಟಿಸಿದರು ನರರನ್ನು ತಮ್ಮ  ಹೋಲಿಕೆಯಲ್ಲಿ,  ಸೃಷ್ಟಿಸಿದವರನ್ನು ದೇವಾನುರೂಪದಲ್ಲಿ ಸೃಷ್ಟಿಸಿದವರನ್ನು ಸ್ತ್ರೀಪುರುಷರನ್ನಾಗಿ” (೧:೨೭) ಎಂದು ದೇವರ ವಾಕ್ಯ ನಮಗೆ ತಿಳಿಸುತ್ತದೆ. ಆದರೆ  ನರಮಾನವರು ದೇವರ ಅನಂತ ಪ್ರೀತಿನ್ನು ಅತಿ ಯುಕ್ತಿಯ ಸೈತಾನನ ವಂಚನೆಯ ಮಾತಿಗೆ ಮರುಳಾಗಿ ಕ್ಷಣಾರ್ಧದಲಿ ದೇವರ ವರದಾನವಾಗಿದ್ದ ಅಮರತ್ವವನ್ನು ಕಳೆದು ಕೊಂಡು ಬೆತ್ತಲಾದರು (ಆದಿ:೩:೭). ಹೀಗೆ ದೈವ ಪ್ರೀತಿಯಿಂದ ದೂರಾಗಿ ಬೆತ್ತಲಾದ ತನ್ನ ಸೃಷ್ಟಿಯ ಮುಕುಟವಾದ ಸ್ತ್ರೀಪುರುಷರನ್ನು ತಾವು ಅವರಿಗಾಗಿ ಸೃಷ್ಟಿಸಿದ್ದ ನೋಟಕ್ಕೆ ರಮ್ಯವೂ ಊಟಕ್ಕೆ ಅತಿರುಚಿಕರವೂ ಆದ ಹಣ್ಣು ಹಂಪಲಗಳು ದೊರೆಯುತ್ತಿದ್ದ ಏದನ್ ತೋಟದಿಂದಲೂ ಹೊರದೂಡಿದರು (ಆದಿ:೩:೨೩). ಆಗ ನರಮಾನವರು  ದೈವತ್ವವನ್ನು ಕಳೆದುಕೊಂಡು ಆಧ್ಯಾತ್ಮಿಕ ಬಿಕಾರಿಯಾದರು, ದಿಕ್ಕುತೋಚದೆ ಕಂಗಾಲಾಗಿ ಬಸವಳಿದು ಹೋದರು ಮಾತ್ರವಲ್ಲದೆ ಬಹು ಯುಕ್ತಿಯ ಸೈತಾನನ ಗುಲಾಮರಾದರು. ಮನುಕುಲ ಸೈತಾನನ ಗುಲಾಮಗಿರಿಯಿಂದ ಬಿಡುಗಡೆ ಬಯಸಿ  ತಮ್ಮ ಪಾಪ ಪರಿಹಾರಕ್ಕಾಗಿ ದೇವರಿಗೆ ವಿವಿಧ ಯಜ್ಞ ಬಲಿಗಳನ್ನು ಅರ್ಪಿಸಿ ಪೂರ್ಣಫಲ ದೊರಕದೆ ದೇವರಿಂದ ದೂರಾಗಿ ನಿರಾಸೆಯ ಕಡಲ ತಳ ಸೇರಿದರು. ಮೃತ್ಯುಪಾಶ ಅವರನ್ನು ಗಾಢವಾಗಿ ಆವರಿಸಿ ಅಂಧಕಾರದ ಕಂದಕಕ್ಕೆ ತಳ್ಳಿತು. ಮನುಕುಲ ಸೈತಾನನ ಕಪಿಮುಷ್ಟಿಯಲ್ಲಿ ಸಿಲುಕಿತು. ಅವರು ಸೈತಾನನ ಪಕ್ಕಾ ಗುಲಾಮರಾಗಿ ದೇವರಿಂದ ದೂರ ದೂರ ಸರಿಯಿತು. ಇದು ತ್ರೈಏಕ ದೇವನಿಗೆ ನುಂಗಲಾರದ ತುತ್ತಾಯಿತು.

ಮುಕ್ತಿಯ ಯೋಜನೆ

ತ್ರೈಏಕ ದೇವರು ತನ್ನ ಅನಂತ ಪ್ರೀತಿಯಿಂದ  ದೂರ ಸರಿದ ಮನುಕುಲವನ್ನು ರಕ್ಷಿಸಲು ಯೋಜನೆಯೊಂದನ್ನು ರೂಪಿಸಿದರು. ಆ ಯೋಜನೆಯ ಪರಮ ಫಲವೆ ಪ್ರಭು ಯೇಸುವಿನ ಜನನ ತದನಂತರ ಅವರ ಪಾಡು, ಮರಣ ಮತ್ತು ಪುನರುತ್ಥಾನ. ಕ್ರಿಸ್ತಜಯಂತಿಯ ಕಾಲ ಮನುಕುಲದ ರಕ್ಷಣೆಗೆ ಪ್ರಭು ಯೇಸು ಮಾನವರಾಗಿ ಅದ್ಭುತ ಸಂದೇಶವನ್ನು ಸಾರಿದರೆ, ತಪಸ್ಸು ಕಾಲವು ಮನುಕುಲದ ಪ್ರೀತಿಗಾಗಿ ಪ್ರಭು ಅನುಭವಿಸಿದ ಕ್ರೂರ ಪಾಡು ಮತ್ತು ಶಿಲುಬೆಯ ಕಠೋರ ಮರಣದ ದಿವ್ಯ ಸಂದೇಶವನ್ನು ಮನುಕುಲಕ್ಕೆ ಬಿತ್ತರಿಸುತ್ತದೆ.

ಯಾವ ಪ್ರಾಣಿ ಬಲಿಅರ್ಪಣೆಯಿಂದಲೂ ಸಂತೃಪ್ತರಾಗದ ತಂದೆ ದೇವರು ಪ್ರಭುಯೇಸುವಿನ ಸ್ವಬಲಿಯಿಂದ ಅಂದರೆ ಕಠೋರವಾದ ಶಿಲುಬೆಯ ಮರಣದಿಂದ ಸಂಪೂರ್ಣ ಸಂತೃಪ್ತರಾಗಿ ಮನುಕುಲವನ್ನು ಪರಿಪೂರ್ಣವಾಗಿ ಹಾಗೂ ಉದಾರವಾಗಿ ಕ್ಷಮಿಸಿದರು. ಮನುಕುಲದ ಅವಿಧೇಯತೆಯಿಂದ ಮುಚ್ಚಲಾಗಿದ್ದ ದೈವಿ ರಾಜ್ಯದ ಬಾಗಿಲನ್ನು ಪ್ರಭುಯೇಸು ತಮ್ಮ ವಿಧೇಯತೆಯಿಂದ ಮನುಕುಲಕ್ಕೆ ಮತ್ತೆ ತೆರೆದರು ಇಂತಹ ಮಹತ್ವಪೂರ್ಣ ಪರಮ ಪ್ರೀತಿಯ ಶುಭಸಂದೇಶವನ್ನು ನೀಡುವುದೇ ತಪಸ್ಸು ಕಾಲದ ಪ್ರಮುಖ ಉದ್ದೇಶ.

ಪ್ರಭುವಿನ ಕಠೋರವಾದ ಶಿಲುಬೆಯ ಮರಣದಿಂದ ಮನುಕುಲಕ್ಕೆ ಸರ್ವ ಬಂಧನಗಳಿಂದ ವಿಶೇಷವಾಗಿ ಮರಣದಿಂದ ಮುಕ್ತಿ ದೊರಕಿತು. ಸೈತಾನ ಸೋಲನುಂಡು ಮೂಲೆಗಂಪಾದ ಮನುಕುಲ ಮತ್ತೆ ಜೀವಿಸುವಂತಾಯಿತು. ದೈವಿ ರಾಜ್ಯ ಪ್ರಭುಯೇಸುವಿನ ಕಠೋರವಾದ ಶಿಲುಬೆಯ ಮರಣದಿಂದ ಮರುಸ್ಥಾಪನೆಯಾಯಿತು. ಈ ದೈವಿ ರಾಜ್ಯಕ್ಕೆ ವಿಮುಖರಾಗಿದ್ದ ಮನುಕುಲಕ್ಕೆ ದೇವರೆಡೆಗೆ ಅಭಿಮುಖವಾಗುವಂತೆ ಕರೆ ನೀಡುವುದೇ ಈ ತಪಸ್ಸು ಕಾಲ.

ದೇವರಿಗೆ ಅಭಿಮುಖವಾಗುವುದೆಂದರೆ ಕ್ರಿಸ್ತೀಯ ಬದುಕಿನೆಡೆಗೆ ಮುಖಮಾಡುವುದು. ಸೈತಾನನ ರಾಜ್ಯದಿಂದ ದೈವಿರಾಜ್ಯದೆಡೆಗೆ ಪಯಣಿಸುವುದು.  ಈ ಪಯಣ ತಪಸ್ಸು ಕಾಲದಲ್ಲಿ ಬಹಳ ಪ್ರಮುಖವಾದುದು.  ಈ ಪಯಣದ ಸಫಲತೆಗೆ ಪ್ರಾರ್ಥನೆ, ಉಪವಾಸ ಮತ್ತು ದಾನಧರ್ಮ ಎಂಬ ಮೂರು ಧಾರ್ಮಿಕ ಕಾರ್ಯಗಳು ಪ್ರಮುಖವಾದವು. ಈ ಮೂರು ಧಾರ್ಮಿಕ ಕಾರ್ಯಗಳನ್ನು ಹೇಗೆ ಪಾಲಿಸಬೇಕು ಎಂಬುದನ್ನು ಮತ್ತಾಯನ ಶುಭಸಂದೇಶ (೬:೧-೧೮) ಪೂರ್ಣ ವಿವರಣೆಯನ್ನು ನೀಡುತ್ತದೆ.

ಪ್ರಾರ್ಥನೆ

“ಪ್ರಾರ್ಥನೆ ಮಾಡುವಾಗ ಕಪಟಿಗಳಂತೆ ಮಾಡಬೇಡಿ” (೬:೫). ಪ್ರಾರ್ಥನೆ ಯಾವಾಗಲೂ ಪ್ರಾಮಾಣಿಕವಾಗಿರಬೇಕು. ಪ್ರಾರ್ಥನೆಯಲ್ಲಿ ನೈಜತೆ ತುಂಬಿರ ಬೇಕು. ಕಪಟತ್ವಕ್ಕೆ ಎಡೆ ಇರಬಾರದು. ಪ್ರಾರ್ಥನೆ ನಮ್ಮ ತನು ಮನಗಳನ್ನು  ಶುದ್ಧೀಕರಿಸಿ ನಮ್ಮ ಹೃನ್ಮನಗಳನ್ನು ದೈವೀ ಕೃಪೆಯಿಂದ ಬೆಳಗಿಸಿ ತ್ರೈಏಕ ದೇವರ ವಾಸಕ್ಕೆ ಯೋಗ್ಯವಾಗಿಸುತ್ತದೆ. ದೇವ ಮಾನವರ ಸಂಗಮಕ್ಕೆ ಪ್ರಾರ್ಥನೆ ನಾಂದಿ ಹಾಡುವುದರಿಂದ ಅಲ್ಲಿ ಕಪಟತನಕ್ಕೆ ಸ್ಥಳವಿಲ್ಲ. ಪ್ರಾರ್ಥನೆ ಮಾನವ-ಮಾನವರ ನಡುವಿನ ಸಂಬಂಧಗಳನ್ನು ಶುದ್ಧೀಕರಿಸಿ ಬೆಸೆಯುತ್ತದೆ. ಆದ್ದರಿಂದ ಪ್ರಾರ್ಥಿಸುವಾಗ ಶುದ್ಧ ಮನಸ್ಸಿನಿಂದಲೂ ನಿರ್ಮಲ ಹೃದಯದಿಂದಲೂ ಪ್ರಾರ್ಥಿಸಬೇಕು. ನಿಷ್ಕಪಟ ಪ್ರಾರ್ಥನೆ ನೂರ್ಮಡಿಯಷ್ಠು ಫಲ ನೀಡುವುದರಲ್ಲಿ ಯಾವ ಸಂದೇಹವು ಇಲ್ಲ. ಆದ್ದರಿಂದ ಈ ತಪಸ್ಸು ಕಾಲದಲ್ಲಿ ನಿಷ್ಕಪಟ ಮನಸ್ಸಿನಿಂದ ನಮ್ಮ ತನುಮನ ಶುದ್ಧಿಗಾಗಿ ಹಾಗೂ ಅಧ್ಯಾತ್ಮಿಕ ಶುದ್ಧೀಕರಣಕ್ಕಾಗಿ ಪ್ರಾರ್ಥಿಸಲು ಈ ತಪಸ್ಸುಕಾಲ ಬಹು ಸೂಕ್ತವಾದ ಕಾಲ!

ಉಪವಾಸ

ಉಪವಾಸವೆಂದರೆ ಕೇವಲ ಊಟ ತಿಂಡಿ ಬಿಟ್ಟು ಹಸುವೆಯಿಂದ ಇರುವುದಲ್ಲ. ಉಪವಾಸವೆಂದರೆ ಶುದ್ಧ ಮನಸ್ಸಿನಿಂದ ಪ್ರಾರ್ಥಿಸುತ್ತ ದೇವರ ಸನ್ನಿಧಿಯಲ್ಲಿ ಜೀವಿಸುವುದು ಎಂದರ್ಥ. ಉಪವಾಸ ನಮ್ಮ ಹೃನ್ಮನಗಳನ್ನು ಶುದ್ಧಿಕರಿಸಿ ದೇವರ ಸನ್ನಿಧಿಯಲ್ಲಿ ಜೀವಿಸಲು ಯೋಗ್ಯರನ್ನಾಗಿ ಮಾಡುತ್ತದೆ. ಅಶುದ್ಧ ಮನಸ್ಸಿನಿಂದ ಉಪವಾಸ ಮಾಡಲಾಗದು. ಅದು ದೇವರಿಗೆ ಮೆಚ್ಚಿಗೆಯಾಗುವ ಉಪವಾಸವಾಗಲಾರದು. ಉಪವಾಸ ಮಾಡುವಾಗ ಹೇಗಿರಬೇಕು ಎಂಬುದನ್ನು ಮತ್ತಾಯನ ಶುಭಸಂದೇಶ ತಿಳಿಸುತ್ತದೆ (೬:೧೬-೧೮). “ಹಸಿದವರಿಗೆ ಅನ್ನ ಹಾಕುವುದು, ನೆಲೆಯಿಲ್ಲದೆ ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವುದು, ಬೆತ್ತೆಲೆಯಾದವರನ್ನು ಕಂಡಾಗ ಅವರಿಗೆ ಬಟ್ಟೆಹೊದಿಸುವುದು, ನಿನ್ನ ರಕ್ತಸಂಭಂದಿಕರಿಂದ ಮುಖ ಮರೆಮಾಡಿಕೊಳ್ಳದಿರುವುದು” ನಿಜವಾದ ಉಪವಾಸವೃತವೆಂದು ಯೆಶಾಯ ಪ್ರವಾದಿ (೫೮:೭) ಸ್ಪಷ್ಟವಾಗಿ ತಿಳಿಸುತ್ತ ನೈಜ ಉಪವಾಸಕ್ಕೆ ಕರೆ ನೀಡುತ್ತಾರೆ. ಯಾರು ನೈಜ ಉಪವಾಸ ಕೈಗೂಳ್ಳುತ್ತಾರೊ ಅವರ ಜೀವನ ಪಾವನವಾಗಿ ದೈವೀಸ್ಪರ್ಶದಿಂದ ಸ್ವಹಿತವನ್ನು ತೊರೆದು ಪರಹಿತವನ್ನು ಬಯಸುವಂತೆ ಪ್ರೇರೆಪಿಸುತ್ತದೆ.

ದಾನಧರ್ಮ

ಯಾವುದೇ ಫಲಾಪೇಕ್ಷೆ ಇಲ್ಲದೆ ದಾನ ಮಾಡಬೇಕು ಅಂತಹ ದಾನವನ್ನು ದೇವರು ಮೆಚ್ಚುತ್ತಾನೆ. ದಾನವೆಂದಾಕ್ಷಣ ನಮ್ಮ ಉಪಯೋಗಕ್ಕೆ ಬಾರದ ವಸ್ತುಗಳನ್ನೋ ಅಥವ ನಾವು ಉಪಯೋಗಿಸಿದ ನಂತರ ಅಳಿದುಳಿದವುಗಳನ್ನೋ ಕೊಡುವುದಲ್ಲ. ಬದಲಾಗಿ ನಮ್ಮ ಅವಶ್ಯಕತೆಯನ್ನು ಲೆಕ್ಕಿಸದೆ ದೀನ ದಲಿತರಿಗೆ ಹಾಗು ನಮ್ಮ ಸಹಾಯದ ಅಶ್ಯಕತೆಯುಳ್ಳವರಿಗೆ ಉದಾರವಾಗಿ ಸಹಾಯ ಹಸ್ತ ನೀಡುವುದೇ ನಿಜವಾದ ದಾನ ಅದನ್ನೆ ಮತ್ತಾಯನ ಶುಭಸಂದೇಶವು “ನೀನು ದಾನ ಧರ್ಮ ಮಾಡುವಾಗ ತುತ್ತೂರಿಯನ್ನು ಊದಿಸಬೇಡ”. ಬದಲಾಗಿ “ನೀನು ದಾನ ಧರ್ಮ ಮಾಡುವಾಗ ನಿನ್ನ ಬಲಗೈ ಕೊಡುವುದು ನಿನ್ನ ಎಡಗೈಗೂ ತಿಳಿಯದ ಹಾಗೆ ಗೋಪ್ಯವಾಗಿರಲಿ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು (೬:೨-೪) ಎಂದು ತಿಳಿಸುತ್ತದೆ. ಇದನ್ನು ನಿಷ್ಠೆಯಿಂದ ಪಾಲಿಸುವುದೇ ನಿಜವಾದ ಧರ್ಮ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುವುದೆ ಅಧರ್ಮ. ತಪಸ್ಸು ಕಾಲ ನೈಜ ಧರ್ಮದ ಪಾಲನೆಗೆ ಹಾಗು ಪೋಷಣೆಗೆ ಕರೆನೀಡುತ್ತದೆಯೇ ಹೊರತು ಕೇವಲ ಪ್ರದರ್ಶನಕ್ಕಲ್ಲ.

ತಪಸ್ಸು ಕಾಲ ನೈಜ ಪರಿವರ್ತನೆಗೆ ಕರೆ ನಿಡುತ್ತದೆ. ನೈಜ ಪರಿವರ್ತಕರಿಗೆ ಸಿಗಲಿದೆ ದೈವೀ ಸಂಬಂಧ ಹಾಗು ಮುಗಿವಿಲ್ಲದ ಸಂತೋಷ ಮತ್ತು ಆನಂದ!!!

 # ಫಾದರ್ ವಿಜಯ್ ಕುಮಾರ್

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram