
ಸಾಟಿಯುಂಟೇ ನಿನಗೆ ಅಕ್ಷರದಮ್ಮಾ.
ಕಲಿತೆ, ಕಲಿಸಿದೆ
ನೀ ಕತ್ತಲೆಯೊಳಗಿನ ಕಂದೀಲೇ.
ವಿದ್ಯೆ ಬರಗೆಟ್ಟವರಿಗೆ
ನೀ ಅಕ್ಷರ ಬಿತ್ತಿದ ವ್ಯವಸಾಯಿ
ವಿಕಸಿತ ಮನಗಳ ಕನಸುಗಳಿತ್ತ
ಅಕ್ಕರೆಯುಳ್ಳ ಮಾತಾಯಿ.
ಹೆಣ್ಣಿಗೆ ಮೂಲೆಯೇ ಹಣೆಬರಹ
ಬಡವರ ಬವಣೆಯು ತರತರಹ
ಆ ವಿಧಿಯನ್ನೇ ಬದಲಿಸೋ ವಿಧಾನ
ವಿದ್ಯೆ ಎಂದೆಯೇ ತಾಯಿ.
ತುಳಿಯುವ ತಲೆಗಳ ಜಾತಿಗಳು
ಗೀಳಿನ ತಲೆಕೆಟ್ಟ ನೀತಿಗಳು
ಹೊಸಕಿದ ಮನಗಳ ಅರಳಿಸಲೆಂದೇ
ಶಾಲೆ ಮಾಡಿದ ಹೂವಾಡಗಿತ್ತಿ.
ಮಸೆಯುವ ಮಚ್ಚರದ-ಹಲ್ಲುಗಳು
ಸಹಿಸದೆ ಎಸೆಯುವ ಕಲ್ಲುಗಳು
ಸಹಿಸುತ ದಾರಿಯ ಸವೆಸಿದ ತಾಯಿ
ಮುಟ್ಟಲು ಕಲಿಸುವ ನಿನ್ನಯಾಗುರಿ.
ಜ್ಯೋತಿಯ ಮಾಸತಿ ಮನೆಗರತಿ
ಕಲಿಯುವ ದೀನರ ಮನದೊಡತಿ.
ಹಟ್ಟಿ ಮನೆಗಳಲಿ ವಿದ್ಯೆಯ ದೀವಿಗೆ
ಮುಟ್ಟಿಸಿ ಬೆಳಗುವ ಆರದ ಜ್ಯೋತಿ
ಯೋಗೇಶ್ ಮಾಸ್ಟರ್