
ಫಾದರ್ ಫ್ರಾನ್ಸಿಸ್ರರವರದ್ದು ದೊಡ್ಡ ದೇಹ. ನಾಚಿಕೊಂಡು ರೆಪ್ಪಗಳ ಅಡಿಯಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದ ಸಣ್ಣ ಸಣ್ಣ ಕಣ್ಣುಗಳು. ಉಬ್ಬಿದ ತುಟಿ. ದೊಡ್ಡ ಮೂಗು. ಅಗಲವಾದ ಹಣೆ. ಬೊಜ್ಜು ಹೊಟ್ಟೆ, ನೀಳವಾದ ಬಾಹುಗಳು, ಭಾರದೇಹದಿಂದ ಅಲ್ಪಸ್ವಲ್ಪ ಅಶಕ್ತವಾಗಿದ್ದ ಕಾಲುಗಳು, ಆಗಾಗ ಸಮತೋಲನವನ್ನು ಕಳೆದುಕೊಳ್ಳುತ್ತಿದ್ದ ಹೆಜ್ಜೆಗಳು, ಹೌದು ಫ್ರಾನ್ಸಿಸ್‍ರದ್ದು ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ದೇಹ. ವ್ಯಾಯಾಮ ಕಾಣದ ಅವರ ದೇಹವು ಅಲ್ಪಸ್ವಲ್ಪ ಆರೈಕೆಗೆ ಬೇಡಿಕೆಯಿಟ್ಟಿದ್ದರೂ ಒಡೆಯನಿಂದಲೇ ತಾತ್ಸಾರಕ್ಕೆ ಒಳಗಾದಂತೆ ತೋರುತ್ತಿದ್ದು ಮಾತ್ರ ಸತ್ಯ.
ಆವರ ದೈಹಿಕ ಆರೋಗ್ಯದ ಸ್ಥಿತಿಗತಿ ಕೂಡ ಅಷ್ಟಕಷ್ಟೇ. ಸಕ್ಕರೆ ಖಾಯಿಲೆ ತೀವ್ರವಾಗಿತ್ತು. ಮೊನ್ನೆಯಷ್ಟೇ ಕ್ಯಾನ್ಸರ್ ರೋಗದ ವಿರುದ್ಧ ಎದೆಗುಂದದೆ ಹೋರಾಡಿ ಗೆದ್ದು ಬಂದಿದ್ದರು. ದಿನಂಪ್ರತಿ ಹತ್ತಾರು ಮಾತ್ರೆಗಳನ್ನು ನುಂಗುತ್ತಿದ್ದರು, ಮೂರ್ನಾಲ್ಕು ಬಾರಿ ಇನ್ಸುಲೀನ್ ತೆಗೆದುಕೊಳ್ಳುತ್ತಿದ್ದರು. ಆದರೂ ಅನಾರೋಗ್ಯದ ನೆಪ ಹೊಡ್ಡಿ ಮನೆಯಲ್ಲಿ ಜಡವಾಗಿ ಕುಳಿತವರಲ್ಲ. ಜನರ ನೋವು ಅವರನ್ನು ಮನೆಯಲ್ಲಿ ಹಾಗೇ ಸುಮ್ಮನೇ ಕುಳಿತುಕೊಳ್ಳಲು ಬಿಡಲಿಲ್ಲ ಎಂಬುವುದೇ ಅವರನ್ನು ಹತ್ತಿರ-ದೂರಗಳಿಂದ ಕಂಡವರ ವಾದ. ಬಯಲನ್ನೇ ಮನೆ ಮಾಡಿಕೊಂಡಿದ್ದ ಫಾದರ್ ಬಯಲು ಬಯಲನೆ ಬಿತ್ತಿ, ಬಯಲನೆ ಬೆಳೆದು ಬಯಲು ಬಯಲಾಗಿ ಬಯಲಾದರು. ಬಡವರ ಕೂಗಿಗೆ ಎಂದೂ ಕಿವುಡರಾದವರಲ್ಲ. ಸದಾ ತೆರಿದಿದ್ದ ಫಾದರ್ರವರ ಮ£ ಮನ, ಸಣ್ಣ ಸಹಾಯ ಬೇಡಿ ಬಂದವರಿಗೂ ಮೃಷ್ಟಾನ್ನ ಭೋಜನ ನೀಡಿ, ತವರಿಗೆ ಮಗಳನ್ನು ಕಳುಹಿಸಿಕೊಡುವ ತಾಯಂತೆ ಬುದ್ಧಿ ಮಾತನ್ನೊರೆದು, ಜೋಪಾನವಾಗಿ ಆತ್ಮೀಯವಾಗಿ ಕಳುಹಿಸಿಕೊಡುತ್ತಿದ್ದರು. ಚಲನಶೀಲತೆ ಅವರ ಬದುಕಿನ ಮೈಮಾಟವಾದರೆ ಅಂತಃಕರಣ ಅವರ ಆತ್ಮವಾಗಿತ್ತು. ಭುಜದಲ್ಲಿ ಜೋಳಿಗೆಯಿಲ್ಲದಿದ್ದರೂ ಜಂಗಮನ ವಿಶ್ವರೂಪವೇ ಆಗಿದ್ದ ಅವರ ಬದುಕು ಕೆದಕಿದಷ್ಟು ವಿಸ್ಮಯ, ತೋಡಿದಷ್ಟು ಆಧ್ಯಾತ್ಮ ಹೇಳಿದಷ್ಟು ಅನಂತ.
ಹುಟ್ಟಿದ್ದು 1949ರಲ್ಲಿ. ಅವರು ನಮ್ಮೊಂದಿಗೆ ಇದ್ದಿದರೆ ಇದೇ ತಿಂಗಳ ಅಂದರೆ ಮೇ 5ನೇ ತಾರೀಖು ಅವರು 72 ವರ್ಷಗಳನ್ನು ಪೂರೈಸುತ್ತಿದ್ದರು. ಜಿ.ಟಿ.ಜೋಸೆಫ್ ಮತ್ತು ರೋಜಮ್ಮರವರ ಹಿರಿಯ ಮಗನಾಗಿ ಹುಟ್ಟಿದ್ದ ಫಾದರ್ ಬೆಂಗಳೂರಿನ ಸಂತ ಅಲೋಶಿಯಸ್ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪಡೆದರು. ಸಂತ ಜೋಸೆಫ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿಕೊಂಡು, ಯಾಜಕನಾಗಲು ಬಯಸಿ ಯೇಸುಸಭೆಯೆಂಬ ಧಾರ್ಮಿಕಸಭೆಯನ್ನು ಸೇರಿಕೊಂಡರು. ವಿಜ್ಞಾನ ವಿಷಯದಲ್ಲಿ ತಮ್ಮ ಪದವಿ ಶಿಕ್ಷಣವನ್ನು ಮುಗಿಸಿದರು. ಮುಂದೆ ವಕೀಲಿ ವೃತ್ತಿಯನ್ನು ಇಷ್ಟಪಟ್ಟು ಓದಿದರು ಜತೆಗೆ ಸಮಾಜ ಶಾಸ್ತ್ರದಲ್ಲಿ, ಸ್ನಾತಕೋತರ ಪದವಿಯನ್ನು ಪಡೆದರು. ಬಡವರ ಉದ್ದಾರ ಕಾರ್ಯದಲ್ಲಿ ಓದು ಒಂದು ಸಾಧನವಾಗಲೆಂದು ಓದಿದರೇ ವಿನಃ ಭವಿಷ್ಯದಲ್ಲಿ ತನಗೆ ಸ್ಥಾನಮಾನ ಸಿಗಬಹುದೆಂಬ ಮಹಾದಾಸೆಯಿಂದಲ್ಲ. ಓದಿದ್ದನ್ನು ಯಥೇಚ್ಛವಾಗಿ ತಮ್ಮ ಸೇವಾಕಾರ್ಯದಲ್ಲಿ ಬಳಸಿಕೊಂಡರು.
ಒಬ್ಬ ಜೆಸ್ವಿಟ್ ಆಗಿ ದುಡಿದಿದ್ದು ಸಮಾಜಿಕ ಸೇವಾ ಕೇಂದ್ರಗಳಲ್ಲಿ. ಈ ಕೇಂದ್ರಗಳ ನಿರ್ದೇಶಕರಾಗಿ ಬಡಜನರ ಹಕ್ಕೋತ್ತಾಯಗಳಿಗೆ ಶಕ್ತಿಮೀರಿ ದುಡಿದಿದ್ದು ಜತೆಗೆ ಸ್ಥಳೀಯ ಹಾಗು ಇತರ ಸರ್ಕಾರೇತರ ಸಂಸ್ಥೆಗಳಿಂದ ಬರುವ ದೇಣಿಗೆಯನ್ನು ಕ್ರೋಢೀಕರಿಸಿ ಸಾವಿರಾರು ಬಡಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಾ ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿದು ಇತಿಹಾಸ. ಈ ಕಡೆ ಬೆಂಗಳೂರು ಎಂಬ ಮಹಾನಗರಿಯಲ್ಲಿ ಬಡ ಮಕ್ಕಳಿಗೆ ಮತ್ತು ಓದನ್ನು ಅರ್ಧದಲ್ಲೇ ಬಿಟ್ಟವರಿಗಾಗಿ community college ಯನ್ನು ಪ್ರಾರಂಭಿಸಿ ಮಕ್ಕಳಿಗೆ ನಾನಾ ರೀತಿಯ ಕೌಶಲ್ಯಗಳ ಶಿಕ್ಷಣಕೊಟ್ಟು ಮಕ್ಕಳಿಗೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಿ, ವಿಸ್ತರಿಸಿ ಬಡಕುಟುಂಬಗಳ ಆಶಾದೀಪವಾದರು.
ಅವರ ಮೇಲಿದ್ದ ಅನೇಕ ಆರೋಪಗಳಲ್ಲಿ ‘ನಾಟ್ ಅರ್ಗನಿಸ್’್ಡ ‘ನಾಟ್ ಸಿಸ್ಟಮ್ಯಾಟಿಕ್’ ಎಂಬುವುದು ಒಂದು. ಹೌದು ವ್ಯವಸ್ಥೆಯಲ್ಲಿ ಅವರಿಗೆ ನಂಬಿಕೆ ಇರಲಿಲ್ಲ ಎಂಬುವುದೇ ನನ್ನ ಗ್ರಹಿಕೆ. ಸಂಘಸಂಸ್ಥೆಗಳು ವ್ಯವಸ್ಥಿತವಾಗಿ ನಡೆಯಬೇಕಾದರೆ ಅಲ್ಲಿ ಕಾನೂನುಗಳಿಗೆ, ಕಾಯ್ದೆಗಳಿಗೆ ಮಣೆ ಹಾಕಬೇಕು. ಅಲ್ಲಿ ಸೃಜನಶೀಲತೆಗೆ ಅವಕಾಶವಿರುವುದಿಲ್ಲ. ಎಷ್ಟೂ ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ತಾನು ಮಾಡುವ ಕೆಲಸಗಳು ವ್ಯವಸ್ಥಿತವಾಗಿರಬೇಕೆಂದು ಎಂದೂ ಅವರು ಬಯಸಲಿಲ್ಲ. ಕಮ್ಯುನಿಟಿ ಕಾಲೇಜನ್ನು ಸಹ ವ್ಯವಸ್ಥೆಯನ್ನು ಮೀರಿದ ಅನೌಪಚಾರಿಕ ರೂಪದಲ್ಲೇ ಪ್ರಾರಂಭಿಸಿದರು.
ಮಾತಿನಲ್ಲಿ ಸ್ವಲ್ಪ ಕಟುವಾಗಿದ್ದರೂ ತೂಕವಿರುತ್ತಿತ್ತು. ವಿಮರ್ಶೆಯ ಕುಲುಮೆಯಿಂದ ಹೊರಬರುತ್ತಿದ್ದ ಅವರ ಮಾತುಗಳಲ್ಲಿ ಹೊಳಹುಗಳಿದ್ದವು. ಅವರ ಪ್ರತಿಯೊಂದು ಮಾತು ಸತ್ಯದ ಪರವಾಗಿದವು. ಆದ್ದರಿಂದ ಅವರ ಜತೆ ಮಾತಿಗಿಳಿಯಲು ಹಲವರು ಹೆದರುತ್ತಿದ್ದರು. ಹೇಳುವುದನ್ನು ನಾಜೂಕಾಗಿ ಹೇಳುವ ಜಾಯಾಮಾನ ಅವರದಾಗಿರಲಿಲ್ಲ. ಆದ್ದರಿಂದ ಅವರಿಗೆ ಸಿಗಬೇಕಾದ ಸ್ಥಾನಮಾನ ಕೂಡ ಅವರ ಕೈಹಿಡಿಯಲಿಲ್ಲ ಎಂಬುವುದೇ ನನ್ನ ಗ್ರಹಿಕೆ.
ಹಲವು ಭಾಷೆಗಳನ್ನು ಪಳಗಿಸಿಕೊಂಡಿದ್ದರೂ ಅವರಲ್ಲಿ ತೋರಿಕೆ ಎಂಬುವುದು ಇರಲಿಲ್ಲ. ತನ್ನ ಭಾಷಾ ಜ್ಞಾನ, ಮಾತುಗಾರಿಕೆ ಎಲ್ಲವನ್ನು ಬಡವರ ಕಲ್ಯಾಣಕ್ಕೆ ವಿನಿಯೋಗಿಸಿಕೊಂಡ ಸಂವೇದನಾಶೀಲ ಫಾದರ್ ಗುಂಟಿ, ‘ಬಡವರಿಗೆ ಆದ್ಯತೆ’ ‘ನ್ಯಾಯವನ್ನು ಆಗ್ರಹಿಸುವ ವಿಶ್ವಾಸ’ ಎಂಬ ನಮ್ಮ ಘೋಷವಾಕ್ಯಗಳನ್ನು ಕಾರ್ಯರೂಪಕ್ಕೆ ಇಳಿಸಿದ ಕ್ರಿಸ್ತನ ನೈಜ ಅನುಯಾಯಿ.
ಸಾಮಾಜಿಕ ವಿಶ್ಲೇಷಣೆ ಎಂಬ ಕಾರ್ಯಗಾರವನ್ನು ನಡೆಸಿಕೊಡುವುದರಲ್ಲಿ ಪಳಗಿದ ಫಾದರ್ ಗುಂಟಿಯವರು ನಾನಾ ಕಡೆಗಳಲ್ಲಿ ಸಮಾಜಕ್ಕೆ ಸಂಬಂಧಿಸಿದ ಕಾರ್ಯಗಾರಗಳನ್ನು ಏರ್ಪಡಿಸಿ ಜನರ ಸಮಾಜಿಕ ತಿಳುವಳಿಕೆಯನ್ನು ವಿಸ್ತರಿಸುತ್ತಿದ್ದರು. ಒಬ್ಬ ಅಪ್ಪಟ ಸಾಮಾಜಿಕ ಕಾರ್ಯಕರ್ತನಾಗಿ ನೂರಾರು ಸಾಮಾಜಿಕ ಕಾರ್ಯಕರ್ತರ ಒಡನಾಟವನ್ನು ಬೆಳೆಸಿಕೊಂಡಿದ್ದರು. ಅವರೊಟ್ಟಿಗೆ ಸೇರಿ ಸಂವಾದ, ಚರ್ಚೆಗಳನ್ನು ಆಯೋಜಿಸಿ ಅನ್ಯಾಯ ವ್ಯವಸ್ಥೆಗಳ ವಿರುದ್ಧ ಹೋರಾಟಗಳನ್ನು ವಿಸ್ತರಿಸಿದ ಹೆಗ್ಗಳಿಕೆ ಇವರದು. ಸಮಾಜವನ್ನು/ವ್ಯಕ್ತಿಗಳನ್ನು ಶೋಧಿಸುವ ಕುತೂಹಲ ಕಣ್ಣುಗಳು, ಆದರ್ಶ ಸಮಾಜವೊಂದನ್ನು ಕಟ್ಟುವ ಕನಸುಗಳು, ಮಾನವೀಯತೆಯಿಂದ ಮಿಡಿಯುವ ಹೃದಯ, ಇತಿಹಾಸ-ವರ್ತಮಾನಗಳ ಹಿನ್ನಲೆಯಲ್ಲಿ ಸತ್ಯವನ್ನು ಅನ್ವೇಷಿಸುವ ಪ್ರಜ್ಞಾವಂತಿಕೆ ಇವೆಲ್ಲ ಗುಣಗಳು ಗಾಢವಾಗಿ ಕಾಣಸಿಕೊಳ್ಳುವ ಫಾದರ್ ರವರ ಬದುಕು ಒಬ್ಬ ದಾರ್ಶನಿಕ ರೂಪಕದಷ್ಟೇ ಕುತೂಹಲಕಾರಿ.
ಕಳೆದ ವರ್ಷ ಕೊವೀಡ್ 19 ಹರಡುವುದನ್ನು ತಡೆಗಟ್ಟಲು ಲಾಕ್‍ಡೌನ್ ಹೇರಿದ ಸಂದರ್ಭದಲ್ಲಿ ಬಡವರಿಗೆ ಆಹಾರ ಸಮಾಗ್ರಿಗಳನ್ನು ಹಂಚಲು ಮುಂದಾಳತ್ವ ವಹಿಸಿ ಸಾವಿರಾರು ಜನರಕ್ಕೆ ನೆರವಾಗಿದ್ದನು ನಾವು ಮರೆಯುವುದಕ್ಕೆ ಸಾಧ್ಯವಿಲ್ಲ. ಪ್ರಾಣಭಯಬಿಟ್ಟು ದುಡಿದ ಅವರು ನಮ್ಮ ನಿಷ್ಕ್ರೀಯತೆಯನ್ನು ಬಡಿದೋಡಿಸಿ ನಮಗೆ ಮಾದರಿಯಾದುದ್ದು ನಿಜಕ್ಕೂ ಸ್ಮರಣೀಯ.
ಧ್ಯಾನ, ಮೌನ, ಉತ್ಕಟವಾದ ಜೀವನ ಪ್ರೀತಿ, ಜ್ವಲಂತವಾದ ರಾಜಕೀಯ ಪ್ರಜ್ಞೆ, ಅನ್ಯಾಯ ವ್ಯವಸ್ಥೆಯ ವಿರುದ್ಧ ಕಡುಕೋಪ, ಶೈಕ್ಷಣಿಕ ಶಕ್ತಿಯಲ್ಲಿ ದೃಢವಾದ ನಂಬಿಕೆ, ಬಡಜನರ ಕಲ್ಯಾಣ ಹೀಗೆ ಹಲವಾರು ರೂಪಕಗಳಲ್ಲಿ ಸಮಾಜಜೀವಿಯ ಏಳುಬೀಳುಗಳನ್ನು ಆಪ್ತದಾಟಿಯಲ್ಲಿ ಕಣ್ಣಿಗೆ ಕಟ್ಟುವಂತೆ ಫಾದರ್ ಬದುಕಿನಿಂದ ದಾಖಲಿಸಬಹುದೇನೋ!
ಹೌದು ಫಾದರ್ ಫ್ರಾನ್ಸಿಸ್ ಗುಂಟಿಪಿಲ್ಲಿಯವರ ಬಗ್ಗೆ ಎಷ್ಟೂ ಹೇಳಿದರೂ ‘ಅಲ್ಪ’ ಎನ್ನಿಸಿಬಿಡುವಷ್ಟೂ ‘ದೊಡ್ಡತನ’ ಅವರದ್ದು. ಅಲ್ಪಸ್ವಲ್ಪ ಗ್ರಹಿಸಿಕೊಂಡರೂ ನಮ್ಮ ಬದುಕಿನ ಹೊಸತನ, ಹೋರಾಟ, ಅಧ್ಯಾತ್ಮಿಕ ವಿಚಾರಕ್ಕೆ ದಾರಿ ಆಗಿಬಿಡುವ ರಹದಾರಿ ಅವರು.
- ಜೋವಿ