ಮಹಾತ್ಮನೆಂಬ ಗಾಂಧಿಯೊಳಗೆ ಕ್ರಿಸ್ತನೆಂಬ ಭುವನಜ್ಯೋತಿ!

Advertisements
Share

ಕ್ರಿಸ್ತನ ಸತ್ಯಪರತೆಯು ನನ್ನ ಬದುಕಿನ ಆತ್ಮಸಾಕ್ಷಿಯನ್ನು ರೂಪಿಸಿಕೊಳ್ಳಲು ಉದಾತ್ತವಾಗಿ ನೆರವಾಗಿದೆ ಎಂದು ಹೇಳುವ ಗಾಂಧಿ, ಕ್ರೈಸ್ತರು ಕ್ರಿಸ್ತನನ್ನು ಹೇಗೆ ಅರ್ಥೈಸಿಕೊಳ್ಳುತ್ತಾರೋ ನನಗೆ ಗೊತ್ತಿಲ್ಲ, ಆದರೆ ನನ್ನ ಪಾಲಿಗೆ ಕ್ರಿಸ್ತ ಸರ್ವಕಾಲಕ್ಕೂ ಸಲ್ಲುವ ದೈವಿಕ ಬೋಧಕ, ತ್ಯಾಗದ ಪ್ರತಿರೂಪ ಹಾಗೂ ಈ ಜಗತ್ತು ಕಂಡ ಯುಗಪುರುಷ ಎನ್ನುತ್ತಾರೆ.

ಕ್ರಿಸ್ತ ಇತಿಹಾಸದವನಲ್ಲ. ಆತ ನಮ್ಮಲ್ಲೇ, ನಮ್ಮೋಳಗೇ ಇರುವವನು, ಈ ವಿಶ್ವವನ್ನು ಯುಗಯುಗಾಂತರಕ್ಕೂ ಪ್ರಭಾವಿಸುವವನು. ಎನ್ನುತ್ತಾರೆ ಫಾದರ್ ಚಸರಾ. ಹೌದು, ಕ್ರಿಸ್ತ ಹುಟ್ಟಿದಾಗಿನಿಂದ ಮಾತ್ರವಲ್ಲದೆ, ಆತ ಹುಟ್ಟುವುದಕ್ಕೂ ಮೊದಲು ಆತನ ಆಗಮನವನ್ನು ಪ್ರವಾದಿಗಳು ಅನೇಕ ಶತಮಾನಗಳ ಕಾಲ ಪ್ರವಾದಿಸಿದರು ಎಂಬುದನ್ನು ನಾವು ಬೈಬಲ್ನಲ್ಲಿ ನೋಡಬಹುದು. ಜಗತ್ತಿನ ಮಹಾನ್ ವ್ಯಕ್ತಿಗಳಿಂದ ಹಿಡಿದು ಸಾಮಾನ್ಯರನ್ನೂ ಸಹ ಕ್ರಿಸ್ತ ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವಿಸಿರುವುದು ಸೃಷ್ಟಿಯಷ್ಟೇ ಸತ್ಯ. ಇನ್ನು ಕ್ರಿಸ್ತನ ಪ್ರಭಾವಕ್ಕೊಳಗಾದ ಪ್ರಪಂಚದ ಹಲವು ಮಹಾನ್ ವ್ಯಕ್ತಿಗಳಲ್ಲಿ ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧಿಯೂ ಸಹ ಒಬ್ಬರು.

ಗಾಂಧಿ! ಗಾಂಧಿ ಅಂದಾಕ್ಷಣ ನಮ್ಮ ಸ್ಮೃತಿಪಟಲದ ಮೇಲೆ ಮೂಡುವುದು ಕೃಷ ದೇಹದ, ಬೋಳುತಲೆಯ, ಕನ್ನಡಕ ಧರಿಸಿ, ಕೈಯಲ್ಲಿ ಕೋಲು ಹಿಡಿದು, ನಗುತ್ತಿರುವ ಬೊಚ್ಚುಬಾಯ ಮುದುಕನ ಚಿತ್ರ. ದಿನನಿತ್ಯ ನಾವು ವ್ಯವಹರಿಸುವ ದುಡ್ಡಿನ ಮೂಲಕ ನಮ್ಮ ಬದುಕಿನ ಹಾಸುಹೊಕ್ಕಾಗಿರುವ ಗಾಂಧಿ ಸವೆಸಿದ್ದು ಅಕ್ಷರಶಃ ಮುಳ್ಳಿನ ಹಾದಿ. ದಕ್ಷಿಣ ಆಫ್ರಿಕಾದಿಂದ ಹಿಡಿದು ಭಾರತಕ್ಕೆ ಸ್ವಾತಂತ್ತ್ರ್ಯ ಸಿಗುವವರೆಗೂ ಮೋಹನದಾಸ ಕರಮಚಂದ ಗಾಂಧಿ ಎಂಬ ಗಾಂಧಿಯ ಬದುಕು ಹೋರಾಟಗಳ ಮೊತ್ತವೇ ಆಗಿತ್ತು. ಗಾಂಧಿ ಬದುಕಿನ ಹಲವು ಮಜಲುಗಳಲ್ಲಿ ಧಾರ್ಮಿಕತೆ ಅಥವಾ ಧಾರ್ಮಿಕ ನಂಬಿಕೆ ಎನ್ನುವುದು ಸರ್ವಕಾಲಕ್ಕೂ ಕುತೂಹಲ ಕೆರಳಿಸುವಂತಹ ಹಾಗೂ ಅಧ್ಯಯನ ಯೋಗ್ಯ ಅಂಶವಾಗಿದೆ. ಗಾಂಧಿ, ಕ್ರಿಸ್ತ ಮತ್ತು ಕ್ರೈಸ್ತ ಧರ್ಮದ ಕುರಿತು ಹೊಂದಿದ್ದ ಅಭಿಪ್ರಾಯ ಒಂದೇ ತೆರನಾಗಿರಲಿಲ್ಲ. ತಾವು ಸಾರ್ವಜನಿಕ ಜೀವನಕ್ಕೆ ಕಾಲಿಟ್ಟಾಗಿನಿಂದ ಹಿಡಿದು, ಭಾರತದಲ್ಲಿ ಸ್ವಾತಂತ್ತ್ರ್ಯ ನಂತರ ಹತ್ಯೆಯಾಗುವವರೆಗೂ ಗಾಂಧಿಯವರಲ್ಲಿ ಹಲವು ತಾತ್ವಿಕ ಬದಲಾವಣೆಗಳಾದರೂ ಅವರ ಸತ್ಯದೊಂದಿಗಿನ ನಿರಂತರ ಅನ್ವೇಷಣೆ ಸಾಗುತ್ತಲೇ ಇತು

ಧರ್ಮ ಎನ್ನುವುದು ಕೇವಲ ಸಾಂಪ್ರದಾಯಿಕ ಆಚರಣೆಗಳಾಗಿರದೆ ಅದೊಂದು ಸತ್ಯವನ್ನು ಕಂಡುಕೊಳ್ಳಲು ತೋರುವ ಮಾರ್ಗ ಎಂದು ಗಾಂಧಿ ಬಲವಾಗಿ ನಂಬಿದ್ದರು. ತಾವು ಸ್ವತಃ ಒಬ್ಬ ಶ್ರದ್ಧಾವಂತ ಹಿಂದೂವಾಗಿದ್ದರು ಗಾಂಧಿ ಎಲ್ಲಾ ಧರ್ಮಗಳಿಗೂ ಸಮಾನ ಗೌರವ ಎಂಬ ಸರ್ವಧರ್ಮ ಸಮಭಾವ ಎಂಬ ತತ್ವದಲ್ಲಿ ಅಚಲ ನಂಬಿಕೆಯನ್ನಿರಿಸದ್ದರು. ಇನ್ನು ಅವರ ಧಾರ್ಮಿಕ ನಿಲುವನ್ನು ಅವರದೇ ಮಾತುಗಳಲ್ಲಿ ಹೇಳುವುದಾದರೆ ತಾರ್ಕಿಕತೆಯನ್ನು ಆಕರ್ಷಿಸದ ಹಾಗೂ ನೈತಿಕತೆಗೆ ವಿರುದ್ಧವಾದ ಯಾವುದೇ ಧಾರ್ಮಿಕ ಸಿದ್ಧಾಂತವನ್ನು ನಾನು ತಿರಸ್ಕರಿಸುತ್ತೇನೆ. (ಗಾಂಧಿ ಎಂ.ಕೆ., ಯಂಗ್ ಇಂಡಿಯ, ೧೨.೦೭.೧೯೨೦)

ನಾನು ಎಷ್ಟು ಹಿಂದೂವಾಗಿದ್ದೇನೋ ಅಷ್ಟೇ ಮುಸ್ಲಿಮನು, ಕ್ರೈಸ್ತನು, ಪಾರ್ಸಿ, ಬೌದ್ಧ
ನೂ ಆಗಿದ್ದೇನೆ ಎಂದ ಗಾಂಧಿ ತಮ್ಮ ಪ್ರಾರ್ಥನಾ ಸಭೆಗಳಲ್ಲಿ ಭಗವದ್ಗೀತೆ, ಬೈಬಲ್, ಖುರಾನ್ ಮತ್ತು ಇತರ ಧರ್ಮಗ್ರಂಥಗಳ ವಾಚನಗಳನ್ನೂ ಸಹ ಪಠಿಸುತ್ತಿದ್ದರು. ಗಾಂಧಿಯ ಅತ್ಯಂತ ಇಷ್ಟದ ಗೀತೆ ಇತರರ ನೋವು ಮತ್ತು ದುಃಖಗಳನ್ನು ಅರ್ಥಮಾಡಿಕೊಳ್ಳುವವನೇ ನಿಜವಾದ ದೈವಭಕ್ತ ಎನ್ನುವ ಸಾಲುಗಳಿಂದ ಪ್ರಾರಂಭವಾಗುತ್ತಿತ್ತು. ಈ ಕೆಳಗಿನ ಗಾಂಧಿಯ ಹೇಳಿಕೆಗಳು ಅವರ ಬದುಕಿನಲ್ಲಿ ಕ್ರಿಸ್ತ ಮತ್ತು ಆತನ ಬೋಧನೆಗಳು ಯಾವ ಪ್ರಮಾಣದಲ್ಲಿ ಸ್ಫೂರ್ತಿಯನ್ನು ತುಂಬಿದ್ದವು ಮತ್ತು ಗಾಂಧಿ ಕ್ರಿಸ್ತನಿಂದ ಅದೆಷ್ಟು ಪ್ರಭಾವಿತರಾಗಿದ್ದರು ಎಂಬುದನ್ನು ಸೂಚಿಸುತ್ತವೆ.

ಯೇಸುಕ್ರಿಸ್ತ ಎಂದರೆ ನನಗೆ ಯಾರು? ನನ್ನ ಪ್ರಕಾರ, ಕ್ರಿಸ್ತ, ಈ ಜಗತ್ತು ಕಂಡ ಮಹಾನ್ ಮಾನವೀಯತೆಯ ಭೋದಕರಲ್ಲೊಬ್ಬ. (ಗಾಂಧಿ ಎಂ.ಕೆ., ೧೯೪೮, ಶಾಂತಿ ಮತ್ತು ಯುದ್ಧದಲ್ಲಿ ಅಹಿಂಸೆ, ಸಂಪುಟ ೧, ಪುಟ.೧೮೧)

ಸಂಪೂರ್ಣ ನಿರಪರಾಧಿಯಾಗಿದ್ದ ಕ್ರಿಸ್ತ, ಈ ಲೋಕದ ಒಳಿತಿಗಾಗಿ, ತನ್ನ ವೈರಿಗಳಿಗಾಗಿಯೂ ಸಹ ಶಿಲುಬೆಯ ಮೇಲೆ ತನ್ನ ಪ್ರಾಣವನ್ನೇ ತ್ಯಾಗಮಾಡಿದ. ಅದು ಪರಿಪೂರ್ಣತೆಯ ಕಾರ್ಯವಾಗಿತ್ತು. (ಗಾಂಧಿ ಎಂ.ಕೆ., ೧೯೪೮, ಶಾಂತಿ ಮತ್ತು ಯುದ್ಧದಲ್ಲಿ ಅಹಿಂಸೆ, ಸಂಪುಟ ೨, ಪುಟ.೧೬೬). ಕ್ರಿಸ್ತ ಇತಿಹಾಸ ಕಂಡ ಅತ್ಯಂತ ಕ್ರಿಯಾಶೀಲ ಪ್ರತಿರೋಧಕ ಹಾಗೂ ಮಹಾನ್ ಅಹಿಂಸಾವಾದಿ ಎಂದ ಗಾಂಧಿ ದೇವರಾತ್ಮ ಹೇಳಿದಂತೆ ಜೀವಿಸಿದ ಕ್ರಿಸ್ತನನ್ನು ನಾನು ನಿಜವಾದ ದೇವರ ಕುಮಾರ ಎಂದು ನಂಬುತ್ತೇನೆ. ಈ ನಿಟ್ಟಿನಲ್ಲಿ ಯೇಸುಕ್ರಿಸ್ತ ಕೇವಲ ಕ್ರೈಸ್ತ ಧರ್ಮಕ್ಕೆ ಸೇರಿದವನಲ್ಲ. ಆತ ಇಡೀ ಪ್ರಪಂಚಕ್ಕೆ, ಜಗತ್ತಿನ ಸಕಲ ವಿಧದ ಮಾನವಸಮುದಾಯಕ್ಕೂ ಸಹ ಆತ ಸೇರಿದವನಾಗಿದ್ದಾನೆ. ಎನ್ನುತ್ತಾರೆ. (ಗಾಂಧಿ ಎಂ.ಕೆ., ೧೯೫೫, ನನ್ನ ಧರ್ಮ, ಸಂಪಾದಕ: ಭರತನ್ ಕುಮಾರಪ್ಪ, ಪುಟ ೨೫.)

ಗಾಂಧಿಯ ಜೀವನ ಚರಿತ್ರಾಕಾರ ಲೂಯಿಸ್ ಫಿಶರ್, ತಾನು ಒಮ್ಮೆ ಗಾಂಧಿಯನ್ನು ಸಂಧಿಸಿದಾಗ ನಡೆದ ಘಟನೆಯನ್ನು ಈ ರೀತಿಯಾಗಿ ವಿವರಿಸುತ್ತಾನೆ. ೧೯೪೨ ರಲ್ಲಿ ಗಾಂಧಿಯೊಂದಿಗೆ ಒಂದು ವಾರ ಕಳೆಯಲು ನಾನು ಸೇವಾಗ್ರಾಮಕ್ಕೆ ಆಗಮಿಸಿದಾಗ ಗಾಂಧಿ ತಂಗುತ್ತಿದ್ದ ಗುಡಿಸಲಿನ ಮಣ್ಣುಗೋಡೆಯ ಮೇಲೆ ಒಂದೇ ಒಂದು ಆಕೃತಿಯನ್ನು ಚಿತ್ರಿಸಲಾಗಿತ್ತು. ಅದು ಕ್ರಿಸ್ತನ ಕಪ್ಪು ಬಿಳಿ ಬಣ್ಣದ ಚಿತ್ರವಾಗಿದ್ದು, ಅದರ ಕೆಳಗೆ ಈತನೇ ನಮ್ಮ ಶಾಂತಿ ಎಂದು ಬರೆಯಲಾಗಿತ್ತು. ಈ ಕುರಿತು ಗಾಂಧಿಯವರನ್ನು ಕೇಳಿದಾಗ ಅವರು ನಾನು ಹಿಂದೂ ಆಗಿರುವಷ್ಟೇ ಕ್ರೈಸ್ತನೂ, ಮುಸಲ್ಮಾನನು, ಯೆಹೂದ್ಯನೂ ಆಗಿದ್ದೇನೆ. ಸರ್ವಧರ್ಮಗಳನ್ನು ಸಮಾನ ದೃಷ್ಟಿಯಲ್ಲಿ ನೋಡಿ, ಅವುಗಳ ಉದಾತ್ತ ಮೌಲ್ಯಗಳನ್ನು ರೂಪಿಸಿಕೊಳ್ಳುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯವಾಗಿದೆ. ಎಂದರು.

ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯರ ಪರವಾಗಿ ಹೋರಾಡುವ ದಿನಗಳಿಂದ ಹಿಡಿದು, ಭಾರತದ ಸ್ವಾತಂತ್ರ್ಯ ಚಳುವಳಿಯವರೆಗೂ ಸಹ ಗಾಂಧಿ ಲೆಕ್ಕವಿಲ್ಲದಷ್ಟು ಬಾರಿ ತಮ್ಮ ಸಭೆಗಳಲ್ಲಿ, ಚಳುವಳಿಗಳಲ್ಲಿ ಗಾಂಧಿ ಕ್ರಿಸ್ತನ ತತ್ವಾದರ್ಶಗಳ ಕುರಿತು ಮಾತನಾಡಿ, ಅವುಗಳನ್ನು ತಮ್ಮ ಜೀವನದ ಪರಿಧಿಯಲ್ಲಿ ಪ್ರಯೋಗಿಸಿ, ಹಾಸುಹೊಕ್ಕಾಗಿಸಿಕೊಂಡಿದ್ದಾರೆ. ಅವರ ದಣಿವರೆಯದ ವಿದೇಶ ಪ್ರಯಾಣಗಳ ವೇಳೆಯೂ ಸಹ ಗಾಂಧಿ ಕ್ರೈಸ್ತ ಗುರುಗಳ, ವಿದ್ವಾಂಸರ ಜೊತೆ ಸಂಭಾಷಿಸಿ, ಸಂವಾದಿಸಿ, ತಾವು ಕ್ರಿಸ್ತನನ್ನು ತಾವು ಅರ್ಥೈಸಿಕೊಂಡ ಬಗೆ ಮತ್ತು ಆತನನ್ನು ತಮ್ಮ ಸಾರ್ವಜನಿಕ ಜೀವನದಲ್ಲಿ ಸಮೀಕರಿಸಿಕೊಂಡ ಕುರಿತು ಹಲವಾರು ಬಾರಿ ಹೇಳಿರುವುದನ್ನು ನಾವು ಗಾಂಧಿ ಕುರಿತ ಅಸಂಖ್ಯಾತ ಕಥನಗಳಲ್ಲಿ ಕಾಣಬಹುದಾಗಿದೆ. ಸಂತ ಮತ್ತಾಯನ ಶುಭಸಂದೇಶದ ಬೆಟ್ಟದ ಬೋಧೆಯಿಂದ ಗಾಂಧಿ ಅದೆಷ್ಟು ಪ್ರಭಾವಿತರಾದರೆಂದರೆ, ಅದನ್ನು ನಾನು ಓದಿದಾಗ ಅದು ನೇರ ನನ್ನ ಹೃದಯಕ್ಕಿಳಿಯಿತು ಎಂದು ಹೇಳುತ್ತಾರೆ.

ಪ್ರಸ್ತುತ ಕಾಲಘಟ್ಟದಲ್ಲಿ, ಬದಲಾದ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸನ್ನಿವೇಷದಲ್ಲಿ ಗಾಂಧಿ ಪ್ರಶ್ನಾತೀತರಾಗಿ ಉಳಿದಿಲ್ಲ. ತಾವು ಜೀವಂತವಾಗಿದ್ದಾಗಲೇ ಗಾಂಧಿಯನ್ನು ಪ್ರಶ್ನೆ ಮಾಡುವವರು ಸಾಕಷ್ಟಿದ್ದರು. ಸ್ವಾತಂತ್ರ್ಯ ಚಳುವಳಿಯಲ್ಲಿ ಹಾಗೂ ಸ್ವಾತಂತ್ರ್ಯ ಬಂದ ನಂತರ ಗಾಂಧಿಯ ಹಲವು ನಿರ್ಧಾರಗಳು ಈಗಲೂ ವಿವಾದಾತ್ಮಕವಾಗಿ, ಸಾರ್ವಜನಿಕವಾಗಿ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಆರೋಪ ಪ್ರತ್ಯಾರೋಪಗಳಿಂದ ಕೂಡಿವೆಯಾದರೂ ಗಾಂಧಿ ತಮ್ಮ ಅಹಿಂಸಾವಾದ, ಸತ್ಯತೆ ಮತ್ತು ಸರಳತೆಯೆಂಬ ಅಂಶಗಳನ್ನು ಕ್ರಿಸ್ತನಿಂದ ಪ್ರೇರಿತರಾಗಿ ಪಡೆದಿದ್ದಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಕ್ರಿಸ್ತನ ಸತ್ಯಪರತೆಯು ನನ್ನ ಬದುಕಿನ ಆತ್ಮಸಾಕ್ಷಿಯನ್ನು ರೂಪಿಸಿಕೊಳ್ಳಲು ಉದಾತ್ತವಾಗಿ ನೆರವಾಗಿದೆ ಎಂದು ಹೇಳುವ ಗಾಂಧಿ, ಕ್ರೈಸ್ತರು ಕ್ರಿಸ್ತನನ್ನು ಹೇಗೆ ಅರ್ಥೈಸಿಕೊಳ್ಳುತ್ತಾರೋ ನನಗೆ ಗೊತ್ತಿಲ್ಲ, ಆದರೆ ನನ್ನ ಪಾಲಿಗೆ ಕ್ರಿಸ್ತ ಸರ್ವಕಾಲಕ್ಕೂ ಸಲ್ಲುವ, ದೈವಿಕ ಬೋಧಕ, ತ್ಯಾಗದ ಪ್ರತಿರೂಪ ಹಾಗೂ ಈ ಜಗತ್ತು ಕಂಡ ಯುಗಪುರುಷ ಎನ್ನುತ್ತಾರೆ.

ಅಜಯ್ ರಾಜ್
ಭೈರತಿ, ವೃತ್ತಿಪರ ಅನುವಾದಕ, ಹವ್ಯಾಸಿ ಪತ್ರಕರ್ತ.

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram