
ಭಾರತದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವವನ್ನುರಾಷ್ಟ್ರೀಯ ಯುವದಿನ ಎಂದು ರಾಷ್ಟ್ರದಾದ್ಯಂತ ಜನವರಿ 12ರಂದು ಆಚರಿಸುತ್ತಾರೆ. 1984ರಲ್ಲಿ ಭಾರತ ಸರ್ಕಾರವು ಮೊಟ್ಟಮೊದಲಿಗೆ ಸ್ವಾಮಿ ವಿವೇಕಾನಂದರ ಜನ್ಮದಿನವನ್ನುರಾಷ್ಟ್ರೀಯ ಯುವದಿನ ಎಂದುಅಧಿಕೃತವಾಗಿ ಘೋಷಿಸಿತು. ಅಂದಿನಿಂದ ಪ್ರತಿವರ್ಷ ಭಾರತದಲ್ಲಿ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತಿದೆ.
ಶಾಲಾ-ಕಾಲೇಜುಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಾಗೂ ವಿವಿಧ ಸಂಘ ಸಂಸ್ಥೆಗಳು ಯೋಗ ಶಿಬಿರಗಳನ್ನು ಹಮ್ಮಿಕೊಳ್ಳುವುದರ ಜತೆಗೆ ಸ್ವಾಮಿ ವಿವೇಕಾನಂದರ ಸಾಹಿತ್ಯ ಅವಲೋಕನಮಾಡುವುದರ ಮೂಲಕ ಭಾರತದಲ್ಲಿ ರಾಷ್ಟ್ರೀಯ ಯುವದಿನವನ್ನು ಆಚರಿಸಲಾಗುತ್ತದೆ.ಈ ಹಿನ್ನೆಲೆಯಲ್ಲಿ ಭಾರತದ ಪ್ರಜೆಗಳಾದ ನಾವು ಇದರ ಮಹತ್ವವನ್ನು ಅರಿತುಕೊಳ್ಳುವುದು ಸಮಂಜಸವೆನಿಸುತ್ತದೆ.
ವಾಸ್ತವವಾಗಿ ಸ್ವಾಮಿ ವಿವೇಕಾನಂದರು ಆಧುನಿಕ ಮಾನವರ ಆದರ್ಶ ಪ್ರತಿನಿಧಿ. ಹೆಚ್. ಎನ್ ಸೋಮಸುಂದರಂ ಅವರ ಸ್ವಾಮಿ ವಿವೇಕಾನಂದರ ಸಾಮಾಜಿಕ ಚಿಂತನೆಗಳು ಎಂಬ ಲೇಖನದಲ್ಲಿ ಅವರ ವ್ಯಕ್ತಿತ್ವದ ಬಗ್ಗೆ ಬಹಳ ಸೊಗಸಾಗಿ ಹೀಗೆ ವಿವರಿಸುತ್ತಾರೆ. “ನಮ್ಮ ಭಾರತದ ಇತಿಹಾಸ ದಿಗಂತದಲ್ಲಿ ಸ್ವಾಮಿ ವಿವೇಕಾನಂದರು ತೇಜೋ ರಾಶಿಯಿಂದ ಪ್ರಜ್ವಲಿಸುತ್ತಿರುವ ತಾರೆ. ಒಮ್ಮೊಮ್ಮೆ ಒಂದೊಂದು ವರ್ಣದಲ್ಲಿ ಒಂದೊಂದು ಕಾಂತಿಯಲ್ಲಿ, ತಾರೆ ಬೆಳಗುವಂತೆ ಸ್ವಾಮಿ ವಿವೇಕಾನಂದರ ದಿವ್ಯ ವ್ಯಕ್ತಿತ್ವ ಬಗೆಬಗೆಯಾಗಿ ನಮಗೆ ಗೋಚರಿಸುತ್ತದೆ. ಎಲ್ಲಿಯೋ ನಿಶಬ್ದದ ಗುಹೆಗಳಲ್ಲಿ, ಜುಳುಜುಳು ಹರಿಯುವ ನದಿ ತೀರಗಳಲ್ಲಿ, ಎಲೆಗಳ ಮರ್ಮರದ ಕಾನನಗಳಲ್ಲಿ, ಹಕ್ಕಿಗಳ ಇಂಚರದ ಗಿರಿಕಂದರಗಳಲ್ಲಿ, ಮೂಡಿದ ಅಮೂಲ್ಯ ಜ್ಞಾನವನ್ನು ಬೊಗಸೆ ಬೊಗಸೆಯಾಗಿ ಸಾಮಾನ್ಯ ಜನಕ್ಕೆ, ಭಾರತವಷ್ಟೇ ಅಲ್ಲದೆ ವಿಶ್ವದ ಮೂಲೆ ಮೂಲೆಗೆ ಹಂಚಲು ಹವಣಿಸಿದ ದಿವ್ಯ ಪ್ರತಿಭೆ ಸ್ವಾಮಿ ವಿವೇಕಾನಂದರು”.
ಇಂತಹ ದಿವ್ಯ ವ್ಯಕ್ತಿತ್ವದಿಂದ ಇಂದಿನ ಯುವ ಪೀಳಿಗೆ ಆಧ್ಯಾತ್ಮಿಕ ಅಂತರವಲೋಕನ ಅಂದರೆ ಕುವೆಂಪುರವರ ವಿಶ್ವಮಾನವ ತತ್ವಗಳ ಬಗ್ಗೆ ಚಿಂತನೆ, ನಿರ್ಮಲ ಸಮಾಜಿಕ ಚಿಂತನೆ, ಸಾಮಾಜಿಕ ರಾಜಕೀಯ ಜವಾಬ್ದಾರಿಗಳುಇವುಗಳ ಬಗ್ಗೆ ಮುಕ್ತವಾಗಿ ಚಿಂತಿಸುವುದು ದೇಶದ ಪ್ರಗತಿಯ ಹಿತದೃಷ್ಟಿಯಿಂದ ಅನಿವಾರ್ಯವೆನಿಸುತ್ತದೆ.ಯಾವುದೇ ರಾಷ್ಟ್ರವು ಪ್ರಗತಿಯ ಶಿಖರವನ್ನು ಏರಬೇಕಾದರೆ, ಅದಕ್ಕೆ ಯುವ ಶಕ್ತಿಯ ಕೊಡುಗೆ ಬಹಳ ಅಮೂಲ್ಯವಾದದ್ದು. ಆದ್ದರಿಂದಲೇ ಭಾರತ ಸರ್ಕಾರವು ತನ್ನ ಯುವಜನತೆಯನ್ನು ಸ್ವಾಮಿ ವಿವೇಕಾನಂದರ ಬಗ್ಗೆ ವ್ಯಕ್ತಿತ್ವದ ಮುಖಾಂತರ ಸದೃಢ ಹಾಗೂ ಸಂಸ್ಕಾರವಂತ, ವೈಜ್ಞಾನಿಕ ಹಾಗೂ ವಿಚಾರವಂತ ಚಿಂತನೆಗಳನ್ನು ಇಂದಿನ ಯುವಪೀಳಿಗೆಗೆ ಅನುಮೋದಿಸಿ ಸದೃಢ ರಾಷ್ಟ್ರದ ಚಿಂತನೆಯ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ.
ಈ ನಿಟ್ಟಿನಲ್ಲಿ, ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿರುವ ಸುಂದರ ದೇಶವಾದ ಭಾರತದ ಪ್ರಜೆಗಳಾದ ನಾವು ಸ್ವಾಮಿ ವಿವೇಕಾನಂದರ ಕೆಲವು ಆದರ್ಶಗಳನ್ನು ಮೆಲುಕು ಹಾಕುವುದು ಸೂಕ್ತವೆನಿಸುತ್ತದೆ.
1. ಧರ್ಮದಲ್ಲಿ ಮಾನವೀಯತೆ.
ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಸಭಾಸದರನ್ನು ಉದ್ದೇಶಿಸಿ ಸಂಬೋಧಿಸಿದ ಕ್ರಮವೇ ನಿಜವಾದ ಧರ್ಮದ ವ್ಯಾಖ್ಯಾನವಾಗಿದೆ. ವಿವೇಕಾನಂದರು ಅಮೆರಿಕದ ತನ್ನ ಸಹೋದರ ಸಹೋದರಿಯರೇ ಎಂದು ಸಂಬೋಧಿಸಿ, ಆ ಮಹಾಸಭಾಸದರ ಹೃದಯವನ್ನು ಗೆದ್ದುಬಿಟ್ಟರು. ಯಾವ ಧರ್ಮ ಜಗತ್ತಿನ ಜನತೆಯನ್ನು ಕೇವಲ ಸ್ತ್ರೀಪುರುಷರು ಮಾತ್ರವೆಂದು ನೋಡದೆ ಅವರನ್ನು ತನ್ನ ಸಹೋದರ-ಸಹೋದರಿಯರು ಎಂದು ಕಾಣುವ ಒಂದು ನಿಲುವನ್ನು ಪಡೆದುಕೊಂಡಿದೆಯೋ, ಅದು ನಿಜವಾಗಿಯೂ ಮಹತ್ತಾದ ಧರ್ಮ ಎಂಬ ಸತ್ಯ ಆ ಸಮ್ಮೇಳನದ ಜನಾಂತರಂಗವನ್ನು ಸ್ಪರ್ಶಿಸಿ ಬಿಟ್ಟಿತು. ತಮ್ಮ ತಮ್ಮ ಧರ್ಮಗಳೇ ಶ್ರೇಷ್ಠವೆಂದು ತಿಳಿದು ಅದನ್ನು ಪ್ರತಿಪಾದಿಸುವ ಮುಖ್ಯ ಉದ್ದೇಶವಾಗಿದ್ದ ಜನಪ್ರತಿನಿಧಿಗಳ ನಡುವೆ, ಧರ್ಮವೆಂಬುದು ಮನುಷ್ಯ-ಮನುಷ್ಯರ ನಡುವೆ ನಿಜವಾದ ಬಾಂಧವ್ಯಗಳನ್ನು ಗುರುತಿಸುವ ಸಾಧನ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಇದಲ್ಲದೆ ನಾವು ಸರ್ವಮತ ಸಹಿಷ್ಣುತೆಯನ್ನು ಒಪ್ಪುತ್ತೇವೆ, ಅಷ್ಟೇ ಅಲ್ಲದೆ ಸಕಲ ಧರ್ಮಗಳೂ ಸತ್ಯವೆಂದು ನಂಬುತ್ತೇವೆ. ಭಿನ್ನ ಭಿನ್ನ ನೆಲೆಗಳಿಂದ ಹುಟ್ಟಿದ ನದಿಗಳು ಬೇರೆ ಬೇರೆ ದಿಕ್ಕುಗಳಿಗೆ ಹರಿದರು ಕಡೆಗೆ ಅವೆಲ್ಲ ಕಡಲನ್ನು ಸೇರುವಂತೆ, ಈ ಜಗತ್ತಿನ ಮನುಷ್ಯರು ಅನುಸರಿಸುವ ವಿವಿಧ ಪಥಗಳೆಲ್ಲವೂ ಕಡೆಗೆ ಒಬ್ಬನೇ ಆದ ಪರಮಾತ್ಮನನ್ನು ಸೇರುತ್ತದೆಎಂಬ ನಿಲುವು ವಿಶ್ವವನ್ನೇ ದಿಗ್ಭ್ರಮೆಗೊಳಿಸಿತು. ಧರ್ಮವು ಕೇವಲ ಮುಕ್ತಿ ಸಾಧನ ವಾಗಲಿ ಕೇವಲ ಗೊಡ್ಡುಆಚರಣೆಗಳ ಸಂಗ್ರಹ ವಾಗಲಿ ಆಗಿ ಉಳಿಯದೆ ಅದು ಸಾಮಾಜಿಕ ಸ್ಥಿತಿಗತಿಗಳಿಗೆ ಸ್ಪಂದಿಸುವಂತೆ ಮಾಡಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ.
2. ಸಾಮಾಜಿಕ ಸಮಾನತೆ.
ಸಾಮಾಜಿಕ ಅಸಮಾನತೆ ಅಸ್ಪೃಶ್ಯತೆ ಮತ್ತು ಶೋಷಣೆಗಳ ಗೊಂದಲಮಯ ಜಗತ್ತಿನಲ್ಲಿ ಸ್ವಾಮಿ ವಿವೇಕಾನಂದರ ಜೀವಿಸಿದ್ದು. ವೇದಾಂತವನ್ನು ಚಿನ್ನದ ಪೆಟ್ಟಿಗೆಯಲ್ಲಿ ಬೀಗ ಹಾಕಿ ಇಟ್ಟು ಅದನ್ನು ಕೆಲವೇ ಅಧ್ಯಾತ್ಮಿಕ ಸಾಧನೆಗಳಲ್ಲಿ ಬಳಸಿಕೊಳ್ಳುತ್ತಿದ್ದ, ಅದ್ವೈತ ಬಹು ಕ್ಲಿಷ್ಟ, ಜನಸಾಮಾನ್ಯರಿಂದ ಅದು ದೂರ ಎಂಬ ನಂಬಿಕೆ ಬಲವಾಗಿ ಬೇರೂರಿದ್ದ ಕಾಲದಲ್ಲಿ ಬರಿಯ ಸಾಧಕರು ಮಾತ್ರವಲ್ಲದೆ ಬಡವ-ಬಲ್ಲಿದ, ಬೆಸ್ತ, ಚಮ್ಮಾರರು, ಮೊದಲುಗೊಂಡು ಎಲ್ಲರ ಬಾಗಿಲಿಗೂ ಈ ಅಮರ ಸಂದೇಶವನ್ನು ತಲುಪಿಸಿದ ಧೀರ ವೇದಾಂತಿ ಸ್ವಾಮಿವಿವೇಕಾನಂದರು ತನ್ಮೂಲಕ ಸಮಾಜದ ಮಾನವ ಜನಾಂಗದ ಏಕತೆಯನ್ನು ಸರಿ ಸಮಾನತೆಯನ್ನು ಉಚ್ಚಕಂಠದಲ್ಲಿ ಸಾರಿದರು.
3.ಸಮುದಾಯ ಜಾಗೃತಿ.
ಸ್ವಾಮಿ ವಿವೇಕಾನಂದರು ಲಕ್ಷಾಂತರ ಕೆಳವರ್ಗದ ಬಡಜನತೆಯ ಒಂದು ದೇಶದ ಜೀವಾಳ ಎಂದು ಗುರುತಿಸುತ್ತಾರೆ. ಅವರೇ ಉತ್ಪಾದನಕಾರರು, ದೇಶವನ್ನು ನಡೆಸುವವರು, ಆದರೆ ಅವರೇ ಶೋಷಿತರು, ತುಳಿಯಲುಪಡುತ್ತಿರುವವರು! ಮಾನವತ್ವವೇ ಇಲ್ಲದೆ ಪಶುಗಳಿಗಿಂತ ಹೀನವಾಗಿ ಅವರನ್ನು ನಡೆಸಿಕೊಳ್ಳಲಾಗುತ್ತಿದೆ ಇದಕ್ಕೆ ಕಾರಣ ನಾವೇ. ಇದಕ್ಕೆ ಧರ್ಮವನ್ನು ದೂಷಿಸಲು ಆಗದು. ನಿಜವಾಗಿಯೂ ಧರ್ಮವು ಜೀವಿಗಳ ಏಕತ್ವವನ್ನು ಸಾರುವುದು. ಹೃದಯ ಹೀನತೆಯಿಂದ ಈ ಗತಿ ಬಂದಿದೆ. ಆದ್ದರಿಂದ ಜನ ಸಮುದಾಯದ ಉದ್ಧಾರಕ್ಕೆ ವಿವೇಕಾನಂದರು ಕೊಡುವ ದಿವ್ಯ ಮಂತ್ರವೆಂದರೆ ಅವರೊಳಗೆ ಕಳೆದುಹೋಗಿರುವ ವ್ಯಕ್ತಿತ್ವವನ್ನು ಮತ್ತೆ ಎಬ್ಬಿಸುವುದು. ಹೀಗೆ ಸ್ವಾಮಿ ವಿವೇಕಾನಂದರ ಸಾಮಾಜಿಕ ಚಿಂತನಾಲಹರಿ ಬಹುದಾರಿಗಳ ವಾಹಿನಿ ಅತ್ಯಂತ ಉನ್ನತ ಆಧ್ಯಾತ್ಮ ಅನುಭವಗಳ ಧಾರ್ಮಿಕ ಭೋಧೆಯಲ್ಲಿ ಸಹ ಸಮಾಜವನ್ನು ಕಡೆಗಣಿಸದೆ ಅತ್ಯಂತ ಗೌರವಾದರಗಳು ಒಡನೆ ನಡೆಸಿಕೊಳ್ಳುತ್ತಾರೆ.
4. ಆಧ್ಯಾತ್ಮ ವಿಚಾರಧಾರೆ.
ಸ್ವಾಮಿ ವಿವೇಕಾನಂದರ ಮತ್ತೊಂದು ಮುಖ್ಯ ಚಿಂತನೆಯೆಂದರೆ, ಯಾವುದೇ ವಿಚಾರ ಕೊಡುವ ಮುನ್ನಸಮಾಜವನ್ನುಆಧ್ಯಾತ್ಮಿಕ ಆದರ್ಶಗಳಿಂದ ಪ್ರವಹಿಸುವುದು. ಈ ರೀತಿ ತಯಾರಾದ ನಿಸ್ವಾರ್ಥ ಜನರು ಖಂಡಿತವಾಗಿ ಯಾವುದೇ ಕಾರ್ಯವನ್ನು ಯಶಸ್ವಿಯಾಗಿ ನಡೆಸುವರು ಎಂಬುದು ಅವರ ವಿಶ್ವಾಸ. ಯುರೋಪ್ ದೇಶವು ತನ್ನ ಜಡವಾದ ನಿಲುವನ್ನು ಬದಲಾಯಿಸಿ ಆಧ್ಯಾತ್ಮದೆಡೆಗೆ ಹೊರಡದಿದ್ದರೆ, ಇನ್ನೂ ಐವತ್ತು ವರ್ಷಗಳಲ್ಲಿ ನುಚ್ಚುನೂರು ಆಗುವುದೆಂದು ಅವರು ಭವಿಷ್ಯ ನುಡಿದರು. ಅದೇ ರೀತಿ ಎರಡು ಮಹಾಯುದ್ಧಗಳು ಸಂಭವಿಸಿ ಜಗತ್ತನ್ನು ವ್ಯಾಪಿಸಲಿಲ್ಲವೇ?
5. ಆಧುನಿಕ ಭಾರತದ ಪುನರುಜ್ಜೀವನ.
ಸ್ವಾಮಿ ವಿವೇಕಾನಂದರ ಭಾವಿ ಭಾರತ ದರ್ಶನವೆಂದರೆ, ಸಾಮಾಜಿಕ ಅಸಮಾನತೆ, ಪ್ರತ್ಯೇಕತೆ, ಪಂಗಡಗಳ ಸಂಕುಚಿತತೆ, ಮತ್ತು ಅಸಹನೆಗಳಿಂದ ಮುಕ್ತವಾಗಿ ವ್ಯಾಪಕ ಶಿಕ್ಷಣ ಮತ್ತು ಆರ್ಥಿಕ, ಸಾಮಾಜಿಕ ಸೌಲಭ್ಯಗಳ ಮೂಲಕ ಮಾನವ ಘನತೆ,ಸ್ವಾತಂತ್ರ್ಯ ನಿರ್ಭಯತೆ, ಸಮಾನತೆಗಳ ಭದ್ರ ಪೀಠದಮೇಲೆ ನಮ್ಮ ಸ್ತ್ರೀ-ಪುರುಷರುಸ್ಥಾಪಿತವಾಗುವುದುಇದೇ ಅವರಭಾರತ ಪುನುರುಜ್ಜೀವನದ ಕನಸು.
6.ಸುಂದರ ರಾಷ್ಟ್ರ ನಿರ್ಮಾಣಕ್ಕೆ ಸುಶಿಕ್ಷಿತರಾದ ನಮ್ಮ ಜವಾಬ್ದಾರಿಗಳು.
ನಮ್ಮ ಮಾತೃಭೂಮಿಯ ಈ ದುರ್ಬಲ, ಶೋಷಿತ, ತಿರಸ್ಕೃತ ಜನವರ್ಗವನ್ನು ಮೇಲಕ್ಕೆತ್ತುವುದನುನಮ್ಮ ಶಿಕ್ಷಿತ ಜನಾಂಗ ತಮ್ಮ ಧ್ಯೇಯವಾಗಿಟ್ಟುಕೊಳ್ಳುತ್ತಾರೆ ಎಂದು ಸ್ವಾಮಿ ವಿವೇಕಾನಂದರು ನಿರೀಕ್ಷಿಸಿದ್ದರು. ಅದಕ್ಕಾಗಿ ಅವರು ನಮಗೆ ಮೂರು ಆದರ್ಶಗಳನ್ನು ಪಾಲಿಸುವಂತೆ ಕರೆ ನೀಡುತ್ತಾರೆ.
ಮೊದಲನೇದು; ತ್ಯಾಗ ಮತ್ತು ಸೇವೆ, ಇವೆರಡನ್ನು ಚೆನ್ನಾಗಿ ರೂಡಿಸಿ, ಉಳಿದುವೆಲ್ಲ ತಮಗೆ ತಾವೇ ಹೊಂದಿಕೊಳ್ಳುವುವು. ಎರಡನೆಯದು; ಈ ಬಾಳು ಅಲ್ಪಕಾಲಿಕವಾದದ್ದು, ಲೋಕದ ಕೀರ್ತಿ ಪ್ರತಿಷ್ಠೆಗಳನ್ನು ಕ್ಷಣಿಕವಾದುದು. ಇತರರಿಗಾಗಿ ಬಾಳುವ ಜೀವನವೇ ಶ್ರೇಷ್ಠವಾದದ್ದು. ಸಂತೃಪ್ತ ವಾದದ್ದು. ಮೂರನೆಯದು; ಕಾರ್ಯದಲ್ಲಿ ಶ್ರೇಷ್ಠತೆ, ಅಂದರೆ, ಬಡವರ ಶೋಷಣೆಯ ನಿಮಿತ್ತ ಯಾರ ಹೃದಯ ರಕ್ತ ಸುರಿಸುವುದೋ, ಅವರನ್ನು ಸ್ವಾಮಿ ವಿವೇಕಾನಂದರು ಮಹಾತ್ಮರೆಂದು ಪರಿಗಣಿಸಿದರು.
ಈ ಮಹಾ ಭಾವನೆಗೆ ಇಡೀ ಭಾರತವೇ ಇಂದು ಸ್ಪಂದಿಸಬೇಕಾಗಿದೆ. ನಮ್ಮ ಜನತೆಗೆ ಜೀವನದ ಹಾಗೂ ಸ್ವಾತಂತ್ರ್ಯದ ಬೆಳಕನ್ನು ತಂದುಕೊಡುವ ಆಂದೋಲನಗಳು ಇಂದು ನಡೆಯಬೇಕಾಗಿದೆ. ಬಡವರಿಗೆ ಹಾಗೂ ದಮನಕ್ಕೊಳಗಾದವರಿಗೆ ಸುಖ ಸಂತೋಷಗಳನ್ನು ಆಸೆ ಭರವಸೆಗಳನ್ನು ತಂದು ಕೊಡುವ ಸಲುವಾಗಿ ಜೀವಿಸುವಂತಹ ಯುವಸಮೂಹ ಇಂದು ನಮ್ಮ ರಾಷ್ಟ್ರಕ್ಕೆ ಅತ್ಯಂತ ಅವಶ್ಯಕವಾಗಿದೆ. ಬುದ್ಧಿವಂತರು ಸುಶಿಕ್ಷಿತರು, ಚೈತನ್ಯ ಶೀಲರುಮಾನವೀಯ ಉತ್ಥಾನದ ಮಹಾಕಾರ್ಯದ ಅತ್ಯಂತ ಉದಾತ್ತತೆಯ ಪ್ರೇರಣೆಗಳಿಂದ ಪ್ರೇರಣೆ ಹೊಂದಿರುವಂಥವರು ಆದ ಯುವಜನತೆಯನ್ನು ನಮ್ಮ ರಾಷ್ಟ್ರ ಸೃಷ್ಟಿಸಲಲಾರದೇ?ಈ ನಿಟ್ಟಿನಲ್ಲಿರಾಷ್ಟ್ರಕ್ಕೆ ನಾವು ಸಲ್ಲಿಸುವ ನಮ್ಮ ಪ್ರಾಮಾಣಿಕ ಪ್ರಯತ್ನ ಹಾಗೂ ಸೇವೆ ಏನು? ನಮ್ಮನ್ನೇ ನಾವು ಆತ್ಮಾವಲೋಕನ ಮಾಡಿಕೊಳ್ಳೋಣ. ಭವ್ಯ ಭಾರತದ ಉತ್ತಮ ಪ್ರಜೆಗಳಾಗಲು ಶ್ರಮಿಸೋಣ.
ಅಂತೋಣಿ ರಾಜ್, ಚಿಕ್ಕಕಮ್ಮನಹಳ್ಳಿ