
ಅದು ಮಕ್ಕಳ ಅನಾಥಾಲಯ. ಎತ್ತರದ ಛತ್ತಿನಲ್ಲಿ ಕಟ್ಟಿಗೆಯ ರೀಪರುಗಳ ಮೇಲೆ ಮಂಗಳೂರು ಹೆಂಚುಗಳನ್ನು ಕೂರಿಸಿದ ದೊಡ್ಡ ಮನೆ ಅದು. ಮೊದಲ ಮಹಡಿ, ಕನ್ಯಾಮಠ ಮತ್ತು ಮಕ್ಕಳ ಮನೆಯಾದರೆ, ಕೆಳಗೆ ಶಾಲೆಯನ್ನು ನಡೆಸಲಾಗುತ್ತಿತ್ತು. ಹಗಲೆಲ್ಲಾ ಮಕ್ಕಳ ಚಿಲಿಪಿಲಿ ಓಡಾಟದ ಉಲುವಿದ್ದರೆ, ಸಂಜೆಯಾದಂತೆ ಅನಾಥಾಲಯದ ಮಕ್ಕಳಷ್ಟೇ ಉಳಿದು, ಚಿಲಿಪಿಲಿಯ ಸದ್ದು ಅಷ್ಟಾಗಿ ಇರುತ್ತಿರಲಿಲ್ಲ. ಕತ್ತಲು ಆಗುತ್ತಿದ್ದಂತೆಯೇ ಊಟ ಮಾಡಿದ, ರಾತ್ರಿ ಪ್ರಾರ್ಥನೆಯ ಮಾಡುವ ಮಕ್ಕಳು ಹಾಸಿಗೆ ಮುಟ್ಟಿದರೆ ಮುಗಿಯಿತು, ಅಮ್ಮನೋರು ತಮ್ಮ ಪ್ರಾರ್ಥನೆಗಳನ್ನು ಮುಗಿಸುತ್ತಿದ್ದಂತೆಯೇ ಇದ್ದ ಬಿದ್ದ ಶಬ್ದವೆಲ್ಲವೂ ಪ್ರಶಾಂತ ವಾತಾವರಣದಲ್ಲಿ ಲೀನವಾಗುತ್ತಿತ್ತು.
ಮಕ್ಕಳೆಲ್ಲಾ ಅಗಲವಾದ ಜಮಖಾನೆಯ ಮೇಲೆ ಮಲಗಿದ್ದರು. ದೊಡ್ಡ ಪಡಸಾಲೆಯಲ್ಲಿ ಮಕ್ಕಳು ಮಲಗಿದ್ದರೆ, ಪಕ್ಕದಲ್ಲಿನ ಇನ್ನೊಂದು ಖೋಲಿಯಲ್ಲಿ ಅಮ್ಮನೋರು ಇದ್ದರು. ಅದರ ಪಕ್ಕಕ್ಕೆ ಅಡುಗೆ ಖೋಲಿ ಮತ್ತು ಆಯಾಗಳ ಖೋಲಿಗಳಿದ್ದವು. ಶಾಲೆಯ ಖೋಲಿಗಳ ಹಿಂದೆ ದನದ ಕೊಟ್ಟಿಗೆ ಇತ್ತು. ಅಲ್ಲಿ ನಾಲ್ಕೈದು ಎಮ್ಮೆಗಳು, ಎರಡು ಕುದುರೆ, ಒಂದು ಹಸು ಮತ್ತು ಬಂಡಿಗೆ ಹೂಡಬಹುದಾದ ಎರಡು ಎತ್ತುಗಳಿದ್ದವು. ಅದನ್ನು ನೋಡಿಕೊಳ್ಳುವ ಆಳು ಬಸವಣ್ಣ, ಅಲ್ಲೇ ಕೆಳಗೆಯೇ ಮಲಗಿರುತ್ತಿದ್ದ.
ಸರಿ ರಾತ್ರಿ ಕಳೆದಿತ್ತು. ಒಂದು ಹೊಡೆದಿತ್ತು. ದೂರ ನಾಯಿಗಳು ಊಳಿಡುತ್ತಿದ್ದವು. ಅನಾಥಾಲಯದ ಹಿರಿಯ ಬಾಲಕಿ ಸುಶೀಲಾಳನ್ನು ಯಾರೋ ತಟ್ಟಿ ಎಬ್ಬಿಸಿದಂತಾಯಿತು. ಎದ್ದು ಕುಳಿತ ಅವಳ ಮುಂದೆ, ಹಂಗರಗಿಯ ಹಚ್ಚಿಬೊಟ್ಟಿನ ಅನ್ನಮ್ಮ ಅಮ್ಮನೋರು ನಿಂತಿದ್ದರು. ಅವರು ತಮ್ಮ ಬಲಗೈ ಮೇಲೆ ಶಿಲುಬೆಯ ಗುರುತಿನ ಚಿತ್ರ ಬರೆದು ಹಸಿರು ಬಣ್ಣ ತುಂಬಿ ಮುಳ್ಳಿನಿಂದ ಚುಚ್ಚಿಸಿಕೊಂಡು ಅದು ಕಾಯಂ ಆಗಿ ಮೈಮೇಲೆ ಉಳಿಯುವಂತೆ ಮಾಡಿಕೊಂಡಿದ್ದರು.
ಇಂದು ಅವರು ಬಿಳಿ ಬಣ್ಣದ ಶುಭ್ರ ಬಟ್ಟೆಯನ್ನು ತೊಟ್ಟಿದ್ದರು. ಅವರ ಬಟ್ಟೆಯ ಬಿಳುಪು ಪಡಸಾಲೆಯನ್ನು ಬೆಳಗುತ್ತಿತ್ತು. ತಲೆಗೆ ಕಟ್ಟಿದ ತಲೆಕಟ್ಟು ರಟ್ಟಿನಂತೆ ಗಟ್ಟಿಯಾಗಿ ಕುಳಿತಿತ್ತು. ಮುಖದ ಮೇಲೆ ತೇಜಸ್ಸು ಎದ್ದು ಕಾಣುತ್ತಿತ್ತು. ಮತ್ತೆ ಸುಶೀಲಾ ಕಣ್ಣಲ್ಲಿ ನೀರು ಬಂದಿತು. ಹಂಚಿಬೊಟ್ಟಿನ ಅಮ್ಮನೋರು ಅನ್ನಮ್ಮ ಅವರು ಎಲ್ಲರಿಗೂ ಪ್ರೀತಿಪಾತ್ರರಾಗಿದ್ದರು. ಅವರನ್ನು ಮರೆಯಲು ಮಕ್ಕಳಿಗೆ ಸಾಧ್ಯವಾಗುತ್ತಲೇ ಇರಲಿಲ್ಲ. ಕನ್ಯಾಮಠದ ಅಮ್ನೋರ ಪರಿಸ್ಥಿತಿಯೂ ಇದಕ್ಕಿಂತ ಹೊರತಾಗಿರಲಿಲ್ಲ.
“ಮಗಳೇ ಸುಶೀಲಾ, ಸುಶೀಲಾ. ನೋಡಮ್ಮಾ ನಾನೀಗ ನನ್ನ ಪುಣ್ಯದ ಕರ್ಮಗಳ ಜೊತೆಗೆ ನಿಮ್ಮ ಪ್ರಾರ್ಥನೆಯ ಬಲದಿಂದ, ಮಾತೆ ಮರಿಯಮ್ಮನವರ ಒತ್ತಾಸೆಯಿಂದ ಶುದ್ಧೀಕರಣದ ಸ್ಥಳದಿಂದ ಸ್ವರ್ಗದ ಕಡೆಗೆ ಹೊರಟಿದ್ದೇನಮ್ಮ.
ಇಷ್ಟು ಹೇಳಿದ ಹಂಚಿಬೊಟ್ಟಿನ ಅಮ್ಮನೋರು ಅನ್ನಮ್ಮ ಅವರು ಮಾಯವಾಗಿದ್ದರು.
ಸುಶೀಲಾ ಮತ್ತೆ ನಿದ್ರೆಗೆ ಜಾರಿದ್ದಳು.
***
ಕಥೋಲಿಕ ಧರ್ಮಸಭೆಯು, ಮರಣ, ಸ್ವರ್ಗ, ನರಕ, ಶುದ್ಧೀಕರಣದ ಸ್ಥಳ ಮತ್ತು ಅಂತಿಮ ತೀರ್ಪಿನ ಬಗ್ಗೆ, ಕಾಲಕಾಲಕ್ಕೆ ದೈವ ಪ್ರಜೆಗಳಾದ ಕ್ರೈಸ್ತರಿಗೆ ಸಾಕಷ್ಟು ತಿಳುವಳಿಕೆ ನೀಡುತ್ತ ಬಂದಿದೆ.
ಧರ್ಮ ಸಭೆಯ ಬೋಧನೆಯ ಸಾರ ಇಂತಿದೆ:
ಕ್ರಿಸ್ತರಲ್ಲಿ ಸಾಯುವುದು ಎಂದರೆ, ಯಾವ ಮಹಾಪಾಪವಿಲ್ಲದೇ ದೇವರ ವರಪ್ರಸಾದದಲ್ಲಿ ಸಾಯುವುದು ಎಂದರ್ಥ. ಅನಂತ ಜೀವ ಮರಣದ ನಂತರ ಮರಣದ ತಕ್ಷಣ ಪ್ರಾರಂಭವಾಗುವ ಜೀವ. ಅದಕ್ಕೆ ಅಂತ್ಯವಿರುವುದಿಲ್ಲ. ನಂತರ ಶರೀರ ಮತ್ತು ಆತ್ಮವು ಬೇರ್ಪಡುವುದು. ಇದಾದ ಮೇಲೆ ಶರೀರವು ಕೊಳೆತು ಹೋಗುವುದು. ಅಮರವಾದ ಆತ್ಮವು ದೇವರ ತೀರ್ಪನ್ನು ಎದುರಿಸಲು ಹೋಗುವುದು. ಶರೀರವು ಪ್ರಭುವಿನ ಪುನರಾಗಮನದಂದು ಪರಿವರ್ತಿತವಾಗಿ ಎದ್ದು ಆತ್ಮದೊಂದಿಗೆ ಪುನಃ ಐಕ್ಯವಾಗುವುದನ್ನು ಎದುರು ನೋಡುತ್ತದೆ.
ಸ್ವರ್ಗ ಎಂದರೆ ಸರ್ವೋಚ್ಚ ಮತ್ತು ನಿರ್ದಿಷ್ಟ ಸಂತೋಷದ ಅಂತಸ್ತು. ದೇವರ ವರಪ್ರಸಾದದಲ್ಲಿ ಸತ್ತು ಇನ್ನೂ ಅಧಿಕ ಶುದ್ಧೂಕರಣದ ಅಗತ್ಯವಿಲ್ಲದವರು ಯೆಸುಸ್ವಾಮಿ ಮತ್ತು ಮರಿಯಮ್ಮ, ದೇವದೂತರು ಮತ್ತು ಸಂತರ ಸುತ್ತ ಸೇರುವರು. ಹೀಗೆ ಅವರು ಸ್ವರ್ಗೀಯ ಧರ್ಮಸಭೆಯನ್ನು ರಚಿಸುವರು. ಅಲ್ಲಿ ಅವರು ದೇವರನ್ನು ಮುಖಾಮುಖಿಯಾಗಿ ನೋಡುವರು.
ತಮ್ಮ ಸ್ವಂತ ಸ್ವತಂತ್ರ ಆಯ್ಕೆಯಿಂದ ಮಹಾಪಾಪದಲ್ಲಿ ಸತ್ತವರ ಅನಂತ ದಂಡನೆಯಲ್ಲಿ ನರಕ ಅಡಕವಾಗಿದೆ. ಅನಂತ ಕಾಲಕ್ಕೆ ದೇವರಿಂದ ಬೇರ್ಪಡುವುದೇ ನರಕದ ಪ್ರಮುಖ ಯಾತನೆಯಾಗಿದೆ.
ದೇವರ ಸ್ನೇಹದಲ್ಲಿ ಸತ್ತು, ಅನಂತ ರಕ್ಷಣೆಯ ವಾಗ್ದಾ ಪಡೆದಿದ್ದರೂ ಸ್ವರ್ಗ ಆನಂದವನ್ನು ಪ್ರವೇಶಿಸಲು ಇನ್ನೂ ಶುದ್ಧತೆಯ ಅಗತ್ಯವಿರುವವರ ಅಂತಸ್ತೇ ಶುದ್ದೀಕರಣದ ಸ್ಥಳ.
ಸಂತರ ಅನ್ಯೋನ್ಯತೆಯಲ್ಲಿರುವ ವಿಶ್ವಾಸಿಗಳು, ಈ ಲೋಕದಲ್ಲಿ ಇನ್ನೂ ಯಾತ್ರಾರ್ಥಿಗಳಾಗಿದ್ದು ಶುದ್ಧೀಕರಣದ ಸ್ಥಳದಲ್ಲಿರುವ ಆತ್ಮಗಳಿಗೆ ಪ್ರಾರ್ಥನೆಗಳನ್ನು, ವಿಶೇಷವಾಗಿ ದಿವ್ಯ ಬಲಿಪೂಜೆಯನ್ನು ಅವರ ಪರವಾಗಿ ಅರ್ಪಿಸಬಹುದು. ದಾನಧರ್ಮ, ಆತ್ಮಿಕಫಲ ಮತ್ತು ತಪಸ್ಸಿನ ಕ್ರಿಯೆಗಳಿಂದ ನೆರವು ನೀಡಬಹುದು.
ಮರಣವನ್ನು ಜಯಸಿ ಪುನರ್ ಜೀವಂತವಾಗಿ ಎದ್ದು, ಶಿಷ್ಯರೊಂದಿಗೆ ಸಮಯ ಕಳೆದು, ಸಶರೀರವಾಗಿ ಸ್ವರ್ಗಕ್ಕೆ ಏರಿಹೋದ ಪ್ರಭು ಯೇಸುಸ್ವಾಮಿ, ಸರ್ವೇಶ್ವರರ ಬಲಗಡೆ ಕುಳಿತುಕೊಂಡಿದ್ದಾರೆ. ವಿಶ್ವದ ಅಂತ್ಯದಲ್ಲಿ ಜೀವಂತರಿಗೂ ಮತ್ತು ಮೃತರಿಗೂ ತೀರ್ಪುಕೊಡಲು ಮರಳಿ ಬರುವರು. ಅಂದು ಮೃತರಾದವರೆಲ್ಲಾ ಎದ್ದು ತೀರ್ಪಿಗೆ ಕಾಯುತ್ತಾರೆ. ಪ್ರತಿಯೊಬ್ಬರಿಗೂ ಅವರವರ ಕರ್ಮದ ಅನುಸಾರ ಅವರವರದೇ ಅಳತೆಯಲ್ಲಿ ತಕ್ಕ ಪ್ರತಿಫಲ ಕೊಡುವರು.
***
ಅನಾಥಾಲಯದಲ್ಲಿರುವ ಮಕ್ಕಳಲ್ಲಿ ಹಿರಿಕಳಾಗಿದ್ದ ಬಾಲಕಿ ಸುಶೀಲಮ್ಮ ಹಾಸಿಗೆಯಿಂದ ಇನ್ನೂ ಎದ್ದೇ ಇರಲಿಲ್ಲ. ಉಳಿದ ಮಕ್ಕಳೆಲ್ಲಾ ಬೆಳಗಿನ ಕ್ರಿಯಾ ವಿಧಿಗಳನ್ನು ಮುಗಿಸಿ, ಬೆಳಗ್ಗೆಯ ತಿಂಡಿ ಮುಗಿಸಿ ಪಾಠ ಕೇಳಲು ಶಾಲೆಗೆ ತರೆಳಿದ್ದರು. ಅನಾಥಾಲಯದ ಸಿಬ್ಬಂದಿ ಆಗಿದ್ದ ಅಮ್ಮನೋರೇ, ಶಾಲೆಯನ್ನೂ ನಡೆಸುತ್ತಿದ್ದರು. ಎಲ್ಲಾ ಅಮ್ಮನೋರು ಅಂದು ಶಾಲೆಗೆ ಹೋಗಿದ್ದರೆ, ಕಿರಿಯ ಅಮ್ಮನೋರಾದ ಶಾಂತಮ್ಮ ಅವರು, ಸುಶೀಲಾಳ ಹಾಸಿಗೆಯ ಪಕ್ಕದಲ್ಲಿ ಕುಳಿತು ಅವಳು ಏಳುವುದನ್ನು ಕಾಯುತ್ತಾ ಕುಳಿತಿದ್ದರು.
ಕಳೆದ ಏಳು ತಿಂಗಳ ಹಿಂದೆ ಪ್ರಭು ಯೇಸುಪಾದ ಸೇರಿದ, ಕನ್ಯಾಮಠದ ಹಿರಿಯ ಸದಸ್ಯೆ ಹಂಚಿಬೊಟ್ಟಿನ ಅಮ್ಮನೋರು `ಅನ್ನಮ್ಮ ಅವರು, ತಿಂಗಳ ತಿಥಿ ಪೂಜೆ ಮುಗಿದ ನಂತರದಲ್ಲಿ ಸುಶೀಲಳಿಗೆ ದರ್ಶನ ಕೊಟ್ಟಿದ್ದರು. ಆ ದರ್ಶನದ ದಿನದಿಂದ, ಸುಶೀಲಳನ್ನು ಹತ್ತಿರಿಂದ ಗಮನಿಸಬೇಕೆಂದು ಮಠದ ದೊಡ್ಡ ಅಮ್ಮನೋರಾದ ರಜಿನಾ ಅಮ್ನೋರು, ತಮ್ಮ ಮಠದ ಕಿರಿಯ ಸದಸ್ಯೆ ಶಾಂತಮ್ಮಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದರು.
ಹಿಂದಿನ ದಿನದ ರಾತ್ರಿ ಒಂದು ಗಂಟೆಯ ಸುಮಾರು ಆಕಸ್ಮಿಕವಾಗಿ ಎದ್ದಿದ್ದ ಶಾಂತಮ್ಮ ಅಮ್ನೋನಿರಿಗೆ, ಮಕ್ಕಳು ಮಲಗಿದ್ದ ಪಡಸಾಲೆಯಲ್ಲಿ ಅದೆಂಥದೋ ಬೆಳ್ಳನ ಬೆಳಕ ಕಂಡಿತ್ತು. ಎದ್ದು ಹೋಗೋಣ ಎಂದರೆ ಕಾಲುಗಳು ಅವರ ಮಾತು ಕೇಳುತ್ತಿಲ್ಲ. ಸ್ವಲ್ಪ ಸಮಯದ ನಂತರ ಪಡಸಾಲೆಯ ಕಡೆ ನೋಡಿದರೆ ಬೆಳಕು ಇರಲಿಲ್ಲ. ಆಗ ಅವರು ಹಾಸಿಗೆಯಿಂದ ಎದ್ದು ನಿಲ್ಲಲು ಸಾಧ್ಯವಾಗಿತ್ತು. ಎದ್ದು ನಿಧಾನವಾಗಿ ಬಾಲಕಿ ಸುಶೀಲ ಮಲಗಿದ್ದ ಜಾಗಕ್ಕೆ ಹೋದಾಗ, ಅವಳು ಸ್ವಸ್ಥವಾಗಿ ಮಲಗಿದ್ದು ಗೋಚರವಾಗಿತ್ತು. ಪಡಸಾಲೆಯ ಅಗಲವಾದ ಕಿಡಕಿಗಳನ್ನು ತೆರೆದೇ ಇಡಲಾಗಿತ್ತು. `ಹೊರಗಿನ ಹುಣ್ಣಿಮೆ ಚಂದ್ರನ ಬೆಳಕಿನಿಂದ ತನ್ನ ಸ್ಥಿತಿ ಅಯೋಮಯವಾಗಿತ್ತೆ? ಎಂಬ ಚಿಂತೆ ಶಾಂತಮ್ಮ ಅಮ್ನೋರಿಗೆ ಕಾಡತೊಡಗಿತ್ತು. ಆ ಸಮಯದಲ್ಲಿ ಅವರಿಗೆ ಎದ್ದು ಕುಳಿತುಕೊಳ್ಳಲೂ ಆಗಿರಲಿಲ್ಲ. ಮತ್ತೆ ಬೆಳಿಗ್ಗೆ ಬಂದು ನೋಡಿದರೆ, ಉಳಿದ ಮಕ್ಕಳು ಎದ್ದಿದ್ದರೆ, ಬಾಲಕಿ ಸುಶೀಲ ಇನ್ನೂ ಹಾಸಿಗೆಯಲ್ಲಿ ಮಲಗಿಯೇ ಇದ್ದಾಳೆ. ಶಾಂತಮ್ಮ ಅಮ್ನೋರ ಅನುಮಾನ ಗಟ್ಟಿಯಾಯಿತು.
ಆರು ತಿಂಗಳುಗಳ ಹಿಂದೆ ಬಾಲಕಿ ಸುಶೀಲಳಿಗೆ ದರ್ಶನ ನೀಡಿದ್ದ ಹಂಚಿಬೊಟ್ಟಿನ ಅಮ್ಮನೋರು ಅನ್ನಮ್ಮ ಅವರು, “ಮಗಳೇ, ನಾನು ಇನ್ನೂ ಶುದ್ಧೀಕರಣದ ಸ್ಥಳದಲ್ಲೇ ಇರುವೆ. ನೀವು ಮಕ್ಕಳೆಲ್ಲಾ, ಮತ್ತು ಮಠದ ಅಮ್ನೋರುಗಳು ಸೇರಿ ಆರು ತಿಂಗಳುಗಳ ಕಾಲ ನನಗಾಗಿ ದಿನವೂ ಪ್ರಾರ್ಥಿಸಿಕೊಂಡರೆ, ಪ್ರತಿದಿನವೂ ಗುಡಿಯಲ್ಲಿ ಬಲಿ ಪೂಜೆ ನಡೆಸಿಕೊಟ್ಟರೆ, ನಾನು ಶುದ್ಧೀಕರಣದ ಸ್ತಳದಿಂದ ಮುಂದೆ ಹೋಗಲು ಸಾಧ್ಯ ಎಂದು ಹೇಳಿದ್ದರು.
***
ತನ್ನನ್ನು ಎಬ್ಬಿಸಿ ಮಾತಾನಾಡಿಸಿದ ಹಂಚಿಬೊಟ್ಟಿನ ಅಮ್ಮನೋರು ಅನ್ನಮ್ಮ ಅವರು ತಿಳಿಸಿದ ಸಂಗತಿಗಳನ್ನು ಅರಿತ ಮಠದ ಹಿರಿಯರಾದ ರಜಿನಾ ಅಮ್ನೋರಿಗೆ ತಾವು ಬಾಲ್ಯದಲ್ಲಿ ಕೇಳಿಸಿಕೊಂಡಿದ್ದ, `ತಾಯ ಕಣ್ಣೀರಿನ ಮುತ್ತುಗಳ ಭಾರದ ಕತೆ ನೆನಪಾಗಿತ್ತು.
ಒಂದಾನೊಂದು ಕಾಲದಲ್ಲಿ ಒಂದಾನೊಂದು ಊರಿನಲ್ಲಿ ಮಾರ್ತವ್ವ ಎಂಬ ವಿಧವೆ ಇದ್ದಳು. ಅವಳು, ತನ್ನ ಮಗನನ್ನ ಕಳೆದುಕೊಂಡಿದ್ದಳು. ಸಂಪ್ರದಾಯದಂತೆ ಮಗನ ಸಮಾಧಿ ಮಾಡಲಾಯಿತು. ತಿಂಗಳ ಸ್ಮರಣೆಯ ತಿಥಿ ಪೂಜೆಯೂ ಮುಗಿಯಿತು. ಊರ ಜನರಿಗೆ ತಿಥಿ ಊಟವನ್ನು ಹಾಕಲಾಯಿತು. ತಿಂಗಳುಗಳು ಉರುಳಿದರೂ ಮಗನಿಗಾಗಿ ಅಳುವುದನ್ನು ನಿಲ್ಲಿಸಿರಲಿಲ್ಲ.
ಒಂದು ದಿನ ಅವಳ ಕನಸಿನಲ್ಲಿ ಕೆಲವು ಮಕ್ಕಳನ್ನು ನೋಡುತ್ತಾಳೆ. ಆ ಎಲ್ಲಾ ಮಕ್ಕಳು ಅವಳ ಮಗನ ವಯೋಮಾನದವರು. ಅವರು ಬಣ್ಣದ ಉಡುಗೆ ತೊಟ್ಟು, ಸಂತೋಷದಿಂದ ಕುಣಿದಾಡುತ್ತಾ ರಸ್ತೆಯಲ್ಲಿ ಸಾಗಿದ್ದರು. ಈ ಹುಡುಗರಲ್ಲಿ ತನ್ನ ಮಗ ಕಾಣುವನೇನೋ ಎಂದು ಕಣ್ಣಾಡಿಸುತ್ತಳೆ. ಆದರೆ, ಅವಳ ಮಗ ಸಂತೋಷದಿಂದ ನಲಿದಾಡುತ್ತಿರುವ ಮಕ್ಕಳ ಜೊತೆ ಇರುವುದಿಲ್ಲ. ಆ ಹುಡುಗರು ಮುಂದೆ ಹೋದಂತೆ, ತುಸು ದೂರದಲ್ಲಿ ಒಬ್ಬ ಹುಡುಗ ನಡೆದುಕೊಂಡು ಬರುವುದು ಕಾಣುತ್ತದೆ.
ಅವನು ಮತ್ತಾರೂ ಅಲ್ಲ ಆಕೆಯ ಮಗ. ಅವನು ಭಾರವಾದ ಮೂಟೆಯನ್ನು ಹೊತ್ತುಕೊಂಡು ನಿಧಾನವಾಗಿ ಕಾಲೆಳೆದುಕೊಂಡು ಬರ್ತಿದ್ದಾನೆ. ಬೆನ್ನ ಮೇಲೆ ಭಾರವಾದ ಮೂಟೆ. `ಏನಪ್ಪಾ ಇದು? ಅಂತ ತಾಯಿ ಕೇಳಿದರೆ, `ಏನಮ್ಮ ಮಾಡೋದು? ನೀನು ಅತ್ತು ಅತ್ತು ಸುರಿಸಿದ ಕಣ್ಣೀರ ಹನಿಗಳು ಮುತ್ತುಗಳಾಗಿ ನನ್ನ ಚೀಲ ತುಂಬುತ್ತಿವೆ. ಅವು ಪ್ರತಿದಿನವೂ ಹೆಚ್ಚಾಗುತ್ತಾ ಸಾಗುತ್ತಿವೆ. ಏನ್ ಮಾಡಲಿ? ಒದ್ದಾಡ್ತಿದೀನಿ. ಅವೇನು ನನಗೆ ಒಳಿತನ್ನು ಮಾಡುತ್ತಿಲ್ಲ. ಒಂದು ಬಾರಿ ಪೂರ್ತಿಯಾಗಿ ಅತ್ತು ಅತ್ತು ಮುಗಿಸಿಬಿಡು. ನನಗಾಗಿ ಒಂದೇ ಒಂದು ಬಲಿ ಪೂಜೆ ಇಡಿಸು ಸಾಕು.
ಅಂದು ಹಂಚಿಬೊಟ್ಟಿನ ಅಮ್ನೋರಾದ ಅನ್ನಮ್ವ ಅವರು ಸುಶೀಲಾಳಿಗೆ ದರ್ಶನಕೊಟ್ಟ ದಿನ, ಸಂತ ಜೋಸೆಫರ ಅನಾಥಾಲಯದಲ್ಲಿ ಗಡಿಬಿಡಿಯೋ ಗಡಿಬಿಡಿ ಇತ್ತು.
***
ಮಠದ ಹಿರಿಯರಾದ ರಜಿತ ದೊಡ್ಡಅಮ್ನೋರು, ಅನ್ನಮ್ಮ ಅಮ್ನೋರು ಕೇಳಿಕೊಂಡಂತೆ ದಿನವೂ ಪ್ರಾರ್ಥನೆ ಸಲ್ಲಿಸಲು ಅನುವು ಮಾಡಿಕೊಟ್ಟಿದ್ದರು. ಪ್ರತಿದಿನವೂ ಒತ್ತಾಸೆಯಾಗಿ ಆರು ತಿಂಗಳ ಕಾಲ ಬಲಿಪೂಜೆ ನಡೆಸಿಕೊಡುವಂತೆ ಗುರುಗಳಲ್ಲಿ ಕೋರಿಕೊಂಡಿದ್ದರು. ಹಂಚಿಬೊಟ್ಟಿನ ಅಮ್ಮನೋರು ಅನ್ನಮ್ಮ ಅವರಿಗಾಗಿ, ಮಕ್ಕಳು ಕನ್ಯಾಮಠದ ಅಮ್ನೋರು ಪ್ರತಿದಿನವೂ ಪ್ರಾರ್ಥನೆಗಳನ್ನು ಹೇಳಿದರೆ, ಗುರುಗಳು ಗುಡಿಯಲ್ಲಿ ಪ್ರತಿದಿನವೂ ಹಂಚಿಬೊಟ್ಟಿನ ಅಮ್ಮನೋರು ಅನ್ನಮ್ಮ ಅವರ ಬಿನ್ನಹಗಳಿಗಾಗಿ ಬಲಿಪೂಜೆ ಅರ್ಪಿಸುತ್ತಿದ್ದರು.
ಇಂದು ಎಲ್ಲಾ ಮಕ್ಕಳು ಎಂದಿನಂತೆ ಎದ್ದು ಶಾಲೆಗೆ ಹೋಗಿದ್ದರೆ, ಹನ್ನೊಂದು ಗಂಟೆಯಾದರೂ, ಬಾಲಕಿ ಸುಶೀಲ ಇನ್ನೂ ಹಾಸಿಗೆಯಲ್ಲಿ ಮಲಗಿಯೇ ಇದ್ದಾಳೆ. ಶಾಂತಮ್ಮ ಅಮ್ನೋರ ಅನುಮಾನ ಗಟ್ಟಿಯಾಯಿತು.
ನಿಧಾನವಾಗಿ ಸುಶೀಲಾಳನ್ನು ಎಬ್ಬಿಸಲು ಮುಂದಾದಾಗ, ಅವಳು ಬಡಬಡಿಸುತ್ತಿದ್ದಳು.
`ಮಗಳೇ ಸುಶೀಲಾ, ಸುಶೀಲಾ. ನೋಡಮ್ಮಾ ನಾನೀಗ ನನ್ನ ಪುಣ್ಯದ ಕರ್ಮಗಳ ಜೊತೆಗೆ ನಿಮ್ಮ ಪ್ರಾರ್ಥನೆಯ ಬಲದಿಂದ, ಮಾತೆ ಮರಿಯಮ್ಮನವರ ಒತ್ತಾಸೆಯಿಂದ ಶುದ್ಧೀಕರಣದ ಸ್ಥಳದಿಂದ ಸ್ವರ್ಗದ ಕಡೆಗೆ ಹೊರಟಿದ್ದೇನಮ್ಮ.
ಸುಶೀಲಾಳು ಬಡಬಡಿಸುತ್ತಿರುವ ಮಾತುಗಳನ್ನು ಕೇಳಿ ಶಾಂತಮ್ಮ ಅಮ್ನೋರು, ಅವಳನ್ನು ಮಲಗಲು ಬಿಟ್ಟು ದೊಡ್ಡ ಅಮ್ನೋರಾದ ರಜಿನಾ ಅವರ ಹತ್ತಿರ ಅವಸರದಿಂದ ಓಡಿದರು.
- ಎಫ್.ಎಂ.ನಂದಗಾವ್