
ಕ್ರೈಸ್ತ ಬರಹಗಾರರಲ್ಲಿ ಮಹಿಳಾ ಲೇಖಕಿಯರ ಸಂಖ್ಯೆ ತೀರಾ ಕಡಿಮೆ. ವಿದೇಶೀ ಮಿಶನರಿಗಳ ಕಾಲದಿಂದಲೂ ಈ ಸ್ಥಿತಿ ಮುಂದುವರೆದುಕೊಂಡು ಬಂದಿದ್ದು ಇತ್ತೀಚಿನ ವರ್ಷಗಳಲ್ಲಿ ಈ ಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸಿದೆ. ಬಿ.ಎಲ್.ರೈಸ್ ಅವರ ಸಾಹಿತ್ಯ ಚರಿತ್ರೆಯನ್ನು ಶ್ರೀಮತಿ ಪೌಲೀನ ಅನುವಾದಿಸಿದ್ದಾರೆ. ಸಂತೋಷವೆಂದರೆ ಮಹಿಳೆಯರಲ್ಲಿ ಕೆಲವರು ಸಾಹಿತ್ಯ ಮತ್ತು ಪತ್ರಿಕಾ ಕ್ಷೇತ್ರದಲ್ಲಿ ದುಡಿದಿದ್ದಾರೆ ಹಾಗು ದುಡಿಯುತ್ತಿದ್ದಾರೆ. ಶ್ರೀಮತಿ ಹೆಚ್.ಪಿ.ಫಿಲೋಮಿನಾ, ಡಾ. ಲೀಲಾವತಿ ದೇವದಾಸ್, ಡಾ. ರೀಟಾರಿನಿ, ಶ್ರೀಮತಿ ಅನಿತಾ ಪಿಂಟೊ ಇಂಥವರೆಲ್ಲಾ ಪತ್ರಿಕಾ ರಂಗದಲ್ಲಿ ಒಳ್ಳೆಯ ಕೆಲಸ ಮಾಡಿರುವುದು ಮತ್ತು ಮಾಡುತ್ತಿರುವುದು ಅತ್ಯಂತ ಸಂತಸ ಹಾಗು ಹೆಮ್ಮೆಯ ಸಂಗತಿ. ‘ತರಂಗ’, ‘ಲಂಕೇಶ್’, ‘ಮಾತುಕತೆ’ ಪತ್ರಿಕೆಗಳಲ್ಲಿ ಸಂಪಾದಕ ಮಂಡಳಿಯಲ್ಲಿ ಇರುವುದಾಗಲಿ, ಅವುಗಳಲ್ಲಿ ಅಗ್ರಲೇಖನಗಳನ್ನು ಮತ್ತು ತನಿಖಾ ಲೇಖನಗಳನ್ನು ಬರೆಯುವುದಾಗಲಿ ತಿಳಿದಷ್ಟು ಸುಲಭವಲ್ಲ. ಅತ್ಯಂತ ಸೂಕ್ಷ್ಮ, ಜವಾಬ್ದಾರಿ ಹಾಗೂ ಅಷ್ಟೇ ಸಾಹಸದ ಪತ್ರಿಕಾ ಕ್ಷೇತ್ರದಲ್ಲಿ ಈ ಕ್ರೈಸ್ತ ಮಹಿಳೆಯರಿಗೆಲ್ಲಾ ಒಳ್ಳೆಯ ಹೆಸರಿದೆ.
ಕನ್ನಡ ಸಾಹಿತ್ಯ ಲೋಕಕ್ಕೆ ಶ್ರೀಮತಿ ಡಾ. ಲೀಲಾವತಿ ದೇವದಾಸ್ ಅವರದು ಬಹು ವಿಶಿಷ್ಟ ಕೊಡುಗೆ. ಕವಯಿತ್ರಿಯಾಗಿ, ಪ್ರಮುಖ ವೈದ್ಯಕೀಯ ಬರಹಗಾರರಾಗಿ, ಅಂಕಣಗಾರರಾಗಿ, ಕ್ರೈಸ್ತ ಧಾರ್ಮಿಕ ಸಾಹಿತಿಯಾಗಿ ಅರ್ಥಪೂರ್ಣ ಕೆಲಸಗಳನ್ನು ಮಾಡುತ್ತಿರುವ ಡಾ.ಲೀಲಾವತಿ ದೇವದಾಸ್ ಅವರು ಮಾಡಿರುವ ಸಾಹಿತ್ಯ ಕೃಷಿಗೆ ನಾಡಿನ ಪ್ರಮುಖ ಮನ್ನಣೆಗಳು ಲಭಿಸಿವೆ. ‘ಪ್ರತಿಷ್ಠಿತ ಅತ್ತಿಮಬ್ಬೆಪ್ರಶಸ್ತಿ’, ‘ಸದೋದಿತಾ ಪ್ರಶಸ್ತಿ ‘ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ’, ‘ಗೊರೂರು ಸಾಹಿತ್ಯ ಪ್ರಶಸ್ತಿ’, ‘ಕನ್ನಡ ಹಾಗೂ ಸಂಸ್ಕøತಿ ಇಲಾಖೆಯ ಪುರಸ್ಕಾರ’, ಸತತವಾಗಿ ಮೂರು ಸಾರಿ ಕರ್ನಾಟಕ ಆರೋಗ್ಯ ಇಲಾಖೆಯ ಪ್ರಶಸ್ತಿಗಳು, ಬುದ್ಧಶಾಂತಿ ಪ್ರಶಸ್ತಿ ಹಾಗೂ ‘ಜಾನ್ ಹ್ಯಾಂಡ್ಸ್ ಪ್ರಶಸ್ತಿ’ ಇವರಿಗೆ ಲಭಿಸಿರುವುದು ಅತ್ಯಂತ ಮಹತ್ವದ ಸಂಗತಿ. ತಾವು ವಿದ್ಯಾರ್ಥಿಯಾಗಿರುವಾಗಲೇ ಮಾಸ್ತಿ ಅವರ ಜೀವನ ಪತ್ರಿಕೆಯಲ್ಲಿ ಬರೆಯಲಾರಂಭಿಸಿದ ಇವರು ಈವರೆಗೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ, ಕರ್ನಾಟಕ ವೈದ್ಯಕೀಯ ಲೇಖಕರ ಅಗ್ರಪಂಕ್ತಿಯಲ್ಲಿ ಇರುವ ಇವರು ‘ಸ್ತ್ರೀ ಸಂಜೀವಿನಿ’, ‘ಹೆರಿಗೆ’, ‘ಸ್ತ್ರೀ ರಕ್ಷಣೆ ಹೇಗೆ’?, ‘ನಾನು ಗೌರಿಯ ಗರ್ಭಕೋಶ’, ‘ಹೆಣ್ಣೆ ನಿನ್ನ ಆರೋಗ್ಯ ಕಾಪಾಡಿಕೊ’, ‘ನಿಮ್ಮ ಆರೋಗ್ಯದ ಪರಿಚಯ ಮಾಡಿಕೊಳ್ಳಿ’ ಇಂತಹ ಅನೇಕ ಕೃತಿಗಳು ನಾಡಿನಲ್ಲೆಲ್ಲಾ ಹೆಸರು ಮಾಡಿವೆ. ಮಯೂರ, ಪ್ರಯಾಂಕ ಮಾಸ ಪತ್ರಿಕೆಗಳಲ್ಲಿ ಅಂಕಣಕಾರಳಾಗಿ ಕೆಲವು ವರ್ಷ ಬರೆದಿರುವ ಲೇಖನಗಳಿಗೆ ಜನಮನ್ನಣೆಯಿದೆ. ಜೊತೆಗೆ ಧಾರ್ಮಿಕ ಪತ್ರಿಕೆಗಳಾದ ‘ದೂತ’, ‘ಸ್ನೇಹಜ್ಯೋತಿ’, ‘ತಾಬೋರ್‍ವಾಣಿ’ ಈ ಮಾಸಪತ್ರಿಕೆಗಳಲ್ಲೂ ಇವರ ಲೇಖನಿ ಮುಂದುವರೆದಿರುವುದನ್ನು ಕಾಣಬಹುದು. ಧಾರ್ಮಿಕ ಸಾಹಿತ್ಯದಲ್ಲೂ ಅರ್ಥಪೂರ್ಣ ಕೆಲಸ ಮಾಡಿರುವ ಇವರ ‘ಬೈಬಲಿನ ಅನಾಮಿಕ ಸ್ತ್ರೀಯರು’ ಕೃತಿ ಕ್ರೈಸ್ತ ವಲಯದಲ್ಲಿ ಬಹು ಜನಪ್ರಿಯ ಕೃತಿ. ಸತ್ಯವೇದ ಸಂಘದ ಭಾಷಾಂತರ ವಿಭಾಗದಲ್ಲಿ ಸತತವಾಗಿ ಸೇವೆ ಮಾಡಿರುವ ಇವರು ಪ್ರವಾಸ ಸಾಹಿತ್ಯದಲ್ಲೂ ಉತ್ತಮ ಕೆಲಸ ಮಾಡಿದ್ದಾರೆ. ಇವರ ‘ಪವಿತ್ರ ನಾಡಿನಲ್ಲಿ ಪ್ರವಾಸ’ ಕೃತಿಗೆ ‘ಕನ್ನಡ ಪುಸ್ತಕ ಪ್ರಾಧಿಕಾರ ಪ್ರಶಸ್ತಿ’ ಲಭಿಸಿದ್ದು, ‘ಬೈಬಲಿನಲ್ಲಿ ವೈದ್ಯಕೀಯ ವಿಷಯಗಳು’ ಎಂಬ ವಿಷಯ ಕುರಿತು ದೂತ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಲಿಖಿತವಾಗಿವೆ. ಸತತ ಕ್ರಿಯಾಶಾಲಿಯಾಗಿರುತ್ತಿದ್ದ ಈ ವೈದ್ಯರು ವೈದ್ಯಕೀಯ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸೇವೆ ಒಟ್ಟಾರೆ ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆಗಳಾಗಿವೆ.
ಡಾ.ಸಿಸ್ಟರ್ ಪ್ರೇಮ, SMMI
ಬೆಂಗಳೂರು