ತೊರೆ ಸೇರಿದೆ ಮುನ್ನೀರ‌ ಮಡಿಲು

Advertisements
Share

ಓ ನೀರದನೇ.. ಸಖನೇ..
ಪಯಣ ಸಾಗಿರುವುದೆಲ್ಲಿಗೆ?
ನಿಲ್ಲು, ನನ್ನಾಸೆಯನಾಲಿಸು
ನನ್ನವಳಿಗೆ ಓಲೆಯನು‌ ತಲುಪಿಸು

ನಿಲ್ಲುವ ಹೊತ್ತು ಇದಲ್ಲ ಗೆಳೆಯ..
ಮುಗ್ಧರ ಶಾಪವೆನಗಿಹುದು
ವಸುಧೆಯ ತಣಿಸಿ ರೈತರ ನಗಿಸಲು
ಪಯಣ ಸಾಗಿಹೆನು ಹಗಲಿರುಳು

ಓ ಮೇಘವೇ.. ಗೆಣೆಕಾರನೇ..
ಬುವಿಯು ನೆನೆದಿದೆ ಅಶ್ರುವಿನಲಿ!
ಬತ್ತಿ ಬರಿದಾಗಿದೆ ನನ್ನ ಲೋಚನ
ಉಳಿದಿರುವುದೊಂದೇ‌ ಜೀವಹನಿ!

ಅಯ್ಯೋ! ನೀನೊಬ್ಬ ಮರುಳ!
ಮುತ್ತಿದೆ ನಿನ್ನ ನಿಷ್ಕಲ್ಮಶ ಪ್ರೀತಿ
ಎಲ್ಲಿರುವಳು ನಿನ್ನ ಜೀವದ ಗೆಳತಿ?
ತಲುಪಿಸುವೆ ನಿನ್ನೊಲುಮೆಯ ಪ್ರತಿ

ಓ ಮುಗಿಲೇ.. ಕೆಳೆಯನೇ..
ಹುಡುಕಿದೆ ಅವಳಡಗಿದೆಡೆಯ
ಸುಳಿವಿಲ್ಲ, ಹೆಜ್ಜೆಗಳ ಕುರುಹುಗಳಿಲ್ಲ,
ಶೋಧಿಸಬಾರದೇ ಬಾನಂಗಳದಲ್ಲಿ

ಹುಡುಕಾಟವ ಹೇಗೇಳಲಿ‌ ಮಿತ್ರ..
ಅವಳಲ್ಲಿ.. ನೀನಿಲ್ಲಿ ಮರೆತು ಬಿಡು!
ತೊರೆ ಸೇರಿದೆ ಮುನ್ನೀರ ಮಡಿಲು
ನೆನಪಲ್ಲೇ ನೀ ಕೊರಗದಿರು ಗೆಣೆಯ

ಓ ಬಲಾಹಕನೇ..ಧನ್ಯನಾದೆ
ಮದಕರಿಯ ಮದವಿಳಿದಿದೆ
ಸಾಗುವೆ ನಾನೀಗಲೆ… ಶರಧಿಗೆ
ಅವಳಿರುವ ಅಮೃತದ ಮಡಿಲಿಗೆ

ದೇವ

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram