
ಭಾರತ ಅನೇಕ ಧರ್ಮ ಮತ್ತು ಸಂಸ್ಕೃತಿಗಳ ಸಂಗಮ. ಪ್ರತಿ ಧರ್ಮ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ಹಬ್ಬ ಮತ್ತು ಆಚರಣೆಗಳು ವರ್ಷವಿಡೀ ಜನರನ್ನು ಸಮಾರಂಭಗಳಲ್ಲಿ ತೊಡಗಿಸಿಡುತ್ತವೆ. ಇಷ್ಟು ಸಾಲದೆಂಬಂತೆ, ವ್ಯಕ್ತಿಯ ಬೆಳವಣಿಗೆಯ ಪ್ರತಿ ಹಂತದಲ್ಲೂ ನಡೆಯುವ ಆಚರಣೆಗಳು, ಸಂಭ್ರಮಗಳು. ವಿಷೇಶವಾಗಿ ಅಕ್ಟೋಬರಿನಿಂದ ಹಿಡಿದು ಡಿಸೆಂಬರ್ ವರೆಗಿನ ದಿನಗಳಲ್ಲಂತೂ ಹಬ್ಬಗಳ ಮಹಾಪೂರವೇ ಹರಿಯುತ್ತದೆ. ಈ ಸಮಾರಂಭಗಳು ಮತ್ತು ಆಚರಣೆಗಳು ಬದುಕಿನ ಜಂಜಾಟದ ಏಕತಾನತೆಯನ್ನು ದೂರಮಾಡುತ್ತವೆ. ಡಿಸೆಂಬರ್ ಕೊನೆಯಲ್ಲಿ ಬರುವ ಕ್ರಿಸ್ಮಸ್ ಹಬ್ಬವಂತು ವರ್ಷದ ಕೊನೆಯ ಹಬ್ಬವಾಗಿದ್ದು, ಎಲ್ಲಾ ಹಬ್ಬಗಳಿಗೆ ಮಂಗಳ ಹಾಡಿ, ಮಂಗಳಮಯ ಹೊಸ ವರ್ಷದ ಸ್ವಾಗತಕ್ಕೆ ಹೊಸ ಹುರುಪಿನ, ಹೊಸ ಭರವಸೆಗಳ ಆಶೋತ್ತರಗಳನ್ನು ಹೊತ್ತು ತರುತ್ತದೆ. ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬ (ಪಾಸ್ಕ ಹಬ್ಬ)ವನ್ನು ಬಿಟ್ಟರೆ ಕ್ರೈಸ್ತ ಧರ್ಮಾನುಯಾಯಿಗಳಿಗೆ ಅತ್ಯಂತ ಪವಿತ್ರವಾದ ಹಬ್ಬವೆಂದರೆ ಯೇಸು ಕ್ರಿಸ್ತರ ಜನನದ (ಕ್ರಿಸ್ಮಸ್) ಹಬ್ಬ. ಆಧ್ಯಾತ್ಮಿಕ ಸಿದ್ಧತೆಗಳ ಜೊತೆಗೆ, ಕ್ರೈಸ್ತರು ಬಾಹ್ಯ ಸಿದ್ಧತೆಗಳಲ್ಲೂ ತೊಡಗಿರುತ್ತಾರೆ. ಮನೆಗಳ ಶೃಂಗಾರ, ಹೊಸ ಬಟ್ಟೆಗಳ ಖರೀದಿ ಇವುಗಳ ಜೊತೆ, ಕ್ರಿಸ್ಮಸ್ ಕೇಕ್ಗಳಂತಹ ಸವಿ ಸವಿಯಾದ ಖಾದ್ಯಗಳ ತಯಾರಿ ಮತ್ತು ಅವುಗಳನ್ನು ಸ್ನೇಹಿತರಿಗೆ, ಬಂಧುಗಳಿಗೆ, ಅಕ್ಕಪಕ್ಕದ ಮನೆಯವರಿಗೆ ಹಂಚಿ ತಿಂದು ಖುಶಿ ಪಡುವುದು – ಇವಲ್ಲ ಅವಿರತವಾಗಿ ನಡೆಯುವ ಕೌಟಂಬಿಕ ಕಾರ್ಯಕ್ರಮಗಳು.
ಹಬ್ಬವೆಂದ ಮೇಲೆ ಅದಕ್ಕೊಂದು ಐತಿಹಾಸಿಕವಾದ ಅಥವಾ ಪೌರಾಣಿಕವಾದ ಹಿನ್ನೆಲೆ ಇದ್ದೇ ಇರುತ್ತದೆ. ಈ ಹಿನ್ನೆಲೆಯನ್ನು ಧರ್ಮದ ಚೌಕಟ್ಟಿನಲ್ಲಿ ಆಚರಿಸಿದಾಗ ಸಿಗುವ ಆಧ್ಯಾತ್ಮಿಕ ಸಂತೃಪ್ತಿಯನ್ನು ಸಾಮಾಜಿಕ ಆಚರಣೆಯ ಮೂಲಕ ಇತರರೊಡನೆ ಹಂಚಿದಾಗ ಸಮಾಜದಲ್ಲಿ ಅನ್ಯೋನ್ಯತೆ ಮತ್ತು ಸಾಮರಸ್ಯ ಬೆಳೆದು ಬರುತ್ತವೆ. ಯಾವುದೇ ಹಬ್ಬದ ಆಚರಣೆ ಸಮಾಜವನ್ನು ಒಡೆಯುವ ಅಥವಾ ಸಮಾಜದಲ್ಲಿ ವಿರಸವನ್ನು ಉಂಟುಮಾಡುವ ಸಂಕಲ್ಪ ಹೊಂದಿರುವುದಿಲ್ಲ. ಹಬ್ಬ ಹರಿದಿನಗಳ ಮೂಲೋದ್ಧೇಶವನ್ನು, ಕಾಲಕ್ಕೆ ತಕ್ಕಂತೆ ಅರ್ಥೈಸಿ, ಅವು ಮಾನವೀಯತೆ, ಸಾಮಾಜದ ಹಿತ ಮತ್ತು ಸಮುದಾಯಗಳ ನಡುವಿನ ಸಾಮರಸ್ಯವನ್ನು ಪೋಷಿಸುವ ಸಾಧನಗಳನ್ನಾಗಿಸಬೇಕು. ಆ ಮೂಲಕ ಸಮಾಜದಲ್ಲಿ ಶಾಂತಿ ಮತ್ತು ಪ್ರೀತಿಗಳ ಸಾರ್ವಜನಿಕ ಸಮಾರಂಭಗಳನ್ನಾಗಿಸಬೇಕು..
ಎರಡು ಸಾವಿರ ವರ್ಷಗಳ ಹಿಂದೆ ಪ್ರಭು ಯೇಸು ಕ್ರಿಸ್ತರ ಹುಟ್ಟಿದ ಐತಿಹಾಸಿಕ ಘಟನೆಯ ಸ್ಮರಣೆಯೇ ಕ್ರಿಸ್ಮಸ್ಹಬ್ಬದ ಹಿನ್ನೆಲೆ. ಇಸ್ರಯೇಲ್ (ಯಹೂದ್ಯ) ಜನಾಂಗದ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಜೀವನದಲ್ಲಿ ಇದೊಂದು ಮಹತ್ವಪೂರ್ಣವಾದ ಕಾಲಘಟ್ಟ. ಒಂದು ಕಾಲದಲ್ಲಿ ರಾಜಕೀಯವಾಗಿ ಹಾಗೂ ಧಾರ್ಮಿಕವಾಗಿ ಸ್ವತಂತ್ರವಾಗಿದ್ದ ಇಸ್ರಯೇಲ್ ಜನಾಂಗವು, ರೋಮ್ ಚಕ್ರಾಧಿಪತ್ಯದ ಆಡಳಿತಕ್ಕೊಳಪಟ್ಟು ಹೀನಾಯವಾದ ನೋವು ಮತ್ತು ಅವಮಾನಕ್ಕೊಳಗಾಗಿ ಅತಂತ್ರವಾದಾಗ, ಅ ನೋವಿನ ಗುಲಾಮಗಿರಿಯಿಂದ ಬಿಡುಗಡೆಗೊಳಿಸುವ ವಿಮೋಚಕನಿಗಾಗಿ ಹಾತೊರೆಯುತ್ತಿತ್ತು. ತನ್ನ ಧಾರ್ಮಿಕ ಇತಿಹಾಸದಲ್ಲಿ ಬಂದು ಹೋದ ಪ್ರವಾದಿಗಳು ತಮ್ಮ ಬರವಣಿಗೆಯಲ್ಲಿ ಹಾಗೂ ಜನರಿಗಿತ್ತ ಬೋಧನೆಯಲ್ಲಿ ವಿಮೋಚಕನೋರ್ವ ಬಂದೇ ಬರುವನೆಂದೂ ಆ ವಿಮೋಚಕ ಇಸ್ರಯೇಲ್ ಜನಾಂಗವನ್ನು ಪರಕೀಯರ ಗುಲಾಮಗಿರಿಯಿಂದ ಪಾರುಮಾಡಿ, ಮತ್ತೊಮ್ಮೆ ದೇವರ ಸ್ವತಂತ್ರ ಪ್ರಜೆಗಳನ್ನಾಗಿ ಮಾಡುವನೆಂದೂ ಭರವಸೆಯ ಆಶಯ ನೀಡಿದ್ದರು. ಆದರೆ ರಾಜಮನೆತನದ ಅರಮನೆಯೊಂದರ ವೈಭವದಲ್ಲಿ ಹುಟ್ಟಿ, ಸಂಪತ್ತಿನ ಸುಪತ್ತಿಗೆಯಲ್ಲಿ ಬೆಳೆದು, ಅರಸೊತ್ತಿಗೆಯ ಅಧಿಕಾರದೊಂದಿಗೆ, ಶೋಷಕ ಪ್ರಭುತ್ವದ ಮೇಲೆ ಯುದ್ಧ ಸಾರಿ ವಿಜಯ ಸಾಧಿಸುವ ರಾಜನ ರೂಪದಲ್ಲಿ ವಿಮೋಚಕ ಬರುವನೆಂಬ ಜನರ ನಿರೀಕ್ಷೆಯನ್ನು ಹುಸಿಮಾಡಿ, ನಿರಾಶ್ರಿತ ಬಡ ಬಡಗಿ ದಂಪತಿ ಜೋಸೆಫ್ಮತ್ತು ಮೇರಿಯ ಉದರದಲ್ಲಿ, ದೂರದ ಬೆತ್ಲೆಹೇಮಿನ ಹೊರ ವಲಯದ ಬಯಲಲ್ಲಿ, ಹಸುಗಳ ಹಟ್ಟಿಯೊಂದರಲ್ಲಿ ಇಸ್ರಯೇಲಿನ ವಿಮೋಚಕ ಯೇಸು ಕ್ರಿಸ್ತರು ಹುಟ್ಟುತ್ತಾರೆ. ವಿಪರ್ಯಾಸವೆಂದರೆ, ಶತ ಶತಮಾನಗಳಿಂದ ಯಾರ ಬರವನ್ನು ಎದುರು ನೋಡುತ್ತಿದ್ದರೋ ಅವರು ನಿಜವಾಗಿ ಬಂದಾಗ ಸ್ವಾಗತಿಸುವುದಕ್ಕೆ ಅಲ್ಲಿ ಯಾರೂ ಇರಲಿಲ್ಲ.
ಕಾರ್ಗತ್ತಲಿನ ನಿರ್ಜನ ಬಯಲಿನಲ್ಲಿದ್ದ ಆ ಗೋದಲಿಯಲ್ಲಿ ಈ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದ್ದುದು ಅಲ್ಲೇ ತಂಗಿದ್ದ ಕೆಲವು ಕರಿಗಾಹಿಗಳು ಮತ್ತು ಆ ಗೋದಲಿಯಲ್ಲಿದ್ದ ರಾಸುಗಳು. ಡಿಸೆಂಬರ್ ತಿಂಗಳ ಚಳಿಯಲ್ಲಿ, ಇದ್ದ ಬಿದ್ದ ಒಂದೆರಡು ಬಟ್ಟೆಗಳನ್ನು ಹೊದ್ದು ಕೊಂಡು, ಹಸುಗಳ ಮಲ-ಮೂತ್ರದ ವಾಸನೆಯ ನಡುವೆ ಗೋದಲಿಯ ಮೇವಿನ ತೊಟ್ಟಿಯಲ್ಲಿ (Manger) ಮಲಗಿದ ನಿಸ್ಸಾಹಾಯಕ, ಮುಗ್ಧ ಮಗುವಿನ ಸರಳತೆಯಲ್ಲಿ ದೇವರನ್ನು ಕಾಣಬೇಕಾದರೆ, ಆಧ್ಯಾತ್ಮದ ಕಣ್ಣುಗಳು ಬೇಕು. ಕಡು ಬಡತನದಲ್ಲಿ, ವೈಭವ ಆಡಂಬರಗಳಿಲ್ಲದೆ, ನಿಸ್ಸಾಹಾಯಕನಾಗಿ ಹುಟ್ಟಿದ ದೇವ ಮಾನವ ಯೇಸು ಕ್ರಿಸ್ತರ ಪುಣ್ಯ ಸ್ಮರಣೆ, ಇಂದು ವಿಜೃಂಭಣೆಯಿಂದ ಆಚರಿಸಲಾಗುತ್ತಿರುವ ಕ್ರಿಸ್ಮಸ್ಹಬ್ಬಕ್ಕೆ ಮೂರು ಸವಾಲುಗಳನ್ನು ಒಡ್ಡುತ್ತದೆ.
ಸಂಪತ್ತಿಗೊಂದು ಸವಾಲು.
ಬೆತ್ಲೆಹೇಮಿನ ಗೋದಲಿಯ ಮೇವಿನ ತೊಟ್ಟಿ ದಾರಿದ್ರ್ಯದ ಸಂಕೇತವಾಗಿದೆ. ಹಸುಗಳ ಆ ಸಾಮಾನ್ಯ ಹಟ್ಟಿಯಲ್ಲಿ ವೈಭವದ ವಸ್ತುಗಳಾವುವೂ ಇಲ್ಲ. ಅಲ್ಲಿರುವುದು ಒಣಗಿದ ಹುಲ್ಲು; ಮೂಕ ಪ್ರಾಣಿಗಳು. ಮತ್ತು ಕುರಿ-ಮೇಕೆಗಳ ಮಲ-ಮೂತ್ರದ ದುರ್ನಾತ. ಇವು ನಮ್ಮ ಶ್ರೀಮಂತಿಕೆಯ ಮತ್ತು ಸಮೃದ್ಧಿಯ ಅತಿಯಾದ ಪ್ರದರ್ಶನಕ್ಕೆ ಒಂದು ಸವಾಲಾಗಿದೆ. ದೇವರು ಮಾನವನಾಗಿ ಹುಟ್ಟಿ ನರಜನ್ಮವನ್ನು ಪಾವನಗೊಳಿಸಿದರು. ಆ ಮೂಲಕ ನರಜನ್ಮವನ್ನು ಪಾವನಗೊಳಿಸಲು ಅಧಿಕಾರ, ಅಂತಸ್ತು ಮತ್ತು ಧನರಾಶಿಯ ಅಶ್ಲೀಲ ಪ್ರದರ್ಶನ ಅನಿವಾರ್ಯವಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ದೇವರು ಸ್ವ-ಇಚ್ಛೆಯಿಂದ ಬಡತನವನ್ನು ಬರಸೆಳೆದು, ಬಡವರಿದ್ದಲ್ಲಿ ತಾನಿದ್ದೇನೆಂದು ತೋರಿಸಿದ್ದಾರೆ. ಬಾಹ್ಯ ಶಕ್ತಿಗಳಿಂದ ಮತ್ತು ಸನ್ನಿವೇಶಗಳಿಂದ ಹೇರಲ್ಪಟ್ಟ ಬಡತನ ಮೌಲ್ಯವಲ್ಲ. ಅದೊಂದು ಶೋಷಣೆ. ಪ್ರತಿಯೊಬ್ಬ ವ್ಯಕ್ತಿಗೂ ಗೌರವಯುಕ್ತವಾದ ಬದುಕನ್ನು ಸಾಗಿಸುವ ಹಕ್ಕು ದೇವರೇ ನೀಡಿರುತ್ತಾರೆ. ಆ ದೈವದತ್ತ ಹಕ್ಕನ್ನು ಪಡೆಯಬೇಕಾದುದು ಮತ್ತು ಆ ಹಕ್ಕನ್ನು ಮತ್ತೊಬ್ಬರು ಕಸಿದುಕೊಂಡಾಗ ಸಟೆದು ನಿಂತು ಹೋರಾಡಬೇಕಾದುದು ಪ್ರತಿಯೊಬ್ಬನ ಕರ್ತವ್ಯ. ಸಿರಿತನವನ್ನು ಪ್ರದರ್ಶನದ ವಸ್ತುವನ್ನಾಗಿ ಮಾಡುವುದು ದೈವೇಚ್ಛೆಗೆ ವಿರುದ್ಧವಾದದ್ದು. ವಿಶೇಷವಾಗಿ, ನಮ್ಮ ಸುತ್ತಲೂ ಬಡತನ ತಾಂಡವಾಡುತ್ತಿರುವಾಗ, ಪುಟ್ಟ ಮಕ್ಕಳ ಜೀವಗಳನ್ನು ಚಿಗುರಿನಲ್ಲೇ ಹಿಸುಕಿ ಚೆಲ್ಲಾಟವಾಡುತ್ತಿರುವ ದಾರಿದ್ರ್ಯವಿರುವಾಗ, ಧನವಂತರು ತಮ್ಮ ಸಂಪತ್ತನ್ನು ಪ್ರದರ್ಶಿಸಿ, ಭೋಗದ ಬದುಕು ಬಾಳುತ್ತಿರುವುದು ನಿಜವಾಗಿಯೂ ಮಾನವೀಯತೆಯ ಮೌಲ್ಯಕ್ಕೆ ವ್ಯತಿರಿಕ್ತವಾಗಿದೆ. ಇಂತಹ ಸಂವೇದನಹೀನರಿಗೆ ಗೋದಲಿಯಲ್ಲಿ ಮಲಗಿದ ಶಿಶುವಿನ ಸವಾಲೇನೆಂದರೆ ʼನಿಮ್ಮ ಹಬ್ಬ ಹರಿದಿನಗಳ ಆಚರಣೆಯು ನಿಜವಾಗಿಯೂ ದೇವರಲ್ಲಿ ನಿಮಗಿರುವ ಭಕ್ತಿ, ಶೃದ್ಧೆ, ವಿಶ್ವಾಸ ಮತ್ತು ನಂಬಿಕೆಗಳ ಅಭಿವ್ಯಕ್ತಿ ಆಗಿದ್ದರೆ, ಅದು ಹಸಿದವರ, ದೀನ ದಲಿತರ, ಮಕ್ಕಳ ಮತ್ತು ಬದುಕಿನ ಮೂಲಭೂತ ಅವಶ್ಯಕತೆಗಳಿಂದ ವಂಚಿತರಾದವರನ್ನು ಆದರಿಸಿ, ಅವರಿಗೆ ಬದುಕಿನಲ್ಲಿ ಭರವಸೆಯ ದೀಪವೊಂನ್ನು ಉರಿಸುವ ಮೂಲಕ ವ್ಯಕ್ತವಾಗಬೇಕುʼ. ಅಸಹಾಯಕರ, ನಿರ್ಗತಿಕರ ಮತ್ತು ಬದುಕಿನ ಕನಿಷ್ಟ ಸುಖಗಳಿಂದ ವಂಚಿತರಾದವರ ಸಹಾಯಕ್ಕೆ ಹಸ್ತ ನೀಡುವುದೇ ನಿಜವಾದ ಪೂಜೆ, ಪ್ರಾರ್ಥನೆ ಮತ್ತು ಧರ್ಮನಿಷ್ಠೆ. ಇದೇ ನಿಜವಾದ ಕ್ರಿಸ್ಮಸ್ ಆಚರಣೆ.
ತಿನ್ನುಬಾಕ ಸಂಸ್ಕೃತಿಗೊಂದು ಸವಾಲು:
ಹಸುಗಳ ಹಟ್ಟಿಯಲ್ಲಿರುವ ಮೇವಿನ ತೊಟ್ಟಿ ತಿನ್ನುಬಾಕ ಸಂಸ್ಕೃತಿಗೊಂದು ಸಂಕೇತ. ಮೇವಿನ ತೊಟ್ಟಿಯಲ್ಲಿ ಹಾಕಿದ ಹುಲ್ಲು, ಕ್ಷಣಮಾತ್ರದಲ್ಲಿ ಖಾಲಿಯಾಗುತ್ತದೆ. ಅಲ್ಲಿ ಹುಲ್ಲಿರುವ ತನಕ, ಹಸುಗಳ ಹಸಿವು ನೀಗುವುದಿಲ್ಲ. ಹುಲ್ಲು ಹಾಕಿದಷ್ಟೂ ಖಾಲಿಯಾಗುತ್ತದೆ. ಮನುಷ್ಯನ ಹಸಿವಿಗೂ ಕೊನೆಯಿಲ್ಲ. ತಿಂದು ಹೊಟ್ಟೆಯ ಹಸಿವು ಹಿಂಗಿದರೆ, ಬಾಯಿ ಚಪಲದ ತೆವಲಿಗಾಗಿ ತಿನ್ನುವವರನೇಕರು. ಮನುಷ್ಯನ ಹಸಿವು ಕೇವಲ ಆಹಾರಕಷ್ಟೇ ಸೀಮಿತವಾಗಿಲ್ಲ. ಸಂಪತ್ತು, ಖ್ಯಾತಿ, ಆಡಂಬರ, ವೈಭವ ಮತ್ತು ಅಧಿಕಾರಕ್ಕೂ ಮನುಷ್ಯ ಹಸಿದು ಹಪಹಪಿಸುತ್ತಾನೆ. ಇದೊಂದು ತೀರದ ಹಸಿವು. ಈ ಹಸಿವು ಅಂಕೆ ಮೀರಿದಾಗ ರೋಗವಾಗುತ್ತದೆ. ಈ ರೋಗದಿಂದಾಗುತ್ತಿರುವ ಪ್ರಮಾದಗಳನ್ನು ಇಂದು ನಾವು ನಮ್ಮ ದೇಶದ ರಾಜಕೀಯ ಕ್ಷೇತ್ರದಲ್ಲಿ, ವಾಣಿಜ್ಯ ಕ್ಷೇತ್ರದಲ್ಲಿ, ಮಾಧ್ಯಮಗಳಲ್ಲಿ ಹಾಗೂ ಅಂತರ್ರಾಷ್ಟ್ರೀಯ ಮಟ್ಟದಲ್ಲೂ ಕಾಣುತ್ತೇವೆ. ಈ ಹಸಿವು, ಬಡವರ, ಮಕ್ಕಳ ಮತ್ತು ಇನ್ನು ಹುಟ್ಟಲಿರುವ ಶಿಶುಗಳ ಆಹಾರವನ್ನು, ಅವರ ಸ್ವಾತಂತ್ರ್ಯವನ್ನು ಮತ್ತು ಅವರ ಭವಿಷ್ಯವನ್ನೇ ನುಂಗಿಹಾಕಿದೆ. ರಶ್ಯಾ ಮತ್ತು ಯುಕ್ರೇನಿನ ನಡುವಿನ ಯುದ್ಧ, ಇಸ್ರಯೇಲ್ ಮತ್ತು ಪಾಲೆಸ್ತೀನ್ ನಡುವಿನ ಸಮರ ಸಾವಿರಾರು ಮಕ್ಕಳ ಬದುಕನ್ನು ಬಲಿ ತೆಗೆದು ಕೊಂಡಿದೆ, ಮಣಿಪುರದಲ್ಲಿ ಮೈತೆಯೀ ಮತ್ತು ಕುಕಿ ಸಮುದಾಯಗಳ ನಡುವಿನ ಕಲಹ ಆ ಸಮುದಾಯಗಳ ಭವಿಷ್ಯವನ್ನೇ ಬದಲಾಯಿಸಿದೆ. ಬಡವರ ಮೇಲಾಗಲೀ, ದುರ್ಬಲರ ಮೇಲಾಗಲೀ, ಮಹಿಳೆಯರ ಮೇಲಾಗಲೀ, ಏನೂ ತಿಳಿಯದ ಮುಗ್ಧ ಮಕ್ಕಳ ಮೇಲಾಗಲೀ ಕಿಂಚಿತ್ತೂ ಅನುಕಂಪವಿಲ್ಲದೆ, ಮಾನವೀಯತೆಯ ಎಲ್ಲಾ ಮರ್ಯಾದೆಯನ್ನು ಮೀರಿ, ಸ್ವಾರ್ಥಸಾಧನೆಯ ಹಸಿವನ್ನು ನೀಗುವ ಒಂದೇ ಉದ್ಧೇಶದಿಂದ ಮಾಡಿದ ಮಹಾ ಅಪರಾಧಗಳಿವು. ಇದಕ್ಕೆ ಸವಾಲಾಗಿ ಸರ್ವಶಕ್ತ, ಭೂಮ್ಯಾಕಾಶಗಳ ಪ್ರಭು ಬೆತ್ಲೆಹೇಮಿನ ಗೋದಲಿಯ ಮೇವಿನ ತೊಟ್ಟಿಯಲ್ಲಿ ನಿಶ್ಶಕ್ತ, ನಿಸ್ಸಹಾಯಕ, ನಿರಾಶ್ರಿತ, ಮಾನವನಾಗಿ ಹುಟ್ಟಿ ಬಂದು, ಮಾನವನ ಹೊಟ್ಟೆಬಾಕ ಸಂಸ್ಕೃತಿಗೆ ಸವಾಲಾಗಿದ್ದಾರೆ.
ಕಲುಷಿತ ಸಂಬಂಧಗಳಿಗೊಂದು ಸವಾಲು:
ನಾವಿರುವ ಲೋಕದ ವಾಸ್ತವಿಕ ಪರಿಸ್ಥಿತಿಗೆ, ಬೆತ್ಲೆಹೇಮಿನ ಗೋದಲಿ ಒಂದು ಹಿಡಿದ ಕನ್ನಡಿ. ಅಂದು ಬೆತ್ಲೆಹೇಮ್ ನಗರದ ಕಣ್ಣು ಕೋರೈಸುವ ಬೆಳಕಿನಲ್ಲಿ ಸುಖ-ಭೋಗಗಳ ಆಡಂಬರ ನಡೆಯುತ್ತಿದ್ದಾಗ, ಕೆಲವೇ ಮೈಲಿಗಳ ಅಂತರದಲ್ಲಿ ಊರಹೊರಗಿನ ಗೋದಲಿಯೊಂದರಲ್ಲಿ ದಾರಿದ್ರ್ಯದ ಅಟ್ಟಹಾಸ ನಡೆಯತ್ತಿತ್ತು. ಈ ದಾರಿದ್ರ್ಯ ಕೇವಲ ಮೂಲಭೂತ ಅವಶ್ಯಕತೆಗಳ ದಾರಿದ್ರ್ಯ ಮಾತ್ರವಲ್ಲ. ಇದು ಮಾನವೀಯತೆಯನ್ನು ಮರೆತ ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳ ದಾರಿದ್ರ್ಯವೂ ಹೌದು. ಸಿರಿತನದ ಆಡಂಬರ ಮತ್ತು ವೈಭವದಲ್ಲಿ ಮೆರೆದಾಡುವ ಸಮಾಜದಲ್ಲಿ ಬಡ ಮಹಿಳೆಯೋರ್ವಳಿಗೆ ತನ್ನ ಮಗುವನ್ನು ಪ್ರಸವಿಸುವ ಅತ್ಯಂತ ಖಾಸಗಿಯಾದ, ಪವಿತ್ರವಾದ ಮತ್ತು ಅನಿವಾರ್ಯವಾದ ಕ್ರಿಯೆಗೆ ಸ್ಥಳ ಸಿಗುವುದಿಲ್ಲ. ಇದು ಎರಡುಸಾವಿರ ವರ್ಷಗಳ ಹಿಂದಿನ ಕಥೆಯಲ್ಲ. ಇದು ನಮ್ಮ ಉಪಭೋಗ ಪ್ರಧಾನ, ಅಸಮಾನತೆಯಿಂದ ಕೂಡಿದ ಆಧುನಿಕ ಸಂಸ್ಕೃತಿಯ ಮುಖಕ್ಕೆರಚುವಂತೆ ಕಾಣುವ ಆಭಾಸ. ಒಂದು ಕಡೆ ಶ್ರೀಮಂತಿಕೆಯ ಅಶ್ಲೀಲ ಪ್ರದರ್ಶನ; ಮತ್ತೊಂದೆಡೆ ದಾರಿದ್ರ್ಯದ ಅಸಹಾಯಕತೆಯ ಅಟ್ಟಹಾಸ. ಇವುಗಳ ನಡುವೆ ಸಂಬಂಧಗಳು ಎಲ್ಲೋ ಕಿತ್ತು ಹೋಗುತ್ತವೆ. ಒಂದೇ ತರಗತಿಯಲ್ಲಿ ಒಂದೇ ಬೆಂಚಿನ ಮೇಲೆ ಕುಳಿತು, ಒಂದೇ ತೆರನಾದ ಸಮವಸ್ತ್ರ ಧರಿಸಿದ ಮಕ್ಕಳಲ್ಲಿ ಎಂದೋ ಕಡಿದು ಹೋದ ಸಂಬಂಧ. ಯಾಕೆಂದರೆ ಒಬ್ಬಳು ಸಿರಿವಂತರ ಮನೆಯವಳು, ಮತ್ತೊಬ್ಬಳು ಬಡವರ ಮನೆಯವಳು. ಒಬ್ಬಳು ಮೇಲ್ಜಾತಿಯವಳು; ಮತ್ತೊಬ್ಬಳು ಕೀಳು ಜಾತಿಯವಳು. ಆದರೆ ಬೆತ್ಲೆಹೇಮಿನ ಗೋದಲಿನ ಆ ಮೇವಿನ ತೊಟ್ಟಿಯಲ್ಲಿ ಭಗವಂತ ಮಾನವನಾಗಿ, ತನ್ನೆಲ್ಲಾ ಶಕ್ತಿ, ಸಾಮಾರ್ಥ್ಯ, ವೈಭವಗಳನ್ನು ಬದಿಗಿಟ್ಟು, ದುರ್ಬಲ ಶಿಶುವಾಗಿ, ನಿರಾಶ್ರಿತ ಕುಟುಂಬವೊಂದರಲ್ಲಿ ಹುಟ್ಟಿ ಮಾನವ ಜಾತಿಯ ಅಶಕ್ತತೆಯನ್ನು ಅಪ್ಪಿಕೊಂಡರು. ಬಡವರ ಮನೆಗಿಲ್ಲದ ಮುಂಬಾಗಿಲು ಎಲ್ಲರನ್ನು ಸ್ವಾಗತಿಸುತ್ತದೆ. ಬಡವರ ಬಾಳು ಬಟ್ಟ ಬಯಲು. ಆದರೆ ಧನವಂತರ ಸ್ಥಿತಿ ಹಾಗಲ್ಲ. ಧನವಂತರ ಮನೆಯ ಸುತ್ತಲಿನ ಕಲ್ಲಿನ ಎತ್ತರದ ಗೋಡೆಗಳು ಮತ್ತು ಕಬ್ಬಿಣದ ಬೃಹತ್ ದ್ವಾರಗಳು, ಸಂಬಂಧಗಳನ್ನು ಹೊರಗಿಡುತ್ತವೆ. ತಮ್ಮ ಶ್ರೀಮಂತಿಕೆಯಲ್ಲೇ ನಂಬಿಕೆಯಿಡುವ ಇವರು ಈ ಕೃತಕ ಆವರಣದಲ್ಲಿ ತಮ್ಮದೇ ಆದಂತಹ ಗುಪ್ತ ಲೋಕವೊಂದವನ್ನು ಸೃಷ್ಟಿಸಿ, ನಿರ್ಲಿಪ್ತರಾಗುತ್ತಾರೆ. ಗೋದಲಿಯ ಮೇವಿನ ತೊಟ್ಟಿಯಲ್ಲಿದ್ದ ಆ ಕೂಸು ಮಾನವ – ಮಾನವರನ್ನು ಒಂದು ಗೂಡಿಸಿ ಸಂಬಂಧಗಳನ್ನು ಜೋಡಿಸುವುದಷ್ಟೇ ಅಲ್ಲ, ಮಾನವರನ್ನು ಪರಮಾತ್ಮನಲ್ಲಿ ಒಂದು ಗೂಡಿಸಿ ಪಾಪಗಳಿಂದ, ಕುಕೃತ್ಯಗಳಿಂದ, ಸ್ವಾರ್ಥದಿಂದ, ಸಿರಿತನದ ದರ್ಪದ ಅಮಾನವೀಯತೆಯಿಂದ ಬಿಡುಗಡೆಗೊಳಿಸಿ ಕಡಿದುಹೋದ ಸಂಬಂಧಗಳ ಕೊಂಡಿಗಳನ್ನು ಮತ್ತೆ ಜೋಡಿಸುವ ವಿಮೋಚಕನಾಗುತ್ತದೆ.
ಇದ್ದ ಬಿದ್ದ ಕೆಲವೇ ಅರಿವೆಗಳನ್ನು ಉಪಯೋಗಿಸಿ ಮೇವಿನ ತೊಟ್ಟಿಯಲಿ ಮಲಗಿಸಿರುವ ಮೇರಿ-ಜೋಸೆಫರ ಕೂಸು, ತನ್ನ ಅಪ್ಪ-ಅಮ್ಮನ ಬೆಚ್ಚಗಿನ ಪ್ರೀತಿಯಲ್ಲಿ ಸುರಕ್ಷಿತವಾಗಿದೆ. ಕ್ರಿಸ್ಮಸ್ ಹಬ್ಬ ಭಗವಂತನ ಅದೇ ಪ್ರೀತಿಯ ಬಿಸಿಯಪ್ಪುಗೆಗೆ ಮನುಕುಲವನ್ನು ಆಹ್ವಾನಿಸುತ್ತದೆ. ಮಾನವ ತನ್ನ ಹೊಟ್ಟೆಬಾಕತನದ ಹಸಿವು, ಸಿರಿತನದ ದಾರಿದ್ರ್ಯ ಮತ್ತು ಸಂಬಂಧಗಳ ಕ್ಷಾಮಗಳನ್ನು ನೀಗಿಸಿ, ವ್ಯಕ್ತಿ ವ್ಯಕ್ತಿಗಳ ನಡುವೆ ಹಾಗೂ ಮನುಷ್ಯ ಮತ್ತು ದೇವರ ನಡುವೆ ಪ್ರೀತಿ – ಪ್ರೇಮದ, ಆತ್ಮೀಯತೆ ಮತ್ತು ಮಾನವೀಯತೆಯ ಸೇತುವೆಯಾಗಲಿ ಎಂಬುದೇ ಕ್ರಿಸ್ಮಸ್ಹಬ್ಬದ ಆಶಯ ಮತ್ತು ಸಂದೇಶ.
ಜೀವನ್ಪ್ರಭು ಎಸ್.ಜೆ
ವಿದ್ಯಾನಿಕೇತನ
ಧಾರವಾಡ.