ವನಚಿನ್ನಪ್ಪರ ಬೇಡುದಲೆಯಲ್ಲಿ ಅಂತರ್‌ಧರ್ಮೀಯ ಅಂಶಗಳು

Advertisements
Share

ವನಚಿನ್ನಪ್ಪರ ಬೇಡುದಲೆಯ ಸಂಪ್ರದಾಯವು ಕರ್ನಾಟಕದ ವಿವಿಧ ಹಳ್ಳಿಗಳಲ್ಲಿ ವಿವಿಧ ರೂಪಗಳನ್ನು ಪಡೆದುಕೊಂಡು ಅನೇಕ ದಶಕಗಳಿಂದ ಒಂದು ಧಾರ್ಮಿಕಆಚರಣೆಯಾಗಿ ಬೆಳೆಯುತ್ತಾ ಬಂದಿದೆ. ಒಂದೊಂದು ಊರಿನಲ್ಲಿ ಒಂದೊಂದು ರೀತಿಯ ವ್ಯತ್ಯಾಸಗಳು ಕಂಡುಬಂದಿವೆ. ಆರಂಭದಲ್ಲಿ ಈ ಆಚರಣೆ ಕೇವಲ ಕಥೋಲಿಕ ಕ್ರೈಸ್ತ ಸಮುದಾಯಕ್ಕೆ ಮಾತ್ರ ಸಿಮೀತವಾಗಿತ್ತು. ಕ್ರಮೇಣ ಈ ರೀತಿಯ ಆಚರಣೆಗಳು ಇತರೇ ಸಮುದಾಯದವರಿಗೂ ಆಕರ್ಷಿತವಾದ್ದದು ಸಹಜವೆ. ಯಾಕೆಂದರೆ ವನಚಿನ್ನಪ್ಪರ ಪ್ರಾರ್ಥನೆಯಲ್ಲಿ ತೊಡಗಿದ ಭಕ್ತರು ತಮ್ಮ ಆಧ್ಯಾತ್ಮಿಕ ಅನುಭವಗಳನ್ನು ಗೌಪ್ಯವಾಗಿಡದೆ ಇತರರ ಸಂಗಡ ಹಂಚಿಕೊಂಡ ಕಾರಣ ಅದು ಕ್ರೈಸ್ತೇತರರಿಗೂ ಪ್ರೇರಣೆಯಾಯಿತು. ಆನೇಕಲ್‌ನಲ್ಲಿ ವನಚಿನ್ನಪ್ಪರ ಹಬ್ಬದಂದು ನಡೆಯುವ ತೇರುಮೆರಣಿಗೆಯ ಸಂದರ್ಭದಲ್ಲಿ ಕ್ರೈಸ್ತೇತರರು ತಮ್ಮ ಕೋರಿಕೆಗಳ ಈಡೇರುವಿಕೆಗಾಗಿ ವನಚಿನ್ನಪ್ಪರ ತೇರಿನ ಮುಂದೆ ನೀರು ಸುರಿದು ರಸ್ತೆ ಶುಚಿಗೊಳಿಸುವುದು, ಸ್ಪರೂಪದ ಮೇಲೆ ಉಪ್ಪುಎರಚುವುದು, ತೇರಿನ ಮೇಲೆ ಎರಚಿದ ಹೂವು ಮತ್ತು ಉಪ್ಪನ್ನು ಸಂಗ್ರಹಿಸಿ ತಮ್ಮ ಮನೆಗಳ ಗೂಡುಗಳಲ್ಲಿಡುವುದು ವಾಡಿಕೆ. ಹೀಗೆ ಇಡುವುದರಿಂದ ಮನೆಯಲ್ಲಿರುವ ಜಾನುವಾರುಗಳಿಗೆ ರೋಗ ರುಜಿನಗಳು ಬರುವುದಿಲ್ಲ ಮತ್ತು ಕುಟುಂಬದ ಸದಸ್ಯರಿಗೆ ಗಂಡಾಂತರಗಳು ಸಂಭವಿಸುವುದಿಲ್ಲವೆಂದು ನಂಬಿದ್ದಾರೆ. ಸ್ಥಳಿಯ ಕ್ರೈಸ್ತ ಭಕ್ತರಿಂದ ಪ್ರೇರಿತರಾಗಿದ್ದಾರೆ.

ಬೆಂಗಳೂರು ನಗರದಿಂದ ಸುಮಾರು ೨೦ ಕಿ ಮಿ ದೂರದಲ್ಲಿರುವ ಊರು ಮೈಲಸಂದ್ರ. ಈ ಊರಿನ ಕ್ರೈಸ್ತ ಭಕ್ತರು ಒದಗಿಸಿರುವ ಮಾಹಿತಿಯ ಪ್ರಕಾರ ೧೯೭೦ರ ಹಿಂದೆ ವನಚಿನ್ನಪ್ಪರ ಬೇಡುದಲೆಗೆ ಅಂತರ್‌ಧರ್ಮೀಯ ಲಕ್ಷಣಗಳಿದ್ದವು. ಅಲ್ಲಿಯ ಹಿರಿಯರನ್ನು ವಿಚಾರಿಸಿದಾಗ – ನೂರಾರು ವರ್ಷಗಳ ಹಿಂದೆ ಮೈಲಸಂದ್ರ ಮತ್ತು ಸುತ್ತಮುತ್ತಲಿನ ಊರುಗಳಲ್ಲಿ ಪ್ಲೇಗ್ ಕಾಯಿಲೆ ತಾಂಡವವಾಡುತಿತ್ತು. ಮಾರಕ ಕಾಯಿಲೆಯಿಂದ ಊರಿಗೆ ಊರೇ ನಾಶವಾಗುತ್ತಿದ್ದವು. ಆದರೆ ಮೈಲಸಂದ್ರದ ಜನತೆ ಮಾತ್ರ ಪ್ಲೇಗ್‌ ರೋಗದಿಂದ ಅದ್ಭುತಕರವಾಗಿ ಪಾರಾಗುತಿದ್ದರು.ಈ ಅದ್ಭುತಕರವಾದ ರಕ್ಷಣೆಯ ಹಿಂದಿನ ರಹಸ್ಯದ ಬಗ್ಗೆ ವಿಚಾರಿಸಿದಾಗ ಊರಿನ ಹಿರಿಯರು ನೀಡಿದ ಮಾಹಿತಿ ಕುತೂಹಲ ಕೆರಳಿಸಿತು.ಈ ಅದ್ಭುತವನ್ನು ಅಲ್ಲಿನ ಜನರು ವನಚಿನ್ನಪ್ಪರ ಕೃಪೆಯಿಂದ ಆದ್ದದೆಂದು ಹೇಳುತ್ತಾರೆ. ಮಳೆಬಾರದೆ ಬರಗಾಲಕ್ಕೆ ತುತ್ತಾಗುವಂತಹ ಸಂದರ್ಭದಲ್ಲೂ ವನಚಿನ್ನಪ್ಪರ ಬೇಡುದಲೆ ಪ್ರಾರ್ಥನೆ ಮಾಡಿದಾಗ ಧಾರಕಾರವಾದ ಮಳೆಯಾಗುತಿತ್ತು ಎಂದೂ ಹೇಳುತ್ತಾರೆ.

ಪ್ರತಿವರ್ಷ ಜನವರಿ ತಿಂಗಳಿನಲ್ಲಿ ಊರ ಜನರೆಲ್ಲಾ ಒಟ್ಟುಸೇರಿ ಊರಿಗೆ ಸ್ವಲ್ಪ ದೂರದಲ್ಲಿರುವ ಮೈದಾನದಲ್ಲಿ, ತಮ್ಮತಮ್ಮ ಕುಟುಂಬಗಳೊಂದಿಗೆ ಸೇರಿ ಭೋಜನವನ್ನು ತಯಾರಿಸುತ್ತಿದ್ದರು. ಮೈದಾನದಲ್ಲಿ ಸೇರುತಿದ್ದವರು ಕೇವಲ ಕ್ರೈಸ್ತರು  ಮಾತ್ರವಲ್ಲ. ಕ್ರೈಸ್ತೇತರರೂ ಈ ಆಚರಣೆಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತಿದ್ದರು. ಕ್ರೈಸ್ತರು ವನಚಿನ್ನಪ್ಪರ ಪುಟ್ಟಗುಡಿ ತಯಾರಿಸಿ, ಜಪಸರ, ಪ್ರಾರ್ಥನೆಯಲ್ಲಿ ತೊಡಗಿದರೆ, ಹಿಂದೂ ಸಮುದಾಯದ ಭಕ್ತರು ವನದಮ್ಮ, ಕಾಡಮ್ಮ ಎಂಬ ತಮ್ಮ ಇಷ್ಟದೇವರಿಗೆ ಗುಡಿ ತಯಾರಿಸಿ ಅದರ ಸುತ್ತುಲೂ ಕುಳಿತು ಪ್ರಾರ್ಥನೆ ಸಲ್ಲಿಸುತಿದ್ದರು. ಮುಸಲ್ಮಾನ ಸಮುದಾಯದವರೂ ಸೇರುತಿದ್ದರು ಎಂದು ಕೆಲವರು ಹೇಳುತ್ತಾರೆ. ಪ್ರತಿಕುಟುಂಬದವರು ತಮ್ಮ ಭೋಜನವನ್ನು ಮೈದಾನದಲ್ಲಿಯೇ ತಯಾರಿಸಿ, ಪರಸ್ಪರರೊಂದಿಗೆ ಹಂಚಿಕೊಂಡು ಸಹಬಾಳ್ವೆಯನ್ನು ಪ್ರದರ್ಶಿಸುತ್ತಿದ್ದರು. ಕತ್ತಲುಕವಿಯುವಷ್ಟರಲ್ಲಿ ಮೂರು ತೇರುಗಳು ಸಿದ್ಧವಾಗುತಿದ್ದವು, ಮತ್ತು ಊರಿನ ಎಲ್ಲಾ ಸಮುದಾಯದವರು ತೇರುಮೆರವಣಿಗೆಯಲ್ಲಿ ಭಾಗವಹಿಸುತಿದ್ದರು.  ಕಾಲಕ್ರಮೇಣ ಈ ಆಚರಣೆಗಳಲ್ಲಿ ಕೆಲವು ಬದಲಾವಣೆಕಂಡು ಬಂದಿವೆ. ೧೯೭೦ರನಂತರ ಊರಜನರೆಲ್ಲ ಸೇರಿ ಒಟ್ಟಾಗಿ ಭೋಜನವನ್ನು ತಯಾರಿಸುತ್ತಾರೆ. ಹರಕೆ ಹೊತ್ತವರು, ಕುರಿ, ಕೋಳಿ, ಮೇಕೆಗಳನ್ನು ಭೋಜನದ ತಯಾರಿಕೆಗಾಗಿ ಕಾಣಿಕೆಯಾಗಿ ಅರ್ಪಿಸುತ್ತಾರೆ. ಅರ್ಪಿಸಿದ ಹರಕೆಯ ಪ್ರಾಣಿಗಳನ್ನು ಗುರುಗಳು ಆಶೀರ್ವದಿಸಿದ ನಂತರವೇ ಕೊಯ್ದು ಭೋಜನವನ್ನು ಸಿದ್ಧಪಡಿಸುತ್ತಾರೆ. ಹತ್ತಿರದ ಊರುಗಳಿಂದ ಅಂದರೆ ಭೈರತಿ, ಚಿಕ್ಕಮ್ಮನ ಹಳ್ಳಿ, ಬೇಗೂರು, ಕಾಳೇನ ಅಗ್ರಹಾರ, ಆನೇಕಲ್, ವಿ ನಾಗನಹಳ್ಳಿ, ಆದಿಗೊಂಡನಹಳ್ಳಿ ಮುಂತಾದ ಅಕ್ಕಪಕ್ಕದ ಊರುಗಳಿಂದ ಭಕ್ತಾದಿಗಳು ಆಗಮಿಸುವುದರಿಂದ ಇಲ್ಲಿ ಸುಮಾರು ೨೦೦೦ದಿಂದ ೩೦೦೦ದಷ್ಟು ಜನರು ಪ್ರತಿವರ್ಷವೂ ಹಬ್ಬದಾಚರಣೆಗೆ ಸೇರುವುದು ಸಾಮಾನ್ಯ.

ವನಚಿನ್ನಪ್ಪರ ಬೇಡುದಲೆ ಬಡಕುಟುಂಬದರೈತರಿಗೆ ಭರವಸೆ ತುಂಬುವ ಆಚರಣೆಗಳಾಗಿದ್ದವು. ತಮ್ಮ ದೈನಂದಿನ ಕಷ್ಟ ನೋವುಗಳಿಂದ ಪಾರಾಗಲು ಅದ್ಯಾತ್ಮಿಕ ಹಾದಿಯೊಂದನ್ನು ಕಂಡುಕೊಂಡು, ಎಲ್ಲವನ್ನೂ ಸಾಮುದಾಯಿಕವಾಗಿ  ಎದುರಿಸುವ ಕಲ್ಪನೆ ಹೊಂದಿದ್ದರು. ವನಚಿನ್ನಪ್ಪರ ಬೇಡುದಲೆ ಅಂತರ್‌ಧರ್ಮೀಯ ಲಕ್ಷಣಗಳನ್ನೂ ಹೊಂದಿರುವುದರಿಂದ ಇತರೆ ಧರ್ಮದ ಜನತೆಯ ಮೇಲೆ ಅತೀವ ಗೌರವವನ್ನು ಬೆಳೆಸಲು,  ಮಾನವ ಸಮುದಾಯವನ್ನು ಕಟ್ಟಲು, ಮತೀಯ ಸಾಮಾರಸ್ಯವನ್ನು ಬೆಳೆಸಲು, ಸಹೋದರತ್ವದ ಪೋಷಣೆಯನ್ನು ಮಾಡಲು ನೆರವಾಗುವ ಒಂದು ಅದ್ಭುತ ಆಚರಣೆ ಎನ್ನಬಹುದು.

ಫಾದರ್ ಮೆಲ್ವಿನ್ ಲೋಬೊ ಯೇ.ಸ.

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram