
ಕ್ರಿಸ್ತನು ಅಧಿಕಾರ ಕ್ರೇಂದ್ರಿತ ಸ್ಥಳಗಳಿಂದ ತನ್ನನೇ ದೂರವಿರಿಸಿಕೊಂಡರೆ, ಕ್ರೈಸ್ತರು ಅಧಿಕಾರ ಪೀಠದ ಸುತ್ತ ಗಿರಿಕಿ ಹೊಡೆಯುತ್ತಾರೆ. ಕ್ರೈಸ್ತರು ತಮ್ಮನ್ನೇ ಮೇಲೆರಿಸಿಕೊಳ್ಳುವ, ತಮ್ಮ ಅಹಂಅನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಅವಿವೇಕಿಯ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಲು ಹರ ಸಾಹಸ ಮಾಡುತ್ತಾರೆ. ಕ್ರಿಸ್ತ ದೈವರಾಜ್ಯದ ಬೋಧಕ. ಪ್ರಾಪಂಚಿಕ ಸಾಮ್ರಾಜ್ಯ ಮತ್ತು ಅಧಿಪತ್ಯವನ್ನು ತಿರಸ್ಕರಿಸಿದವ. ಕ್ರೈಸ್ತರಾದರೂ ಪ್ರಾಪಂಚಿಕ ಅಧಿಪತ್ಯದ ಸುತ್ತ ಕಾಲಹರಣ ಮಾಡುವುದಲ್ಲದೆ, ಅವುಗಳ ವೈಭವಗಳಿಂದ ಪ್ರಭಾವಿತರಾಗುತ್ತಾರೆ. ಕ್ರಿಸ್ತ ಶೋಧನೆಯ ರೊಟ್ಟಿಯನ್ನು ತಿರಸ್ಕರಿಸಿದರೆ, ಕ್ರೈಸ್ತರು ಅಗೊಮ್ಮೆ ಈಗೊಮ್ಮೆ ಮೇಜಿನಿಂದ ಬೀಳುವ ಸೊಕ್ಕಿನ ದುರಹಂಕಾರಿಗಳ ಚೂರು ರೊಟ್ಟಿಗೆ ಹಾತೊರೆಯುತ್ತಾರೆ.