ಭಾರತದ ಸಂವಿಧಾನಕ್ಕೊಂದು ಕ್ರೈಸ್ತೀಯ ನಂಟು

Advertisements
Share

ಜನವರಿ 26 ಎಂದಾಕ್ಷಣ ನಮ್ಮ ನೆನಪಿನಂಗಳದಲ್ಲಿ ಅಂಕುರಿಸುವುದು ಗಣರಾಜ್ಯೋತ್ಸವ ದಿನಾಚರಣೆ. ಸ್ವತಂತ್ರವಾದ  ಭಾರತ ಗಣರಾಜ್ಯವಾಗಿ ಭಾರತದ ಸಂವಿಧಾನ ಅಧಿಕೃತವಾಗಿ ಅಂಗೀಕರಿಸಲ್ಪಟ್ಟ ದಿನ. ಭಾರತ ಒಂದು ರಾಷ್ಟ್ರವಾಗಿ ನಾವೆಲ್ಲರೂ ಆ ರಾಷ್ಟ್ರದ ಪ್ರಜೆಗಳಾಗಿ ಅಸ್ತಿತ್ವ ಪಡೆದ ದಿನ. ಆಗಸ್ಟ್ 15, 1947‍ರಂದು ಭಾರತ ಸ್ವತಂತವಾದ ನಂತರ ಆಗಸ್ಟ್ 29‍ರಂದು ಡಾ.ಅಂಬೇಡ್ಕರ್‍ ಅವರ ನೇತೃತ್ವದಲ್ಲಿ ಎರಡು ಸಮಿತಿಗಳ ನೇಮಕಾತಿ ಮಾಡಲಾಯಿತು. ಈ ಸಮಿತಿಗಳು ಸಂವಿಧಾನದ ಕರಡು ಪ್ರತಿಗಳನ್ನು ತಯಾರಿಸಿ ನವೆಂಬರ್ 4, 1947 ರಂದು ಶಾಸನ ಸಭೆಯಲ್ಲಿ ಮಂಡಿಸಿತು. ನವೆಂಬರ್ 26, 1949‍ರಂದು ನಮ್ಮ ಸಂವಿಧಾನದ ಪ್ರತಿಯನ್ನು ಅಂಗೀಕರಿಸಲ್ಪಟ್ಟು ಅನೇಕ ಪರಿಶೀಲನೆ ಮತ್ತು ತಿದ್ದುಪಡಿಗಳ ನಂತರ ಜನವರಿ 26, 1950‍ರಂದು ಭಾರತದಲ್ಲಿ ಅಧಿಕೃತವಾಗಿ ಜಾರಿಗೆ ಬಂದಿತು.

ಡಾ. ಬಿ ಆರ್ ಅಂಬೇಡ್ಕರ್ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷತೆ ವಹಿಸಿ ಸಂವಿಧಾನದ ಶಿಲ್ಪಿ ಎಂದೇ ಕರೆಯಲ್ಪಟ್ಟರು. ಆದರೆ ಭಾರತದ ಸಂವಿಧಾನದ ಹಿಂದೆ ಇನ್ನೂ ಅನೇಕ ಹರಿಕಾರರ ಪರಿಶ್ರಮ ಮತ್ತು ಅಪಾರ ಬೌದ್ಧಿಕ ಕೊಡುಗೆಯಿದೆ. ಅಂತಹ  ಗಣ್ಯವ್ಯಕ್ತಿಗಳ ಸಾಲಿನಲ್ಲಿ ಕ್ರೈಸ್ತರೊಬ್ಬರ ಹೆಸರಿರುವುದು ನಿಜಕ್ಕೂ ಹೆಮ್ಮಯ ವಿಷಯ. ಅದರಲ್ಲೂ ಆವರು ಈ ಕನ್ನಡನಾಡಿನ ಸುಪುತ್ರನೆಂದಾಗ ನಮ್ಮ ಹೆಮ್ಮೆ ಉಕ್ಕಿ ಹರಿಯಬೇಕು. ಹೌದು, ವಂದನೀಯ ಜೆರೋಮ್ ಡಿ’ಸೋಜ ಯೇ. ಸ. (ಜೆಸ್ವಿಟ್) ಭಾರತದ ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿ, ಭಾರತ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂರವರ ಆಪ್ತ ಸಲಹಗಾರನಾಗಿ ಎಲೆಮರೆಯ ಕಾಯಿಯಂತಿದ್ದು ತನ್ನ ಅಪಾರ ಬೌದ್ಧಿಕ ಕೊಡುಗೆ ನೀಡಿದ ಮಹಾನ್ವ್ಯಕ್ತಿ.

ಜೆರೋಮ್‍ ಅವರು ಹುಟ್ಟಿದ್ದು ಮಂಗಳೂರಿನ ಮೂಲ್ಕಿಯಲ್ಲಿ. ಆವರು ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸಂತ ಅಲೋಶಿಯಸ್ ಶಾಲೆಯಲ್ಲಿ ಪೂರ್ಣಗೊಳಿಸಿದರು. ತನ್ನ ಉನ್ನತ ವ್ಯಾಸಂಗವನ್ನು ತಿರುಚಿನಾಪಳ್ಳಿಯ ಸಂತ ಜೋಸೆಫರ ಕಾಲೇಜಿನಲ್ಲಿ ಮುಗಿಸಿ ತಾನು ವಿದ್ಯೆ ಪಡೆದ ಸಂಸ್ಥೆಯಲ್ಲೇ ವಿದ್ಯಾದಾನ ಮಾಡಲು ಮುಂದಾಗಿ ನಿಂತರು. ದೈವ ಕರೆಗೆ ಓಗೊಟ್ಟು ಯೇಸು ಸಭೆ ಸೇರಿ ತನ್ನ ತರಬೇತಿ ಮುಗಿಸಿ 1931‍ರಲ್ಲಿ ಯಾಜಕದೀಕ್ಷೆ ಪಡೆದರು. ಅತೀ ಶೀಘ್ರದಲ್ಲೆ ಸಂತ ಜೋಸೆಫ್‍ರ ಕಾಲೇಜಿನ ಪ್ರಾಂಶುಪಾಲರಾಗಿ ತದನಂತರ ರೆಕ್ಟರಾಗಿ ನೇಮಕಾತಿಯಾದರು. ತನ್ನ ಅತೀ ತೀಕ್ಷ್ಮ ಬುದ್ಧಿಶಕ್ತಿಯಿಂದ, ದಕ್ಷ ಆಡಳಿತಗಾರನಾಗಿ ಹೆಸರು ಮಾಡಿದರು. ಕೆಲವೇ ವರ್ಷಗಳಲ್ಲೆ ಚೆನೈನಲ್ಲಿರುವ ಲೊಯೋಲ ಕಾಲೇಜಿಗೆ ವರ್ಗವಾದರು.

ಇದೇ ಸಮಯಕ್ಕೆ ರಾಜಗೋಪಾಲಚಾರಿಯವರ ಪರಿಚಯವಾಗಿ, 1946 ಡಿಸೆಂಬರಿನಲ್ಲಿ ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿ ನೇಮಕಗೊಂಡರು. ಮುಂದಿನ ನಾಲ್ಕು ವರ್ಷಗಳ ಕಾಲ ಸಂವಿಧಾನ ರಚನೆಗೆ ಅವಿರತವಾಗಿ ದುಡಿದರು.

ಸಂವಿಧಾನ ರಚನೆಯಲ್ಲಿ ಜೆರೋಮ್‍ರವರ ಕೊಡುಗೆ ಅಪಾರ. ಸಂವಿಧಾನದ ಮೂಲಭೂತ ಹಕ್ಕುಗಳ ಕರುಡು ರಚನೆಯಲ್ಲಿ ಇವರು ಮಹತ್ವದ ಪಾತ್ರವಹಿಸಿದರು. ಎಚ್. ಸಿ ಮುಖರ್ಜಿ‍ಯವರ ಜೊತೆ ಸೇರಿ ಅಲ್ಪಸಂಖ್ಯಾತರಿಗೆ ತಮ್ಮ ಧರ್ಮಾನುಸರಣೆ ಮತ್ತು ಆಚರಣೆಗೆ ಮೂಲಭೂತ ಹಕ್ಕು ಮತ್ತು ಸ್ವತಂತ್ರ್ಯವನ್ನು ಕಲ್ಪಿಸಿಕೊಡುವಲ್ಲಿ ಸಫಲರಾದರು. ಇಂದು ನಾವು ಕ್ರೈಸ್ತರಾಗಿ ಈ ದೇಶದಲ್ಲಿ ಬಹುಪಾಲು ಶಾಂತಿಯುತವಾಗಿ ಜೀವಿಸುತ್ತಿದ್ದೇವೆ ಎಂದರೆ ಅದಕ್ಕೆ ಜೆರೋಮ್‍ರವರ ಕೊಡುಗೆ ಅಪಾರ ಮತ್ತು ಶ್ಲಾಘನೀಯ.

ಜೆರೋಮ್ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆಪ್ತ ಸಲಹಗಾರರಾಗಿದ್ದರು. ಪ್ರಧಾನಿಯವರ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದ ಅವರು ಭಾರತದ ಶಿಕ್ಷಣ ನೀತಿ ರಚನೆಗೆ ನೆಹರೂರವರು  ಜೆರೋಮ್‍ರವರಿಂದ ಅಮೂಲ್ಯ ಸಲಹೆಗಳನ್ನು ಪಡಿದಿದ್ದರು. ಜೆರೋಮ್‍ರವರ ಮಾತುಗಾರಿಕೆಯನ್ನು ಬಹಳವಾಗಿ ಮೆಚ್ಚಿಕೊಂಡಿದ್ದ, ಪ್ರಧಾನಿ ಜವಾಹರಲಾಲ್ ನೆಹರೂರವರು  ಜೆರೋಮ್‍ರವರನ್ನು ಸತತ ನಾಲ್ಕು ಭಾರಿ ವಿಶ್ವಸಂಸ್ಥೆಯ ವಿಧಾನಸಭೆಗಳಿಗೆ ಭಾರತದ ಪ್ರತಿನಿಧಿಯಾನ್ನಾಗಿ ನೇಮಿಸಿದ್ದರು.

ಇದಲ್ಲದೆ ವ್ಯಾಟಿಕನ್ ಜೊತೆ ಮಾತುಕತೆಯ ಮುಖಾಂತರ ಪೋರ್ಚುಗಲ್ಲಿನ“ಪಾದ್ರೋವಾದೊ” ವ್ಯವಸ್ಥೆಯನ್ನು  ಹಿಂದಕ್ಕೆ ಪಡೆಯುವಂತೆ ಮಾಡುವಲ್ಲಿ ಜೆರೋಮ್ ಸಫಲರಾದರು. ಫ್ರಾನ್ಸ್ ಸರ್ಕಾರದ ಜೊತೆ ಮಾತುಕತೆಯ ಮುಖಾಂತರ ಫ್ರೆಂಚ್  ವಸಾಹತುಶಾಹಿಯ ವಶದಲ್ಲಿದ್ದ ಭಾರತದ ಭೂ ಪ್ರದೇಶಗಳನ್ನು ಹಿಂದಿರುಗಿಸುವಂತೆ ಮಾಡುವಲ್ಲಿ ಯಶ್ಸಸ್ವಿಯಾದರು.

ಕ್ರೈಸ್ತರನ್ನು ರಾಷ್ಟ್ರ ವಿರೋಧಿಗಳು ಪರಕೀಯರು  ಎಂದು ಬಿಂಬಿಸುವ ಯತ್ನ ನಡೆಯುವ ಪ್ರಸ್ತುತ ವಿಷ ಗಳಿಗೆಯಲ್ಲಿ ಜೆರೋಮ್‍ರವರು ಕ್ರೈಸ್ತರ ರಾಷ್ಟ್ರ ಪ್ರೇಮಕ್ಕೆ ದ್ಯೋತಕವಾಗಿ ನಿಲ್ಲುತ್ತಾರೆ. ನಮ್ಮ ರಾಷ್ಟ್ರ ಪ್ರೇಮಕ್ಕೆ ಮಾದರಿಯಾಗಿ ಪ್ರೇರಣೆಯಾಗಿದ್ದಾರೆ.

ಫಾದರ್ ಬಾಲಕಿರಣ್ ಯೇ.ಸ.

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram