
ಎಲ್ಲಾ ಬಣ್ಣಗಳಲ್ಲಿ ನೆನೆದು
ತಣ್ಣಾಗಾಗಿದ್ದೇನೆ
ಬೆನ್ನುತೋರಿಸಿದ್ದೇನೆ
ಲೋಕ ಕಳಮುಖವನ್ನೆಲ್ಲಿ ನೋಡುವುದೆಂದು
ಗರಬಡಿದವನಾಗಿದ್ದೇನೆ
ಕೇಸರಿ ಶ್ರೇಷ್ಠ, ಹಸಿರು ಕನಿಷ್ಟ
ಶ್ವೇತ ಭೂತವೆಂದೇಳುವುದರಲ್ಲೇ ಕಾಲ ಕಳೆದೆ
ಕಪ್ಪುಗಳ ಅರಿವಿಲ್ಲದೆ ತಪ್ಪುಗಳ ಹುಡುಕುತಾ
ಹೊರಟೆ
ಹೊಸ ರಂಗುಗಳ ಗುಂಗಿನ ಹುಡುಕಾಟದಲ್ಲಿ!!
ಬಣ್ಣಗಳ ಅಂದರ್ ಬಾಹರ್
ಜೂಜಾಟದಲಿ ಬಾಹಿರನಾಗಿದ್ದೇನೆ
ಎಲ್ಲವನ್ನು ಬಿಟ್ಟು; ತುಂಬಿದ ಮಾರುಕಟ್ಟೆಯಲಿ
ಏಕಾಂಗಿಯಾಗಿದ್ದೇನೆ
ಕಪ್ಪು ಬಿಳುಪಾಗುವ ನೀರಿಕ್ಷೆಯಲಿ
ಪರೀಕ್ಷೆಗೊಳಗಾಗಿದ್ದೇನೆ
ಯಾರು ಮೆತ್ತಿರಬಹುದು
ಹುಸಿ ಬಣ್ಣಗಳನ್ನು ಈ ಕಪ್ಪು ಮುಖಕ್ಕೆ?
ಹಸಿ ಉತ್ತರಗಳಿಗೆ ಜೋತುಬಿದ್ದು ನಿಟ್ಟುಸಿರು
ಬಿಡುತ್ತಾ
ಭ್ರಮಲೋಕದಲಿ ಮೂಕನಾಗಿದ್ದೇನೆ!!!
– ಉಮರ್ ದೇವರಮನಿ, ಮಾನ್ವಿ