ಎಂದಿಗೂ ಕ್ಷಮಿಸಬೇಡ

Advertisements
Share

ಒಂದು ಚಿಕ್ಕ ವೀಡಿಯೋ. ಮೈತ್ಯೆ’ ಜನಾಂಗಕ್ಕೆ ಸೇರಿದ ನೂರಾರು ಪುರುಷರ ಒಂದು ಗುಂಪು ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿಸುವ ದೃಶ್ಯ. ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಅಸಹಾಯಕತೆಯಿಂದ ಆ ಮಹಿಳೆಯರು ನಡೆಯುವ ಆ ವೀಡಿಯೋ ನಿಜವಾಗಲೂ ಮನಕಲಕುವಂತದ್ದು. ಹೌದು ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಗಲಭೆ ಈಗ ಕೋಮುಗಲಭೆಯ ರೂಪ ತಳೆದು ಸುದ್ದಿಯಲ್ಲಿದೆ. ಅದರಲ್ಲೂ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿಸಿದ ವೀಡಿಯೋ ಎಲ್ಲಾ ಕಡೆ ವೈರಲಾಗಿ ಪ್ರಜ್ಞಾವಂತರನ್ನೂ ಬಡಿದೆಚ್ಚರಿಸಿದೆ. ಎಲ್ಲಾ ಕಡೆ ಈ ಅಮಾನವೀಯ ವರ್ತನೆಯನ್ನು ಖಂಡಿಸಿ ಶಾಂತಿ ಮೆರವಣಿಗೆಗಳು ಪ್ರತಿಭಟನೆಗಳು ತೀವ್ರವಾಗಿ ನಡೆಯುತ್ತಿವೆ. ವಾಸ್ತವಾಗಿ ಈ ಒಂದು ಪೈಶಾಚಿಕ ವರ್ತನೆಯ ಘಟನೆ ನಡೆದಿದ್ದು ಸುಮಾರು ಎರಡು ತಿಂಗಳ ಹಿಂದೆ. ಕೆಲವು ಪತ್ರಿಕೆ ವರದಿಗಳ ಪ್ರಕಾರ ಈ ಘಟನೆ ನಡೆದಿದ್ದು ಮೇ ೪ರಂದು. ದೌರ್ಜನ್ಯಕ್ಕೆ ಒಳಗಾದ ಕುಟುಂಬದವರು ದೂರು ಕೊಟ್ಟರು ಅದರ ಬಗ್ಗೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದೇ ದಿವ್ಯ ಮೌನವಹಿಸಿತ್ತು. ಆ ವೀಡಿಯೋ ವ್ಯಾಪಕವಾಗಿ ಹರಡಿದನಂತರ ಮತ್ತು ಪ್ರಜ್ಞಾವಂತರ ಪ್ರತಿಭಟನೆಗಳಿಂದ ಮುಜುಗರಕ್ಕೆ ಒಳಗಾದ ರಾಜ್ಯ ಸರ್ಕಾರ ಪ್ರತಿಕ್ರಿಯಿಸಲು ಪ್ರಾರಂಭಿಸಿದೆ. ಮಣಿಪುರದಲ್ಲಿ ಮೈತ್ಯೆ’ ಮತ್ತು ಕುಕಿ’ ನಡುವೆ ನಡೆಯುತ್ತಿರುವ ಹಿಂಸೆ ಗಲಭೆಗಳನ್ನು ತಡೆಯಲಾಗದ ಒಂದು ಸರ್ಕಾರಕ್ಕೆ ಯಾವ ರೀತಿ ಬುದ್ಧಿ ಹೇಳಬೇಕು? ಯಾರು ಬುದ್ಧಿ ಹೇಳಬೇಕು? ಕೆಲ ಮೂಲಗಳ ಪ್ರಕಾರ ಈ ಗಲಭೆಯ ಹಿಂದೆ ರಾಜಕಾರಣಿಗಳ ಕೈವಾಡ ಇದೆಯೆಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಸುವ್ಯವಸ್ಥೆ ಕಾಪಾಡಬೇಕಾದ ಜವಾಬ್ದಾರಿ ಜನರಿಂದ ಆಯ್ಕೆಯಾದ ಸರ್ಕಾರದ್ದು. ಮಾಡುವ ಕೆಲಸವನ್ನು ಬಿಟ್ಟು ಸುಳ್ಳು ಸುದ್ದಿಗಳನ್ನು ಹಬ್ಬಿಸಿಕೊಂಡು, ಕಳ್ಳ ನೆವಗಳನ್ನು ಕೊಟ್ಟು ತಮ್ಮ ಅಸಾಮರ್ಥ್ಯವನ್ನು ಸಮರ್ಥಿಸಿಕೊಳ್ಳುತ್ತಾ ಹಿಂಸೆಗೆ ಪ್ರಚೋದಿಸುವುದು ತಪ್ಪು. ಪ್ರಜ್ಞಾವಂತರು ಕೂಡ ಈ ಬಗ್ಗೆ ಯೋಚಿಸಿ ತೀವ್ರ ಪತಿಭಟನೆಗಳನ್ನು ಮಾಡಬೇಕಾಗಿದೆ. ಸರ್ಕಾರಕ್ಕೆ ತಿಳಿ ಹೇಳಬೇಕಾಗಿದೆ. ಇಂತಹ ಹಿಂಸೆ ಗಲಭೆಗಳನ್ನು ನಡೆಯದಂತೆ ಕ್ರಮ ಕೈಗೊಳ್ಳಲು ಸರ್ಕಾರದ ಮೇಲೆ ಒತ್ತಡ ತರಬೇಕಾಗಿದೆ. ಜಾತಿ, ಧರ್ಮ ಆಧಾರಗಳ ಮೇಲೆ ಧ್ರುವೀಕರಣಗಳು ಯಥೇಚ್ಚವಾಗಿ ದೇಶದಲ್ಲಿ ನಡೆಯುತ್ತಿವೆ. ಈ ರೀತಿಯ ದ್ರುವೀಕರಣದ ಹಿಂದೆ ಮುಂಬರುವ ಚುನಾವಣೆಯ ಲೆಕ್ಕಚಾರವಿದೆ. ಚುನಾವಣೆಯನ್ನು ಗೆಲ್ಲಲ್ಲು ಮತ್ತು ಅಧಿಕಾರ ಚುಕ್ಕಾಣಿ ಹಿಡಿದು ತಮ್ಮ ಹಿಡನ್ ಅಂಜೆಂಡವನ್ನು/ ರಹಸ್ಯ ಕಾರ್ಯಸೂಚಿಯನ್ನು ಸಾಧಿಸಲು ಈ ರೀತಿಯ ಧ್ರುವೀಕರಣ ಈ ದಿನಗಳಲ್ಲಿ ಬಹು ವ್ಯವಸ್ಥಿತವಾಗಿ ನಡೆಯುತ್ತಿದೆ. ಲೋಕಸಭಾ ಚುನಾವಣೆಯ ಮುಂಚೆ ಇನ್ನೂ ಬೇರೆ ಬೇರೆ ರಾಜ್ಯಗಳಲ್ಲಿ ಈ ರೀತಿಯ ಗಲಭೆಗಳು ಹುಟ್ಟುಕೊಳ್ಳಬಹುದೆಂಬ ಗುಮಾನಿ ಇದೆ. ಆದ್ದರಿಂದ ದೇಶದ ಪ್ರಜೆಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಜೊತೆಗೆ ಇಂತಹ ದುಷ್ಟ ಜನರ ವಿರುದ್ಧ ಧೈರ್ಯದಿಂದ ಹೋರಾಡಬೇಕಾಗಿದೆ.

ಇಂತಹ ವಿಷಮಸ್ಥಿತಿಯಲ್ಲಿ ಪ್ರಜ್ಞಾವಂತರು ಎರಡು ರೀತಿಯಲ್ಲಿ ಪ್ರತಿಕ್ರಿಯಿಸಬಹುದು: ಒಂದು ತಕ್ಷಣದ ಪ್ರಕ್ರಿಯೆ. ಮತ್ತೊಂದು ದೂರದೃಷ್ಟಿಯ ಪ್ರಕ್ರಿಯೆ. ತಕ್ಷಣ ನಾವು ಇಂತಹ ಗಲಭೆ ಮತ್ತು ವ್ಯವಸ್ಥಿತ ಹಿಂಸಾಚಾರಗಳನ್ನು ತೀವ್ರವಾಗಿ ಖಂಡಿಸಬೇಕು. ಪ್ರತಿಭಟನೆಗಳ ಮೂಲಕ ಸರ್ಕಾರ ಮತ್ತು ಅಧಿಕಾರಿಗಳನ್ನು ಎಚ್ಚರಿಸಿ ಹಿಂಸೆ ಮತ್ತು ಗಲಭೆಗಳನ್ನು ನಿಲ್ಲಿಸಲು ಸೂಕ್ತವಾದ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಬೇಕು. ಇಂತಹ ಸಂದರ್ಭದಲ್ಲಿ ಬೇರೆಯವರನ್ನು ದೂರುತ್ತಾ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ರಾಜಕಾರಣಿಗಳನ್ನು ಮತ್ತು ಅಧಿಕಾರಿಗಳನ್ನು ಖಂಡಿಸಿ, ಕ್ರಮ ಕೈಗೊಳ್ಳುವಂತೆ ಮಾಡಬೇಕು. ಇದು ತಕ್ಷಣದ ಪ್ರಕ್ರಿಯೆ. ಇದು ಹೇಳುವಷ್ಟು ಸುಲಭದ ಕೆಲಸವಲ್ಲ. ಸರ್ಕಾರದ ತಪ್ಪುಗಳನ್ನು ಖಂಡಿಸಿ ವಿರೋಧಿಸುವವರನ್ನು ದೇಶದ್ರೋಹಿ ಪಟ್ಟವನ್ನು ಕಟ್ಟಿ, ಸುಳ್ಳು ಕೇಸ್‌ಗಳನ್ನು ಹಾಕಿ ಜೈಲಿಗೆ ದೂಡುತ್ತಿರುವ ಈ ಸಂದರ್ಭದಲ್ಲಿ, ಹೋರಾಟಗಾರನಿಗೆ ಧೈರ್ಯ ಮತ್ತು ಸಂಕಲ್ಪ ಬೇಕೇಬೇಕು. ಜತೆಗೆ ತಾನು ನಂಬಿರುವ ಜಾತ್ಯತೀತ ಸಿದ್ಧಾಂತಗಳಲ್ಲಿ ಪೂರ್ಣ ಪ್ರಮಾಣದ ಬದ್ಧತೆ ಬೇಕು.

ಮತ್ತೊಂದು ರೀತಿಯ ಪ್ರಕ್ರಿಯೆ ದೀರ್ಘಕಾಲ ಬೇಡುವಂಥದ್ದು. ಕೋಮುವಾದಿಗಳನ್ನು ಮಣಿಸಲು ಅವರಂತೆಯೇ ಗುಂಪುಕಟ್ಟಿ ಜನರಲ್ಲಿ ಜಾಗೃತಿ ಮೂಡಿಸುವಂತದ್ದು. ಇದು ಕೇವಲ ಎರಡು ಮೂರು ದಿನಗಳಲ್ಲಾಗಲಿ ಅಥವಾ ತಿಂಗಳುಗಳಲ್ಲಾಗಲಿ ಆಗುವಂಥದಲ್ಲ. ಹತ್ತಾರು ವರ್ಷಗಳ ಶ್ರಮ, ಸಂಘಟನೆ, ಶಿಕ್ಷಣ ಬೇಡುವಂತದ್ದು. ಕೇವಲ ತಕ್ಷಣದ ಪ್ರಕ್ರಿಯೆಕೊಟ್ಟು ಸುಮ್ಮನಾಗದೆ, ದೀರ್ಘಕಾಲ ಪ್ರಕ್ರಿಯೆಯ ಬಗ್ಗೆ ಕೂಡ ನಾವೆಲ್ಲರೂ ಯೋಚಿಸಬೇಕಾಗಿದೆ. ದೇಶದ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿರುವ ನಾವು ಈ ರೀತಿಯ ಮಂಥನ ತಪ್ಪದೇ ಮಾಡಬೇಕಾಗಿದೆ.
ಕೊನೆಗೆ ಶಿವಸುಂದರ್ ಅವರು ಕನ್ನಡಕ್ಕೆ ಅನುವಾದಿಸಿರುವ ‘ಸರ್ವೇಶ್ವರ್ ದಯಾಳ್ ಸಕ್ಸೇನರ’ ಹಿಂದಿ ಮೂಲದ ಈ ಕವಿತೆ ಮೂಲಕ ನನ್ನ ಮಾತುಗಳಿಗೆ ವಿರಾಮ ಹೇಳುತ್ತೇನೆ.

ನಿನ್ನ ಮನೆಯ
ಒಂದು ಕೋಣೆಗೆ ಬೆಂಕಿ ಬಿದ್ದಿದ್ದರೆ,
ಮತ್ತೊಂದು ಕೋಣೆಯಲ್ಲಿ ನೀನು
ನಿಶ್ಚಿಂತೆಯಿಂದ ಮಲಗಬಲ್ಲೆಯಾ?

ನಿನ್ನ ಮನೆಯ
ಒಂದು ಕೋಣೆಯಲ್ಲಿ ಹೆಣಗಳು ಕೊಳೆಯುತ್ತಿದ್ದರೆ…
ಮತ್ತೊಂದು ಕೋಣೆಯಲ್ಲಿ ನೀನು
ಪರವಶನಾಗಿ ಪ್ರಾರ್ಥನೆ ಮಾಡಬಲ್ಲೆಯಾ?

ಹೌದೆಂದರೆ ನಿನಗೆ
ಹೇಳಲೇನೂ ಉಳಿದಿಲ್ಲ ನನಗೆ..
*ದೇಶವೆಂದರೆ
ಕಾಗದದ ಮೇಲೆ ಬರೆದ ನಕ್ಷೆಯಲ್ಲ*
ಮುಖದ ಭಾಗ ಹರಿದು ಹೋದರೂ
ಮತ್ತೊಂದು ಭಾಗ ಮುಕ್ಕಾಗದೆ
ಉಳಿಯುವುದೇನು?
ನದಿಗಳು, ಪರ್ವತಗಳು, ಹಳ್ಳಿಗಳು, ಪಟ್ಟಣಗಳು
ಕದಲದೇ ಇರುವುದೇನು?
ಹೌದೆನಿಸದಿದ್ದರೆ ನಿನಗೆ
ಜೊತೆಗಿರಲು ಕಾರಣಗಳಿಲ್ಲ ನನಗೆ…

ಈ ಲೋಕದಲ್ಲಿ
ಮನುಷ್ಯರ ಪ್ರಾಣಕ್ಕಿಂತ
ಮಿಗಿಲಾದದ್ದು ಬೇರೇನಿಲ್ಲ..
ಈಶ್ವರನೂ ಅಲ್ಲ,
ಜ್ಞಾನವೂ ಅಲ್ಲ,
ಚುನಾವಣೆಯೂ ಅಲ್ಲ..
ಹೆಣಗಳ ಸುಪರ್ದಿಯಲ್ಲಿರುವ
ವಿವೇಕ ಕುರುಡಾಗಿರುತ್ತದೆ..
ಬಂದೂಕಿನ ನೆರಳಲ್ಲಿ
ಜಾರಿಯಾಗುವ ಶಾಸನ
ಹಂತಕರ ದಂಧೆಯಾಗಿರುತ್ತದೆ..
ಹೌದೆನಿಸದಿದ್ದರೆ ಇದೂ ನಿನಗೆ…
ಒಂದು ಗಳಿಗೆಯೂ ನಿನ್ನ ಸಹವಾಸ
ಬೇಡ ನನಗೆ..

ನೆನಪಿಟ್ಟುಕೋ,
ಒಂದು ಕಂದಮ್ಮನ ಹತ್ಯೆ..
ಒಂದು ಮಹಿಳೆಯ ಸಾವು..
ಗುಂಡಿನಿಂದ ಛಿದ್ರಗೊಂಡ
ಒಬ್ಬ ಮನುಷ್ಯನ ದೇಹ..
ಕೇವಲ ಸರ್ಕಾರವೊಂದರ ಪತನವಲ್ಲ…
ಒಂದಿಡೀ ರಾಷ್ಟ್ರದ ಅಧಃಪತನ

ರಕ್ತದೋಕುಳಿ ಹರಿಸಿ
ಹರಿದ ಭೂಮಿಗೆ
ಹೊಲಿಗೆ ಹಾಕಲಾಗುವುದಿಲ್ಲ…
ಅವು ಆಕಾಶದಲ್ಲಿ ಹಾರುತ್ತಿರುವ
ಬಾವುಟಗಳನ್ನು ಕಪ್ಪಾಗಿಸುತ್ತವೆ..

ಯಾವ ಭೂಮಿಯ ಮೇಲೆ
ಸೈನಿಕರ ಬೂಟುಗಳ
ನಿಶಾನೆ ಇರುತ್ತದೋ..
ಯಾವ ನೆಲದವ್ವನ
ಎದೆಯ ಮೇಲೆ
ಹೆಣಗಳ ರಾಶಿ ಪೇರಿಸಲಾಗುತ್ತದೋ ..
ಆ ನೆಲದ ನೋವು
ನಿನ್ನ ರಕ್ತದಲ್ಲಿ
ಬೆಂಕಿಯಾಗಿ ಹರಿಯದಿದ್ದರೆ..
ಅನುಮಾನವೇ ಇಲ್ಲ

ನೀನು ಬಂಜರು
ನೀನು ಬರಡು
ಬರೀ ಕೊರಡು
ನಿನಗಿಲ್ಲಿ ಉಸಿರಾಡಲೂ
ಇಲ್ಲ ಅಧಿಕಾರ..
ನಿನಗಿಲ್ಲಿ ಇಲ್ಲ ಯಾವುದೇ ಸಂಸಾರ ..

ಕೊನೆಗೊಂದು ಕಿವಿಮಾತು,
ನೇರ ಮತ್ತು ನಿಷ್ಠುರ..
ಹಂತಕನು ಯಾರೇ ಆಗಿರಲಿ,
ಎಂದಿಗೂ ಕ್ಷಮಿಸಬೇಡ..
ಅವನು
ನಿನ್ನ ಗೆಳಯನಾಗಿದ್ದರೂ ಸರಿ..
ಧರ್ಮದ ರಕ್ಷಕನಾಗಿದ್ದರೂ ಸರಿ..
ಅಥವಾ ಪ್ರಜಾತಂತ್ರದ
ಸ್ವಯಂಘೋಷಿತ ಪಹರೆದಾರನಾಗಿದ್ದರೂ ಸರಿ

ಜೋವಿ
ಫಾದರ್ ವಿನೋದ್ ಪಾಲ್ ಯೇ.ಸ., ಮೂಲತಃ ಹಾರೋಬೆಲೆ ಊರಿನವರು. ದನಿ ಮಾಧ್ಯಮ ಮನೆಯ ಸ್ಥಾಪಕರು. ಹವ್ಯಾಸಿ ಬರಹಗಾರರು. ಪ್ರಸ್ತುತ ಮಾನ್ವಿ ಎಂಬ ಚಿಕ್ಕ ಪಟ್ಟಣದಲ್ಲಿರುವ ಲೊಯೋ ಪದವಿ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram