
ಭಾಷಾ ಶ್ರೀಮಂತಿಕೆಯಿಂದ ನಾವು ನೋಡಿದಾಗ ಇತರ ಭಾಷೆಗಳಿಗಿಂತ ಕನ್ನಡ ಭಾಷೆ ಕಲಿಯಲು, ಮಾತನಾಡಲು ಮತ್ತು ಬರೆಯಲು ಸುಲಭವಾಗಿದ್ದು ಅಸಾಧಾರಣವಾದ ಪರಂಪರೆಯನ್ನು ಹೊಂದಿದೆ. ಇದು ಸುಮಾರು ೨೦೦೦ ಸಾವಿರ ವರ್ಷಗಳಷ್ಟೂ ಹಿಂದೆಯೇ ಬಳಕೆಯಲ್ಲಿದ್ದ ಪ್ರಾಚೀನ ಭಾಷೆ ಎನ್ನುವುದಕ್ಕೆ ಹಲವಾರು ಶಾನಗಳು, ಸಾಹಿತ್ಯದ ಹೊತ್ತಿಗೆಗಳು ಆಧಾರವನ್ನು ಒದಗಿಸಿವೆ. ಕ್ರಿ,ಶ ೪೫೦ ರಲ್ಲಿ ಪತ್ತೆ ಹಚ್ಚಲಾದ ಹಲ್ಮಿಡಿ ಶಾಸನದಲ್ಲಿರುವ ವಿಷಯ ಮತ್ತು ನುಡಿಯು ಕನ್ನಡ ನಾಡಿನ ಹಿರಿಮೆಯನ್ನು ತಿಳಿಸುತ್ತದೆ. ಹಾಗೆಯೇ ಕ್ರಿ.ಶ ೯ನೆಯ ಶತಮಾನದಲ್ಲಿ ಶ್ರೀವಿಜಯನಿಂದ ರಚಿಸಲ್ಪಟ್ಟ ಕವಿರಾಜಮಾರ್ಗ ಎಂಬ ಆದ್ಯ ಉಪಲಬ್ಧ ಗ್ರಂಥವು ಕನ್ನಡ ನಾಡು, ನುಡಿ ಮತ್ತು ಕನ್ನಡಿಗರ ಜಾಣ್ಮೆಯನ್ನು ತಿಳಿಸಿದೆ. ಕ್ರಿ.ಶ ೭ನೇ ಶತಮಾನದ ಕಪ್ಪೆ ಅರಭಟ್ಟ ಶಾನವು ಕನ್ನಡಿಗನ ಸೌಜನ್ಯತೆ, ಹಿತೊಕ್ತಿಗಳು, ನಡೆದುಕೊಳ್ಳುವ ರೀತಿಯನ್ನು ತ್ರಿಪದಿ ಶೈಲಿಯಲ್ಲಿ ಮನಮೋಹಕವಾಗಿ ಅಭಿವ್ಯಕ್ತಪಡಿಸಿದೆ. ಅಂದಿನಿಂದ ಇಂದಿನವರೆಗೆ ಕನ್ನಡಿಗರಲ್ಲಿ ಪ್ರೀತಿ, ಮರುಕ, ಸಹನಾಶೀಲತೆ ಮಡುಗಟ್ಟಿಕೊಂಡಿದ್ದು ಶುದ್ಧವಾದ ಚಿನ್ನದಂತಹ ಚಿತ್ತವನ್ನು ಹೊಂದಿದವನಾಗಿದ್ದಾನೆ. ಆದರೆ ಚಿನ್ನದಂತಹ ಮನವೇ ಇಂದು ವ್ಯಥೆಪಡಲು ಕಾರಣವಾಯಿತೆ? ಎನ್ನುವ ಪ್ರಶ್ನೆ ಎಲ್ಲ ಕನ್ನಡಿಗರಲ್ಲಿ ಕಾಡುತ್ತಿದೆ. ಈ ನನ್ನ ಲೇಖನವು ಕರ್ನಾಟಕದ ಗಡಿ ಭಾಗದ ಜಿಲ್ಲೆಗಳಲ್ಲಿನ ಸಂಕ್ರಮಣದ ಸ್ಥಿತಿ ಮತ್ತು ನಾಡು-ನುಡಿಯ ಸಂರಕ್ಷಣೆಯ ಮೇಲೆ ಬೆಳಕು ಚೆಲ್ಲುತ್ತದೆ.
ಇಂದು ಕರ್ನಾಟಕದ ಹೃದಯಭಾಗದಿಂದ ಹಿಡಿದು ಮೂಲೆ ಮೂಲೆಗಳಲ್ಲಿ ಅನ್ಯ ರಾಜ್ಯದವರ ದಬ್ಬಾಳಿಕೆ ಮಿತಿಮೀರಿದೆ. ಪ್ರಾದೇಶಿಕ ಭಾಷೆಗಳು, ನಾಮಫಲಕಗಳು, ಇಂದು ಎಲ್ಲೆಡೆ ರಾರಾಜಿಸುತ್ತಿವೆ. ಇದಕ್ಕೆಲ್ಲ ಕಾರಣ ಕನ್ನಡಿಗನ ಹೃದಯ ವೈಶಾಲ್ಯತೆ ಮತ್ತು ಔದಾರ್ಯ. ಕನ್ನಡಿಗನನ್ನು ಯಾರದಾದರೂ ಹುರಿದುಂಬಿಸಿದರೆ ಸಾಕು ಉಬ್ಬಿ ಹೀರೇಕಾಯಿಯಾಗುವನು. ಒಂದು ಸಂದರ್ಭದಲ್ಲಿ ದೇವಭಾಷೆ ಎನಿಸಿಕೊಂಡಿದ್ದ ಸಂಸ್ಕೃತವು ಇಂದು ಕಣ್ಮರೆಯಾದಂತೆ ಕನ್ನಡಕ್ಕೂ ಮುಂದಿನ ದಿನಮಾನಗಳಲ್ಲಿ ಇದೇ ಗತಿ ಬಂದೊದಗುವುದೇ ಎಂಬ ಭೀತಿ ಪ್ರತಿಯೊಬ್ಬ ಕನ್ನಡಿಗನನ್ನು ಕಾಡುತ್ತಿದೆ. ಈಗಾಗಲೇ ಅಚ್ಚಗನ್ನಡದ ಅನೇಕ ಸ್ಥಳಗಳು ಕನ್ನಡಿಗರಿಂದ ಕೈತಪ್ಪಿ ಅನ್ಯ ರಾಜ್ಯದವರ ಪಾಲಾಗಿವೆ. ಇನ್ನೂ ಹೆಸರಿಗೆ ಮಾತ್ರ ಕರ್ನಾಟಕದ ರಾಜಧಾನಿ ಎಂದು ಕರೆಸಿಕೊಳ್ಳುತ್ತಿರುವ ಬೆಂಗಳೂರಿನಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗಿದ್ದಾರೆ. ಪರ ರಾಜ್ಯದವರ ದಬ್ಬಾಳಿಕೆ ಎಲ್ಲೆ ಮೀರುತ್ತಿದೆ. ಇತರೆ ರಾಜ್ಯದವರ ಭಾಷಾ ಸಂಘಟನೆಗಳೇ ವಿಜೃಂಭಿಸುತ್ತಿವೆ. ಹೀಗೆ ಮುಂದುವರೆದರೆ ಕನ್ನಡಿಗನಿಗೆ ಮೂಲಭೂತ ಸೌಲಭ್ಯಗಳು ದೊರಕದೇ ಇರಬಹುದು. ಮುಂದಿನ ದಿನಮಾನಗಳಲ್ಲಿ ʼಸಿಲಿಕಾನ್ ಸಿಟಿʼಯು ಕೇಂದ್ರಾಡಳಿತ ಪ್ರದೇಶವಾದರೂ ಆಶ್ಚರ್ಯ ಪಡಬೇಕಾಗಿಲ್ಲ.
ಎಂ.ಚಿದಾನಂದಮೂರ್ತಿ ಅವರು ಹೇಳುವಂತೆ ಮಿತಿಮೀರಿದ ವಲಸೆಯಿಂದ ಕರ್ನಾಟಕ ತತ್ತರಿಸುತ್ತಿದೆ ಸಿಂಧಿ, ಗುಜರಾತಿ, ಮರಾಠಿಗರು, ತೆಲುಗರು, ತಮಿಳರು, ಮಲಯಾಳಿಗಳು ಇವರು ಗಡಿಗಳಲ್ಲಿ ಮಾತ್ರವಲ್ಲ, ಫಲವತ್ತಾದ ಗದ್ದೆ ತೋಟಗಳಿರುವೆಡೆ ಮತ್ತು ನಗರಗಳಿಗೆ ಬಂದು ನೆಲಸಿ ಸಾಮಾಜಿಕ ರಾಜಕೀಯ ಔದ್ಯೋಗಿಕ ಏರುಪೇರುಗಳನ್ನು ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗರ ಸಂಖ್ಯೆ ತೀವ್ರವಾಗಿ ಇಳಿಯುತ್ತಿದೆ. ಗುಂಡ್ಲುಪೇಟೆ, ಹೆಗ್ಗಡದೇವನಕೋಟೆ, ಚಾಮರಾಜನಗರ ತಾಲ್ಲೂಕುಗಳಲ್ಲಿ, ದಕ್ಷಿಣ ಕನ್ನಡದಲ್ಲಿ ಮಲಯಾಳಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಹೊಲ ಗದ್ದೆ, ಸಣ್ಣ ದೊಡ್ಡ ವ್ಯಾಪಾರವೆಲ್ಲ ಅವರ ಕೈ ಸೇರಿದೆ. ಕೊಡಗಿನ ಮೂಲ ನಿವಾಸಿ ಕೊಡವರು ಹಲವರು ತಮ್ಮ ಕಾಫಿ ತೋಟಗಳನ್ನು ಮಲಯಾಳಿಗಳಿಗೆ ಮಾರಿದ್ದಾರೆ. ಚಿಕ್ಕಮಗಳೂರಿನ ಕಾಫಿ ತೋಟಗಳು ತಮಿಳು ಚೆಟ್ಟಿಯಾರುಗಳಿಗೆ ಸೇರಿವೆ. ಭದ್ರಾವತಿ, ತರೀಕೆರೆ ಇಲ್ಲಿ ತಮಿಳರದೇ ಯಾಜಮಾನ್ಯ. ಶಿವಮೊಗ್ಗ, ಬಳ್ಳಾರಿ, ರಾಯಚೂರು ಜಿಲ್ಲೆಗಳ ಗದ್ದೆಗಳಿಗೆಲ್ಲ ಆಂಧ್ರದವರು ಒಡೆಯರು. ಉತ್ತರ ಕನ್ನಡ ಜಿಲ್ಲೆ, ಬೆಳಗಾವಿ, ಬಿಜಾಪುರ, ಬೀದರ್ ಜಿಲ್ಲೆಗಳಲ್ಲಿ ಮರಾಠಿಗರದೇ ಮೇಲುಗೈ, ಬೆಂಗಳೂರು, ಕೆ.ಜಿ.ಎಫ್.ಗಳು ಕನ್ನಡಿಗರ ಕೈಯಲ್ಲಿಲ್ಲ. ಒಬ್ಬ ಉನ್ನತ ಪೋಲಿಸ್ ಅಧಿಕಾರಿಗಳ ಪ್ರಕಾರ, ಬೆಂಗಳೂರಿಗೆ ನೆಲಸಲು ಬರುವ ತಮಿಳು ಕುಟುಂಬಗಳ ಸಂಖ್ಯೆ ದಿನಕ್ಕೆ ಮುನ್ನೂರು, ಬೆಂಗಳೂರಿನ ಎಷ್ಟೋ ಬಡಾವಣೆಗಳಲ್ಲಿ ತಮಿಳು, ಮಲಯಾಳಿ ಭಾಷೆಗಳು ವ್ಯವಹಾರ ಭಾಷೆಗಳು. ಕೆ.ಜಿ.ಎಫ್.ನಲ್ಲಿ ಎಲ್ಲ ರಸ್ತೆ, ಬಡಾವಣೆಗಳಿಗೆ ತಮಿಳು ಹೆಸರುಗಳಲ್ಲದೆ, ವೃತ್ತಗಳಲ್ಲೆಲ್ಲ ತಮಿಳುನಾಡಿನ ಪ್ರಮುಖರ ಪ್ರತಿಮೆಗಳು ಕಾಣಿಸಿಕೊಳ್ಳುತ್ತಿವೆ.
ಈ ಮೇಲಿನ ಮಾತು ಅಕ್ಷರಶಃ ಸತ್ಯವಾಗಿದೆ. ಕನ್ನಡಿಗರ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಕನ್ನಡಿಗನು ಭಾಷೆಯಿಂದ ಹಿಡಿದು ತನ್ನೆಲ್ಲ ಆಸ್ತಿಯವರೆಗೆ ಪೂರ್ಣವಾಗಿ ಕಳೆದುಕೊಳ್ಳುವತ್ತ ಸಾಗುತ್ತಿದ್ದಾನೆ. ಉದಾರ ಮನಸ್ಸಿರುವ ಕನ್ನಡಿಗನು ಮುಂದೆ ಉದ್ಭವಿಸಬಹುದಾದ ಸಮಸ್ಯೆಗಳ ಕುರಿತು ವೈಚಾರಿಕ ನೆಲೆಗಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಕರ್ನಾಟಕದ ಗಡಿಭಾಗದಲ್ಲಿರುವ ಅನೇಕ ರಾಜ್ಯಗಳು ಕರ್ನಾಟಕದ ಗಡಿ ಜಿಲ್ಲೆಗಳನ್ನು ಪಡೆಯಲು ಬಕಪಕ್ಷಿಯಂತೆ ಹೊಂಚು ಹಾಕುತ್ತಿವೆ. ಕರ್ನಾಟಕದ ಅವಿಭಾಜ್ಯ ಅಂಗವಾದ ಬೆಳಗಾವಿಯನ್ನು ಪಡೆಯಲೇಬೇಕೆಂಬ ಹಠಮಾರಿತನದಿಂದ ಮಹಾರಾಷ್ಟ್ರ ಸರಕಾರವೂ ವಿವಾದ ಕಿಡಿಯನ್ನು ಹೊತ್ತಿಸಿ ಶಾಂತಿಯನ್ನು ಕದಡುತ್ತಿದೆ. ಅದೇ ರೀತಿಯಾಗಿ ತೆಲಾಂಗಣ ರಾಜ್ಯದ ಮುಖ್ಯಮಂತ್ರಿಗಳಾದ ಕೆ.ಸಿ.ರಾವ್ ಅವರ ಹೇಳಿಕೆಯಂತೂ ಇಡೀ ಕರ್ನಾಟವನ್ನೇ ಬೆಚ್ಚಿ ಬೀಳಿಸಿದೆ. “ಟಿ.ಆರ್.ಎಸ್. ಸರಕಾರದ ಕಲ್ಯಾಣ ಯೋಜನೆಗಳಿಂದ ಆಕರ್ಷಿತರಾಗಿರುವ ರಾಯಚೂರು ಜಿಲ್ಲೆಯ ಜನರು ತಮ್ಮ ಪ್ರದೇಶವನ್ನು ತೆಲಾಂಗಣಕ್ಕೆ ವಿಲೀನಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ” ಎಂದು ಹೇಳಿದ್ದಾರೆ. ಕನ್ನಡಿಗನು ಇನ್ನೂ ಮೌನವಾಗಿದ್ದರೆ, ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸಿದ ಆಲೂರು ವೆಂಕಟರಾವ್, ಶ್ರೀ ಮಂಜಪ್ಪ ಹರ್ಡೇಕರ್, ಹಾನಗಲ್ಲಿನ ಶೀ ಕುಮಾರಸ್ವಾಮಿ ಮತ್ತು ಬಿ.ಎಂ.ಶ್ರೀಕಂಠಯ್ಯ ಅವರ ಶ್ರಮಕ್ಕೆ ತಿಲಾಂಜಲಿ ಇಟ್ಟಂತಾಗುತ್ತದೆ. ಸಾಧ್ಯವಾದ ಮಟ್ಟಿಗೆ ಇದರ ವಿರುದ್ಧ ದನಿ ಎತ್ತಬೇಕು.
ಪ್ರತಿಯೊಬ್ಬ ಕನ್ನಡಿಗನ ಮನವನ್ನು ಈ ಮೇಲಿನ ಸಮಸ್ಯೆಗಳು ತಟ್ಟುವಂತಿರಬೇಕು. ಸಮಸ್ಯೆಗಳಿದ್ದಲ್ಲಿ ಪರಿಹಾರಗಳು ಇದ್ದೇ ಇರುತ್ತವೆ. ಸಾಮಾನ್ಯ ಜನರು ಮಾತ್ರ ಎಚ್ಚೆತ್ತುಕೊಂಡರೆ ಸಾಲದು, ಕನ್ನಡ ಸಾಹಿತ್ಯ ಪರಿಷತ್ತಿನವರು ಹೆಚ್ಚಿನ ಗಮನವನ್ನು ಹರಿಸಬೇಕು. ರಾಜ್ಯ ಸರಕಾರದವರು ತಮ್ಮ ಸ್ವಾರ್ಥಹಿತಾಸಕ್ತಿಯನ್ನು ಕಡೆಗಣಿಸಿ ಕನ್ನಡ ನಾಡು-ನುಡಿ, ನೆಲ-ಜಲ, ಉಳಿವಿಗಾಗಿ ಶ್ರಮಿಸಬೇಕು ಮತ್ತು ಕೇಂದ್ರ ಸರಕಾರದ ಮಲತಾಯಿ ಧೋರಣೆಯನ್ನು ಖಂಡಿಸಿ ನ್ಯಾಯಕ್ಕಾಗಿ ಹೋರಾಡಬೇಕು. ಬುದ್ಧಿ ಜೀವಿಗಳೆಂದು ಗುರಿತಿಸಿಕೊಂಡ ಸಾಹಿತಿಗಳು ತಮ್ಮ ಹರಿತವಾದ ಲೇಖನಗಳಿಂದ ಪ್ರತಿಯೊಬ್ಬ ಕನ್ನಡಿಗನನ್ನು ಪ್ರಜ್ಞಾವಂತನನ್ನಾಗಿ ಮಾಡಬೇಕು. ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಕನ್ನಡಾಭಿಮಾನ ಬೆಳೆಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಗಡಿನಾಡ ಪ್ರದೇಶಗಳಲ್ಲಿ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳನ್ನು ಪ್ರಾರಂಭಿಸಬೇಕು. ಡಾ. ಸರೋಜಿನಿ ಮಹಿಷಿ ವರದಿಯಲ್ಲಿನ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕು. ಪ್ರಸ್ತುತ ನಮ್ಮ ಶಿಕ್ಷಣದ ಹಾದಿಯು ಅವ್ಯವಸ್ಥೆಯ ಕುರಿತು ಕನ್ನಡಿಗರಲ್ಲಿ ಪ್ರಶ್ನಿಸಿ, ಹೋರಾಟದ ಮನೋಭಾವ ಮೂಡಿಸುವಂತಹ ರೀತಿಯಲ್ಲಿ ಸಾಗಬೇಕು.
ಪ್ರತಿವರ್ಷ ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವೆಂದು ಅದ್ಧೂರಿಯಾಗಿ ಆಚರಿಸಲಾಗುವುದು. ಅದು ಕೇವಲ ಒಂದೇ ದಿನ ಮಾತ್ರ. ಆಗಿನ ವೇಳೆಯಲ್ಲಿ ಕವಿಗಳು ರಚಿಸಿದ ಸುಂದರವಾದ ಹಾಡುಗಳನ್ನು ಹಾಡುತ್ತಾ.. ಕೆಲವರು ತಮ್ಮನ್ನು ತಾವೇ ಮೈಮರೆತು ಬಿಡುತ್ತಾರೆ. ಆದರೆ ಆ ಹಾಡುಗಳ ತಾತ್ಪರ್ಯವನ್ನು ಅರ್ಥೈಸಿಕೊಳ್ಳುವುದಿಲ್ಲ. ಇನ್ನು ತಮ್ಮೆಲ್ಲ ಆಸ್ತಿಪಾಸ್ತಿಗಳನ್ನು ತೊರೆದು, ಈ ನಾಡಿಗೆ ಬಂದು, ಕುಳಿತು ಉಂಡರೂ ಸವೆಯಲಾಗದಂತಹ ಆಸ್ತಿಯನ್ನು ಸಂಪಾದಿಸಿಕೊಂಡು ರಾಜಾರೋಷವಾಗಿ ಬದುಕುತ್ತಿರುವ ಹೊರ ರಾಜ್ಯದ ಜನರು ಕನ್ನಡಿಗರಿಗೆ ಸಿಗಬೇಗಾದ ಸೌಲಭ್ಯಗಳೆಲ್ಲವನ್ನು ಬಾಚಿಕೊಂಡು ತಮಗೇನು ಸಂಬಂಧವೇ ಇಲ್ಲವೆನ್ನುವಂತೆ ಬದುಕುತ್ತಿದ್ದಾರೆ. ವಿಪರ್ಯಾಸವೆಂದರೆ, ಕನ್ನಡಿಗರು ಮಾತ್ರ ಪ್ರತಿನಿತ್ಯ ಕಂಬನಿಯಲ್ಲಿ ಕೈತೊಳೆದುಕೊಳ್ಳುತ್ತಿದ್ದಾರೆ. ಕನ್ನಡಿಗರ ಸಾಧಕ ಬಾಧಕಗಳನ್ನು ಅರಿಯುವವರ ಸಂಖ್ಯೆ ತುಂಬ ವಿರಳ. ಹಾಗಾಗಿ ಕನ್ನಡಿಗರಿಗೆ ಕಿವಿಮಾತು, ತಮಗಾಗಿ ಕರ್ನಾಟಕ ನಾಡು ಮತ್ತು ಭಾಷೆಯನ್ನು ಸಂರಕ್ಷಣೆ ಮಾಡದಿದ್ದರೆ ಪರವಾಗಿಲ್ಲ, ಆದರೆ ಮುಂದಿನ ನಮ್ಮ ಕರುನಾಡಿನ ಕರುಳು ಕುಡಿಗಳಿಗಾದರೂ ಸಂರಕ್ಷಣೆ ಮಾಡಿಕೊಳ್ಳಲೇಬೇಕು. ಆಗ ಮಾತ್ರ ಕನ್ನಡ ರಾಜ್ಯೋತ್ಸವಕ್ಕೆ ವಿಶಾಲವಾದ ಅರ್ಥ ತಾನಾಗಿಯೇ ಒದಗಿಬರುವುದು. ಮನೆಮನಗಳಲ್ಲಿ ಕನ್ನಡದ ದೀಪ ಬೆಳಗುವುದು.
- ದೇವ
(ಪೂರ್ಣ ಹೆಸರು ದ್ಯಾವಣ್ಣ. ಕವಿ ಮತ್ತು ಲೇಖಕರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಸುಂಕೇಶ್ವರ ಗ್ರಾಮದವರು. ಪ್ರಸ್ತುತ ಮಾನ್ವಿಯಲ್ಲಿರುವ ಲೊಯೋ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸುತ್ತಿದ್ದಾರೆ).