
ನರಳಾಟ, ಕೂಗಾಟ, ವೇದನೆ
ಹರೆಯದ ಹೆಣ್ಣಿನ ಆರ್ತನಾದ
ಅಗಣಿತ ಮುಗಿಲ ಆಂಕ್ರಂಧನ
ಕಾವರಿಲ್ಲ, ನೆತ್ತರು ಹರಿದ ಪಾದ
ಒಂದೇ? ಎರಡೇ? ಈ ದೇಶದಲ್ಲಿ
ಸತ್ತದನಿ ಮೂಲೆ ಮೂಲೆಗಳಲ್ಲಿ
ನಿಷ್ಕರುಣೆ, ರಕ್ತಬೀಜಾಸುರರೆಲ್ಲ
ಬಾಲೆಯ ರಕ್ತವ ಹೀರುತಿಹರಿಲ್ಲಿ
ಸೋತ ವದನ, ನಿಶ್ಯಕ್ತಿ ಶರೀರ
ಮದಕರಿ ಮೇದ ಕಬ್ಬಿನ ಸಿಪ್ಪೆ!
ತಡೆವರಾರಿಲ್ಲ, ಪೊರೆವರಾರಿಲ್ಲ
ಇಲ್ಲಿ ಹೆಣ್ಣಾಗಿ ಜನಿಸಿದ್ದು ತಪ್ಪೇ?
ನೊಂದ ಮನಸ್ಸುಗಳ ಶಾಪ
ಬೆಂಬಿಡದೇ ಕಾಡುವುದಿಲ್ಲವೇ?
ಅಸಂಖ್ಯಾತ ಸುಜನರ ಕೋಪ
ಲಾವಾರಸವಾಗಿ ನುಗ್ಗುವುದಿಲ್ಲವೇ?
ಬಡಬಾಗ್ನಿಯಲ್ಲಿ ಬೆಂದ ಅಬಲೆ
ಕುಗ್ಗದಿರು, ಬಗ್ಗದಿರು, ಸರಿಯದಿರು
ಒಮ್ಮೆ ನೀ ಧರಿಸು ರುಂಡಮಾಲೆ
ಸರಿದು ನಿಲ್ಲುವರೊಮ್ಮೆ ಕುಜನರು
ದೇವ
(ಪೂರ್ಣ ಹೆಸರು ದ್ಯಾವಣ್ಣ. ಕವಿ ಮತ್ತು ಲೇಖಕರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಸುಂಕೇಶ್ವರ ಗ್ರಾಮದವರು. ಪ್ರಸ್ತುತ ಮಾನ್ವಿಯಲ್ಲಿರುವ ಲೊಯೋ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸುತ್ತಿದ್ದಾರೆ)