
ಕ್ರಿಸ್ತ ಇಂದು ಲೋಕಾದಾದ್ಯಂತ ಕೋಟ್ಯಂತರ ಜನರ ಆರಾಧ್ಯ ದೈವವಾಗಿದ್ದಾರೆ. ಆದರೆ ಪರಂಪರೆಯಿಂದ ಬಳುವಳಿಯಾಗಿ ಬಂದ ಏಕಮುಖಿ ಸೈದ್ಧಾಂತಿಕ ಪರಿಕಲ್ಪನೆಗಳಲ್ಲಿ ಮೂಡುವ ಯೇಸುಕ್ರಿಸ್ತ ಸಾಮಾನ್ಯ ಜನರಿಗೆ ನೈಜನಾಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಕ್ರಿಸ್ತ ಇಂದು ನಮಗೆ ಆಪ್ತನಾಗಬೇಕಾದರೆ, ಪ್ರಸ್ತುತನಾಗಬೇಕಾದರೆ ಆತ ಪ್ರತಿಯೊಂದು ಸಂಸ್ಕೃತಿಯಲ್ಲಿ, ಸಂಪ್ರದಾಯದಲ್ಲಿ ಮರುಹುಟ್ಟು ಪಡೆಯಬೇಕು. ಆತನು ಶ್ರೀಸಾಮನ್ಯರ ನುಡಿಗಟ್ಟಿನಲ್ಲಿ ನುಡಿಯಬೇಕು, ಮಿಡಿಯಬೇಕು. ಕ್ರಿಸ್ತನಿಗೆ ನಮ್ಮ ಮಣ್ಣಿನ ವಾಸನೆಯಿರಬೇಕು, ನಮ್ಮ ಸಂಸ್ಕೃತಿಯ ಲೇಪನವನ್ನು ಹಚ್ಚಬೇಕು, ಕ್ರಿಸ್ತ ನಮ್ಮ ಪರಂಪರೆಯ ಸತ್ತ್ವ ಪಡೆಯಬೇಕು, ಆತ ಜನಸಾಮನ್ಯರ ಒಡನಾಡಿಯಾಗಬೇಕು. ದಲಿತರಿಗೆ ದಲಿತ, ರೈತರಿಗೆ ರೈತ, ಪ್ರಾಜ್ಞರಿಗೆ ಪ್ರಾಜ್ಞ, ಹೀಗೆ ಸಮಸ್ತರನ್ನು ಸಮಭಾವದಲಿ ಪರಿಭಾವಿಸುತ ಜಂಗಮನಾಗಿ ಬಿಂಬಿತನಾಗಬೇಕು. ಭಾರತದ ಮಣ್ಣಿನಲ್ಲಿ ಅಂತಹ ಪ್ರಯತ್ನವನ್ನು ಮಾಡಿದವರಲ್ಲಿ ಜಾನ್ ದಿ ಬ್ರಿಟೋರವರು ಮೊದಲಿಗರು. ಇಂತಹ ಧೀಮಂತ ಸಂತರ ಹಬ್ಬವನ್ನು ನಾವು ಈ ತಿಂಗಳ ೪ ರಂದು ಆಚರಿಸುತ್ತೇವೆ. ಈ ಸುಸಮಯಯದಲ್ಲಿ ಕೇಳ ಬೇಕಾದ ಪ್ರಶ್ನೆ ಈ ಸಂತರನ್ನು ನಮ್ಮ ಧರ್ಮಪ್ರಚಾರ ಕಾರ್ಯಕ್ಕೆ ಮಾದರಿಯಾಗಿ ಸ್ವೀಕರಿಸ ಬಹುದೆ?
ಜನನ
ಜಾನ್ ದಿ ಬ್ರಿಟೋರವರು ೧೬೪೭ ಮಾರ್ಚ್ ೧ ರಂದು, ಪೊರ್ಚಗಲ್ ದೇಶದ ಲಿಸ್ಬನ್ ನಗರದಲ್ಲಿ ಹುಟ್ಟಿದ್ದರು. ಈತ ಆತನ ತಂದೆತಾಯಿಯರಿಗೆ ನಾಲ್ಕನೇ ಮಗ. ಈತನದು ಶ್ರೀಮಂತ ಕುಟುಂಬ. ರಾಜಮನೆತನದ ನಂಟು. ಹಾಗಾಗಿ ಸುಖದ ಸುಪತ್ತಿಗೆಯಲ್ಲಿ ಬೆಳೆಯುವ ಯೋಗ. ಆದರೆ ಹುಟ್ಟಿದಾಗಿನಿಂದ ಅನಾರೋಗ್ಯ. ಸಾವಿನ ದವಡೆಯ ಅಂಚಿನಲ್ಲಿದ್ದ ತನ್ನ ಮಗನನ್ನು ಉಳಿಸಿಕೊಳ್ಳಲು ತಾಯಿ ಸಂತ ಚೌರಪ್ಪರ ಮೊರೆಹೋದಳು. ಸಂತ ಚೌರಪ್ಪರ ಪ್ರಾರ್ಥನೆಯ ಫಲವೆಂಬಂತೆ ಜಾನ್ ದಿ ಬ್ರಿಟೋರವರು ಸಾವಿನ ದವಡೆಯಿಂದ ಪಾರಾದರು. ತಾಯಿ ಮಾಡಿದ ಹರಕೆ ತೀರಿಸಲು ಒಂದು ವರ್ಷ ಕಾಲ ಬಾಲಕ ಜಾನ್ ದಿ ಬ್ರಿಟೋ ಜೆಸ್ವಿಟರ ಅಂಗಿ ತೋಟ್ಟು ತಿರುಗಾಡಿದ. ಅಂಗಿತೋಟ್ಟ ಪುಣ್ಯದ ಫಲವೆಂಬಂತೆ ಆತ ಮುಂದೆ ಯೇಸುಸಭೆ ಸೇರಲು ನಿರ್ಧರಿಸಿದ. ನನ್ನನ್ನು ಕರೆದ ದೇವರು ‘ನನ್ನ ಕರೆಯನ್ನು ಸಫಲಗೊಳಿಸುವ ಸಾಮರ್ಥ್ಯ ನೀಡಿಯೇ ತಿರುತ್ತಾರೆ’ ಎಂಬುದು ಆತನ ಬಲವಾದ ನಂಬಿಕೆಯಾಗಿತ್ತು.
ಭಾರತದತ್ತ ಪಯಣ
ಚಿಕ್ಕಂದಿನಿಂದ ಜಾನ್ ದಿ ಬ್ರಿಟೋನಿಗೆ ಸಂತ ಚೌರಪ್ಪ ಪ್ರೇರಕಶಕ್ತಿ ಮತ್ತು ಸ್ಫೂರ್ತಿ. ಆತನ ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು ಭಾರತದಲ್ಲಿ ಧರ್ಮಪ್ರಚಾರ ಮಾಡಬೇಕೆಂಬುದು ಆತನ ಹೆಬ್ಬಯಕೆ. ಎಲ್ಲದರಲ್ಲೂ ಸಂತ ಚೌರಪ್ಪರವರನ್ನು ಅನುಕರಿಸುವ ಆಸೆ ಮತ್ತು ತುಡಿತ. ಮುಂದೊಂದು ದಿನ ಭಾರತಕ್ಕೆ ಧರ್ಮಪ್ರಚಾರ ಕಾರ್ಯಕ್ಕೆ ಆಯ್ಕೆಯಾದ ಸುದ್ದಿ ಕೇಳಿ ಜಾನ್ ದಿ ಬ್ರಿಟೋರವರು ಕುಳಿದು ಕುಪ್ಪಳಿಸಿದ್ದರು. ಆ ಕಾಲದಲ್ಲಿ ಸಮುದ್ರ ಪ್ರಯಣ ಯೋಚಿಸಿದ್ದಷ್ಟು ಸುಲಭವಾಗಿರಲ್ಲಿಲ್ಲ. ಸಮುದ್ರ ಪ್ರಯಣ ಬೆಳೆಸಿದವರು ಬದುಕಿ ಉಳಿದು ಮರಳಿಬರುವುದೇ ಒಂದು ಸಾಧನೆಯಾಗಿತ್ತು. ಅನಾರೋಗ್ಯ, ಚಳಿ, ಬಿಸಿಲು, ಬಿರುಗಾಳಿ, ಚಂಡಮಾರುತ, ಸಮುದ್ರಗಳ್ಳರ ಹಾವಳಿ, ದಿಕ್ಕು ತಪ್ಪುವುದು ಹೀಗೆ ಹತ್ತು ಹಲವು ತೊಡಕುಗಳನ್ನು ನಿವಾರಿದಸಿಕೊಂಡು ಮುಂದೆ ಸಾಗುವುದು ದೊಡ್ಡ ಸವಾಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಜಾನ್ ದಿ ಬ್ರಿಟೋರವರು ೧೬೭೩ ಮಾರ್ಚ್ ೫ ರಂದು ತನ್ನ ತಾಯ್ನಾಡು ತೊರೆದು ಭಾರತದತ್ತ ಪಯಣ ಬೆಳೆಸಿದರು. ಅವರ ಸಂಗಡ ಭಾರತದಲ್ಲಿ ಧರ್ಮಪ್ರಚಾರ ಕಾರ್ಯದಲ್ಲಿ ನಿರತರಾಗಲು ಸುಮಾರು ೧೭ ಜನ ಜೆಸ್ವಿಟರು ಹೊರಟ್ಟಿದ್ದರು. ಅರ್ಧದಾರಿ ತಲುಪುವ ಹೊತ್ತಿಗೆ ಸುಮಾರು ೯ ಜನರು ಮೃತರಾದ್ದರು. ಸುಮಾರು ಆರು ತಿಂಗಳ ಸುದೀರ್ಘ ಪಯಣದ ನಂತರ ಜಾನ್ ದಿ ಬ್ರಿಟೋ ಮತ್ತು ಉಳಿದ ಸ್ನೇಹಿತರು ಭಾರತದ ತೀರ ತಲುಪಿದರು. ಅವರನ್ನು ಗೋವಾದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಬಹುದಿನಗಳ ಕನಸು ನನಸಾದಂತಾಗಿ ಜಾನ್ ದಿ ಬ್ರಿಟೋ ಬಹಳವಾಗಿ ಆನಂದಿಸಿದರು.
ದಕ್ಷಿಣದತ್ತ ಪಯಣ
ತನ್ನ ಒಂದುವರ್ಷದ ತರಬೇತು ಮುಗಿಸಿ ಧರ್ಮಪ್ರಚಾರ ಕಾರ್ಯಕ್ಕಾಗಿ ಜಾನ್ ದಿ ಬ್ರಿಟೋ ದಕ್ಷಿಣದತ್ತ ಪ್ರಯಣ ಬೆಳೆಸಿದರು. ತನ್ನಒಂದು ವರ್ಷದ ಅಂತಿಮ ತರಬೇತಿಯನ್ನು ಕೇರಳದ ಅಂಬಾಲಕಟ್ಟದಲ್ಲಿ (ಕೊಚಿನ್) ಮುಗಿಸಿದರು. ಇಲ್ಲಿ ತನ್ನ ಧರ್ಮಪ್ರಚಾರ ಕಾರ್ಯಕ್ಕೆ ಉಪಯೋಗವಾಗಲ್ಲಿದ್ದ ತಮಿಳು ಭಾಷಯಲ್ಲಿ ಪಾಂಡಿತ್ಯವನ್ನು ಸಂಪಾದಿಸಿದಕೊಂಡರು. ತದ ನಂತರ ಕೊಲೈ ಎಂಬ ಕಾಯಕ್ಷೇತ್ರದಲ್ಲಿ ಧರ್ಮಪ್ರಚಾರ ಕಾರ್ಯದಲ್ಲಿ ತನ್ನನ್ನೆ ತೊಡಗಿಸಿಕೊಂಡರು. ಸವಿಸ್ತಾರವಾಗಿದ್ದ ಈ ಪ್ರದೇಶವನ್ನು ಕಾಲ್ನಡಿಗೆಯಲ್ಲೆ ಸುತ್ತಿ ಹಗಲುರಾತ್ರಿಯನ್ನದೆ ಜನರನ್ನು ಸಂಧಿಸಿ ಅವರಿಗೆ ಯೇಸುಕ್ರಿಸ್ತರ ಶುಭಸಂದೇಶ ಸಾರಿ ದೀಕ್ಷಾಸ್ನಾನ ನೀಡಿದರು.
ಭಾರತ ಸಂಸ್ಕೃತಿಯಲ್ಲಿ ನೆಲೆ
ಪರಕೀಯನಾಗಿ ಉಳಿಯದೆ ಜನರಿಗೆ ಹತ್ತಿರವಾಗಲು ಹಾಗು ಜನರಲ್ಲಿ ಒಬ್ಬರಾಗಲು ತನ್ನ ವೇಷಭೂಷಣವನು ಬದಲಿಸಿದರು. ಕಾವಿಯನ್ನು ತೋಟ್ಟು, ನಡುಪಟ್ಟಿ ಕಟ್ಟಿಕೊಂಡು, ಶಾಲು ಧರಿಸಿ, ತಲೆಯ ಪಟಗ ಸು್ತ್ತಿಕೊಂಡು, ಕಾಲಿಗೆ ಪಾದುಕೆ (ಮರದ ಚಪ್ಪಲಿ) ಮೆಟ್ಟಿಕೊಂಡು ಕೈಯಲ್ಲಿ ಬಿದಿರಿನ ಬೆತ್ತಹಿಡಿದು ಹೆಗಲ ಮೇಲೆ ಜೋಳಿಗೆ ಹಾಕಿಕೊಂಡು ನಡೆದಾಡುತ್ತಿದ್ದರು. ತನ್ನ ಹೆಸರನ್ನು ಅರುಳಾನಂದ ಸ್ವಾಮಿ ಎಂದು ಬದಲಿಸಿಕೊಂಡ. ಮುಂದೆ ಜನ ಈತನನ್ನು “ಪಂಡಾರ ಸ್ವಾಮಿ” ಎಂತಲೂ ಕರೆಯುತ್ತಿದ್ದರು.
ಮುಂದೆ ಅರುಳಾನಂದ ಸ್ವಾಮಿಯವರನ್ನು ಮದುರೈ ಕ್ಷೇತ್ರದ ಮೇಲ್ವಿಚಾರಕರನ್ನಾಗಿ ನೇಮಿಸಲಾಯಿತು. ತನ್ನ ಕಾರ್ಯಕ್ಷೇತ್ರದಲ್ಲಿ ಅರುಳಾನಂದ ಸ್ವಾಮಿಯವರು ಅವಿರತವಾಗಿ ದುಡಿದು ವಿಶ್ವಾಸ ಬೆಳೆಸುವಲ್ಲಿ ಸಫಲವಾದರು. ಅಧಿಕಾರವಾಗಲಿ, ಹಣವಾಗಲಿ ಆತನ ನಿಶ್ಚಲಚಿತ್ತವನ್ನು ಚಂಚಲಗೊಳಿಸಲಿಲ್ಲ. ೧೭೮೫ ರಲ್ಲಿ ಅರುಳಾನಂದ ಸ್ವಾಮಿ ಮಾರವ ಗಡಿಪ್ರದೇಶವನ್ನು ಪ್ರವೇಶಿಸಿ ಅಲ್ಲಿ ಧರ್ಮಪ್ರಚಾರ ಮಾಡಲು ಪ್ರಾರಂಭಿಸುತ್ತಾರೆ. ಈ ಪ್ರದೇಶವನ್ನು ಆಳುತ್ತಿದ್ದ ರಾಜ ಸೇತುಪತಿ ರಂಗನಾಥ ಥೇವರ್ ಕ್ರೈಸ್ತಧರ್ಮವಿರೋಧಿಯಾಗಿದ್ದ. ಹಾಗಾಗಿ ಕಾಡಿನಲ್ಲೀ ಉಳಿದುಕೊಂಡು ಅರುಳಾನಂದ ಸ್ವಾಮಿಯವರು ಧರ್ಮಪ್ರಚಾರ ಮಾಡುತ್ತಿದ್ದರು. ಕೆಲವೇ ತಿಂಗಳುಗಳಲ್ಲಿ ಇವರು ಸುಮಾರು ೨೦೦೦ ಸಾವಿರ ಜನರಿಗೆ ದೀಕ್ಷಸ್ನಾನ ನೀಡಿ ಅವರನ್ನು ವಿಶ್ವಾಸದಲ್ಲಿ ದೃಢಪಡಿಸಿದ್ದರು. ವಿಷಯ ತಿಳಿದ ರಾಜ ಮತ್ತು ಮಂತ್ರಿಮಂಡಲ ಅರುಳಾನಂದ ಸ್ವಾಮಿಯರನ್ನುಬಂಧಿಸಿ ಚಿತ್ರಹಿಂಸೆನೀಡಿ ತಮ್ಮ ರಾಜ್ಯದಿಂದ ಗಡಿಪಾರು ಮಾಡಿದ್ದರು. ಸಾವಿಗೆ ಎಂದೂ ಹೆದರದೆ ಕ್ರಿಸ್ತನಿಗಾಗಿ ರಕ್ತಸಾಕ್ಷಿಯಾಗಲು ಹಂಬಲಿಸುತ್ತಿದ್ದ ಅರುಳಾನಂದ ಸ್ವಾಮಿಯವರು ಇದ್ದಕ್ಕೆಲ್ಲಾ ಅಂಜಲಿಲ್ಲ.
ಆದರೆ ವಿಷಯ ತಿಳಿದ ಮೇಲ್ವಿಚಾರಕರು ಅರುಳಾನಂದ ಸ್ವಾಮಿಯವರಿಗೆ ತನ್ನ ತಾಯ್ನಾಡಿಗೆ ಹಿಂದಿರುಗುವಂತೆ ಸೂಚಿದರು. ತನ್ನ ದೇಶಕ್ಕೆ ಹಿಂದುರಿಗಿದ ಸ್ವಾಮಿ ಆ ಸದವಕಾಶವನ್ನು ಉಪಯೋಗಿಸಿಕೊಂಡು ತನ್ನ ಅನುಭವಗಳನ್ನು ಅಲ್ಲಿನ ವಿಶ್ವವಿದ್ಯಾನಿಲಯದ ಯುವಕರೊಂದಿಗೆ ಹಂಚಿಕೊಂಡು ಅವರನ್ನು ಧರ್ಮಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೆಪಿಸಿದರು. ಅಂದಿನ ರಾಜ ಹಾಗು ಸ್ವಾಮಿಯವರ ಆಪ್ತಮಿತ್ರ ಎರಡನೇ ಪೇದ್ರೊ ಸ್ವಾಮಿಯವರನ್ನು ತನ್ನ ಆಸ್ಥಾನದಲ್ಲೇ ಉಳಿದುಕೊಳ್ಳುವಂತೆ ಬಹಳ ಒತ್ತಾಯ ಮಾಡಿದನು. ಯಾವುದಕ್ಕೂ ಬಗ್ಗದೆ ಅರುಳಾನಂದ ಸ್ವಾಮಿ ತನ್ನ ಕಾರ್ಯಕ್ಷೇತ್ರಕ್ಕೆ ಪುನಃ ಮರಳಿದರು.
ಕ್ರಿಸ್ತನಿಗಾಗಿ ರಕ್ತಸಾಕ್ಷಿ
ಭಾರತಕ್ಕೆ ಮರಳಿದ ಅರುಳಾನಂದ ಸ್ವಾಮಿ ಪುನಃ ಮಾರವ ಗಡಿ ಪ್ರವೇಶಿಸಿ ಧರ್ಮಪ್ರಚಾರದಲ್ಲಿ ತೊಡಗಿದರು. ಅವರ ಜೀವನ ಶೈಲಿ ಮತ್ತು ಪ್ರಬೋಧನೆ ಕೇಳಿದ ಜನರು ಕ್ರೈಸ್ತವಿಶ್ವಾಸವನ್ನು ಸ್ವೀಕರಿಸಿದರು. ಅಂತವರಲ್ಲಿ ಸ್ಥಳಿ ನಾಯಕನಾದ ತದಯ ಥೇವನು ಕೂಡ ಒಬ್ಬನಾಗಿದ್ದ. ವಿಷಯ ತಿಳಿದ ರಾಜ ಕೆಂಡಮಂಡಲವಾದ. ಅರುಳಾನಂದ ಸ್ವಾಮಿಯವರನ್ನು ಬಂಧಿಸಿ ಸೇರೆಮನೆಯಲ್ಲಿರಿಸಿದ. ಆದರೆ ಅನೇಕರು ಅಲ್ಲಿಗೆ ಬಂದು ಅರುಳಾನಂದ ಸ್ವಾಮಿಯವರ ಆರ್ಶಿವಾದಪಡೆಯಲು ಪ್ರಾರಂಭಿಸಿದರು. ೧೬೯೩ ಫೆಬ್ರವರಿ ೪ ರಂದು ತಮಿಳುನಾಡಿನ ಒರಿಯೂರಿನ ಸಮೀಪ ಅರುಳಾನಂದ ಸ್ವಾಮಿಯಾವರ ಶ್ಛೀರಛೇದನ ಮಾಡಲಾಯಿತು.
ಸಾವಿನ ಸಂಭ್ರಮ
ವಿಷಯ ತಿಳಿದ ಪ್ರೋರ್ಚುಗಲ್ ರಾಜ ಎರಡನೇ ಪೆದ್ರೋ ಸಕಲ ರಾಜಮರ್ಯಾದೆಗಳನ್ನು ತನ್ನ ಸ್ನೇಹಿತನಿಗೆ ಸಲ್ಲಿಸಿ ತನ್ನ ಗೌರವ ಸೂಚಿಸಿದನು. ಆ ಸಂಭ್ರಮದ ಗಳಿಗೆ ಸಾಕ್ಷಿಯಾಗಿ ಅರುಳಾನಂದ ಸ್ವಾಮಿಯತಾಯಿ ಕೂಡ ಉಪಸ್ಥಿತರಿದ್ದರು. ಅರುಳಾನಂದ ಸ್ವಾಮಿಯವರನ್ನು ೧೮೫೨ ರಲ್ಲಿ ಪುನೀತರೆಂದು ೧೯೩೭ ರಲ್ಲಿ ಸಂತರೆಂದು ಘೋಷಿಸಲಾಯಿತು.
ನಾವು ಕಲಿಯಬೇಕಾದ ಮೂರು ಮುಖ್ಯ ಅಂಶಗಳು
ಮೊದಲನೆಯಾದಾಗಿ ಅರುಳಾನಂದ ಸ್ವಾಮಿಯವಲ್ಲಿದ್ದ ಆಳವಿಶ್ವಾಸ, ದೇವರ ಕರೆಗೆ ಓಗೊಡುವ ಛಲ, ದೇವರ ಚಿತ್ತಕ್ಕೆ ಮಣಿದು ನಡೆಯುವ ನಮ್ರತೆ. ಎರಡನೆಯದಾಗಿ ಧರ್ಮಪ್ರಚಾರ ಕಾರ್ಯದಲ್ಲಿದ್ದ ಆತನ ಆಸಕ್ತಿ, ಶ್ರದ್ಧೆ ಮತ್ತು ಬದ್ಧತೆ. ಮೂರನೆಯದಾಗಿ ವಿಶ್ವಾಸವನ್ನು ಮತ್ತು ಕ್ರೈಸ್ತ ತತ್ತ್ವವನ್ನು ತನ್ನ ಜೀವನಶೈಲಿಯ ಮುಖಾಂತರ ನಮ್ಮ ಜನರಿಗೆ ಪ್ರಸ್ತುತ್ತವಾಗುವಂತೆ ಮಾಡಿದ ರೀತಿ ನಿಜಕ್ಕೂ ಶ್ಲಾಘನೀಯ ಹಾಗೂ ಅನುಕರಣಾರ್ಹ
ಫಾದರ್ ಬಾಲಕಿರಣ್