
ಹಿರಿಯ ಸಿಸ್ಟರ್, ಮೀನುತಾಯಿ ಅವರು ತೀರಿಕೊಂಡರಂತೆ.
ಸಮೀಪದ ಸಂತ ತೆರೆಸಾ ಆಸ್ಪತ್ರೆಯಿಂದ ಸುದ್ದಿ ಬರುತ್ತಿದ್ದಂತೆಯೇ ತೆರೆಸಾಪುರದ ಕಾನ್ವೆಂಟಿನಲ್ಲಿ ಎಲ್ಲವೂ ಸ್ತಬ್ಧವಾದಂತಾಯಿತು.
ಸಿಸ್ಟರ್ ಮೀನುತಾಯಿ, ಕಾನ್ವೆಂಟಿನ ಒಂದು ಅವಿಭಾಜ್ಯ ಅಂಗವಾಗಿ ಇದ್ದರು. ಅವರಿಲ್ಲದೇ ಕಾನ್ವೆಂಟನ್ನು ನೆನಪಿಸಿಕೊಳ್ಳುವುದೇ ಕಷ್ಟ. ಹಳೆಯ ಮಂಗಳೂರು ಹೆಂಚಿನ ಮನೆಯ ಬದಲು ಆರ್ಸಿಸಿ ಕಟ್ಟಡದ ಕನ್ಯಾಸ್ತ್ರೀಯರ ಮನೆ, ಪಕ್ಕದ ಸುಸಜ್ಜಿತ ಶಾಲೆ, ದೂರದ ತೆರೆಸಾ ಆಸ್ಪತ್ರೆ ಮುಂತಾದವುಗಳ ಹಿಂದಿನ ಪ್ರೇರಕ ಶಕ್ತಿಯಾಗಿದ್ದವರು ಅವರು, ಅಸಂಖ್ಯಾತ ಮಕ್ಕಳಿಗೆ ತಾಯ ಪ್ರೀತಿ ಹಂಚಿದ್ದರು. ನೂರಾರು ಜನರ ಬದುಕಿಗೆ ಅವರು ಬೆಳಕಾಗಿದ್ದರು. ಕರೊನಾ ಕಾಯಿಲೆ ಅವರನ್ನು ನುಂಗಿ ನೀರು ಕುಡಿದಿತ್ತು. ಯಾವುದೋ ಪರದೇಶದ ಕಾಯಿಲೆ ಭಾರತಕ್ಕೆ ವಕ್ಕರಿಸಿ, ನಮ್ಮ ನಾಡಿಗೂ ಬಂದು, ನಮ್ಮ ಕಾನ್ವೆಂಟಿನ ಬಾಗಿಲನ್ನೂ ತಟ್ಟಿತ್ತು.
ಈಗ, ಈ ಕಾನ್ವೆಂಟಿನ ಸದಸ್ಯೆಯಾಗಿ ಮೂರು ವರ್ಷಗಳೂ ಕಳೆದಿರಲಿಲ್ಲ, ಈಚೆಗೆ ಕನ್ಯಾಸ್ತ್ರೀ ಪಟ್ಟಪಡೆದು ನವದೀಕ್ಷಿತೆಯಾಗಿದ್ದ ನಾನು, ಆಕಸ್ಮಿಕವಾಗಿ ಅವರೊಂದಿಗೆ ಒಂದು ದಿನ ದೂರದರ್ಶನದ ಮುಂದೆ ಕುಳಿತು ಜ್ಯೋತಿಷಿಯೊಬ್ಬರ ನುಡಿಗಳನ್ನು ಕಿವಿಗೊಟ್ಟು ಕೇಳಿದ್ದ ಸಂಗತಿ ನೆನಪಾಯಿತು.
*********
ಸಿಸ್ಟರ್ ಮೀನುತಾಯಿ ಅವರು ದೂರದರ್ಶನದ ಪೆಟ್ಟಿಗೆಯ ಮುಂದೆ ಕುಳಿತಿದ್ದರು. ಅವರ ಕಣ್ಣುಗಳ ಅಂಚಿನಲ್ಲಿ ನೀರು ಮಡುಗಟ್ಟಿತ್ತು. ಯಾವಾಗಲೂ ತಾವಾಯಿತು ತಮ್ಮ ಕೆಲಸವಾಯಿತು ಅಂತ ಇರೋ ಸಿಸ್ಟರ್ ಮೀನುತಾಯಿ, ಇಂದು ದೂರದರ್ಶನ ಪೆಟ್ಟಿಗೆಯ ಮುಂದೆ ಪಟ್ಟಾಗಿ ಕುಳಿತಿದ್ದರು. ದೂರದರ್ಶನ ಪೆಟ್ಟಿಗೆಯಲ್ಲಿ ಬರುವ ಕಾರ್ಯಕ್ರಮಗಳನ್ನು ಅಷ್ಟಾಗಿ ಎಂದೂ ಗಮನಿಸದವರು, ಇಂದು ತದೇಕಚಿತ್ರದಿಂದ ಜ್ಯೋತಿಷ ವಿವರಿಸುವ ಪಂಡಿತರ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದಾರೆ.
ಈ ಕನ್ಯಾಸ್ತ್ರೀ ಮಠಕ್ಕೆ (ಕಾನ್ವೆಂಟ್) ಈಚೆಗೆ ನವದೀಕ್ಷಿತೆಯಾಗಿ ಬಂದಿರುವ ನನಗೆ, ಇವರ ನಡೆ ತುಂಬಾ ವಿಚಿತ್ರವಾಗಿ ಕಂಡಿತ್ತು. ಅವರ ವಯಸ್ಸು ಸರಿಸುಮಾರು ಎಪ್ಪತ್ತು ಅಥವಾ ಎಪ್ಪತ್ತೈದು ಅಥವಾ ಅದಕ್ಕಿಂತ ಹೆಚ್ಚೋ ಗೊತ್ತಾಗುತ್ತಿರಲಿಲ್ಲ. ಒಂದೆರಡು ಬಾರಿ ಈ ಕನ್ಯಾಸ್ತ್ರೀ ಮಠದ ಚುಕ್ಕಾಣಿ ಹಿಡಿದ್ದಿದ್ದವರು ಅವರು. ಮಠವನ್ನು ಮುನ್ನಡೆಸುವವರನ್ನು ಮದರ್ ಸುಪೀರಿಯರ್ ಅಂದರೆ, ಸಭೆಯ ಹಿರಿಯ ತಾಯಿ ಎಂದೇ ಕರೆಯೋದು. ಈಗ ಮಠದ ಅಧಿಕಾರದ ಚುಕ್ಕಾಣಿ ಹಿಡಿಯದಿದ್ದರೂ ವಯೋಮಾನದಲ್ಲಿ ಅವರು ಮಠದ ಹಿರಿಯ ತಾಯಿಯೇ ಆಗಿದ್ದರು. ಹಿಂದಿನಿಂದಲೂ – ನಮ್ಮಂಥ ಮದುವೆಯಾಗದ ಧಾರ್ಮಿಕ ಸಹೋದರಿಯರನ್ನು ಸಿಸ್ಟರ್ ಜೊತೆ ಜೊತೆಗೆ ತಾಯಿ ಎಂದು ಸಂಬೋಧಿಸುವ ಪರಿಪಾಠವಿದೆ.
ನಿಧಾನವಾಗಿ ನಡೆದು ಅವರು ಕುಳಿತಿದ್ದ ಸೋಫಾದಲ್ಲಿ, ಅವರಿಂದ ಸ್ವಲ್ಪದೂರ ಅಂದರೂ ಅವರ ಪಕ್ಕದಲ್ಲೇ ಕುಳಿತೆ.
“ಬಾಮ್ಮಾ ಕುಳಿತುಕೋ’’ ಎನ್ನುತ್ತಾ, “ನಿನ್ನ ಬ್ರೆಕ್ ಫಾಸ್ಟ್ (ಬೆಳಗಿನ ತಿಂಡಿ) ಆಯಿತಾ?’’ ಎಂದು ಕೇಳಿದರು.
“ಹೂಂ.. ‘’ಎಂದು ತಲೆ ಅಲ್ಲಾಡಿಸಿದೆ.
*********
ದೂರದರ್ಶನದಲ್ಲಿ ಹಣೆಗೆ ನಾಮ ಧರಿಸಿದ್ದ ಪಂಡಿತರೊಬ್ಬರು ವಿವರಣೆ ನೀಡುತ್ತಿದ್ದರು.
`ಭಾರತೀಯ ವೇದಾಂಗ ಜೋತಿಷ್ಯ ಶಾಸ್ತ್ರದಲ್ಲಿ 27 ನಕ್ಷತ್ರಗಳನ್ನು ಪರಿಗಣಿಸಲಾಗುತ್ತದೆ. ಈ ನಕ್ಷತ್ರಗಳಲ್ಲಿ ಕೇತು ಅಧಿಪತಿಯಾದ ಅಶ್ವಿನಿ, ಮಾಘ, ಮೂಲಾ ಮತ್ತು ಬುಧನು ಅಧಿಪತಿಯಾದ ಆಶ್ಲೇಷಾ, ಜೇಷ್ಠ, ರೇವತಿ ನಕ್ಷತ್ರಗಳನ್ನು ಗಂಡಮೂಲ ನಕ್ಷತ್ರಗಳೆಂದು ಗುರುತಿಸಲಾಗುತ್ತದೆ. ಈ ನಕ್ಷತ್ರಗಳಲ್ಲಿ ಹುಟ್ಟಿದವರಿಗೆ ಯಾವಾಗಲೂ ಕಷ್ಟ ಅಂತ ಏನಿಲ್ಲ. ಈ ನಕ್ಷತ್ರಗಳಲ್ಲಿ ಹುಟ್ಟಿದವರು ಬುದ್ಧಿವಂತರು, ಮಹಾತ್ವಾಕಾಂಕ್ಷೆ ಉಳ್ಳವರು, ಶ್ರಮಜೀವಿಗಳು ಮತ್ತು ಎತ್ತರದ ಸ್ಥಾನದಲ್ಲಿರುವವರು ಆಗಿರುತ್ತಾರೆ. ಗಂಡಮೂಲ ನಕ್ಷತ್ರಗಳ ಕೆಲವು ಪಾದಗಳು ದೋಷಪೂರಿತವಾಗಿದ್ದರೆ ಪ್ರತಿಕೂಲ ಪರಿಣಾಮಗಳಾಗುವ ಸಾಧ್ಯತೆ ಇರುತ್ತದೆ.’
`ಬಹುತೇಕ ಸಂದರ್ಭಗಳಲ್ಲಿ ಗಂಡಮೂಲ ನಕ್ಷತ್ರಗಳಲ್ಲಿ ಜನಿಸಿದವರು ತಂದೆತಾಯಿಯಿಂದ, ಮನೆಯವರಿಂದ ನಿರ್ಲಕ್ಷಿಸಲ್ಪಡುತ್ತಾರೆ. ಹೆತ್ತವರಿಂದ ಪ್ರೀತಿ, ಒಲವು ದೊರೆಯುವುದಿಲ್ಲ. ಕೆಲವೊಂದು ಸಂದರ್ಭಗಳಲ್ಲಿ ಮಗುವು ಮನೆಯಿಂದ ದೂರವಾಗಬೇಕಾಗಬಹುದು. ಕುಟುಂಬವು ತೊಂದರೆಗೆ ಸಿಲುಕಬಹುದು.’
`ಈ 27 ನಕ್ಷತ್ರಗಳಲ್ಲಿ ಮೂಲಾ, ಆಶ್ಲೇಷ, ವಿಶಾಖ ಮತ್ತು ಜೇಷ್ಠ ನಕ್ಷತ್ರಗಳು ವಿಶೇಷ ನಕ್ಷತ್ರಗಳು. ಮೂಲಾ ನಕ್ಷತ್ರ ಮೊದಲನೇ ನಕ್ಷತ್ರ, ಹೀಗಾಗಿ ಅದು ಮೂಲ ನಕ್ಷತ್ರ. ಅದರ ಅಧಿಪತಿ ಕೇತು (ಗ್ರಹ).
ಮೂಲಾ ನಕ್ಷತ್ರದ ಮೊದಲನೇ ಪಾದದಲ್ಲಿ ಹೆಣ್ಣು ಮಗು ಜನಿಸಿದರೆ ಎಂಟು ವರ್ಷದ ತನಕ ಮಗು ತಂದೆಯನ್ನು ನೋಡಬಾರದು. ಎರಡನೇ ಪಾದವಾದರೆ ತಾಯಿಗೆ ದೋಷ. ಮೂರನೆಯ ಪಾದವಾದರೆ ತಂದೆಯ ಆದಾಯದಲ್ಲಿ ನಷ್ಟ ಮತ್ತು ನಾಲ್ಕನೇ ಪಾದವಾದರೆ ಶುಭವಾಗಬಹುದು.’
`ಮೂಲಾ ನಕ್ಷತ್ರದಲ್ಲಿ ಹೆಣ್ಣು ಮಗು ಜನಿಸಿದರೆ, ಅವಳ ಮದುವೆಯ ನಂತರ ಮಾವನಿಗೆ ಕಂಟಕ ತಪ್ಪದು. ಜಾತಕದಲ್ಲಿ ಚಂದ್ರನಿಗೆ ಶುಭ ದೃಷ್ಟಿ ಇದ್ದರೆ, ಯಾವ ಭಾಗಕ್ಕೆ ದೋಷ ಆಗಿದೆ ಆ ಭಾಗ(ವ)ದ ಅಧಿಪತಿ 9ನೇ ಮನೆಯಲ್ಲಿ ಆಗಲಿ ಅಥವಾ ಶುಭ ಸ್ಥಾನದಲ್ಲಿದ್ದರೆ, ಶುಭ ಗ್ರಹಗಳಿಂದ ಸೃಷ್ಟಿಸಿದ್ದರೆ, ಚಂದ್ರನಾಗಲಿ, ಭಾವಾಧಿಪತಿಯಾಗಲಿ ಬಲಿಷ್ಠನಾಗಿದ್ದರೆ, ಚಂದ್ರನಿಗೆ ಗುರು ದೃಷ್ಟಿ ಇದ್ದರೆ, ಈ ಮೂಲಾ ನಕ್ಷತ್ರದ ದೋಷಗಳೆಲ್ಲಾ ಪರಿಹಾರವಾಗುವುದು. ಇವನ್ನು ಲೆಕ್ಕಿಸದೇ ಮೂಲಾ ನಕ್ಷತ್ರ ಎಂದ ತಕ್ಷಣ ಕೆಟ್ಟ ನಕ್ಷತ್ರ ಎಂದು ನಿರ್ಧರಿಸುವುದು ಸರಿಯಲ್ಲ.’
`ವಿದ್ಯಾ ದೇವತೆ ಸಾಕ್ಷಾತ್ ಸರಸ್ವತಿಯ ಜನನವಾದದ್ದು ಮೂಲಾ ನಕ್ಷತ್ರದಲ್ಲಿಯೇ. ನವರಾತ್ರಿಯ ಸಮಯದಲ್ಲಿ ಮೂಲಾ ನಕ್ಷತ್ರದ ದಿನ ಸರಸ್ವತಿ ದೇವಿಯನ್ನು ವಿಶೇಷ ರೀತಿಯಲ್ಲಿ ಪೂಜಿಸಲಾಗುವುದು. ಸಾಕ್ಷಾತ್ ಸರಸ್ವತಿ ದೇವಿಯದೇ ಮೂಲಾ ನಕ್ಷತ್ರ. ಅದು ಒಳ್ಳೆಯ ನಕ್ಷತ್ರ.
ವಿವಾಹ, ವಿದ್ಯಾರಂಭ, ಯಾತ್ರೆ, ಸೀಮಂತ, ಶಿಶುವನ್ನು ತೊಟ್ಟಿಲಿಗೆ ಹಾಕುವ ಮೊದಲಾದ ಶುಭಕಾರ್ಯಗಳನ್ನು ಮೂಲಾ ನಕ್ಷತ್ರದ ದಿನ ಮಾಡುತ್ತಾರೆ. ಇಷ್ಟಲ್ಲದೇ ಆಂಜನೇಯ ಹಾಗೂ ರಾವಣನ ನಕ್ಷತ್ರವೂ ಕೂಡ ಮೂಲಾ ನಕ್ಷತ್ರ. ಹುಟ್ಟಿದ ತಕ್ಷಣ ದೋಷಗಳು ಬರುವುದಿಲ್ಲ. ಬದಲಾಗಿ ಗ್ರಹಗತಿಗಳು ಸರಿ ಇಲ್ಲದಾಗ ದೋಷಗಳು ಕಾಡುತ್ತವೆ.’
`ಇಷ್ಟಾದರೂ, ಮೂಲಾ ನಕ್ಷತ್ರದಲ್ಲಿ ತಂದೆಗೆ ಸಮಸ್ಯೆಗಳಾಗುವ ಸಂಭವವಿರುತ್ತದೆ. ಅದೇ ಮೂಲಾ ನಕ್ಷತ್ರದ ನಾಲ್ಕನೇ ಚರಣದಲ್ಲಿ ಜನಸಿದ್ದರೆ, ಯಾವುದೇ ಬಗೆಯ ದೋಷಗಳು ಇರುವುದಿಲ್ಲ’
`ದೋಷ ನಿವಾರಣೆಗಾಗಿ ಹಿರಿಯ ಪುರೋಹಿತರಿಂದ ಹಸುವಿನ ಪೂಜೆ ಮಾಡಿಸಬೇಕು. ಜೊತೆಗೆ ಪುರೋಹಿತರಿಗೆ ನವಧಾನ್ಯ, ವಸ್ತ್ರಧಾನ್ಯ ಮಾಡಬೇಕು. ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದವರು ಗೋದಾನವನ್ನು ಸಹ ಮಾಡಬಹುದು.’
ಹಿರಿಯ ಸಿಸ್ಟರ್ ಮೀನುತಾಯಿ ಅದರಲ್ಲೇ ಮುಳುಗಿದಂತಿತ್ತು.
*********
ಅದರ ಮರುದಿನ ಒಂದು ಬೆಳಿಗ್ಗೆ, ಕೆಟ್ಟ ಕುತೂಹಲದಿಂದ ಅವರು ಇಲ್ಲದೇ ಇದ್ದಾಗ, ಅವರ ಕೋಣೆಗೆ ನುಗ್ಗಿದ್ದ ನಾನು, ಅವರ ಡೈರಿಯನ್ನು ಕದ್ದು ಓದಿದೆ. ಕನ್ಯಾಸ್ತ್ರೀಯರು, ಗುರುಗಳು ತಮ್ಮ ದೈನಂದಿನ ಘಟನೆಗಳನ್ನು ತಮ್ಮ ಡೈರಿಗಳಲ್ಲಿ ದಾಖಲಿಸಿರುತ್ತಾರೆ ಎಂಬ ಮಾತುಗಳನ್ನು ಕೇಳಿಸಿಕೊಂಡಿದ್ದೆ ನಾನು. ಅವುಗಳಲ್ಲಿ ಏನು ಬರೆಯಬೇಕು? ಹೇಗೆ ಬರೆಯಬೇಕು? ಎಂಬುದನ್ನು ತಿಳಿದುಕೊಳ್ಳುವ ಹಂಬಲ ನನ್ನದಾಗಿತ್ತು. ಅಂಥ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದೆ ಎನಿಸುತ್ತದೆ.
ನಿನ್ನೆ ನಾವಿಬ್ಬರೂ ಒಟ್ಟಿಗೆ ಕುಳಿತು ದೂರದರ್ಶನದಲ್ಲಿನ ಜ್ಯೋತಿಷ ಕಾರ್ಯಕ್ರಮ ನೋಡಿದ್ದ ನಂತರ ಡೈರಿ ಬರೆದಂತಿತ್ತು.
“ಸುಮಾರು ಅರವತ್ತು ವರ್ಷ ಹಿಂದಿನ ಘಟನೆಗಳು ಒಂದೊಂದೆ ನನ್ನ ಕಣ್ಣ ಪರದೆಯ ಮೇಲೆ ತೆರೆದುಕೊಳ್ಳತೊಡಗಿದವು.
ಇಂದು ಕೃಷ್ಣಗಿರಿ ಎಂದು ಕರೆಯಲಾಗುವ ತಮಿಳುನಾಡಿನ ಪ್ರದೇಶವು ಹಿಂದೆ ಮೈಸೂರು ಮಹಾರಾಜರ ಆಡಳಿತಕ್ಕೆ ಒಳಪಟ್ಟಿತ್ತು.
ನಮ್ಮೂರು ಕೃಷ್ಣಗಿರಿ ಜಿಲ್ಲೆಯ ಶೂಲಗಿರಿ. ಅದು ಹೊಸೂರು ತಾಲ್ಲೂಕಿನ ಒಂದು ಊರು. ಊರ ಸನಿಹದಲ್ಲಿರುವ ಗುಡ್ಡ ಶಿವನ ತ್ರಿಶೂಲದಂತೆ ಕಾಣುತ್ತಿದ್ದುದರಿಂದ ಅದನ್ನು ಶೂಲಗಿರಿ ಎಂದು ಕರೆಯಲಾಗುತ್ತಿತ್ತು. ಅಲ್ಲಿಂದ ಐದಾರು ಕಿ.ಮೀ ದೂರದಲ್ಲಿ ಆಲುಸೊನೈ ಎಂಬ ಹೆಸರಿನ ಊರು ನಮ್ಮ ತಾಯಿಯ ತವರು ಮನೆ. ಈ ಪ್ರದೇಶದಲ್ಲಿ ತಮಿಳಿನ ಜೊತೆಗೆ ತೆಲುಗು, ಕನ್ನಡ ಮಾತೃಭಾಷೆಯಾಗಿ ಹೊಂದಿರುವ ಜನರಿದ್ದಾರೆ. ಊರಲ್ಲಿ ದನಕರುಗಳು ಹೆಚ್ಚು, ಹೀಗಾಗಿ ಊರಿಗೆ ಆಲುಸೊನೈ ಎಂಬ ಅನ್ವರ್ಥಕ ನಾಮ ಬಂದಿತ್ತು, ಆಲು ಎಂದರೆ ಹಾಲು, ಸೊನೆ ಎಂದರೆ ಒಸರು. ಆಡುಮಾತಿನಲ್ಲಿ `ಹ’ಕಾರ ಹೋಗಿ ಅದರ ಜಾಗಲ್ಲಿ `ಆ’ ಸ್ವರ ಬಂದುಕೂತಿದೆ. ಸೊನೆ ಸೊನೈ ಆಗಿಬಿಟ್ಟಿದೆ.
ಧಾನ್ಯದ ಸಗಟು ವ್ಯಾಪಾರಿ ನಮ್ಮ ಸೋದರ ಮಾವ ಮೈಸೂರಿನ ಶ್ರೀರಂಗಪಟ್ಟಣದ ಹತ್ತಿರದ ಗಂಜಾಂ ಪಟ್ಟಣದಲ್ಲಿ ನೆಲೆಸಿದ್ದ. ವೈಶ್ಯರ ಹುಡುಗಿಯನ್ನು ಮದುವೆ ಮಾಡಿಕೊಂಡಿದ್ದ ನಮ್ಮ ಸೋದರಮಾವ ಮನೆ ಬಿಟ್ಟೇ ಹೋಗಿದ್ದ. ಗಂಜಾಂ ಹೆಸರು ಪರ್ಷಿಯ ಭಾಷೆಯ ಮೂಲದ್ದು. ಶತಮಾನಗಳ ಹಿಂದೆ ಭಾರತಕ್ಕೆ ಬಂದು ಭಾರತದವರೇ ಆಗಿ, ಇಲ್ಲಿ ಆಳ್ವಿಕೆ ನಡೆಸಿದ ಕಾರಣ, ನಮ್ಮ ನಿತ್ಯದ ವ್ಯವಹಾರಗಳಲ್ಲಿ ಅವರೊಂದಿಗೆ ಬಂದ ಪರ್ಷಿಯಾ ಭಾಷೆಯ ಪದಗಳೂ ತೂರಿಕೊಂಡಿವೆ. `ಸರ್ಕಾರ’ ಎಂದರೆ `ಪ್ರಭುತ್ವ’ ಎನ್ನುವುದು ಅಂಥ ಒಂದು ಪದ. ಗಂಜ್-ಐ-ಆಮ್ ಎಂದರೆ, ವಿಶ್ವದ ಕಣಜಗಳ ರಾಜ. ಇದು ಗಂಜಾಂ ಹೆಸರಿನ ಮೂಲ. ದೂರದ ಓರಿಸಾ ರಾಜ್ಯದಲ್ಲಿ ಗಂಜಾಂ ಹೆಸರಿನ ಜಿಲ್ಲಾಕೇಂದ್ರವಾದ ಪಟ್ಟಣವೂ ಇದೆ.
ಅರಬರೊಂದಿಗೆ ಬಂದ ಪರ್ಷಿಯಾ ಮೂಲದ ಪದ ಗಂಜ್ ಎಂದರೆ ಭಂಡಾರ, ಕಣಜ ಎಂದಾಗುತ್ತದೆ. ಜೊತೆಗೆ ನೆರೆಹೊರೆಯ ಜಾಗ ಎಂಬ ಅರ್ಥವೂ ಅದಕ್ಕಿದೆ. ಆದರೆ, ಕಾಲಾಂತರದಲ್ಲಿ ಗಂಜ್ ಪದವನ್ನು ಭಾರತದಲ್ಲಿ ಮಾರುಕಟ್ಟೆ ಪ್ರದೇಶ ಎಂಬುದಕ್ಕೂ ಬಳಸಲಾಗುತ್ತಿದೆ.
ನಮ್ಮ ತಂದೆಯ ಹೆಸರು ಶಂಕರಶಾಸ್ತ್ರಿ. ಸೀಮೆಯಲ್ಲಿಯೇ ಅವರು ಉದ್ದಾಮ ಪಂಡಿತರು, ಜೋತಿಷ್ಯ ಹೇಳುವುದರಲ್ಲಿ ಅವರದು ಎತ್ತಿದ ಕೈ. ನಮ್ಮದು ಸಂಸ್ಕøತ ಪಂಡಿತರ ಕುಟುಂಬ. ನಮ್ಮ ಅಜ್ಜನ ಮುತ್ತಜ್ಜ ಹಿಂದೆ ಮಧುರೈಯಲ್ಲಿ ಇದ್ದು ನಾಡಿನಲ್ಲೆಲ್ಲಾ ಸುತ್ತುತ್ತಿದ್ದ, ತನ್ನನ್ನು ರೋಮನ್ ಸನ್ಯಾಸಿ ಎಂದು ಕರೆದುಕೊಳ್ಳುತ್ತಿದ್ದ, ಕಾವಿ ಬಟ್ಟೆ ತೊಟ್ಟು ಕಮಂಡಲು ಹಿಡಿದು ಓಡಾಡುತ್ತಿದ್ದ, ಬಿಳಿ ಚರ್ಮದ ಇಟಲಿ ದೇಶದ ಕ್ರೈಸ್ತ ಸನ್ಯಾಸಿ ರಾಬರ್ಟ್ ಡಿ ನೋಬಿಲಿ ಅವರಿಗೆ ಸಂಸ್ಕøತ ಕಲಿಸಿದ ಗುರುಗಳಂತೆ.
ನಮ್ಮ ಅಪ್ಪನಿಗೆ ಮೊದಲ ಹೆಂಡತಿಯಲ್ಲಿ ಸಾಲುಸಾಲಾಗಿ ಮೂರು ಹೆಣ್ಣುಮಕ್ಕಳು ಹುಟ್ಟಿದ್ದವಂತೆ. `ಅಪುತ್ರಸ್ಸೆ ಗತಿರ್ಣಸ್ತಿ’ ಅಂದರೆ, `ಗಂಡು ಸಂತಾನವಿಲ್ಲದೇ ಸ್ವರ್ಗ ಪ್ರಾಪ್ತಿ ಆಗದು’. ಇದು ಗರುಡ ಪುರಾಣದಲ್ಲಿನ ಊಕ್ತಿ. ಹೀಗಾಗಿ ವಂಶೋದ್ಧಾರಕ ಗಂಡು ಮಗು ಬೇಕು ಎಂದುಕೊಂಡು ಅಪ್ಪ ಇನ್ನೊಂದು ಮದುವೆಯಾಗಿದ್ದರು. ಅಪ್ಪನ ಎರಡನೇ ಹೆಂಡತಿಗೆ ಮೊದಲ ಮಗುವೂ ಹೆಣ್ಣು ಮಗುವಾಯಿತು. ಅಪ್ಪನಿಗೆ ನಿರಾಶೆಯಾಯಿತು. ಹೆಣ್ಣು ಮಗುವಾಗಿದ್ದು ಬೇಸರವಾಗಿತ್ತು. ಇಷ್ಟಲ್ಲದೇ, ಆ ಮಗು ಮೂಲಾ ನಕ್ಷತ್ರದಲ್ಲಿ ಹುಟ್ಟಿದ್ದು ನಮ್ಮಪ್ಪ ತಲೆ ಕೆಡೆಸಿಕೊಳ್ಳುವಂತೆ ಆಗಿತ್ತು. ಆ ದುರಾದೃಷ್ಟದ ಮಗು ನಾನೇ. ಎಂಟು ವರ್ಷದ ತನಕ ಅಪ್ಪ ನನ್ನ ನೋಡಬಾರದಾಗಿತ್ತು. ಅದೇ ಸಮಯದಲ್ಲಿ ಸೋದರ ಮಾವ, ವ್ಯಾಪಾರದ ಕಾರಣ ಊರಿಗೆ ಬಂದಿದ್ದ. ಅವನು ಮದುವೆಯಾಗಿ ಮೂರು ವರ್ಷಗಳಾಗಿದ್ದರೂ ಮಕ್ಕಳಾಗಿರಲಿಲ್ಲ. ನನ್ನ ತಾಯಿ ನನ್ನನ್ನು ಅವನ ಕೈಯಲ್ಲಿರಿಸಿ, ಎಂಟು ವರ್ಷಗಳ ನಂತರ ತಂದುಕೊಡುವಂತೆ ಒಪ್ಪಿಸಿದಳು. ನಾನು ಸೋದರ ಮಾವನ ಮನೆಯಲ್ಲೇ ಬೆಳೆದೆ. ಒಂದೆರಡು ವರ್ಷ ಕಳೆಯವಷ್ಟರಲ್ಲಿ ಅಲ್ಲಿ ನನಗೊಬ್ಬ ತಮ್ಮ ಹುಟ್ಟಿದ್ದ. ಎಂಟು ವರ್ಷ ತುಂಬುವವರೆಗೆ ನನಗೆ, ನನ್ನ ನಿಜವಾದ ತಂದೆ ತಾಯಿ ಬೇರೆ ಇದ್ದಾರೆ ಎಂಬ ಕಲ್ಪನೆಯೇ ಇರಲಿಲ್ಲ.
*********
ಎಂಟು ವರ್ಷಗಳು ತುಂಬಿದ ನಂತರ ಲಂಗ ದಾವಣಿ ಬಿಟ್ಟು ಸೀರೆ ಉಡುವುದು ಆರಂಭವಾಗಿತ್ತು. ನನ್ನ ಸೋದರಮಾವ ನನ್ನನ್ನು ಗಂಜಾಂನಿಂದ ಶೂಲಗಿರಿಗೆ ಕರೆದುಕೊಂಡು ಹೋದರು. ಅಷ್ಟರಲ್ಲಿ ನನ್ನ ಮೂವರು ಅಕ್ಕಂದಿರಿಗೆ ಮದುವೆಯಾಗಿತ್ತು. ನನಗೆ ಏಳು ಮತ್ತು ಐದು ವರ್ಷಗಳ ಇಬ್ಬರು ತಮ್ಮಂದಿರಿದ್ದರು. ಅಪ್ಪ ನನ್ನನ್ನು ಅವರೊಂದಿಗೆ ಕೂರಿಸಿಕೊಂಡು ಪೂಜೆಪುನಸ್ಕಾರಗಳು ಮತ್ತು ಮಡಿ ಮೈಲಿಗೆಗಳ ಕುರಿತು ಹೇಳಿಕೊಡುತ್ತಿದ್ದ. ಒಂದಿಷ್ಟು ಸಂಸ್ಕøತ ಪಾಠವನ್ನೂ ಮಾಡಿಸಿದ್ದ. ಪ್ರತಿದಿನವೂ ಅಪ್ಪನ ಪೂಜೆಯಾದ ಮೇಲೆಯೆ ತಿಂಡಿಯನ್ನು ಬಡಿಸಲಾಗುತ್ತಿತ್ತು. ದೊಡ್ಡಮ್ಮ ಮತ್ತು ನನ್ನಮ್ಮ, ಮುಂದೆ ಗಂಡನ ಮನೆಗೆ ಹೋದಾಗ ಅನುಕೂಲವಾಗಲಿ ಎಂದು ಬಗೆಬಗೆಯ ನಿತ್ಯದ ಮತ್ತು ಹಬ್ಬದ ತಿಂಡಿತಿನಿಸುಗಳ ಅಡುಗೆ ಮಾಡುವುದನ್ನು ಕಲಿಸಿಕೊಟ್ಟಿದ್ದಳು.
ಹನ್ನೊಂದು ವರ್ಷಗಳ ಬಾಲಕಿಯಾದಾಗ ನಾನು ಬೇಲೂರಿನ ಶಿಲಾಬಾಲಿಕೆಯರಂತೆ ಮೈ ಕೈ ತುಂಬಿಕೊಂಡು ಬೆಳೆದು ನಿಂತಿದ್ದೆ. ಆದರೆ, ನನ್ನನ್ನು ಮದುವೆಯಾಗಲೂ ಒಬ್ಬರು ಮುಂದೆ ಬರಲಿಲ್ಲ. ಅಪ್ಪನಿಗೂ ವಯಸ್ಸಾಗುತ್ತಾ ಬಂದಿತ್ತು. ನನ್ನ ಕೊನೆಯ ಮುದ್ದಿನ ಮಗಳ ಗತಿ ಹೀಗಾಯಿತಲ್ಲ ಎಂಬ ಚಿಂತೆಯಲ್ಲಿ ಬಸವಳಿದಿದ್ದ. ಅಷ್ಟರಲ್ಲಿ ದೊಡ್ಡವಳಾದೆ. ತಿಂಗಳಿಗೊಮ್ಮೆ ತಂಬಿಗೆ, ಹಾಸಿಗೆಗಳೊಂದಿಗೆ ಹೊರಗೆ ಹಿತ್ತಲಲ್ಲಿ ಬಾವಿ ಕಟ್ಟೆಯ ಹತ್ತಿರ ಕೂಡುವುದು ಶುರುವಾಯಿತು. ಊರವರ ಮುಂದೆ ಅಪ್ಪ ತಲೆ ಎತ್ತಿ ಓಡಾಡುವುದು ಕಷ್ಟವಾಯಿತು. ನೆರೆಹೊರೆಯವರು, ನೆಂಟರ ಮುಖ ಕಂಡಾಗಲೆಲ್ಲಾ, ಎಂದು ಮಾಡುವಿರಿ ಮಗಳ ಮದುವೆಯ? ಎಂಬ ಪ್ರಶ್ನೆ ಕೇಳುವರೋ? ಎಂಬ ಭಯ ಕಾಡುತ್ತಿತ್ತು. ಒಂದು ದಿನ “ನಡೆ, ನಿಮ್ಮ ಮಾಮನ ಊರಿಗೆ ಹೋಗಿ ಬರೋಣ’’ ಎಂದು ಹೊರಡಿಸಿದರು. ಅಮ್ಮನ ಮುಖ ತುಂಬಾ ಇಳಿದುಹೋಗಿತ್ತು. ಅವರ ಕಣ್ಣುಗಳು ಏನನ್ನೋ ಹೇಳುತ್ತಿದ್ದವು. ನನಗೆ ಅವನ್ನು ಗ್ರಹಿಸಲು ಸಾಧ್ಯವಾಗಲಿಲ್ಲ.
ನಮ್ಮೂರಿನಿಂದ ಗಂಜಾಂಗೆ ಹೋಗಬೇಕಾದರೆ, ಬೆಂಗಳೂರಿಗೆ ಹೋಗಿ ಗಂಜಾಂಗೆ ಹೋಗಬೇಕಿತ್ತು. ಅದಕ್ಕೂ ಮೊದಲು ನಮ್ಮೂರಿನಿಂದ ಬಂಡಿ ಕಟ್ಟಿಕೊಂಡು ಧರ್ಮಪುರಿ- ಬೆಂಗಳೂರು ರಸ್ತೆಗೆ ಹೋಗಿ ಕಾಯಬೇಕಿತ್ತು. ಆಗ ಖಾಸಗಿ ಸಾಹುಕಾರರು ಒಂದೋ ಎರಡೋ ಬಸ್ ಓಡಿಸುತ್ತಿದ್ದರು. ಬೆಂಗಳೂರಿಗೆ ಹೋಗುವವರು, ದಿನಕ್ಕೊಮ್ಮೆ ಬರೋ ಖಾಸಗಿ ವೆಂಕಟೇಶ್ವರ ಬಸ್ ಸರ್ವೀಸಿನ ಬಸ್ಸಿಗೆ ಕಾಯಬೇಕಿತ್ತು. ರಸ್ತೆ ಪಕ್ಕದಲ್ಲೇ ನಂಜುಂಡೇಶ್ವರ ಸ್ವಾಮಿಯ ದೇವಸ್ಥಾನವಿತ್ತು. ಬಸ್ ಬಾರದೇ ಹೋದರೇ ಪ್ರಯಾಣಿಕರು ಅಲ್ಲಿಯೇ ರಾತ್ತಿ ಕಳೆಯಬೇಕಾದ ಅನಿವಾರ್ಯ ಪರಿಸ್ಥಿತಿ ಇರುತ್ತಿತ್ತು. ಅಪ್ಪ ನಾನು ಹೋದ ದಿನವೂ ಹಾಗೆಯೇ ಆಯಿತು.
ರಾತ್ರಿ ನಾವಿಬ್ಬರೂ ದೇವಸ್ಥಾನದ ಪಕ್ಕದ ಕಲ್ಲು ಮಂಟಪದಲ್ಲಿ ಮಲಗಿದ್ದೆವು. ನಾನು ಎಂದಿನಂತೆ ನಸುಕಿನಲ್ಲಿ ಎದ್ದು ದಿನಕರ್ಮಗಳನ್ನು ಮುಗಿಸಿ, ದೇವರನ್ನು ಕಂಡು ನಮಿಸಿ ಬಸ್ಸಿಗೆ ಕಾಯಲು ಸಿದ್ಧಳಾಗಿದ್ದೆ. ಅಷ್ಟು ಸಮಯ ಕಳೆದರೂ, ಅಪ್ಪ ಎಲ್ಲೂ ಕಾಣಿಸಲಿಲ್ಲ. ಗಂಟುಮೂಟೆ ಎದಗೆ ಅವಚಿಕೊಂಡು ದೇವಸ್ಥಾನದ ಕಂಬಕ್ಕೆ ಆನಿಕೊಂಡು ಕುಳಿತಿದ್ದೆ. ಅಷ್ಟರಲ್ಲಿ ದೇವಸ್ಥಾನದ ಪೂಜಾರಪ್ಪ ಬಂದು, “ಏನಮ್ಮ, ನಿನ್ನೆ ನಿದ್ದೆ ಆಯಿತಮ್ಮಾ?’’ ಎಂದು ವಿಚಾರಿಸಿದರು.
ನಂತರ, “ನಿನ್ನ ಹೆಸರು.. ಸರಸ್ವತಿ ಅಲ್ಲಮ್ಮಾ?’’ ಅಂದರು. ಹೌದು ಎನ್ನುವಂತೆ ಗೋಣು ಅಲ್ಲಾಡಿಸಿದೆ. ಅವರು, “ಮಗು, ನಿನ್ನಪ್ಪ ನಿನ್ನನ್ನು ಬಿಟ್ಟು ಹೋಗಿದ್ದಾರಮ್ಮಾ. ಇಗೋ ನಿನಗೆ, ಕೊಡಲು ಅಂತ ಐದು ರೂಪಾಯಿ ಕೊಟ್ಟು ಹೋಗಿದ್ದಾರೆ’’ ಎನ್ನುತ್ತಾ, ಒಂದು ರೂಪಾಯಿಯ ಐದು ನಾಣ್ಯಗಳನ್ನು ಅಂಗೈಯಲ್ಲಿರಿಸಿದರು.
“ನಿನ್ನ ಕಂಡರೆ ಅವರಿಗೆ ಪ್ರಾಣ. ಗ್ರಹಗತಿ ಕೆಟ್ಟಾಗ, ಏನು ಮಾಡುವುದು? ಅವರು, ನನ್ನ ಮಗು ಎಲ್ಲದಾರೂ ಹೋಗಿ ಬದುಕಿಕೊಳ್ಳಲಿ ಎಂದಾಗ, ಅವರ ಕಣ್ಣಲ್ಲಿ ನೀರಾಡಿದ್ದವಮ್ಮಾ. ನನ್ನ ಕರಳೂ ಚುರುಕ್ಕೆಂದಿತಮ್ಮ’’ ಎಂದು ಪೂಜಾರಪ್ಪ ಹೇಳಿದಾಗ, ಕೈ ಕಾಲು ನಡುಗತೊಡಗಿದವು.
ಅಷ್ಟರಲ್ಲಿ ಹಾರ್ನ್ ಬಾರಿಸುತ್ತಾ ಬಸ್ ಬಂದ ಸದ್ದಾಯಿತು. ಪೂಜಾರಪ್ಪ ಅವರಸರದಿಂದ ನನ್ನನ್ನು ಬಸ್ ಹತ್ತಿಸಿಬಿಟ್ಟರು.
*********
ಬಸ್ಸು ಕಲಾಸಿಪಾಳ್ಯದ ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ಕತ್ತಲೆ ಆಗತೊಡಗಿತ್ತು. ಒಬ್ಬಳೆ ಜಲಕಂಠೇಶ್ವರ ಸ್ವಾಮಿ ದೇವಾಸ್ಥಾನದ ಬಾಗಿಲ ಮುಂದಿನ ಅರಳಿಕಟ್ಟೆಯ ಮೇಲೆ ಶೂನ್ಯದಲ್ಲಿ ದೃಷ್ಟಿನೆಟ್ಟು ಕುಳಿತಿದ್ದೆ. ಪಕ್ಕದಲ್ಲಿ ಗಂಟುಮೂಟೆ ಇತ್ತು. ದಾರಿಹೋಕರು ಬಗ್ಗಿ ಬಗ್ಗಿ ನೋಡುತ್ತಿರುವುದು ನನಗೆ ಸರಿ ಕಾಣಲಿಲ್ಲ, ಇರಿಸಿಮುರಿಸು ಆಗುತ್ತಿತ್ತು. ಹೆಣ್ಣಮಕ್ಕಳು ಎಂದರೆ, ಉಪೇಕ್ಷೆಯಿಂದ ನೋಡುತ್ತಿದ್ದ ಕಾಲ. ಅಲ್ಲಿಗೆ ಬಂದಿದ್ದ ಮಹಿಳೆಯೊಬ್ಬಳು, ನನ್ನನ್ನು ಕಂಡು, `ಇದಾವ ಮುಂಡೆ ಬಂದು ಇಲ್ಲಿ ವಕ್ಕರಿಸಿದೆ?’ ಎಂದು ಜೋರಾಗಿ ಅನ್ನುತ್ತಾ ಹೋದಾಗ ನನ್ನ ಕಾಲ ಕೆಳಗಿನ ನೆಲ ಕುಸಿದಂತೆ ಆಗಿತ್ತು.
ಅಷ್ಟರಲ್ಲಿ ನನ್ನನ್ನು ಬಸ್ಸಿನಲ್ಲಿ ಹತ್ತಿಸಿಕೊಂಡಿದ್ದ ಆ ಬಸ್ ಕಂಡಕ್ಟರ್ ನನ್ನನ್ನು ಗುರುತಿಸಿದ. `ಏನಮ್ಮಾ, ಇನ್ನೂ ಮನೆಗೆ ಹೋಗಿಲ್ಲವಾ?’ ಎಂದು ವಿಚಾರಿಸಿದ. ನಾನು, ಕ್ಷೀಣ ಸ್ವರದಲ್ಲಿ `ಅಣ್ಣಾ, ನಾನೀಗ ಅನಾಥೆ. ನನ್ನ ನೆಂಟರೂ ಯಾರೂ ಇಲ್ಲಿ ಇಲ್ಲ. ಎಲ್ಲಿ ಹೋಗುವುದು? ಗೊತ್ತಾಗುತ್ತಿಲ್ಲ’ ಎಂದೆ.
ಬಸ್ ಕಂಡಕ್ಟರ್ ಇನ್ನೊಂದು ಗಂಟೆಯಲ್ಲಿ ಮತ್ತೊಂದು ಕಡೆಯ ಟ್ರಿಪ್ಪಿಗೆ ಹೋಗಬೇಕಿತ್ತು. ತಕ್ಷಣಕ್ಕೆ ಅವನಿಗೂ ಏನೂ ಹೊಳೆಯಲಿಲ್ಲ. ಆಗ, ಅಲ್ಲೇ ಸಮೀಪದಲ್ಲಿ ಸಂತ ಜೋಸೆಫ್ ಚರ್ಚ ಹತ್ತಿರದಲ್ಲಿ ಕಾನ್ವೆಂಟ್ ಇರುವುದು ಆತನಿಗೆ ನೆನಪಾಯಿತು.
`ನಡಿಯಮ್ಮ, ನನಗೆ ಒಂದು ಜಾಗ ಗೊತ್ತು. ನೀನು ಅಲ್ಲಿ ಆರಾಮವಾಗಿ ಇರಬಹುದು.’ ಎನ್ನುತ್ತಾ ನನ್ನನ್ನು ತಂದು ಚಾಮರಾಜಪೇಟೆಯ ಸಂತ ಅನ್ನಮ್ಮರ ಕಾನ್ವೆಂಟ್ ಬಾಗಿಲಿನ ಹತ್ತಿರ ಬಿಟ್ಟು ಹಿಂದಿರುಗಿದ.
ಆಗ, ಕಾನ್ವೆಂಟಿನ ಗೇಟಿನ ಹತ್ತಿರದಲ್ಲೇ ನಿಂತಿದ್ದ, ಸಂತ ಜೋಸೆಫರ ಗುಡಿಯ ಪಾಲನಾ ಗುರುಗಳಾಗಿದ್ದವರು ಇರಬೇಕು. ಅವರು, ಫಾದರ್ ಪೀಟರ್ ಬ್ರಿಯಾಂಡ್ ಅವರೇ ಆಗಿದ್ದಿರಬೇಕು, ಸರಿ ನೆನಪಿಗೆ ಬರುತ್ತಿಲ್ಲ. ಅವರು ನನ್ನನ್ನು ಕಂಡು, “ಏನಮ್ಮ? ಇಲ್ಲಿ ಏಕೆ ನಿಂತಿರುವೆ?’’ ಎಂದು ವಿಚಾರಿಸಿದರು.
“ನಾನು, ನಾನು ಒಬ್ಬಳು ಅನಾಥೆ ಸ್ವಾಮಿ.’’
“ಅಲ್ಲಮ್ಮಾ, ನೋಡಿದರೆ ಕುಲೀನ ಮನೆತನದವಳಂತೆ ಕಾಣುತ್ತಿ. ಮತ್ತೆ, ಅನಾಥೆ ಅನ್ನುತ್ತಿಯಲ್ಲಮ್ಮಾ?’’
“ಹೌದು ಸ್ವಾಮಿ, ನಾನು ಕುಲೀನ ಮನೆತನದವಳೇ, ಮನೆಯವರು ನನ್ನನ್ನು ದೂರ ಮಾಡಿದ್ದಾರೆ ಸ್ವಾಮಿ.’’
“ಅಯ್ಯೋ, ಏನಮ್ಮ ನಿನ್ನದು ದುರಂತ ಕತೆ’’ ಎಂದವರೇ ಮತ್ತೇನನ್ನು ಕೇಳದೇ `ಪ್ಲಚ್.. ಪ್ಲಚ್’ ಲೊಚಗುಡುತ್ತಾ ನನ್ನನ್ನು ಒಳಗೆ ಕರೆದುಕೊಂಡು ಹೋಗಿ, ಕಾನ್ವೆಂಟಿನ ಹಿರಿಯ ಸದಸ್ಯೆ ಮದರ್ ಆಲೀಸಮ್ಮ ಅವರ ಮುಂದೆ ನಿಲ್ಲಿಸಿ, `ಮದರ್, ಇವಳನ್ನು ಇವಳ ಮನೆಯವರೇ ತೊರೆದಿದ್ದಾರಂತೆ, ಇವಳನ್ನೂ ನಿಮ್ಮ ಅನಾಥಾಶ್ರಮದ ಮಕ್ಕಳೊಂದಿಗೆ ಸೇರಿಸಿಕೊಳ್ಳಿ’ ಎಂದರು.
ಆ ಮಹಾತಾಯಿ, ಏನೊಂದೂ ವಿಚಾರಿಸಿದೇ, ನನ್ನನ್ನು ಒಳಗೆ ಕರೆದುಕೊಂಡು ಹೋದರು. ಅವರೋ ವಿಲಾಯಿತಿ ಹೆಣ್ಣು ಮಕ್ಕಳಂತೆ ಅರ್ಧ ಲಂಗದಂತಿದ್ದ ಬಿಳಿ ಬಟ್ಟೆ ತೊಟ್ಟಿದ್ದರು. ವಿಲಾಯಿತಿ ಹೆಣ್ಣುಮಕ್ಕಳಂತೆ ಏನು? ಅವರು ವಿಲಾಯಿತಿಯವರೇ ಆಗಿದ್ದರು. ಕೆಂಪು ಮೈಬಣ್ಣ ಎಲ್ಲದಾರೂ ಬಿಸಿಲಿಗೆ ನಿಂತರೆ, ಅದು ಮಾಸಿಹೋಗಬಹುದು ಅಂಥಾ ಬಣ್ಣ. ಮೈಯಲ್ಲಿನ ಹಸಿರು ನರಗಳು ಸ್ಪಷ್ಟವಾಗಿ ಎದ್ದು ಕಾಣುತ್ತಿದ್ದವು. ಸೆರಗಿನ ಮಾದರಿಯಲ್ಲಿ ತಲೆಗೆ ಮುಕುಟದಂಥ ಕಿರೀಟವಿತ್ತು. ಅದೂ ಬಿಳಿ ಬಣ್ಣದ ಬಟ್ಟೆಯಲ್ಲಿ ಮಾಡಿದಂತಿತ್ತು.
*********
ಅರ್ಧಕ್ಕೆ ಕತ್ತರಿಸಿದ ಬಿಳಿ ಬಣ್ಣದ ಲಂಗವನ್ನು ತೊಟ್ಟವರನ್ನು ಅಲ್ಲಿ `ತಾಯಿ’ `ತಾಯಿ’ ಅಂತ ಕರೆಯುತ್ತಿದ್ದರು. ಅವರು ನಾವಿರುವ ತಾವದಿಂದ ಸ್ವಲ್ಪ ದೂರದ ಕಟ್ಟಡದಲ್ಲಿ ಇದ್ದರು.
ನನ್ನನ್ನು ಮಕ್ಕಳ ಅನಾಥಾಶ್ರಮದಲ್ಲಿ ಇರಿಸಿದ್ದರು. ಒಂದು ದೊಡ್ಡ ಕೋಣೆಯಲ್ಲಿ ತಂದೆತಾಯಿಗಳಿಲ್ಲದ ಮಕ್ಕಳನ್ನು ಅಲ್ಲಿ ಸಾಕಿಕೊಳ್ಳುತ್ತಿದ್ದರು. ಎಂಥಾ ಗಲೀಜು ಈ ಹುಡುಗರು. ಪ್ರತಿದಿನ ಸ್ನಾನ ಇಲ್ಲ ಏನೂ ಇಲ್ಲ. ಮಡಿ ಬಟ್ಟೆಯ ಮಾತಂತೂ ದೂರ ಉಳಿಯಿತು. ಅವರುಗಳದ್ದು ಯಾವ ಜಾತಿಯೋ ಏನೋ, ಒಂದೆ ಜಮಖಾನೆಯ ಹಾಸಿಗೆಯಲ್ಲಿ ಮಲಗುವುದು. ನನಗೆ ಎರಡು ಮೂರು ದಿನಗಳನ್ನು ಕಳೆಯುವಷ್ಟರಲ್ಲಿ ಸಾಕುಸಾಕಾಯಿತು.
ಪಕ್ಕದ ಇನ್ನೊಂದು ಕೋಣೆಯಲ್ಲಿ ಒಂದಿಬ್ಬರು ಗಂಡ ಬಿಟ್ಡ ಹೆಣ್ಣುಮಕ್ಕಳು ಇರುವುದನ್ನು ನೋಡಿದ್ದೆ. ಮಗದೊಬ್ಬಳು ವಿಧವೆ ಇರಬೇಕು. ಸದಾ ತಲೆಗೆ ಸೆರಗು ಹೊದ್ದು ಮುಖ ಮುಚ್ಚಿಕೊಂಡೆ ಇರುತ್ತಿದ್ದರು. ಅವರು, ವಿದೇಶಿ ತಾಯಂದಿರಿಗೆ ಈ ಅನಾಥ ಮಕ್ಕಳನ್ನು ಸಾಕುವಲ್ಲಿ ಸಹಾಯ ಮಾಡುತ್ತಿದ್ದರು.
`ಮೂರು ಹೊತ್ತು ಹೊತ್ತಿಗೆ ಸರಿಯಾಗಿ ತಿಂಡಿ, ಊಟ ಸಿಗುತ್ತಿತ್ತು. ಅಷ್ಟಾದರೆ ಸಾಕೆ? ಇದು ಮನುಷ್ಯರ ಬಾಳೆ? ಹುಟ್ಟಿದ ದೇವರು ಹುಲ್ಲು ಮೇಯಿಸುವುದಿಲ್ಲ. ನನಗೆ ಮನೆ ಬಿಟ್ಟು ಇಲ್ಲಿಯವರೆಗೂ ನಡೆಸಿಕೊಂಡ ಬಂದಿರುವ ಪರಮಶಿವ ನನ್ನ ಕೈ ಬಿಡುವುದಿಲ್ಲ’ ಎಂದು ನನ್ನಷ್ಟಕ್ಕೆ ನಾನು ಸಮಾಧಾನ ಹೇಳಿಕೊಂಡೆ.
ಮೂರನೆಯ ದಿನ ಗಟ್ಟಿ ಧೈರ್ಯ ಮಾಡಿ, ಬಿಳಿ ಮುಕುಟ ತೊಟ್ಟಿದ್ದ, ನನ್ನನ್ನು ಸೇರಿಸಿಕೊಂಡಿದ್ದ ಆ ದೊಡ್ಡ ತಾಯಿ ನಮ್ಮ ಕೋಣೆಯ ಹತ್ತಿರ ಬರುವುದನ್ನೇ ಕಾಯುತ್ತಿದ್ದೆ. ಅವರು ಬಂದ ತಕ್ಷಣ ಅವರತ್ತ ಓಡಿ ಹೋಗಿ, `ದೊಡ್ಡ ತಾಯಿ, ನನ್ನನ್ನು ಬಿಟ್ಟು ಬಿಡಿ. ನನಗಿಲ್ಲಿ ಉಸಿರುಗಟ್ಟಿದಂತೆ ಆಗುತ್ತದೆ. ದಯಮಾಡಿ ನನ್ನ ಹೋಗಲು ಬಿಡಿ’ ಎಂದು ಬಡಬಡಿಸಿದೆ. ಅವರಿಗದು ಸರಿಯಾಗಿ ಅರ್ಥವಾಯಿತೋ ಇಲ್ಲವೋ ಗೊತ್ತಿಲ್ಲ. ಎಬ್ಬಿಸಿ, ಗದ್ದ ಹಿಡಿದು `ಬಾಮ್ಮಾ’ ಎನ್ನುತ್ತಾ ಕೈ ಹಿಡಿದುಕೊಂಡು ತಮ್ಮ ಕಚೇರಿ ಕೋಣೆಗೆ ಕರೆದುಕೊಂಡು ಹೋದರು. ಅವರ ಕೈ ಹಿಡಿತ ಅಮ್ಮನ ಕೈ ಹಿಡಿತದ ಬೆಚ್ಚನೆಯ ಅನುಭವ ನೀಡಿತ್ತು. ನನ್ನನ್ನು ಒಂದು ಮೂಲೆಗೆ ಕೂಡಿಸಿ, ನಮ್ಮ ಪಕ್ಕದ ಕೋಣೆಯಲ್ಲಿದ್ದ ವಯಸ್ಕ ಹೆಣ್ಣುಮಕ್ಕಳನ್ನು ಕರೆದು ವಿಚಾರಿಸಿದರು.
ಅವರು, ನನ್ನನ್ನು ಕುರಿತೇ ಮಾತನಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿತ್ತು. ಅವರಲ್ಲಿ ಒಬ್ಬಳು, “ಬಣ್ಣ, ನಡೆ, ನುಡಿ, ನಯ ನಾಜೂಕುತನ ನೋಡಿದರೆ, ಆ ಹುಡುಗಿ, ಹಾರೋಗೇರಿಯ ಹಾರುವಗಿತ್ತಿ’’ ಎಂದಂತಾಯಿತು. “ಏನು ಹಾಗೆಂದರೆ?’’ ದೊಡ್ಡ ತಾಯಿ ಕೇಳಿದರು, “ಬ್ರಾಹ್ಮಣರನ್ನು ನಾವು ಹಾರವ, ಹಾರುವ ಎಂದು ಕರೆಯುವ ರೂಢಿü ಇದೆ. ಹಾರವ ಎಂದರೆ ಪೂಜೆ, ಪ್ರಾರ್ಥನೆ ಮಾಡುವವ. ಗುಡಿಗಳಲ್ಲಿ ಎಲ್ಲ ಪೂಜಾರಿಗಳೂ ಬ್ರಾಹ್ಮಣರೆ ಅಲ್ಲವಾ? ಅದಕ್ಕಾಗಿ ಅವರಿಗೆ ಹಾರವ ಎಂಬ ಹೆಸರು ಬಂದಿದೆ. ಮತ್ತೆ ತಾಯಿ, ಹಾರುವರೇ ಇರುವ ಕೇರಿ ಹಾರೋಗೇರಿ’’. “ಸರಿ ಮತ್ತೆ, ಈಗ ಅವಳಿಗೆ ಏನು ಬೇಕಂತೆ?’’ ಎಂದು ಕೇಳಿದರು’’. ಅದಕ್ಕೆ ಅವರು, “ಅವಳು ಇಲ್ಲಿಂದ ಹೋಗಬೇಕಂತೆ?’’ “ಸರಿ ನಡೀರಿ’’ ಎಂದ ಅವರೊಂದಿಗೆ ಉಳಿದವರೂ ನನ್ನ ಹತ್ತಿರ ಬಂದರು.
“ಯಾಕಮ್ಮ, ಇಲ್ಲಿ ಇರಲು ನಿನಗೆ ಇಷ್ಟವಿಲ್ಲವೇ? ನೀನು ಅನಾಥೆ ಅಂತೀಯಾ. ಎಲ್ಲಿಗಂತ ಹೋಗ್ತೀಯಾ?’’
“.. .. ‘’ ನನ್ನ ದೃಷ್ಟಿ ಅದೆಲ್ಲೋ ನೆಟ್ಟಿತ್ತು.
`ಪಾಪದ ಹುಡುಗಿ ಎಲ್ಲಿಗೆ ಹೋಗುತ್ತೆ?’ ತಮ್ಮ ಪಾಡಿಗೆ ತಾವು ಮಾತನಾಡಿಕೊಂಡ ದೊಡ್ಡ ತಾಯಿಯ, ಕಣ್ಣಲ್ಲಿ ನೀರು ಇಳಿಯತೊಡಗಿತ್ತು.
`ನಾನ್ಯಾರೋ ಅವರ್ಯಾರೋ? ನನಗಂತೂ ಅವರು ಏನೂ ಅಲ್ಲ. ಆದರೆ ಎರಡು ದಿನ ಇಟ್ಟಕೊಂಡವರು, ನಾನು ಹೋಗ್ತೇನೆ ಅಂದ್ರೆ ಕಣ್ಣೀರು ಹಾಕ್ತಾರಲ್ಲ? ಇವರಿಗೇನು ತಲೆ ಸರಿ ಇದೆಯಾ?’ ಅನ್ನಿಸಿತು.
ಕರವಸ್ತ್ರದಿಂದ ಕಣ್ಣೀರು ಒರೆಸಿಕೊಂಡ ದೊಡ್ಡ ತಾಯಿ, “ನೋಡಮ್ಮ, ನೀನು ಇರುವುದಾದರೆ ಮತ್ತಷ್ಟು ಅನುಕೂಲ ಕಲ್ಪಸಿಕೊಡುವೆ. ಇಲ್ಲ ನಾನು ಹೋಗಬೇಕು ಎಂದು ನಿರ್ಧಾರ ಮಾಡಿದ್ದರೆ ಹೋಗಬಹುದು. ನಿನ್ನ ತಡೆಯಲು ನಾನಾರಮ್ಮಾ? ಎಲ್ಲ ನಡೆಯುವುದು ದೇವರ ಚಿತ್ತದಂತೆ’’ ಎಂದು ತಮ್ಮ ಕೊರಳಲ್ಲಿನ ಶಿಲುಬೆ ಮುಟ್ಟಿ, ನಂತರ ಮುಖದ ಮೇಲೆ ಶಿಲುಬೆ ಗುರುತು ಹಾಕಿಕೊಂಡರು.
ಆಗ, ನನ್ನ ಕಣ್ಣಲ್ಲೂ ನೀರು ಬಂದಿತು. ಅವರು, ನೆಂಟರಲ್ಲ, ಬಂಧು ಬಳಗದವರಲ್ಲ. ಆದರೂ ನನಗಾಗಿ ಕಣ್ಣೀರು ಸುರಿಸ್ತಾರೆ ಅನ್ನೋದೆ, ನನ್ನಲ್ಲಿ ಅವರ ಬಗ್ಗೆ ಆದರದ ಭಾವ ಮೂಡಿಸತೊಡಗಿತು.
ಆ ಘಟನೆಯ ನಂತರ ದೊಡ್ಡ ತಾಯಿ ನನ್ನನ್ನು ತಮ್ಮ ಖಾಸಾ ಕೋಣೆಗೆ ಕರೆಯಿಸಿಕೊಂಡರು. ಅಲ್ಲಿ ತಮ್ಮೊಂದಿಗೆ ಊಟಕ್ಕೆ ಕೂರಿಸಿಕೊಂಡು ನನ್ನ ಪೂರ್ವಾಪರ ವಿಚಾರಿಸಿದರು. ಎಲ್ಲಾ ತಿಳಿದ ಮೇಲೆ ವಿಷಾದದ ನಿಟ್ಟಿಸುರು ಬಿಟ್ಟ ಅವರು, “ನಿನ್ನದು ಎಳೆಯ ವಯಸ್ಸು. ಅಷ್ಟರಲ್ಲೇ ಎಷ್ಟೊಂದು ಆಘಾತಗಳನ್ನು ಅನುಭವಿಸಿದ್ದೀಯ. ದೇವರು ದಯಾಳು, ನಿನ್ನನ್ನು ಸುರಕ್ಷಿತವಾಗಿ ಇಲ್ಲಿಗೆ ಸೇರಿಸಿದ್ದಾನೆ. ನೀನು ನಿನ್ನ ಹಳೆಯ ಜೀವನಕ್ಕೆ ಹಿಂದಿರುಗುವುದಾದರೆ ಹಿಂದಿರುಗು. ನಾನು ನಿನ್ನನ್ನು ತಡೆಯುವುದಿಲ್ಲ. ನೀನು ನಮ್ಮೊಂದಿಗಿದ್ದರೆ, ನಮ್ಮಂತೆಯೇ ತಾಯಿ ಆದರೆ, ನಿನಗೇ, ನಿನ್ನಂತೆಯೇ ಜೀವನದಲ್ಲಿ ಕಷ್ಟ ಅನುಭವಿಸುವವರಿಗೆ ಸಹಾಯ ಮಾಡುವ ಅವಕಾಶ ನಿನ್ನದಾಗುತ್ತದೆ. ಯೋಚಿಸಿ ನೋಡು’’ ಎಂದರು.
ರಾತ್ರಿಯೆಲ್ಲಾ ಚಿಂತಿಸಿದೆ. ಮರುದಿನ ಬೆಳಿಗ್ಗೆ ಗಟ್ಟಿ ನಿರ್ಧಾರ ಮಾಡಿದೆ. `ನನಗೆ ಹೊರಗಿನ ಜಗತ್ತು ಈಗ ಶೂನ್ಯ ನನ್ನವರೇ ನನ್ನನ್ನು ಕಾಡುಪಾಲು ಮಾಡಿದ್ದಾರೆ. ಎಲ್ಲಿಗೆ ಹೋಗುವುದು? ದೇವರು ಇಲ್ಲಿಗೆ ಸೇರಿಸಿದ್ದಾನೆ ಅಂದ್ರೆ. ನಾನು ಇಲ್ಲಿಗೆ ಸೇರಬೇಕೆಂದು ಬ್ರಹ್ಮ ನನ್ನ ಹಣೆಯಲ್ಲಿ ಬರೆದಿರಬೇಕು. ನನ್ನಂತೆಯೇ ಬದುಕಿನಲ್ಲಿ ಬೆಳಕನ್ನು ಕಳೆದುಕೊಂಡವರಿಗೆ ಬೆಳಕಾಗಬೇಕು’ ಎಂದು ನಿರ್ಧರಿಸಿದೆ.
ಬೆಳಿಗ್ಗೆ ಎದ್ದ ಕೂಡಲೇ ದೊಡ್ಡ ತಾಯಿಯ ಹತ್ತಿರ ಹೋಗಿ ನನ್ನ ನಿರ್ಧಾರ ತಿಳಿಸಿದೆ. ಅಲ್ಲಿಯವರೆಗೆ ನನ್ನ ಹೆಸರೇ ಕೇಳಿರದಿದ್ದ ಅವರು, “ಸರಿ, ಕಣಮ್ಮಾ ನಿನ್ನ ಹೆಸರೇನು?’’ ಎಂದು ಕೇಳಿದರು. “ಸರಸ್ವತಿ, ವಿದ್ಯಾ ದೇವತೆ’’ ಎಂದೆ. “ಇರಲಿ ಸರಸ್ವತಿ, ನಾನು ಇಂದಿನಿಂದ ನಿನ್ನನ್ನು ಮಿನರ್ವ ಎಂಬ ಹೊಸ ಹೆಸರಿನಿಂದ ಕರೆಯುವೆ. ಅದೂ ಕೂಡ ವಿದ್ಯಾ ದೇವತೆಯ ಹೆಸರೆ. ಆದರದು ಸಂಸ್ಕøತ ಅಲ್ಲ ಲತೀನ್ ಭಾಷೆಯ ಮೂಲದ್ದು’’ ಎಂದರು. `ಸರಿ’ ಎಂಬಂತೆ ನಾನು ಗೋಣು ಅಲ್ಲಾಡಿಸಿದೆ.
ಇದಾದ ಮೇಲೆ ನನಗೆ ಜ್ಞಾನೋಪದೇಶದ ಪಾಠಗಳನ್ನು ಹೇಳಿಕೊಟ್ಟರು. ಒಂದು ಭಾನುವಾರ ಸಂತ ಜೋಸೆಫರ ಗುಡಿಯ ಪಾಲನಾ ಗುರು ವಂದನೀಯ ಫಾದರ್ ಪೀಟರ್ ಬ್ರಿಯಾಂಡ್ ಅವರು, ತಲೆಗೆ ಪವಿತ್ರ ಜಲ ಚಿಮುಕಿಸಿ ಜ್ಞಾನಸ್ನಾನ ದೀಕ್ಷೆ ಕೊಡಿಸಿದರು. ಅದಾದ ಮೂರು ತಿಂಗಳ ನಂತರ ಅತಿ ವಂದನೀಯರಾದ ಥೋಮಸ್ ಪೋತಕಮುರಿ ಮೇತ್ರಾಣಿಗಳು ಬಂದು ಧೃಡೀಕರಣವನ್ನು ಕೊಟ್ಟರು. ಪ್ರಥಮ ಸತ್ಪ್ರಸಾದ ಸ್ವೀಕಾರ ಕಾರ್ಯಕ್ರಮವೂ ನಡೆಯಿತು. ಸ್ವಲ್ಪ ದಿನಗಳು ಕಳೆದ ನಂತರ ನನ್ನನ್ನು ತಮ್ಮ ಕನ್ಯಾಸ್ತ್ರೀ ಮಠಕ್ಕೆ ಕಾನ್ವೆಂಟ್ಗೆ ಸೇರಿಕೊಂಡು ತರಬೇತಿ ನೀಡಿದರು. ಕೊನೆಗೆ ನಾನು ಮಿನರ್ವ ತಾಯಿ ಆದೆ. ಅಷ್ಡರಲ್ಲಿ ನಾನು ಅನಾಥಾಶ್ರಮಕ್ಕೆ ಸೇರಿದಾಗ ನಮ್ಮ ಪಕ್ಕದ ಕೋಣೆಯಲ್ಲಿದ್ದವರಲ್ಲಿ ಕೆಲವರು, ಟಿಸಿಎಚ್ ತರಬೇತಿ ಮುಗಿಸಿ ಬಂದಿದ್ದರು. ಅವರು ಈ ಕಾನ್ವೆಂಟ್ನವರು ನಡೆಸುತ್ತಿದ್ದ ಶಾಲೆಯಲ್ಲಿ ಶಿಕ್ಷಕರಾಗಿ ಸ್ವಾವಲಂಬನೆಯ ಜೀವನ ಸಾಗಿಸತೊಡಗಿದ್ದರು.
*********
ಸಿಸ್ಟರ್ ಮೀನುತಾಯಿ ಅವರ ಡೈರಿಯಲ್ಲಿನ ಮಾಹಿತಿ ಓದಿಕೊಂಡ ಮೇಲೆ ನನಗೆ ಪಾಪಪ್ರಜ್ಞೆ ಕಾಡತೊಡಗಿತ್ತು. ಮತ್ತೆ ಗುರುಗಳ ಬಳಿಯಲ್ಲಿ ಪಾಪವಿವೇದನೆ ಇದ್ದೆ ಇರುತ್ತದೆ ಎಂದುಕೊಂಡರೂ, ಒಂದೆರಡು ದಿನಗಳು ಕಳೆದ ನಂತರ ಅವರಲ್ಲಿ ಕ್ಷಮೆ ಕೇಳಬೇಕು ಎಂದು ಮಾಡಿದ್ದೆ. ಅವರು ಅದನ್ನು ಹೇಗೆ ಸ್ವೀಕರಿಸುವರೋ? ಎಂಬುದು ನನಗೆ ಯಕ್ಷಪ್ರಶ್ನೆಯಾಗಿ ಕಾಡತೊಡಗಿತ್ತು. ನನಗಿಂತ ಕೆಲವು ವರ್ಷದ ಹಿರಿಯ ಸಿಸ್ಟರನ್ನು ಅವರ ಬಗೆಗೆ ಕೇಳಿ ತಿಳಿದುಕೊಳ್ಳಬೇಕು ಎಂದು ಪ್ರಯತ್ನಿಸಿದೆ. ಆಗ, ಸಿಸ್ಟರ್ ಪುಷ್ಪಮೇರಿ ತಾಯಿ ಅವರು ಎದುರಿಗೆ ಬಂದರು. ಅವರನ್ನು ಸಿಸ್ಟರ್ ಮೀನುತಾಯಿ ಅವರ ಬಗೆಗೆ ವಿಚಾರಿಸಿದೆ. ತಕ್ಷಣ ಯಾವುದನ್ನೋ ನೆನೆಸಿಕೊಂಡ ಅವರ ಮುಖದ ಮೇಲೆ ಮುಗುಳ್ನಗೆ ಬಂದು ಹೋಯಿತು.
“ವಿದ್ಯಾಬುದ್ಧಿಯ ದೇವತೆ ಎಂಬ ಅರ್ಥದ ಮಿನರ್ವ ತಾಯಿ, ತಾಯಿ ತರಬೇತಿಗೆ ಬಂದ ಹೊಸಬರಾದ ನಮಗೆಲ್ಲಾ ಮೀನುತಾಯಿ ಆಗಿದ್ದರು.
ಅವರು ಕಾನ್ವೆಂಟಿನ ಅಡುಗೆ ಮನೆಗೆ ಬಂದರೆ, ಸಾಕು ಇವತ್ತು ಅವರೇ ಅಡುಗೆ ಉಸ್ತುವಾರಿ ಮಾಡಲಪ್ಪಾ ಎಂದು ದೇವರಿಗೆ ಮೊರೆ ಇಡುತ್ತಿದ್ದೆವು.
ಅವರ ಹೆಸರಿನಲ್ಲಿ ಮೀನು ಇತ್ತಷ್ಟೇ, ಆದರೆ ಅವರು ಎಂದೂ ಮೀನು ಅಡುಗೆ ಮಾಡಿದವರಲ್ಲ. ಕೋಳಿ, ಕುರಿ ಮಾಂಸದ ಅಡುಗೆ ಮೂಸಿ ನೋಡಿದವರಲ್ಲ. ಹಸುಕರುವಿನ ಮಾಂಸ ಎಂದರೆ, ಮಾರುದ್ದ ದೂರ ಸರಿಯುತ್ತಿದ್ದರು.
ಸಿಸ್ಟರ್ ಮೀನುತಾಯಿ ಅವರು ಅಡುಗೆ ಏನಿದ್ದರೂ ತರಕಾರಿಗಳ ಜಗತ್ತಿನ ಮೆರವಣಿಗೆ. ವಾಂಗಿಭಾತ್, ಕೇಸರಿಭಾತ್, ಬಿಸಿಬೇಳೆ ಭಾತ್, ಪುಳಿಯೊಗರೆ ಭಾತ್, ಪಲಾವ್ ಬಾತ್ ಹೀಗೆ ಭಾತ್ ಗಳ ಸಾಲಾಗಿ ನಿಲ್ಲುತ್ತಿದ್ದವು. ಸಾರಿನಲ್ಲಿ, ತಿಳಿಸಾರು, ಮಜ್ಜಿಗೆ ಸಾರು, ಆಂಧ್ರದ ಪಪ್ಪು ಬಾಯಲ್ಲಿ ನೀರಾಡುತ್ತಿತ್ತು. ಅಕ್ಕಿರೊಟ್ಟಿ ಮತ್ತು ರಾಗಿ ಮುದ್ದೆಗೆ ಮಾಡುತ್ತಿದ್ದ ಬಸ್ಸಾರು ಮತ್ತು ಸೊಪ್ಪಿನ ಸಾರಿನ ಘಮ ಊಟದಕೋಣೆಗೆ ಬಂತೆಂದರೆ ಸಾಕು, ಊಟಕ್ಕೆ ಬನ್ನಿರೆಂದು ಗಂಟೆ ಬಾರಿಸುವ ಅಗತ್ಯವೇ ಇರಲಿಲ್ಲ. ಇನ್ನು ಕ್ರಿಸ್ಮಸ್ ಹಬ್ಬ ಬಂತೆಂದರೆ, ಮಾಮೂಲಿ ಕೇಕು, ರೋಜ ಕುಕ್ ಗಳ ಜೊತೆಗೆ, ಸಿಸ್ಟರ್ ಮೀನು ತಾಯಿ ಅವರೇ ಮುಂದೆ ಕುಳಿತು ಮಾಡಿಸುತ್ತಿದ್ದ ಮೈಸೂರ ಪಾಕ್, ಹತ್ತಾರು ಬಗೆಯ ಬೇಸನ ಉಂಡೆಗಳು, ಬುಂದೆ ಉಂಡೆ, ರವೆ ಉಂಡೆ ಮೊದಲಾದವುಗಳಲ್ಲಿ ಅವರ ಕೈ ರುಚಿ ಇರುವುದನ್ನು ಗಮನಿಸುತ್ತಿದ್ದೆವು.
ತಪ್ಪಸ್ಸು ಕಾಲದಲ್ಲಿ ಅವರು ಮಾಡುತ್ತಿದ್ದ ಗಂಜಿ ನಮ್ಮ ಪಾಲಿಗೆ ಸಿಹಿ ಗಂಜಿ ಆಗಿದ್ದರೇ, ಅದು ಅವರಿಗೆ ಪಂಚಾಮೃತ. ಯಾವಾಗಲಾದರೂ ಅಪ್ಪತಪ್ಪಿ ಹೊರಗಿನಿಂದ ಬಂದವರು ಅದನ್ನು ಸವಿದಾಗ, ಇದೇನಿದು ದೇವಾಲಯದ ಪ್ರಸಾದ ಇದ್ದಂತಿದೆಯೆಲ್ಲ ಎನ್ನುತ್ತಿದ್ದರು.
ಅವರು ಎಂದೂ ಮಾಂಸದ ಅಡುಗೆ ಮುಟ್ಟಿದವರಲ್ಲ. ಆದರೆ, ಅವರು ಮಾಂಸದ ಅಡುಗೆಗೆ ಒಂದು ಸಾಂಕೇತಿಕ ಹೆಸರು ಇಟ್ಟಿದ್ದರು. “ಏನು ಇಂದು ಹಾರಹೂರೆಯ ಪಾಯಸವೆ?’’ ಎಂದವರು ಕೇಳಿದಾಗ, ನಾವು “ಹೌದು’’ “ಇಲ್ಲ’’ ಎಂದಷ್ಟೇ ಹೇಳಬೇಕಾಗಿತ್ತು. ಹಾರಹೂರೆಯ ಎಂದರೆ ದ್ರಾಕ್ಷೆಹಣ್ಣು. ಹಾರಹೂರೆಯ ಪಾಯಸ ಅಂದರೆ ದ್ರಾಕ್ಷೆಗಳನ್ನು ಹಾಕಿ ಮಾಡಿದ ಪಾಯಸ. ಉಳಿದವರಿಗೆ ಅದು ಪಾಯಸ ಎಂದು ಕೇಳಿಸಿದರೆ, ಅವರು, `ಇಂದು, ಮಾಂಸದ ಅಡುಗೆ, ನನಗೆ ಮೊಸರನ್ನ, ಪುಳಿಸಾರೆ ಗತಿ’ ಎಂದು ಅಂದುಕೊಳ್ಳುತ್ತಿದ್ದರು.
ಇಂಥಾ ಪಕ್ಕಾ ಸಸ್ಯಾಹಾರಿ ದೊಡ್ಡ ತಾಯಿಗೆ ಒಂದು ದಿನ ಮಾಂಸದ ಸಾರಿನ ರುಚಿ ತೋರಿಸಿದ್ದ ಅಪಖ್ಯಾತಿ ನಮಗಿಂತ ಹತ್ತು ವರ್ಷ ಹಿರಿಯರ ತಾಯಿಗಳ ತಂಡಕ್ಕೆ ಸಲ್ಲುತ್ತದೆ.
ಒಂದು ವರ್ಷದ ಗುಡಿಹಬ್ಬದ ದಿನ, ಯಾರೋ ಪುಣ್ಯಾತ್ಮರು ಹಿಂದಿನ ದಿನವೇ ಗುಡಿಯಲ್ಲಿ ಸಾರಿಕೆ ಮಾಡಿಸಿದ್ದರು. ಗುಡಿ ಹಬ್ಬದ ಪಾಡುಪೂಜೆಯ ನಂತರ ಗುಡಿಯ ಸದಸ್ಯರಿಗೆಲ್ಲಾ ಗುಡಿಯ ಅಂಗಳದಲ್ಲೇ ಊಟದ ವ್ಯವಸ್ಥೆ ಮಾಡಲಾಗಿತ್ತು. ಗುರುಗಳಿಗೆ ಗುರುಮನೆಗೆ ಮತ್ತು ಸಮೀಪದ ಕಾನ್ವೆಂಟಿನ ತಾಯಂದಿರಿಗೆ ಅವರ ಇರುವಲ್ಲಿಗೆ ಊಟ ಕಳಿಸುವ ಏರ್ಪಾಡಾಗಿತ್ತು.
ಆ ಏರ್ಪಾಡಿನಂತೆ, ಮಧ್ಯಾನ್ನ ಕಾನ್ವೆಂಟಿಗೆ ಊಟದ ಡಬ್ಬಿಗಳು ಬಂದಿದ್ದವು. ಮೀನಿನ ಸಾರು, ಹುರಿದ ಮೀನು, ಹಂದಿಯ ಕಬಾಬು, ಕೋಳಿ ಸಾರು, ಚಿಕನ್ ಕಬಾಬು, ಬಿರಿಯಾನಿ, ಮೊಸರು ಬಜ್ಜಿ.. ಹೀಗೆ ಬೇರೆ ಡಬ್ಬಿಗಳಲ್ಲಿ ಬೇರೆ ಅಡುಗೆ ಇರಿಸಿ ಕಳಿಸಲಾಗಿತ್ತು. ಕಾನ್ವೆಂಟ್ ಕಟ್ಟಡದ ರಿಪೇರಿಯ ಕಾರಣ ಊಟದ ಮನೆಯನ್ನು ಶಾಲಾಕಟ್ಟಡದ ಮಹಡಿಗೆ ಬದಲಾಯಿಸಲಾಗಿತ್ತು. ಒಬ್ಬೊಬ್ಬರೇ ಮೆಟ್ಟಿಲಲ್ಲಿ ನಿಂತು ಒಂದೊಂದೆ ಡಬ್ಬಿಯನ್ನು ಮೇಲೆ ತಲುಪಿಸುತ್ತಿದ್ದರು. ಸಿಸ್ಟರ್ ಮೀನುತಾಯಿ ಕೆಳಗೆ ನಿಂತಿದ್ದರು. ಮೇಲೆ ನಿಂತವರು ಅವರಿಂದ ಡಬ್ಬಿ ಇಸಿದುಕೊಳ್ಳುವಾಗ, ತುಳುಕಾಡಿದ ಮುಚ್ಚಳ ಜಾರಿ ಮೀನುತಾಯಿ ಅವರ ತಲೆಯ ಮೇಲೆ ಬೀಳಬೇಕೆ. ಅದು ಮಟನ್ ಸಾರಿನ ಡಬ್ಬಿ. ತಲೆಯಿಂದ ಇಳಿದ ಸಾರು, ಹಣೆಯಿಂದ ಮೂಗಿಗೆ ಸಾಗಿ ತುಟಿಯನ್ನು ಮುಟ್ಟಿತ್ತು. ಊಟಕ್ಕೆ ಕುಳಿತಾಗ ಸದಾ `ಅನ್ನ ದೇವರು ಅನ್ನ ದೇವರು’ ಎಂದು ಬಡಬಡಿಸುತ್ತಿದ್ದ ಮೀನುತಾಯಿ ಸಾರನ್ನು ಸವಿದೇ ಬಿಟ್ಟಿದ್ದರು.’’
ಇಷ್ಟು ಹೇಳಿದ ನಂತರ, ಸಿಸ್ಟರ ಪುಷ್ಪಮೇರಿ ತಾಯಿ. “ನಾನೇಕೆ ಇಂಥದನ್ನೆಲ್ಲಾ ನಿನಗೆ ಹೇಳಿದೆ?’’ ಎನ್ನುತ್ತಾ ಹಣೆ ಗಿಟ್ಟಿಸಿಕೊಂಡರು. ಸಾವರಿಸಿಕೊಂಡು, “ನೋಡಮ್ಮಾ, ಸಿಸ್ಟರ್ ಮೀನುತಾಯಿ ಅವರಿಂದ ಈ ಕಾನ್ವೆಂಟಿಗೆ, ಸಮಾಜಕ್ಕೂ ಅಪಾರ ಸೇವೆ ಸಂದಿದೆ. ಅವರನ್ನು ಪ್ರಾತಃಕಾಲದಲ್ಲಿ ನೆನಪಿಸಿಕೊಳ್ಳಬೇಕಮ್ಮ.’’
“ಅವರ ಕಾಲ, ನಮ್ಮ ಕಾಲದಷ್ಟು ಸುಖಕರ ಆಗಿರಲಿಲ್ಲ. ಅವರಿಗಾದ ಕಷ್ಟವನ್ನು ಈ ಕಾನ್ವೆಂಟಿನ ಹಿರಿಯ ತಾಯಂದಿರು ನೀಗಿಸಿದಂತೆ, ತಾವೂ ಇತರರ ಕಷ್ಟ ನೀಗಿಸಬೇಕೆಂದು ಜೀವ ತೇಯ್ದವರು ಅವರಮ್ಮ. ಈಗಲೂ ನಮ್ಮ ಅಂದರೆ ಹೆಣ್ಣುಮಕ್ಕಳ ಸ್ಥಿತಿ ಸಮಾಜದಲ್ಲಿ ಅಷ್ಟಕ್ಕಷ್ಟೇ ಇದೆ. ಹೆಣ್ಣು ಮಕ್ಕಳು ಎಂದರೆ ಬೇಡವೇ ಬೇಡ ಎಂದು ಪಿಂಡ ತೆಗೆಸಿಕೊಳ್ಳುವ ಪರಿಪಾಠ ಇತ್ತೀಚಿಗಿನವರೆಗೂ ಇತ್ತಮ್ಮ. ಮನೆಯಿಂದ ಪರಿತ್ಯಕ್ತರಾವರು ಅವರು. ಹೇಗೋ ಈ ಕಾನ್ವೆಂಟನ್ನು ಬಂದು ಸೇರಿದರು. ಸಾವಿರಾರು ಜನ ಅಭ್ಯಾಗತ ಮಹಿಳೆಯರಿಗೆ ದಾರಿದೀಪವಾಗಿದ್ದಾರೆ. ಹೆಣ್ಣುಮಕ್ಕಳಿಗೆ ಕಸೂತಿ, ಟೇಲರಿಂಗ ಅಂತ ಹೇಳಿಕೊಟ್ಟು, ಇಂದಿನ ಗಾರ್ಮೆಂಟ್ಗಳಲ್ಲಿ ದುಡಿಯುವ ನೂರಾರು ಕುಟುಂಬಗಳಿಗೆ ನೆರವಾಗಿದ್ದಾರಮ್ಮಾ ಅವರು. ವಿಧವೆಯರಿಗೆ, ಗಂಡ ಬಿಟ್ಟವರಿಗೆ ನಮ್ಮ ಶಾಲೆಗಳಲ್ಲಿ ಅವರ ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದಂತೆ ಕೆಲಸಕಾರ್ಯಗಳನ್ನು ಒಪ್ಪಿಸಿ ಅವರ ಜೀವನ ಬಂಡಿ ನೇರ ದಾರಿಯಲ್ಲಿ ಸಾಗಿಸುವಂತೆ ಮಾಡಿದ ಪುಣ್ಯಾತ್ಮರು.’’
“ಇದೆಲ್ಲಾ ಸರಿ, ನಿನಗೇಕೆ ಈ ಮಾಹಿತಿ ಈಗ ಬೇಕಾಯಿತು?’’
“ಸಿಸ್ಟರ್, ನಮ್ಮ ಹಿರಿಯರು ಎಂಥವರು ಎಂಬ ಮಾಹಿತಿ ನಮಗಿದ್ದರೆ ಒಳ್ಳೆಯದಲ್ಲವೇ? ಅವರ ಆದರ್ಶ ಜೀವನ ನಮಗೂ ಮಾದರಿಯಲ್ಲವೇ? ನಾನು ಅವರ ಹೆಜ್ಜೆ ಗುರುತುಗಳಲ್ಲಿ ಸಾಗಲೂ ಅನುಕೂಲವಾಗುವುದಲ್ಲಾ?’’ ಎಂದು ಬಡಬಡಿಸಿದೆ.
ನನ್ನ ಮಾತು ಕೇಳಿ ಸಿಸ್ಟರ್ ಪುಷ್ಪಮೇರಿ ತಾಯಿ ಸುಮ್ಮನಾದರು. ಸಿಸ್ಟರ್ ಮೀನುತಾಯಿ ಅವರನ್ನು ಕಂಡು ಕ್ಷಮೆ ಯಾಚಿಸಬೇಕು ಎಂದು ಹಲವಾರು ಬಾರಿ ಅವರ ಕೋಣೆಯ ಬಾಗಿಲಿನವರೆಗೆ ಹೋದರೂ, ಬಾಗಿಲು ತಟ್ಟಿ, ಒಳಗೆ ಹೋಗಲು ಧೈರ್ಯ ಸಾಲಲಿಲ್ಲ. ಹೀಗೆಯೇ ಒಂದೆರಡು ತಿಂಗಳುಗಳು ಕಳೆದಿದ್ದವು. ಪಾಪಸಂಕೀರ್ತನೆಯಲ್ಲಿ ಎಲ್ಲವನ್ನೂ ಹೇಳಿಯಾಗಿತ್ತು. ಇನ್ನೇನು ಎಂಬ ಅಹಂ ನನ್ನಲ್ಲಿ ಉಳಿದಿತ್ತು ಏನೋ? ಆದರೆ, ಯಾವಾಗಲಾದರೂ, ನನ್ನ ಪಾಪಸಂಕಿರ್ತನೆ ಕೇಳಿದ್ದ ಸ್ವಾಮಿ ಕಾನ್ವೆಂಟಿಗೆ ಬಂದಾಗ, ಅವರ ಕಣ್ಣು ತಪ್ಪಿಸಿ ಓಡಾಡುತ್ತಿದ್ದೆ. ಆದರೆ, ಅಂಥ ದಿನದಂದು, ನಾಳೆ ಸಿಸ್ಟರ್ ಮೀನುತಾಯಿ ಅವರಿಗೆ ಖಂಡಿತವಾಗಿ ವಿಷಯ ತಿಳಿಸಿ ಕ್ಷಮೆ ಯಾಚಿಸಬೇಕು ಎಂದು ಗಟ್ಟಿ ನಿರ್ಧಾರ ಮಾಡಿ ಮಲಗುತ್ತಿದ್ದೆ. ಮರುದಿನ ಮತ್ತೆ ಎಂದಿನಂತೆ ದಿನ ಉರುಳುತ್ತಿತ್ತು.
ಇಂದು ಸಿಸ್ಟರ್ ಮೀನುತಾಯಿ ಅವರು ಇನ್ನೆಂದೂ ಹಿಂದಿರುಗಿ ಬಾರದ, ಏನನ್ನೂ ಕೇಳಿಸಿಕೊಳ್ಳದ ಲೋಕಕ್ಕೆ ತೆರಳಿದ್ದಾರೆ. ನಾನು ಅವರು ಸಾಗಿದ ಹಾದಿಯಲ್ಲಿ, ಅವರು ಮೂಡಿಸಿರುವ ಹೆಜ್ಜೆ ಗುರುತುಗಳಲ್ಲೇ ಸಾಗಿ, ಅವರಂತೆಯೇ ಇತರರ ಬದುಕಿನಲ್ಲಿ ಬೆಳಕು ಮೂಡುವಂತೆ ಮಾಡುವುದೇ ನನ್ನ ಜೀವನದ ಗುರಿಯಾದರೆ ಮಾತ್ರ, ಅದು ಅವರಿಂದ ಪಡೆವ ಕ್ಷಮೆಗೆ ಸಮನಾದದ್ದು ಎನ್ನಿಸಿತು. ರಾತ್ರಿ ಪ್ರಾರ್ಥನೆ ಮಾಡುವಾಗ ಪ್ರಭು ಕ್ರಿಸ್ತರಲ್ಲಿ, ಅವರಂತೆಯೇ `ನನ್ನನ್ನೂ ಸಮಾಜಸೇವೆಗೆ, ಸಮಾಜದಲ್ಲಿರುವ ದುರ್ಬಲರ, ಬಡವರ, ಶೋಷಿತರ ಸೇವೆಗೆ, ದೇವರ ಸೇವೆಗೆ ಸಜ್ಜುಗೊಳಿಸು’ ಎಂದು ಪ್ರಾರ್ಥಿಸಿದೆ.
ಫ್ರಾನ್ಸಿಸ್.ಎಂ.ನಂದಗಾವ್