ಬೇಗೂರು ಗವಿಯ ಧಾರ್ಮಿಕ ಇತಿಹಾಸ

Advertisements
Share

ಬೇರೆ ಯಾವುದೇ ತಿಂಗಳನ್ನು ಮರೆತರೂ, ಫೆಬ್ರುವರಿಯನ್ನು ಮಾತ್ರ ಬೇಗೂರಿಗರು ಮರೆಯುವುದಿಲ್ಲ. ಕಾರಣ ಆ ತಿಂಗಳಲ್ಲೇ ಊರಿನ ಗವಿಹಬ್ಬ. ಲೂರ್ದುಮಾತೆಯ ಮಹೋತ್ಸವ. ಇಂದು ಸರಿಸುಮಾರು ೨೦೦೦ ಕುಟುಂಬಗಳಿರುವ ಬೇಗೂರು ಗ್ರಾಮದ ಪಾಲಕ ಸಂತರು ಲೊಯೋಲದ ಸಂತ ಇಗ್ನಾಸಿಯಾಗಿದ್ದರೂ, ಅವರ ಉತ್ಸವವನ್ನುಆಗಸ್ಟ್ ತಿಂಗಳಲ್ಲಿ ಆಚರಿಸುವರಾದರೂ, ‘ಗವಿ ಹಬ್ಬವೇ ಊರಬ್ಬ’ ಎನ್ನುವಂತ ವಾತಾವರಣ ಇಲ್ಲಿದೆ. ಲೊಯೋಲದ ಸಂತ ಇಗ್ನಾಸಿಯವರ ಹಬ್ಬದಲ್ಲಿ ತೇರಿನ ಖರ್ಚು ಹೊರಲು ತಿಣುಕಾಡುವ ಊರವರು, ವರುಷಗಳ ಹಿಂದೆಯೇ ಲೂರ್ದುಮಾತೆಯ ಗವಿಹಬ್ಬಕ್ಕೆ ತೇರುಕಟ್ಟಲು ಹೆಸರು ನೋಂದಾಯಿಸಿರುತ್ತಾರೆಂದರೆ ಊರಿನಗವಿಯ ಮೇಲೆ ಅವರಿಗಿರುವ ಅಕ್ಕರಾಸ್ಥೆ, ಗೌರವ ಎಷ್ಟಿರಬಹುದು ಊಹಿಸಿ.ಈ ಅಕ್ಕರಾಸ್ಥೆಗೆ ಕಾರಣವೇನು? ಊರು ಹಾಗೂ ಗವಿಯ ನಡುವೆ ಇಂಥ ಗಾಢ ಬಂಧವೊಂದು ಬೆಸೆದುಕೊಳ್ಳಲು ಉಂಟಾದ ಅನಿವಾರ್ಯತೆಗಳೇನು? ಇಂದು ಸಂಸ್ಕೃತಿಯಾಗಿ, ಸಂಬಂಧವಾಗಿ, ಎಲ್ಲರೂ ಒಟ್ಟುಗೂಡುವ ಸಂಭ್ರಮವಾಗಿ ಮಾರ್ಪಟ್ಟಿರುವ ಈ ಗವಿಹಬ್ಬದ ಮೂಲ ಏನಾಗಿತ್ತು? ಎನ್ನುವುದನ್ನು ತುದಿಬೆರಳಿನಲ್ಲಿ ಕೆದಕಿದರೆ, ಬೇಗೂರಿನಗವಿಯ ‘ಚಿತ್ರಪಟ’ ತೆರೆದುಕೊಳ್ಳುತ್ತದೆ.

ಇಂದು ವಾರ್ಡುಗಳಾಗಿ, ಲೇ ಔಟು, ಬಡಾವಣೆಗಳಾಗಿ ಹರಿದು ಹಂಚಿ ಹೋಗಿರುವ ಬೇಗೂರುಕ್ರಿ. ಶ ೧೯೪೪ ರಲ್ಲಿ ಐವತ್ತೋ, ನೂರೋ ಮನೆಗಳಿದ್ದ ಪುಟ್ಟ ಹಳ್ಳಿ. ಸೊಪ್ಪುಸದೆ, ತರಕಾರಿ, ಭತ್ತದ ತುಂಬಿದ ಫಸಲುಗಳಿಂದ ಹಸಿರಸಿರಾಗಿದ್ದ ಊರು. ಸೂರ್ಯಕಾಂತಿ, ಆಸ್ಟಲ್, ಕನಕಾಂಬರ, ಕಾಕಡ ಇನ್ನಿತರ ಹೂ ಗಿಡಗಳು ಉದ್ದೋಉದ್ದಕ್ಕೆ ಹರಡಿಕೊಂಡಿದ್ದನ್ನು

ನನ್ನ ಬಾಲ್ಯದಲ್ಲಿ ನಾನೂ ನೋಡಿದ್ದೇನೆ. ಸೀಮೆಬದನೆಯ ದಟ್ಟ ಪುಷ್ಟಚಪ್ಪರ, ಹಾವಿನಂತ ಪಡುವಲಕಾಯಿಗಳ ವಾಕರಿಕೆಯ ನಾತ ಇನ್ನೂ ನೆನಪಿದೆ.ಇಲ್ಲಿನ ತೋಟಗಳಲ್ಲಿ ದ್ರಾಕ್ಷಿ ಬೆಳೆ ಕೂಡ ಬೆಳೆಯುತ್ತಿದ್ದರೆಂದು ಕೇಳಿದ್ದೇನೆ. ‘ನಾ ನಿನ್ನ ಮರೆಯಲಾರೆ…’ ಎಂಬ ಸುಪ್ರಸಿದ್ಧ ಗೀತೆಯಲ್ಲಿ ಡಾ.ರಾಜ್‌ಕುಮಾರ್ ಹಾಗೂ ಲಕ್ಷ್ಮಿ ಹೂವಿನ ತೋಟಗಳಲ್ಲಿ ಹಾಡುತ್ತಾ ಕುಣಿಯುವ ದೃಶ್ಯಗಳು ಬೇಗೂರಿನವು ಎಂದರೆ ಈಗ ಯಾರೂ ನಂಬಲಿಕ್ಕಿಲ್ಲ. ಇಂಥ ಬೇಗೂರಿನಲ್ಲಿ ಕ್ರಿ.ಶ. ೧೮೨೦ರಲ್ಲೇ ಸಂತ ಫ್ರಾನ್ಸಿಸ್‌ ಕ್ಸವೇರಿಯರ್‌ರವರ ದೇವಸ್ಥಾನ ಇತ್ತೆಂಬುದನ್ನು ಇತಿಹಾಸದ ದಾಖಲೆಗಳು ಸ್ಪಷ್ಟಪಡಿಸುತ್ತವೆ. ಕ್ರಿ.ಶ ೧೮೬೨ ರಲ್ಲಿ ವಂ ಸ್ವಾಮಿರೆನಡಿನ್ ಕಟ್ಟಿಸಿದ ಹೆಂಚು ಹೊದಿಸಿದ ಪೂರ್ಣ ಬಿಳಿಯ ಚರ್ಚಿತ್ತು.  ಬೇಗೂರಿನ ಕ್ರಿ.ಶ ೧೮೬೨ರ ಹಳೆಯ ಚರ್ಚು ಕಟ್ಟಿಸಿ ೮೦ ವರ್ಷವಾದಾಗ, ಬೇಗೂರಿನ ಭೀಕರ ಪ್ಲೇಗ್‌ರೋಗ ಕಾಲಿಡುತ್ತದೆ. ಇಲಿಗಳಿಂದ ಹರಡಿದ ಈ ಮಾರಣಾಂತಿಕ ಕಾಯಿಲೆ, ಹೆಂಗಸರು, ಮಕ್ಕಳುಮರಿ ಎನ್ನದೆ ಒಬ್ಬೊಬ್ಬರನ್ನೇ ಸ್ಮಶಾನಕ್ಕೆ ಹೊತ್ತೊಯ್ಯಲಾರಂಭಿಸಿತು. ಮನೆಗೊ ಬ್ಬೊಬ್ಬರಂತೆ ಸಾಯತೊಡಗಿ ಊರ ತುಂಬಾ ಹೊಗೆ ಮುತ್ತಿಕೊಂಡಿತು. ಜನರು ಭಯಭೀತರಾಗಿ ಊರು ಬಿಟ್ಟು ಹೊಲ, ಗದ್ದೆಗಳಲ್ಲಿ ಅವಿತುಕೊಂಡರು. ಇಲಿಗಳು ಹಿಂಬಾಲಿಸಿದವು. ಸತ್ತ ಹೆಣವನ್ನು ಯಾರಿಗೂ ತಿಳಿಸದೆ, ಎತ್ತಿನ ಬಂಡಿಯಲ್ಲಿ ಭತ್ತದ ಹುಲ್ಲಿನಿಂದ ಕಾಣದಂತೆ ಮುಚ್ಚಿ ದೂರಕೊಂಡೊಯ್ದು ಮಣ್ಣು ಮಾಡಿ ಬರತೊಡಗಿದರು. ಇಂಥ ವಿಷಮ ಪರಿಸ್ಥಿತಿಯಲ್ಲಿ ಊರವರಿಗೆ ಕಂಡದ್ದು ಲೂರ್ದುಮಾತೆ. ತಮ್ಮ ಮನೆಮಕ್ಕಳನ್ನು, ಬಂಧುಬಳಗವನ್ನು, ಊರನ್ನು ಪ್ಲೇಗ್ ಮಹಾಮಾರಿಯಿಂದ ಕಾಪಾಡುವಂತೆ ಭಕ್ತಿಯಿಂದ ಪ್ರಾರ್ಥಿಸಿ, ಲೂರ್ದುಮಾತೆಗೊಂದು ಗವಿ ಕಟ್ಟುವುದಾಗಿ ಹರಕೆ ಹೊತ್ತರು. ಆಶ್ಚರ್ಯವೋ ಎನ್ನುವಂತೆ ಕೂಡಲೇ ಬೇಗೂರಿಗೆ ಬಡಿದಿದ್ದ ಪ್ಲೇಗ್‌ರೋಗ ಮಾಯವಾಯಿತು, ಊರು ಮೊದಲಿನ ಹಾಗೆ ಮತ್ತೆ ಹಸಿರಾಗತೊಡಗಿತು.ಕ್ರಿ. ಶ ೧೯೪೪ ರಲ್ಲಿ ವಂ.ಸ್ವಾಮಿ ಗ್ರೇಶಿಯಸ್ ರವರ ಮುಂದಾಳತ್ವದಲ್ಲಿ ಊರವರು ಚರ್ಚಿನ ಪಕ್ಕವೇ ಗವಿ ಕಟ್ಟಿಸಿ, ಲೂರ್ದುಮಾತೆಯನ್ನು ಪ್ರತಿಷ್ಠಾಪಿಸಿದರು (ಚಿತ್ರ ನೋಡಿ).

ಕ್ರಿ. ಶ ೧೯೬೫ ರಲ್ಲಿ ಬರಗಾಲ ಬಲಗಾಲಿಟ್ಟು ಬೇಗೂರಿಗೆ ಬಂದಿತು. ಹಸಿವಿನ ಹಾಹಾಕಾರ. ನೀರಿಲ್ಲ, ಬೆಳೆಯಿಲ್ಲ. ತಿನ್ನಲು ಕೂಳಿಲ್ಲ. ಆಗ ಬೇಗೂರಿನ ವಿಚಾರಣಾ ಗುರುವಾಗಿದ್ದ ವಂ.ಸ್ವಾಮಿ ನೆಲಪತಿಯವರು ಊರವರಿಗೆಲ್ಲರಿಗೂ ಗಂಜಿ ಹೊಂದಿಸಿ ಹಂಚುತ್ತಿದ್ದರು. ಮತ್ತೆ ಮಾತೆಯಲ್ಲಿ ಮೊರೆಯಿಡಲು ಬರಗಾಲ ಕರಗಿತು. ಅಂದಿನಿಂದ ಇಂದಿನವರೆಗೂ ಸುಮಾರು ೭೩ ವರುಷಗಳಿಂದಲೂ ತಪ್ಪದೆ, ಫೆಬ್ರುವರಿ ತಿಂಗಳಲ್ಲಿ ಲೂರ್ದುಮಾತೆಯ ಮಹೋತ್ಸವ ಜಾರಿಯಲ್ಲಿದೆ. ಇವತ್ತಿಗೂ ಪ್ರತಿದಿನ ಬಲಿಪೂಜೆ ಮುಗಿದಾದ ಮೇಲೆ, ಗವಿಯ ಬಳಿ ಬಂದುಕೈಮುಗಿದು ನಿಂತ ಲೂರ್ದುಮಾತೆಯನ್ನು ಕಾಣದೆ ಊರವರಾರೂ  ಮನೆಗೆ ತೆರಳುವುದಿಲ್ಲ.

ಯಜಮಾನ್ ಫ್ರಾನ್ಸಿಸ್, ಬೇಗೂರು

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram