ಶಾಂತಿ ಸೌಹಾರ್ದತೆಯ ಸಂಕೇತ ಕ್ರಿಸ್‌ಮಸ್ ಹಬ್ಬ

Advertisements
Share


ಕ್ರೈಸ್ತರಾದವರೂ ಒಂದು ಕಾಲದಲ್ಲಿ ಕ್ರಿಸ್‌ಮಸ್ ಹಬ್ಬವನ್ನೇ ಆಚರಿಸುತ್ತಿರಲಿಲ್ಲ. ಕ್ರಿಸ್ತ ಹುಟ್ಟಿದ ದಿನವೇ ಗೊತ್ತಿರಲಿಲ್ಲ. ಕ್ರಿಸ್ತ ಹುಟ್ಟಿದ್ದು ಸತ್ಯವಾದರೂ ಆತ ಹುಟ್ಟಿದ ದಿನವನ್ನು ಖಚಿತಪಡಿಸುವ ಆಧಾರಗಳಾಗಲಿ, ದಾಖಲೆಗಳಾಗಲಿ ಎಲ್ಲೂ ಲಭ್ಯವಿಲ್ಲ. ಈ ಗೊಂದಲದ ನಡುವೆ ಕ್ರಿಸ್ ಹಬ್ಬ ಅಂದು ಆಚರಣೆಯಲ್ಲಿರಲಿಲ್ಲ. ನಂತರದ ದಿನಗಳಲ್ಲಿ ಕ್ರಿಸ್ತ ಹುಟ್ಟಿದ ದಿನದ ಬಗ್ಗೆ ಇದ್ದ ಸಂಶಯ ಗೊಂದಲಗಳು ನಿವಾರಣೆಗೊಂಡು ಕ್ರಿಸ್ಮಸ್ ಹಬ್ಬ ಕ್ರಿ.ಶ. ೩೫೦ರಲ್ಲಿ ಆಚರಣೆಗೆ ಬಂತು. ಆಚರಣೆಗೆ ಬರುವ ಮುನ್ನ ಕ್ರಿಸ್‌ಮಸ್ ಹಬ್ಬವನ್ನು ಎಂದು ಆಚರಿಸಬೇಕು? ಎಂಬುದರ ಬಗ್ಗೆ ನಾನಾ ಸಂದೇಹಗಳು, ಗೊಂದಲಗಳು, ಧರ್ಮಸಭೆಯನ್ನು ಕಾಡಿ, ವ್ಯಾಪಕ ಚರ್ಚೆ ಮತ್ತು ವಾಗ್ವಾದಗಳು ಜರುಗಿದ್ದವು. ಅವೆಲ್ಲವೂ ಒಂದು ಸ್ಪಷ್ಟ ರೂಪ ಪಡೆದುಕೊಂಡು ಇಂದು ಅವುಗಳೊಂದಿಗೆ ಧರ್ಮಗ್ರಂಥಗಳು, ಪಾರಂಪರ್ಯವಾಗಿ ಪಾಲಿಸಿಕೊಂಡು ಬರುತ್ತಿರುವ ಆಚರಣೆಗಳು ಮತ್ತು ಐತಿಹಾಸಿಕ ಘಟನೆಗಳು ಕ್ರಿಸ್‌ಮಸ್ ಹಬ್ಬದಾಚರಣೆಗೆ ಅಧಿಕೃತ ಪುರಾವೆಗಳಾಗಿವೆ. ಅದಕ್ಕೂ ಮುನ್ನ ಕ್ರಿಸ್‌ಮಸ್ ಕ್ರಿ.ಶ.೯೮ರಲ್ಲಿಯೇ ಆಚರಣೆಗೆ ಬಂದಿದೆಂದು ಹೇಳಲಾಗಿದೆ. ಆದರೂ ಹಬ್ಬ ಅಧಿಕೃತವಾಗಿ ಆಚರಣೆಗೆ ಬಂದದ್ದು ಕ್ರಿ.ಶ. ೩೫೦ರಲ್ಲಿ. ಕ್ರಿಸ್‌ಮಸ್ ಹಬ್ಬಕ್ಕೊಂದು ಸ್ಪಷ್ಟ ರೂಪ ನೀಡಿ ಅದನ್ನು ಆಚರಣೆಗೆ ತಂದವರೇ ರೋಮ್‌ನ ಧರ್ಮಾಧ್ಯಕ್ಷರಾದ ಜೂಲಿಯಸ್. ಧರ್ಮಸಭೆಯನ್ನು ಮುನ್ನಡೆಸುತ್ತಿದ್ದ ಅವರ ಆಳ್ವಿಕೆ ಅವಧಿಯಲ್ಲಿ ಕ್ರಿಸ್‌ಮಸ್ ಆಚರಣೆಗೆ ಬಂದು ಇಂದು ಸಾವಿರದ ಏಳನೂರು ಸಂವತ್ಸರಗಳೇ ಕಳೆದಿವೆ. ಕ್ರಿಸ್‌ಮಸ್ ಹಬ್ಬ ಕೇವಲ ಒಂದು ಜನಾಂಗದವರ ಹಬ್ಬವಲ್ಲ. ಇಂದು ಅದು ಸಾರ್ವತ್ರಿಕ ಹಬ್ಬವಾಗಿ ವಿಶ್ವದೆಲ್ಲೆಡೆ ವ್ಯಾಪಿಸಿದೆ.

‘ಕ್ರಿಸ್‌ಮಸ್’ ಎಂದರೆ ಎಲ್ಲರೂ ಒಂದೆಡೆ ಸೇರಿ, ಶಾಂತಿ, ಸೌಹಾರ್ದತೆ ಮತ್ತು ಭಾವೈಕ್ಯತೆ ಮೆರೆದು ಕ್ರಿಸ್ತನ ಜನುಮ ದಿನವನ್ನು ಸಂತೋಷದಿಂದ ಆಚರಿಸುವುದೇ ಈ ಕ್ರಿಸ್‌ಮಸ್. ಕ್ರಿಸ್ತ ಸಾರಿದ ಸಂದೇಶವೂ ಅದುವೇ ಆಗಿತ್ತು. “ನಿಮ್ಮ ಶತೃಗಳನ್ನು ಪ್ರೀತಿಸಿರಿ, ನಿಮ್ಮನ್ನು ದ್ವೇಸಿಸುವವರನ್ನು ಸತ್ಕರಿಸಿರಿ” ಎಂದು ಆತ ನೀಡಿದ ಸಂದೇಶದಲ್ಲಿ ಎಲ್ಲಾ ಮಾನವೀಯ ಮೌಲ್ಯಗಳು ಸಮಗ್ರವಾಗಿ ಅಡಗಿವೆ. ಮಾನವೀಯ ಮೌಲ್ಯಗಳಿಗೆ ಒತ್ತು ಕೊಡುವ ಕ್ರಿಸ್ತನ ಬೋಧನೆಗಳು ಜಗತ್ತಿನಾದ್ಯಂತ ಪ್ರಖ್ಯಾತಗೊಂಡಿವೆ. ಆತನ ಸಂದೇಶವು ದ್ವೇಷದ ಹಗೆತನಕ್ಕೆ ಬದಲಾಗಿ, ಶಾಂತಿ, ಸಮಾಧಾನ ಮತ್ತು ಸೌಹಾರ್ದತೆಯನ್ನು ಬಿತ್ತುವ ಸಾಧನಗಳಾಗಿವೆ. ಕ್ರಿಸ್ತ ತಾನು ನುಡಿದಂತೆ ಅಕ್ಷರಶಃ ನಡೆದುಕೊಂಡಿದ್ದೇ ಆತನ ಭೋಧನೆಗಳು ಇಂದು ಜಗತ್ತಿನ ಎಲ್ಲಾ ಕಡೆಗೂ ಹರಡಲು ಕಾರಣವಾಯಿತು.

ಕ್ರೈಸ್ತರಾದ ನಾವು ಕ್ರಿಸ್‌ಮಸ್ ಹಬ್ಬದ ದಿನದಂದು ಮಧ್ಯರಾತ್ರಿಯಲ್ಲಿ ಜರುಗುವ ಆಡಂಬರದ ಮಹಾ ಬಲಿಪೂಜೆಯಲ್ಲಿ ಭಾಗವಹಿಸುತ್ತೇವೆ. ಅದರೊಂದಿಗೆ ನಮ್ಮ ಮನೆಮಠಗಳನ್ನು ಅಂದವಾಗಿ ಅಲಂಕರಿಸಿ ಹೊಸ ಬಟ್ಟೆಗಳನ್ನು ತೊಟ್ಟು ಮನೆಯಲ್ಲಿ ವಿಶೇಷ ಭಕ್ಷ್ಯಗಳನ್ನು ತಯಾರಿಸಿ, ಹೊಟ್ಟೆ ತುಂಬ ಭುಜಿಸಿ ಸಂತೃಪ್ತರಾಗುತ್ತೇವೆ. ಆದರೆ ಅಂದು ನಾವಷ್ಟೇ ತಿಂದು ಸಂತೃಪ್ತರಾದರೆ ಸಾಲದು, ಹಾಗೆ ಮಾಡಿದರೆ ಅದು ನಿಜವಾದ ಅರ್ಥದಲ್ಲಿ ಕ್ರಿಸ್‌ಮಸ್ ಹಬ್ಬ ಎನಿಸಿಕೊಳ್ಳುವುದಿಲ್ಲ. ಪರರೂ ಹಬ್ಬದಲ್ಲಿ ಭಾಗಿಗಳಾದಾಗ ಅಲ್ಲಿಗೆ ಹಬ್ಬಕ್ಕೊಂದು ಅರ್ಥ ಬರುತ್ತದೆ. ಅವಕಾಶಗಳಿಂದ ವಂಚಿತರಾದ ನತದೃಷ್ಟರನ್ನು ಸಂತೃಪ್ತಗೊಳಿಸಬೇಕೆಂಬುದೇ ಕ್ರಿಸ್ತನ ಸಂದೇಶದಲ್ಲಿ ಅಡಗಿರುವ ಮುಖ್ಯ ಸಾರಾಂಶ. ಕ್ರಿಸ್‌ಮಸ್ ಹಬ್ಬದಾಚರಣೆಯಲ್ಲಿ ಅಡಗಿರುವ ರಹಸ್ಯವೂ ಇದುವೇ. ಕೋಮು ಸೌಹಾರ್ದತೆಯನ್ನು ಮೆರೆಯುವ ಈ ಹಬ್ಬವು ಸಾರ್ವತ್ರಿಕವಾಗಿ ಆಚರಣೆಯಾಗಬೇಕಾಗಿದೆ. ಕೇವಲ ಕ್ರೈಸ್ತರಷ್ಟೇ ಈ ಹಬ್ಬವನ್ನು ಆಚರಿಸಿದರೆ ಸಾಲದು. ನೆರೆಹೊರೆಯವರು, ಸ್ನೇಹಿತರು ಹಿತೈಷಿಗಳು ಎಲ್ಲರೂ ಈ ಸಂಭ್ರಮದಲ್ಲಿ ಭಾಗಿಗಳಾದರೆ, ಅಲ್ಲಿಗೆ ಹಬ್ಬಕ್ಕೆ ವಿಶೇಷ ಕಳೆಗಟ್ಟುತ್ತದೆ, ಹಬ್ಬದಾಚರಣೆ ಪೂರ್ಣವಾಗುತ್ತದೆ. ಕ್ರಿಸ್ತ ಸಾರಿದ ಶಾಂತಿಯ ಸಂದೇಶವು ಮೌಲ್ಯಭರಿತವಾಗುತ್ತದೆ.

ಈ ಹಬ್ಬ ಆಚರಿಸುವಲ್ಲಿ ಪರೋಪಕಾರವು ಅತ್ಯಂತ ಮಹತ್ವ ಪಡೆದಿದೆ. ಪರೋಪಕಾರ ಭಾವನೆಯು ಮನುಷ್ಯನ ಒಂದು ಶ್ರೇಷ್ಠ ಗುಣ. ಪರೋಪಕಾರವೆಂದರೆ, ಇತರರ ಕಷ್ಟ ದುಃಖಗಳಲ್ಲಿ ಭಾಗಿಗಳಾಗಿ ಅವರಿಗೆ ಸಾಂತ್ವನ ನೀಡುವುದು ಮತ್ತು ಅವರ ಕಷ್ಟಗಳನ್ನು ಹಂಚಿಕೊಂಡು ದೂರಮಾಡಲು ಪ್ರಯತ್ನಿಸುವುದು. ಒಬ್ಬನಲ್ಲಿ ನಿಜವಾದ ಮನುಷ್ಯತ್ವವಿದೆ ಎಂದಾದರೆ, ಅವನಲ್ಲಿ ಪರೋಪಕಾರ‌ ಗುಣಗಳು ತುಂಬಿವೆ ಎಂದರ್ಥ. ನಿಸ್ವಾರ್ಥ ಮಾನವತೆಯ ಪ್ರಕಟಣೆಯೇ ಈ ಪರೋಪಕಾರ. ಇತರರು ಕಷ್ಟ ದುಃಖಗಳಲ್ಲಿ ಸಿಲುಕಿ ನರಳುವುದನ್ನು ಕಂಡು ಮನಸ್ಸು ಕರಗಿ ಅವರ ಕಷ್ಟಗಳನ್ನು ದೂರಮಾಡಲು ಕಿಂಚತ್ತಾದರೂ ಪ್ರಯತ್ನ ಶೀಲರಾಗುವುದೇ ಈ ಪರೋಪಕಾರ ಗುಣದ ಅರ್ಥ. ಪರೊಪಕಾರಕ್ಕಾಗಿ ಮರಗಳು ಹಣ್ಣುಗಳನ್ನು ಕೊಡುತ್ತವೆ, ನದಿಗಳು ಹರಿಯುತ್ತವೆ. ಹಸುಗಳು ಹಾಲನ್ನು ಕೊಡುತ್ತವೆ. ಮನುಷ್ಯರಾದ ನಾವು ಏನು ಕೊಡುತ್ತೇವೆ? ಕೊಡುವುದು ಒತ್ತಟ್ಟಿಗಿರಲಿ, ನಮ್ಮಲ್ಲಿರುವ ಪ್ರೀತಿ ಶಾಂತಿ ಸೌಹಾರ್ದತೆಯನ್ನು ಉಚಿತವಾಗಿ ಹಂಚಿಕೊಳ್ಳುವುದೇ ಇಂದು ಕಷ್ಟವಾಗಿದೆ. ಸದಾ ದಾವಂತದ ಬದುಕಿನಲ್ಲೇ ಒದ್ದಾಡುತ್ತೇವೆ. ಮನುಷ್ಯ ಕಲಿಯಬೇಕಾದ ಮೊದಲನೇ ಪಾಠವೆಂದರೆ ಇತರರೊಂದಿಗೆ ಶಾಂತಿ ಸೌಹಾರ್ದತೆಯನ್ನು ಹಂಚಿಕೊಂಡು ಬಾಳುವುದು. ದೇಹವಿರುವುದು ಪರೋಪಕಾರಕ್ಕಾಗಿ ಎಂದು ಭಾವನೆ ಪ್ರತಿಯೊಬ್ಬರ ಅಂತರಂಗದಲ್ಲಿ ಉದಯಿಸಬೇಕು. ಈ ಕ್ರಿಸ್‌ಮಸ್ ಹಬ್ಬವು ಅಂತಹ ಅವಕಾಶಕ್ಕೆ ಸೂಕ್ತ ವೇದಿಕೆಯಾಗಿದೆ. ನಮ್ಮ ಕೈಯಿಂದ ಸಾಧ್ಯವಾದಷ್ಟು ಮಟ್ಟಿಗೆ ದಾನ, ಧರ್ಮದೊಂದಿಗೆ ಹಬ್ಬದಾಚರಣೆಯಾದರೆ ಅಲ್ಲಿಗೆ ಹಬ್ಬ ಸಾರ್ಥಕವಾಗುತ್ತದೆ.

ಬನ್ನಿ, ಹಬ್ಬವನ್ನು ಎಲ್ಲರೂ ಸಡಗರ ಸಂಭ್ರಮದಿಂದ ಒಟ್ಟಾಗಿ ಆಚರಿಸೋಣ ! ಮನಸ್ತಾಪವನ್ನು ಬಿಟ್ಟು ಮಾನವೀಯತೆ ಮೆರೆಯೋಣ. ಅಂತಹವರಿಗೆ ಇವತ್ತೇ ಒಂದು ಫೋನ್ ಕರೆಮಾಡಿ ಸೌಜನ್ಯದಿಂದ ಮಾತನಾಡಿಸೋಣ. ಅವರ ಪ್ರೀತಿ ವಿಶ್ವಾಸವನ್ನು ಗಳಿಸೋಣ. ಪ್ರೀತಿ ಎಂಬ ಅದ್ಭುತ ಶಕ್ತಿಯೆದುರು ಎಂತಹ ಹಳಸಿದ ಸಂಬಂಧವು ಮರುಹುಟ್ಟು ಪಡೆದು ಸೌಹಾರ್ದತೆ ಬೆಳೆಯುತ್ತದೆ, ಮಾನವೀಯ ಬಾಂಧವ್ಯ ಪುನಃ ಬೆಸೆಯುತ್ತದೆ.

ಸಕಲ ಕ್ರೈಸ್ತ ಬಾಂಧವರಿಗೆ ಕ್ರಿಸ್‌ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು.

ಎಲ್.ಚಿನ್ನಪ್ಪ, ಬೆಂಗಳೂರು.

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram