“ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ದೇವತಾಃ” ಎಲ್ಲಿ ನಾರಿಯನ್ನು ಪೂಜಿಸಲಾಗುತ್ತದೆ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎನ್ನುವ ವಾಡಿಕೆ ನಮ್ಮ ಭಾರತದ ಸಂಸ್ಕೃತಿ. ಹೆಣ್ಣು ಸಂಸಾರದ ಕಣ್ಣು, ಕಲಿತ ಹೆಣ್ಣು ಮನೆಯ ಕಣ್ಣು, ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ಆಳಬಲ್ಲದೆಂದು ಅವಳನ್ನು ಗುಣಗಾನ ಮಾಡುವ, ಗೌರವಿಸುವ ಮತ್ತು ಪೂಜಿಸುವ ವ್ಯವಸ್ಥೆಯನ್ನು ನಮ್ಮ ಭಾರತದ ಪರಂಪರೆ ನಮಗೆ ಕಲಿಸಿಕೊಟ್ಟಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮೇಲ್ನೋಟಕ್ಕೆ ಬಣ್ಣಿಸುತ್ತಲೇ ಅವಳನ್ನು ಮೂಲೆಗುಂಪಾಗಿ ಮಾಡಲು ಹೊರಟಿದೆ ಪುರುಷ ಸಮಾಜ. ವಾಸ್ತವವಾಗಿ ಹೆಣ್ಣುಮಗುವಿನ ಮೇಲಿನ ಅತ್ಯಾಚಾರ, ಶೋಷಣೆ, ಪುರುಷನ ರಾಕ್ಷಸ ಪ್ರವೃತ್ತಿತನ ಇಡೀ ವಿಶ್ವಕ್ಕೆ ಕಳಂಕ ತರುತ್ತಿವೆ. ವಿಶ್ವದಲ್ಲಿ ಹೆ

ಣ್ಣು ಮಗುವಿನ ಮೇಲೆ ನಡೆದಿರುವ ಕೆಲವು ಅಹಿತಕರ ಘಟನೆಗಳಿಂದಾಗಿ ಹೆಣ್ಣು ಮಕ್ಕಳು ಬದುಕಲು ಹಿಂಜರಿಯುತ್ತಿದ್ದಾರೆ. ನೀಚ, ನಿಕೃಷ್ಟ ವಿಶ್ವ ಸಮಾಜದಲ್ಲಿ ಹೆಣ್ಣು ಮಕ್ಕಳು ಜನಿಸಬಾರದು ಎನ್ನುವ ಮಟ್ಟಕ್ಕೆ ಸ್ತ್ರೀಕುಲವೇ ವೇದನೆ ಪಡುತ್ತಿದೆ. ಈ ಲೇಖನ ಭಾರತದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆದ ಅತ್ಯಾಚಾರ ಮತ್ತು ಶೋಷಣೆಗಳ ಮೇಲೆ ಬೆಳಕು ಚೆಲ್ಲುತ್ತದೆ.
ಅತ್ಯಾಚಾರ ಪ್ರಕರಣಗಳ ಘಟನಾವಳಿಗಳನ್ನು ‘ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ’ 2021 ಅಂಕಿ ಅಂಶಗಳ ಪ್ರಕಾರ ನೋಡಿದಾಗ ರಾಜಸ್ಥಾನವು ಭಾರತೀಯ ರಾಜ್ಯಗಳಲ್ಲಿ ಅತ್ಯಧಿಕ ಅತ್ಯಾಚಾರಗಳನ್ನು ವರದಿ ಮಾಡಿದೆ. ನಂತರದ ಸ್ಥಾನಗಳಲ್ಲಿ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ. ಮೆಟ್ರೋಪಾಲಿಟನ್ ನಗರಗಳಲ್ಲಿ, ರಾಷ್ಟç ರಾಜಧಾನಿ ದೆಹಲಿಯು 2021 ರಲ್ಲಿ 1,226 ಪ್ರಕರಣಗಳಲ್ಲಿ ಅತ್ಯಧಿಕ ಅತ್ಯಾಚಾರ ಪ್ರಕರಣಗಳನ್ನು ಮುಂದುವರೆಸಿದೆ, ಆದರೆ ಜೈಪುರವು ಅತ್ಯಧಿಕ ಅತ್ಯಾಚಾರ ದರವನ್ನು ಹೊಂದಿದೆ. (100,000 ಜನಸಂಖ್ಯೆಗೆ 34) ಮೆಟ್ರೋಪಾಲಿಟನ್ ನಗರಗಳ ಪೈಕಿ ಕೊಲ್ಕತ್ತಾವು ಅತಿ ಕಡಿಮೆ ಸಂಖ್ಯೆಯ ಅತ್ಯಾಚಾರ ಪ್ರಕರಣಗಳನ್ನು ಹೊಂದಿದ್ದು, ಕಡಿಮೆ ಅತ್ಯಾಚಾರ ದರವನ್ನು ಹೊಂದಿದೆ. (ವಿಕಿಪೀಡಿಯದಿಂದ ಪಡೆದ ಮಾಹಿತಿ) ಈ ಅಂಕಿಅAಶಗಳ ಆಧಾರವನ್ನು ಗಮನಿಸಿದಾಗ ಚಿಕ್ಕ ಬಾಲೆಯರಿಂದ ಹಿಡಿದು ಇಳಿವಯಸ್ಸಿನ ವೆರೆಗೆ ಹೆಣ್ಣು ಮಕ್ಕಳ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳು ಭಾರತೀಯರನ್ನು ಬೆಚ್ಚಿಬೀಳಿಸಿದೆ. ಕೆಲವೊಂದು ಪ್ರಕರಣಗಳನ್ನು ಮೆಲುಕು ಹಾಕೋಣ.ಧರ್ಮಸ್ಥಳದ ಚಂದ್ರಪ್ಪ ಮತ್ತು ಕುಸುಮಾತಿ ದಂಪತಿಯ 17 ವರ್ಷದ ಪುತ್ರಿ ಸೌಜನ್ಯ, ಉಜಿರೆ ಎಸ್ಡಿಎಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. 9ನೇ ಅಕ್ಟೋಬರ್ 2012ರಂದು ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ದಾರಿ ಮಧ್ಯದ ಕಾಡಿನಲ್ಲಿ ಸೌಜನ್ಯಳ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈಯಲಾಗಿತ್ತು.
ನಂತರ ದೆಹಲಿಯಲ್ಲಿ ಐದು ಜನ ವಯಸ್ಕರರು ಮತ್ತು ಒಬ್ಬ ಬಾಲಾಪರಾಧಿ ಸೇರಿ 16 ಡಿಸೆಂಬರ್ 2012 ರಂದು ಸಾರ್ವಜನಿಕ ಬಸ್ಸಿನಲ್ಲಿ 23 ವರ್ಷದ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. 29 ಮಾರ್ಚ್ 2016 ರಂದು, ಡೆಲ್ಟಾ ಮೇಘವಾಲ್ ಎಂಬ 17 ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆಗೈದು ಅವಳ ಶವವನ್ನು ಆಕೆಯ ಹಾಸ್ಟೆಲ್ನ ನೀರಿನ ತೊಟ್ಟಿಯಲ್ಲಿ ಹಾಕಲಾಗಿತ್ತು. 17 ಜನವರಿ 2018 ರಂದು, ಜಮ್ಮು ಮತ್ತು ಕಾಶ್ಮೀರದ ಕಥುವಾ ಬಳಿಯ ರಸಾನಾ ಗ್ರಾಮದಲ್ಲಿ 8 ವರ್ಷದ ಅಪ್ರಾಪ್ತ ಬಾಲಕಿ ಆಸಿಫಾ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. 4ನೇ ಮೇ 2023 ರಂದು ಈಶಾನ್ಯ ರಾಜ್ಯ ಮಣಿಪುರದ ಕಾಂಗ್ ಪೊಕ್ಪಿ ಜಿಲ್ಲೆಯ ಕುಕಿ ಜೋ ಎಂಬ ಬುಡಕಟ್ಟು ಸಮುದಾಯದ ಇಬ್ಬರು ಹೆಣ್ಣು ಮಕ್ಕಳನ್ನು ಮೈತೇಯಿ ಸಮುದಾಯದವರು ಸಂಪೂರ್ಣವಾಗಿ ವಿವಸ್ತçಗೊಳಿಸಿ, ಮೆರವಣಿಗೆ ಮಾಡಿ, ಸಾಮೂಹಿಕ ಅತ್ಯಾಚಾರಗೈದಿದ್ದಾರೆ.
ಏನೂ ಅರಿಯದ ಮುದ್ದು ಕಂದಮ್ಮಗಳ ಮೇಲೆ ಅತ್ಯಾಚಾರಗೈದು ಕೊಲೆಗೈದ ಸಾಕಷ್ಟು ಉದಾಹರಣೆಗಳಿವೆ. ಮೃಗಗಳಂತೆ ವರ್ತಿಸಿದ ಕಾಮುಕರಿಗೆ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ದುಷ್ಟರಿಗೆ ಮರಣದಂಡೆನೆಯಂತಹ ಶಿಕ್ಷೆಯೇ ಸೂಕ್ತ. ಆದರೂ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ಗಮನಿಸಿದಾಗ ಭಾರತಕ್ಕೆ ಭಾರವಾದ ಲಂಪಟರು ಇಡೀ ವಿಶ್ವಕ್ಕೆ ಗುರುವಾದ ಭಾರತ ದೇಶವನ್ನು ಯಾವ ದಿಕ್ಕಿನತ್ತ ಕೊಂಡೊಯ್ಯುತ್ತಿದ್ದಾರೆ? ಸುವ್ಯವಸ್ಥಿತ ಕಾನೂನು ವ್ಯಸ್ಥೆಗಳನ್ನು ದುರ್ಬಲಗೋಳಿಸುತ್ತಿದ್ದಾರೆಯೇ? ಬೇಲಿಯೇ ಎದ್ದು ಹೊಲ ಮೆಯ್ಯುತ್ತಿದೆಯೇ? ಈ ಮೇಲಿನ ಪ್ರಶ್ನೆಗಳನ್ನ ಭಾರತೀಯರಾದ ನಾವೆಲ್ಲರೂ ಆತ್ಮಾವಲೋಕನೆ ಮಾಡಿಕೊಳ್ಳಬೇಕಾಗಿದೆ. ಏಕೆಂದರೆ ಈ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಹಲವು ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗಿದೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗುತ್ತಿದ್ದಾರೆ. ಒಟ್ಟಿನಲ್ಲಿ ಭಾರತೀಯ ಹೆಣ್ಣು ಮಕ್ಕಳೆಲ್ಲರೂ ಇಂದು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಈ ಸಮಸ್ಯೆಗಳಿಗೆ ಪರಿಹಾರವೆಂದರೆ, ಭಾರತೀಯ ಕಾನೂನನ್ನು ಇನ್ನೂ ಬಲಿಷ್ಠಗೊಳಿಸಿದಾಗ ಮಾತ್ರ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯ. ಇಂದಿನ ಸಮಾಜವನ್ನು ಎಚ್ಚರಗೊಳಿಸುವಂತಹ ಕೆಲಸ ಬುದ್ಧಿಜೀವಿಗಳ ಮೇಲಿದೆ.
ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವ ವ್ಯವಸ್ಥೆ ಜನ ಪ್ರತಿನಿಧಿಗಳ ಮೇಲಿದೆ. ವಿದ್ಯಾರ್ಥಿಗಳಿಗೆ ಕಾನೂನು ವಿಷಯಗಳ ಮೇಲೆ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಬೇಕು. ಜನಸಾಮಾನ್ಯರಿಗೆ ಪೋಲಿಸ್ ಇಲಾಖೆಯ ಮೂಲಕ ಹಳ್ಳಿಹಳ್ಳಿಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅತ್ಯಾಚಾರಕ್ಕೆ ವಿಧಿಸಲಾಗುವ ಕಠಿಣ ಶಿಕ್ಷೆಗಳ ಬಗ್ಗೆ ಮಾಹಿತಿಯನ್ನು ತಿಳಿ ಹೇಳಬೇಕು. ಸಮೂಹ ಮಾಧ್ಯಮಗಳು ಚರ್ಚಾ ಗೋಷ್ಠಿಗಳನ್ನು ಏರ್ಪಡಿಸಬೇಕು. ಹೀಗೆ ಮಾಡಿದರೆ ಮುಂದೆ ಸಂಭವಿಸಬಹುದಾದ ಅನೇಕ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಬಹುದು.
ಹೆಣ್ಣು ಮಕ್ಕಳ ಸಾಧನೆಗಳ ಬಗ್ಗೆ ಅರಿವು ಮೂಡಿಸಲು ಮತ್ತು ಜಾಗೃತಿಗೊಳಿಸಲು ಪ್ರತಿವರ್ಷ ಅಕ್ಟೋಬರ್ ೧೧ ರಂದು ವಿಶ್ವ ಹೆಣ್ಣು ಮಗುವಿನ ದಿನಾಚರಣೆ, ಜವವರಿ ೨೪ ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಮತ್ತು ಮಾರ್ಚ ೮ ರಂದು ವಿಶ್ವ ಮಹಿಳಾ ದಿನಾಚರಣೆಗಳನ್ನು ಆಚರಿಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳನ್ನು ಆಚರಿಸಲು ನಾವೆಲ್ಲರೂ ಅರ್ಹರೇ? ಎನ್ನುವುದನ್ನು ಅರ್ಥೈಸಿಕೊಳ್ಳಬೇಕು. ಈ ಪ್ರಪಂಚದಲ್ಲಿ ಪುರುಷನಿಗಿರುವಷ್ಟೇ ಸ್ಥಾನಮಾನಗಳು ಮತ್ತು ಹಕ್ಕುಗಳು ಹೆಣ್ಣು ಮಕ್ಕಳಿಗೂ ಇವೆ. ಇದನ್ನು ಮರೆತರೆ ಮಾನವೀಯತೆ ಸತ್ತಹಾಗೆ. ಭೂಮಿ ತೂಕದಷ್ಟೆ ಸಹನಾಶೀಲಳಾದ ಹೆಣ್ಣು ತಾಯಿಯಾಗಿ, ಮಗಳಾಗಿ, ಮಡದಿಯಾಗಿ, ಅಕ್ಕಳಾಗಿ, ತಂಗಿಯಾಗಿ, ಸ್ನೇಹಿತೆಯಾಗಿ ಎಲ್ಲರ ಮನೆಮನಗಳನ್ನು ಬೆಳಗಿ, ನವ ಸಮಾಜದ ನಿರ್ಮಾಪಕಳಾಗುವಳು. ಈ ಮಾತು ಅಕ್ಷರಶಃ ಸತ್ಯವಾದದ್ದು. ಹೆಣ್ಣು ಮಕ್ಕಳ ರಕ್ಷಣೆ ಪುರುಷರ ಹೊಣೆಯಾಗಿದೆ.
- ದೇವ
(ಪೂರ್ಣ ಹೆಸರು ದ್ಯಾವಣ್ಣ. ಕವಿ ಮತ್ತು ಲೇಖಕರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಸುಂಕೇಶ್ವರ ಗ್ರಾಮದವರು. ಪ್ರಸ್ತುತ ಮಾನ್ವಿಯಲ್ಲಿರುವ ಲೊಯೋ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸುತ್ತಿದ್ದಾರೆ).