“ಅಮ್ಮಾ, ನಾನೂ ಬರ್ತಿನಿ.’’
“ಬೇಡಮ್ಮ, ನೀನಿನ್ನೂ ಚಿಕ್ಕವಳು.’’
“ಇಲ್ಲ, ನಾನೂ ಬರ್ತಿನಿ ಅಮ್ಮಾ’’
ಪಿಲ್ಲೂ ಹಟ ಮಾಡತೊಡಗಿದ್ದಳು.
ಕೇವಲ ಹತ್ತು ವರ್ಷಕ್ಕೆ, ಹದಿನಾರರ ಹರೆಯದ ಹುಡುಗಿಯ ಹಾಗೆ ಮೈ ಕೈ ತುಂಬಿಕೊಂಡು ಇಷ್ಟುದ್ದ ಎದೆ ಮಟ್ಟಕ್ಕೆ ಬೆಳೆದು ನಿಂತಿದ್ದ ಮಗಳು ಫಿಲೋಮಿನಮ್ಮ ಕೆಟ್ಟ ಹಟಮಾರಿ ಆಗಿದ್ದಳು.
ಅವಳ ಹಿಂದೆಯೇ, ಸಾಲಾಗಿ ಇಬ್ಬರು ತಂಗೆಂದಿರು, ಮೂವರು ತಮ್ಮಂದಿರು ಇದ್ದರೂ, ಮೊದಲ ಹುಟ್ಟು ಎಂದು ಅವರಪ್ಪ ಕಿರೀಟಪ್ಪ ಅವಳನ್ನು ತಲೆಯ ಮೇಲೆ ಕೂಡಿಸಿಕೊಂಡಿದ್ದ. ಅಜ್ಜ ರಾಯಪ್ಪಜ್ಜ ಮತ್ತು ಅಜ್ಜಿ ಮಾರ್ತವ್ವ ಅವರಿಗೂ ಅವಳನ್ನು ಕಂಡರೆ ಇಷ್ಟ. ಹೀಗಾಗಿ ಅವಳು ಮನೆಯಲ್ಲಿ ಆಡಿದ್ದೆ ಆಟವಾಗುತ್ತಿತ್ತು.
ಫಿಲೋಮಿನಮ್ಮ ಆದ ನಂತರ, ವೆರೊನಿಕಮ್ಮ, ರೀಟಮ್ಮ ಆದ ಮೇಲೆ ಫ್ರೆಂಚಿ, ಜೋಷಿ ಮತ್ತು ಅಂತೂ ಹುಟ್ಟಿದ್ದರು. ಫ್ರೆಂಚಿ ಅಂದ್ರೆ ಫ್ರಾನ್ಸಿಸ್, ಜೋಷಿ ಅಂದ್ರೆ ಜೋಸೆಫ್ ಮತ್ತು ಅಂತೂ ಅಂದ್ರೆ ಅಂತಪ್ಪ ಅಂತ ಅವರ ಹೆಸರುಗಳು.
ಪಠ್ಯ ಪುಸ್ತಕಗಳು ಕ್ರಮದಲ್ಲಿ ಬದಲಾಗದಿದ್ದರೆ, ಫಿಲ್ಲೂ ಓದಿದ ಪಠ್ಯ ಪುಸ್ತಕಗಳು ಅವಳ ಹಿಂದೆ ಮಕ್ಕಳಿಗೆ ಆಗುತ್ತಿದ್ದವು. ಬಟ್ಟೆ ಮಾತ್ರ ಏನೂ ಮಾಡಲೂ ಆಗುತ್ತಿರಲಿಲ್ಲ. ಎಲ್ಲಾ ಮಕ್ಕಳಿಗೂ ವರ್ಷಕ್ಕೆರಡು ಬಾರಿ ಈಸ್ಟರ್ ಮತ್ತು ಕ್ರಿಸ್ಮಸ್ ಹಬ್ಬಕ್ಕೆ ಜೊತೆ ಬಟ್ಟೆ ಕೊಡಿಸುವುದಂತೂ ತಪ್ಪಿಸುವಂತಿರಲಿಲ್ಲ. ಎಲ್ಲರೂ ಗದ್ದೆಯಲ್ಲಿ ಕಬ್ಬು ಬೆಳೆದಂತೆ ಸರ ಸರ ಬೆಳೆಯುತ್ತಿದ್ದರು.
ಮೈಸೂರಿಗೆ ದಸರಾ ನೋಡಲು ಹೋದಾಗ, ಸಂತ ಫಿಲೋಮಿನಾ ಚರ್ಚಿಗೆ ಹೋದ ಸಂದರ್ಭದಲ್ಲಿ ಅನ್ನಮ್ಮ ಮತ್ತು ಅವಳ ಗಂಡ ಗಿಡ್ಡ ಚಿನ್ನಪ್ಪ ಹೆಣ್ಣು ಮಗುವಿಗಾಗಿ ಹರಕೆ ಹೊತ್ತಿದ್ದರು. ಅದರಂತೆ ಅವರು ಬಯಸಿದಂತೆ ಹೆಣ್ಣು ಮಗುವೇ ಆಗಿತ್ತು. ಅವಳಿಗೆ ಮೈಸೂರು ಚರ್ಚಿನ ಪಾಲಕ ಸಂತರ ಹೆಸರು ಫಿಲೋಮಿನಾ ಹೆಸರನ್ನೇ ಇಟ್ಟಿದ್ದರು.
***
ನಮ್ಮ ದಿವ್ಯ ಯೇಸುಬಾಲರ ಜಾಗಾರ|
ನೋಡಲು ಎರಡೂ ಕಣ್ಣು ಸಾಲದು ||ಪಲ್ಲವಿ||
ಹಳದಿ ಲೋಹದ ಚಂದದ ಬೆಳಿಯು|
ರವಿಕಿರಣಕ ಹೊಳೆಯುವ ಬೆಳಿಯು||ಪಲ್ಲವಿ||
ಕ್ಷಣದಲಿ ನೆಲಕುರುಳಿದ ಬೀಜಗಳೆಲ್ಲಾ|
ಮೊಳೆತು, ಬೆಳೆದು ನಿಂತ ಬೆಳಿಯು||ಪಲ್ಲವಿ||
ಹೆರೋದ ಸೈನಿಕರ ದಾರಿ ತಪ್ಪಿಸಿದ|
ದೇವ ಕುಟುಂಬ ಮರೆ ಮಾಡಿಸಿದ||ಪಲ್ಲವಿ||
ಕಾಣಿರೆ, ಕಾಣಿರೆ ಅಪ್ಪ, ಅಮ್ಮಗಳಿರಾ|
ಕಾಣಿರೆ, ಕಾಣಿರೆ ಅಜ್ಜ, ಅಜ್ಜಿಂದಿರಾ||ಪಲ್ಲವಿ||
ಕಾಣಿರೆ, ಕಾಣಿರೆ ಅಕ್ಕ, ತಂಗೆಂದಿರಾ|
ಕಾಣಿರೆ, ಕಾಣಿರೆ ಅಣ್ಣ, ತಮ್ಮಂದಿರಾ||ಪಲ್ಲವಿ||
ದಿವ್ಯ ಬಾಲ ಯೇಸುಸ್ವಾಮಿಯ ಜಾಗಾರಗಳ ಬುಟ್ಟಿಗಳನ್ನು `ಹೊತ್ತು’, ಜಾಗಾರದ ಹಾಡನ್ನು ಸುಶ್ರಾವ್ಯವಾಗಿ ಹಾಡುತ್ತಾ ಸಡಗರದಿಂದ ಊರ ಹೆಂಗಳೆಯರ ಮೆರವಣಿಗೆ ಹೊರಟಿತ್ತು. ಮುಂದೆ ವಾಲಗದವರನ್ನು ಬಿಟ್ಟುಕೊಂಡ ಈ ಮೆರವಣಿಗೆ, ಲೋಯೋಲದ ಸಂತ ಇನ್ನಾಸಪ್ಪ ಅವರ ಗುಡಿಯಿಂದ ಆರಂಭವಾಗಿತ್ತು.
ಎಲ್ಲ ಮಹಿಳೆಯರು, ಹೆಣ್ಣು ಮಕ್ಕಳು ಬಣ್ಣ ಬಣ್ಣದ ಹೊಸ ಸೀರೆಗಳನ್ನು ಉಟ್ಟಿದ್ದರು. ಯುವತಿಯರು, ಹುಡುಗಿಯರು ಪಾತರಗಿತ್ತಿಗಳ ಬಣ್ಣ ಬಣ್ಣದ ಲಂಗ, ದಾವಣಿ ಮೊದಲಾದ ಬಟ್ಟೆಗಳನ್ನು ತೊಟ್ಟು ಸಂಭ್ರಮದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಸಾಗಲಾಗದ ಉಳ್ಳವರ ಮನೆಗಳವರು, ತಮ್ಮ ಮನೆಯ ಜಾಗಾರವನ್ನು ಕೆರೆಗೆ ಬಿಡಲು ಜಾಗರದ ಮೆರವಣಿಗೆಯಲ್ಲಿ ಹೋಗುವವರಿಗೆ ಖಣ, ದುಡ್ಡು ಕೊಟ್ಟು ಮೊರಗಳಲ್ಲಿ ಜಾಗಾರವನ್ನು ಇಟ್ಟು ಕಳುಹಿಸಿದ್ದರು.
ಇನ್ನಾಸಪ್ಪರ ಗುಡಿಯಿಂದ ಸಾಲಿನಲ್ಲಿ ಹೊರಟಿದ್ದ ಮಹಿಳೆಯರು, ನಾಗನಾಥೇಶ್ವರ ಗುಡಿಯವರೆಗೆ ಸಾಗಿ, ನಂತರ ಬೇಗೂರು ಕೆರೆಯ ಒಡ್ಡಿನ ಹಾದಿ ಹಿಡಿದಿದ್ದರು. ಕೆರೆ ಒಡ್ಡಿನ ಮೇಲೆ ಸುಮಾರು ದೂರ ನಡೆದು ಕೆರೆಯ ಕೋಡಿಯನ್ನು ತಲುಪಿದ್ದರು. ಕೆರೆಯ ಕೋಡಿಯ ಪಕ್ಕದಲ್ಲಿದ್ದ ಪಾವಟಣಿಗೆಗಳ ಮೇಲೆ ನಿಂತು ನಿಧಾನವಾಗಿ ಒಬ್ಬೊಬ್ಬರೆ ಬಾಲ ಯೇಸುಸ್ವಾಮಿಯ ಜಾಗಾರಗಳನ್ನು ನಿಧಾನವಾಗಿ ನೀರಿಗೆ ಬಿಡುವುದು ಸಂಪ್ರದಾಯವೇ ಆಗಿತ್ತು.
ಇಕ್ಕಟ್ಟಾದ ಜಾಗ, ಇಕ್ಕಟ್ಟಾದ ದಾರಿ. ಒಬ್ಬರು ತಮ್ಮ ಜಾಗಾರವನ್ನು ನೀರಿಗೆ ಬಿಟ್ಟು ಮೇಲೆ ಬರಬೇಕು. ನಂತರ ಅವರ ಹಿಂದಿದ್ದವರು ಹೋಗಿ, ತಮ್ಮ ಬುಟ್ಟಿಯಲ್ಲಿನ ಜಾಗಾರ ಕುಂಡಗಳನ್ನು ತೆಗೆದು ನೀರಿಗೆ ಬಿಡಬೇಕು. ಇದೆಲ್ಲಾ ನಿಧಾನವಾಗಿ ನಡೆಯಬೇಕಾದ ಕೆಲಸ. ಇದು ಮೂರು ರಾಯರ ಹಬ್ಬದ ಕೊನೆಯ ಪಾದ, ಕೊನೆಯ ಆಚರಣೆ.
ನಂತರ ಸನಿಹದ ದಿಣ್ಣೆ ಬೇಗೂರು ದಾರಿ ಪಕ್ಕದ ಜಾಗಾರ ಬಂಡೆಯ ಮೇಲೆ ಸಾಮೂಹಿಕ ಭೋಜನ ನಡೆಯಬೇಕು. ಜಾಗಾರ ಬಿಡುವಷ್ಟರಲ್ಲಿ ಊರವರು ಬಂಡಿಗಳನ್ನು ಕಟ್ಟಿಕೊಂಡು ಅಡುಗೆಯನ್ನು ತಂದಿರೋರು. ಕೋಡಿಯ ಮುಂದೆ ದಿಣ್ಣೆ ಬೇಗೂರ ದಾರಿಯ ಪಕ್ಕದಲ್ಲಿನ ಸಪಾಟಾದ ಜಾಗಾರ ಬಂಡೆಯ ಮೇಲೆ ಸಾಮೂಹಿಕ ಊಟವಾದ ನಂತರವೇ ಮೂರು ರಾಯರ ಹಬ್ಬ ಸಂಪನ್ನವಾದಂತೆ.
***
ಮೂವರು ರಾಯರು ಬಂದಾರಮ್ಮ|
ನಮ್ಮ ಯೇಸುಬಾಲರ ನೋಡಾಕ||ಪಲ್ಲವಿ||
ಮೂರು ರಾಯರು ಬಂದ ನಡೆ ಛಂದ|
ಮೂರು ರಾಯರ ಬೆಡಗ ಬಲು ಛಂದ||ಪಲ್ಲವಿ||
ಬೆತ್ಲೆಹೇಮ್ ಕೆಳಗೆ ಚುಕ್ಕಿ ಮೂಡಿತು|
ಚುಕ್ಕಿ ಹಿಡಿದು ಬಂದರು ರಾಯರು||ಪಲ್ಲವಿ||
ಬರುತ ಜೂದರ ನೃಪನ ಕೇಳಿದರು|
ಹರೋದರಾಯನ ಎದೆ ಒಡಿಯಿತು||ಪಲ್ಲವಿ||
ಕೂಸ ಕೊಲ್ಲಲು ಭಟರು ಬಂದರು|
ಬೆಳೆದ ಬೆಳೆ ಕಂಡು ದಾರಿ ತಪ್ಪಿದರು||ಪಲ್ಲವಿ||
ಡಿಸೆಂಬರ್ 25 ರಂದು ಕ್ರೈಸ್ತರು ಯೇಸುಸ್ವಾಮಿಯ ಹುಟ್ಟುಹಬ್ಬದ- ಜನನೋತ್ಸವದ ಹಬ್ಬ `ಕ್ರಿಸ್ಮಸ್’ ಆಚರಣೆ ನಡೆಯುತ್ತದೆ. ಕ್ರೈಸ್ತರಿಗೆಲ್ಲಾ ಇದು ದೊಡ್ಡ ಹಬ್ಬ. ಈ ಹಬ್ಬದ ನಂತರ ಹೊಸ ವರ್ಷದ ಜನೆವರಿ ತಿಂಗಳ 6ರಂದು ಮೂರು ರಾಯರ ಹಬ್ಬವನ್ನು ಆಚರಿಸಲಾಗುತ್ತದೆ.
ಬಾಲಸ್ವಾಮಿ ಕಿರುನಗಿ ಸೂಸೂದ ನೋಡ|
ಬಾಲನರಸಿ ಕುರುಬರು ಬಂದಾರ ನೋಡ|
ರಾಯರು ಬಂದು ನಮಿಸ್ಯಾರ ನೋಡ ||ಪಲ್ಲವಿ||
ದೇವದೂತರು ಹೇಳಿದರೆಂದು ಕುರುಬರು ಬಾಲಯೇಸುವನ್ನು ಕಾಣಲು ಬಂದಿರುತ್ತಾರೆ. ಯೆಹೂದ್ಯರ ಅರಸ ಹುಟ್ಟಿದ್ದಾನೆ. ಅದರ ಸೂಚಕವಾಗಿ ಆಗಸದಲ್ಲಿ ಕಂಡ ನಕ್ಷತ್ರವನ್ನು ಹಿಂಬಾಲಿಸಿ ಪೂರ್ವದ ಪಂಡಿತರು- ಮೂರು ರಾಯರು ಯೇಸುವನ್ನು ಕಾಣಲು ಬರುತ್ತಾರೆ.
ಹರೋದ ಅರಸ ತನ್ನ ಸ್ಥಾನಕ್ಕೆ ಚ್ಯುತಿ ಬಂದೀತೆಂದು ಬಗೆದು, ಹಸುಗೂಸುಗಳನ್ನು ಕೊಲ್ಲಿಸಲು ನೋಡುತ್ತಾನೆ. ದೇವದೂತರ ಆಣತಿಯಂತೆ ತಂದೆ ಜೋಸೆಫ್, ಮಾತೆ ಮರಿಯವ್ವ ಬಾಲಯೇಸುವನ್ನ ಕರೆದುಕೊಂಡು ಇಜಿಪ್ತ ದೇಶಕ್ಕೆ ಪಲಾಯನ ಮಾಡುತ್ತಾರೆ. ಹೊಗುವಾಗ ಜೋಸೆಫ್ ಬಿತ್ತಲು ನಿಂತಿದ್ದ ರೈತರ ಕೈಯಲ್ಲಿನ ಗೋದಿಯನ್ನು ಹೊಲದಲ್ಲಿ ತೂರುತ್ತಾನೆ. ನೆಲಕ್ಕೆ ಬಿದ್ದ ಬೀಜಗಳು ಮೊಳೆಯುತ್ತವೆ. ಸರ ಸರ ಬೆಳೆದು ಎದೆಯುದ್ದ ಬೆಳೆ ನಿಲ್ಲುತ್ತದೆ. ಅದರಲ್ಲಿ ಪವಿತ್ರ ಕುಟುಂಬ ಅವಿತುಕೊಳ್ಳುತ್ತದೆ. ಅವರ ಹಿಂದೆ ಬಂದ ಹೆರೋದನ ಸೈನಿಕರು, ದಂಪತಿ ಮಗುವಿನ ಬಗ್ಗೆ ವಿಚಾರಿಸಿದಾಗ, `ಬಿತ್ತುವಾಗ ಬಂದಿದ್ದರು’ ಎಂಬ ರೈತರ ಮಾತು ಕೇಳಿ ಸೈನಿಕರು ಹುಡುಕುವ ದಿಕ್ಕು ಬದಲಿಸುತ್ತಾರೆ.
ಈ ಘಟನೆಯ ಸ್ಮರಣೆಯಲ್ಲಿ ಕೆಲವು ಕ್ರೈಸ್ತ ಊರುಗಳಲ್ಲಿ ಮೂರು ರಾಯರ ಹಬ್ಬದಂದು ಮೂರು ರಾಯರ ವೇಷತೊಟ್ಟವರು ಮೆರವಣಿಗೆಯಲ್ಲಿ ಜಾಗರಗಳನ್ನು ಕೊಂಡ್ಯೊಯ್ದು ಹಳ್ಳ, ಕೆರೆ ಬಾವಿಗಳಿಗೆ ಒಪ್ಪಿಸುತ್ತಾರೆ. ಕ್ರೈಸ್ತರು ಕ್ರಿಸ್ಮಸ್ ಹಬ್ಬದ ಹತ್ತು ದಿನದ ಮೊದಲು ಪಾತ್ರೆ ಪಗಡೆ, ಕುಂಡಗಳಲ್ಲಿ ಗೋದಿ ಹುಲ್ಲನ್ನು ಬೆಳೆಸುತ್ತಾರೆ. ಮನೆಯಲ್ಲಿ ಸಿದ್ಧಪಡಿಸಿದ ಕೊಟ್ಟಿಗೆಯಲ್ಲಿ ಗೋದಲಿಯ ಪಕ್ಕ ಇರಿಸುತ್ತಾರೆ. ಮತ್ತೆ ತಮ್ಮ ಗುಡಿಯಲ್ಲಿ ಸಿದ್ಧವಾಗುವ ದೊಡ್ಡ ಕೊಟ್ಟಿಗೆಯ ಅಲಂಕಾರಕ್ಕೂ ತಾವು ಬೆಳೆದ ಗೋದಿ, ಜೋಳ ಅಥವಾ ರಾಗಿ ಹುಲ್ಲನ್ನು ಒಪ್ಪಿಸಿಕೊಡುತ್ತಾರೆ. ಈ ಹುಲ್ಲಿಗೆ `ಜಾಗರ’ ಎಂಬ ಹೆಸರಿದೆ. ಆದರೆ, ಊರ ಕ್ರೈಸ್ತರು ಜಾಗರದಲ್ಲಿನ `ಗ’ ಕಾರವನ್ನೂ ಎಳೆದು ಜಾಗಾರ ಎನ್ನುತ್ತಾರೆ.
ಮಂಗಳ ಪ್ರಸಂಗಗಳಲ್ಲಿ ಅಂಕುರಾರ್ಪಣವೆಂಬ ಕರ್ಮದ ಅಂಗವಾಗಿ ಬೆಳೆಸುವ ಪೈರಿಗೆ ಜಾಗರ ಎನ್ನುತ್ತಾರೆ ಎಂದು ಶಬ್ದಕೋಶಗಳು ಹೇಳುತ್ತವೆ. ಜಾಗರಕ್ಕೆ ನವಿಲಿನ ಕುಣಿತ, ಎಚ್ಚರ, ಜಾಗರಣೆ ಮತ್ತು ಯುದ್ಧಕವಚ ಎಂಬ ಅರ್ಥಗಳೂ ಉಂಟು.
ಭಾರತೀಯ ಸಂಸ್ಕೃತಿಯಲ್ಲಿ ಊರು ಅಥವಾ ಗುಡಿ ಕಟ್ಟುವ ಮಂಗಳ ಕಾರ್ಯದ ಮೊದಲು ಆ ಜಾಗದಲ್ಲಿ ಬೆಳೆ ಬೆಳೆದು ಅದನ್ನು ಹಸುಗಳಿಗೆ ತಿನ್ನಿಸಿ ಜಾಗ ಸೂಕ್ತವೆ ಎಂಬುದನ್ನು ಕಂಡುಕೊಳ್ಳುತ್ತಾರೆ. ಮನೆ ಕಟ್ಟುವ ಸಂದರ್ಭದಲ್ಲಿ ನವ ಧಾನ್ಯಗಳನ್ನು ಬಿತ್ತುವ ಕ್ರಮವಿದೆ. ಗುಡಿಯನ್ನು ಕಟ್ಟಿದ ನಂತರ, ಅಲ್ಲಿ ಪೂಜೆ ಪುನಸ್ಕಾರಗಳು ನಡೆಯುವ, ಮೊದಲು ಪಾತ್ರೆಗಳಲ್ಲಿ ಧಾನ್ಯಗಳನ್ನು ಹಾಕಿ ಬೆಳೆ ಬೆಳೆಸಿ ಅಂಕುರಾರ್ಪಣೆ ವಿಧಿಯನ್ನು ನೆರವೇರಿಸಲಾಗುವುದು. ವಿಷ್ಣು ದೇವಾಲಯಗಳಲ್ಲೂ ಬ್ರಹ್ಮೋತ್ಸವದ ಸಂದರ್ಭದಲ್ಲಿ, ಫಲವತ್ತತೆ ಮತ್ತು ಸಮೃದ್ಧಿಯನ್ನು ಬಯಸಿ ಬೀಜಗಳನ್ನು ಬಿತ್ತಿ ಅಂಕುರಾರ್ಪಣೆ ವಿಧಿ ನಡೆಸಲಾಗುವುದು. ಇದಲ್ಲದೇ, ವಿವಿಧ ಉತ್ಸವಗಳ ಆರಂಭದಲ್ಲೂ ನಿರ್ದಿಷ್ಟ ಮಂಡಲಗಳಲ್ಲಿ ಕುಂಡಗಳನ್ನಿಟ್ಟು ಬೀಜ ಬಿತ್ತಿ ಜಾಗರ ಬೆಳೆ ತೆಗೆಯಲಾಗುವುದು. ಮದುವೆಗಳಲ್ಲಿ ಕುಂಡದಲ್ಲಿನ ಕಂಬದ ಪೂಜೆಯ ಸಂದರ್ಭದಲ್ಲೂ ನವಧಾನ್ಯಗಳನ್ನು ಬಿತ್ತುವ ಪರಿಪಾಠವಿದೆ.
ಶರದ್ ನವರಾತ್ರಿಯ ಅಥವಾ ವಿಜಯದಶಮಿಯ ಅಂದರೆ ದಸರೆಯ ಹಬ್ಬದ ಸಂದರ್ಭದ ನವರಾತ್ರಿಯ ಆಚರಣೆಯ ಮೊದಲ ದಿನ ಗೋದಿ ಬೀಜವನ್ನು ಮಣ್ಣಿನ ಪಾತ್ರೆಯಲ್ಲಿಟ್ಟು ಬೆಳೆಸಲಾಗುತ್ತದೆ. ಹಬ್ಬದ ಕೊನೆಯ ದಿನ ಮೊಳಕೆಯೊಡೆದ ಗೋದಿ ಸಸಿಗಳನ್ನು ದೇವಿಗೆ ಸಮರ್ಪಿಸುವರು. ಇದಲ್ಲದೇ, ಮಂಗಳಕಾರ್ಯಗಳು ಎಂದರೆ, ಗುಡಿಯ ಕಳಶ ಪ್ರತಿಷ್ಠಾಪನೆ, ನಿರ್ದಿಷ್ಟ ಪೂಜೆ ಪುನಸ್ಕಾರಗಳ ಸಂದರ್ಭಗಳಲ್ಲೂ ಪಾತ್ರೆಯಲ್ಲಿ ಬೆಳೆದ ಗೋದಿ ಸಸಿಗಳನ್ನು ಹೊತ್ತೊಯ್ಯುವ ಪರಿಪಾಠವೂ ಇದೆ. ಇಷ್ಟೇ ಅಲ್ಲ, ನಾಗರ ಪಂಚಮಿಯ ಮುನ್ನ ಜಾಗರ ಬೆಳೆದು ನಾಗರ ಪಂಚಮಿಯ ದಿನ ನಾಗಪ್ಪನಿಗೆ ಏರಿಸಿ ಪೂಜೆ ಮಾಡುತ್ತಾರೆ. ಉಳಿದ ಸಸಿಗಳನ್ನು ಮನೆಯ ಹೆಣ್ಣುಮಕ್ಕಳು ತಮ್ಮ ತಲೆಗೆ ಮುಡಿದುಕೊಳ್ಳುತ್ತಾರೆ. ಗುಳ್ಳವ್ವನ ಹಬ್ಬದಲ್ಲಿ ತಟ್ಟೆಯೊಳಗೆ ತೆಳುವಾಗಿ ಮಣ್ಣನ್ನು ಹರಡಿ ಬೆಳೆಯುವ ಗೋದಿ ಶಶಿ (ಸಸಿ) ಗಳನ್ನು ಬೆಳೆದು, ಗುಡಿಗೆ ಒಯ್ದು ದೇವರಿಗೆ ಏರಿಸುತ್ತಾರೆ. ಹುಡುಗಿಯರು ತೆಲೆಗೆ ಇಟ್ಟುಕೊಳ್ಳುತ್ತಾರೆ.
ಉತ್ತರ ಕರ್ನಾಟಕದಲ್ಲಿ ವಿಜಯದಶಮಿಯ ದಿನದಂದು ಬನ್ನಿ ಗಿಡದ ಶಮೀ ಗಿಡದ ಅಥವಾ ಆರಿ ಗಿಡದ ಎಲೆಗಳನ್ನು ಇಲ್ಲವೆ ಎಳೆಯ ಗೋದಿ ಹುಲ್ಲ (ಜಾಗರವ)ನ್ನು ಬಂಗಾರವೆಂದು ಬಗೆದು, ತಮ್ಮಲ್ಲಿನ ಅಸಮಾಧಾನ, ಮುನಿಸನ್ನು ಮರೆತು ಪರಸ್ಪರ ಹಂಚಿಕೊಂಡು `ಬಂಗಾರ ತಗೊಂಡ ನಾವು ನೀವು ಬಂಗಾರದಂಗ ಇರೂಣ’ ಎಂದು ಹೇಳಿಕೊಂಡು ಒಂದಾಗಿ ಸಂಭ್ರಮಿಸುತ್ತಾರೆ.
ಇಂಥ `ಜಾಗರ’ ಈಗ ಯೇಸುಸ್ವಾಮಿಯ ಹುಟ್ಟು ಹಬ್ಬದ ಮಂಗಳದ ಸಂದರ್ಭದಲ್ಲಿ, ಕನ್ನಡ ಸೀಮೆಯ ಒಳನಾಡಿನ ಸ್ಥಳೀಯ ಕ್ರೈಸ್ತ ಜನಪದರ ಕತೆಯ ಕಾರಣ ಗೋದಲಿ ಪಕ್ಕದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
***
ಆಗಸದಲ್ಲಿ ಕಂಡ ಹೊಸ ನಕ್ಷತ್ರವನ್ನು ನೋಡಿ, ಯೆಹೂದಿಗಳು ಶತಮಾನಗಳಿಂದ ಕಾಯುತ್ತಿದ್ದ ಅರಸ ಅಥವಾ ಪ್ರವಾದಿಯೋ, ಜಗದ್ರಕ್ಷಕನೋ ಹುಟ್ಟಿಬರುವ ಗಳಿಗೆ ಬಂದಿದೆ ಎಂದು ಲೆಕ್ಕ ಹಾಕಿದ ಮೂವರು ರಾಯರು, ತಮಗೆ ಕಂಡ ನಕ್ಷತ್ರದ ಜಾಡನ್ನು ಹಿಡಿದು ಶಿಶು ಯೇಸುಸ್ವಾಮಿಯನ್ನು ಹುಡುಕಿಕೊಂಡು ಬೆತ್ಲೆಹೇಮಿಗೆ ಬಂದಿರುತ್ತಾರೆ.
ಬಾಲ ಯೇಸುವನ್ನು ಕಾಣಲು ಬಂದ ಈ ಮೂವರು ರಾಯರನ್ನು ಪೂರ್ವದ ಪಂಡಿತರು, ಜ್ಞಾನಿಗಳು, ಅರಸರು ಅಥವಾ ಜ್ಯೋತಿಷಿಗಳು ಇರಬೇಕು ಎನ್ನಲಾಗುತ್ತದೆ. ಈ ಮೂವರು ರಾಯರು ಶಿಶು ಯೇಸುಸ್ವಾಮಿಗೆ ಬಂಗಾರ, ಧೂಪ ಮತ್ತು ಸುಗಂಧ ದ್ರವ್ಯಗಳನ್ನು ಒಪ್ಪಿಸುತ್ತಾರೆ.
ಈ ಘಟನೆಯ ಸ್ಮರಣೆಯಲ್ಲಿ ಕ್ರೈಸ್ತರು, ಕ್ರಿಸ್ಮಸ್ ಹಬ್ಬದ ನಂತರ ಜನೆವರಿ 6 ರಂದು ಮೂರು ರಾಯರ ಹಬ್ಬವನ್ನು ಆಚರಿಸುತ್ತಾರೆ. ಕನ್ನಡ ನಾಡಿನಲ್ಲಿ ಈ ಹಬ್ಬವೂ ಭಾರತೀಕರಣಗೊಂಡು ಹೊಸ ರೂಪದಲ್ಲಿ ಅಭಿವ್ಯಕ್ತಗೊಂಡಿದೆ.
ಬೆಳಿಗ್ಗೆ ಹಬ್ಬದ ಪಾಡು ಪೂಜೆ ಮುಗಿಯುತ್ತಿದ್ದಂತೆಯೆ, ಊರ ಇತರ ಜನರು ಜನೆವರಿ ತಿಂಗಳ ಸಂಕ್ರಾಂತಿಯ ದಿನದಂದು ತಮ್ಮ ಜಾನುವಾರಗಳನ್ನು ಸಿಂಗರಿಸಿ ಮೆರವಣಿಗೆ ಮಾಡಿದಂತೆ, ಕೆಲವು ಊರುಗಳಲ್ಲಿನ ಕ್ರೈಸ್ತರು ತಮ್ಮ ಜಾನುವಾರುಗಳನ್ನು ಸಿಂಗರಿಸಿಕೊಂಡು ಗುಡಿ ಅಂಗಳಕ್ಕೆ ತರುತ್ತಾರೆ. ಅಲ್ಲಿ ಗುರುಗಳು ಅವಕ್ಕೆ ತೀರ್ಥ ಪ್ರೋಕ್ಷಣೆ ಮಾಡಿ ಆಶೀರ್ವದಿಸುತ್ತಾರೆ.
ದಸರೆಯಲ್ಲಿ ಆಯುಧ ಪೂಜೆ ಮಾಡುವಂತೆ, ಕ್ರೈಸ್ತರು ತಮ್ಮ ತಮ್ಮ ವಾಹನಗಳನ್ನು ಗುಡಿ ಅಂಗಳಕ್ಕೆ ತಂದು, `ಯಾವ ದುರ್ಘಟನೆಯೂ ನಡೆಯದಿರಲಿ’ ಎಂದು ಕೋರಿ ಗುರುಗಳಿಂದ ಆಶೀರ್ವಾದ ಪಡೆಯುತ್ತಾರೆ. ಆಗ ಭಕ್ತಾದಿಗಳು ನೆರದವರಿಗೆ ಕೋಸಂಬರಿ, ಚುರುಮರಿ, ಕಬ್ಬು ಗೆಣೆಗಳನ್ನು ಹಂಚುತ್ತಾರೆ. ಇದಾದ ಮೇಲೆ ಮಕ್ಕಳು ಪರಸ್ಪರ ಬಣ್ಣ ಎರಚಿ ಸಂಭ್ರಮಿಸುತ್ತಾರೆ. ಮತ್ತೆ ಇನ್ನೂ ಕೆಲವು ಊರುಗಳಲ್ಲಿನ ಕ್ರೈಸ್ತರು ವಾಲಗದವರನ್ನು ಕರೆಸಿ, ಊರೆಲ್ಲಾ ಸುತ್ತಾಡಿಸಿ ಮನೆಮನೆಗಳಿಂದ ಮನೆಯಲ್ಲಿ ಬೆಳೆಸಿದ್ದ ಜಾಗಾರಗಳನ್ನು ಅವರಿಗೆ ಒಪ್ಪಿಸಿ. ಸಮೀಪದ ಕರೆಯಲ್ಲೋ, ಹಳ್ಳದಲ್ಲೋ ಮುಳುಗಿಸಲು ಕೋರುತ್ತಾರೆ.
ಆದರೆ, ಬೆಂಗಳೂರು ಸೆರಗಿನಲ್ಲಿ ಸೇರುವ ಮೊದಲಿನ ನಮ್ಮ ಬೇಗೂರಿನಲ್ಲಿ ಮಾತ್ರ ಘಟವಾಣಿ ಹೆಂಗಸರು, ಸಿಂಬೆಯ ಸಹಾಯವಿಲ್ಲದೇ, ತಮ್ಮ ತಮ್ಮ ಮನೆಗಳಲ್ಲಿನ ಬಾಲ ಯೇಸುಸ್ವಾಮಿ ಇರುವ ಕೊಟ್ಟಿಗೆಯ ಪಕ್ಕದಲ್ಲಿ ಇರಿಸಿದ್ದ ಮತ್ತು ಗುಡಿಯಲ್ಲಿನ ಕೊಟ್ಟಿಗೆಯ ಅಲಂಕಾರಕ್ಕೆ ಒಪ್ಪಿಸಿದ್ದ ಜಾಗಾರಗಳನ್ನು ಬುಟ್ಟಿಯಲ್ಲಿ, ಮೊರಗಳಲ್ಲಿ ಇಟ್ಟುಕೊಂಡು, ತಲೆಯ ಮೇಲೆ ಹೊತ್ತು ಮುಂದೆ ವಾಲಗದವರನ್ನು ಬಿಟ್ಟುಕೊಂಡು ಊರಲ್ಲಿ ಮೆರವಣಿಗೆ ಮಾಡುತ್ತಾರೆ. ಮೆರವಣಿಗೆಯ ನಂತರ ಊರ ಕೆರೆಯಲ್ಲಿ ಅವನ್ನು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಗಣಪ್ಪನನ್ನು ಕೂರಿಸಿ, ಒಂದೊ, ಎರಡೊ, ಮೂರೊ, ಐದೊ, ಏಳೊ, ಒಂಬತ್ತೊ, ಹನ್ನೊಂದೊ ಅಥವಾ ಹದಿಮೂರು ದಿನಗಳ ಕಾಲ ಪೂಜಿಸಿ ಕೊನೆಯ ದಿನ ನೀರಿನಲ್ಲಿ ಬಿಡುವಂತೆ, ಈ ಊರ ಹೆಂಗಳೆಯರು, ಹದಿಮೂರು ದಿನ ಬಾಲಯೇಸುವಿನ ಜೊತೆಗಿದ್ದ ಪವಿತ್ರ ಜಾಗಾರವನ್ನು ಭಕ್ತಿಯಿಂದ ಕೆರೆಯ ನೀರಿಗೆ ಒಪ್ಪಿಸುತ್ತಾರೆ.
***
ಇದು ಮೂವತ್ತು ವರ್ಷಗಳ ಹಿಂದಿನ ಕತೆ. ಮಗಳು ಫಿಲ್ಲೂ ಹತ್ತು ವರ್ಷದವಳಾಗಿದ್ದಾಗ ಕೀರಿಟಪ್ಪನ ಹೆಂಡತಿ ಅನ್ನಮ್ಮಳಿಗೆ ಇಪ್ಪತ್ತು ವರ್ಷ. ಊರಲ್ಲೆಲ್ಲಾ ಒಕ್ಕಲುತನದ ಮನೆತನಗಳು. ಮಗ ಉಂಡರೆ ತಪ್ಪಿಲ್ಲ, ಮಳೆ ಬಂದರೆ ಕೆಟ್ಟಲ್ಲ ಅನ್ನೋ ಮನಸ್ಸಿನವರು, ಮಕ್ಕಳ ಬಗ್ಗೆ ಚಿಂತಿಸಿದವರೇ ಅಲ್ಲ. ದೇವರು ಕೊಟ್ಟಷ್ಟು ಕೊಡಲಿ ಎಂಬ ಧಾರಾಳತನವು ಊರವರದ್ದು, ಹುಟ್ಟಿಸಿದ ದೇವರು ಎಲ್ಲೋ ಅನ್ನ ಇಟ್ಟೇ ಇಟ್ಟಿರ್ತಾನೆ ಎಂಬ ನಂಬಿಕೆ ಇಟ್ಟಿದ್ದರು. ಹೀಗಾಗಿ, ವರ್ಷಕ್ಕೊಂದರಂತೆ ಸಾಲಾಗಿ ಐವರು ಮಕ್ಕಳು ಹುಟ್ಟಿದ್ದರು. ಬಹುತೇಕ ಗಂಡಸರು ತರಕಾರಿಗಳನ್ನು ಬೆಳೆದು ಸಿಟಿ ಮಾರುಕಟ್ಟೆಗೆ ಸಾಗಿಸಿ ವ್ಯಾಪಾರ ಮಾಡುವವರು. ಮನೆವಾರ್ತೆಯಲ್ಲ ಮನೆಯಲ್ಲಿನ ಹೆಂಗಸರ ಹೆಗಲು ಸೇರಿತ್ತು.
ಆ ಸಲ ಮೂರು ರಾಯರ ಹಬ್ಬ ಭಾನುವಾರವೇ ಬಂದಿತ್ತು. ಮೂರು ರಾಯರ ಹಬ್ಬದ ಸಂಭ್ರಮ ಊರಲ್ಲಿ ಮಡುಗಟ್ಟಿತ್ತು. ನೆರೆಹೊರೆಯವರ ಮನೆಗಳಿಗೆ ಬಂದಿದ್ದ ನೆಂಟರು ಮೂರು ರಾಯರ ಹಬ್ಬ ಆಚರಿಸಲು ಇನ್ನೂ ಉಳಿದುಕೊಂಡಿದ್ದರು. ಒಂದು ಮಧ್ಯಾನ್ನದಿಂದ ಫಿಲ್ಲೂ, ತಾನು ಜಾಗಾರ ಬಿಡಲು ಬರುವೆನೆಂದು ಹಟ ಹಿಡಿದಿದ್ದಳು. ಅಮ್ಮ, ಅಜ್ಜಿ ಬೇಡವೆಂದು ಎಷ್ಟು ಹೇಳಿದರೂ ಕೇಳಿಲ್ಲಿಲ್ಲ. ಅವಳಪ್ಪ ಕಿರೀಟಪ್ಪ ಅವಳ ಬೆನ್ನ ಹಿಂದೆ ನಿಂತಿದ್ದರೆ ಏನೂ ಮಾಡುವುದಿದೆ? ಫಿಲ್ಲೂ ಹಸಿರು ಲಂಗ ದಾವಣಿ ಹಾಕಿಕೊಂಡು ಸಿದ್ಧವಾಗಿ ನಿಂತಿದ್ದಳು.
ಹಿಂದಿನ ದಿನವೇ, ಆರು ತಿಂಗಳ ಹಿಂದೆ ಹೊಸದಾಗಿ ವರ್ಗವಾಗಿ ಬಂದಿದ್ದ ಧರ್ಮಕೇಂದ್ರದ ಗುರು ಚೆಲುವರಾಜಪ್ಪ ಅವರು, “ಇದೆಲ್ಲಾ ಎಂಥದು? ಜಾಗರವನ್ನು ಹೊತ್ತು ಊರಲ್ಲಿ ಮೆರವಣಿಗೆ ನಡೆಸುವುದು? ಅದರೊಂದಿಗೆ ಪಟಾಕಿ, ಮದ್ದು ಹಾರಿಸುವುದೊಂದು ಕೇಡು. ಅದೇನು, ಗಣೇಶನ ಮೂರ್ತಿಯನ್ನು ನೀರಿಗೆ ಬಿಟ್ಟಂತೆ ನಮ್ಮ ಗುಡಿಯ ಕೊಟ್ಟಿಗೆಯಲ್ಲಿದ್ದ ಜಾಗಾರ ಬೆಳೆಯ ಕುಂಡಗಳನ್ನು ಬಿಡುವುದು? ಇದು, ಏನೇನೂ ಸರಿ ಕಾಣದು’’ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.
ಅವರ ಮಾತುಗಳು, ಊರ ಹೆಣ್ಣುಮಕ್ಕಳು, ಜಾಗಾರಗಳ ಬುಟ್ಟಿಯನ್ನು ಹೊತ್ತು ಸಾಗುವ ಮೆರವಣಿಗೆಯ ಉತ್ಸಾಹಕ್ಕೆ ತಣ್ಣೀರೆರಚಿದಂತೆ ಆಗಿತ್ತು. ಎಲ್ಲರ ಮುಖಗಳು ಸುಟ್ಟ ಗಡಿಗೆಯಂತೆ ಆಗಿದ್ದವು. ಊರಲ್ಲಿನ ಎಲ್ಲಾ ಹೆಂಗಸರು, ಸಂಜೆ ಐದು ಗಂಟೆಯ ಸುಮಾರು, ತಮ್ಮ ಮನೆಗಳಲ್ಲಿನ ಜಾಗಾರಗಳನ್ನು ಬುಟ್ಟಿಯಲ್ಲಿ ಇಟ್ಟುಕೊಂಡು ಗುಡಿಯ ಅಂಗಳಕ್ಕೆ ಬಂದು ನೆರೆದಿದ್ದರು. ಉಪದೇಶಿ ಚೌರಪ್ಪಜ್ಜ, ಹುಡುಗರನ್ನು ಕರೆದುಕೊಂಡು ಕೊಟ್ಟಿಗೆಯನ್ನು ಉಚ್ಚಿಸತೊಡಗಿದ್ದ.
ನಿಜ ಗಾತ್ರದ ಬಾಲಯೇಸು, ತಂದೆ ಜೋಸೆಫ್, ಮಾತೆ ಮರಿಯ, ಮೂರು ರಾಯರು, ಕುರುಬರು ಮತ್ತು ದನಕರುಗಳ ಸ್ವರೂಪಗಳನ್ನು ಮೊದಲೇ ತೆಗೆದು ಸಂಕೃಷ್ಟಿಯಲ್ಲಿ ಇರಿಸಿದ್ದ. ಊರ ಹೆಂಗಸರ ಬುಟ್ಟಿಗಳಲ್ಲಿ, ಅವರ ಮನೆಗಳಿಂದ ಗುಡಿಯ ಕೊಟ್ಟಿಗೆ ಅಲಂಕಾರಕ್ಕೆ ಬಂದಿದ್ದ ಜಾಗಾರಗಳನ್ನು ಎತ್ತಿ ಎತ್ತಿ ಇರಿಸಿದ ಉಪದೇಶಿ ಚೌರಪ್ಪಜ್ಜ ಸುಮ್ಮನೇ ತನ್ನ ಕೆಲಸದಲ್ಲಿ ತೊಡಗಿದ್ದ. ಊರ ಹೆಂಗಸರು, `ಗುರುಗಳು ಈಗ ಬರ್ತಾರೆ, ಆಗ ಬರ್ತಾರೆ’ ಎಂದು ಕಾಯ್ದದ್ದೇ ಬಂತು. ಗುರುಗಳು ಗುರು ಮನೆಯಿಂದ ಹೊರಗೆ ಬರಲೇ ಇಲ್ಲ.
ಸುಮಾರು ಹೊತ್ತಾದ ನಂತರ, ಉಪದೇಶಿ ಚೌರಪ್ಪಜ್ಜನೇ ಮುಂದೆ ಬಂದು, “ಇನ್ನು ಸ್ವಾಮ್ಯಾರು ಬರಾಕಿಲ್ಲ. ನಾನೇ ಜಪ ಹೇಳಿ ಆರ್ಶೀವದಿಸ್ತೀನಿ. ಸಾಲಾಗಿ ಜಾಗಾರಗಳ ಬುಟ್ಟಿ ತಲೆ ಮೇಲೆ ಇಟಕೊಂಡು ನಿಲ್ಲಿ’’ ಎಂದ. ಎಲ್ಲರೂ ಸಾಲಿನಲ್ಲಿ ನಿಂತ ಮೇಲೆ, ಶಿಲುಬೆ ಗುರುತು ಹಾಕಿದ ಉಪದೇಶಿ ಚೌರಪ್ಪಜ್ಜ, ನಮೋ ಮರಿಯಾ ಮತ್ತು ಪರಲೋಕ ಮಂತ್ರ ಹೇಳಿಸಿದ. ಒಳಗಿನ ಸಂಕೃಷ್ಟಿಯಿಂದ ತಂದ ತೀರ್ಥದ ನೀರನ್ನು ಪನ್ನೀರದಾನಿ (ನೀರ್ದಾನಿ) ಯಿಂದ ಎಲ್ಲರ ಮೇಲೂ ಚಿಮುಕಿಸಿದ. “ಇನ್ನು, ನಡೆಯಿರಿ’’ ಎಂದಾಗ ಸಂಜೆ ಗತ್ತಲು ಆವರಿಸತೊಡಗಿತ್ತು. ಊರಲ್ಲಿ ಇನ್ನೂ ಎಲ್ಲರ ಮನೆಗಳಿಗೆ ವಿದ್ಯುತ್ ಸಂಪರ್ಕ ಬಂದಿರಲಿಲ್ಲ. ಬೀದಿ ದೀಪಗಳು ಇದ್ದವು ಎಂಬಂತೆ ಇದ್ದವು.
ಎಂದಿನ ಸಂಭ್ರಮ ಸಡಗರ, ಈ ಬಾರಿಯ ಜಾಗಾರದ ಮೆರವಣಿಗೆಗೆ ಇರಲಿಲ್ಲ. ಗುರುಗಳು ಬಂದು ಆಶೀರ್ವದಿಸದಿದ್ದುದು, ಜಾಗಾರ ಬುಟ್ಟಿಗಳನ್ನು ಹೊತ್ತು ಮೆರವಣಿಗೆ ಹೊರಟಿದ್ದ ಹೆಂಗಸರಿಗೆ ಏನೋ ಕಳೆದುಕೊಂಡ ಭಾವ ಕಾಡುತ್ತಿತ್ತು. `ಮುಂದೆ, ಏನೂ ಕಾದಿದಿಯೋ?’ ಎಂಬ ಆತಂಕವು ಅವರಲ್ಲಿತ್ತು. ಅಂತೂ ಇಂತು ಮೆರವಣಿಗೆ ಕೆರೆಯ ಕೋಡಿ ಜಾಗಕ್ಕೆ ಬಂದಿತ್ತು. ಊರಲ್ಲಿ ಒಂದು ಆಳು ತೋಡಿದರೆ, ಬೂದಿ ಸಿಗುತ್ತದೆ. ಆದ್ದರಿಂದ ಈ ಊರು ಬೆಂಕಿ ಬೇಗೂರು. ಕೆರೆಯ ಕೋಡಿ ದಾಟಿ ಹೋದರೆ, ಎತ್ತರದ ದಿಣ್ಣೆ ಮೇಲಿರುವ ದಿಣ್ಣೆ ಬೇಗೂರು ಸಿಗುತ್ತದೆ.
ಅಷ್ಟರಲ್ಲಾಗಲೇ ಪೂರ್ತಿ ಕತ್ತಲಾವರಿಸಿತ್ತು. ನಿಧಾನವಾಗಿ ಒಬ್ಬೊಬ್ಬರೇ, ತಾವು ತಂದ ಬುಟ್ಟಿಯೊಳಗಿದ್ದ ಜಾಗಾರಗಳನ್ನು ನಿಧಾನವಾಗಿ ತೆಗೆದು, ಆದರ ಭಾವದಿಂದ ಅವನ್ನು ನೀರಿಗೆ ಬಿಡತೊಡಗಿದ್ದರು. ಕರೆಯ ಏರಿಯ ಮೇಲೆ ಆಡುತ್ತಿದ್ದ ಮಕ್ಕಳಲ್ಲಿ ಕೆಲವು ಮಕ್ಕಳು ಆಕಸ್ಮಿಕವಾಗಿ ನೀರಿಗಿಳಿದಿದ್ದವು.
ಫಿಲ್ಲೂ ಅರಳಿದ್ದ ಕಮಲಗಳನ್ನು ಕಿತ್ತುಕೊಳ್ಳಲು ಕೆರೆಯಲ್ಲಿ ನಿಧಾನವಾಗಿ ಮುಂದೆ ಸಾಗಿದ್ದಳು. ಅಷ್ಟರಲ್ಲಿ ಏನಾಯಿತೋ ಏನೋ ಅವಳು ಧಡಂ ಎಂದು ನೀರಲ್ಲಿ ಉರುಳಿ ಬಿದ್ದಳು. ಅವಳನ್ನು ಉಳಿಸಲು ಹೋದ ಪಕ್ಕದ ಮನೆಯ ಹೈಸ್ಕೂಲ ಹುಡುಗ ಚಾರ್ಲಿಯೂ ಕಮಲದ ಬೇರುಗಳ ಜಾಲದಲ್ಲಿ ಸಿಕ್ಕಿಕೊಂಡ. ಊರಿಗೆ ಓಡಿ ಗಂಡಸರನ್ನು ಕರೆದುಕೊಂಡು ಬರುವಷ್ಟರಲ್ಲಿ ಎರಡೂ ಮಕ್ಕಳು ನೀರು ಕುಡಿದಿದ್ದವು. ಅವರನ್ನು ದಂಡೆಗೆ ಎತ್ತಿಕೊಂಡು ಬಂದು ಹೊಟ್ಟೆ ಒತ್ತಿ ಒತ್ತಿ ನೀರು ಹೊರಬರುವಂತೆ ಮಾಡಿದರೂ ಮಕ್ಕಳು ಸುಸ್ತಾಗಿದ್ದರು. ದೂರದ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಯ್ಯುವಷ್ಟರಲ್ಲಿ ಮಕ್ಕಳಿಬ್ಬರು ಕೊನೆಯುಸಿರು ಎಳೆದಿದ್ದರು.
ಮೂರು ರಾಯರ ಹಬ್ಬ, ಈಗ ಊರಲ್ಲಿ ಸೂತಕದ ಛಾಯೆಯನ್ನು ಮೂಡಿಸಿತ್ತು. ಲೋಯೋಲದ ಇನ್ನಾಸಪ್ಪರ ಗುಡಿಯ ಧರ್ಮಕೇಂದ್ರದ ಗುರು ಚೆಲುವರಾಜಪ್ಪ ಅವರು ಆಡಿದ, “ಹೇಳಿದ ಮಾತು ಕೇಳದಿದ್ದರೆ ಹೀಗೆ ಆಗುವುದು’’ ಎಂಬ ಮಾತು ಈಗಲೂ, ಮೂವತ್ತು ವರ್ಷಗಳು ಕಳೆದರೂ ಎದೆಗೆ ಚುಚ್ಚಿದಂತೆ ಆಗುತ್ತದೆ.
`ವೈದ್ಯ ಹೇಳಿದ್ದು ಹಾಲು ಅನ್ನ ರೋಗಿ ಬಯಸಿದ್ದು ಹಾಲು ಅನ್ನ’ ಎನ್ನುವಂತೆ ಗುರುಗಳ ಅಭಿಷ್ಟೆ ಅವರಿಗೆ ಅರಿವಿಲ್ಲದೇ ನೆರವೇರಿತ್ತು. ಶತಮಾನಗಳಿಂದ ನಡೆಯುತ್ತಿದ್ದ ಸಂಭ್ರಮದ ಜಾಗಾರ ಮೆರವಣಿಗೆ ಹಠಾತ್ತಾಗಿ ನಿಲ್ಲಬೇಕಾಯಿತು.
ಪಿಲ್ಲೂ ಈಗ ಬದುಕಿದ್ದರೆ, ನಾಲ್ಕು ಮಕ್ಕಳ ತಾಯಿ ಆಗಿರುತ್ತಿದ್ದಳು. ಅವಳ ಸಂಸಾರ ಊರವರ ಕಣ್ಣೆದುರೆ ಇರುತ್ತಿತ್ತು. ಅವಳ ವಾರಿಗೆಯವರನ್ನು ಕಂಡಾಗ, ಮೂರು ರಾಯರ ಹಬ್ಬ ಬಂದಾಗ ಊರಲ್ಲಿನ ಹಳಬರಿಗೆ ಅಕಾಲದಲ್ಲಿ ದಾರುಣ ಸಾವಿಗೀಡಾದ ಪುಟ್ಟ ಮಕ್ಕಳಾಗಿದ್ದ ಫಿಲ್ಲೂ ಮತ್ತು ಚಾರ್ಲಿಯ ನೆನಪು ಅತಿಯಾಗಿ ಕಾಡುತ್ತದೆ.
(ಈ ಕತೆಯ ಸಂಕ್ಷಿಪ್ತ ರೂಪವು `ಫಿಲ್ಲೂ ಮತ್ತು ಜಾಗರ’ ಹೆಸರಿನಲ್ಲಿ ಕನ್ನಡ ದಿನಪತ್ರಿಕೆ ಸಂಯುಕ್ತ ಕರ್ನಾಟಕದ 2023ರ ಸಾಲಿನ ಡಿಸೆಂಬರ್ ತಿಂಗಳ 31ರ ಭಾನುವಾರದ ಸಾಪ್ತಾಹಿಕ ಸೌರಭದ ಸಂಚಿಕೆಯಲ್ಲಿ ಪ್ರಕಟಗೊಂಡಿದೆ.)
ಎಫ್.ಎಂ.ನಂದಗಾವ