
ಚಿತ್ತದನ್ಮುತ್ತವಿಲ್ಲ, ಕೌತುಕವು
ಮೊದಲಿಲ್ಲ; ಬಳಲ್ಕೆಯ ಬೆಮೆಯಿಂದ ಕೃಶವಾಗಿ
ಕಂಡರಾದಂಪತಿಗಳು. ಹೊಳೆಯುತರ‍್ದರ‍್ಮುತ್ತೇಸು
ಬಾಲಕನ ಕಂಡು ಮೂವರು ರಾಯರಚ್ಚರಿಗೊಂಡು,
ಕೈ ಮುಗಿದು ಮಂಡಿಯೂರೆದ್ದು, ತಲೆಬಾಗಿ
ಭಯಭಕ್ತಿಯಲಿ ತಂದಿದ್ದ ಉಡುಗೊರೆಯ
ಯೇಸು ಪದತಲಕಿರಿಸಿ ನಮಿಸಿದರು ನಮ್ರದಲಿ,
ಪ್ರೀತಿಯಾವೇಶದಲಿ. ನಿದ್ರಿಸುವ ಕಂದನ
ಸೌಂರ‍್ಯ ಮುದ್ರಿಕೆಯ ಕಣ್ದಣಿಯೆ
ನೋಡಿ ನಲಿ ನಲಿದು, ಯೇಸು ಸಮಾಗಮದ
ಪುಣ್ಯವನು ಪಡೆದು; ತಮಗಂದಾದ
ಕನಸಿನದೇಶದಂತೆ ಕಿರಾತ ಹೆರೋದ ರಾಜನಿಗೇಸು
ಹುಟ್ಟಿರುವ ಸ್ಥಳದ ಸುಳಿವನು ಕೊಡದೇ ಪುಯಣ
ಬೆಳೆಸಿದರವರ ತಾಯ್ನಾಡಿಗೆ.
ಇರುಳು ಕಳೆದುದು, ಮೂಡಿದಳು
ಉಷೆ ಮೂಡಣದ್ರಿಯಲಿ. ಹಕ್ಕಿಗಳ
ಚಿಲಿಪಿಲಿನಾದೈಸಿರಿಯನಾಲಿಸುತ ಜೋಸೆಫ
ತಾನಿರುಳು ಕಂಡ ಕನಸಿನ ಪ್ರಸ್ತಾಪ ಮಾಡಿದನು
ಮರಿಯಳೊಡನೆ. “ಪುಣ್ಯ ಪುರುಷರು ಅವರು,
ಧನ್ಯ ಪುರುಷರು ಅವರು, ಗಣ್ಯವ್ಯಕ್ತಿಗಳು
ತೆರಳಿದ ಮೇಲೆ ಕಣ್ಕಚ್ಚಿದನುಭವವಾಗಿ
ತೂಕಡಿಕೆಯುಂಟಾಗಿ, ಮಲಗಿದೆನಲ್ಲವೆ
ಬರಿಯ ನೆಲದ ಮೇಲೆ. ನಿದ್ರಾದೇವಿಯಾಲಿಂಗನಕೆ
ವಶವಾಗಿ ನಿದ್ರಿಸಿದೆ ಮಡದಿ. ಇಂದು ಬೆಳಗನ ಜಾವ
ಎಚ್ಚರವಾಯಿತು ನನಗೆ. ಕಣ್ಬಿಟ್ಟು, ಕಣ್ಮುಚ್ಚಿ
ಮಲಗಬೇಕೆನುವಾಗ ಕನಸಾಯ್ತು ಚಂದ್ರಮುಖಿ;
ದೇವದೂತನ ದಿವ್ಯ ರ‍್ಶನವಾಯ್ತು.
“ಮಗುವನ್ನು ಮಗುವಿನ ತಾಯಿಯನ್ನು
ಜೋಸೆಫ್ ಈಜಿಪ್ಟಿಗೆ ಕೊಂಡೊಯ್ಯಿ’’
ಎಂಬಾದೇಶವಾಯ್ತು.“ಹೆರೋದ
ನೃಪಾಲ ಮಗುವ ಕೊಲಿಸುವ ಹುನ್ನಾರು
ಮಾಡಿಹನು ಎಂಬ ಕಿವಿಮಾತ ಹೇಳಿದನು.
ನಡೆನಡೆ ಎಲೆಬಾಲೆ, ರ‍್ಧಾಂಗಿ ಸಿದ್ಧವಾಗು
ನಡೆ ಮತ್ತೆ ಪಯಣಕ್ಕೆ’’ ಎನಲು, ಮಹಾಮಾತೆ
ಮರಿಯಮ್ಮ ಮರು ಮಾತನಾಡದೆ ಪಾತ್ರೆ
ಪಗಟೆಯ ಗಂಟುಕಟ್ಟಿದಳು. ಹಸಿ ಬಾಣಂತಿ
ಮರಿಯಮ್ಮ ಮುಡಿಬಾಚಿ ಹೆರಳನೆತ್ತಿ
ಕಟ್ಟಿ ಮಡಿಯಾದ ಗರಿಬಟ್ಡೆಯುಟ್ಟು
ಯೇಸು ಕಂದನ ಎತ್ತಿ ಮುದ್ದಾಡಿ ಮುದ್ದಿಟ್ಟು
ಮೈ ಕೈ ಸವರಿ ಉಣ್ಣೆ ಕಂಬಳಿ ಹೊದಿಸಿ
ಅಣಿಗೊಳಿಸಿದಳು ದೂರ ಪಯಣಕ್ಕೆ.
ಜೋಸಫನೆದ್ದು ಕೈ ಮುಗಿದು ಕನಿಕರಿಸಿ
ಅಳ್ಕರೆಯಲಿ ಮಗುವನೆತ್ತಿ ಮುದ್ದಾಡಿ
ಮರಿಯಳಾಮಡಿಲಿಗಿರಿಸಿದನು ಸಂತಸದಲಿ.
ಗ್ರಾಮವಾಸಿಗಳಿನ್ನೂ ಎದ್ದಿರಲಿಲ್ಲ. ಅಲ್ಲಲ್ಲಿ
ಕೆಲರು ಎದ್ದವರು ನಿದ್ದೆಗಣ್ಣನು ತೀಡುತ್ತ,
ಚಳಿಗಡರಿ ಬೀದಿಗಿಳಿಯದೆ ಕಿಟಕಿ, ಬಾಗಿಲುಗಳಲ್ಲಿ
ಇಣುಕಿಣುಕಿ ನೋಡುತ್ತಾ, ಬಿಸಿಪೇಯ
ಹೀರುತ್ತಿದ್ದರು ಲೋಕದರಿವಿರದೆ.
ಜೋಸೆಫ ದಂಪತಿಗಳು
ಸಲಿಗೆಯಲಿದ್ದ ನೆರೆಹೊರೆಯ ಜನರರಾರಿಗೂ
ಹೇಳದೆ, ಮನೆಯೊಡೆಯನಿಗರಿವಾಗದಂತೆ
ಹೆದರುತ್ತ ಬೆದರುತ್ತ ಬೆಚ್ಚುಗಣ್ಣು
ಮಿಕಮಿಕನೆ ಬಿಡುತ್ತ ಕೇರಿ ಕೇರಿಗಳ
ತೂರಿ, ಬೀದಿಗಳ ದಾಟಿ ಬಂದರು ಊರ
ಹೊರ ಹೊಲಕೆ. ತಾಯಪ್ಪುಗೆಯಲ್ಲಿ
ಬೆಚ್ಚನಿದ್ದನು ಯೇಸು ತ್ರೈಲೋಕದೊಡೆಯ.
ಅಷ್ಟರಲ್ಲದೇನಾಯಿತೊ ಏನೊ
ಹೆರೋದನ ಸೈನಿಕರು ಕುದರೆಗಳನೇರಿ
ಯೇಸುಕಂದನ ಹುಡುಕುತ್ತ ಬರುವುದನು
ಕಂಡು ಆಸದ್ಭಕ್ತ ದಂಪತಿಗಳು ಹೆದರಿದರು
ಬೆದರಿದರು, ಬೆಚ್ಚಿದರು, ಆ ಕುಳಿರ್
ಚಳಿಯಲೂ ಬೆಮರಿದರು. “ಅಯ್ಯೋ
ಇದೆಂಥ ಗತಿಯಯ್ತೆಮಗೆ? ಈಗೇನು
ಮಾಡುವುದು?’’ ಎಂದು ಪರಿತಪಿಸುತ
ದೈವವನು ನೆನೆನೆನೆದು ಮುನ್ನಡೆಯೆ,
ರೈತನೊಬ್ಬ ಹೊಲವನುತ್ತ ಹಸನು ಮಾಡಿ
ಗೋಧಿಯನು ಬಿತ್ತಲು ಅಣಿಯಾಗಿದ್ದುದ
ಕಂಡು ಜೋಸೆಫ, ಆತನ ಕೈಲಿದ್ದ ಗೋಧಿ
ಬುಟ್ಟಿಯ ಕಸಿದು, ಗೋಧಿಯನು ಚೆಲ್ಲಿದನು
ಉತ್ತಹೊಲಕೆ. ಹೊಲದೊಡೆಯ ಅಚ್ಚರಿಯಲಿ
ಬೆಚ್ಚಿ ನಿಂತಿರಲು, ನೆಲಕೆ ಬಿದ್ದ ಗೋಧಿ
ಕಾಳುಗಳು ಪೈರಾಗಿ ಬೆಳೆದು, ತೆನೆಬಿಟ್ಟು
ಎದೆಮಟ್ಟಕೆ ನಿಂತವು ಕೊಯ್ಲಿಗಣಿಯಾಗಿ.
ಮರಿಯಮ್ಮ ಮಗು ಯೇಸುವಿನೊಡನೆ ಗೋಧಿ
ಹೊಲದಲಿ ಅಡಗಿ ಕುಳಿತಳು ಪತಿ ಜೋಸೆಫನೊಡಗೂಡಿ
ಅದಕೆಂದೆ ಬೆಳೆಯುವರು ಗೋಧಿ ಪೈರುಗಳ
ಜನರಿಂದು ಪಾತ್ರೆಪಗಟೆಯಲಿ, ಕ್ರಿಸ್ತ ಜಯಂತಿಯಲಿ
ಅದನೆತ್ತಿ ತಂದು ಅಲಂಕರಿಸುವರು ಜನಪದರು
ಯೇಸುಕಂದನ ಗೋಲಿಯನು.
ಬಂದ ಸೈನಿಕರು ಗೋಧಿಹೊಲಗಳ
ಕಡೆ ಕಣ್ಣಾಡಿಸುತ ನೇರದಾರಿಯಲಿ
ಹೊರಟುಹೋದರು ಮತ್ತೆತ್ತಲೋ
ಲೋಕದೊಡೆಯನನು ಹುಡುಕುತ್ತ.
ರೈತನಚ್ಚರಿಯಲಿ ನಡೆದುದನು ಕಂಡು
ದಿಗ್ಮೂಢಗೊಂಡು ನಮಿಸಿದನು ಆ
ಪವಿತ್ರ ಕುಟುಂಬಕ್ಕೆ, ದಾರಿ ತೋರಿದನು
ಅವರಿಗೆ ಗೋಧಿ ಹೊಲಗಳ ಮಧ್ಯ
ಮಧ್ಯದಲಿದ್ದ ಈಚಲು ಬೀಡುಗಳ
ಕಿರುದಾರಿಯನು, ಹೊರಟರು ದಂಪತಿಗಳು
ಮುಂದಾರಿಯ ಹುಡುಕುತ್ತ.
ಈ ಕಾವ್ಯ ಪಠ್ಯದ ಸಾಲುಗಳನ್ನು ಸಾಹಿತಿ ಡಾ.ಬಿ.ಎಸ್. ತಲ್ವಾಡಿ ಅವರು ರಚಿಸಿದ ಯೇಸುಕ್ರಿಸ್ತನ ಕುರಿತ ಮಹಾಕಾವ್ಯ `ಸಿರಿಭುವನಜ್ಯೋತಿ’ಯಿಂದ ಉದ್ಧರಿಸಲಾಗಿದೆ.
`ಸರಳ ರಗಳೆ’ಯ ಈ ಸಾಲುಗಳು, `ಸಿರಿಭುವನಜ್ಯೋತಿ’ಯ `ಸಿರಿಭುವನಜ್ಯೋತಿ ರ‍್ವ’ದ ಏಳನೇ ಕಿರಣವಾದ `ಹಸುಳೆಗಳ ಹತ್ಯೆಯಲಿ ಬಿಸಿನೆತ್ತರೋಕುಳಿಯಾಯ್ತು’ ಭಾಗದ 280 ನೇ ಸಾಲಿನಿಂದ 360 ಸಾಲಿನ ವರೆಗಿನ ಸಾಲುಗಳು.
ಆದಾಮ ಪರ್ವ ಸಿರಿಭುವನಜ್ಯೋತಿ ಪರ್ವ ಮತ್ತು ಪರಂಜ್ಯೋತಿ ಕ್ರೈಸ್ತರ್ಷಿ ಪರ್ವ ಎಂಬ ಮೂರು ಭಾಗಗಳ ಈ `ಸಿರಿಭುವನಜ್ಯೋತಿ’ ಮಹಾಕಾವ್ಯವು, ಕ್ರೈಸ್ತ ದರ್ಶನವನ್ನು ಭರತ ಖಂಡದ ಕನ್ನಡ ನಾಡ ನುಡಿ ಕನ್ನಡ ನುಡಿಯಲ್ಲಿ ಕಟ್ಟಿಕೊಟ್ಟಿದೆ.
ತಲ್ವಾಡಿ ಅವರ ಈ `ಸಿರಿಭುವನಜ್ಯೋತಿ’ ಮಹಾಕಾವ್ಯವು, ಕ್ರೈಸ್ತರ ಪವಿತ್ರ ಶ್ರೀಗ್ರಂಥ ಬೈಬಲ್ಲಿನ ಸಕಲ ಮಾಹಿತಿಯನ್ನು ತನ್ನ ಒಡಲೊಳಗೆ ಇರಿಸಿಕೊಂಡಿದೆ. ಜೊತೆಗೆ ಇದರಲ್ಲಿ ನಮ್ಮ ಕಾಲದ ಆಗುಹೋಗುಗಳ, ನಮ್ಮ ಬದುಕಿನ ಪ್ರತಿಬಿಂಬಗಳ ಮೆರವಣಿಗೆಯನ್ನು ಕಾಣಬಹುದು, ಬಸವಣ್ಣ ಮೊದಲಾದವರ ದಾರ್ಶಿನಿಕರ ಬದುಕನ್ನು ಯೇಸು ಕಥನದೊಂದಿಗೆ ಸಮೀಕರಿಸಿದ ಬರಹದ ಈ ಕಾವ್ಯದಲ್ಲಿ ಸಾಮಾನ್ಯರ ಸಮೀಪದ ಕನ್ನಡ, ಕನ್ನಡತನವೇ ಮೇಲುಗೈ ಸಾಧಿಸಿದೆ. ಕನ್ನಡ ನಾಡಿನ ಕನ್ನಡ ಕ್ರೈಸ್ತರ ಜನಪದರ ಹಲವಾರು ಸಂಗತಿಗಳಿಗೆ ಈ ಮಹಾಕಾವ್ಯವು ಕಾವ್ಯದ ಮೆರಗು ನೀಡಿದೆ.
ಈ ಬರಹದ ಆರಂಭದಲ್ಲಿ ಪ್ರಸ್ತಾಪಿಸಲಾದ ಸಾಲುಗಳು ಕನ್ನಡ ನಾಡಿನ ಬಯಲು ಸೀಮೆಯ ಕಥೊಲಿಕ ಕ್ರೈಸ್ತ ಜನಪದರು, ಯೇಸುಕ್ರಿಸ್ತನ ಹುಟ್ಟಿನ ನಂತರದ ಪ್ರಮುಖ ಘಟನೆಯೊಂದನ್ನು ಪರಿಭಾವಿಸಿಕೊಂಡ ಪರಿಯನ್ನು ಆಪ್ತವಾಗಿ ಕಟ್ಟಿಕೊಡುತ್ತದೆ.
ಕೆಲವು ಐತಿಹಾಸಿಕ ಕಾರಣಗಳಿಂದ, ಮತ್ತೆ ಕೆಲವು ಯುರೋಪಿನ ಹಲವಾರು ದೇಶಗಳ ವಸಾಹತುಶಾಹಿ ಹಪಾಪಿತನದಿಂದ, ವಸಾಹತುಶಾಹಿ ಆಡಳಿತದ ಉಪ ಉತ್ಪನ್ನವೆಂಬುವಂತೆ ಅವರೊಂದಿಗೆ ಬಂದ ಮಿಷನರಿಗಳ ಶ್ರಮದಿಂದ ಇಂದು ಜಗತ್ತಿನಾದ್ಯಂತ ಕ್ರೈಸ್ತ ಧರ್ಮ ಹರಡಿಕೊಂಡಿದೆ. ಹೀಗಾಗಿ ವಿಶ್ವವ್ಯಾಪ್ತಿ ಪಡೆದಿರುವ ಯೇಸುಕ್ರಿಸ್ತನ ಜನನೋತ್ಸವವನ್ನು ಸಂಭ್ರಮಿಸುವ ಕ್ರಿಸ್ಮಸ್ ಹಬ್ಬದ ಸಂದೇಶಗನ್ನು ಸಾರುವ ನೂರಾರು ಜನಪದ ಕತೆಗಳು ಆಯಾ ನೆಲದಲ್ಲಿ ಅರಳಿ ನಿಂತಿವೆ.
ಹುಟ್ಟು ಮತ್ತು ಪಲಾಯನ:
ಯೇಸುಕ್ರಿಸ್ತ ಹುಟ್ಟಿದ್ದು ಬೆತ್ಲೆಹೇಮಿನಲ್ಲಿ. ಅಪ್ಪ ಜೋಸೆಫ್ ಮತ್ತು ಮರಿಯಳು ಇದ್ದದ್ದು ಜೆರುಸಲೇಮಿನಲ್ಲಿ. ಅಂದಿನ ರೋಮನ್ ಚಕ್ರರ‍್ತಿ ಆಗಸ್ಟಸ್ ಜನಗಣತಿ ಮಾಡಲು ನಿರ್ಧಾರಿಸುತ್ತಾನೆ . ಆಗ, ತಂದೆ ಜೋಸೆಫ್ ತನ್ನ ಮೂಲ ನೆಲೆಗೆ ಹೋಗಬೇಕಾಗುತ್ತದೆ. ಆ ಸಂದರ್ಭದಲ್ಲಿ ಮಾತೆ ಮರಿಯಳು ತುಂಬು ಗರ್ಭಿಣಿ. ಬೆತ್ಲೆಹೇಮಿನಲ್ಲಿ ಅವರಿಗೆ ತಂಗಲು ಜಾಗವು ಸಿಗುವುದಿಲ್ಲ. ಕೊನೆಗೆ, ದನದ ಕೊಟ್ಟಿಗೆಯಲ್ಲಿ ರಾತ್ರಿ ಕಳೆಯ ಬೇಕಾಗುತ್ತದೆ. ಅದೇ ರಾತ್ರಿಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡು, ಮಾತೆ ಮರಿಯಳು ಕೂಸಿಗೆ ಜನ್ಮ ಕೊಡುತ್ತಾಳೆ. ಅದೇ ಸಮಯದಲ್ಲಿ ದೇವದೂತರು ತಿಳಿಸಿದರೆಂದು ಕಾಡಿನಲ್ಲಿದ್ದ ಕುರಿಕಾಯುವ ಕುರುಬರು ಕೂಸು ಯೇಸುವನ್ನು ಕಾಣಲು ಬರುತ್ತಾರೆ. ಸ್ವಲ್ಪ ಸಮಯದಲ್ಲಿ ಮೂಡಣ ಸೀಮೆಯ ಪಂಡಿತರು ಕೂಸು ಯೇಸುವನ್ನು ಕಾಣಲು ಬಂದು, ಯೆಹೂದ್ಯರ ಅರಸ ಯೇಸುಸ್ವಾಮಿಗೆ ತಾವು ತಂದ ಕಾಣಿಕೆಗಳನ್ನು ಸಮರ್ಪಿಸುತ್ತಾರೆ.
ಅವರು ತಮ್ಮ ನಾಡಿನಲ್ಲಿ ಆಗಸದಲ್ಲಿ ಕಂಡ ಹೊಸ ನಕ್ಷತ್ರವನ್ನು ಕಂಡು ಅದು ಯೆಹೂದ್ಯರ ಅರಸನು ಹುಟ್ಟುವ ದಿನವೆಂದು ಗುರುತಿಸಿ, ಆ ನಕ್ಷತ್ರದ ಜಾಡನ್ನು ಹಿಡಿದು ಹುಡುಕುತ್ತ ಸಾಗಿರುತಾರೆ. ಯಹೂದ್ಯರ ಅರಸ ಎಂದು ಅವರು ಬಡಬಡಿಸುತ್ತಿದ್ದ ಸಂಗತಿ ತಿಳಿದು, ರೋಮ ಸಾಮ್ರಾಜ್ಯದ ಮಾಂಡಲಿಕ ಅರಸ ಹೆರೋದ ಕಂಗಾಲಾಗುತ್ತಾನೆ. ಆ ಮೂವರು ಪಂಡಿತರನ್ನು ಆಸ್ಥಾನಕ್ಕೆ ಕರೆಸಿಕೊಂಡು ವಿಚಾರಿಸುತ್ತಾನೆ. ಅವರು ಕೂಸನ್ನು ಕಂಡು ಮರಳಿ ಹೋಗುವಾಗ ತನ್ನನ್ನು ಭೇಟಿಯಾಗಿ ವಿಷಯ ತಿಳಿಸಬೇಕೆಂದು ಕೋರುತ್ತಾನೆ. ಕೂಸು ಯೇಸುವನ್ನು ಕಂಡ ನಂತರ, ದೇವದೂತರ ಆಣತಿಯಂತೆ ಈ ಪಂಡಿತರು ಹೆರೋದ ಅರಸನ ಕಡೆಗೆ ಹೋಗಿ ವಿಷಯ ತಿಳಿಸಿದೇ ತಮ್ಮ ತಮ್ಮ ನಾಡುಗಳಿಗೆ ಮರಳುತ್ತಾರೆ.
ತನ್ನ ಆಸ್ಥಾನದ ಪಂಡಿತರನ್ನು ಕರೆಯಿಸಿ, ಮೂಡಣ ಸೀಮೆಯ ಪಂಡಿತರು ಬಂದು ಹೋದ ಸಂಗತಿ ಮತ್ತು ಅವರ ಹೇಳಿದ ವಿಷಯದ ಬಗ್ಗೆ ಕೂಲಂಕುಶವಾಗಿ ವಿಚಾರಿಸಿ, ಯೆಹೂದ್ಯರ ಅರಸ ಹುಟ್ಟುವ ಸಮಯದ ಬಗ್ಗೆ ಖಚಿತ ಮಾಹಿತಿ ಪಡೆಯುತ್ತಾನೆ. ಆ ಕೂಸನ್ನು ಗುರುತಿಸಲಾಗದೇ ಆ ಸಮಯದಲ್ಲಿ, ಆ ಪರಿಸರದಲ್ಲಿ ಹುಟ್ಟಿದ ಕೂಸುಗಳನ್ನು ಕೊಲ್ಲಿಸಲು ಕ್ರಮ ಜರುಗಿಸುತ್ತಾನೆ. ಆ ಸಂದರ್ಭದಲ್ಲಿ ದೇವದೂತರು ಕಾಣಿಸಕೊಂಡು, ಬಾಣಂತಿ ಹೆಂಡತಿ ಮತ್ತು ಹಸುಗೂಸನ್ನು ಕರೆದುಕೊಂಡು ಇಜಿಪ್ತ ದೇಶಕ್ಕೆ ಪಲಾಯನ ಮಾಡುವಂತೆ ಸೂಚಿಸುತ್ತಾರೆ. ಅದರಂತೆ ಇಜಿಪ್ತಿಗೆ ಪಲಾಯನ ಮಾಡುವ ಜೋಸೆಫ್ ಮತ್ತು ಮಾತೆ ಮರಿಯ ಮತ್ತು ಯೇಸುಸ್ವಾಮಿ, ಅರಸ ಹೆರೋದ ಅರಸ ತೀರಿದ ನಂತರ ಜೆರುಸಲೇಮಿಗೆ ಹಿಂದಿರುಗಿ ಬರುತ್ತಾರೆ.
ಇದಿಷ್ಟು ಮಾಹಿತಿ ಬೈಬಲ್ಲಿನ ಹೊಸ ಒಡಂಬಡಿಕೆಯ ಶುಭಸಂದೇಶಗಳಲ್ಲಿ ಲಭ್ಯವಾಗುತ್ತದೆ. ಆದರೆ ಈ ಕತೆಗೆ ಕನ್ನಡ ನಾಡಿನ ಬಯಲು ಸೀಮೆ ಕಥೋಲಿಕ ಕ್ರೈಸ್ತ ಜನಪದರು ಒಂದು ಸುಂದರವಾದ ಉಪಕತೆಯನ್ನು ಜೋಡಿಸಿದ್ದಾರೆ.
ಆ ಉಪಕತೆ ಹೀಗಿದೆ: ಇಜಿಪ್ತಿಗೆ ಪಲಾಯನ ಮಾಡುವ ಸಂದರ್ಭದಲ್ಲಿ, ಹೆರೋದನ ಸೈನಿಕರು ಅವರನ್ನು ಹುಡುಕುತ್ತಾ ಅವರನ್ನು ಹಿಂಬಾಲಿಸಿ ಬರುತ್ತಿರುತ್ತಾರೆ. ಆ ಸಮಯದಲ್ಲಿ ರೈತರು ಬಿತ್ತನೆಯಲ್ಲಿ ತೊಡಗಿರುತ್ತಾರೆ. ದೇವದೂತರ ಸೂಚನೆಯಂತೆ ತಂದೆ ಜೋಸೆಫ್, ಒಬ್ಬ ರೈತನ ಕೈಯಲ್ಲಿನ ಗೋದಿ ಕಾಳುಗಳನ್ನು ತೆಗೆದುಕೊಂಡು ಹೊಲದಲ್ಲಿ ತೂರುತ್ತಾನೆ. ಉಳಿದ ರೈತರಿಗೂ ಹಾಗೆ ಮಾಡುವಂತೆ ಕೋರುತ್ತಾನೆ. ನೋಡ ನೋಡುತ್ತಾ ಗೋದಿ ಕಾಳುಗಳು ಮೊಳಕೆಯೊಡೆದು, ಸರ ಸರನೆ ಬೆಳೆದು ನಿಲ್ಲುತ್ತವೆ. ಆಳೆತ್ತರೆ ಬೆಳೆದು ನಿಂತು ತೆನೆಗಳನ್ನು ಹೊತ್ತು ತೊನೆದಾಡುವ ಬೆಳೆಯ ನಡುವೆ ಕೂಸು ಯೇಸುಸ್ವಾಮಿಯೊಂದಿಗೆ ತಂದೆ ಜೋಸೆಫ್, ತಾಯಿ ಮರಿಯ ಅಡಗಿಕೊಳ್ಳುತ್ತಾರೆ. ಅವರನ್ನು ಹಿಂಬಾಲಿಸಿ ಬಂದ ಸೈನಿಕರು, `ಇಲ್ಲಿ ಯಾರಾದರೂ ಓಡಿ ಬಂದಿದ್ದರಾ?’ ಎಂದು ವಿಚಾರಿಸಿದಾಗ, ಅಲ್ಲಿನ ರೈತರು, `ಹೌದು’ ಎಂದು ಗೋಣು ಅಲ್ಲಾಡಿಸುತ್ತಾರೆ. `ಯಾವಾಗ ಬಂದಿದ್ದರು?’ ಎಂದು ರೈತರು ಮತ್ತೆ ಕೇಳಿದಾಗ, `ಬೀಜ ಬಿತ್ತುವಾಗ ಬಂದಿದ್ದರು’ ಎಂದು ಉತ್ತರಿಸುತ್ತಾರೆ. ರೈತರ ಮಾತು ಕೇಳಿ, `ತಾವು ಹುಡುಕಿಕೊಂಡು ಬಂದವರು, ಮರ‍್ನಾಲ್ಕು ತಿಂಗಳ ಹಿಂದೆ ಬಂದಿರುವಂತೆ ಕಾಣುತ್ತಿದೆ. ಇಷ್ಟು ಸಮಯದಲ್ಲಿ ಅವರು ಬಹುದೂರ ಸಾಗಿರಬೇಕು. ಇಲ್ಲವೇ ಅವರು ಬೇರೆ ಯಾರೋ ಇರಬೇಕು’ ಎಂದುಕೊಂಡ ಸೈನಿಕರು ತಮ್ಮ ಹುಡುಕಾಟದ ದಾರಿ ತಪ್ಪಿಸಿಕೊಳ್ಳುತ್ತಾರೆ.
ಈ ಕತೆಯ ಹಿನ್ನೆಲೆಯಲ್ಲಿ ಕ್ರಿಸ್ಮಸ್ ಹಬ್ಬದಲ್ಲಿ ಕೊಟ್ಟಿಗೆಯನ್ನು ಕಟ್ಟುವ ಸಂದರ್ಭದಲ್ಲಿ ಕೂಸು ಯೇಸುಸ್ವಾಮಿ ಪವಡಿಸಿರುವ ಗೋದಲಿ ಇರುವ ಕೊಟ್ಟಿಗೆಯ ಸುತ್ತ ಗೋದಿ, ರಾಗಿ, ಜೋಳದ ಸಸಿಗಳನ್ನು ಬೆಳೆಸಿ ಅಲಂಕರಿಸುವ ಸಂಪ್ರದಾಯವನ್ನು ರೂಢಿಗೆ ಬಂದಿತೆಂದು ಕ್ರೈಸ್ತ ಜನಪದರು ಹೇಳಿಕೊಳ್ಳುತ್ತಾರೆ. ಈ ಕೊಟ್ಟಿಗೆಗಳಲ್ಲಿ ಪವಿತ್ರ ಕುಟುಂಬದ ಸ್ವರೂಪಗಳನ್ನು, ಕುರುಬರು ಹಾಗೂ ಮೂರು ರಾಯರ (ಪಂಡಿತರು) ಮತ್ತು ವಿವಿಧ ಪ್ರಾಣಿಗಳ ಗೊಂಬೆಗಳನ್ನು ಇರಿಸುತ್ತಾರೆ. ಜೊತೆಗೆ ಕೊಟ್ಟಿಗೆಯ ಮೇಲೆ ಕುರುಬರಿಗೆ ದೇವಸುತನ ಹುಟ್ಟಿನ ಸಂಗತಿ ತಿಳಿಸಿದ ದೇವದೂತನ ಮತ್ತು ಮೂರು ರಾಯರಿಗೆ ದಾರಿ ತೋರಿಸಿದ ನಕ್ಷತ್ರವನ್ನು ಸೂಚಿಸಲು ಪುಟಾಣಿ ನಕ್ಷತ್ರವನ್ನು ತೂಗುಬಿಡಲಾಗುತ್ತದೆ.
ತಮ್ಮ ಮನೆ ಮನೆಗಳಲ್ಲಿನ ಪುಟಾಣಿ ಕೊಟ್ಟಿಗೆಗಳ ಅಲಂಕಾರದ ಜೊತೆಗೆ ರ‍್ಚಿನಲ್ಲಿ ನರ‍್ಮಿಸುವ ದೊಡ್ಡ ಕೊಟ್ಟಿಗೆಯ ಅಲಂಕಾರಕ್ಕೂ ಒಯ್ದು ಒಪ್ಪಿಸುವ ಕ್ರಮ ರೂಢಿಗೆ ಬಂದಿತು ಎಂದೂ ಕ್ರೈಸ್ತ ಜನಪದರು ವಿವರಣೆ ಕೊಡುತ್ತಾರೆ.
ಜನಪದರ ಈ ಕತೆಗೆ, ಸಾಹಿತಿ ಬಿ.ಎಸ್.ತಲ್ವಾಡಿ ಅವರು ತಮ್ಮ ಮಾಹಾಕಾವ್ಯ `ಸಿರಿಭುವನಜ್ಯೋತಿ’ಯಲ್ಲಿ ಒಂದು ಸುಮಧುರವಾದ ಕಾವ್ಯದ ರೂಪ ನೀಡಿದ್ದಾರೆ.
ಮಂಗಳದ ಜಾಗರ ಮತ್ತದರ ವಿಸರ್ಜನೆ
ಇನ್ನೊಂದು ಮಾತು, ಕನ್ನಡ ನಾಡಿನ ಬಯಲುಸೀಮೆಯ ಕಥೋಲಿಕ ಕ್ರೆöÊಸ್ತರಲ್ಲಿರುವ ಕ್ರಿಸ್ಮಸ್ ಆಚರಣೆಯ ಸಂದರ್ಭದಲ್ಲಿ ಮನೆಮನೆಗಳಲ್ಲಿ, ಚರ್ಚ್ ಗಳಲ್ಲಿ ಕಟ್ಟಲಾಗುವ ಕೊಟ್ಟಿಗೆಗಳ ಅಲಂಕಾರಕ್ಕೆ ಬಳಸುವ ಎಳೆಯ ಬೆಳೆಯನ್ನು ಜಾಗರವೆಂದು ಕರೆಯುತ್ತಾರೆ.
ಮಂಗಳ ಪ್ರಸಂಗಗಳಲ್ಲಿ ಅಂಕುರರ‍್ಪಣವೆಂಬ ರ‍್ಮದ ಅಂಗವಾಗಿ ಬೆಳೆಸುವ ಎಳೆಯ ಪೈರಿಗೆ ಜಾಗರ ಎನ್ನುತ್ತಾರೆ. ನವಿಲಿನ ಕುಣಿತ, ಎಚ್ಚರ, ಜಾಗರ ಎಂಬ ಅರ್ಥವೂ ಈ ಜಾಗರ ಪದಕ್ಕಿದೆ. ದಸರೆಯ ಸಂದರ್ಭದಲ್ಲಿ ಈ ಜಾಗರಕ್ಕೆ ಬನ್ನಿ ಎಂದು ಕರೆದು ಅದನ್ನು ಪರಸ್ಪರ ವಿನಿಮಯ ಮಾಡಿಕೊಂಡು `ಬಂಗಾರ ತಗೊಂಡ ಬಂಗಾರದಂಗ ಇರೂಣು’ ಎಂದು ಹೇಳುವ ಪದ್ಧತಿಯಿದೆ. ಈ ಬನ್ನಿ ವಿನಮಯ ಜನರ ನಡುವಿನ ವೈಮನಸ್ಸುನ್ನು ಇಲ್ಲವಾಗಿಸುವ ಒಂದು ನಡೆ ಎಂದು ಹೇಳಲಾಗುತ್ತದೆ.
ಮೂಡಣ ಸೀಮೆಯ ಪಂಡಿತರನ್ನು ಜ್ಯೋತಿಷಿಗಳು, ರಾಯರು (ಅರಸರು) ಎಂದೂ ಗುರುತಿಸಲಾಗುತ್ತದೆ. ಈ ಮೂವರು ರಾಯರು ಬಂದು ಕೂಸು ಯೇಸುಸ್ವಾಮಿಯನ್ನು ಕಂಡು ಕಾಣಿಕೆಗಳನ್ನು ಸಮರ್ಪಿಸಿ ತಮ್ಮ ಗೌರವ ಸೂಚಿಸಿದುದನ್ನು ಸ್ಮರಿಸಲು ಜನವೆರಿ ೬ ರಂದು ಮೂರು ರಾಯರ ಹಬ್ಬವನ್ನು ಆಚರಿಸಲಾಗುತ್ತದೆ.
ಈ ಮೂರು ರಾಯರ ಹಬ್ಬದ ದಿನದ ಸಂಜೆ ಕಟ್ಟಿದ ಕೊಟ್ಟಿಗೆಯನ್ನು ಬಿಚ್ಚುವ ಪರಿಪಾಠವಿದೆ. ಕೊಟ್ಟಿಗೆಯಲ್ಲಿರಿಸಿದ್ದ ಪವಿತ್ರ ಕುಟುಂಬದ ಸದಸ್ಯರ ಸ್ವರೂಪಗಳನ್ನು, ಕುರುಬರು, ಮೂರುರಾಯರ ಮತ್ತು ದನಕರುಗಳ ಗೊಂಬೆಗಳನ್ನು ತೆಗೆದು ಮುಂದಿನ ವರ್ಷದಲ್ಲಿ ಬಳಸಲು ಉದ್ದೇಶಿಸಿ ಜೋಪಾನವಾಗಿ ಎತ್ತಿಡಲಾಗುತ್ತದೆ.
ಕೊಟ್ಟಿಗೆಯ ಅಲಂಕಾರಕ್ಕೆ ಬಳಸಿದ್ದ ಜಾಗರವನ್ನು ಮೆರವಣಿಗೆಯಲ್ಲಿ ಒಯ್ದು ಬಾವಿಗೆ, ಕೆರೆಗೆ ಅಥವಾ ಹೊಳೆಯ ನೀರಿಗೆ ಹಾಕುವ ಕ್ರಿಯೆ ಕ್ರೈಸ್ತ್ ಜನಪದರ ಒಂದು ಜಾನಪದ ಸಂಪ್ರದಾಯವಾಗಿ ರೂಢಿಯಲ್ಲಿತ್ತು. ಕೆಲವು ಊರುಗಳಲ್ಲಿ ಮೂರು ರಾಯರ ವೇಷಧಾರಿಗಳು ಇಂಥ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದರು. ಮತ್ತೆ ಕೆಲವು ಊರುಗಳಲ್ಲಿ ಹೆಂಗಳೆಯರೇ ಈ ಜಾಗರವನ್ನು ಹೊತ್ತು ಮೆರವಣಿಗೆ ನಡೆಸಿ ನೀರಿಗೆ ಒಪ್ಪಿಸುತ್ತಿದ್ದರು. ಜೊತೆಗೆ ವಾಲಗದವರೂ ಈ ಮೆರವಣಿಗೆಯ ಮುಂದಿರುತ್ತಿದ್ದರು.
ನಮ್ಮ ನಾಡಿನ ಪ್ರಮುಖ ಹಬ್ಬ ಗಣೇಶ ಚತುರ್ಥಿ ಸಂದರ್ಭದಲ್ಲಿ ಮನೆಗಳಲ್ಲಿ, ಪೆಂಡಾಲುಗಳಲ್ಲಿ ಕೂರಿಸಿದ್ದ ಸಾರ್ವಜನಿಕ ಮಣ್ಣಿನ ಗಣಪತಿಯ ಗೊಂಬೆಗಳನ್ನು, ಬೆಸ ಸಂಖ್ಯೆಯ ದಿನಗಳ ಕಾಲ ಪೂಜಿಸಿ. ನಂತರ ಮೆರವಣಿಗೆಯಲ್ಲಿ ಕೊಂಡೊಯ್ದು ನೀರಿಗೆ ವಿಸರ್ಜಿಸುವ ಸಂಪ್ರದಾಯವಿದೆ. ಕ್ರೈಸ್ತರ ಕ್ರಿಸ್ಮಸ್ ಕೊಟ್ಟಿಗೆಯ ಜಾಗರವನ್ನು ವಿರ‍್ಜಿಸುವ ಸಂಪ್ರದಾಯವು ಗಣೇಶನ ಈ ವಿಸರ್ಜನೆಯ ಸಂಪ್ರದಾಯವನ್ನು ಹೋಲುತ್ತಿತ್ತು. ಇದಕ್ಕೂ ಅದೇ ಸಂಭ್ರಮವಿರುತಿತ್ತು. ಇಂದು ಈ ಕ್ರೈಸ್ತರ ಜಾಗರದ ವಿರ‍್ಜನೆಯ ಮೆರವಣಿಗೆ ಪದ್ಧತಿ ಕಾಲಗರ್ಭಕ್ಕೆ. ಆದರೆ, ಜಾಗರದಿಂದ ಕೊಟ್ಟಿಗೆಯ ಅಲಂಕಾರಮಾಡುವ ಪದ್ಧತಿ ಇನ್ನೂ ಜಾರಿಯಲ್ಲಿದ್ದು, ಸಾರ್ವತ್ರಿಕಗೊಂಡಿದೆ.
ಎಫ್.ಎಂ.ನಂದಗಾವ.