ಕ್ರಿಸ್ಮಸ್ ತಾತ

Advertisements
Share

ಡಿಸೆಂಬರ್ ಬಂದೊಡನೆ ಅಂಗಡಿಗಳಲ್ಲಿ, ಮಾಲ್ ಗಳಲ್ಲಿ, ಪಾರ್ಕುಗಳಲ್ಲಿ ಕ್ರಿಸ್ಮಸ್ ಸಂಭ್ರಮ. ಎಲ್ಲೆಲ್ಲಿಯೂ ಕಾಣ ಸಿಗುವ ಬಣ್ಣ ಬಣ್ಣದ ಅಲಂಕಾರಗಳ ನಡುವೆಯೇ ಒಬ್ಬ ಮನುಷ್ಯನಂತೂ ಎಲ್ಲೆಡೆಯೂ ಕಾಣಸಿಗುತ್ತಾನೆ. ಯಾರದು ಎನ್ನುವ ಮೊದಲೇ ಥಟ್ ಎಂದು ಸಿಗುವ ಉತ್ತರ ’ಸಾಂಟಾ ಕ್ಲಾಸ್’ ಅಥವಾ ಮಕ್ಕಳ ಪ್ರೀತಿಯ ಕ್ರಿಸ್ಮಸ್ ತಾತ. ಡೊಳ್ಳು ಹೊಟ್ಟೆ, ಕೆಂಪು ಅಂಗಿ, ರೇಶ್ಮೆಯಂಥಾ ತಲೆಗೂದಲು, ನುಣುಪಾದ ಗಡ್ಡ, ನಿಶ್ಕಲ್ಮಶ ನಗು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಉಡುಗೊರೆ ತುಂಬಿದ ಕೈಚೀಲದಿಂದಾಗಿ ಎಲ್ಲರ ಸೆಳೆಯುವ ಈ ತಾತ ಕ್ರಿಸ್ಮಸ್ ಹಬ್ಬದ ಅನೇಕ ಅರ್ಥಗರ್ಭಿತ ಸಂಕೇತಗಳಲ್ಲಿ ಒಬ್ಬ.

ಇಡೀ ವರ್ಷ ಒಳ್ಳೆಯ ನಡತೆಯನ್ನು ಪ್ರದರ್ಶಿಸಿದರೆ, ಕಾಯ್ದುಕೊಂಡರೆ ಕ್ರಿಸ್ಮಸ್ ಹಬ್ಬದ ಹಿಂದಿನ ದಿನ ಬಂದು ಒಳ್ಳೆಯ ಉಡುಗೊರೆಯನ್ನು ಕೊಡುತ್ತಾನೆ ಎಂಬ ನಂಬಿಕೆಯಲ್ಲಿ ಮಕ್ಕಳಿಗೆ ವರ್ಷ ಪೂರ್ತಿ ಅವನದೇ ಧ್ಯಾನ, ನಿರೀಕ್ಷೆ, ಕಾತುರ. ಅಂತೆಯೇ ಕ್ರಿಸ್ಮಸ್ ಅಂದಾಕ್ಷಣ ಮಕ್ಕಳಿಗೆ ಮಾತ್ರವಲ್ಲದೆ ಎಲ್ಲರಿಗೂ ನೆನಪಿಗೆ ಬರುವುದು ಈ ಸಾಂಟಾ ಕ್ಲಾಸ್. ಈ ಸಾಂಟಾಕ್ಲಾಸ್ ಯಾರು? ಇವರಿಗೂ ಕ್ರಿಸ್ಮಸ್ಸಿಗೂ ಏನು ಸಂಬಂಧ ? ನಿಜಕ್ಕೂ ಸಾಂಟಾ ಈ ರೀತಿಯೇ ಇದ್ದರೇ ಎನ್ನುವದನ್ನು ತಿಳಿಯ ಹೊರಟರೆ ಆಸಕ್ತಿಕರ ವಿಷಯಗಳು ಹೊರಹೊಮ್ಮುತ್ತದೆ ಸಾಂಟಾ ಬಗ್ಗೆ ವಿವಿಧ ದೇಶಗಳಲ್ಲಿ ಅನೇಕ ದಂತಕಥೆಗಳಿದ್ದರೂ ನಾಲ್ಕನೆಯ ಶತಮಾನದಲ್ಲಿ ಟರ್ಕಿ ದೇಶದ ಮೈರಾ ಪ್ರದೇಶದ ಬಿಷಪ್ ಆಗಿದ್ದ ನಿಕೋಲಸ್ ಎಂಬ ವ್ಯಕ್ತಿಯೇ ಸಾಂಟಾಕ್ಲಾಸ್ ಕಲ್ಪನೆಯ ಮೂಲ.

ಬಡವರು, ನಿರ್ಗತಿಕರ ಮೇಲೆ ಅಪಾರವಾದ ಪ್ರೀತಿ ಕನಿಕರವನ್ನು ತೋರುತ್ತಿದ್ದ ನಿಕೋಲಸ್, ಅಂಥವರಿಗಾಗಿಯೇ ತಮ್ಮೆಲ್ಲಾ ಹಣ ಆಸ್ತಿಯನ್ನು ವ್ಯಯ ಮಾಡುತ್ತಿದ್ದರು. ಅದರಲ್ಲೂ ದಾನದ ಸಮಯದಲ್ಲಿ ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ತಿಳಿಯಬಾರದು ಎಂಬ ಯೇಸುವಿನ ವಾಕ್ಯದಂತೆಯೇ ತಾವು ಮಾಡುತ್ತಿದ್ದ ದಾನವನ್ನು ಗೌಪ್ಯವಾಗಿ ಇಡುತ್ತಿದ್ದರು. ಅಂತೆಯೇ ಬಡವರ ಮನೆಯ ಹೊಗೆಯ ಗೂಡು, ಕಿಟಕಿಗಳ ಮೂಲಕ ನಾಣ್ಯಗಳನ್ನು ಎಸೆಯುವುದು, ಮನೆಯ ಹೊರಗೆ ಬಿಟ್ಟ ಶೂಗಳಲ್ಲಿ ನಾಣ್ಯಗಳನ್ನು ಇಡುವುದರ ಮುಲಕ ಸಹಾಯ ಮಾಡುವುದರಲ್ಲಿ ನಿಸ್ಸೀಮರಾಗಿದ್ದರು. ಅನ್ಯಾಯಕ್ಕೊಳಗಾದ , ಅಸಹಾಯಕರ ರಕ್ಷಣೆಗೂ ಧಾವಿಸುತ್ತಿದ್ದ ಇವರು ನಿಧನರಾದ ನಂತರ ಇವರ ಅಭಿಮಾನಿಗಳು ಅವರ ನೆನಪಿನಲ್ಲಿ ಅವರ ಸೇವಾ ಕಾರ್ಯಗಳನ್ನು ಮುಂದುವರಿಸಿಕೊಂಡು ಬಂದದ್ದು ವಿಶ್ವದಾದ್ಯಂತ ಅವರನ್ನು ಜನಪ್ರಿಯವಾಗಿಸಿತು. ೨೦ನೇ ಶತಮಾನದಲ್ಲಿ ಅಮೆರಿಕಾದ ವ್ಯಂಗ್ಯ ಚಿತ್ರಕಾರನಾದ ಥಾಮಸ್ ನಾಸ್ಟ್ ನ ಕಲ್ಪನೆಯಲ್ಲಿ ಮೂಡಿ ಬಂದ ಒಂದು ಚಿತ್ರದಿಂದಾಗಿ ಸಾಂಟಾಕ್ಲಾಸನ ಸ್ವರೂಪವೇ ಬದಲಾಗಿ ಅದೇ ಚಿತ್ರದ ಸಾಂಟಾ ಕ್ಲಾಸ್ ರೂಪ ಇಲ್ಲಿಯ ತನಕವೂ ಚಾಲ್ತಿಯಲ್ಲಿದೆ.

ಸಾಂಟನಾಗಿ ಅಮರರಾದರೂ, ಈಚೀನ ವರ್ಷಗಳಲ್ಲಿ ಕೇವಲ ಆಕರ್ಷಣೆಯ ಗೊಂಬೆಯಾಗಿ, ವ್ಯಾಪಾರದ ವಸ್ತುವಾಗಿ,ಮಾರಾಟದ ಪ್ರತಿನಿಧಿಯಾಗಿ, ಶ್ರೀಮಂತಿಕೆಯ ಗುರುತಾಗಿ ಬಿಂಬಿತವಾಗುತ್ತಿರುವುದು ದುಃಖದ ವಿಷಯ. ಪರ ಪ್ರೀತಿ , ಸೇವೆ, ದೀನತೆಯ ಸಂಕೇತವಾಗಿರುವ ಯೇಸುವಿನ ಹಾಗೂ ಕ್ರಿಸ್ಮಸ್ ಹಬ್ಬದ ನಿಜ ಪ್ರತಿನಿಧಿಯಾಗಿ ಬಾಳಿದ ನಿಕೋಲಸರ ಮಾನವೀಯ ಗುಣಗಳು ಮಕ್ಕಳಿಗೂ, ನಮಗೆಲ್ಲರಿಗೂ ಉಡುಗೊರೆಯಾಗಿಲಿ ಹಾಗೂ ಸ್ಪೂರ್ತಿಯಾಗಲಿ.

ಪ್ರಶಾಂತ್ ಇಗ್ನೇಷಿಯಸ್

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram