ಕಳೆದ 2009ನೇ ಸಾಲಿನಲ್ಲಿ ಬೆಂಗಳೂರಿನ `ವನಚಿನ್ನಪ್ಪ ಪ್ರಕಾಶನ’ದ ಆಶ್ರಯದಲ್ಲಿ ಬೆಳಕು ಕಂಡಿದ್ದ, ಪತ್ರಕರ್ತ ಎಫ್.ಎಂ.ನಂದಗಾವ ಅವರು ರಚಿಸಿದ್ದ, ಒಟ್ಟು 80 ಪುಟಗಳ ಡೆಮಿ 1/8 ಆಕಾರದ,
ಜಾನಪದ ಹಾಡುಗಳು ಮತ್ತು ಐತಿಹ್ಯಗಳಿಂದ ಶ್ರೀಮಂತವಾಗಿರುವ, ಹಳೆಮೈಸೂರು ಸೀಮೆಯ ಸ್ಥಳೀಯ ಕ್ರೈಸ್ತರ ಐತಿಹಾಸಿಕ ಹಿನ್ನಲೆಯ ಆಚರಣೆಯನ್ನು ಪೂರ್ಣ ಪ್ರಮಾಣದಲ್ಲಿ ದಾಖಲಿಸಿದ್ದ, `ಅನ್ನಮ್ಮ ಬೆಟ್ಟದ ಶಿಲುಬೆಯಾತ್ರೆ’ ಪುಸ್ತಕದ ಇಂಗ್ಲಿಷ್ ಭಾಷಾಂತರ `ಎ ಲೆಂಟನ್ ಪಿಲ್ಗ್ರಿಮೇಜ್’ ಹೆಸರಿನ ಪುಸ್ತಕವು 1016ನೇ ಸಾಲಿನಲ್ಲಿ ಪ್ರಕಟನೆಯ ಭಾಗ್ಯಕಂಡಿದೆ.
ಬೆಂಗಳೂರಿನ ಚೇಳಿಕೆರೆಯಲ್ಲಿರುವ `ಬೆಂಗಳೂರು ಸಿಟಿ ಕಾಲೇಜಿ’ನ ಇಂಗ್ಲಿಷ್ ಪ್ರಾಧ್ಯಾಪಕ ಪ್ರೊ. ಡಬ್ಲೂ.ಜಿ.ಮೋನಿಸ್ ಅವರು ಈ ಪುಸ್ತಕದ ಅನುವಾದಕರು. ಒಟ್ಟು 124 ಪುಟಗಳ, 1/8 ಡೆಮಿ ಆಕಾರದ ಈ `ಎ ಲೆಂಟನ್ ಪಿಲ್ಗ್ರಿಮೇಜ್’ ಪುಸ್ತಕವನ್ನು ಲಗ್ಗೆರೆಯ ಸಿವಿಜಿ ಬುಕ್ಸ್ ಪ್ರಕಾಶನ ಸಂಸ್ಥೆಯು ಪ್ರಕಟಿಸಿದೆ. ಬೆಂಗಳೂರಿನ ಜೈಭಾರತ ನಗರದ ಎಟಿಸಿ ಪುಸ್ತಕ ಮಳಿಗೆಯಲ್ಲೂ ಈ ಪುಸ್ತಕ ಖರೀದಿಗೆ ಲಭ್ಯ. (`ಎ ಲೆಂಟನ್ ಪಿಲ್ಗ್ರಿಮೇಜ್ -ಅನ್ನಮ್ಮ ಬೆಟ್ಟದ ಶಿಲುಬೆ ಯಾತ್ರೆ- ಎ ಫೋಕ್ ಲೋರ್ ಸ್ಟಡಿ, ಸಿವಿಜಿ ಬುಕ್ಸ್ 277, 5ನೇ ಕ್ರಾಸ್ ವಿಧಾನಸೌಧ ಬಡಾವಣೆ, ಲಗ್ಗೆರೆ, ಬೆಂಗಳೂರು- 560058. ಬೆಲೆ-195, ಐಎಸ್ಬಿಎನ್ ಕ್ರಮಾಂಕ 81-8343-048-1)
ಈ `ಎ ಲೆಂಟನ್ ಪಿಲ್ಗ್ರಿಮೇಜ್’ ಪುಸ್ತಕದಲ್ಲಿ ಉತ್ತರಹಳ್ಳಿ ಅನ್ನಮ್ಮನ ಬೆಟ್ಟದ ವಾರ್ಷಿಕ ಜಾತ್ರೆ/ಯಾತ್ರೆ/ ಶಿಲುಬೆಯಾತ್ರೆ, ಆಚರಣೆಯ ಹಲವು ಆಯಾಮಗಳ ಪರಿಚಯ, ಬೆಟ್ಟಕ್ಕೆ ಹೆಸರುಕೊಟ್ಟ ಸಾಧ್ವಿ ಅನ್ನಮ್ಮಳ ಐತಿಹ್ಯಗಳು ಮುಂತಾದವುಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಗಿದೆ. ಸ್ಥಳೀಯ ಕ್ರೈಸ್ತರ ವಿಶ್ವಾಸ, ನಂಬಿಕೆಗಳ ಅಡಿಪಾಯದ ಅನ್ನಮ್ಮ ಬೆಟ್ಟದಲ್ಲಿನ ಆಚರಣೆಯ ಪರಿಚಯವನ್ನು ಹೊರಜಗತ್ತಿಗೂ ಮಾಡಲೆತ್ನಿಸುವಲ್ಲಿ `ಎ ಲೆಂಟನ್ ಪಿಲ್ಗ್ರಿಮೇಜ್’ ಯಶಸ್ಸು ಕಾಣಲಿ ಎಂಬುದು ನಮ್ಮ ಹಾರೈಕೆ.