
ಜಪಾನಿನ ಪ್ರಸಿದ್ಧ ಝೆನ್ ಗುರು ಹಕೂಯಿನ್ ಎಕಾಕು ಸುದೀರ್ಘ ಪ್ರಯಾಣಕ್ಕೆ ತೆರಳಿದ್ದರು. ಒಂದು ದಿನ ಆಶ್ರಮಕ್ಕೆ ಹಿಂದಿರುಗಿದರು. ಆಶ್ರಮಕ್ಕೆ ಮರಳುವ ಸಂದರ್ಭದಲ್ಲಿ ಸಂಜೆ ಧ್ಯಾನದ ಸಮಯ ಶುರುವಾಗಿತ್ತು. ಆಶ್ರಮದಲ್ಲಿದ್ದ ಎಲ್ಲ ಸನ್ಯಾಸಿಗಳೂ ಮತ್ತು ಶಿಷ್ಯರೂ ಧ್ಯಾನದಲ್ಲಿ ತಲ್ಲೀನರಾಗಿದ್ದರು. ತಮ್ಮ ಗುರುಗಳಾದ ಹಕೂಯಿನ್ ಬಂದಿರುವ ಸಂಗತಿ ಅವರಾರಿಗೂ ಗೊತ್ತಾಗಲೇ ಇಲ್ಲ. ಹಕೂಯಿನ್ ಆಶ್ರಮದ ಒಳಗೆ ಕಾಲಿಡುತ್ತಿದ್ದಂತೆಯೇ ಅವರ ಆಗಮನದಿಂದ ಅಲ್ಲಿದ್ದ ಪ್ರಾಣಿಗಳು ಸಂತಸದಿಂದ ನಲಿದಾಡಿದವು. ಆಶ್ರಮದಲ್ಲಿ ಸಾಕಿದ್ದ ನಾಯಿಗಳು ಬೊಗಳುತ್ತಾ, ಖುಷಿ ಹೆಚ್ಚಾಗಿ ಜೋರಾಗಿ ಓಡುತ್ತಾ ಗದ್ದಲ ಸೃಷ್ಟಿಸಿದವು. ಬೆಕ್ಕುಗಳು ಕೂಡ ಮಿಯ್ಯಾಂವ್ ಎಂದು ಕೂಗುತ್ತಾ ಗುರುಗಳ ಕಾಲು ನೆಕ್ಕಿ ಸಂಭ್ರಮಿಸಿದವು. ಕೋಳಿಗಳು ಸದ್ದು ಮಾಡುತ್ತಾ ಓಡಾಡತೊಡಗಿದವು. ಮೊಲಗಳು ಜಿಗಿದಾಡಿದವು. ದೂರದ ಪ್ರಯಾಣ ಮುಗಿಸಿ ಬಂದಿದ್ದ ಹಕೂಯಿನ್ ಅಲ್ಲಿನ ವಾತಾವರಣವನ್ನು ಗಮನಿಸಿದರು. ಒಂದು ಕಡೆ ಧ್ಯಾನದಲ್ಲಿ ಮಗ್ನರಾಗಿದ್ದ ಶಿಷ್ಯರನ್ನು ಮತ್ತು ಸದ್ದು ಗದ್ದಲ ಮಾಡುತ್ತಿದ್ದ ಪ್ರಾಣಿಗಳನ್ನು ಗಮನಿಸಿ, “ಪ್ರೀತಿಯ ಒಂದೇ ಒಂದು ಕೂಗು ಸಾವಿರಾರು ವರ್ಷ ಕುಳಿತು ಧ್ಯಾನ ಮಾಡುವುದಕ್ಕಿಂತಲೂ ಮಹತ್ವದ್ದು” ಎಂದರು.
ಸಂಗ್ರಹ ಇನ್ನಾ