ಪ್ರೀತಿಯ ಅನು..
ಫಾದರ್ ಐ.ಚಿನ್ನಪ್ಪ ಅಂದರೆ ನನ್ನ ದೊಡ್ಡಪ್ಪ ತೋರಿಕೆಯನ್ನ ಬಯಸದ ಒಬ್ಬ ಅದ್ಭುತ ಮನುಷ್ಯ. ತೋರಿಕೆಗಿಂತ ಇರುವಿಕೆಯನ್ನು ಬಹು ಇಷ್ಟಪಟ್ಟ ಮನುಷ್ಯ. ಮನುಷ್ಯ ಮೂಲತಃ ತೋರಿಕೆಯ ಗುಲಾಮ. ತೋರಿಕೆಗೊಸ್ಕರನೇ ಹುಟ್ಟಿದಾಗೆ ಬದುಕುತ್ತಾನೆ. ಮನುಷ್ಯನ ಪ್ರತಿಯೊಂದು ನಡೆಯನ್ನು ಈ ತೋರಿಕೆ ಎಂಬ ಮಾಯೆ ಡ್ರೈವ್ ಮಾಡುತ್ತಿರುತ್ತದೆ. ನಾವು ಬರೆಯುವುದು, ಮಾತನಾಡುವುದು, ಕಟ್ಟುವುದು ಹೀಗೆ ಎಲ್ಲವನ್ನು ತೋರಿಕೆಗೇ ಮಾಡುವ ಕೆಟ್ಟ ಚಾಳಿ ನಮ್ಮಲ್ಲಿ ಕೆಲವರಿಗಿದೆ. ಉದಾಹರಣೆಗೆ ಒಂದು ಮದುವೆಯ ಸಮಾರಂಭವನ್ನೇ ತೆಗೆದುಕೊಳ್ಳಿ. ಅಲ್ಲಿ ಮುಖ್ಯವಾಗುವುದು ಎಷ್ಟು ಜನ ಮದುವೆಗೆ ಬಂದ್ರು, ಎಷ್ಟು ಗುರುಗಳು ಪೂಜೆಯಲ್ಲಿದ್ದರು, ಎಂತಹ ಸೂಟ್, ಸೀರೆ ಹಾಕಿದರು, ಎಷ್ಟು ಚಿನ್ನ ಒಡವೆ ಹೀಗೆ ತೋರಿಕೆಯ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಆದರೆ ನನ್ನ ದೊಡ್ಡಪ್ಪನವರನ್ನು ಈ ತೋರಿಕೆ ಮತ್ತು ಇರುವಿಕೆಯ ಪರಿಧಿಯಲ್ಲಿ ಗ್ರಹಿಸಿದಾಗ, ನನ್ನ ದೊಡ್ಡಪ್ಪನವರ ಒಂದು ಅದ್ಭುತ ವ್ಯಕ್ತಿತ್ವ ಅನಾವರಣಗೊಳ್ಳುವುದರಲ್ಲಿ ಎರಡು ಮಾತಿಲ್ಲ. ಅವರ ತತ್ವ ಸಿದ್ಧಾಂತ ನಂಬಿಕೆ-ನಿಲ್ಲುವುಗಳು ಎಲ್ಲವೂ ಒಮ್ಮೆಲ್ಲೇ ಈ ಪರಿಧಿಯಲ್ಲಿ ನಮಗೆ ದರ್ಶನವಾಗಿಬಿಡುತ್ತದೆ. ಒಂದು ಸರಳ ಉದಾಹರಣೆ ಕೊಡಬೇಕೆಂದರೆ; ದೊಡ್ಡಪ್ಪನವರನ್ನು ಆಹ್ವಾನಿಸಿದ ಪ್ರತಿಯೊಂದು ಕಾರ್ಯಕ್ರಮಕ್ಕೆ ಹೋಗುತ್ತಿದ್ದರು. ಹೋಗುವ ಕಾರ್ಯಕ್ರಮದಲ್ಲಿ ಅವರ ಭಾಗವಹಿಸುವಿಕೆ, ಇರುವಿಕೆ ಅವರಿಗೆ ಮುಖ್ಯವಾಗುತ್ತಿತ್ತೇ ವಿನಃ ಅಲ್ಲಿ ಅವರು ಯಾವ ತೋರಿಕೆಯ ವಿಚಾರಗಳಲಾಗಲ್ಲಿ, ಕಾರ್ಯಗಳಲಾಗಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಅದು ಹಬ್ಬದ ಪೂಜೆಯಾಗಲಿ ಅಥವಾ ಜೂಬಿಲಿ ಆಚರಣೆಗಳೇ ಆಗಲಿ ಒಂದು ಮೂಲೆಯಲ್ಲಿ ಸ್ಥಿತಪ್ರಜ್ಞೆಯಿಂದ ಒಂದು ಕಡೆ ಯಾರಿಗೂ ಕಾಣದಂತೆ ಕುಳಿತುಬಿಡುತ್ತಿದ್ದರು.
ಹೌದು ಮನುಷ್ಯ ಯಾವಾಗ ತೋರಿಕೆಗೆ ಆಸೆ ಪಡುತ್ತಾನೋ ಆಗ ಅವನು ಆತ್ಮಭ್ರಷ್ಟನಾಗುತ್ತಾನೆ, ಸ್ವಾರ್ಥಿಯಾಗುತ್ತಾನೆ, ನಟನೆಯ ಗೀಳು ಅವನಿಗೆ ಅಂಟಿಕೊಳ್ಳುತ್ತದೆ. ಇತರರ ಇರುವಿಕೆಯನ್ನು ಅಲ್ಲಗಳೆಯುತ್ತಾನೆ. ಹೊಟ್ಟಿಕಿಚ್ಚು, ಅಸೂಹೆ, ಅಸಹನೆ ಹೀಗೆ ಎಲ್ಲವನ್ನು ತುಂಬಿಕೊಂಡು ಅಶಾಂತನಾಗುತ್ತಾನೆ. ಅವನಿಗೆ “ನಾವು”ಮುಖ್ಯವಾಗುವುದಿಲ್ಲ, “ನಾನು” ಎಂಬ ಅಹಂ ಅವನಿಗೆ ಮುಖ್ಯವಾಗಿಬಿಡುತ್ತದೆ. ಒಟ್ಟಾರೆ, ಅವನು ತಾನಾಗಿ ಬದುಕುವುದಿಲ್ಲ. ಇತರರ ಆಪೇಕ್ಷೆಯಂತೆ, ಇತರರನ್ನು ಮೆಚ್ಚಿಸಲು ತನ್ನತನವನ್ನು ಮಾರಿಕೊಂಡು ಬದುಕುತ್ತಾನೆ,
ಆದರೆ ಇರುವಿಕೆಯನ್ನು ಬಯಸುವ ತೋರಿಕೆಯನ್ನು ನಿರ್ಲಕ್ಷಿಸುವ ಮನುಷ್ಯ ಶಾಂತವಾಗಿರುತ್ತಾನೆ, ಮುಗ್ಳುನಗೆ ಅವನ ಮುಖವನ್ನು ತುಂಬಿಕೊಂಡಿರುತ್ತದೆ. ಅವನಿಗೆ ಮರೆಮಾಚುವ ಗೀಳು ಇರುವುದಿಲ್ಲ. ಅವರಿಗೆ ತನ್ನ ಇರುವಿಕೆಗಿಂತ ಎಲ್ಲರ ಇರುವಿಕೆ ಮುಖ್ಯವಾಗುತ್ತದೆ, ತನ್ನ ತೃಪ್ತಿಗಿಂತ ಎಲ್ಲರ ತೃಪ್ತಿ ಮುಖ್ಯವಾಗುತ್ತದೆ. ಆ ತನ್ನ ಸಂತೋಷಕ್ಕಿಂತ ಎಲ್ಲರ ಸಂತೋಷ ಬಹು ಮುಖ್ಯವಾಗುತ್ತದೆ. “ನಾನು” ಬದಲಿಗೆ “ನಾವು” ಎಂಬುವುದು ರುಜುವಾಗುತ್ತದೆ. “ನನ್ನದು” ಬದಲಿಗೆ “ನಮ್ಮದು” ಎಂಬ ಭಾವನೆ ಒಡ ಮೂಡುತ್ತದೆ. “ನನ್ನವರು” ಹೋಗಿ “ನಮ್ಮವರು” ಎಂಬುವುದು ರೂಪುಗೊಳ್ಳುತ್ತದೆ. ಒಟ್ಟಾರೆ ನಾನು, ನನ್ನದು, ನನಗೆ ಮೀರಿದ ಬಟ್ಟ ಬಯಲಿನ ಬದುಕು ಅವರದಾಗುತ್ತದೆ. ಎಲ್ಲರನ್ನು ಅಪ್ಪಿ ಎಲ್ಲರಲ್ಲೂ ಎಲ್ಲವಾಗುವ ಬದುಕು ಅವರದಾಗುತ್ತದೆ. ಇದೆಲ್ಲಾ ಸಾಧ್ಯವಾಗುವುದು ಮನುಷ್ಯ ಜಾಗೃತಗೊಂಡಾಗ ಮಾತ್ರ. ಇಂತಹ ಜಾಗೃತ ಬದುಕು ನನ್ನ ದೊಡ್ಡಪ್ಪನವರದಾಗಿತ್ತು ಎಂದು ಹೇಳಲು ನನಗ ಹಮ್ಮೆಯಾಗುತ್ತದೆ.
ಇಲ್ಲಿ ಒಂದು ಚಿಕ್ಕ ಕಥೆ ಹೇಳತ್ತೇನೆ. ಮದುವೆಯಾಗಿ ಒಂದು ವರ್ಷಕ್ಕೆ ಮಗುವಾಯಿತ್ತು. ಚೊಚ್ಚಲ ಮಗುವಿಗೆ ಜನ್ಮಕೊಟ್ಟ ತಾಯಿ ಮಗುವಿನ ತೊಟ್ಟಿಲನ್ನು ಚಿನ್ನಾಭರಣಗಳಿಂದ ಆಲಂಕರಿಸತ್ತಾಳೆ. ಮಗುವನ್ನೂ ಸಹ ಬೆಲೆಬಾಳುವ ಚಿನ್ನಾಭರಣಗಳಿಂದ ಸಿಂಗಾರಿಸುತ್ತಾಳೆ. ಜತೆಗೆ ಬೆಲೆಬಾಳುವ ಬಟ್ಟೆಗಳನ್ನು ಸಹ ಮಗುವಿಗೆ ತೊಡಿಸುತ್ತಾಳೆ ಆದರೂ ಮಗು ಆಗಾಗ ಅಳುತ್ತಲೇ ಇರುತ್ತದೆ. ಮಗುವಿನ ಅಳುವನ್ನು ಅರ್ಥಮಾಡಿಕೊಳ್ಳದ ತಾಯಿ, ಇನ್ನೂ ಹೆಚ್ಚು ಹೆಚ್ಚು ಬೆಲೆಬಾಳುವ ವಸ್ತುಗಳನ್ನು, ಬೊಂಬೆಗಳನ್ನು ಮಗುವಿಗೆ ಕೊಡುತ್ತಾಳೆ. ಆದರೂ ಮಗು ಅಳುವುದನ್ನು ನಿಲ್ಲಿಸುವುದಿಲ್ಲ. ಕಳವಳಗೊಂಡ ತಾಯಿ ತನ್ನ ತಾಯಿಯ ಬಳಿಗೆ ಹೋಗಿ ‘ಅಮ್ಮ ಮಗುವಿಗೆ ಬೇಕಾಗಿದೆಲ್ಲವನ್ನು ಕೊಟ್ಟಿದ್ದೇನೆ. ಚಿನ್ನದ ತೊಟ್ಟಿಲನ್ನು ಮಾಡಿಸಿದ್ದೇನೆ. ಬೆಳೆಬಾಳುವ ಬಟ್ಟೆಯನ್ನು ಹಾಕಿದ್ದೇನೆ. ಆದರೂ ಮಗು ಅಳುವುದನ್ನು ಬಿಡುತ್ತಿಲ್ಲ, ಏನು ಮಾಡುವುದು? ಆಗ ಆಕೆಯ ತಾಯಿ ಹೇಳುತ್ತಾಳೆ ?ಮಗುವಿಗೆ ಹಾಲು ಕುಡಿಸಿದೆಯಾ? ಅದಕ್ಕೆ ಬೇಕಾಗಿರುವುದು ನಿನ್ನ ಇರುವಿಕೆ ನಿನ್ನ ತೋರುವಿಕೆಯಲ್ಲ?
ಚಿನ್ನದ ತೊಟ್ಟಿಲು, ಬೆಲೆ ಬಾಳುವ ಬಟ್ಟೆ, ಚಿನ್ನಾಭರಣಗಳು ಇವೆಲ್ಲಾ ಕೇವಲ ತೋರಿಕೆಗೆ ಮಾತ್ರ. ಬದುಕಿಗೆ ಬೇಕಾಗಿರುವುದು ಇರುವಿಕೆ ಮಾತ್ರ. ಇಂತಹ ಸತ್ಯವನ್ನು ಅರಿತಿದ್ದ ನನ್ನ ದೊಡ್ಡಪ್ಪ ತುಂಬಾ ಸರಳ ಜೀವನ ಶೈಲಿಯನ್ನು ಆರಿಸಿಕೊಂಡಿದ್ದರು, ಅವರ ಸರಳತೆ ಅವರ ಉಡುಗೆ ತೊಡುಗೆಗಳಲ್ಲಿ ಊಟದಲ್ಲಿ ಕಾಣಿಸುತಿತ್ತು. ತಂದೆಯ ಗುಣವನ್ನು ತಾಯಿಯ ಪ್ರೀತಿಯನ್ನು ಅವರಲ್ಲಿ ಕಾಣಬಹುದಿತ್ತು. ನೂರಾರು ಜನರ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಹಿಸಿ ಬೆಳೆಸಿ, ಕೊನೆಗೆ ಅವರೆಲ್ಲಾ ಗರಿಬಿಚ್ಚಿ ಹಾರುವಾಗ ದೂರಗಾಮಿಯಾಗಿ ನಿಂತು ಹರಸಿ ತಂದೆಯಾದರು, ಮಿತ್ರರಾದರು. ಕಥೋಲಿಕ ಕನ್ನಡ ಸಾಹಿತ್ಯ ಸಂಗೀತ ಬೆಳೆಸಲು ಎಲೆಮರೆಯ ಕಾಯಿಯಂತೆ ಶಕ್ತಿಮೀರಿ ದುಡಿದ್ದರು. ಬೈಬಲ್ ಅನುವಾದ, ಜಪಪುಸ್ತಕಗಳ ಪ್ರಕಾಶನ ಹೀಗೆ ಕನ್ನಡ ಕ್ರೈಸ್ತರ ಅನೇಕ ಪ್ರಥಮಗಳಲ್ಲಿ ಫಾದರ್ ಚಿನ್ನಪ್ಪನವರು ಕಾಣದ ಕೊಡುಗೆಗಳನ್ನು ನಾವು ಮರೆಯುವಂತಿಲ್ಲ.
ಹತ್ತಾರು ಹುಡುಗರ ವಿದ್ಯಾಭ್ಯಾಸಕ್ಕೆ ಸಹಾಯಮಾಡಿ ಬೆಳೆಸಿದರು. ಹಲವಾರು ಹುಡುಗರಿಗೆ ಫಾದರ್ ಆಗಲು ಪ್ರೇರಪಿಸಿ ತನ್ನ ಗರಡಿಯಲ್ಲಿ ಅವರೆಲ್ಲರನ್ನೂ ಬೆಳೆಸಿದರು. ಬಿತ್ತಿ ನೀರು ಹಾಕಿ ಬೆಳೆಸಿದ ಎಲ್ಲ ಪ್ರಯತ್ನಗಳು ಹುಲುಸಾಗಿ ಬೆಳೆದು ಫಲ ನೀಡುವುದನ್ನು ದೂರದಿಂದಲ್ಲೇ ನೋಡಿ ಸಂಭ್ರಮಿಸಿದರು. ಹೌದು, ಇವ್ಯಾವು ತೋರಿಕೆಗಾಗಿ ಮಾಡಿದಲ್ಲ. ಎಲ್ಲೂ ತನ್ನದಲ್ಲದನ್ನು ತನ್ನದೆಂದು ಹೇಳಿಕೊಳ್ಳಲಿಲ್ಲ, ತಾನಾಲ್ಲದನ್ನು ತಾನೆಂದು ತೋರಿಸಿಕೊಳ್ಳಲಿಲ್ಲ. ತಾನು ಮಾಡಿದಲ್ಲದನ್ನು ತಾನು ಮಾಡಿದ್ದು ಎಂದು ಎಲ್ಲೂ ಕೊಚ್ಚಿಕೊಳ್ಳಲಿಲ್ಲ.
ದೊಡ್ಡಪ್ಪನವರ ಮಾತಿನಲ್ಲೇ ಹೇಳುವುದಾದರೆ “ಆಸಕ್ತಿದಾಯಕವಾದ ಬದುಕು ನನ್ನದು. ಆನಂದದಿಂದ ಈ ಜೀವನ ಸವಿದಿದ್ದೇನೆ. ನಾನು ಬರಹಗಾರನಲ್ಲ, ರಚನಕಾರನಲ್ಲ, ಅಂತಹ ಪ್ರತಿಭಾವಂತನೂ ಅಲ್ಲ. ಆದರೆ ನನ್ನ ಧರ್ಮಕೇಂದ್ರದ ಜನರಿಗೆ ಒಬ್ಬ ಒಳ್ಳೆಯ ಗುರುವಂತೂ ಖಂಡಿತ ಆಗಿದ್ದೆ. ಅವರು ನನ್ನನು ಪ್ರೀತಿಸಿದರು ನಾನು ಅವರನ್ನು ಪ್ರೀತಿಸಿದೆ.”
ಪ್ರಾಮಾಣಿಕತೆ ಮತ್ತು ಇರುವಿಕೆಗೆ ಬದ್ಧನಾಗಿದ್ದ, ತನ್ನ ಬಗ್ಗೆ ಅರಿವಿದ್ದ ಮನುಷ್ಯನಿಂದ ಮಾತ್ರ ಇಂಥ ಸರಳವಾದ ಮಾತುಗಳು ಬರಲು ಸಾಧ್ಯ. ಅವರ ಆಪ್ತ ಬಳಗ ಬಣ್ಣಿಸಿದಂತೆ “ದೂರ ತೀರದ ಶಾಂತ ಮೂರ್ತಿಯಂತೆ, ಜನರನ್ನೆಲ್ಲ ಆಡಿಸಿ ತಾ ಮಾತ್ರ ನೇಪಥ್ಯದಲ್ಲಿ ನಿಂತರೂ ಮನೆ-ಮನಗಳಲ್ಲಿ ವ್ಯಾಪಿಸಿರುವ ಫಾದರ್ ಚಿನ್ನಪ್ಪ”
ಕೊನೆಗೆ, ದೊಡ್ಡಪ್ಪ; ಎಷ್ಟು ನಿಜವಾಗಿ ಬದುಕಿದಿರಿ ನೀವು, ಎಷ್ಟು ಶುದ್ಧವಾಗಿ ಬದುಕಿದಿರಿ ನೀವು, ಎಷ್ಟು ಸರಳವಾಗಿ ಬದುಕಿದಿರಿ ನೀವು, ಎಷ್ಟು ಇಷ್ಟವಾಗಿ ಬದುಕಿದಿರಿ ನೀವು
ಸುಮ್ಮನೆ ನಡೆದಿರಿ.. ಮಾತಾಡಿದಿರಿ, ಹರಸಿದಿರಿ …ನಮಗೆ ದಾರಿ ತೋರಿದಿರಿ, ಅದಕೆ ನೀವು ಅನಂತವಾಗಿದ್ದೀರಿ. ಕೊನೆಗೆ ಕೆಲವೊಂದು ಸಾಲುಗಳನ್ನು ಪಠಿಸುತ್ತಾ ನನ್ನ ಮಾತುಗಳನ್ನು ಕೊನೆಕೊಳ್ಳಿಸುತ್ತೇನೆ:
ಮಾತು ಮೌನಗಳ ನಡುವೆ
ಮೌನವಾಗಿದ್ದ ದೊಡ್ಡಪ್ಪ
ಮೌನದಲ್ಲೇ ಮಾತನಾಡುತ್ತಿದ್ದರು
ಏಕೆಂದರೆ
ಮೌನವಿಲ್ಲದ ಮಾತು
ಮಾತುಗಳಲ್ಲ
ಎಂದು ತಿಳಿದಿದ್ದರು…
ಸೇವೆ ಅಧಿಕಾರಗಳ ನಡುವೆ
ಸೇವಕರಾಗಿಯೇ ಬಾಳಿದ ದೊಡ್ಡಪ್ಪ
ಸೇವೆಯಿಂದಲೇ ಅಧಿಕಾರ ಎನ್ನುತ್ತಿದ್ದರು
ಏಕೆಂದರೆ
ಸೇವಕನಲ್ಲದವನ್ನು
ನಾಯಕನಾಗುವುದು ಅಸಾಧ್ಯ ಎನ್ನುತ್ತಿದ್ದರು
ವರ್ತಮಾನ ಭವಿಷ್ಯ ನಡುವೆ
ವರ್ತಮಾನದಲ್ಲಿಯೇ ಬಾಳಿದ ದೊಡ್ಡಪ್ಪ
ವರ್ತಮಾನ ಅಡಿಪಾಯದ ಮೇಲೆ ಭವಿಷ್ಯ ಎನ್ನುತ್ತಿದ್ದರು
ಏಕೆಂದರೆ
ವರ್ತಮಾನವಿಲ್ಲದೆ
ಭವಿಷ್ಯವಿಲ್ಲ ಎಂಬುವುದು ಅವರ ಗ್ರಹಿಕೆ
ಹಾರಾಟ ಚೀರಾಟಗಳ ನಡುವೆ
ದೊಡ್ಡಪ್ಪ ವಹಿಸಿದು ಪ್ರೀತಿ ಮಾರ್ಗ
ಏಕೆಂದರೆ
ಕ್ಷಣಿಕ ಸೋತಂತೆ ಕಂಡರೂ
ಕೊನೆಗೆ ಗೆಲ್ಲುವುದು ಪ್ರೀತಿಯೊಂದೇ
ಎಂಬುವುದು ಅವರ ಗ್ರಹಿಕೆಯಾಗಿತ್ತು…
ಭೂಮಿ ಆಕಾಶಗಳ ನಡುವೆ
ದೊಡ್ಡಪ್ಪ ನಡೆದಿದ್ದು ಭೂಮಿಯ ಮೇಲೆ
ಏಕೆಂದರೆ ಭೂಮಿಯ ಮೇಲಿನ
ದೃಢ ಹೆಜ್ಜೆಗಳು ಮಾತ್ರ
ಆಕಾಶದ ಎತ್ತರಕ್ಕೆ ಏರಿಸುವುದು
ಎಂಬುವುದು ಅವರ ಒಲವಾಗಿತ್ತು?..
ಧನ್ಯವಾದಗಳು!
ಅನಂದ್