ಯಾಕವ್ವನ ಅಂತರಂಗ

Advertisements
Share

ಮೂಲ ಹಳ್ಳಿಯಿಂದ ಬೇರೆಯೇ ಆಗಿಬಿಟ್ಟಿರುವ ಒಂದು ದೇವದಾಸಿಯ ಪುಟ್ಟ ಕೊಂಪೆಗೆ ಹೋಗಿದ್ದೆ. ಊರಿನ ಜಾತಿ ವ್ಯವಸ್ಥೆಯಲ್ಲಿ ದನಿಕಳೆದುಕೊಂಡು ಈ ಕೊಪ್ಪಲು ಯಾರ ಸುದ್ದಿಗೆ ಹೋಗದೆ ತನ್ನ ಪಾಡಿಗೆ ತಾನೇ ಹಾಸಿಗೆ ಹಾಸಿ ಮಲಗಿದಂತಿತ್ತು. ಇಂತಹ ಕ್ಷುದ್ರ, ಕೊಂಪೆಗೆ ಕಾಲಿಟ್ಟಾಕ್ಷಣ ನನ್ನ ಕಣ್ಣುಗಳನ್ನು ಕುಕ್ಕಿದ್ದು ಆ ಕೇರಿಯಲ್ಲಿ ಸೆಟೆದ್ದು ನಿಂತಿದ್ದ ಕೆಲ ತಾರಸಿ ಮನೆಗಳು.  ಹಳ್ಳ ತಗ್ಗಿನ ಮುಖ್ಯ ರಸ್ತೆಯ ಬಲಎಡ ಬದಿಗಳಲ್ಲಿ ಆರ್.ಸಿ.ಸಿ ಮನೆಗೆಳು ಸಾಲು ಬೆಳೆಯಂತೆ ಶಿಸ್ತಾಗಿ ನಿಂತಿದ್ದವು. ಇನ್ನೊಂದೆಡೆ ಊರಿನ ರಾಜರಸ್ತೆಯನ್ನು ಕಾಂಕ್ರೀಟ್ ಕರಣಗೊಳಿಸುವ ಕಾರ್ಯ ಅರ್ಧಕ್ಕೆ ಸ್ಥಗಿತಗೊಂಡಿತ್ತು. ಮೋರಿಯ ವ್ಯವಸ್ಥೆ ಇನ್ನೂ ಆಗಬೇಕಾಗಿತ್ತಷ್ಟೇ. ಬಲ ಬದಿ ಮನೆಗಳ ಹಿಂಭಾಗ ಕುಡಿಯುವ ನೀರಿನ ವ್ಯವಸ್ಥೆಗಾಗಿ ಬೃಹದಾಕಾರದ ನೀರಿನ ಟ್ಯಾಂಕ್ ಆಕಾಶಕ್ಕೆ ಮುಖಮಾಡಿ, ನಾಲ್ಕೈದು ಆಧಾರ ಸ್ತಂಭಗಳಿಂದ ಸೆಟೆದು ನಿಂತುಕೊಂಡಿತ್ತು. ಇವೆಲ್ಲಾ ಆ ಕೊಂಪೆಗೆ ಒಂದು ವ್ಯವಸ್ಥಿತ ಮುದ್ರೆ ಹಾಕಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ.

ಹೌದು, ಸುಮಾರು ನಾಲ್ಕೈದು ವರ್ಷಗಳ ಹಿಂದೆ ಸಂಭವಿಸಿದ್ದ ನೆರೆಯಿಂದ ಊರಿಗೆ ಊರೇ ಜಲಾವೃತವಾಗಿತ್ತು. ಮನೆಮಠಗಳು ನೆರೆಯ ಕ್ರೂರ ದಾಳಿಗೆ ಕುಸಿದಿದ್ದವು. ಬೆಳೆಗಳು ನೀರುಪಾಲಾಗಿದ್ದವು. ಆಗಿದ್ದ ಸರ್ಕಾರ ಊರು ಮನೆಗಳ ಮರುನಿರ್ಮಾಣದ ಬಗ್ಗೆ ಜೋರುಜೋರಾಗಿ ಬೊಬ್ಬೆ ಹೊಡೆಯಿತೇ ವಿನಃ ಏನೂ ಮಾಡಿರಲಿಲ್ಲ. ಊರಜನರಂತೂ ಅಸಹಾಯಕತೆಯಿಂದ ಕೈ ಚೆಲ್ಲಿ ಆಕಾಶವನ್ನು ದಿಟ್ಟಿಸಿ ಕೂತಿದ್ದರು. ಊರು ಮತ್ತೊಮ್ಮೆ ನಿರ್ಮಾಣವಾಗಬೇಕಿತ್ತು. ಊರಿನ ಜನರಿಗೆ ವಾಸಿಸಲು ಯೊಗ್ಯಮನೆಗಳ ಅವಶ್ಯಕತೆ ಇತ್ತು.  ಇಂತಹ ಪರಿಸ್ಥಿತಿಯಲ್ಲಿ ಲೊಯೋಲಾ ಎಂಬ ಖಾಸಗಿ ಸಮಾಜಸೇವಾ ಸಂಸ್ಥೆ ಜನರಿಗೆ ಒತ್ತಾಸೆಯಾಗಿ ಬಂದು ಜನರಿಗೆ ವಾಸಿಸಲು ಯೊಗ್ಯ ಮನೆಗಳನ್ನು ನಿರ್ಮಿಸಿ ಜನರ ಮನಗಳನ್ನು ತುಂಬಿಕೊಂಡಿತ್ತು. ಊರಿನ ಸಮಸ್ಯೆಯ ನೈಜ ಚಿತ್ರಣ ಅರಿತ ಸಂಸ್ಥೆ ಊರ ಮಕ್ಕಳಿಗೆ ಅಕ್ಷರದ ರುಚಿ ತೋರಿಸಿ ಅಕ್ಷರ ಕ್ರಾಂತಿಗೆ ನಾಂದಿ ಹಾಡಿತ್ತು. ಜತೆಗೆ ಊರಿನ ಸರ್ವತೋಮುಖ ಅಭಿವೃದ್ಧಿಯ ನೀಲಿನಕ್ಷೆಯನ್ನು ಕೈಯಲ್ಲಿ ಹಿಡಿದುಕೊಂಡು ಶಕ್ತಿಮೀರಿ ದುಡಿಯತೊಡಗಿತು, ಈ ಊರಿನಲ್ಲೊಂದು ಮಹತ್ತರ ಬದಲಾವಣೆಗೆ ಕಾರಣವಾದ ಲೊಯೊಲಾ ಸಂಸ್ಥೆಯನ್ನು ಇಂದೂ ಈ ಊರಿನಲ್ಲಿ ಕಾಣಬಹುದು: ದೇವದಾಸಿಯ ಅನಿಷ್ಟ ಪದ್ಧತಿ ಅವಸಾನದ ಹಾದಿ ಹಿಡಿದಿದೆ, ಶೋಷಿತ ಮಹಿಳೆಯರು ಮುಖ್ಯವಾಹಿನಿಯ ಕಡೆ ಮುಖಮಾಡಿದ್ದಾರೆ, ಊರಿನ ಅಷ್ಟೂ ಮಕ್ಕಳು ವಿದ್ಯಾಭ್ಯಾಸದಲ್ಲಿ ಮಗ್ನರಾಗಿದ್ದಾರೆ.

ದೇವದಾಸಿಯೆಂಬ ಶೋಷಣಾತ್ಮಕ ಪದ್ಧತಿ ಈ ಊರಿಗೆ ಪಾರಂಪರ್ಯವಾಗಿ ಅಂಟಿಕೊಂಡು ಬಂದಿದ್ದ ಶಾಪವೆಂದರೆ ತಪ್ಪಾಗದು. ನೂರಾರು ವರ್ಷಗಳಿಂದ ಈ ರೀತಿಯ ಅನಿಷ್ಟ ಪದ್ಧತಿಯಿಂದ ಜರ್ಜರಿತರಾಗಿರುವ ಮಹಿಳೆಯರು ಈಗ ಸಿಡಿದೆದ್ದಿದ್ದಾರೆಂತಲ್ಲ. ಅವರು ಈಗಲೂ ಆತ್ಮವಿಶ್ವಾಸದ ಕೊರತೆಯಿಂದ ಬದುಕುತ್ತಿದ್ದಾರೆ. ಈ ಪದ್ದತಿಯ ಉಪಉತ್ಪನ್ನಗಳಂತೆ ಅಷ್ಟು ಇಷ್ಟು ಮರಿ ಆಚರಣೆಗಳು ಇನ್ನೂ ಚಾಲ್ತಿಯಲ್ಲಿವೆ. ಕೆಲವರಂತೂ ಅದೇ ದುಷ್ಟ ಪದ್ಧತಿಯ ಬಾಹುವಿನಲ್ಲಿ ಸಿಲುಕಿಕೊಂಡು, ಹೊರಬರಲಾಗದೆ ಬಲೆಗೆ ಸಿಕ್ಕ ಮೀನಿನಂತೆ ವಿಲವಿಲ ಒದ್ದಾಡುತ್ತಿದ್ದಾರೆ. ಇವಿಷ್ಟು ಊರ ಬಗೆಗಿನ ಸಂಕ್ಷಿಪ್ತ ಪಕ್ಷಿನೋಟ.

ಈ ಎಲ್ಲಾ ಹಿನ್ನಲೆಯಲ್ಲಿ ನನ್ನ ಮನಸನ್ನು ಸೂರೆಗೊಂಡದ್ದು ಆ ಊರಿನಲ್ಲಿದ್ದ ಮಹಿಳೆಯರ ಮೇಳ/ ಹಾಡು ತಂಡ. ಈ ತಂಡದಲ್ಲಿರುವ ಯಾವೊಬ್ಬ ಮಹಿಳೆಯೂ ಅಕ್ಷರವಂತಳಲ್ಲ. ಆದರೂ ಅವರ ಅನುಭವಗಳಿಗೆ ಮಾತುಗಳ ಪೋಣಿಸಿ, ಲಯ, ಪ್ರಾಸ ರಾಗ ಕಟ್ಟಿ ಹಾಡುವುದರಲ್ಲಿ ಮಾತ್ರ ಎತ್ತಿದ್ದ ಕೈ. ನಿಂತಲ್ಲೇ ಹಾಡು ಕಟ್ಟಿಬಿಡುವ ಚಾತುರ್ಯ ಮತ್ತು ಕಲೆಗಾರಿಕೆ ಅವರದು. ಅವರು ಕಟ್ಟಿರುವ ನೂರಾರು ಹಾಡುಗಳ ಒಳಹೊಕ್ಕಾಗ ದಮನಿತರ ತಾತ್ವಿಕ ಲೋಕವೇ ಅನಾವರಣಗೊಂಡುಬಿಡುತ್ತದೆ. ಆ ಹಾಡುಗಳಲ್ಲಿ ಬದುಕಿನ ಬಗ್ಗೆ ಬೇಕಾದಷ್ಟು ಆಸಕ್ತಿಯಿದೆ. ವಾಸ್ತವ ಅನುಭವಕ್ಕೆ ಆಕಾರ ಕೊಡುವ ಅಸಲು ಕಲೆಯಿದೆ. ವಾಸ್ತವತೆಯನ್ನು ನೇರ ದೃಷ್ಟಿಯಿಂದ ನೋಡುವ ವಸ್ತುನಿಷ್ಠೆ ಅವುಗಳಲ್ಲಿದೆ. ಅನುಭವಗಳನ್ನು ಕೆದಕಿ ಕೆದಕಿ ನೋಡುವ ವಿಪರೀತ ಕುತೂಹಲ ತುಂಬಿತುಳುಕುತ್ತಿದೆ.

ಜತೆಗೆ ಭಾವಗಳ ಜತೆಗೆ ಬುದ್ಧಿಗಿತ್ತ ಪ್ರಾಧಾನ್ಯ ಮತ್ತು ಅನುಭವದ ನಿರೂಪಣೆಯಲ್ಲಿ ಪ್ರಾಮಾಣಿಕತೆ ಆ ಹಾಡುಗಳಲ್ಲಿ ಕಂಡುಬರುತ್ತವೆ. ಇವ್ಯಾವೂ ಶಿಷ್ಟ ಜಾತಿಗೆ ಸೇರಿದ ಹಾಡುಗಳಲ್ಲ. ಅವು ಅಚ್ಚ ಜನಪದ ಹಾಡುಗಳು. ಶೋಷಣೆಯ ಕುಲುಮೆಯಲ್ಲಿ ಬೆಂದು ಹತಾಶೆ, ಆಕ್ರೋಶಗಳ ಜತೆಗೆ ಭರವಸೆಯನ್ನು ಕೆಂಡದಂತೆ ಉಗುಳುವ ಈ ಹಾಡುಗಳು ಜಾನಪದ ಗಣಿಯೇ ಎನ್ನಬಹುದು. ಈ ಹಾಡುಗಳ ಕೇಳುತ್ತಿದ್ದ ನನಗೆ ದಲಿತ ಕವಿ ಡಾ. ಸಿದ್ಧಲಿಂಗಯ್ಯರವರ ಗುಡಿಸಲಿನಲ್ಲಿ ಅರಳುವ ಗುಲಾಬಿಯನ್ನು, ಬದುಕ ಪ್ರೀತಿಸುವ ಬಡವರ ಮಗಳನ್ನು ಕವಿತೆಯಾಗಿಸಿರುವ ‘ನನ್ನ ಕವಿತೆ’ ಎಂಬ ಕವಿತೆಯ ಸಾಲುಗಳು ನೆನಪಾದವು. ಈ ಹಳ್ಳಿಯ ಹಾಡುಗಳು ಕವಿಯ ಸಾಲುಗಳನ್ನೇ ಮತ್ತೊಂದು ದನಿಯಲ್ಲಿ ಹಾಡಿದಂತಿದೆ.

ಇಂತಹ ನೂರಾರು ಹಾಡುಗಳಲ್ಲಿ ನನ್ನನ್ನು ಬಹುವಾಗಿ ಕಾಡಿದ್ದು, “ಯಾಕವ್ವ” ಎಂಬ ಮೃದು ಮತ್ತು ಗಟ್ಟಿ ದನಿಯ ಹಾಡು. ಸಾಧಾರಣ ಜಾನಪದ ರಾಗದಲ್ಲಿ ಕಟ್ಟಿಕೊಂಡಿರುವ ಈ ಹಾಡು ಸಮಾಜದ ಕನ್ನಡಿಯೇ ಎನ್ನಬಹುದೇನೋ. ಒಬ್ಬಳ ಸಂಕಷ್ಟದಲ್ಲಿ ಮಿಂದು ಎದ್ದು ಬಂದಂತಹ ಈ ಹಾಡಿನಲ್ಲಿ ಕಣ್ಣೀರ ವ್ಯಥೆಯಿದೆ. ಆ ಕಣ್ಣೀರಿಗೆ ಕಾರಣವಾದ ವಾಸ್ತವವನ್ನು ನಮಗೆ ಕೇಳಿಸುತ್ತಲೇ ಆ ಕಣ್ಣೀರ ಒರೆಸಿ, ದೃಢ ವಿಶ್ವಾಸವು ಪುಟಿದೇಳುವಂತೆ ಮಾಡುವ ಮಾಂತ್ರಿಕತೆ, ರೋಷ ಆ ಹಾಡಿಗಿದೆ. ಜತೆಗೆ ಜೀವಪರವಲ್ಲದ ಅನ್ಯಾಯವನ್ನು ಧಿಕ್ಕರಿಸುವ ಧೈರ್ಯವನ್ನು ಈ ಹಾಡು ಪ್ರಕಟಿಸುತ್ತದೆ.

ಆದು ಕೇವಲ್ಲ ಹಾಡಲ್ಲ, ಹಾಡಿನ ರೂಪದಲ್ಲಿರುವ ಪ್ರತಿಭಟನೆಯೂ ಹೌದು. ಅನ್ಯಾಯವನ್ನು ಪ್ರತಿಭಟಿಸುತ್ತಲೇ ನ್ಯಾಯದ ಸಾಕಾರಕ್ಕೆ ಮಾರ್ಗ ತೋರಿಸುವ ಜೀವದನಿಯೂ ಹೌದು. ಯಾಕೋ ನಾನು ಕೇಳಿದ ನೂರಾರು ಹಾಡುಗಳಲ್ಲಿ ಇದು ಮಾತ್ರ ನನ್ನ ಮನದಲ್ಲಿ ತಳವೂರಿ ಕೂತು, ಆಗಾಗ ನನ್ನದೇ ಶೈಲಿಯಲ್ಲಿ ಧ್ವನಿತವಾಗುತ್ತಿದೆ. ಧ್ವನಿತವಾದ ಪ್ರತಿಯೊಂದು ಸಲವೂ ಹಾಡಿನ ಶರೀರದಿಂದ ಆತ್ಮಕ್ಕೆ ಹೋಗಲು ಮನಸ್ಸು ತವಕಿಸುತ್ತಿದೆ. ಹಾಡು ಕೇವಲ ಹಾಡಾಗಿರದೆ, ಅನುಭವದ ಕಥನವಾಗಿ ಮಿಡಿಯುತ್ತಿದೆ. ಹಾಡಿನ ಎದೆಯಲ್ಲಿ ಅಡಗಿರುವ ನಾನಾ ರೀತಿಯ ಆಯಾಮಗಳು. ಹೊಳಹು, ಹೊಸದೃಷ್ಟಿಗಳು ಗೋಚರವಾಗುತ್ತಿವೆ. ಪದಗಳು ಹೇಳುವುದನ್ನು ಹಾಡಿನ ಒಳಧ್ವನಿ ಮಿಡಿಯುತ್ತಿದೆ. ಬಡವರನ್ನು ಕ್ರೂರತನದಿಂದ ಹಿಂಸಿಸುವ ಮದುವೆಯ ಅತಿಯಾದ ಖರ್ಚು, ಬಡವರ ಅಸಹಾಯಕತೆ ಮತ್ತು ಅನಕ್ಷರತೆಯನ್ನು ಬಂಡವಾಳವಾಗಿಸಿಕೊಂಡು ತನ್ನ ಹೊಟ್ಟೆ ತುಂಬಿಸಿಕೊಳ್ಳುವ ಪರದೇಶಿ ಊರಗೌಡ, ತನಗಾದ ಮೋಸದ ಕುಲುಮೆಯಲ್ಲಿ ‘ತಿಳುವಳಿಕೆ’ಯನ್ನು ಬೇಯಿಸಿಕೊಳ್ಳುವ ಮಹಿಳೆ, ತಮ್ಮ ತಂಗಿಗಾದ ಅನ್ಯಾಯವನ್ನು ಕಂಡು ಹೋರಾಟ ಮಾಡಲು ಕರೆಕೊಡುವ ಮಹಿಳೆಯರು ಹೀಗೆ ನಾನಾ ರೀತಿಯ ಅಂತರಾರ್ಥ ನೀಡುವ ಯಾಕವ್ವಳ ಹಾಡನ್ನು ಕಲಿತು ಹೋದಕಡೆಯೆಲ್ಲಾ ಹಾಡಿ ಹೋರಾಟಕ್ಕೆ ಮುನ್ನಡಿ ಹಾಡಬೇಕೆಂಬ ಬಯಕೆ ನನ್ನನ್ನು ತುಂಬಿ ಕಾಡುತ್ತಿದೆ.

ಯಾಕವ್ವ ನನ್ ಗೆಳತಿ ಸಪಗ್ಯಾಕ ಕುಂತಿ
ದಳ ದಳ ಕಣ್ಣೀರವ ಸುರಸಿ/೨/
ನನ್ನ ಮಗಳ ಮದುವೆಗೆ ಗೌಡರ ಮನೆಗೆ ಹೋಗಿ
ಮುನ್ನೂರು ರುಪಾಯಿ ಸಾಲ ತೆಗೆಸಿ/೨/
ಮುನ್ನೂರು ರುಪಾಯಿಗೆ ಮೂರುವರೆ ಸಾವಿರ
ಲೆಕ್ಕ ಬರೆದಿಟ್ಟಾನ ಪರದೇಶಿ./೨/
ಹೇಳುವ ಮಾತಲ್ಲ, ಕೇಳುವ ಕತೆಯಲ್ಲ
ಸಮನ ಸಮಜನ ದಾರಿ ತೋರುವೆ/೨/
ಹೋರಾಟ ಮಾಡುತ್ತಾ ದನಿ ಎತ್ತಿ ಹಾಡುತ್ತಾ
ಮಹಿಳೆ ಸಂಘವ ಸೇರಿ ಹೋರಾಟ ಮಾಡುವ…/೨/
ಯಾಕವ್ವ……..

ಜೋವಿ

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram