ರಾಹುಕಾಲ ಮತ್ತು ಮೌಢ್ಯಗಳ ಅಂಧಾನುಕರುಣೆ

Advertisements
Share

ಒಮ್ಮೆ ವಿಧಾನಸಭೆಯ ಶಾಸಕಾಂಗಕ್ಕೆ ನಡೆದ ಚುನಾವಣೆಯಲ್ಲಿ ಹೊಸದಾಗಿ ಆರಿಸಿ ಬಂದ ಕೆಲ ಅಭ್ಯರ್ಥಿಗಳಿಗೆ ಪ್ರಮಾಣವಚನ ಸ್ವೀಕರಿಸಲು ಸಮಾರಂಭವನ್ನು ಏರ್ಪಡಿಸಲಾಗಿತ್ತು. ಒಂದು ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಗೊಂಡು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಲು ಬಂದಿದ್ದ ಶಾಸಕರೊಬ್ಬರ ಹೆಸರನ್ನು ಸಭೆಯಲ್ಲಿ ಕರೆದಾಗ, ಆ ವ್ಯಕ್ತಿ “ಈಗ ರಾಹುಕಾಲವಿದೆ ಹಾಗಾಗಿ ನಾನು ಪ್ರಮಾಣವಚನ ಸ್ವೀಕರಿಸುವುದಿಲ್ಲ” ಎಂದು ಹೇಳಿದ ತಕ್ಷಣವೇ ಅವರು ಸದನದಿಂದ ಹೊರನಡೆದರು. ಇದು ವಿಧಾನಸಭೆಯ ಶಿಸ್ತು ನಿಯಮಗಳನ್ನು ಉಲ್ಲಂಘಿಸಿದಂತಾಗುತ್ತದೆ. ಅಲ್ಲದೆ ವಿಧಾನಸಭಾ ಸ್ಪೀಕರ್‌ಗೆ ತೋರಿದ ಅಗೌರವವಾಗಿದ್ದು, ಸಾರ್ವತ್ರಿಕ ಸ್ಥಳಗಳಲ್ಲಿ ಇಂತಹ ಸಂಪ್ರದಾಯಗಳನ್ನು ಪಾಲಿಸುವುದು ಸರಿಯಲ್ಲ. ಅವರವರ ಮನೆಮಠಗಳಲ್ಲಿ ಜರುಗುವ ಖಾಸಗಿ ಸಂಸ್ಕಾರಗಳಿಗೆ ಸೀಮಿತವಾಗಿದ್ದರೆ ಒಳಿತು, ಸಾರ್ವಜನಿಕ ಮತ್ತು ಸರಕಾರಿ ಕ್ಷೇತ್ರಗಳಲ್ಲಿ ಈ ರಾಹುಕಾಲವನ್ನು ಸಮೀಕರಣಗೊಳಿಸುವುದು ಸರಿಯಲ್ಲ, ಹಾಗೆ ಸಮೀಕರಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಎದುರಾಗುತ್ತದೆ. ಈ ಘಟನೆಯಿಂದಾಗಿ ಮತದಾರರ ಪ್ರತಿನಿಧಿಯಾಗಿ ಆಯ್ಕೆಯಾದವರು ತಮ್ಮ ಮತದಾರರ ವಿರುದ್ಧವೇ ತೋರಿದ ಅವಿಧೇಯತೆ ಮತ್ತು ಎಸಗಿದ ಅಪಮಾನವೆಂದೇ ಹೇಳಬಹುದು.

ಮುಂದುವರೆದ ಈ ೨೧ನೇ ಶತಮಾನದಲ್ಲೂ ಕೆಲವರು ಎಲ್ಲಾ ಕೆಲಸ ಕಾರ್ಯಗಳಲ್ಲಿ ರಾಹುಕಾಲವೆಂಬ ಮೌಢ್ಯ ಪ್ರಜ್ಞೆ ಬೆಳೆಸಿಕೊಂಡಿರುವುದು ತೀರಾ ಹಾಸ್ಯಾಸ್ಪದ. ರಾಹುಕಾಲ ಎನ್ನುವುದು ಅವರವರ ಖಾಸಗಿ ಹಾಗು ವೈಯಕ್ತಿಕ ಅಭಿಪ್ರಾಯವಾಗಿದ್ದು ಮದುವೆ ಮುಂತಾದ ಖಾಸಗಿ ಶುಭ ಕಾರ್ಯಗಳಲ್ಲಿ ಅದನ್ನು ಆಚರಿಸುವುದು ಬಿಡುವುದು ಅವರವರ ಧರ್ಮಸಂಪ್ರದಾಯಕ್ಕೆ ಬಿಟ್ಟದ್ದು. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಆದರೆ, ಸಾರ್ವಜನಿಕ ಕ್ಷೇತ್ರಗಳಲ್ಲಿ ಭಹಿರಂಗವಾಗಿ ‘ರಾಹುಕಾಲ’ದ ನಿಯಮವನ್ನು ಪಾಲಿಸುವುದು ಸರಿಯಲ್ಲ. ಸಂವಿಧಾನದಲ್ಲಿಯೂ ಅದಕ್ಕೆ ಅವಕಾಶವಿಲ್ಲ. ಹಿಂದಿನ ಕಾಲದಲ್ಲಿ ಒಂದು ಧರ್ಮಪಂಥದವರು ಹುಟ್ಟಿಹಾಕಿದ ಈ ಅನಿಷ್ಟ ಪದ್ಧತಿಯನ್ನು ವೈಭವೀಕರಿಸುತ್ತ ಇಂದಿನ ವ್ಶೆಜ್ಞಾನಿಕ ಯುಗದಲ್ಲೂ ಅದಕ್ಕೆ ಹೆಚ್ಚಿನ ಮಹತ್ವ ಕೊಟ್ಟಿರುವುದು ಸರಿಯಲ್ಲ. ರಾಹುಕಾಲದಲ್ಲಿ ಮಾಡುವ ಎಲ್ಲಾ ಕಾರ್ಯಗಳು ಕೆಟ್ಟದ್ದಾಗಿ ಪರಿಣಮಿಸುತ್ತವೆ ಎಂದಾದರೆ, ಅವುಗಳನ್ನೆಲ್ಲಾ ಪಟ್ಟಿ ಮಾಡಿ ಎಣಿಸುತ್ತಾ ಆ ಸಮಯದಲ್ಲಿ ಯಾವ ಕೆಲಸವನ್ನೂ ಮಾಡದೆ ತಟಸ್ಥರಾಗಿ ಕೂರಬೇಕೆಂಬ ಪ್ರೇರಣೆಯಾಗುತ್ತದೆ. ಇನ್ನು ರಾಹುಕಾಲದಲ್ಲಿ ಹುಟ್ಟುವುದು ಅಥವ ಹುಟ್ಟದಿರುವುದು ಯಾರ ನಿಯಂತ್ರಣದಲ್ಲಿದೆ? ರಾಹುಕಾಲದಲ್ಲಿ ಹುಟ್ಟಿದವರೆಲ್ಲರೂ ಇಂದು ಏನಾಗಿದ್ದಾರೆ? ಅವರ ಭವಿಷ್ಯ ಏನಾಗಿದೆ? ಎಂಬುದನ್ನು ಒಮ್ಮೆ ಅವಲೋಕಿಸಿದರೆ ಪ್ರಶ್ನೆಗೆ ಉತ್ತರ ಸಿಕ್ಕರೂ ಸಿಗಬಹುದು. ಅಂಥಹವರ ಬದುಕಿನಲ್ಲಿ ಏನಾದರೂ ಅನಾಹುತ ಸಂಭವಿಸಿದ್ದರೆ, ಅದು ರಾಹುಕಾಲದಲ್ಲಿ ಹುಟ್ಟಿದ್ದರ ಪರಿಣಾಮ ಎಂಬ ನಂಬಿಕೆಯೂ ಹಲವರದು. ಇನ್ನೊಂದು ವಿಚಾರ‌‌, ರಾಹುಕಾಲದಲ್ಲಿ ಸತ್ತರೆ ಏನಾಗುತ್ತದೆ ಎಂಬ ಪ್ರಶ್ನೆ. ಪ್ರಶ್ನೆ ವಿಚಿತ್ರವೆನಿಸಿದರೂ ಉತ್ತರ ಮಾತ್ರ ಬಹು ಸುಲಭ. ಸತ್ತ ನಂತರ ಅವನ/ಅವಳ ಇಹಲೋಕದ ಬದುಕು ಕೊನೆಗೊಳ್ಳುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ರಾಹುಕಾಲದಲ್ಲಿ ಸತ್ತರೆ ಆತ್ಮಕ್ಕೆ ಸದ್ಗತಿ ಇಲ್ಲ ಎಂಬುದು ಕೆಲವರ ವಾದ. ಇನ್ನು ಕೆಲವರು ಸತ್ತವರ ಶವಗಳನ್ನು ರಾಹುಕಾಲದಲ್ಲಿ ಸ್ಮಶಾನಕ್ಕೆ ಸಾಗಿಸುವುದಿಲ್ಲ ಮತ್ತು ಶವ ಸಂಸ್ಕಾರ ನೆರವೇರಿಸುವುದಿಲ್ಲ. ಹಾಗೆ ಮಾಡಿದರೆ ಸತ್ತ ಆತ್ಮಕ್ಕೆ ಮುಕ್ತಿ ಸಿಗುವುದಿಲ್ಲ ಎಂಬುದು ಅವರ ನಂಬಿಕೆ. ಮನುಷ್ಯನಿಗೆ ಹುಟ್ಟಿನಿಂದ ಮರಣದವರೆಗೂ ಎಲ್ಲಾ ಕೇಡು ಸಂಕಷ್ಟಗಳು ಬೆಂಬಿಡದೆ ಕಾಡುತ್ತ ಅವನನ್ನು ಬಾಧಿಸಿರಬಹುದು. ಆದರೆ ಸತ್ತ ಮೇಲೆ ಯಾವ ಕೇಡು ತಾನೆ ಅವನನ್ನು ಬಾಧಿಸಲು ಸಾಧ್ಯ? ಸತ್ತ ನಂತರ ಆತ್ಮ ದೇಹದಿಂದ ಬೇರ್ಪಡುತ್ತದೆ ಮತ್ತು ನಿರುಪಯುಕ್ತ ದೇಹ ಮಣ್ಣುಪಾಲಾಗುತ್ತದೆ. ಇದು ಎಲ್ಲರಿಗೂ ತಿಳಿದಿರುವ ಕಟು ಸತ್ಯ ಹಾಗು ವಾಸ್ತವ ಸ್ಥಿತಿ. ಸತ್ತ ಶವಕ್ಕೂ ರಾಹುಕಾಲ ಕೇಡುಂಟುಮಾಡುತ್ತದೆ ಎಂದು ನಂಬುವ ಅಜ್ಞಾನವಂತರ ಬಗ್ಗೆ ಏನು ಹೇಳಬೇಕೋ ತಿಳಿಯದು. ರಾಹುಕಾಲದಲ್ಲಿ ಸಾಯದಿರುವಂತೆ ಅವರ ಪ್ರಾಣವನ್ನು ತಡೆ ಹಿಡಿಯಲು ಸಾಧ್ಯವೇ? ಇಂತಹ ಮೂಢ ನಂಬಿಕೆಗಳು ಇನ್ನೂ ಜನರನ್ನು ಸುತ್ತುಗಟ್ಟಿವೆ. ಅವುಗಳಿಂದ ಮುಕ್ತರಾಗಿ ಎಂದು ಹೊರಬರುತ್ತಾರೊ ಅಂದು ಅವರ ಅಜ್ಞಾನದ ಕವಚ ಕಳಚುತ್ತದೆ, ವಾಸ್ತವ ಜಗತ್ತಿಗೆ ತೆರೆದುಕೊಳ್ಳುತ್ತಾರೆ.

ಈ ರಾಹುಕಾಲವೆಂಬ ಮೂಢ ನಂಬಿಕೆ ಕುರಿತು ಒಂದು ಘಟನೆಯನ್ನು ಇಲ್ಲಿ ವಿವರಿಸುವುದು ಅತ್ಯಗತ್ಯ. ಒಮ್ಮೆ ಒಬ್ಬ ಸರಕಾರಿ ಉದ್ಯೋಗಿಗೆ ಬಡ್ತಿ ದೊರೆತು ಹೊಸದಾಗಿ ಅಧಿಕಾರಿಯ ಹುದ್ದೆಗೆ ನೇಮಕಗೊಂಡ. ಅಧಿಕಾರಿಯ ಹುದ್ದೆ ಎಂದರೆ, ಅದೊಂದು ಜವಾಬ್ದಾರಿಯ ಹುದ್ದೆ. ಉನ್ನತ ಹುದ್ದೆಗೆ ಬಡ್ತಿ ಮತ್ತು ನೇಮಕಗೊಂಡ ಸ್ಥಳವು ಹೊಸದಾಗಿದ್ದರಿಂದ ಹೆಚ್ಚು ಉತ್ಸಾಹದಿಂದ ಕೆಲಸ ಮಾಡುತ್ತಿದ್ದ. ಆದರೆ ಆತ ಕಟ್ಟಾ ಸಂಪ್ರದಾಯಬದ್ದ ವ್ಯಕ್ತಿ. ಕರ್ತವ್ಯಕ್ಕಿಂತ ರಾಹುಕಾಲದ ಮೇಲೆಯೇ ನಿಗಾ ವಹಿಸಿದ್ದ ವ್ಯಕ್ತಿ. ಆಫೀಸ್‌ನಲ್ಲಿದ್ದಾಗ ಆ ಸಮಯದಲ್ಲಿ ಅವನು ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ, ಯಾರೊಂದಿಗೂ ಹೆಚ್ಚು ಮಾತಾಡುತ್ತಿರಲಿಲ್ಲ. ತಟಸ್ಥನಾಗಿ ಕುಳಿತುಬಿಡುತ್ತಿದ್ದ. ಅವನ ದೃಷ್ಟಿಯಲ್ಲಿ ಅದೊಂದು ‘ವಿಷಗಳಿಗೆ’ ಆ ಸಮಯದಲ್ಲಿ ಯಾವ ಕೆಲಸವನ್ನೂ ಮಾಡಬಾರದು ಎಂಬ ಮನೋಭಾವ. ಹೊರಗಿದ್ದ ಸಮಯದಲ್ಲಿ ಅವನು ಏನು ಮಾಡುತ್ತಿದ್ದನೋ ಗೊತ್ತಿಲ್ಲ. ಆದರೆ ಆಫೀಸ್‌ನಲ್ಲಿದ್ದ ಸಮಯ ರಾಹುಕಾಲವಾಗಿದ್ದರೆ, ಅವನು ಸುಮ್ಮನೆ ಕುಳಿತುಬಿಡುತ್ತಿದ್ದ. ಅದು ಮುಗಿಯುವವರೆಗೂ ಹೊರಗಿನಿಂದ ಬರುತ್ತಿದ್ದ ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ, ಕಡತಗಳಿಗೆ ಸಹಿ ಮಾಡುತ್ತಿರಲಿಲ್ಲ. ಕಡತಗಳನ್ನು ಡಿಸ್‌ಕಶನ್‌ಗೆ ತಂದರೆ, ರಾಹು ಕಾಲ ಕಳೆದ ಮೇಲೆ ತರುವಂತೆ ಹೇಳುತ್ತಿದ್ದ. ರಾಹುಕಾಲವೆಂದರೆ ಅದೊಂದು ಅನಿಷ್ಟ ಸಮಯ, ಮನುಷ್ಯನಿಗೆ ಕೇಡುಂಟುಮಾಡುವ ಸಮಯ ಎಂದೇ ಅವನ ತಲೆಯಲ್ಲಿ ಹೊಕ್ಕಿದ್ದ ಮೂಢ ನಂಬಿಕೆ. ಈಗಿನಂತೆ ಆಗ ಮೊಬೈಲ್ ಪೋನ್‌ಗಳ ಆವಾಂತರವಿರಲಿಲ್ಲ. ಲ್ಯಾಂಡ್‌ಲೈನ್ ಪೋನ್‌ಗಳು ಮಾತ್ರ ಇದ್ದ ಕಾಲವದು. ರಾಹುಕಾಲ ಪ್ರಾರಂಭವಾದರೆ, ಅವನು ಪೋನ್ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ. ಕರೆಗಳನ್ನು ಸ್ವೀಕರಿಸಲು ನನ್ನನ್ನು ತನ್ನ ಕೊಠಡಿಯಲ್ಲಿ ಕೂರಿಸಿಕೊಳ್ಳುತ್ತಿದ್ದ. (೧೯೭೩) ಪೋನ್ ಕರೆ ಬಂದರೆ ನಾನು ಕರೆ ಸ್ವೀಕರಿಸಿ ಇಂಥಹವರಿಂದ ಕರೆ ಬಂದಿದೆ ಎಂದು ಅವನಿಗೆ ಹೇಳಬೇಕಾಗಿತ್ತು. ತನಗಿಷ್ಟವಿದ್ದರೆ ಮಾತ್ರ ಮಾತಾಡುತ್ತಿದ್ದನು. ಇಲ್ಲದಿದ್ದರೆ, ಈಗ ಮುಖ್ಯವಾದ ಕೆಲಸದಲ್ಲಿದ್ದೇನೆ ಆಮೇಲೆ ಮಾತಾಡಿ ಎಂದು ನನ್ನ ಮುಖಾಂತರ ಹೇಳಿಸುತ್ತಿದ್ದ. ಒಮ್ಮೆ ರಾಹುಕಾಲದ ಸಮಯದಲ್ಲಿ ಪೋನ್ ರಿಂಗಾಯಿತು. ನಾನು ಅಲ್ಲೇ ಕುಳಿತಿದ್ದೆ. ರಿಂಗಣಿಸುತ್ತಿದ್ದ ರಿಸೀವರ್‌ನ್ನು ತಾನೇ ಎತ್ತಿ ಅದನ್ನು ಕೈಯಲ್ಲಿ ಮುಚ್ಚಿ ಹಿಡಿದು ನನ್ನನ್ನು ಕೇಳಿದರೆ, ಅವರು ಇನ್ನೂ ಆಫೀಸಿಗೆ ಬಂದಿಲ್ಲ ಅಂತ ಹೇಳಿ ಎಂದು ಪೋನ್ ನನ್ನ ಕೈಗಿಟ್ಟ. ಅವನು ಹೇಳಿದಂತೆ ನಾನು, ಸಾಹೇಬರು ಇನ್ನೂ ಆಫೀಸಿಗೆ ಬಂದಿಲ್ಲ, ತಾವು ಯಾರು ಅಂತ ಹೇಳಿದರೆ, ಅವರು ಬಂದ ಮೇಲೆ ಹೇಳುತ್ತೇನೆ ಎಂದೆ. ಅವರು ಏನೂ ಹೇಳದೆ ತಕ್ಷಣ ಪೋನ್ ಕಟ್ ಮಾಡಿಬಿಟ್ಟರು. ತತ್ಪರಿಣಾಮ, ಮುಂದಿನ ೨೪ ಗಂಟೆಗಳ ಅವಧಿಯಲ್ಲಿ ಅವನಿಗೊಂದು ಕೇಡು ಕಾದಿತ್ತು. ಮಾರನೇ ದಿನ ಹೆಡ್ ಆಫೀಸಿನಿಂದ ಸಿಬ್ಬಂದಿಯೊಬ್ಬ ಒಂದು ಪತ್ರವನ್ನು ತೆಗೆದುಕೊಂಡು ಬಂದ. ಆಗ ರಾಹುಕಾಲದ ಸಮಯ. ಈಗ ರಾಹುಕಾಲ, ರಾಹುಕಾಲದಲ್ಲಿ ನಾನು ಯಾವ ಪತ್ರವನ್ನು ಸ್ವೀಕರಿಸುವುದಿಲ್ಲ, ಸ್ವಲ್ಪ ಸಮಯ ಹೊರಗೆ ಕುಳಿತಿರು ಎಂದು ಹೇಳಿ ಸಿಬ್ಬಂದಿಯನ್ನು ರಾಹುಕಾಲ ಮುಗಿಯುವವರೆಗೂ ಹೊರಗೇ ಕೂರಿಸಿದ್ದ. ರಾಹುಕಾಲ ಮುಗಿದ ಬಳಿಕ ಅವನನ್ನು ಒಳಕ್ಕೆ ಕರೆಸಿ, ಅವನಿಂದ ಪತ್ರ ಪಡೆದು ಅದಕ್ಕೆ ಸ್ವೀಕೃತಿ ದಾಖಲೆ ನೀಡಿ ಕಳುಹಿಸಿದ. ಕವರ್ ಓಪನ್ ಮಾಡಿ ಪತ್ರ ನೋಡಿದ ಮೇಲೆ, ಅವನ ಮುಖ ನೋಡಬೇಕಿತ್ತು ! ಅದು ಅವನ ಅಮಾನತ್ತು ಆದೇಶ. ಅವರು ಇನ್ನೂ ಆಫೀಸಿಗೆ ಬಂದಿಲ್ಲ ಅಂತ ಹೇಳಿ’ ಎಂದು ಅವನು ಹೇಳಿದ ಮಾತು ಹೇಗೋ ಮೇಲಾಧಿಕಾರಿಗೆ ಕೇಳಿಸಿತ್ತು. ತತ್ಪರಿಣಾಮ, ಅವನನ್ನು ಕರ್ತವ್ಯ ನಿರ್ಲಕ್ಷ್ಯದ ಆರೋಪದಡಿ ಸೇವೆಯಿಂದ ಆರು ತಿಂಗಳ ಕಾಲ ಅಮಾನತ್ತು ಮಾಡಿದ್ದರು. ರಾಹುಕಾಲದಲ್ಲಿ ಕೆಲಸ ಮಾಡಿದರೆ ಗಂಡಾಂತರಗಳು ಸಂಭವಿಸುತ್ತವೆ ಎಂದು ಗಾಢವಾಗಿ ನಂಬಿದ್ದ ವ್ಯಕ್ತಿಗೆ ರಾಹುಕಾಲದಲ್ಲಿ ಏನೂ ಕೆಲಸ ಮಾಡದೆಯೇ ಕೆಲಸದಿಂದ ಅಮಾನತ್ತುಗೊಂಡಿದ್ದೊಂದು ಕಾಕತಾಳೀಯ. ಅವನು ವಹಿಸಿದ ಮುಂಜಾಗ್ರತೆಯೇ ಅವನಿಗೇ ಕಂಟಕವಾಗಿ ಪರಿಣಮಿಸಿತು. ಅದು ಅವನ ಅವಿವೇಕವೇ ಹೊರತು ರಾಹುಕಾಲದ ಪ್ರಭಾವದಿಂದಲ್ಲ. ಕಾದ ಬಾಣಲೆಯಿಂದ ತಪ್ಪಿಸಿಕೊಳ್ಳಲು ಹೋಗಿ ಬೆಂಕಿಯೊಳಗೆ ಬಿದ್ದಂತೆ. ಪೋನ್ ರಿಸೀವರ್ ತೆಗೆದವನು ಅದಕ್ಕೆ ಸರಿಯಾಗಿ ಉತ್ತರಿಸಿದ್ದರೆ, ಅವನಿಗೆ ಯಾವ ಕೇಡೂ ಸಂಭವಿಸುತ್ತಿರಲಿಲ್ಲ. ಸಾರ್ವಜನಿಕ ಕಛೇರಿ ಕೆಲಸಕಾರ್ಯಗಳಲ್ಲಿ ರಾಹುಕಾಲವನ್ನು ಪಾಲಿಸುವವರಿಗೆ ಇದೊಂದು ನೈತಿಕ ಪಾಠ.

ಸಮಾಜದ ಎಲ್ಲಾ ವಿದ್ಯಾವಂತ ಯುವಕ-ಯುವತಿಯರು ತಮ್ಮ ಅಧ್ಯಯನದಲ್ಲಿ ಬೆಳೆಸಿಕೊಂಡ ವೈಚಾರಿಕ ಪ್ರಜ್ಞೆಗಳಿಗೆ ತತ್ವಾದರ್ಶಗಳಿಗೆ ತಿಲಾಂಜಲಿಯಿತ್ತು ಗೊಡ್ಡು ಕಂದಾಚಾರಗಳಿಗೂ ಸನಾತನ ಸಂಪ್ರದಾಯಗಳಿಗೂ ಶರಣಾಗುವುದು ವಿವಾಹ ಸಂದರ್ಭದಲ್ಲೇ. ಆದ್ದರಿಂದ ಯಾರು ಎಷ್ಟೇ ಕಲಿತರೂ, ಲೋಕವನ್ನಾಗಲಿ, ಸಮಾಜವನ್ನಾಗಲಿ ಪುರೋಹಿತಶಾಹಿಯನ್ನಾಗಲಿ ಬದಲಾಯಿಸಲು ಆಗುತ್ತಿಲ್ಲ. ಅವರ ಮನಸ್ಸು ಪರಿವರ್ತನೆ ಆಗದ ಹೊರತು ಏನೂ ಬದಲಾಗುವುದಿಲ್ಲ. ನಂಬಿದ ಆದರ್ಶ ಮೌಲ್ಯಗಳ ಪರವಾಗಿ ನಿಂತು ಗೊಡ್ಡು ಸಂಪ್ರದಾಯಗಳನ್ನು ಎದುರಿಸಿ ನಿಂತರೆ, ನಮಗೊಂದು ಅದ್ಭುತ ಅನುಭವವಾಗುತ್ತದೆ. ನಂಬಿದ ಆದರ್ಶಗಳ ಪರವಾಗಿ ನಿಲ್ಲುವ ಆನಂದ ಏನೆಂದು ಗೊತ್ತಾಗುತ್ತದೆ. ಆದರ್ಶಗಳು ನಾವು ದಿನಾ ಪಠಣಮಾಡಬೇಕಾದ ಗೊಡ್ಡು ಮಂತ್ರಗಳಲ್ಲ. ಅವುಗಳು ನಮ್ಮ ಜೀವನದ ಉಸಿರಾಗಬೇಕು.

ನಮ್ಮ ಕ್ರೈಸ್ತರಲ್ಲೂ ಕೆಲವರು ಈ ರಾಹುಕಾಲವನ್ನು ನಿಷ್ಠೆಯಿಂದ ಪಾಲಿಸುತ್ತಿದ್ದಾರೆ. ವಿವಾಹ ಮತ್ತು ಇನ್ನಿತರೆ ಶುಭ ಕಾರ್ಯಗಳಲ್ಲಿ ಈ ರಾಹುಕಾಲವೆಂಬ ಅವೈಜ್ಞಾನಿಕ ಪದ್ದತಿ ನಮ್ಮಲ್ಲೂ ರೂಢಿಯಲ್ಲಿದೆ. ಇದು ನಮ್ಮ ಕ್ರೈಸ್ತ ಸಂಸ್ಕೃತಿಗೆ ವಿರುದ್ಧವಾದುದು. ಭಾನುವಾರ ಸಂಜೆ ೪.೩೦ ರಿಂದ ೬.೦೦ ಗಂಟೆವರೆಗೂ ರಾಹುಕಾಲದ ಸಮಯ. ನಮ್ಮಲ್ಲಿ ಭಾನುವಾರ ಸಂಜೆ ನಿಷ್ಕರ್ಷೆಯಾದ ವಿವಾಹಗಳು ಅವು ಸಂಜೆ ೪.೩೦ರೊಳಗೆ ಮುಗಿಯುವಂತೆ ನಿಶ್ಚಯಿಸಿರುತ್ತಾರೆ ಅಥವ ಸಂಜೆ ೪.೩೦ ಗಂಟೆಯೊಳಗೆ ವರನಿಂದ ವಧುವಿನ ಕೊರಳಿಗೆ ಮಾಂಗಲ್ಯ ಧಾರಣೆಯಾಗುವಂತೆ ಸಮಯವನ್ನು ಹೊಂದಿಸಿರುತ್ತಾರೆ. ಬಾಳ ಸಂಗಾತಿಯಾಗುವ ವಧುವಿನ ಕೊರಳಿಗೆ ವರ ರಾಹುಕಾಲದಲ್ಲಿ ಮಾಂಗಲ್ಯಧಾರಣೆ ಮಾಡುವುದು ಸೂಕ್ತವಲ್ಲ, ಅದೊಂದು ಅಶುಭ ಘಳಿಗೆ ಎಂಬುದು ಕೆಲ ಹಿರಿಯರ ಮೂಢ ನಂಬಿಕೆ. ಆದ್ದರಿಂದ ಭಾನುವಾರದಲ್ಲಿ ಜರುಗುವ ಬಹುತೇಕ ವಿವಾಹಗಳು ಆ ಸಮಯದ ಒಳಗೆ ಅಥವಾ ನಂತರ ನಡೆಯುವಂತೆ ನಿಶ್ಚಯಿಸಲ್ಪಟ್ಟಿರುತ್ತವೆ. ಕ್ರೈಸ್ತರಾದ ನಮ್ಮ ಆಚಾರ ಸಂಸ್ಕೃತಿಗಳು ಪರರಿಗೆ ಮಾದರಿಯಾಗಿರಬೇಕೇ ಹೊರತು, ಅವರಂತೆ ನಾವೂ ಅನುಕರಣೆ ಮಾಡುವುದು ಸರಿಯಲ್ಲ. ಹಳೆಯ ಅವೈಜ್ಞಾನಿಕ ಗೊಡ್ಡು ಸಂಸ್ಕೃತಿಗಳ ಆರಾಧಕರು ಮತ್ತು ಅವುಗಳಿಗೇ ಜೋತು ಬೀಳುವ ಅಂಧ ಮೂಢಾತ್ಮರು ನಾವಾಗಬಾರದು.
ಇನ್ನೊಂದು ಘಟನೆ ಮೂಢ ನಂಬಿಕೆ ಕುರಿತು ಗಮನ ಸೆಳೆಯುತ್ತದೆ. ನಮ್ಮ ಮನೆ ಮುಂದೆಯೇ ಜರುಗಿದ ಘಟನೆಯಿದು. ಒಮ್ಮೆ ಮೋಟಾರ್ ಬೈಕ್‌ನಲ್ಲಿ ಇಬ್ಬರು ಯುವಕರು ನಮ್ಮ ಮನೆ ಮುಂದಿನ ರಸ್ತೆಯಲ್ಲಿ ಸಾಗಿ ಬಂದರು. ಅಷ್ಟರಲ್ಲಿ ನಮ್ಮ ಮನೆಯ ಬೆಕ್ಕು ರಸ್ತೆಯನ್ನು ಕ್ರಾಸ್ ಮಾಡಿ ಆ ಕಡೆಗೆ ಹೋಯಿತು. ಇದನ್ನು ಕಂಡ ಯುವಕರು ಗೊಣಗುತ್ತ ತಕ್ಷಣ ಬೈಕ್ ನಿಲ್ಲಿಸಿ ಬಿಟ್ಟರು. ಶುಭ ಕಾರ್ಯಕ್ಕೆ ಹೋಗುವಾಗ ಬೆಕ್ಕು ಅಡ್ಡ ಬಂದರೆ ಅಪಶಕುನವಂತೆ, ಹೋದ ಕೆಲಸ ಆಗುವುದಿಲ್ಲವೆಂಬ ನಂಬಿಕೆ ಕೆಲವರದು. ಯುವಕರು ಹತ್ತು ನಿಮಷ ಕಳೆದು ಹೋಗೋಣವೆಂದು ಅಲ್ಲಿಯೇ ಕಾದು ನಿಂತರು. ಹತ್ತು ನಿಮಿಷ ಕಳೆದ ಮೇಲೆ ಅವರು ಪುನಃ ಬೈಕ್ ಸ್ಟಾರ್ಟ್ ಮಾಡುವಷ್ಟರಲ್ಲಿ, ಆ ಕಡೆ ಹೋಗಿದ್ದ ಬೆಕ್ಕು ಪುನಃ ರಸ್ತೆ ಕ್ರಾಸ್ ಮಾಡಿಕೊಂಡು ವಾಪಸ್ ಮನೆಗೆ ಬಂತು. ಯುವಕರು ಮುಂದೆ ಹೋಗದೆ, ಬೆಕ್ಕನ್ನು ಶಪಿಸುತ್ತ ತಮ್ಮ ಮನೆಗೇ ವಾಪಸ್ ತೆರಳಿದರು. ಪಾಪ ಆ ಅಮಾಯಕ ಬೆಕ್ಕು ಪ್ರಾಣಿ, ಬಹಿರ್ದೆಶೆಗಾಗಿ ಆ ಕಡೆ ಇದ್ದ ಬಯಲು ಪ್ರದೇಶಕ್ಕೆ ಹೋಗಿ ತನ್ನ ಕಾರ್ಯ ಮುಗಿಸಿಕೊಂಡು ವಾಪಸ್ ಬಂದಿತಷ್ಟೆ. ಬೆಕ್ಕಿಗೂ ಅವರು ಹೊರಟ ಕೆಲಸಕ್ಕೂ ಯಾವ ಸಂಬಂಧ? ಯುವಕರು ಶುಭ ಕಾರ್ಯಕ್ಕೆ ಹೋಗುತ್ತಿದ್ದಾರೆ ತಾನು ಅವರಿಗೆ ಅಡ್ಡ ಹೋಗ ಕೂಡದು ಎಂದು ಬೆಕ್ಕಿಗೇನು ಗೊತ್ತು?

ಮನುಷ್ಯ ಕ್ರೂರ ಪ್ರಾಣಿ ಹುಲಿಯನ್ನೇ ಬೇಟೆಯಾಡುವಷ್ಟು ಪರಾಕ್ರಮಶಾಲಿ. ಆದರೆ ಕೇವಲ ಅದರದೇ ತದ್ರೂಪದ ನಿರುಪದ್ರವಿ ಪುಟ್ಟ ಸಾಕು ಪ್ರಾಣಿ ಬೆಕ್ಕಿಗೆ ಅಂಜುವುದು ಅವನ ಮೂಢ ನಂಬಿಕೆಯೇ ಸರಿ. ಅದು ಅವನಲ್ಲಿ ಮನೆಮಾಡಿರುವ ವೈಚಾರಿಕ ಪ್ರಜ್ಞೆಯ ಕೊರತೆ ಕೂಡ. ಶುಭ ಕಾರ್ಯಕ್ಕೆ ಹೋಗುವಾಗ ಬೆಕ್ಕನ್ನು ಕಂಡರೆ ಕೆಲವರು ಅಪಶಕುನವೆಂದು ಭಾವಿಸುತ್ತಾರೆ. ಬೆಕ್ಕು ಅಡ್ಡ ಬಂದರೆ, ಕೆಲಸವಾಗದು ಎಂಬ ನಂಬಿಕೆ ಅವರದು. ಒಂದು ವೇಳೆ ಬೆಕ್ಕು ಅಡ್ಡ ಬಂದರೂ ಅದನ್ನು ಲೆಕ್ಕಿಸದೆ ಮುಂದೆ ಹೋಗಿ ಕೆಲಸವಾಗದ ಸಂದರ್ಭದಲ್ಲಿ ‘ಬೆಕ್ಕು ಅಡ್ಡ ಬಂದಿದ್ದರಿಂದಲೇ ಇಂದು ನನ್ನ ಕೆಲಸವಾಗಲಿಲ್ಲ’ ಎಂದು ಭಾವಿಸುವ ಮೂಢಾತ್ಮರೂ ಇದ್ದಾರೆ. ಅಂಥಹ ಅಜ್ಞಾನ ಮತ್ತು ಅಂಧ ಕವಿದ ಮೂಢರಿಗೇನು ನಮ್ಮ ಸಮಾಜದಲ್ಲಿ ಕೊರತೆ ಇಲ್ಲ. ಮತ್ತೊಬ್ಬ ವ್ಯಕ್ತಿ ತನ್ನ ಸಂಶಯವನ್ನು ಪರಿಹರಿಸಿಕೊಳ್ಳಲು ಒಬ್ಬ ಪ್ರಜ್ಞಾವಂತ ವ್ಯಕ್ತಿಯನ್ನು ಹೀಗೆ ಕೇಳುತ್ತಾನೆ. ಶುಭ ಕಾರ್ಯಕ್ಕೆ ಹೋಗುವಾಗ ಹಾವು ರಸ್ತೆಯಲ್ಲಿ ನಮಗೆ ಯಾವ ಕಡೆಯಿಂದ ಬಂದರೆ ಶುಭ ಶಕುನ ಅಥವಾ ಕೆಟ್ಟದ್ದು ಎಂದು. ಆದಕ್ಕೆ ಆ ವ್ಯಕ್ತಿ ಕೊಟ್ಟ ಉತ್ತರ ‘ಅದು ಎತ್ತ ಕಡೆಯಿಂದ ಹಾದು ಬಂದು ನಿನ್ನನ್ನು ಕಚ್ಚದೆ ಹೋದರೆ, ನೀನು ಪುಣ್ಯವಂತ, ನಿನ್ನ ಆಯಸ್ಸು ಗಟ್ಟಿ,’ ಎಂದನಂತೆ. ಹೌದು, ಯಾವುದೇ ಕಾರ್ಯಗಳಲ್ಲಿ ಯಾವುದೇ ಸಮಯದಲ್ಲಿ ನಮಗೆ ಕೇಡು ಸಂಭವಿಸದಿದ್ದರೆ, ನಾವು ಸುದೈವಿಗಳೇ, ನಮ್ಮ ಆಯಸ್ಸು ಗಟ್ಟಿಯೇ. ನಮ್ಮಲ್ಲಿ ಹಾವನ್ನು ಕಂಡರೆ ದೈವವೆಂದು ಪೂಜಿಸುವ ಸಂಸ್ಕೃತಿ. ಆದರೆ ಕೆಲವು ದೇಶಗಳಲ್ಲಿ ಅವು ಮನುಷ್ಯನ ಹಸಿವನ್ನು ನೀಗಿಸುವ ಆಹಾರ. ಇದಕ್ಕೆ ಅವರೇ ಸ್ಪಷ್ಟನೆ ನೀಡಬೇಕು.

‘ಕಾಲಾಯ ತಸ್ಮೈ ನಮಃ’
ಈ ಸಂಸ್ಕೃತ ವಾಕ್ಯ ಸಣ್ಣದಿರಬಹುದು, ಆದರೆ ಇದರ ಅರ್ಥ ಅಗಾಧವಾಗಿದೆ. ಯಾವಕಾಲವೂ ಕೆಟ್ಟದಲ್ಲ. ಸಂದರ್ಭ, ಪರಿಸ್ಥಿತಿ ಮತ್ತು ವಾಸ್ತವ ಒಳಗೊಂಡಿದೆ. ಕಾಲ ಕಳೆದ ಹಾಗೆ ಜಗತ್ತಿನಲ್ಲಿ ತುಂಬಾನೇ ಬದಲಾವಣೆಗಳಾಗುತ್ತವೆ. ಕಾಲವೇ ಎಲ್ಲವನ್ನು ಕಲಿಸುತ್ತದೆ, ಮಣಿಸುತ್ತದೆ. ನಮಗೆ ಸಮಯ ಸರಿಯಿಲ್ಲವೆಂದರೆ, ಹಗಲಿರುಳು ಆಗುವುದು ನಿಲ್ಲದು, ಸೂರ್ಯ ಚಂದ್ರ ಹುಟ್ಟದೆ ಇರುವುದಿಲ್ಲ. ಪವಿತ್ರ ಗ್ರಂಥದ ಆದಿಕಾಂಡ ಒಂದನೇ ಅಧ್ಯಾಯದಲ್ಲಿ ದೇವರು ಭೂಮ್ಯಾಕಾಶಗಳನ್ನು, ಎಲ್ಲಾ ಪ್ರಾಣಿ ಸಂಕುಲಗಳನ್ನು ಮತ್ತು ಜಲ ಜಂತುಗಳನ್ನು ಸೃಷ್ಟಿಮಾಡಿದರು ಎಂದು ಓದುತ್ತೇವೆ. ಇವೆಲ್ಲವನ್ನು ಸೃಷ್ಟಿಸಲು ದೇವರು ತೆಗೆದುಕೊಂಡ ಕಾಲಾವಧಿ ಆರು ದಿನಗಳು. ಏಳನೆಯ ದಿನದಂದು ಅವರು ವಿಶ್ರಾಂತಿ ಪಡೆದರು ಮತ್ತು ಆ ದಿನ ಪರಿಶುದ್ಧ ದಿನವಾಗಿರಲಿ ಎಂದು ಆಶೀರ್ವದಿಸಿದರು. (ಆದಿಕಾಂಡ ೨:೩) ಅವರು ವಿಶ್ರಾಂತಿ ತೆಗೆದುಕೊಂಡ ದಿನವೇ ಭಾನುವಾರ. ಆ ದಿನದಂದು ನಮ್ಮ ಲೌಕಿಕ ಕೆಲಸ ಕಾರ್ಯಗಳಿಗೆ ವಿರಾಮಕೊಟ್ಟು ಸೃಷ್ಟಿಕರ್ತನ ಸ್ಮರಣೆಯಲ್ಲಿ ತೊಡಗಿ ಅಂದು ದೈಹಿಕವಾಗಿ ವಿಶ್ರಾಂತಿ ಪಡೆಯುತ್ತೇವೆ. ಸೆವೆಂತ್ ಡೇ ಅಡ್ವೆಂಟಿಸ್ಟ್ ಪಂಗಡಕ್ಕೆ ಸೇರಿದ ಕ್ರೈಸ್ತರು ಸರ್ವೇಶ್ವರ ದೇವರು ವಿಶ್ರಾಂತಿ ತೆಗೆದಕೊಂಡ ದಿನ ಶನಿವಾರವೆಂದು ಅವರು ಆಚರಿಸುತ್ತಾರೆ. ಅಂದು ಅವರಿಗೆ ಬಿಡುವಿನ ದಿನ. ದೇವರು ಹಗಲು-ಇರುಳನ್ನು, ಋತು ಕಾಲಮಾನಗಳನ್ನು, ದಿನ ಸಂವತ್ಸರಗಳನ್ನು ಸೃಷ್ಟಿಸಿದರು. ಆದರೆ, ಮನಷ್ಯನಿಗೆ ಕಂಟಕವಾಗುವಂತ ಯಾವ ಕೆಟ್ಟ ಕಾಲವನ್ನಾಗಲಿ ದಿನವನ್ನಾಗಲಿ ಸಮಯವನ್ನಾಗಲಿ ಅವರು ಸೃಷ್ಟಿಸಲಿಲ್ಲ. ಅವರು ಸೃಷ್ಟಿಸಿದ್ದೆಲ್ಲವೂ ಅವರ ದೃಷ್ಟಿಯಲ್ಲಿ ಒಳ್ಳೆಯದೇ ಆಗಿತ್ತು. ಒಳ್ಳೆಯದು-ಕೆಟ್ಟದು, ಶುಭ-ಅಶುಭ, ಹಿತ-ಅಹಿತ, ಎಂಬುದನ್ನು ನಾವೇ ಕಲ್ಪನೆಯಲ್ಲಿ ಸೃಷ್ಟಿಮಾಡಿಕೊಂಡು ಅದಕ್ಕೊಂದು ಮೌಢ್ಯತೆಯ ರೂಪಾರ್ಥವನ್ನು ಕೊಟ್ಟಿದ್ದೇವೆ. ಅಷ್ಟು ಮಾತ್ರವಲ್ಲದೆ ಅದಕ್ಕೊಂದು ವಿಶೇಷ ಮಹತ್ವ ಕೊಟ್ಟು ಅದನ್ನು ವೈಭವೀಕರಿಸಿದ್ದೇವೆ. ಅಜ್ಞಾನ, ಅವೈಚಾರಿಕತೆಯನ್ನು ಬಿಟ್ಟು, ನಮ್ಮಲ್ಲಿನ ಜ್ಞಾನ, ವಿವೇಕವನ್ನು ಬಳಸಿ, ಸಮಾಜವನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಕಾಣುವ ಪ್ರಜ್ಞೆ ಬೆಳೆಸಿಕೊಳ್ಳಬೇಕಾದುದು ಇಂದು ಅಗತ್ಯವಾಗಿದೆ. ನಾವು ಎಲ್ಲವನ್ನು ವಿಶ್ವಾಸದಿಂದ ಕಾಣುವುದಿಲ್ಲ. ನಮ್ಮ ಅಪನಂಬಿಕೆ, ಅಜ್ಞಾನ ಬಲಹೀನತೆಯೇ ನಮಗೆ ದೊಡ್ಡ ಅಪಾಯವನ್ನು ತಂದೊಡ್ಡುವ ಮಾರಣಾಂತಿಕ ಕಂಟಕವಾಗ ಬಲ್ಲವು.

ಎಲ್.ಚಿನ್ನಪ್ಪ, ಬೆಂಗಳೂರು.

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram