ಕ್ರೈಸ್ತ ಸಮುದಾಯದಲ್ಲಿ ಸಂತ ವನಚಿನ್ನಪ್ಪರ ಬೇಡುದಲೆ

Advertisements
Share

‘ಸೇಂಟ್ ಪೌಲ್ ದ ಫಸ್ಟ್ ಹರ್ಮಿಟ್,’ ಕನ್ನಡ ಕ್ರೈಸ್ತರ ಬಾಯಲ್ಲಿ ವನ ಚಿನ್ನಪ್ಪರಾಗಿದ್ದಾರೆ. ‘ಪೌಲ್’ (ಗ್ರೀಕ್ ಭಾಷೆಯಲ್ಲಿ ‘ಪೌಲೋಸ್’, ಲ್ಯಾಟಿನ್ ಭಾಷೆಯಲ್ಲಿ ‘ಪೌಲುಸ್’ ಅಂದರೆ ಸಣ್ಣ, ಕಿರಿಯ, ಎಂಬ ಅರ್ಥವಿದೆ) ವಾನಪ್ರಸ್ಥ ಜೀವನವನ್ನು ನಡೆಸುತ್ತಿದ್ದುದರಿಂದ ಇವರನ್ನು ಹರ್ಮಿಟ್ ಎನ್ನುತ್ತಾರೆ. ಕ್ರೈಸ್ತ ಇತಿಹಾಸದಲ್ಲಿ ಇವರೇ ಪ್ರಪ್ರಥಮ ವಿರಕ್ತ. ಈ ಶ್ರೇಷ್ಠ ಸಂತನನ್ನು ನಮ್ಮ ನಾಡಿನ ಕ್ರೈಸ್ತ ವಿಶ್ವಾಸಿಗಳಿಗೆ ಪರಿಚಯಿಸಿದವರು ಕರ್ನಾಟಕಕ್ಕೆ ಆಗಮಿಸಿದ ಕ್ರೈಸ್ತ ಮಿಶನರಿ ಗುರುಗಳು. ಶ್ರೀಯುತ ಎಫ್ ಎಂ ನಂದಗಾವ್ ನೂರಾರು ವರ್ಷಗಳ ಹಿಂದೆ ಕ್ರೈಸ್ತ ಧರ್ಮ ಪ್ರಸಾರಕ್ಕೆ ಮೈಸೂರು ಸೀಮೆಗೆ ಬಂದಿದ್ದ ವಿದೇಶದ ಧರ್ಮಪ್ರಚಾರಕ ಪಾದ್ರಿಗಳಿಗೆ, ಈ ವನಚಿನ್ನಪ್ಪರ ಜೀವನ ಶೈಲಿ, ಈ ನೆಲದ ವಾನಪ್ರಸ್ಥ ಜೀವನ ಶೈಲಿ ಹಾಗೂ ಋಷಿಮುನಿಗಳ ದೇಹದಂಡನೆ, ಕಾಡುಮೇಡುಗಳಲ್ಲಿನ ಜೀವನಕ್ಕೆ ಸಮನಾಗಿ ಕಂಡಿರಬೇಕು ಎಂದಿದ್ದಾರೆ (ವನಚಿನ್ನಪ್ಪರ ಬೇಡುದಲೆ, ‘ಸುಧಾ’ವಾರಪತ್ರಿಕೆ, ೨೭ ಡಿಸೆಂಬರ್ ೧೯೯೮, ಪುಟ ೧೩). ೧೩೨೦ರಲ್ಲಿ ಡೊಮಿನಿಕ್ ಸಭೆಯ ಗುರುಗಳು ಕರ್ನಾಟಕಕ್ಕೆ ಆಗಮಿಸಿದ ಕಾಲದಲ್ಲಿಯೇ ಕ್ರೈಸ್ತ ಧರ್ಮ ಆನೇಕಲ್ ಪ್ರಾಂತ್ಯಕ್ಕೆ ಪ್ರವೇಶಿಸಿರಬಹುದು ಎಂಬುವುದು ಕೆಲವು ಇತಿಹಾಸಜ್ಞರ ಅಭಿಪ್ರಾಯ. ಆನೇಕಲ್‌ನ ಕ್ರೈಸ್ತರ ಪಿತೃವನದಲ್ಲಿರುವ ಪುಟ್ಟಗುಡಿಯೂ ಸಹ ಇವರ ಕಾಲದಲ್ಲಿಯೇ ನಿರ್ಮಾಣಗೊಂಡಿತು. ಡೊಮಿನಿಕ್ ಸಭೆಯವರು ವಿರಕ್ತ ಜೀವನಕ್ಕೆ ಪ್ರಾಮುಖ್ಯತೆ ನೀಡುವವರಾದ್ದರಿಂದ, ವನಚಿನ್ನಪ್ಪರು ಸಹ ಇವರಿಗೆ ಪ್ರೇರಣೆಯಾಗಿದ್ದಿರಬಹುದು.

 ಡೆಸಿಯಾಸ್ ಮತ್ತು ವಲೇರಿಯನ್ ಎಂಬ ರೋಮ್ ಚಕ್ರವರ್ತಿಗಳು ಕ್ರೈಸ್ತ ಸಮುದಾಯವನ್ನು ಹಿಂಸಿಸುತ್ತಿದ್ದ ಸಂದರ್ಭದಲ್ಲಿ, ಈಜಿಪ್ಟ್ ಮತ್ತು ಥೇಬ್ಸ್ ಗಳಲ್ಲಿದ್ದ ದೇವಾಲಯಗಳು ಸಹ ನಾಶವಾದವು. ಅಂದಿನ ಕ್ರೈಸ್ತ ವಿಶ್ವಾಸಿಗಳು ಪ್ರಾಣಭಯದಲ್ಲಿ ಜೀವಿಸುತ್ತಿರಲಿಲ್ಲ. ಕ್ರಿಸ್ತನಿಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ಆ ಜನತೆ ಕ್ರಿಸ್ತನಿಗಾಗಿ ರಕ್ತಸಾಕ್ಷಿಗಳಾಗುವ ಅವಕಾಶಕ್ಕಾಗಿ ಹಾತೊರೆಯುತ್ತಿದ್ದರು. ಥೇಬ್ಸ್ ನಲ್ಲಿ ನಡೆಯುತ್ತಿದ್ದ ಘೋರವಾದ ಹಿಂಸೆಯ ಸಂದರ್ಭದಲ್ಲಿ ವನಚಿನ್ನಪ್ಪ ತನ್ನ ತಂದೆತಾಯಂದಿರನ್ನು ಕಳೆದುಕೊಂಡ ನಂತರ ಅನೇಕ ಕಷ್ಟಕಾರ್ಪಣ್ಯಗಳಿಗೆ ತುತ್ತಾಗಿ, ಪ್ರಾಪಂಚಿಕ ಜೀವನದಿಂದ ಬೇಸತ್ತು ಎಳೆ ವಯಸ್ಸಿನಲ್ಲಿಯೇ ವನದಲ್ಲಿದ್ದ ಒಂದು ಬಿಡಾರಕ್ಕೆ ಹೊರಟುಹೋದರು. ಕ್ರಮೇಣ ವಾನಪ್ರಸ್ಥ ಜೀವನವನ್ನು ಬಯಸಿ ಈಜಿಪ್ತಿನ ಅರಣ್ಯಪ್ರದೇಶದ ಗುಹೆಯೊಂದರಲ್ಲಿ ಮಠವಾಸಿಯಾಗಿ ಜೀವನ ನಡೆಸಲು ಆರಂಭಿಸಿದರು. ತನ್ನ ಮುಂದಿನ ಜೀವನವನ್ನು ಉಪವಾಸ ಮತ್ತು ದೇವರ ಧ್ಯಾನದಲ್ಲಿ ಕಳೆದರು. ಈಚಲಮರದ ಎಲೆಗಳನ್ನು ಮತ್ತು ಮರದ ತೊಗಟೆಯನ್ನು ವಸ್ತ್ರವಾಗಿ ಸುತ್ತಿಕೊಂಡು ದೇವರಲ್ಲಿ ಸಂಪೂರ್ಣ ವಿಶ್ವಾಸವಿರಿಸಿ ಜೀವನ ಸಾಗಿಸಿದರು.

 ಮತ್ತೊಬ್ಬ ಮಠವಾಸಿ ಸಂತ ಅಂತೋಣಿ ಎಂಬುವವರು ತಾವೇ ಪ್ರಪ್ರಥಮ ಮಠವಾಸಿ ಎಂದುಕೊಂಡಿದ್ದರು. ಆದರೆ ಅವರ ಕನಸಿನಲ್ಲಿ ತನಗಿಂತ ಶ್ರೇಷ್ಠ, ಹಿರಿಯ ಮಠವಾಸಿಯೊಬ್ಬನು ಬೇರೊಂದೆಡೆ ವಾಸಿಸುತ್ತಿದ್ದಾರೆ ಎಂಬ ದೈವವಾಣಿಯನ್ನು ನಂಬಿ ದಿಕ್ಕು ದಿಸೆಯಿಲ್ಲದೆ ಕಾಡು ಮೇಡುಗಳನ್ನು ದಾಟಿ, ವನಚಿನ್ನಪ್ಪರ ದರುಶನಕ್ಕಾಗಿ ಹೊರಟಾಗ ಹಾದಿಯಲ್ಲಿ ವಿವಿಧ ಆಧ್ಯಾತ್ಮಿಕ ಅನುಭವಗಳನ್ನು ಪಡೆದರು. ದೇವರಲ್ಲಿ ಎನಗೆ ವಿಶ್ವಾಸವಿದೆ, ಇಂದಲ್ಲ ನಾಳೆಯಾದರೂ ದೇವರು ನನಗೆ ದಾರಿ ತೋರುವರು ಎಂಬ ನಂಬಿಕೆಯಲ್ಲಿ ಮುಂದೆ ಸಾಗುತ್ತಾರೆ. ಸಂತ ವನಚಿನ್ನಪ್ಪರು ಕೊನೆಯುಸಿರೆಳೆಯುವ ಹಂತದಲ್ಲಿರುವಾಗ ಗುಹೆಯೊಂದರಲ್ಲಿ ಅವರ ದರುಶನ ಪಡೆಯುತ್ತಾರೆ. ಒಂದೆಡೆ ವನಚಿನ್ನಪ್ಪರ ದರ್ಶನ ಪಡೆದ ಸಂತೋಷ, ಮತ್ತೊಂದೆಡೆ ಅವರ ಸಾವಿನ ದುಃಖ ಅವರನ್ನು ಕಾಡುತ್ತದೆ. ಅವರ ಅಂತಿಮ ಕ್ರಿಯೆಗಾಗಿ ಸಮಾಧಿ ತೋಡಲು ಸಿಂಹವೊಂದು ನೆರವಾಯಿತಂತೆ.

ಕನ್ನಡ ಕ್ರೈಸ್ತರು ಸಂತ ವನಚಿನ್ನಪ್ಪರ ಬೇಡುದಲೆಯನ್ನು ಆಚರಿಸುತ್ತಾರೆ. (ಬೇಡುದಲೆಯು ತಮಿಳು ಭಾಷೆಯ ‘ವೇಂಡುದಲ್’ನಿಂದ ಬಂದುದಾಗಿದೆ ಅಂದರೆ – ಬೇಡಿಕೆಗಳು ಅಥವಾ ಕೋರಿಕೆ ಎಂಬ ಅರ್ಥದಲ್ಲಿ ಈ ಪದವನ್ನು ಬಳಸಲಾಗುತ್ತದೆ) ಬೆಳೆಹಾನಿ ಮತ್ತು ಜಾನುವಾರುಗಳು ಕಾಯಿಲೆಗಳಿಗೆ ತುತ್ತಾಗುವಂತಹ ತೊಂದರೆಗಳಿಂದ ಪಾರಾಗಲು ಈ ಸಂತನಿಗೆ ಬೇಡುದಲೆಯನ್ನು ಅರ್ಪಿಸುತ್ತಾರೆ. ಆಪತ್ತಿನ ಕಾಲದಲ್ಲಿ ಈ ಸಂತರ ನೆರವನ್ನು ಬೇಡಿಕೊಂಡರೆ ಕಷ್ಟಗಳು ದೂರವಾಗುವವು ಎಂಬ ಆಳವಾದ ನಂಬಿಕೆ ಈ ಜನರಲ್ಲಿ ಬೇರೂರಿದೆ.

ಗ್ರಾಮೀಣ ಪ್ರದೇಶಗಳಾದ ಬೆಂಗಳೂರಿನ ಆನೇಕಲ್, ಹಾರೋಬೆಲೆ, ಮೈಲಸಂದ್ರ, ವಿ. ನಾಗೇನಹಳ್ಳಿ, ಕಮ್ಮನಹಳ್ಳಿ ಮತ್ತು ಮೈಸೂರಿನಲ್ಲಿರುವ ನಾಗನಹಳ್ಳಿ, ದೋರನಹಳ್ಳಿ ಹಾಗೂ ಕರ್ನಾಟಕದ ಇನ್ನಿತರ ಗ್ರಾಮೀಣ ಪ್ರದೇಶಗಳಲ್ಲಿಯೂ – ವನಚಿನ್ನಪ್ಪರ ಬೇಡುದಲೆ/ಹಬ್ಬವನ್ನು ನಡೆಸುತ್ತಾರೆ.

ಐತಿಹಾಸಿಕ ದಾಖಲೆಗಳ ಅಭಾವದಿಂದಾಗಿ ಕನ್ನಡನಾಡಿನಲ್ಲಿ ವನಚಿನ್ನಪ್ಪರಿಗೆ ಬೇಡುದಲೆಯ ಸಂಪ್ರದಾಯ ಯಾವಾಗ ಆರಂಭಗೊಂಡಿತೆಂಬುದನ್ನು ಖಚಿತವಾಗಿ ಹೇಳುವುದು ಸಾಧ್ಯವಿಲ್ಲ.  ಆದರೆ ಈ ಜನಪ್ರಿಯ ಭಕ್ತಿಯ ಹಿಂದೆ ದೀರ್ಘವಾದ ಒಂದು ಆಧ್ಯಾತ್ಮಿಕ ಅನುಭವದ ಹಿನ್ನೆಲೆ ಇರುವುದು ನಿಜ.

ಆನೇಕಲ್’ ಹಳೆಯ ಕ್ರೈಸ್ತ ಕೇಂದ್ರಗಳಲ್ಲಿ ಒಂದು. ಪ್ರಸ್ತುತ ಬೆಂಗಳೂರು ಕಥೋಲಿಕ ಮಹಾಧರ್ಮಕ್ಷೇತ್ರದ ವಿಚಾರಣೆಯಾಗಿದೆ.  ಇಲ್ಲಿನ ಕ್ರೈಸ್ತ ಭಕ್ತಾದಿಗಳು ಪ್ರತಿವರ್ಷವೂ ಜನವರಿ ೧೫ರಂದು ಸಂತ ವನಚಿನ್ನಪ್ಪರ ಹಬ್ಬವನ್ನು ಅತೀ ವಿಜೃಂಭಣೆಯಿಂದ ಕೊಂಡಾಡುತ್ತಾರೆ. ಇಲ್ಲಿನ ಕ್ರೈಸ್ತ ಸಮುದಾಯದ ಅಭಿಪ್ರಾಯದಂತೆ ೧೯೫೧ರಿಂದೀಚೆಗೆ ಆನೇಕಲ್ ಕ್ರೈಸ್ತ ಪಿತೃವನದಲ್ಲಿರುವ ಸಂತ ವನಚಿನ್ನಪ್ಪರ ಗುಡಿಯ ಬಳಿ ಈ ಹಬ್ಬವು ಅಂದಿನ ಧರ್ಮಗುರುಗಳಾದ ವಂದನೀಯ ಕೊಲಾಸೊರವರ ನೇತೃತ್ವದಲ್ಲಿ ಆರಂಭವಾಯಿತು. ಹಬ್ಬದ ಬಾಹ್ಯಾಚರಣೆಯಲ್ಲಿ ಅನೇಕ ಬದಲಾವಣೆಗಳು ಕಂಡು ಬಂದಿವೆಯಾದರೂ, ವನಚಿನ್ನಪ್ಪರಲ್ಲಿ ಇವರಿಗಿರುವ ಭಕ್ತಿ, ಕಿಂಚಿತ್ತು ಕ್ಷೀಣವಾಗಿಲ್ಲ. ಬೇರೆ ಊರುಗಳಲ್ಲಿರುವ ನೆಂಟರಿಷ್ಟರು, ಮಕ್ಕಳು ತಮ್ಮ ತವರು ಮನೆಗೆ ಆಗಮಿಸಿ ಸಂಭ್ರಮಿಸುತ್ತಾರೆ. ಕುಟುಂಬದಲ್ಲಿ ಅನ್ಯೋನ್ಯತೆಯ ಭಾವನೆ ಹೆಚ್ಚಿಸಲು ಈ ಹಬ್ಬದ ಸಂದರ್ಭ ಅವಕಾಶ ಕಲ್ಪಿಸುತ್ತದೆ.

ಈ ಆಚರಣೆಯ ಕೇಂದ್ರಬಿಂದು ಬಲಿಪೂಜೆ. ಕ್ರೈಸ್ತರ ಆರಾಧನಾ ವಿಧಿಗಳಲೆಲ್ಲಾ ಶ್ರೇಷ್ಠವಾದ ಕ್ರಿಸ್ತನ ಕಡೆಯ ಭೋಜನವನ್ನು ಸ್ಮರಿಸುವ ‘ಬಲಿಪೂಜೆ’ಯನ್ನು ಯೇಸುವಿನ ಪ್ರತಿನಿಧಿ  ಕ್ರೈಸ್ತಗುರು ಪವಿತ್ರ ಪೀಠದ ಮೇಲೆ ಅರ್ಪಿಸುವಾಗ ಕ್ರೈಸ್ತ ಭಕ್ತರೆಲ್ಲರು ಒಂದೇ ಕುಟುಂಬದ ಸದಸ್ಯರಂತೆ ಒಟ್ಟಾಗಿ ಪ್ರಾರ್ಥಿಸುತ್ತಾರೆ. ಭಕ್ತಿಗೀತೆಗಳನ್ನು ಹಾಡುವ ಗಾಯನವೃಂದವು ಗೀತೆಗಳನ್ನು ಹಾಡುತ್ತಾ ನೆರೆದಿರುವ ಭಕ್ತಾದಿಗಳೊಂದಿಗೆ ಪ್ರಾರ್ಥಿಸುವರು. ದಿವ್ಯ ಬಲಿಪೂಜೆಯು – ಪ್ರವೇಶವಿಧಿ, ದೇವವಾಕ್ಯದ ವಿಧಿ, ಕಾಣಿಕೆಯ ವಿಧಿ, ಪರಮಪ್ರಸಾದದ ವಿಧಿ ಎಂಬ ನಾಲ್ಕು ಹಂತಗಳಲ್ಲಿ ಭಕ್ತಿಪೂರ್ವಕವಾಗಿ ನಡೆಯುವುದು.

ಕ್ರೈಸ್ತ ಸಮುದಾಯದವರೇ ಸೇರಿ ಸಿದ್ಧಪಡಿಸಿದ ಬೇಡುದಲೆಯ ಊಟವನ್ನು ಬಲಿಪೂಜೆಯ ಬಳಿಕ ಗುರುಗಳು ಪವಿತ್ರ ನೀರನ್ನು ಚಿಮುಕಿಸಿ ಪ್ರಾರ್ಥಿಸುವರು. ಭಕ್ತಾದಿಗಳು ಪ್ರತಿಯೊಬ್ಬರೂ ಈ ಭೋಜನವನ್ನು ಸಂತ ವನಚಿನ್ನಪ್ಪರ ಪ್ರಸಾದವೆಂದು ಸ್ವೀಕರಿಸುತ್ತಾರೆ. ಹಳೆಯಕಾಲದಲ್ಲಿ ಪಲ್ಲಕ್ಕಿಯನ್ನು ಹೋಲುವ ಹೂವಿನ ತೇರಿನ ಮೇಲೆ ವನಚಿನ್ನಪ್ಪರ ಸ್ವರೂಪವಿರಿಸಿ ಹೆಗಲ ಮೇಲೆ ಹೊತ್ತುಕೊಂಡು ಕಂದಿಲು ಬೆಳಕಿನಲ್ಲಿ ಕ್ರೈಸ್ತ ಭಕ್ತರೆಲ್ಲರೂ ಪೇಟೆ ಬೀದಿಯಲ್ಲಿ ಮೆರವಣಿಗೆಯಲ್ಲಿ ಸಾಗುತ್ತಾ ಪ್ರಾರ್ಥನೆ, ಜಪಸರ ಮತ್ತು ಭಕ್ತಿಗೀತೆಗಳನ್ನು ಹಾಡುತಿದ್ದರು. ಆರ್ಥಿಕ, ಸಾಂಸ್ಕೃತಿಕ ಹಾಗೂ ವೈಜ್ಞಾನಿಕ ಜಗತ್ತು ಕಂಡಿರುವ ಬದಲಾವಣೆಗಳಿಂದಾಗಿ, ಹೆಗಲಮೇಲೆ ಹೊರಲಾಗುತ್ತಿದ್ದ ತೇರು ಇಂದು ಹೂವು ಮತ್ತು ದೀಪಾಲಂಕೃತ ವಾಹನದ ರೂಪ ತಳೆದಿದೆ. ಮೆರವಣಿಗೆ ಹಬ್ಬದ ಕೊನೆಯ ಭಾಗವಾದರೂ, ಇಲ್ಲಿ ಸಂಭ್ರಮ, ಭಕ್ತಿ, ಆರಾಧನೆಯ ಅಂಶಗಳು ಎದ್ದು ಕಾಣುವುವು.  ಕಷ್ಟಗಳ ಪರಿಹಾರಕ್ಕಾಗಿ ಹರಕೆಹೊತ್ತ ಭಕ್ತಾದಿಗಳು  ವನಚಿನ್ನಪ್ಪರ ತೇರಿನ ಮೇಲೆ ಉಪ್ಪು, ಕರಿಮೆಣಸು, ಹುರಿಗಡಲೆ ಇತ್ಯಾದಿಗಳನ್ನು ಚೆಲ್ಲುತ್ತಾ ತಮ್ಮ ಮನದೊಳಗೆ ಪರಿಹಾರಕ್ಕಾಗಿ ವನಚಿನ್ನಪ್ಪರಲ್ಲಿ ಆಧ್ಯಾತ್ಮಿಕ ಸಹಾಯವನ್ನು ಬೇಡಿಕೊಳ್ಳುತ್ತಾರೆ. ಕೆಲವು ಹಳ್ಳಿಗಳಲ್ಲಿ ಮೆರವಣಿಗೆಯಲ್ಲಿರುವ ಭಕ್ತಾದಿಗಳಿಗೆ ಮಜ್ಜಿಗೆ ವಿತರಿಸುವ ಹರಕೆಯನ್ನು ಮಾಡುವವರು ಇದ್ದಾರೆ.

ಆನೇಕಲ್‌ನ ಕ್ರೈಸ್ತ ಭಕ್ತಾದಿಗಳಲ್ಲಿ ಕಂಡುಬರುವ ಮತ್ತೊಂದು ವಿಶೇಷತೆ, ಇಲ್ಲಿನ ಅನೇಕ ಮಂದಿ ಹಿರಿಯರು ತಮ್ಮ ಮಕ್ಕಳಿಗೆ ‘ಚಿನ್ನಪ್ಪ’ ಎಂದು ನಾಮಕರಣಮಾಡಿದ್ದಾರೆ. ಕನ್ನಡದ ಕ್ರೈಸ್ತ ಭಕ್ತರಿಗೆ ಸಂತ ವನಚಿನ್ನಪ್ಪ ಓರ್ವ ಆಧ್ಯಾತ್ಮಿಕ ದೂತ. ತಮ್ಮ ಪರವಾಗಿ ದೇವರಲ್ಲಿ ಬೇಡುವರು ಎಂಬ ದೃಢನಂಬಿಕೆ ಇಲ್ಲಿನ ಭಕ್ತರ ಮನಗಳಲ್ಲಿ ಬೇರೂರಿದೆ. 

 ಫಾದರ್ ಮೆಲ್ವಿನ್ ಲೋಬೊ ಯೇ.ಸ.

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram