ಸ್ವಗತ ಇನ್ನೂ ಮುಗಿದಿಲ್ಲ…..

Advertisements
Share

ಭಾಗ-೧

ನ ಭೂತೋ ನ ಭವಿಷ್ಯತಿ ಎಂಬಂತೆ ಧೋ ಎಂದು ಒಂದೇ ಸಮನೆ ಮಳೆ. ಆಷಾಢದ ಬಿರುಮಳೆ ಜೊತೆಗೆ ಮೈ ಚುಚ್ಚುವ ಚುಮು ಚುಮು ಗಾಳಿ, ಸುತ್ತಲೂ ಹಿಮಾಲಯ ನೆನಪಿಸುವ ಮಂಜು, ಅರೆಗತ್ತಲೆ. ಅಂದಂತೂ ಲೋಕವೆಲ್ಲ ತಣ್ಣಗಾಗಿತ್ತು. ಸಂಜೆಯ ಆ ಚಳಿಗೆ ಮೈಸೂರು ಅರಮನೆಯ ರಸ್ತೆ ಮುಂದುಗಡೆ ಇದ್ದ ಅರಕಲಗೂಡು ಸಿದ್ಧಪ್ಪನ ಗೂಡಂಗಡಿಯಲ್ಲಿ ಬಿಸಿ ಬಿಸಿ ಕಾಫಿ ಕುಡಿಯುತ್ತಾ ನಿಂತಿದ್ದ ವಿಭಾಕರ್‌ನ ಮೊಬೈಲಿನಲ್ಲಿ ಮೆಸ್ಸೆಜ್ ಬೀಪ್ ಸದ್ದಾಯಿತು. ಆದರೆ ಯಾವುದೋ ಲೋಕದಲ್ಲಿ ವಿಹರಿಸುತ್ತಿದ್ದ ಆತನಿಗೆ ಅದು ಕೇಳಿಸಲೇ ಇಲ್ಲ. ಅದೇ ಸಮಯಕ್ಕೆ ರಸ್ತೆಯ ಅಂಚಿನಲ್ಲಿ ಜನರು ಏನೋ ಅವಸರಗಟ್ಟುತ್ತಿರುವುದನ್ನು ಕಂಡ. ಅವರೆಲ್ಲ ಗುಸು ಗುಸುಗುಟ್ಟುತ್ತಾ ಸರಸ್ವತೀಪುರಂ ಕಡೆಗೆ ಸಾಗುತ್ತಿದ್ದರು. ಕೆಲವೊಂದು ವಾಹನಗಳೂ ಅರಮನೆ ರಸ್ತೆಯಿಂದ ಮುಂದೆ ಹೋಗಿ ಸರಸ್ವತೀಪುರಂ ರಸ್ತೆಗೆ ತಿರುವು ಪಡೆಯುತ್ತಿರುವುದನ್ನು ವಿಭಾಕರ್ ನೋಡಿದ. ಅಲ್ಲೇ ಆ ರಸ್ತೆಗೆ ತಾಗಿಕೊಂಡೇ ಗೆಳೆಯ ದೇವಾಂಶುನ ಮನೆ. ವಾಹನಗಳು ಸಾಲು ಸಾಲಾಗಿ ಗೆಳೆಯನ ಮನೆಯ ಕಡೆಗೆ ಹೋಗುತ್ತಿದೆಯಲ್ಲ ಎಂದು ಯೋಚಿಸುತ್ತಿದ್ದಂತೆಯೇ ಎಲ್ಲವೂ ಅಲ್ಲಿಯೇ ಹೋ

ಗಿ ನಿಂತ ಹಾಗೆ ಅವನಿಗೆ ದೂರದಿಂದಲೇ ಕಾಣಿಸುತ್ತಿದೆ. ವಿಭಾಕರ್ ಬಂದ ಮೆಸ್ಸೆಜ್ ನೋಡುವುದನ್ನು ಬಿಟ್ಟು ಗೆಳೆಯ ದೇವಾಂಶುಗೆ ಫೋನಾಯಿಸಿದ. ಯಾವಾಗಲೂ ಫೋನ್ ಕಾಲನ್ನು ರಿಸೀವ್ ಮಾಡದೇ ಇದ್ದ ದೇವಾಂಶು ಆ ದಿನ ಮಾತ್ರ ತಕ್ಷಣ ಫೋನ್ ತೆಗೆದ. ‘ಎಲ್ಲಿದ್ದೀಯಾ? ಬೇಗ ಸಿದ್ದಪ್ಪನ ಅಂಗಡಿಯ ಹತ್ತಿರ ಬಾ, ನಿಮ್ಮ ಮನೆಯಲ್ಲಿ ಏನೋ ಆಗಿದೆ, ಜನ್ರೆಲ್ಲ ನಿಮ್ಮ ಮನೆ ಕಡೆ ಹೋಗ್ತಿದ್ದಾರೆ’ ಎಂದ. ಕ್ಷಣಾರ್ಧದಲ್ಲಿ ಪ್ರತ್ಯಕ್ಷನಾದ ದೇವಾಂಶುನ ಜೊತೆಗೆ ವಿಭಾಕರ್ ಮನೆಯ ಹಾದಿ ಹಿಡಿದ. ಬಿರುಸಿನಿಂದ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ಕಾರಿಂದ ಇಳಿದ ಇಬ್ಬರೂ ಒದ್ದೆಯಾಗುತ್ತಾ, ತುಸು ಆತಂಕದಿಂದ ಮುಂದೆ ಮುಂದೆ ಸಾಗಿದರು. ಮನೆಯ ಮುಂದೆ ಜನರು ನೆರೆದಿದ್ದರು. ಮನೆಯ ವರಾಂಡದಲ್ಲಿ ಬಿಳಿ ಬಟ್ಟೆ ಹಾಸಿದಂತೆ ಏನೋ ಕಾಣುತ್ತಿತ್ತು. ಬೇಡ ಬೇಡವೆಂದರೂ ಅಗರಬತ್ತಿ ಸುವಾಸನೆ ದೂರದಿಂದಲೇ ಮೂಗಿಗೆ ಬಂದು ಬಡಿಯುತ್ತಿತ್ತು. ದೇವಾಂಶುನ ತಾಯಿ ಅನಸೂಯಮ್ಮ ನೆಲದಲ್ಲಿ ಮಲಗಿಸಿದ್ದ ವಿದ್ವಾನ್ ಮುರಳೀ ಮನೋಹರ ಶಾಸ್ತ್ರಿಗಳ ತಲೆಯ ಪಕ್ಕದಲ್ಲಿ ಕುಳಿತು ಅಳುತ್ತಿದ್ದಾರೆ. ಶಾಸ್ತ್ರಿಗಳ ತಲೆಯ ತೆಂಗಿನಕಾಯಿಯ ಹಣತೆ. ಮತ್ತೊಂದೆಡೆ ಪದ್ಮಿನೀ ದೇವಿ ಗೋಡೆಗೆ ಒರಗಿದ್ದಾರೆ. ಶೋಕದ ಕಡಲು. ಪರಿಸ್ಥಿತಿಯನ್ನು ಗ್ರಹಿಸಿದ ದೇವಾಂಶು ಹೆಜ್ಜೆ ಮುಂದಿಡಲಾಗದೇ ಅಲ್ಲಿಯೇ ನಿಂತುಬಿಟ್ಟ. ಆತ ಗಾಬರಿಗೊಂಡಿದ್ದ. ಅವನ ಮುಖ ಅವನೊಳಗಿನ ಕಳವಳಕ್ಕೆ ಕನ್ನಡಿಯಾಗಿತ್ತು.
ಬದುಕಿನ ಸಂಜೆಯಲ್ಲಿದ್ದ ಶಾಸ್ತ್ರಿಗಳು ಮಧ್ಯಾಹ್ನ ಅನಸೂಯಮ್ಮ ಬಡಿಸಿದ ಊಟವನ್ನು ಯಾವತ್ತಿನ ಅವರ ಹಸ್ತೋದಕ ಇಲ್ಲದೆ, ಮುಖ ಮೇಲೆತ್ತದೆ ಏನನ್ನೋ ಧ್ಯಾನಿಸುತ್ತಾ ಉಣ್ಣುವ ಶಾಸ್ತ್ರವನ್ನು ಮಾಡಿ ಮುಗಿಸಿದ್ದರು. ಎಂದೂ ತಿನ್ನುವ ಅವರ ಇಷ್ಟದ ವೀಳ್ಯವನ್ನೂ ಆ ಮಧ್ಯಾಹ್ನ ಅವರು ಮೆಲ್ಲಿರಲಿಲ್ಲ. ಹೊಗೆಸೊಪ್ಪು ಅವರಿಗೆ ಕಹಿ ಎನಿಸಿತ್ತು. ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಿರುತ್ತಿದ್ದರೆ ಅವರೊಳಗಿನ ಸಂಕಟ ಗೊತ್ತಾಗುತ್ತಿತ್ತು. ನೀಲಿ ಬಣ್ಣದ ಪುಟ್ಟದಾದ ಆ ದುಂಡಗಿನ ಕಣ್ಣ ಬೊಂಬೆಯಲ್ಲಿ ಮುಗ್ಧ ಮಗುವಿನ ಅಮಾಯಕತೆಯ ನೋಟವಿತ್ತು. ಊಟದ ನಂತರ ನೇರವಾಗಿ ಸಂಗೀತವಾದ್ಯಗಳಿಂದ ತುಂಬಿ ಸದಾ ಸಿಂಗಾರಗೊಂಡಿರುವ ತಮ್ಮ ಇಷ್ಟದ ಕೋಣೆಯನ್ನು ಸೇರಿದ್ದರು. ಸ್ವಲ್ಪ ಹೊತ್ತಿನ ಬಳಿಕ ಅವರ ಇಷ್ಟದ ಕವಿ ಜಯದೇವನ ‘ಗೀತ ಗೋವಿಂದ’ ಕೃತಿಯ ಅಷ್ಟಪದಿಯೊಂದು ಕೇಳಿಸಿತು. `ರಾಧಿಕಾ.. ಕೃಷ್ಣಾ.. ರಾಧಿಕಾ…ತವ ವಿರಹಿ ಕೇಶವಾ…’ ತುಂಬಾ ಹೊತ್ತು ಹಾಡು ಕೇಳುತ್ತಲೇ ಇತ್ತು. ಕಛೇರಿಯಲ್ಲಿ ಯಾವತ್ತೂ ವಾಸಂತಿ ರಾಗದಲ್ಲಿ ಹಾಡುವ ಈ ಅಷ್ಟಪದಿಯನ್ನು ಅಂದು ಕಾನಡ ದರ್ಬಾರಿಯಲ್ಲಿ ಶುರು ಮಾಡಿದ್ದರು. ಮನೆಯಲ್ಲಿ ಒಬ್ಬರೇ ಜೋರಾಗಿ ಎಲ್ಲರಿಗೆ ಕೇಳಿಸುವಂತೆ ಎಂದೂ ಸಂಗೀತ ಅಭ್ಯಾಸ ಮಾಡದ ಶಾಸ್ತ್ರಿಗಳ ಅಂದಿನ ಮೋಹಕ ಮತ್ತು ದೈನ್ಯತೆಯಿಂದ ಕೂಡಿದ ಆ ಧ್ವನಿಯನ್ನು ಕೇಳಿ ಮನೆಯವರಿಗೆ ಆಶ್ಚರ್ಯವೆನಿಸಿತು. ನಿಜಕ್ಕೂ ಆ ಧ್ವನಿಯಲ್ಲಿ ಕಾರುಣ್ಯದ ಪ್ರವಾಹವೇ ಉಕ್ಕಿ ಹರಿದಿತ್ತು. ಪರಮಾತ್ಮನಿಂದ ದೂರವಾದ ಆತ್ಮದ ನಿವೇದನೆ ಇತ್ತು. ಪರಮಾತ್ಮನೆಡೆಗೆ ಜೀವ ಸೇರುವ ತುಡಿತವಿತ್ತು. ನಿಧಾನಕ್ಕೆ ಧ್ವನಿ ತಗ್ಗುತ್ತಾ ಹೋಯಿತು. ಶಾಸ್ತ್ರಿಗಳು ಮಲಗಿದರೆಂದೇ ಮನೆಯವರು ಭಾವಿಸಿದರು. ಸಂಜೆಗತ್ತಲು. ಯಾರು ಮರೆತರೂ ಕೈಹಿಡಿದಾಕೆಗೆ ಮರೆವು ಸಾಧ್ಯವೇ? ಸಂಜೆಯ ಕಾಫಿಗೆಂದು ಅನಸೂಯಮ್ಮ ಕರೆಯುತ್ತಾ ಬಂದರು. ಆಗಲೇ ತಿಳಿದದ್ದು ಗಾನಯೋಗಿ ವಿದ್ವಾನ್ ಮುರಳೀ ಮನೋಹರ ಶಾಸ್ತ್ರಿಗಳು ಶಬ್ದ-ನಾದದ ಅನಂತದಲ್ಲಿ ಲೀನವಾಗಿದ್ದಾರೆಂದು.

ಭಾಗ – ೨

ಮೈಸೂರಿನ ಅರಮನೆಗೆ ಪಕ್ಕದ ಸರಸ್ವತೀಪುರಂಗೆ ಆಂಧ್ರದ ಅನಂತಪುರದಿಂದ ಸರೀ ಮೂವತ್ತು ವರ್ಷಗಳ ಹಿಂದೆ ವಿದ್ವಾನ್ ಮುರಳೀ ಮನೋಹರ ಶಾಸ್ತ್ರಿಗಳು ಸಕುಟುಂಬಿಕರಾಗಿ ಬಂದದ್ದು ಆಕಸ್ಮಿಕ ಅಲ್ಲ. ತನಗೂ ತನ್ನ ಸಂಗೀತಕ್ಕೂ ಏನೇನೂ ಬೆಲೆ ಇಲ್ಲದ ಮತ್ತು ತನ್ನನ್ನು ಕಳ್ಳ, ಭ್ರಷ್ಟ ಎಂದು ಲೋಕಕ್ಕೆ ತೋರಿಸಲು ಪ್ರಯತ್ನಿಸಿದ ಊರಲ್ಲಿ ತಾನಿರಲಾರೆ ಎಂದು ಭೀಷ್ಮ ಪ್ರತಿಜ್ಞೆ ಮಾಡಿ ಹೆಂಡತಿ ಮತ್ತು ನಾಲ್ಕು ಮಕ್ಕಳೊಂದಿಗೆ ಸುಂದರ ನಗರಿ ಮೈಸೂರಿಗೆ ಬಂದಿದ್ದರು. ತಾವು ಪ್ರಾಂಶುಪಾಲರಾಗಿ ದುಡಿಯುತ್ತಿದ್ದ ಸಂಗೀತ ಕಾಲೇಜಿನಲ್ಲಿ ರಾಜಕಾರಣದ ಹಿಡಿತ ಗಟ್ಟಿಯಾಗುತ್ತಿದ್ದುದನ್ನು ಕಂಡು, ಅಲ್ಲೇ ಉಳಿದರೆ ತನ್ನ ಸಂಗೀತ ಮತ್ತು ಕೆಲಸ ಎರಡಕ್ಕೂ ಸಮಸ್ಯೆಯಾದೀತು ಎಂದು ಭಾವಿಸಿ ಶಾಸ್ತ್ರೀಯ ಸಂಗೀತವನ್ನು ಜನರ ಹತ್ತಿರಕ್ಕೆ ತರಲು ಮೈಸೂರೇ ಸೂಕ್ತವಾದ ಜಾಗ ಎಂದು ಶಾಸ್ತ್ರಿಗಳು ಬಂದಿದ್ದರು. ಹಾಗೆಯೇ ತಮ್ಮ ಅಭಿಮಾನಿಯೊಬ್ಬರ ಪ್ರಭಾವದಿಂದ ಮೈಸೂರು ಆಕಾಶವಾಣಿಯಲ್ಲಿ ಮ್ಯೂಸಿಕ್ ಪ್ರೊಡ್ಯೂಸರ್ ಕೆಲಸವನ್ನೂ ಗಿಟ್ಟಿಸಿಕೊಂಡಿದ್ದರು. ಸರಸ್ವತೀಪುರಂ ವಿಶ್ವಪ್ರಸಿದ್ಧವಾದ ಅರಮನೆಗೆ ಪಕ್ಕ ಇದ್ದುದರಿಂದ ಅವರಿಗೆ ಆ ಜಾಗ ಮೊದಲೇ ಇಷ್ಟವಾಗಿತ್ತು. ಅಲ್ಲೇ ಸುಂದರವಾದ ಮನೆಯೂ ಅವರಿಗೆ ಸುಲಭವಾಗಿ ದೊರೆಯಿತು. ಮನೆಯನ್ನು ರಿಪೇರಿ ಮಾಡಿಸುವಾಗ ಬಾಗಿಲುಗಳಲ್ಲಿ ಸಂಗೀತ ವಾದ್ಯಗಳ ಚಿತ್ರಗಳನ್ನು ಕೆತ್ತಿಸಿದ್ದರು. ಮಹಡಿಯ ಕಾರಿಡಾರಿನ ಕಿಟಕಿಗಳ ಗ್ರಿಲ್ಸ್‌ಗಳಲ್ಲೂ ವೀಣೆ, ಪಿಟೀಲು, ಮೃದಂಗಗಳ ಡಿಸೈನ್‌ಗಳೇ.
ಶಾಸ್ತ್ರಿಗಳು ತಮ್ಮ ವಿದ್ಯಾಭ್ಯಾಸದ ಕತೆಯನ್ನು ಸ್ವಾರಸ್ಯಕರವಾಗಿ ವರ್ಣಿಸುತ್ತಿದ್ದರು. ಅವರ ತಂದೆ ಅವರನ್ನು ಶಾಲೆಗೆ ಕರೆದುಕೊಂಡು ಹೋದಾಗ ಶಾಲಾ ಮುಖ್ಯೋಪಾಧ್ಯಾಯರು ಮೊದಲು ಒಂದು ಹಾಡನ್ನು ಹಾಡಿಸಿದ್ದರಂತೆ. ಖುಷಿಯಾದ ಮುಖ್ಯೋಪಾಧ್ಯಾಯರು ನೇರವಾಗಿ ಆರನೇ ತರಗತಿಗೆ ಸೇರಿಸಿ ಬಿಟ್ರಂತೆ. ಪ್ರತೀದಿನದ ಪ್ರಾರ್ಥನೆಗೆ ಅವರದ್ದೇ ಹಾಡು. ಮೊದ ಮೊದಲು ಒಂದು ಹಾಡು. ಬರ ಬರುತ್ತಾ ಒಂದರ ನಂತರ ಮತ್ತೊಂದು, ಮೊಗದೊಂದು ಎಂದು ಮೊದಲ ಪಿರೆಡ್‌ನ ಬೆಲ್ ಆಗುವಲ್ಲಿಯವರೆಗೆ ಹಾಡಿನ ಕಾರ್ಯಕ್ರಮ ನಡೆದು ಬಿಡುತ್ತಿತ್ತು. ಹೇಗೂ ಮೂರು ತಿಂಗಳು ಕಳೆಯಿತು. ಶಾಲೆಯಲ್ಲಿದ್ದ ಮಕ್ಕಳೆಲ್ಲ ಸಂಗೀತದ ಕಡೆಗೆ ಆಕರ್ಷಿತರಾಗುತ್ತಿದ್ದುದನ್ನು ಕಂಡು ಮುಖ್ಯೋಪಾಧ್ಯಾಯರು ಶಾಸ್ತ್ರಿಗಳ ತಂದೆಯನ್ನು ಕರೆಸಿ “ದಯವಿಟ್ಟು ನಿಮ್ಮ ಮಗನನ್ನು ಇಲ್ಲಿಂದ ಕರೆದುಕೊಂಡು ಹೋಗಿ, ಇಲ್ಲವಾದ್ರೆ ಅವನು ಇಲ್ಲಿನ ಎಲ್ಲ ಮಕ್ಕಳನ್ನು ಹಾಳು ಮಾಡ್ತಾನೆ, ಎಲ್ರೂ ಇವನ ಹಾಡನ್ನು ಕೇಳ್ಕೊಂಡು ಖುಷಿಯಾಗಿದ್ದಾರೆ. ಯಾರೂ ಓದೋದಿಲ್ಲ, ಅವನಿಗೆ ಓದಲೇಬೇಕೆಂದು ಅನ್ನಿಸಿದಾಗ ಬರ್ಲಿ. ಅಲ್ಲಿಯವರೆಗೆ ಅವನು ಇಲ್ಲಿಗೆ ಬರೋದು ಬೇಡ” ಅಂದಿದ್ದರಂತೆ. ಅಲ್ಲಿಗೆ ಶಾಸ್ತ್ರಿಗಳ ಶಾಲಾ ಜೀವನ ಕೊನೆಯಾಯಿತು. ಶಾಸ್ತ್ರಿಗಳು ಬದುಕು ಪೂರ್ತಿ ಮಾಡಿದ್ದು ಒಂದೇ ಕೆಲಸ. ಹಾಡಿದ್ದು ಹಾಡಿದ್ದು. ಅವರು ಬೇರೆಲ್ಲ ಮಕ್ಕಳಂತೆ ಆಡಲಿಲ್ಲ, ಓಡಲಿಲ್ಲ, ಚಿತ್ರ ಬಿಡಿಸಲಿಲ್ಲ, ಗೆರೆ ಎಳೆಯಲಿಲ್ಲ. ಗೆಳೆಯರೆಲ್ಲ ಒಟ್ಟಾಗಿ ಸಿನೆಮಾ, ನಾಟಕ, ಚಾರಣ, ಪ್ರವಾಸವೆಂದು ಹೋದವರಲ್ಲ. ಆಡಬೇಕು ಓಡಬೇಕು ಎಂದು ಆಸೆ ಹುಟ್ಟುವ ವೇಳೆಗೆ ಸಂಗೀತದಲ್ಲಿ ಸಾಕಷ್ಟು ಪ್ರಸಿದ್ಧಿ, ಜನಪ್ರಿಯತೆ ಬಂದಿದ್ದರಿಂದ ಅವರಿಗೆ ಖಾಸಗಿತನ ಇರಲಿಲ್ಲ. ಹೊರಗೆ ಹೋದರೆ ಸಾಕು ಜನರು ಮುಗಿ ಬೀಳುತ್ತಿದ್ದರು.
ಅನಂತಪುರವನ್ನು ಬಿಟ್ಟು ಮೈಸೂರು ಆಕಾಶವಾಣಿ ಕಲಾವಿದರಾದ ಶಾಸ್ತ್ರಿಗಳಿಗೆ ಅವರ ಕನಸಿನ ಆರಂಭ ಇಲ್ಲಿ ಸಿಕ್ಕಿತು. ಅದಕ್ಕೆ ಕಾರಣ ವಿಭಾಕರ್ ಎಂಬ ಅವರ ವಯಸ್ಸಿಗಿಂತ ಅರ್ಧದಷ್ಟು ವಯಸ್ಸಿನ ಸ್ಥಳೀಯ ಯುವಕ. ಶಾಸ್ತ್ರಿಗಳು ಮೈಸೂರಿಗೆ ಬಂದು ಕೆಲ ಸಮಯದ ಬಳಿಕ ಸಿಕ್ಕ ವಿಭಾಕರ್ ಕಲೆ-ಸಂಗೀತ-ಸಾಹಿತ್ಯ ಎಂದು ಅಲ್ಲಿಲ್ಲಿ ಓಡಾಡುತ್ತಿದ್ದ. ಈ ಯುವಕನಿಗೆ ಹೇಳಿಕೊಳ್ಳುವಂಥಾ ಕೆಲಸ ಇರಲಿಲ್ಲ. ಆಂಧ್ರದ ಆದವಾನಿ ತಾಲೂಕಿನಲ್ಲಿ ಈ ವಿಭಾಕರನ ದೂರದ ಸಂಬಂಧಿ ಸೂರ್ಯನಾರಾಯಣ ಉಪಾಧ್ಯಾಯ ಎಂಬವರು ಅಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕೆಲಸದಲ್ಲಿದ್ದರು. ಶಾಸ್ತ್ರಿಗಳು ಅಲ್ಲಿ ಕಾಲೇಜಿನ ಪ್ರಾಂಶುಪಾಲರಾಗಿದ್ದಾಗ ಆದ ಈ ಸೂರ್ಯನಾರಾಯಣ ಉಪಾಧ್ಯಾಯರ ಸ್ನೇಹದಿಂದ ಮೈಸೂರಲ್ಲಿ ವಿಭಾಕರ್ ಜೊತೆಗಿನ ಪರಿಚಯ, ಒಡನಾಟ ಸುಲಭವಾಯಿತು. ಸಂಗೀತ-ಸಾಹಿತ್ಯ ಕಲೆಗೆ ಅಪಾರ ಪ್ರೋತ್ಸಾಹ ನೀಡುತ್ತಿದ್ದ ಮೈಸೂರು ಅರಸರ ಬಗ್ಗೆ ಶಾಸ್ತ್ರಿಗಳಿಗೆ ವಿಶೇಷ ಗೌರವ. ಅಂಥಾ ಈ ಊರಲ್ಲಿ ತಮ್ಮ ವಾಸದ ಬಗ್ಗೆ ಯೋಚಿಸುವಾಗೆಲ್ಲ ಅವರಿಗೆ ಒಂದು ಬಗೆಯ ರೋಮಾಂಚನ. ಅದಕ್ಕೆ ತಕ್ಕಂತೆ ವಿಭಾಕರನ ಸ್ನೇಹ. ವಿಭಾಕರ್ ಶಾಸ್ತ್ರಿಗಳ ಸಂಗೀತದ ಬಗ್ಗೆ ಸಾಕಷ್ಟು ಪ್ರಚಾರ ನೀಡಿದ್ದ. ವಿಭಾಕರ್‌ನಿಂದಾಗಿ ಮೈಸೂರಲ್ಲಿ ಮದುವೆ, ಮುಂಜಿ, ಹುಟ್ಟುಹಬ್ಬ, ಧಾರ್ಮಿಕ, ಸಾಂಸ್ಕೃತಿಕ ಸಮಾರಂಭ ಎಂದು ಒಂದೂ ಬಿಡದೆ ಎಲ್ಲೆಡೆ ಶಾಸ್ತ್ರಿಗಳ ಕಛೇರಿಗಳೇ. ದೇವಸ್ಥಾನಗಳ ನಾಲ್ಕು ಗೋಡೆಗಳ ಮಧ್ಯದಲ್ಲಿದ್ದ ಶಾಸ್ತ್ರೀಯ ಸಂಗೀತ ಶಾಸ್ತ್ರಿಗಳ ದೆಸೆಯಿಂದ ಊರು ಊರಿಗೆ ತಲುಪುವಂತಾಯಿತು. ಅಲ್ಲಿಯವರೆಗೆ ಶಾಸ್ತ್ರೀಯ ಸಂಗೀತವೆಂದರೆ ನಮಗೆ ಅರ್ಥವಾಗದ್ದು ಎಂದು ಮೂಗು ಮುರಿಯುತ್ತಿದ್ದ ಸಾಮಾನ್ಯ ಪ್ರೇಕ್ಷಕರು ಶಾಸ್ತ್ರಿಗಳ ಹಾಡುವ ಶೈಲಿ ಮತ್ತು ಅವರ ಕಂಚಿನ ಕಂಠಕ್ಕೆ ಮನಸೋತಿದ್ದರು. ಆ ಕಾಲಕ್ಕೆಲ್ಲ ಕಷ್ಟದಲ್ಲಿ ಐವತ್ತು ಜನ ಸೇರುತ್ತಿದ್ದ ಕಛೇರಿಗೆ ಶಾಸ್ತ್ರಿಗಳ ಆಗಮನದ ಬಳಿಕ ಸಾವಿರಕ್ಕಿಂತಲೂ ಹೆಚ್ಚು ಪ್ರೇಕ್ಷಕರು ಕೂಡುತ್ತಿದ್ದರು. ಶಾಸ್ತ್ರಿಗಳು `ನಗುಮೊಮು ಘನಲೇನಿ..’ ಆದಿತಾಳದಲ್ಲಿ, ಅಭೇರಿ ರಾಗದಲ್ಲಿ ಹಾಡಿದರೆಂದರೆ ಅಲ್ಲಿ ಜನಸಾಗರವೇ. ಪುರಂದರದಾಸ ಮತ್ತು ಕನಕದಾಸರ ಕೀರ್ತನೆಗಳಿಗೆ ವಿಶಿಷ್ಟ ರಾಗ-ಭಾವದ ಸ್ಪರ್ಶವನ್ನು ಅವರು ನೀಡಿದ್ದರು. ಸಾಹಿತ್ಯವನ್ನು ಶಾಸ್ತ್ರಿಗಳು ಮೃದುಗೊಳಿಸಿ ಭಾವಸ್ಫುರಣ ಮಾಡುವ ಬಗೆಯೇ ಹಾಗೆ. ರಾಗದ ಆರೋಹಣ ಅವರೋಹಣದ ನಿಖರತೆ, ಸಂಗೀತದ ಸಂಗತಿಗಳನ್ನು ತಲುಪುವ ಬಗೆ, ತಾಳ ಸ್ಪಷ್ಟತೆ, ಲಯ ಜ್ಞಾನದಲ್ಲಿ ಅವರಿಗೆ ಸರಿಸಮಾನರಾಗಿ ನಿಲ್ಲುವವರು ಅವರ ಸಮಕಾಲೀನರಲ್ಲಿ ಕೆಲವರು ಮಾತ್ರ ಇದ್ದರು. ಶಾಲೆಯ ಶಿಕ್ಷಣ ದೊರೆಯದಿದ್ದರೂ ಸ್ವಂತವಾಗಿ ಅಕ್ಷರಾಭ್ಯಾಸ ಮಾಡಿ ಸಂಸ್ಕೃತ ಭಾಷೆಯಲ್ಲಿರುವ ಸಂಗೀತಕ್ಕೆ ಸಂಬಂಧಿಸಿದ ಕೃತಿಗಳ ಓದು, ತ್ಯಾಗರಾಜರ ಪಂಚರತ್ನ ಕೃತಿ, ಮುತ್ತುಸ್ವಾಮಿ ದೀಕ್ಷಿತರ ನವಗ್ರಹ ಕೃತಿಗಳನ್ನು ಅಭ್ಯಾಸ ಮಾಡಿದ್ದರಿಂದ ಸಂಗೀತದಲ್ಲಿ ಜೀನಿಯಸ್ ಆಗಿ ಮೆರೆದರು. ಯಶಸ್ಸಿನ ಉತ್ತುಂಗಕ್ಕೆ ಏರಿದರು, ಅಭಿಮಾನಿಗಳ ಕಣ್ಮಣಿಯಾದರು. ಶಾಸ್ತ್ರಿಗಳು ಜನರನ್ನು, ಜಗತ್ತನ್ನು ಗೆದ್ದರು.
ಶಾಸ್ತ್ರಿಗಳಿಗೆ ಎಂದೂ ಒಬ್ಬರೇ ದೂರ ಹೋಗಿ ಪ್ರಶಾಂತವಾದ ವಾತಾವರಣದಲ್ಲಿ ಕುಳಿತು ತಮ್ಮ ಸಂತೋಷಕ್ಕಾಗಿ, ಆತ್ಮತೃಪ್ತಿಗಾಗಿ ಹಾಡಿ ಗೊತ್ತಿಲ್ಲ. ಅವರು ‘ಜನರೊಡನೆ ನಾನಿರಬೇಕು, ನನ್ನೊಡನೆ ಜನರಿರಬೇಕು. ಅವರಿಗಾಗಿ ನಾನು ಹಾಡಬೇಕು, ಜನರಿಗಾಗಿ ಹಾಡಿದಾಗ ಅದು ನನಗಾಗಿ ಹಾಡಿದಂತೆ.’ ಎನ್ನುತ್ತಿದ್ದರು. ಯಾವುದೇ ಸಂಯೋಜನೆಯನ್ನು ಕ್ಷಣ ಮಾತ್ರದಲ್ಲಿ ಗ್ರಹಿಸುತ್ತಿದ್ದ ಅವರು, ‘ಜೊತೆ ಸೇರಿ ಅಭ್ಯಾಸ ಮಾಡದೆ, ಆ ಕ್ಷಣಕ್ಕೆ ಮನಸ್ಸಿಗೆ ತೋಚಿದ್ದನ್ನು ಆಶು ರೀತಿಯಲ್ಲೇ ಪ್ರಸ್ತುತಿಗೊಳಿಸಿವುದರಲ್ಲೇ ನಿಜ ಜುಗಲ್ಬಂದಿಯ ಸುಖ ಇರುವುದು’ ಎಂದು ರಿಹರ್ಸಲ್ ಇಲ್ಲದ ತಮ್ಮ ಜುಗುಲ್ಬಂದಿಯ ಬಗ್ಗೆ ತನ್ಮಯತೆಯಿಂದ ಹೇಳುತ್ತಿದ್ದರು. ಹಿಂದೂಸ್ತಾನಿ ಕಲಾವಿದರೊಂದಿಗೆ ಕಛೇರಿ ನಡೆಸಿದ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು ಅವರೊಬ್ಬರೆಂದೇ ಹೆಸರಾಗಿದ್ದರು. ಕಛೇರಿಯಲ್ಲಿ ಸಹಕಲಾವಿದರ ಶ್ರುತಿ ಬೇರೆಯಾದರೆ ಅವರು ಕೋಪಿಸುತ್ತಿರಲಿಲ್ಲ. ನಗುಮೊಗದಿಂದಲೇ ಇರುತ್ತಿದ್ದರು. ಕೋಪಗೊಂಡು ಎಂದೂ ಅರ್ಧದಲ್ಲೇ ಹಾಡು ನಿಲ್ಲಿಸಿ ಹೊರ ನಡೆದವರಲ್ಲ. ಹಿರೀ ಕಲಾವಿದರಿಂದ ತೊಡಗಿ ಮೊನ್ನೆ ಮೊನ್ನೆ ವಾದ್ಯ ನುಡಿಸಲು ಕಲಿತ ಯುವ ವಾದಕರೊಂದಿಗೆ ಕಛೇರಿ ಮಾಡಿದವರು. ಹೀಗಾಗಿ ಅವರೊಬ್ಬ ಬಹಳ ಫ್ಲೆಕ್ಸಿಬುಲ್ ಸಂಗೀತಗಾರರೆಂದು ಉದಯೋನ್ಮುಖ ಕಲಾವಿದರು ಅವರಿಗೆ ಅಪಾರ ಗೌರವ ನೀಡುತ್ತಿದ್ದರು.
ತಮ್ಮ ಸಾಹಿತ್ಯ, ರಾಗ, ಸಂಯೋಜನೆಗಳ ಬಗ್ಗೆ ಶಾಸ್ತ್ರಿಗಳಿಗೆ ಅಭಿಮಾನ ತುಸು ಹೆಚ್ಚೇ. ಕೆಲವೊಮ್ಮೆ ಕೇಳುಗರಿಗೆ ಅದು ಅಹಂಕಾರದ ಮಾತು ಅಂತ ಅನ್ನಿಸಿದ್ದುಂಟು. ‘ನಿಮ್ಮ ಸಂಯೋಜನೆಯ ಹಾಡುಗಳಲ್ಲಿ ನಿಮಗೆ ಯಾವುದು ಹೆಚ್ಚು ಇಷ್ಟ?’ ಎಂಬ ಪ್ರಶ್ನೆಯನ್ನು ಸಂದರ್ಶಕರೊಬ್ಬರು ಕೇಳಿದಾಗ ‘ನಮ್ಮ ಸ್ವಂತ ಮಕ್ಕಳಲ್ಲಿ ನಮಗೆ ಯಾರು ಇಷ್ಟ ಎಂಬ ಪ್ರಶ್ನೆ ಇದೆಯೇ?’ ಅನ್ನುತ್ತಾರೆ. ಸಂಗೀತ ಲೋಕದಲ್ಲಿ ಶಾಸ್ತ್ರಿಗಳ ಜನಪ್ರಿಯತೆ ಮತ್ತು ಅವರು ತಂದ ಕಂಪನದಿಂದಾಗಿ ಅವರ ಸುತ್ತ ಶತ್ರುಗಳೂ ಬೆಳೆದರು. ಕೆಲವೊಮ್ಮೆ ಅವರಾಡುತ್ತಿದ್ದ ಮಾತುಗಳೂ ಅದಕ್ಕೆ ಕಾರಣವಾಗಿದ್ದವು. ದೆಹಲಿ ದೂರದರ್ಶನ ವಾಹಿನಿಯಲ್ಲಿ ನಡೆದ ಸಂದರ್ಶನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೂ ಕರ್ನಾಟಕ ಭಾಷಿಕ ಪ್ರದೇಶಕ್ಕೂ ಸಂಬಂಧವಿಲ್ಲ, ಕಿವಿಗೆ ಇಂಪಾಗಿ ಕೇಳುವ ಸಂಗೀತವೆಲ್ಲವೂ ಕರ್ಣಾಟಕ ಸಂಗೀತ ಅಂದರು. `ಕರ್ಣೇಷು ಅಟತಿ ಇತಿ ಕರ್ಣಾಟಿಕ್ ಮ್ಯೂಸಿಕ್, ಕರ್ನಾಟಕದವರು ಪುರಂದರದಾಸರು ಕರ್ನಾಟಕ ಸಂಗೀತಕ್ಕೆ ಕೊಡುಗೆ ನೀಡಿದ್ದಾರೆ, ಹಾಗಾಗಿ ಕರ್ನಾಟಕ ಸಂಗೀತ ಎಂದಾಗಿದೆ ಎಂದು ಭಾವಿಸಿದ್ದಾರೆ. ಆದರೆ ಪುರಂದರದಾಸರಿಗಿಂತ ಮೊದಲೂ ಸಂಗೀತ ಇತ್ತು, ಆಗಲೂ ಅದು ಕರ್ನಾಟಿಕ್ ಮ್ಯೂಸಿಕ್ ಆಗಿತ್ತು’. ಇದು ವಿವಾದಕ್ಕೆ ಎಡೆಮಾಡಿಕೊಟ್ಟಿತು. ಅಲ್ಲಿಯವರೆಗೆ ಕರ್ನಾಟಕಕ್ಕೂ ಕರ್ನಾಟಕ ಸಂಗೀತಕ್ಕೂ ಸಂಬಂಧವಿದೆ ಎಂದು ಭಾವಿಸಿದ್ದ ಕರ್ನಾಟಕದ ಸಂಗೀತ ವಿದ್ವಾಂಸರಿಗೆ ಇದನ್ನು ಅಷ್ಟು ಬೇಗನೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ‘ಆಂಧ್ರದಿಂದ ಬಂದ ಇವನಿಗೆ ನಮ್ಮ ಸಂಗೀತದ ಬಗ್ಗೆ ಏನು ಗೊತ್ತು’ ಎಂದು ಮೈಸೂರಿನ ಸಂಗೀತ ವಿದ್ವಾನ್‌ಗಳು ಪ್ರದೇಶ, ಭಾಷೆಯ ಕಿಚ್ಚು ಹಚ್ಚಿದರು.
ಹಿಂದೆಲ್ಲ ಸಾರ್ವಜನಿಕರಿಗಾಗಿ ಸಂಗೀತ ಕಛೇರಿ ಅಂತ ಇರಲಿಲ್ಲ. ಒಂದು ಕಾಲಕ್ಕೆ ಸಂಗೀತ ವಿದ್ವಾನ್‌ಗಳು ಸಂಗೀತದ ಬಗ್ಗೆ ಕೆಲವೊಂದು ವಿಚಾರಗಳನ್ನು ಗಮನಿಸುವುದು, ಬರೆದಿಡುವುದು, ಅಧ್ಯಯನ ಮಾಡುವುದು, ಕಲಿಯುವುದು, ಮುಂದಿನ ಅವರ ಶಿಷ್ಯಂದಿರಿಗೆ ಹೇಳಿಕೊಡುವುದು ಇವಿಷ್ಟನ್ನು ಮಾತ್ರ ಮಾಡುತ್ತಿದ್ದರು. ಮಹಾರಾಜರ ಕಾಲದಲ್ಲಿ ದರ್ಬಾರ್ ನಡೆಯುತ್ತಿದ್ದ ಸಂದರ್ಭದಲ್ಲಿ ಅರಮನೆಗೆ ಸಂಬಂಧಿಸಿದ ಕೆಲವೇ ಮುಖ್ಯ ಜನರ ಮುಂದೆ ಆಸ್ಥಾನ ಸಂಗೀತಗಾರರಿಂದ ಕಛೇರಿ ನಡೆಯುತ್ತಿತ್ತು. ಸಾರ್ವಜನಿಕ ಸಂಗೀತ ಕಛೇರಿ ಇತ್ತೀಚಿನದ್ದು. ಹತ್ತೊಂಬತ್ತನೆಯ ಶತಮಾನದ ಶಾಸ್ತ್ರೀಯ ಸಂಗೀತ ಗಾಯಕ ಅರಿಯಕುಡಿ ರಾಮಾನುಜ ಅಯ್ಯಂಗಾರ್ ಅವರು ಆಧುನಿಕ ಶಾಸ್ತ್ರೀಯ ಸಂಗೀತ ಕಛೇರಿ ಪರಂಪರೆಯನ್ನು ಹುಟ್ಟುಹಾಕಿದರು. ಅವರ ಬಳಿಕ ಮಹಿಳಾ ಕಲಾವಿದೆ ಎಂ ಎಲ್ ವಸಂತ ಕುಮಾರಿ ಮತ್ತು ಡಿ ಕೆ ಪಟ್ಟಮ್ಮಾಳ್ ಮೊದಲಾದವರು ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಸಂಸ್ಕೃತಿಯನ್ನು ಬೆಳೆಸಿದರು. ಇವರಿಂದ ತೊಡಗಿದ ಕಛೇರಿಗಳಲ್ಲಿ ಪಾಲಿಸಿಕೊಂಡು ಬಂದ ಪದ್ಧತಿ ಎಂದರೆ ವರ್ಣಂ ಮೊದಲು ಹಾಡಿ ಬಳಿಕ ಗಣಪತಿ ಹಾಡು ಕೊನೆಗೆ ತಿಲ್ಲಾನ, ಮಂಗಳ ಪದ್ಯದ ಮೂಲಕ ಮುಕ್ತಾಯ ಮಾಡುವ ಕ್ರಮ. ಶಾಸ್ತ್ರಿಗಳು ಈ ಕ್ರಮವನ್ನೂ ಬದಲಿಸಿದರು. ಕೆಲವೊಮ್ಮೆ ನಡು ನಡುವೆ ಮತ್ತು ಮಂಗಳದಲ್ಲೂ ಗಣಪತಿ ಸ್ತುತಿಯನ್ನು ತರುತ್ತಿದ್ದರು. ತಿಲ್ಲಾನವನ್ನೂ ಹಿಂದಿನವರಿಗಿಂತ ವಿಭಿನ್ನವಾಗಿ ಹಾಡುತ್ತಿದ್ದರು. ಸೃಜನಶೀಲ ಕಾವ್ಯಾತ್ಮಕ ಅಂಶಗಳನ್ನು ಸೇರಿಸಿ ವೇಗದ ಗತಿಯಲ್ಲಿ ಅವರು ಹಾಡಿ ತೋರಿಸಿದ್ದರು. ಇದು ಭಾರೀ ಹೆಸರು ಮಾಡಿತ್ತು.
ಸ್ವರಗಳನ್ನು ವಿಭಿನ್ನವಾಗಿ ಹಾಡುವ ಬಗ್ಗೆ ಅವರಲ್ಲಿ ಕೇಳಿದರೆ ‘ಯಾವುದೇ ಸ್ವರ, ಸಂಯೋಜನೆ ಅಥವಾ ರಾಗಗಳನ್ನು ಹಾಡುವಾಗ ನನ್ನ ಮುಂದೆ ಒಂದು ಚಿತ್ರಣ ಇರುತ್ತೆ. ಅಂದ್ರೆ ಒಂದು ಸಂಯೋಜನೆಯನ್ನು ವ್ಯಕ್ತಿಯಾಗಿ ಚಿತ್ರಿಸಿ ವ್ಯಕ್ತಿಯ ಬಹಿರಂಗದಲ್ಲಿ ಕಾಣುವ ವೈವಿಧ್ಯಮಯವಾದ ಅಲಂಕಾರವನ್ನು ಮನಸ್ಸಿಗೆ ತಂದು ಹಾಡಬೇಕು. ಹೊರತು ಅವುಗಳ ಸ್ವರ ಸ್ಥಾನ, ಆರೋಹಣ, ಅವರೋಹಣ ಛಂದಸ್ಸಿನ ಬಗ್ಗೆ ಗಮನ ಕೊಟ್ಟು ಹಾಡಿದ್ರೆ ಹಾಡಿಗೆ ಜೀವಚೈತನ್ಯ ಇರುವುದಿಲ್ಲ’ ಎಂದು ಹೇಳುತ್ತಾರೆ. ಸಂಗೀತದಲ್ಲಿ ಬಹಳ ಹಿಂದಿನಿಂದ ಕನಿಷ್ಠ ಐದು ಸ್ವರಗಳನ್ನು ಬಳಸಿಕೊಂಡು ರಾಗ ರಚನೆಯಾಗಿತ್ತು. ಶಾಸ್ತ್ರಿಗಳು ವೇದಗಳಲ್ಲಿ ಮೂರು, ನಾಲ್ಕು ಸ್ವರಗಳು ಬಳಕೆಯಾದುದನ್ನು ಗಮನಿಸಿ ಮೂರು, ನಾಲ್ಕು ಸ್ವರಗಳನ್ನು ಬಳಸಿ ಕೆಲವೊಂದು ರಾಗಗಳನ್ನು ಸೃಷ್ಟಿಸಿದರು. ಆ ರಾಗಗಳನ್ನು ಕಛೇರಿಗಳಲ್ಲಿ ತಾವೇ ಸ್ವತಃ ಹಾಡುತ್ತಾ ಬಂದರು. ಈ ರಾಗಗಳೆಲ್ಲ ಹೊಸತಾದರೂ ಬಹಳ ಜನಪ್ರಿಯತೆ, ಪ್ರಸಿದ್ಧಿಯನ್ನೂ ಪಡೆದವು. ಶಾಸ್ತ್ರಿಗಳು ಯಾವುದೋ ಒಂದು ಸಂದರ್ಶನದಲ್ಲಿ ತಮ್ಮನ್ನು ತಾವು ಕವಿ, ವಾಗ್ಗೇಯಕಾರ ಮತ್ತು ರಾಗಕರ್ತ ಎಂದಿದ್ದರು. ಇದು ಮೈಸೂರಿನ ಪ್ರಸಿದ್ಧ ಸಂಗೀತ ವಿದ್ವಾಂಸರಾದ ವಿದ್ವಾನ್ ವಾಸುದೇವ ಅಯ್ಯರ್, ತಿರುವೆಂಕಟಾಚಲ ಶಾಸ್ತ್ರಿಗಳು ಮತ್ತು ಪಂಡಿತ್ ಭೀಮ್ ಶಂಕರ್ ಪಾಟಾಳಿಯಾ ಇವರಿಗೆಲ್ಲ ಸಿಕ್ಕಾಪಟ್ಟೆ ಕೋಪ ತರಿಸಿತ್ತು. ಈಗಾಗಲೇ ಬೇಕಾದಷ್ಟು ರಾಗಗಳು ಸ್ವತ: ಸಿದ್ಧವಾಗಿರುವಾಗ ಇಂಥಾ ಹೊಸ ರಾಗಗಳ ಸೃಷ್ಟಿ ಯಾಕೆ? ಒಬ್ಬ ಸಾಮಾನ್ಯ ಗಾಯಕ ತನ್ನನ್ನು ತಾನು ಸೃಷ್ಟಿಕರ್ತ ಅಂತ ಸಾರ್ವಜನಿಕವಾಗಿ ಹೇಳಲು ಹೇಗೆ ಸಾಧ್ಯ? ಎಂಬುದು ಈ ಪರಂಪರಾವಾದಿಗಳ ಪ್ರಶ್ನೆಯಾಗಿತ್ತು. ಇವರೆಲ್ಲ ಬೆಂಗಳೂರಲ್ಲಿ ಸೇರಿ ಶಾಸ್ತ್ರಿಗಳ ವಿರುದ್ಧ ಒಂದು ಠರಾವು ಹೇರಲು ನಿರ್ಧರಿಸಿಯೇ ಬಿಟ್ಟರು. ಮುಂದಕ್ಕೆ ಶಾಸ್ತ್ರಿಗಳನ್ನು ಯಾವ ಕಛೇರಿಗೂ ಸೇರಿಸಬಾರದು, ಅವರನ್ನು ಎಲ್ಲ ಕಾರ್ಯಕ್ರಮಗಳಿಂದ ಹೊರಗಿಡಬೇಕೆಂಬುದಾಗಿ. ಇದು ಎಲ್ಲ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಕೊನೆಗೆ ಶಾಸ್ತ್ರಿಗಳು ಕೋರ್ಟ್ ಮೆಟ್ಟಿಲೇರಬೇಕಾಯಿತು. ಅಲ್ಲಿ ನ್ಯಾಯಾಧೀಶರ ಮುಂದೆ ಒಂದು ಸ್ವಾರಸ್ಯಕರ ಸನ್ನಿವೇಶ ಜರುಗಿತ್ತು. ಹಿರಿಯ ಪರಂಪರಾವಾದಿಗಳ ಆಕ್ಷೇಪವೊಂದೇ. ರಾಗಗಳ ಸೃಷ್ಟಿಕರ್ತ ಎಂದು ಶಾಸ್ತ್ರಿಗಳು ಹೇಳಬಾರದಿತ್ತು ಎಂಬುದಾಗಿ. ಅದಕ್ಕೆ ಶಾಸ್ತ್ರಿಗಳು ಕೇಳಿದ ಪ್ರಶ್ನೆ ‘ನಿಮಗೆ ಮಕ್ಕಳಿದ್ದಾರಲ್ಲ. ಅವರನ್ನು ನೀವು ಹುಟ್ಟಿಸಿದ್ದೇ ಅಥವಾ ಬ್ರಹ್ಮ ನಿಮ್ಮ ಹೆಂಡತಿಯ ಬಳಿಗೆ ಬಂದು ಹುಟ್ಟಿಸಿದ್ದೇ?’. ಇಡೀ ಕೋರ್ಟ್ ಗೊಳ್ಳೆಂದು ನಕ್ಕು, ಬಳಿಕ ಪ್ರಕರಣ ರಾಜಿಯಲ್ಲಿ ಮುಕ್ತಾಯವಾಯಿತು. ಶಾಸ್ತ್ರಿಗಳ ಒಂದು ಗುಣವೆಂದರೆ ಏನಾದರೂ ಕೈಗೆತ್ತಿಕೊಂಡರೆ ಅದರಲ್ಲಿ ತೀವ್ರವಾಗಿ ತೊಡಗುವುದು, ಅದನ್ನು ಜನರ ಹತ್ತಿರಕ್ಕೆ ಕೊಂಡೊಯ್ಯುವುದು. ಉಳಿದವರು ಅಸೂಯೆ ಪಡುವಂತೆ ಮಾಡುವುದು. ಹಾಗಾಗಿ ಸಂಗೀತ ಲೋಕದ ಜೊತೆಗಿನ ಅವರ ತಾತ್ತ್ವಿಕ ಜಗಳ ಅಲ್ಲಿಗೇ ಮುಗಿದಿರಲಿಲ್ಲ. ಚಂದ್ರಚೂಡಾ ಪಂತುಲು ಎಂಬ ಮೈಸೂರಿನ ಸಂಗೀತ ವಿಮರ್ಶಕ ಶಾಸ್ತ್ರಿಗಳ ಕಟು ವಿಮರ್ಶಕರಾಗಿದ್ದರು. ಶಾಸ್ತ್ರಿಗಳ ವಯಸ್ಸಾದ ಕಾಲಕ್ಕೆ ಎದುರಾಳಿಯಾಗಿ ಬಂದವರು ಈ ಪಂತುಲು.
ಪ್ರತೀ ಸಂದರ್ಶನಕ್ಕೆ ತುಂಬಾ ಇಷ್ಟಪಟ್ಟು ಸಂತೋಷದಿಂದ ಬರುತ್ತಿದ್ದ ಶಾಸ್ತ್ರಿಗಳು ಯಾವತ್ತೂ ತನ್ನ ಮಾತುಗಳು ನಾಳೆ ವಿವಾದವಾಗಬಹುದು ಎಂದು ತುಂಬಾ ಎಚ್ಚರ ವಹಿಸಿ ಮಾತನಾಡಿದವರಲ್ಲ. ಕೇಳಿದ ಪ್ರಶ್ನೆಗಳಿಗೆ ತಮ್ಮ ಪ್ರಾಮಾಣಿಕ ಅನ್ನಿಸಿಕೆಗಳನ್ನು ಹೇಳುತ್ತಿದ್ದರು. ಒಮ್ಮೆ ಚಂದನ ದೂರದರ್ಶನದಲ್ಲಿ ಸಂದರ್ಶಕ ರಂಗನ್ ಭಾರದ್ವಾಜ್ ಕೇಳಿದ ಪ್ರಶ್ನೆ ‘ಬೇರೆಯವರ ಶಾಸ್ತ್ರೀಯ ಸಂಗೀತ ಕೇಳುವಾಗ ಕೆಲವೊಮ್ಮೆ ಬೋರಾಗುತ್ತೆ. ಆದ್ರೆ ನಿಮ್ಮನ್ನು ಕೇಳುವಾಗ ಬೇರೆಯದಾಗಿ ಕೇಳುತ್ತೆ. ಅಲ್ಲೊಂದು ವೈಭವ ಇದೆ. ಇದು ಹೇಗೆ ಸಾಧ್ಯ? ನೀವು ಸಂಗೀತಕ್ಕೆ ತೊಡಗುವಾಗ ನಿಮ್ಮ ಯೋಚನೆಗಳೇನಿರುತ್ತವೆ? ನಿಮ್ಮ ಸಂಗೀತ ಯಾರಿಗಾಗಿ?’
ನನ್ನ ಸಂಗೀತ ಪ್ರೇಕ್ಷಕರಿಗಾಗಿ. ಅವರಲ್ಲಿ ಹಲವು ಬಗೆಯ ಜನರಿದ್ದಾರೆ. ಕೆಲವರು ರಿಲ್ಯಾಕ್ಸ್ ಮಾಡಲು ಬರುತ್ತಾರೆ, ಸಂತೋಷ ಪಡಲು ಬರುತ್ತಾರೆ, ಹೊಸತನ್ನು ಬಯಸಿ ಬರುವವರು ಇದ್ದಾರೆ, ಪದ್ಯದ ಅರ್ಥವನ್ನು ಅರ್ಥಮಾಡಿ ಅನುಭವಿಸಲು ಬರುತ್ತಾರೆ. ಅವರಿಗಾಗಿ ಹಾಡುವ ನಾನು ಅವರಿಗೆ ಏನು ಇಷ್ಟವೋ ಅದನ್ನೇ ಹಾಡಬೇಕು. ನಾನು ಗಮಕ, ರಾಗ, ಸ್ವರ ಪ್ರಸ್ತಾರ, ಛಂದಸ್ಸಿಗೆ ಮಹತ್ವ ಕೊಡದೆ ಅರ್ಥಕ್ಕೆ ಮಹತ್ವ ಕೊಡುತ್ತೇನೆ. ಇದರಿಂದ ಅವರು ಹಾಡಿನ ಅರ್ಥವನ್ನು ಅರ್ಥ ಮಾಡಿಕೊಳ್ಳುವಂತಾಯಿತು. ಒಂದಂತೂ ನಿಜ. ನಾನು ಹಾಡುವುದನ್ನು ಪ್ರೇಕ್ಷಕರು ಕೇಳುವ ಹಾಗೆ ಮಾಡಿದೆ. ತ್ಯಾಗರಾಜರ `ನಗುಮೊಮು..’ ಕೀರ್ತನೆಯನ್ನೇ ನೋಡಿ. ‘ನಾನು ನಿನ್ನ ನಗುಮುಖವನ್ನು ನೋಡಲು ಶಕ್ತನಲ್ಲ, ಯಾಕೆಂದರೆ ನನಗೆ ಮುಪ್ಪು ಬಂದಿದೆ. ಕಣ್ಣು ಮಂಜಾಗಿದೆ. ನೀನೇ ಏಕೆ ನನ್ನ ಬಳಿ ಸಾರಬಾರದು’ ಎಂಬ ಅರ್ಥ ಇರುವ ಆ ಹಾಡನ್ನು ನಾನು ಹಾಡುವಾಗ ನನ್ಗೆ ಆ ಅರ್ಥ ತಿಳಿದಿರಬೇಕು. ಅರ್ಥ ಆಗುವ ಹಾಗೆ ಸಾಹಿತ್ಯವನ್ನು ಉಚ್ಛರಿಸಿ, ಆ ಭಾವ ವ್ಯಕ್ತ ಆಗುವ ಹಾಗೆ ಹಾಡಿದ್ರೆ ಮಾತ್ರ ಜನರಿಗೆ ಅರ್ಥ ಆಗಲು ಸಾಧ್ಯ. ಅನಗತ್ಯ ಸಂಗತಿಗಳು, ರಾಗಾಲಾಪ, ಸ್ವರಕಲ್ಪನೆ ಬೇಡ. ಸಂಗೀತಗಾರನಿಗೆ ಈ ಪ್ರಜ್ಞೆ ಇದ್ರೆ ಆತ ಯಾವುದೇ ಭಾಷೆಯಲ್ಲಿ ಹಾಡಿದರೂ ಜನರಿಗೆ ಅರ್ಥ ಆಗುತ್ತೆ. ತಮಿಳುನಾಡಿನವರು ತೆಲುಗನ್ನು ಕೇಳ್ತಾರೆ. ಕನ್ನಡದವರು ಮಲಯಾಳಂನ್ನು ಕೇಳ್ತಾರೆ ರಭಸದಿಂದ ಎಂದ ಅವರಿಗೆ ರಂಗನ್ ಮತ್ತೊಂದು ಪ್ರಶ್ನೆ ಹಾಕಿದರು.
‘ಕಲೆ ಮತ್ತು ಕಲಾವಿದ ಇವೆರಡನ್ನು ನೀವು ಹೇಗೆ ಕಾಣ್ತೀರಿ?’
ಶಾಸ್ತ್ರಿಗಳು ಮತ್ತೆ ಯಾವುದೇ ಸಂಕೋಚವಿಲ್ಲದೆ ಉತ್ತರಿಸಿದರು. ‘ನಾನು ಅನಂತಪುರದಿಂದ ಇಲ್ಲಿಗೆ ಬಂದಾಗ ಕಲಾಸೇವೆ ಮಾಡಲೆಂದು ಬಂದವನಲ್ಲ. ಬಹುಶ: ಬರೇ ಕಲಾಸೇವೆ ಮಾಡುವವರಾರೂ ಈ ಭೂಮಿ ಮೇಲೆ ಇರಲಿಕ್ಕಿಲ್ಲ. ನನ್ಗೆ ಕಲೆ ಒಂದು ವೃತ್ತಿ. ಅದು ನನ್ನ ಅನ್ನದ ತಟ್ಟೆ. ಕಲೆ ಕಣ್ಣಿಗೆ ಕಾಣುವುದಿಲ್ಲ ಅಗೋಚರವಾಗಿರುತ್ತದೆ ಅಂತಾರೆ. ಆದರೆ ನನ್ನ ಪ್ರಕಾರ ನಿರ್ದಿಷ್ಟವಾಗಿ ಕಲೆ ಅಂತ ಇರುವುದೇ ಇಲ್ಲ. ಅದನ್ನು ಈ ಮನುಷ್ಯ ತನ್ನ ಕಲ್ಪನೆಯ ಮೂಸೆಯಲ್ಲಿ ಕಲ್ಪಿಸ್ತಾನೆ. ತಾನು ಕಲ್ಪಿಸಿದ್ದನ್ನು ತೋರಿಸುತ್ತಾನೆ. ಸುಂದರವಾಗಿ ತೋರಿಸಲು ಪ್ರಯತ್ನಿಸುತ್ತಾನೆ. ಹಾಗೆ ನಮ್ಮ ಕಣ್ಣ ಮುಂದೆ ಪ್ರದರ್ಶನವೊಂದು ಬರುವಾಗ ಈ ಕಲಾವಿದ ಅನ್ನುವ ಮನುಷ್ಯನ ಯೋಚನೆ-ಚಿಂತನೆ, ಕೌಶಲ್ಯ, ಬುದ್ಧಿಶಕ್ತಿಗಳ ಸಾಮರ್ಥ್ಯ ಮತ್ತು ಮಿತಿಯೊಳಗೆ ಅದು ಕಾಣಿಸಿಕೊಳ್ತದೆ. ಆ ಪ್ರದರ್ಶನದಲ್ಲಿ ಅವನ ಚಮತ್ಕಾರ ಇರುತ್ತೆ. ಅವನ ಒಂದು ನೋಟ ಇರುತ್ತೆ. ಕಲಾವಿದನ ಆಟ ಅಲ್ಲಿ ಕಾಣುತ್ತೆ. ಖಂಡಿತವಾಗಿಯೂ ಅವನು ತನ್ನದಾದ ಎಲ್ಲವನ್ನು ತರುವ ಪ್ರಯತ್ನ ಮಾಡ್ತಾನೆ. ಪ್ರತೀ ಬಾರಿ ಅದು ಅವನ ಯೋಚನೆಯಿಂದ ಬರುವುದರಿಂದ ಅದು ಹೊಸದಾಗಿ ಕಾಣಿಸುತ್ತೆ. ಪ್ರತೀ ಸಾರಿಯೂ ಪ್ರತೀ ರಾಗ, ಹಾಡು ಕಲಾವಿದನ ಮನೋಧರ್ಮಕ್ಕನುಗುಣವಾಗಿ ಇರುತ್ತೆ. ಅದು ಸೃಜನಶೀಲವಾಗಿಯೂ ವೈಯಕ್ತಿಕವಾಗಿಯೂ ಹುಟ್ಟುತ್ತಾ ಹೋಗುತ್ತೆ. ಹಾಗೆ ನೋಡಿದ್ರೆ ನಮ್ಮ ಭಾರತೀಯ ಕಲೆಯನ್ನೆಲ್ಲ ಸೇರಿಸಿ ಮನೋಧರ್ಮ ಕಲೆ ಅಂತ ಹೇಳಬಹುದು. ಹಾಗಾಗಿ ಕಲಾವಿದನೆಂಬ ಪ್ರದರ್ಶಕನೇ ಎಲ್ಲ.’
‘ಅಂದ್ರೆ ಶಾಸ್ತ್ರೀಜೀ, ನಿಮ್ಮ ದೃಷ್ಟಿಯಲ್ಲಿ ಕಲಾವಿದನು ಪ್ರದರ್ಶಕನೇ? ಹಾಗಾದ್ರೆ ಶುದ್ಧ ಕಲೆ, ಕಲಾತ್ಮಕತೆ ಎಂಬುದು ಏನೂ ಇಲ್ವೆ?’
‘ಕಲಾವಿದ ಪ್ರದರ್ಶಕನೂ ಹೌದು. ಇದು ಇಂದಿನ ವಾಸ್ತವ. ಹಿಂದೆ ರಾಜರ ಕಾಲದಲ್ಲಿ ಹೇಗೆಲ್ಲ ಇತ್ತು ಬೇರೆ. ನಾನು ಸೌಂದರ್ಯ ಇಲ್ಲ, ಕಲಾತ್ಮಕತೆ ಅನ್ನೋದು ಇಲ್ಲಾಂತ ಹೇಳೋದಲ್ಲ. ಪ್ರದರ್ಶನ ಅಂದಾಕ್ಷಣ ಅದು ಕೇವಲ ಮಾರಾಟಕ್ಕೆ ಇಟ್ಟ ವಸ್ತು ಅಂತ ಯಾಕೆ ತಿಳ್ಕೋಬೇಕು..? ಪ್ರತೀ ಪ್ರದರ್ಶನದಲ್ಲೂ ಒಬ್ಬ ಕಲಾವಿದ ಹುಟ್ಟಿಕೊಳ್ಳುತ್ತಾನೆ. ಅವನು ಆರ್ಥಿಕವಾಗಿ ಚೇತರಿಸಿಕೊಳ್ತಾನೆ ಮತ್ತು ಕಲಾತ್ಮಕವಾಗಿಯೂ ರೂಪುಗೊಳ್ಳಬಹುದು. ಕಲೆಗೂ ಸಮಾಜಕ್ಕೂ ಸಂಬಂಧವಿದೆಯೆಂದಾದರೆ ಕಲೆಗೆ ಆರ್ಥಿಕತೆಗೂ ಸಂಬಂಧವಿದೆಯಲ್ಲವೇ..? ಹಣವನ್ನು ಬಿಟ್ಟು ಕಲಾವಿದನಿರಲು ಸಾಧ್ಯವೇ..? ಇದು ವಾಸ್ತವವಲ್ಲವೇ…? ಇನ್ನೊಂದು ವಿಷ್ಯ ಮನುಷ್ಯ ಶುದ್ಧ ಆಗಿರೋದೆಂದ್ರೆ ಏನು? ಅಷ್ಟಕ್ಕೂ ಶುದ್ಧ ಅಂದ್ರೆ ಏನು? ನನ್ಗೆ ಕಲೆಯನ್ನು ಶುದ್ಧ ಅಂತ ಆರಾಧಿಸಲು ಬರಲ್ಲ. ಯಾವುದೇ ರೀತಿಯಲ್ಲೂ ಪರಿಶುದ್ಧನಲ್ಲದ ಮನುಷ್ಯನಿಂದ ಕಲೆ ಹುಟ್ಟುವುದರಿಂದ ಕಲೆಯಲ್ಲೂ ಭ್ರಷ್ಟತೆ, ವಕ್ರತೆ, ಕೈವಾಡ ಇರಬಹುದಲ್ಲವೇ? ಹಾಗಾಗಿ ಕಲೆ, ಕಲಾವಿದನಲ್ಲಿ ಶುದ್ಧ ಅಶುದ್ಧ ಅಂತ ಚರ್ಚೆ ಯಾಕೆ? ನಮ್ಮ ಹಿಂದಿನವರು ಹಾಡಿದೆಲ್ಲವೂ ಶುದ್ಧ ಸಂಗೀತವೇ? ನನಗೆ ಅದನ್ನು ನೋಡಿವಾಗ ಅನೇಕ ವಿಚಾರಗಳು ಅನಗತ್ಯ, ಬೇಡದೇ ಇದ್ದದ್ದು ಇದೆ ಅಂತ ಅನ್ನಿಸಿತು. ಅದು ಅವ್ರು ಆ ಕಾಲದ ಜನರ ಮನರಂಜನೆಗಾಗಿ, ಸಂತೋಷಕ್ಕಾಗಿ ಮಾಡಿರಬಹುದು. ನಾನು ಹಾಡುವಾಗ ಅದನ್ನೆಲ್ಲ ಬಿಟ್ಟು ಈಗಿನ ಪ್ರೇಕ್ಷಕರಿಗೆ ಏನು ಬೇಕೆಂದು ಯೋಚಿಸಿ ನನ್ನದೇ ದಾರಿಯಲ್ಲಿ ಸಾಗಿದೆ. ನನ್ನದು ಮುರಳೀ ಮನೋಹರ ಸಂಗೀತ. ನಾಳೆ ಇನ್ನೊಬ್ಬರು ಅವರದೇ ದಾರಿಯಲ್ಲಿ ಹೋಗ್ತಾರೆ. ಇದು ಹೀಗೆಯೇ ಸಾಗುವುದು ಅಲ್ವೇ? ಒಟ್ಟಿನಲ್ಲಿ ನನ್ನ ಮಾತಿನ ಅರ್ಥ ಇಷ್ಟೇ. ಕಲೆ ಅಂತ ಇದ್ರೆ ಅದನ್ನ ಮನುಷ್ಯನೆಂಬ ಕಲಾವಿದನೇ ಸೃಷ್ಟಿಸಿದ್ದು. ಇಲ್ಲಿ ಯಾರು ಹೆಚ್ಚು ಯಾರು ಕಡಿಮೆ, ಯಾವುದು ಮೊದಲು ಯಾವುದು ನಂತರ ಅನ್ನುವ ಜಿಜ್ಞಾಸೆ ನನ್ನದಲ್ಲ.’
ರಂಗನ್ ಭಾರದ್ವಾಜ್ ಜೊತೆಗೆ ಶಾಸ್ತ್ರಿಗಳು ಹಂಚಿಕೊಂಡ ಕಲೆಯ ಕುರಿತ ಅವರ ನಿಲುವುಗಳು ಪರಂಪರಾವಾದಿಗಳ ಕಣ್ಣು ಕೆಂಪು ಮಾಡಿಸಿದುವು. ಅದರಲ್ಲೂ ಪಂತುಲು ಅಂಥಾ ವಿಚಾರ ಸಂಕಿರಣಗಳಲ್ಲಿ ಕಲೆಯ ಬಗ್ಗೆ ಪ್ರಬಂಧ ಮಂಡಿಸುವ ವಿದ್ವಾಂಸ ಶಾಸ್ತ್ರಿಗಳನ್ನು ಕಠೋರವಾಗಿ ಟೀಕಿಸಿದರು. ‘ಶಾಸ್ತ್ರಿಗಳು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಲೈಟ್‌ಮ್ಯೂಸಿಕ್ ಮಾಡಿದ್ರು, ಅರೆಶಾಸ್ತ್ರೀಯಗೊಳಿಸಿದ್ರು. ಇವ್ರ ಸಂಗೀತದಲ್ಲಿ ಕಾಳು ಸಿಗದು, ಬರೇ ಜಳ್ಳು ಮಾತ್ರ.’ ಎಂದರು. ರಾಘವೇಂದ್ರ ನಿಂಬಾಳ್ಕರ್ ಎಂಬ ಬಾಯಿಬಡುಕ ಹವ್ಯಾಸಿ ಸಂಗೀತಗಾರರೊಬ್ಬರಂತೂ `ಶಾಸ್ತ್ರಿಗಳ ಸಂಗೀತ ಸರ್ಕಸ್‌ನ ನಟನೆಯಂತೆ, ಅಲ್ಲಿ ಧ್ವನಿಯ ಕಣ್ಕಟ್ಟು ಮಾತ್ರ ಇದೆ. ಶಾಸ್ತ್ರಿಗಳದ್ದು ಗಮನ ಸೆಳೆಯಲು ಮಾಡುವ ಕೇವಲ ಸ್ಟಂಟ್ ಅಷ್ಟೇ. ಅವ್ರು ತಮ್ಮದೇ ದಾರಿಯಲ್ಲಿ ನಡೆದು ತಮ್ಮದೇ ನಿಯಮಗಳನ್ನು ತಂದ್ರು. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಶುದ್ಧಗೊಳಿಸಿದ್ರು, ಅಪವಿತ್ರ ಮಾಡಿದ್ರು’ ಎಂದೆಲ್ಲ ಹೋದ ಹೋದಲ್ಲಿ, ಕಂಡ ಕಂಡವರಲ್ಲಿ ತಮ್ಮೊಳಗಿನ ಎಲ್ಲ ಅಸಹನೆಯನ್ನು, ಅಸೂಯೆಯನ್ನು ಹೊರಹಾಕಿದ್ದರು. ಅದೇ ವೇಳೆಗೆ ಆಂಧ್ರದ ಇನ್ನೊಬ್ಬ ಉದಯೋನ್ಮುಖ ಶಾಸ್ತ್ರೀಯ ಸಂಗೀತಗಾರ ಸಮೀರ ದೀಕ್ಷಿತ್ ಎಂಬ ಬಿಸಿ ರಕ್ತದ ತರುಣ ಮಾತ್ರ ಇಡೀಯ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿರುವ ಕೊಳೆಯ ಬಗ್ಗೆ ವೈಚಾರಿಕವಾಗಿ ಮಾತಾಡತೊಡಗಿದ್ದು ರಾಷ್ಟ್ರದಾದ್ಯಂತ ದೊಡ್ಡ ವಿಷಯವಾಗಿ ಬಿಟ್ಟಿತ್ತು. ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಬ್ರಾಹ್ಮಣರ ಪ್ರಾಬಲ್ಯದ ಬಗ್ಗೆ ಬ್ರಾಹ್ಮಣ ಸಮುದಾಯದವರಿಂದಲೇ ಬಂದ ಮೊದಲ ಧ್ವನಿ ಅದಾಗಿತ್ತು. ‘ಸುಮ್ನೆ ಕಛೇರಿ ನಡೆಸಿ ದೇಶ-ವಿದೇಶ ಸುತ್ತಿ ಬರಬಹುದಾಗಿದ್ದ ಈ ಹುಡುಗ, ಸಂಗೀತದಲ್ಲಿ ಜಾತಿಭೇದ, ಲಿಂಗಭೇದ, ವರ್ಗಭೇದ, ರಾಜಕೀಯ ಅಂತ ಹೇಳ್ತಾನೆ. ಮೇಲ್ಜಾತಿಯವರ ಪ್ರಾಬಲ್ಯ, ಶೋಷಣೆ, ಯಾಜಮಾನ್ಯ ಎಂದು ನಮ್ಗೆ ಗೊತ್ತಿಲ್ಲದ ಏನೇನೆಲ್ಲವನ್ನು ಹೆಕ್ಕಿ ಹೆಕ್ಕಿ ತರುತ್ತಿದ್ದಾನಲ್ಲ. ಈ ನಮ್ ಹುಡುಗನಿಗೆ ಏನಾಗಿದೆ? ಈಗ ಶಾಸ್ತ್ರೀಯ ಸಂಗೀತದಲ್ಲಿ ಬರೇ ಬ್ರಾಹ್ಮಣರು ಮಾತ್ರ ಇರೋದಾ? ಕೇರಳದಲ್ಲಿ ಎಷ್ಟೊಂದು ಬ್ರಾಹ್ಮಣರಲ್ಲದ ವಿದ್ವಾನ್‌ಗಳಿದ್ದಾರೆ. ಯೇಸುದಾಸ್, ಅಶ್ವತಿ ತಿರುನಾಳ್ ರಾಮವರ್ಮ, ಅವನೀಶ್ವರ್, ಶ್ರೀಕುಮಾರ್, ಶ್ರೀವತ್ಸನ್, ಶಶಿಕುಮಾರ್, ಉನ್ನಿಕೃಷ್ಣನ್.. ಇವರ್ಯಾರೂ ನಮ್ಮವರಲ್ಲ’ ಎಂದು ಹಿರಿಯ ಬ್ರಾಹ್ಮಣ ಸಂಗೀತಗಾರರೆಲ್ಲ ಗೊಣಗತೊಡಗಿದರು.
ಸಮೀರ ದೀಕ್ಷಿತ ತನ್ನ ಹೊಸ ಮಾತು ಮತ್ತು ತಾನು ಹೊರತಂದ ಪುಸ್ತಕದಿಂದಾಗಿ ರಾತ್ರಿ ಬೆಳಗಾಗುವುದರಲ್ಲಿ ಸ್ಟಾರ್ ಆಗಿ ಬಿಟ್ಟಿದ್ದ. ಮಾಧ್ಯಮದವರು ಸುಮ್ಮನೆ ಬಿಡುತ್ತಾರೆಯೇ? ಸಂದರ್ಶನದ ಮೇಲೆ ಸಂದರ್ಶನ ನಡೆಯಿತು. ದೀಕ್ಷಿತ್ ಅಲ್ಲೆಲ್ಲ ದೊಡ್ಡ ಧ್ವನಿಯಲ್ಲಿ ದೀರ್ಘವಾಗಿ ಹೇಳತೊಡಗಿದ.
‘ನೋಡಿ, ಯಾರು ಏನೇ ಹೇಳಿದ್ರೂ ಒಂದು ವಾಸ್ತವವನ್ನು ಒಪ್ಪಿಕೊಳ್ಳೇಬೇಕು. ಕರ್ನಾಟಕ ಶಾಸ್ತ್ರೀಯ ಸಂಗೀತ ಕೆಲವರನ್ನು ಹೊರಗಿಟ್ಟಿದೆ. ಇದು ಸಮಾಜದ ಎಲ್ಲರನ್ನು ಒಳಗೊಂಡ ಸಂಗೀತ ಕ್ಷೇತ್ರ ಅಲ್ಲ. ಎಲ್ಲರನ್ನು ಒಳಗೊಂಡಿದೆ ಅಂತ ಹೇಳಿದ್ರೆ ಅದೊಂದು ದೊಡ್ಡ ಸುಳ್ಳು. ನಾನು ಬ್ರಾಹ್ಮಣನಾಗಿ ಹುಟ್ಟಿದ ಕಾರಣಕ್ಕಾಗಿ ನನಗೆ ಇರುವ ಕೆಲವೊಂದು ಸವಲತ್ತುಗಳನ್ನು ಅನುಭವಿಸುತ್ತಲೇ ಕೆಲವು ಪ್ರಶ್ನೆಗಳನ್ನು ಕೇಳಲೇ ಬೇಕಾಗಿದೆ. ಇಂದು ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಎಷ್ಟೊಂದು ಸಂಗತಿಗಳನ್ನು ಅಡಗಿಸಿಡಲಾಗಿದೆ.’
`ನಿಮ್ಮ ಪ್ರಕಾರ ಬ್ರಾಹ್ಮಣರು ತಮ್ಮ ಲಾಭಕ್ಕಾಗಿ ಎಲ್ಲ ಅಡಗಿಸಿದ್ದಾರೆ ಎಂದೇ…?’
`ನೀವು ಚಾರಿತ್ರಿಕವಾಗಿ ಗಮನಿಸಿದ್ರೆ ನಿಮ್ಗೆ ಗೊತ್ತಾಗೋದು. ದೇವದಾಸಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದ ಪಾವಿತ್ರ್ಯತೆಯನ್ನು, ಅದರ ಶುದ್ಧತೆಯನ್ನು ಕಾಪಾಡಿಕೊಳ್ಳೋದಕ್ಕಾಗಿ ದಕ್ಷಿಣ ಭಾರತದಲ್ಲಿ ಮೇಲ್ಜಾತಿಯ ಬ್ರಾಹ್ಮಣರು ಹೆಚ್ಚು ಹೆಚ್ಚು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಕಾಣಿಸಿಕೊಂಡ್ರು. ಹಾಗಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಬ್ರಾಹ್ಮಣರೇ ತುಂಬಿ ಹೋಗಿದ್ದಾರೆ. ಇಲ್ಲಿ ಮೇಲ್ಜಾತಿಯ ಇಲೈಟ್ ಕ್ಲಾಸ್ ಜನರ ಧ್ವನಿಯೇ ಹೆಚ್ಚು ಕೇಳುತ್ತಿದೆ. ಅಂಚಿಗೆ ಸರಿಸಲ್ಪಟ್ಟ ಜನರ ಧ್ವನಿ ಕೇಳ್ತಾ ಇಲ್ಲ. ನಿಮ್ಗೆ ಇನ್ನೊಂದು ಸಂಗತಿ ಗೊತ್ತಾ? ಎಷ್ಟೊಂದು ಬಾರಿ ಸಂಗೀತ ವಾದ್ಯಗಳನ್ನು ಯಾರು ಎಲ್ಲಿ ಹೇಗೆ ಮಾಡುತ್ತಿದ್ದಾರೆ ಎಂದು ಯಾರೂ ಕೇಳ್ತಾನೇ ಇಲ್ಲ. ಮತ್ತೆ, ಶಾಸ್ತ್ರೀಯ ಸಂಗೀತ ಅಂದ ಕೂಡ್ಲೇ ನಮ್ಮ ಕಲ್ಪನೆಗೆ ಬರೋದು ಶುದ್ಧತೆ, ಪಾವಿತ್ರ್ಯತೆ, ದೈವಿಕತೆ. ಆದ್ರೆ ಸಂಗೀತದ ಉಪಕರಣಗಳು ತಯಾರಾಗುವ ಸ್ಥಳಕ್ಕೆ ನೀವು ಭೇಟಿ ನೀಡಿದ್ರೆ ಇದ್ಯಾವುದೂ ಇರುವುದಿಲ್ಲ. ಅಲ್ಲಿ ಪ್ರಾಣಿ ವಧೆ ಇದೆ. ಕ್ರೌರ್ಯ ಇದೆ, ಹಿಂಸೆ ಇದೆ. ಮತ್ತು ಅವೆಲ್ಲವೂ ಸಹಜವೆಂಬತೆ ಆ ಜನರ ಬದುಕಿನ ಭಾಗವಾಗಿದೆ. ಶಾಸ್ತ್ರೀಯ ಪರಿಕಲ್ಪನೆಯ ಒಟ್ಟು ಸ್ವರೂಪದಲ್ಲೇ, ಅದರ ಗುಣಸ್ವಭಾವದಲ್ಲೇ ಈ ಸಮಸ್ಯೆ ಇದೆ. ವಿಶ್ವದೆಲ್ಲೆಡೆಯ ಶಾಸ್ತ್ರೀಯತೆ ಪಿತೃಪ್ರಧಾನವಾಗಿ, ಕುಲವಾದಿಯಾಗಿ, ಜನಾಂಗವಾದಿಯಾಗಿ, ಬಣ್ಣವಾದಿಯಾಗಿ ಕಾಣಿಸಿಕೊಂಡಿದೆ.
‘ಅಂದ್ರೆ ಈಗ ಏನು ಮಾಡ್ಬೇಕು ಅಂತ ನೀವು ಹೇಳೋದು? ಇದ್ಕೆ ಸೊಲ್ಯೂಶನ್ ಏನು?’
`ನೋಡಿ, ನನ್ಗೂ ಸೊಲ್ಯೂಶನ್ ಬಗ್ಗೆ ಗೊತ್ತಿಲ್ಲ. ಆದ್ರೆ ನಮ್ದು ಬಹುರೂಪೀ ಸಮಾಜ. ಇಲ್ಲಿನ ಪ್ರತೀ ಸಮುದಾಯದಲ್ಲಿ ಕಲೆ-ಸಂಸ್ಕೃತಿ ಇದೆ. ಅವುಗಳು ಮುಖ್ಯವಾಹಿನಿಗೆ ಬಂದು ಅವನ್ನು ನಾವೆಲ್ಲ್ರೂ ಅನುಭವಿಸಲು ಸಾಧ್ಯವಿಲ್ಲವೇ? ಎಲ್ಲ ಸಂಗೀತವನ್ನು ನಾವು ಅರ್ಥ ಮಾಡಿಕೊಳ್ಳಬೇಡವೇ? ಕಲೆ ಸಾಮಾಜಿಕ ಸಂಬಂಧಗಳ ಬೆಸುಗೆಗೆ ಸೇತುವೆಯಾಗ್ಬೇಕು. ಸಂಬಂಧಗಳ ಬೇರು ಗಟ್ಟಿಯಾಗಲು ಸಹಕರಿಸ್ಬೇಕು. ಇದಕ್ಕ್ಯಾಕೆ ನಾವು ಅವಕಾಶ ಮಾಡಿಕೊಡುವುದಿಲ್ಲ? ಕಛೇರಿಗೆ ಹೋದ್ರೆ ಇದು ನಮ್ದಲ್ಲ ಅಂತ ಭಾವನೆ ಕೆಲವರಲ್ಲಿ ಉಂಟಾಗ್ತದೆ. ಯಾಕೆ ಹೀಗಾಗ್ತಿದೆ..? ಇದು ನನ್ನ ಪ್ರಶ್ನೆ.’
ಈ ಮೊದಲಿನ ಘಟಾನುಘಟಿ ಸಂಗೀತ ವಿದ್ವಾಂಸರ ನೂರಾರು ಆಕ್ಷೇಪಗಳಿಗೆ ಶಾಸ್ತ್ರಿಗಳು ತಲೆಕೆಡಿಸಿಕೊಂಡಿರಲಿಲ್ಲ. ಅವರ ಬದುಕಿನ ಕ್ರಮವೇ ಹಾಗಿತ್ತು. ಸಂತೋಷಕ್ಕೆ ಸಂತೋಷವನ್ನು ಸೇರಿಸುವುದು, ಕರುಬುವವರ ಮಾತುಗಳನ್ನು ಕೇಳಿ ಹೊಟ್ಟೆಗೆ ಹಾಕಿಕೊಳ್ಳುವುದು, ನಗುನಗುತ್ತ ಇರುವುದು. ಆದರೆ ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ ಈಗಾಗಲೇ ಬದುಕಿನ ಸಂಜೆಯಲ್ಲಿರುವ ಅವರಿಗೆ ಸಮೀರ ದೀಕ್ಷಿತನ ವಿಚಾರಗಳು ಏನೋ ಒಂದು ರೀತಿಯಲ್ಲಿ ಮನಸ್ಸನ್ನು ತಾಕಿದ್ದಂತೂ ಸತ್ಯ. ಹಾಗಿದ್ದರೂ ಸಂಗೀತ ಬಿಟ್ಟು ಬೇರೆ ಯಾವ ಓದು, ಚಿಂತನೆಯ ಅರಿವಿರದ ಮತ್ತು ಆ ಬಗೆಯ ಸಂಕಥನದ ವಾತಾವರಣದಲ್ಲಿ ಬೆಳೆಯದ ಶಾಸ್ತ್ರಿಗಳು ದೀಕ್ಷಿತನ ಮಾತುಗಳನ್ನು ಕೇಳಿ ಬೆಳಗಾಗುವುದರೊಳಗಾಗಿ ಕ್ರಾಂತಿಕಾರಿಯಾಗಲು ಸಾಧ್ಯವಿರಲಿಲ್ಲ. ಸಾಮಾಜಿಕ ಸಂಬಂಧಗಳಲ್ಲಿರುವ ತಾರತಮ್ಯದ ಬಗ್ಗೆ ಶಾಸ್ತ್ರಿಗಳಿಗೆ ಅರಿವಿದ್ದರೂ ಭಾಷಣ ಮಾಡುವ, ರಸ್ತೆಗೆ ಇಳಿಯುವ ಸ್ವಭಾವ ಅವರದ್ದಲ್ಲ. ಆದರೆ ಸಂಗೀತಕ್ಕಿಲ್ಲದ ತಾರತಮ್ಯ ಅವರಲ್ಲೂ ಇರಲಿಲ್ಲ. ಹೊರನೋಟದಲ್ಲಿ ಸಾಂಪ್ರದಾಯಿಕ ಯೋಚನಾಕ್ರಮದ ಜಿಗುಟು ಬ್ರಾಹ್ಮಣನಂತೆ ಕಂಡರೂ ಅವರೊಳಗೆ ಗಾಢ ಮಾನವೀಯತೆಯ ತುಡಿತವಿತ್ತು. ಹಾಗಾಗಿ ಈ ಪಂತುಲು ಮತ್ತು ದೀಕ್ಷಿತನ ಮಾತಿಗೆ ಅಷ್ಟೊಂದು ತಲೆಕೆಡಿಸಿಕೊಳ್ಳದೆ ಧೈರ್ಯಶಾಲಿಯಾಗಿ ಮುನ್ನಡೆದಿದ್ದರು. ಆಗಲೇ ಜನರ ಹೃದಯ ಗೆದ್ದಿದ್ದ ಅವರನ್ನು ಸಂಗೀತ ಕ್ಷೇತ್ರದಲ್ಲಿ ನೇರವಾಗಿ ಎದುರಿಸಲು ಯಾರಿಗೂ ಶಕ್ತಿ ಇರಲಿಲ್ಲ. ಸಂಗೀತದಲ್ಲಿನ ಅವರ ಅಗಾಧ ಬುದ್ಧಿಶಕ್ತಿ, ತಾಂತ್ರಿಕತೆ ಮತ್ತು ಚಿತ್ತಾಕರ್ಷಕ ಸಂಗತಿಗಳಿಂದಾಗಿ ಆವರು ಸದಾ ವಿಜಯಶಾಲಿಯಾಗಿ ಕಂಗೊಳಿಸುತ್ತಿದ್ದರು. ಎಲ್ಲ ಘಟನೆಗಳು ತಮ್ಮದೇ ಸುತ್ತ ಗಿರಕಿ ಹೊಡೆಯುತ್ತಿದ್ದರೂ ಅವರು ಯಾವತ್ತೂ ಸಣ್ಣತನವನ್ನೂ ತೋರಿರಲಿಲ್ಲ. ಹಾಗಾಗಿ ಸಂಗೀತ ಕ್ಷೇತ್ರದಲ್ಲಿ ಅವರು ಅಜೇಯರಾಗಿಯೇ ಉಳಿದಿದ್ದರು. ಹಾಗಿದ್ದರೂ ಶಾಸ್ತ್ರಿಗಳಲ್ಲಿ ಕೆಲವೊಂದು ವಿಲಕ್ಷಣ ಸಂಗತಿಗಳಿದ್ದವು. ‘ನನಗೆ ಸಂಗೀತ ಗೊತ್ತಿಲ್ಲ. ಸಂಗೀತಕ್ಕೆ ನಾನು ಗೊತ್ತು. ಸಂಗೀತ ನನ್ನ ಬಳಿಗೆ ಬರುತ್ತದೆ’ ಎಂಬ ಅವರ ಮಾತು ವಿಚಿತ್ರವೆನಿಸುತ್ತಿತ್ತು. ಇಂಗ್ಲಿಶ್ ಭಾಷೆಯ ಬಗ್ಗೆ ಅವರಿಗೆ ವಿಪರೀತ ಮೋಹ ಇತ್ತು. ಹಾಗಾಗಿ ಆರು ತಿಂಗಳೊಳಗಾಗಿ ಇಂಗ್ಲಿಶನ್ನು ಕಲಿತು ಸ್ವತಂತ್ರವಾಗಿ ಮಾತಾಡಲು ಶುರು ಮಾಡಿದ್ದರು. ಕೆಲವೊಮ್ಮೆ ಎರಡು ವಾಚುಗಳನ್ನು ಕಟ್ಟಿಕೊಂಡು ಕಛೇರಿಗೆ ಬರುತ್ತಿದ್ದರು. ತಮ್ಮ ಹಾಡಿಗೆ ಜನರು ಸದಾ ಚಪ್ಪಾಳೆ ತಟ್ಟಬೇಕೆಂದು ನಿರೀಕ್ಷಿಸುತ್ತಿದ್ದರು. ಅವರ ಕೊರಳಲ್ಲಿ ಯಾವಾಗಲೂ ದಪ್ಪನೆಯ ಉದ್ದದ ಸರಗಳಿರುತ್ತಿದ್ದವು. ಅವುಗಳು ರಾಜರ ಕಾಲದ ಆಸ್ಥಾನ ಸಂಗೀತಗಾರರ ಸರಗಳಂತೆ ಕಾಣುತ್ತಿದ್ದವು. ಕೆಲವೊಮ್ಮೆ ಯಾವುದೋ ಹುಡುಗಿಯ ಚಿತ್ರವಿರುವ ಪೆಂಡೆಂಟ್‌ನ್ನು ಹೊಂದಿದ ಸರವನ್ನು ಹಾಕುತ್ತಿದ್ದರು. ಕಛೇರಿಯಲ್ಲಿ ತಮ್ಮನ್ನು ಮಾತನಾಡಿಸಲು ಬರುವ ಎಲ್ಲರನ್ನು ಗಂಡು-ಹೆಣ್ಣು ಭೇದವಿಲ್ಲದೆ ಸದಾ ಆಲಂಗಿಸಿ ಅಪ್ಪುಗೆಯ ಸುಖವನ್ನು ಅನುಭವಿಸುತ್ತಿದ್ದರು. ದುಬಾರಿ ಕ್ರಯದ ಬಟ್ಟೆ ಬರೆಗಳನ್ನು ಧರಿಸುತ್ತಿದ್ದರು. ಅವರನ್ನು ಈ ಬಗೆಯ ವೇಷಭೂಷಣದಲ್ಲಿ ಕಂಡ ಜನರು ಅವರೊಬ್ಬ ರಾಜರ ಕಾಲದ ಸಂಗೀತಗಾರ ಎಂಬ ಯೋಚನೆಯನ್ನು ಇಟ್ಟುಕೊಂಡವರು ಎಂದು ಭಾವಿಸುತ್ತಿದ್ದರು. ಹೊರಪ್ರಪಂಚಕ್ಕೆ ಕೆಲವೊಮ್ಮೆ ಅವರು ವಿಲಾಸೀ ಜೀವನದ ಮೋಜುಗಾರ ಸೊಗಸುಗಾರನಂತೆಯೇ ಕಾಣಿಸಿಕೊಳ್ಳುತ್ತಿದ್ದರು.

ಭಾಗ-೩

ಶಾಸ್ತ್ರಿಗಳ ಮರಣವಾಗಿ ನಾಲ್ಕೈದು ದಿನಗಳು ಕಳೆದಿದ್ದವು. ವಿಭಾಕರ್ ವಿವೇಕಾನಂದ ನಗರದಲ್ಲಿರುವ ಗೆಳೆಯ ಸಯ್ಯದ್ ಹುಸೇನ್ ಮಕ್ಕಿಯ ಅಂಗಡಿಯ ಹತ್ತಿರ ಬಂದಿದ್ದ. ಮಕ್ಕಿಗೆ ಶಾಸ್ತ್ರಿಗಳ ಸಂಗೀತದ ಬಗ್ಗೆ ತಿಳಿದಿದ್ದರೂ ಶಾಸ್ತ್ರಿಗಳ ಖಾಸಗಿ ಬದುಕಿನ ಬಗ್ಗೆ ಏನೇನೂ ತಿಳಿದಿರಲಿಲ್ಲ. ಅದನ್ನು ತಿಳಿದುಕೊಳ್ಳಲು ಆತನಿಗೆ ಸಮಯವೂ ಇರಲಿಲ್ಲ. ಅಂದು ವಿಭಾಕರ್ ಎಂದಿನ ಉತ್ಸಾಹದಲ್ಲಿರಲಿಲ್ಲ. ತನ್ನ ಆಪ್ತರಾದ ಶಾಸ್ತ್ರಿಗಳನ್ನು ಕಳೆದುಕೊಂಡು ಮಂಕನಂತಿರುವ ಇವನನ್ನು ತನ್ನ ಜಗತ್ತಿಗೆ ತರುವುದು ಹೇಗೆ ಎಂದು ಮಕ್ಕಿ ಯೋಚಿಸುತ್ತಾ, ಬಂದ ಗಿರಾಕಿಗಳಿಗೆ ದಿನಸಿ ಸಾಮಾನುಗಳನ್ನು ಕೊಡುತ್ತಿದ್ದ. ಈ ಮಕ್ಕಿ ತನ್ನ ಅಂಗಡಿಗೆ ಬಂದ ಗಿರಾಕಿಗಳಿಗೆ ತನ್ನ ಹಿರಿಯರು ಬಿಜಾಪುರದ ಆದಿಲ್‌ಶಾಹಿ ವಂಶಸ್ಥರೆಂದು ಹೇಳುತ್ತಾ ಗೋಲ ಗುಂಬಜ್‌ನ್ನು ಆಗಾಗ ನೆನಪಿಸುವುದು ರೂಢಿ. ಮೂಲತ: ಬಿಜಾಪುರದವನಾದ ಈತ ವ್ಯಾಪಾರ ವಹಿವಾಟಿಗೆಂದು ಮೈಸೂರಿಗೆ ಆಗಾಗ್ಗೆ ಬರುತ್ತಿದ್ದವನು ಮೈಸೂರನ್ನು ಇಷ್ಟಪಟ್ಟು ಇಲ್ಲಿಯೇ ಉಳಿದುಬಿಟ್ಟ. ಈತ ತನ್ನ ಅಂಗಡಿಗೆ ಬಂದವರಲ್ಲೆಲ್ಲ ಬದುಕಲ್ಲಿ ಒಮ್ಮೆಯಾದರೂ ಗೋಲ ಗುಂಬಜ್ ನೋಡಲೇಬೇಕೆಂಬ ಆಸೆ ಹುಟ್ಟಿಸುವ ರೀತಿಯಲ್ಲಿ ವರ್ಣಿಸುತ್ತಿದ್ದ. ಸೂಫಿ ಸಂತರ ಗಝಲ್‌ಗಳ ಬಗ್ಗೆ, ಜಲಾಲುದ್ದೀನ್ ರೂಮಿ ಮತ್ತು ಖಲೀಲ್ ಗಿಬ್ರಾನ್ ರಚನೆಗಳ ಬಗ್ಗೆ ತಕ್ಕ ಮಟ್ಟಿಗೆ ಓದಿಕೊಂಡಿದ್ದ. ಈತ ಹೊಸ ಪುಸ್ತಕಗಳನ್ನು ಕೊಂಡುಕೊಳ್ಳುತ್ತಿದ್ದ. ಸಮಯ ಸಿಕ್ಕಾಗ ಓದುವುದು ಅವುಗಳ ಬಗ್ಗೆ ವಿಭಾಕರನಲ್ಲಿ ಮಾತನಾಡುವುದು ಇವನ ಇಷ್ಟಗಳಲ್ಲಿ ಒಂದು. ವಿಭಾಕರನಲ್ಲಿ ಎಲ್ಲವನ್ನೂ ಸಂವಾದಿಸುತ್ತಿದ್ದ. ಶಾಸ್ತ್ರಿಗಳು ಮೈಸೂರಿಗೆ ಬರುವ ಮೊದಲು ವಿಭಾಕರ್‌ನ ಪರಿಸ್ಥಿತಿ ಕೂಡಾ ದಾರುಣವಾಗಿತ್ತು. ಅವನದ್ದು ತಂದೆ-ತಾಯಿ, ಅಕ್ಕಂದಿರು ಎಲ್ಲ ಸೇರಿ ಐದು ಜನರಿದ್ದ ಸ್ಮಾರ್ತ ಬ್ರಾಹ್ಮಣ ಕುಟುಂಬವದು. ಪಿಯುಸಿವರೆಗೆ ಓದಿದ ಈ ಬ್ರಾಹ್ಮಣ ಹುಡುಗನಿಗೆ ಬಡತನದಿಂದಾಗಿ ವಿದ್ಯಾಭ್ಯಾಸವನ್ನು ಮುಂದುವರಿಸಲಾಗಲಿಲ್ಲ. ಕೊನೆ ಪಕ್ಷ ಈತ ಪೌರೋಹಿತ್ಯವನ್ನೂ ಕಲಿಯಲಿಲ್ಲ. ಬ್ರಾಹ್ಮಣರಿಗೆ ಕೊನೆಗೆ ಏನೂ ಇಲ್ಲದಿದ್ದರೆ ಅದಾದರೂ ಹೊಟ್ಟೆಪಾಡಿಗೆ ಒದಗಿ ಬರುವುದು. ಅದೂ ಸಾಧ್ಯವಾಗದ ಸ್ಥಿತಿಯಲ್ಲಿ ಅಲ್ಲಿಲ್ಲಿ ಸಂಗೀತ-ಸಾಹಿತ್ಯದ ಕಾರ್ಯಕ್ರಮಗಳನ್ನು ಆಯೋಜಿಸುವುದು, ಪುಸ್ತಕಗಳ ಮಾರಾಟ ಎಂದೆಲ್ಲ ಹೇಳಿ ಏನೋ ಕಷ್ಟದಲ್ಲಿ ದಿನ ದೂಡುತ್ತಿದ್ದ. ವಯಸ್ಸಾದ ಅಕ್ಕಂದಿರಿಗೆ ಮದುವೆ ಮಾಡುವ ಕಾಲಕ್ಕಾಗುವಾಗ ಶಾಸ್ತ್ರಿಗಳ ಮನೆಗೆ ಹತ್ತಿರವಾದದ್ದು ಅನುಕೂಲವಾಯಿತು. ಶಾಸ್ತ್ರಿಗಳು ವಿಭಾಕರನ ಕಷ್ಟ ಮತ್ತು ಪ್ರಾಮಾಣಿಕತೆಯನ್ನು ಕಂಡು ಅವನನ್ನು ತಮ್ಮ ಪರ್ಸನಲ್ ಸೆಕ್ರೆಟರಿಯಾಗಿ ಜೊತೆಗಿರಿಸಿಕೊಂಡಿದ್ದರು. ಹಿಂದೆ ಯಾವುದೋ ಆರ್ಥಿಕ ಸಂದಿಗ್ಧತೆಯಲ್ಲಿ ವಿಭಾಕರನಿಗೆ ಸಯ್ಯದ್ ಒದಗಿ ಬಂದದ್ದು ಅವನ ಜೊತೆಗಿನ ಒಡನಾಟಕ್ಕೆ ಕಾರಣವಾಗಿತ್ತು. ಈ ದೋಸ್ತಿ ಸಂಬಂಧ ನಿಧಾನಕ್ಕೆ ವಿಭಾಕರನ ಲೋಕದೃಷ್ಟಿಯನ್ನೇ ಬದಲಿಸಿಬಿಟ್ಟಿತು. ಸೌಂದರ್ಯ ಮತ್ತು ಸತ್ಯ ಜೀವನದ ಎರಡು ಮುಖ್ಯ ಕೊಡುಗೆಗಳು. ಸೌಂದರ್ಯವನ್ನು ಪ್ರೀತಿಸುವ ಹೃದಯದಲ್ಲಿ ಕಂಡೆ; ಸತ್ಯವನ್ನು ದುಡಿಯುವಾತನ ಕೈಗಳಲ್ಲಿ ಕಂಡೆ ಎಂಬ ಖಲೀಲ್ ಗಿಬ್ರಾನನ ಮಾತು ಸಯ್ಯದನ ಬಾಯಲ್ಲಿ ಕೇಳಿದ ಮೇಲಂತೂ ವಿಭಾಕರಿಗೆ ತನ್ನದು ಏನೋ ಸರಿಯಿಲ್ಲ ಅನ್ನಿಸತೊಡಗಿತು. ಅಲ್ಲಿಯವರೆಗೂ ಧಾರ್ಮಿಕತೆಯ ಬಗ್ಗೆ ಉಗ್ರ ಮಾತುಗಳನ್ನಾಡುತ್ತಿದ್ದ ವಿಭಾಕರ್ ತನಗರಿವಿಲ್ಲದಂತೆಯೇ ಮೃದುವಾಗತೊಡಗಿದ್ದ. ಧರ್ಮನಿರಪೇಕ್ಷತೆಯಲ್ಲಿ ಮತ್ತು ಕೂಡಿಬಾಳುವ ಬದುಕಿನಲ್ಲಿ ಸೊಗಸಿದೆ ಎಂಬ ಅರಿವು ಅವನಲ್ಲಿ ಮೂಡತೊಡಗಿತು. ತನ್ನ ಮೂಗಿನ ನೇರಕ್ಕಷ್ಟೇ ಜಗತ್ತನ್ನು ಕಾಣುತ್ತಿದ್ದ ವಿಭಾಕರ್‌ಗೆ ಸಯ್ಯದ್ ಮತ್ತು ಸಂಗೀತ ಹೊಸ ದೃಷ್ಟಿ ಮತ್ತು ದೃಷ್ಟಿಕೋನದ ಅರಿವು ಮೂಡಿಸಿದವು. ಸಯ್ಯದ್ ತೋರಿಸಿದ ಜಲಾಲುದ್ದೀನ್ ರೂಮಿಯ ರಚನೆಯ ತುಣುಕು ನಿನಗೆ ವಿಶೇಷ ಜ್ಞಾನದರಿವು ಬೇಕಾದಲ್ಲಿ ಯಾರದಾದರೂ ಮುಖ ನೋಡು: ಆಳವಾಗಿ ನೋಡು, ಆ ವ್ಯಕ್ತಿಯ ನಗುವಿನೊಳಗೆ, ಜ್ಞಾನದ ಅಂತಿಮ ಸತ್ಯವಿದೆ ವಿಭಾಕರನ ಯೋಚನೆಯ ಕ್ರಮವನ್ನು ಮತ್ತಷ್ಟು ಬದಲಾಯಿಸಿತು. ಭಗವದ್ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಹೇಳುವ ಯೋ ಮಾಂ ಪಶ್ಯತಿ ಸರ್ವತ್ರ ಸರ್ವಮ್ ಚ ಮಯಿ ಪಶ್ಯತಿ| ತಸ್ಯಾಹಂ ನ ಪ್ರಣಶ್ಯಾಮಿ ಸ ಚ ಮೇ ನ ಪ್ರಣಶ್ಯತಿ|| ಯಾರು ನನ್ನನ್ನು ಎಲ್ಲರಲ್ಲಿಯೂ ಮತ್ತು ಎಲ್ಲವನ್ನು, ಎಲ್ಲರನ್ನು ನನ್ನಲ್ಲಿ ಕಾಣುತ್ತಾರೋ ಅವರಿಗೆ ನಾನು ಎಂದೂ ಇಲ್ಲವಾಗುವುದಿಲ್ಲ ಎಂಬ ಕೃಷ್ಣನ ಮಾತಿಗೂ `ಮನುಷ್ಯನಲ್ಲಿ ದೇವನನ್ನು ಕಾಣು, ಪ್ರತಿಯೊಬ್ಬನ ನಗುವಿನಲ್ಲಿ ದೇವನಿದ್ದಾನೆ, ಅದುವೇ ಜ್ಞಾನ, ಅದುವೇ ಅರಿವು. ಆ ಕಾಣ್ಕೆಯೇ ಬದುಕಿನ ಸೌಂದರ್ಯ ಮತ್ತು ಅಂತಿಮ ಸತ್ಯ’ ಎಂಬ ಗಿಬ್ರಾನ್ ಮತ್ತು ರೂಮಿಯ ಆನುಭಾವಿಕ ಮಾತುಗಳ ಅರ್ಥಕ್ಕೂ ಸಾದೃಶ್ಯವಿದೆ ಎಂದು ವಿಭಾಕರ್ ಭಾವಿಸಿಕೊಂಡ. ಅಲ್ಲಿಂದ ತೊಡಗಿ ವಿಭಾಕರ್‌ಗೆ ಮಕ್ಕಿಯ ಮೇಲೆ ವಿಶೇಷ ಸ್ನೇಹ, ಅನುಕಂಪ.
ಬಂದು ಅಷ್ಟು ಹೊತ್ತಾದರೂ ಈ ವಿಭಾಕರ್ ಏನೂ ಹೇಳುವವನಲ್ಲ ತಾನೇ ಏನಾದರೂ ಕೇಳಬೇಕೆಂದು ಮಕ್ಕಿ ಹೊರಡುವಷ್ಟರಲ್ಲಿ ಅಲ್ಲಿಗೆ ಗೊಂಬೆ ಮಾರುವ ದುಗ್ಗಪ್ಪ ಮರಿಯಾಳನ ಆಗಮನವಾಯಿತು. ಮೈಸೂರು ಪೇಟೆಯಲ್ಲಿ ಮತ್ತು ಹಳ್ಳಿಯಲ್ಲೆಲ್ಲಾ ಚಂದನದ ಮರದಿಂದ ಮಾಡಿದ ರಾಜರ ಕಾಲದ ಪಟ್ಟದ ಗೊಂಬೆ ಮಾರುತ್ತಾ ಜೀವನ ಸಾಗಿಸುವ ಈತ ಊರೂರು ಅಲೆಯುವ ಜೋಗಿ. ಜೊತೆಗೆ ಇವನಲ್ಲೊಂದು ವಿಶೇಷ ಪ್ರತಿಭೆ ಇದೆ. `ತಾರಪಾ’ ಎಂಬ ಉದ್ದನೆಯ ಅಪರೂಪದ ವಾದ್ಯವನ್ನು ತಾನೇ ತಯಾರಿಸಿ ತಾನೇ ನುಡಿಸುತ್ತಾನೆ. ಇಡೀಯ ಮೈಸೂರಲ್ಲಿ ಇವನನ್ನು ಬಿಟ್ಟರೆ ಬೇರೆ ಯಾರಿಗೂ ಈ ವಾದ್ಯವೂ ತಿಳಿದಿಲ್ಲ, ವಾದನವೂ ಗೊತ್ತಿಲ್ಲ. ಮಹಾರಾಷ್ಟ್ರದ ವರ್ಲಿ ಬುಡಕಟ್ಟು ಸಮುದಾಯದವರ ಕುಣಿತದಲ್ಲಿ ಈ ವಾದ್ಯವನ್ನು ಬಳಸುವುದುಂಟು. ಕುಣಬಿ ಸಮುದಾಯದವನಾದ ಈ ದುಗ್ಗಪ್ಪ ಮರಿಯಾಳ ತನ್ನ ವಾದ್ಯಕ್ಕೆ ಮತ್ತು ಸಂಗೀತಕ್ಕೆ ದೈವಿಕತೆಯ ಸ್ಪರ್ಶ ನೀಡಿ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬಂದವನು. ತನ್ನ ಮೊಮ್ಮಗನನ್ನು ಕರೆದುಕೊಂಡು ಮೈಸೂರಿನ ಹೊರವಲಯದಲ್ಲಿರುವ ಕಾಡಿಗೆ ಹೋಗಿ ಅಲ್ಲಿಂದ ಸೋರೆಕಾಯಿ, ಬಿದಿರು, ಜೇನು ಮೇಣವನ್ನೆಲ್ಲ ಹೊತ್ತು ತರುತ್ತಾನೆ. ಬಳಿಕ ಅವನ್ನೆಲ್ಲ ಬಳಸಿ ಈ ವಿಶಿಷ್ಟ ವಾದ್ಯವನ್ನು ತಯಾರಿಸುತ್ತಾನೆ. ಇದು ನೋಡಲು ಮನುಷ್ಯನಷ್ಟು ಎತ್ತರ. ಧ್ವನಿ ಕೇಳಲು ಪುಂಗಿಯ ನಾದದಂತೆಯೂ, ಶಹನಾಯಿಯಂತೆ, ಕೆಲವೊಮ್ಮೆ ಕೊಳಲಿನಂತೆ. ತಾನು ಬಡವನಾದರೂ ಈತ ತಾರಪಾವನ್ನು ಎಂದೂ ಮೈಸೂರಿನ ಪೇಟೆಗೆ ತಂದು ಮಾರಾಟ ಮಾಡಿದವನಲ್ಲ. ಈ ವಾದ್ಯಕ್ಕೆ ಮನಸೋತ ವಿದೇಶೀಯವನೊಬ್ಬ ಒಮ್ಮೆ ಇವನ ತಾಂಡಾಕ್ಕೆ ಬಂದು ಒಂದು ವಾದ್ಯಕ್ಕೆ ಸಾವಿರ ಡಾಲರ್ ಕೊಡುತ್ತೇನೆಂದರೂ ಕೊಡದ ಮರಿಯಾಳ,
‘ದೇವ್ರೇ ಇದನ್ನು ನನ್ನ ಹತ್ರ ಮಾಡಿಸ್ಯಾವ್ನೆ. ಇದನ್ನ ಇಟ್ಟ್‌ಕೊಂಡು ಯಾಪಾರ ಮಾಡಿದ್ರೆ ಸಿವ ಮುನಿದಾನು, ಸಿಕ್ಸೆ ಗಿಕ್ಸೆ ಕೊಟ್ಟಾನು’ ಎಂದು ಹೇಳಿ ಡಾಲರ್‌ನ ಮೌಲ್ಯವನ್ನೇ ಸಂಪೂರ್ಣವಾಗಿ ನಿರಾಕರಿಸಿ ಬಿಟ್ಟ.
ಆ ವಿದೇಶಿ ಈ ಭಾರತೀಯರ ನಂಬಿಕೆಯೇ ವಿಚಿತ್ರ ಎಂದು ಹುಬ್ಬೇರಿಸಿದ. ತಾರಪಾವನ್ನು ಸಿದ್ಧಗೊಳಿಸಿ ಹಬ್ಬ ಹರಿದಿನಗಳಲ್ಲಿ ನುಡಿಸುವುದಷ್ಟೇ ಅವನ ಕಾಯಕ. ಅವನ ವ್ಯವಹಾರ ಏನಿದ್ದರೂ ಗೊಂಬೆಯ ಮಾರಾಟದಲ್ಲಿ ಮಾತ್ರ. ಊರಲ್ಲಿ ಏನೇ ಆದರೂ ಅದರ ಬಗ್ಗೆ ಮರಿಯಾಳ ಏನಾದರೂ ಅರೆಬರೆ ತಿಳಿದಿರುತ್ತಾನೆ. ಬಂದವನೇ ವಿಭಾಕರನನ್ನು ನೋಡಿ ತನ್ನ ಬಿಳೀ ಗಡ್ಡವನ್ನು ನೀವುತ್ತಾ, ‘ಅಯ್ಯೋ ದೇವರಂತ ಮನ್ಸ ಓಗೇಬಿಟ್ರು. ಇನ್ನು ಅವರಂಗೆ ಹಾಡೋರು ಈ ದೇಸದಲ್ಲಿ ಯಾರಿದ್ದವ್ರೆ. ನನ್ನ ವಾದ್ಯಾನ ಸಾನೆ ಮೆಚ್ಚುಕೊಂಡವ್ರೆ. ಅವರಂತ ದಾರಾಳಿಗಳು ಉಟ್ಟ್‌ಲಿಕ್ಕಿಲ್ಲ’ ಎಂದು ಶಾಸ್ತ್ರಿಗಳ ಸಾವು ದೊಡ್ಡ ನಷ್ಟ ಅನ್ನುವ ಥರ ಆಡತೊಡಗಿದ. ವಿಭಾಕರ್ ಮತ್ತು ಮಕ್ಕಿ ಮುಖ ಮುಖ ನೋಡಿಕೊಂಡರು. ಮರಿಯಾಳನ ಅನುಕಂಪದ ಮಾತು ನಿಂತು ಪ್ರಶ್ನೆ ಮುಂದುವರಿಯಿತು.
‘ಅಲ್ಲ ಯಜಮಾನ್ರೇ, ಚೆನ್ನಾಗಿಯೇ ಇದ್ರಲ್ಲ, ಇದ್ದಕ್ಕಿದ್ದಾಗೆ ಏನಾಯ್ತು..? ಕುಡ್ತ-ಗಿಡ್ತ ಏನಾದರೂ ಹೆಚ್ಚಾಯ್ತೆ ಮತ್ತೆ..? ಅಲ್ಲ, ನೇಕಾರ್ತಿ ಎಂಕಮ್ಮ ಹೇಳ್ತವ್ಳೆ ಬುದ್ದಿಯವ್ರಿಗೆ ಯಾರೋ ಹೆಣ್ಣು ಮಗಳ ಸಾವಾಸ ಅಂತೆ. ಆಕೆಯ ಮಗ ಮೊನ್ನೆ ದಿನ ಮನೇಲಿ ಏನೋ ಜಗಳ ತೆಗ್ದಂತೆ. ಆ ಅಯ್ಯಂಗೆ ಏನೋ ಆಸ್ತಿ-ರೊಕ್ಕ ಬೇಕಂತೆ ದವಾಕಾನೆ ಕಟ್ಟೋಕಂತೆ…ಇದು ನಿಜನಾ…? ಹೇಳ್ರಯ್ಯ..’
ಎತ್ತರದಿಂದ ಬಂಡೆಯೊಂದು ಉರುಳಿ ತನ್ನ ಮೇಲೆ ಬಿದ್ದ ಅನುಭವ ವಿಭಾಕರನದ್ದು.
‘ಲೋ ಮರಿಯಾಳ ಯಾಕೆ ಮುಠ್ಠಾಳನಾಂಗೆ ಮಾತಾಡ್ತೀಯಾ? ಯಾವಳೋ ಏನೋ ಅಂದ್ಳು ಅಂತ ಅದನ್ನೇ ಕಟ್ಕೊಂಡು ಇಲ್ಲಿ ಬಂದು ಎಲ್ರ ಮುಂದೆ ಭಾಷಣ ಬಿಗಿತ್ತೀಯಲ್ಲ. ಸುಮ್ನೆ ಇಲ್ಲಿಂದ ಹೋಗ್ತಿಯೋ ಇಲ್ವೋ…?’
‘ಯಾಕೆ ಯಜಮಾನ್ರೇ? ನಾನೇನಾದ್ರೂ ತಪ್ಪು ಅಂದ್ನಾ..? ಅವ್ಳು ಅಂದದ್ನ ಇಲ್ಲಿ ನಿಮ್ಮ್ ತಾವು ಕೇಳ್ದೆ ಅಷ್ಟೇ. ನನ್ಗೇನು ಗೊತ್ತು..? ಒಸಿಯಾದ್ರೂ ಬೆಂಕಿ ಇಲ್ದೆ ಹೊಗೆಯಾಡಲು ಸಾಧ್ಯನಾ..? ಒಳಗ್ನ ಗುಟ್ಟು ಸಿವ್ನೇ ಬಲ್ಲ.’ ಅನ್ನುತ್ತಾ ಉತ್ತರಕ್ಕೆ ಕಾಯದೇ ಸ್ವಲ್ಪ ಗಾಬರಿಯಿಂದಲೇ ಅಲ್ಲಿಂದ ಹೊರಟೇ ಬಿಟ್ಟ. ಮರಿಯಾಳನ ಮಾತು ವಿಭಾಕರಿಗೆ ಪಥ್ಯವಾಗಲಿಲ್ಲ. ಎಲ್ಲಿಂದ ಈ ಶನಿ ಅಡರಿತು ಎಂದು ಯೋಚಿಸುತ್ತಾ, ಏನು ಮಾಡಬೇಕೆಂದು ತೋಚದೆ ಅಲ್ಲೇ ಇದ್ದ ಪೇಪರನ್ನು ತೆಗೆದು ಓದುವಂತೆ ಮಾಡಿದ. ಈಗ ಮಕ್ಕಿಗೂ ಕುತೂಹಲ.
‘ಸರಸ್ವತಿಯೇ ನಾಲಿಗೆಯ ಮೇಲೆ ಕುಳಿತು ಹಾಡುತ್ತಿದ್ದಾಳೆ ಅನ್ನುವ ರೀತಿಯಲ್ಲಿ ಹಾಡುತ್ತಿದ್ದ ಪ್ರಸಿದ್ಧ ಸಂಗೀತಗಾರನಿಗೂ ಇನ್ನೊಂದು ಸಂಬಂಧವೇ..? ಇಟ್ಟುಕೊಂಡವಳ ಮಗನಾ…? ಅರೆ ಈ ಕಲಾವಿದ್ರೇ ಹೀಗೆ. ಅದ್ಕೇ ಹೇಳೋದು ಕಲಾವಿದ್ರರಿಗೆ ಜಸ್ಟಿಸ್, ಎಥಿಕ್ಸ್ ಎಲ್ಲ ಇರೋಲ್ಲ. ಅವರನ್ನ ಯಾರೂ ಮನಸ್ಸಿಗೆ ತೊಕೊಳ್ಳೇ ಬಾರ್ದು. ಅವ್ರ ಕಲೆಯನ್ನ ಮಾತ್ರ ಅನುಭವಿಸ್ಬೇಕೂಂತ.’ ಮಕ್ಕಿ ವಿಭಾಕರಿಗೆ ಏನೂ ಕೇಳದೆ ತನ್ನಷ್ಟಕ್ಕೆ ಪಿಸುಗುಟ್ಟಿದ. ಪೇಪರ್ ಓದುವಂತೆ ನಟಿಸುತ್ತಿದ್ದ ವಿಭಾಕರನಿಗೆ ಆ ಪಿಸುಮಾತು ಕೇಳದ್ದೀತೇ? ವಿಭಾಕರ್ ಈಗ ಏನಾದರೂ ಹೇಳಲೇ ಬೇಕಿತ್ತು. ವಿಭಾಕರ್ ಗಂಭೀರನಾಗಿ,
“ತಾವು ಓದದಿದ್ದರೂ ತಮ್ಮ ಮೊದಲ ಐದು ಮಕ್ಕಳಿಗೆ ಶಾಲಾ ಕಾಲೇಜಿನ ವಿದ್ಯಾಭ್ಯಾಸವನ್ನು ಕೊಡಿಸಿದ್ರು ಶಾಸ್ತ್ರಿಗಳು. ಆದರೆ ಕೊನೆಯವನಾದ ದೇವಾಂಶುವನ್ನು ಮಾತ್ರ ಎಲ್ಲರ ಹಾಗೆ ಶಾಲಾ ಕಾಲೇಜಿಗೆ ಕಳುಹಿಸಲು ಅವರಿಗೆ ಇಷ್ಟ ಇರ್ಲಿಲ್ಲ. ಸಾಹಿತ್ಯ-ಸಂಗೀತದ ಒಲವಿದ್ದ ತಂದೆಗೆ ಮಗ ಇನ್ನ್ಯಾವುದೋ ರೀತಿಯಲ್ಲಿ ಬೆಳೆಯಬೇಕೆಂಬ ಆಸೆ. ಆದರೆ ಮಗನ ಆಸೆ ಬೇರೆಯಾಗಿತ್ತು. ಅದು ಶಾಸ್ತ್ರಿಗಳಿಗೆ ಅರ್ಥವಾಗಲಿಲ್ಲ. ಇದು ತಂದೆ-ಮಗನ ನಡುವಿನ ಸಂಘರ್ಷಕ್ಕೆ ಕಾರಣವಾಗಿತ್ತು ಕೂಡಾ. ಅನಸೂಯಮ್ಮ ಮತ್ತು ಉಳಿದ ಮಕ್ಕಳು ಶಾಸ್ತ್ರಿಗಳ ಕಡೆಗೆ ನಿಂತರೂ, ಶಾಸ್ತ್ರಿಗಳು ಕೊನೆಗೂ ಮಗನ ಎದುರು ಸೋಲಲೇ ಬೇಕಾಯಿತು. ಮಕ್ಕಿಗೆ ವಿಭಾಕರ್ ಯಾವ ವಿಷಯ ಮಾತನಾಡುತ್ತಿದ್ದಾನೆ ಎಂದು ಗೊತ್ತಾಗಲಿಲ್ಲ.
‘ಅಲ್ಲಯ್ಯ, ಆ ಜೋಗಿ ಮರಿಯಾಳ ಹೇಳಿದ್ದಕ್ಕೂ ನೀನು ಹೇಳ್ತಾ ಇರೋದಕ್ಕೂ ಏನಯ್ಯ ಸಂಬಂಧ?’ ಎಂದು ಕೇಳಿದ.
‘ನಿನ್ಗೆ ಇಲ್ಲಿ ದಿನಸಿ ಮಾರುತ್ತ ಸಂಜೆ ಆಗುವಾಗ ನೋಟು ಲೆಕ್ಕ ಮಾಡುವವನಿಗೆ ಲೋಕದ ವ್ಯವಹಾರ ಏನು ಗೊತ್ತಾಗುತ್ತೆ? ಸಂಬಂಧ ಇದೆ ಕಣೋ. ನಮ್ಮ ಶಾಸ್ತ್ರಿಗಳ ಕತೆ ಅಷ್ಟು ದೊಡ್ದಿದೆ.’ ಎಂದ ವಿಭಾಕರ್ ಮುಂದುವರಿಸಿದ.
ಶಾಸ್ತ್ರಿಗಳ ಮನೆಯಲ್ಲಿ ಆಗೊಮ್ಮೆ ಈಗೊಮ್ಮೆ ಜಗಳ ಕೇಳಿ ಬರೋದು. ಹಿರೀ ಮಗ ಆಯು ತೇಜಸ್ಸು ಅನಸೂಯಮ್ಮನನ್ನು ಹಂಗಿಸುತ್ತಿದ್ದ. `ಹಳೆ ಕಾಲದ ಗೌರಮ್ಮನ ಹಾಗೆ ಇದ್ದೀಯ- ಏನೂ ಗೊತ್ತಾಗಲ್ಲ. ಅಪ್ಪನ ನಡವಳಿಕೆ ಬಗ್ಗೆ ನಿನ್ಗೆ ಗಮನಾನೇ ಇಲ್ಲ. ಅವ್ರುಹೇಳಿದ್ದನ್ನು ಕೇಳ್ಕೊಂಡು ಸುಖಾ ಸುಮ್ನೆ ಇರ್ತೀಯಾ. ಅವ್ರಿಗೆ ಬೇಕಾದ್ದೆನ್ನೆಲ್ಲ ಮಾಡಿಕೊಟ್ಟು ಮಹಾನ್ ಪತಿವ್ರತೆಯಂತೆ ಹೂಮುಡಿದು ಕೈಕಾಲು ಬಿಟ್ಟು ಕೂತುಕೊಳ್ತಿಯಾ.’ ಧ್ವನಿ ಸೇರಿಸೋಕೆ ಶಾಸ್ತ್ರಿಗಳ ಇನ್ನೊಬ್ಬ ಮಗ ಧಾನ್ವಿಕ್ ತೇಜಸ್ಸು ಅಣ್ಣನ ಪರವಾಗಿ ನಿಂತು, ‘ಅಮ್ಮಾ ಏನೇನೂ ಪ್ರಯೋಜನ ಇಲ್ಲ. ಜೊತೆಗೆ ನಮ್ ಮನೇಲಿ ಇಬ್ರು ಹೆಣ್ಣ್ ಮಕ್ಳಿದ್ದಾರೆ. ಅವ್ರೂ ಅಷ್ಟೇ. ತಾವೂ, ತಮ್ಮ ಗಂಡ- ಮಕ್ಳು ಅಂತ ಅಪ್ಪನ ಬಗ್ಗೆ ಯೋಚ್ನೆನೇ ಇಲ್ಲ. ಇವ್ರನ್ನೆಲ್ಲ ನಂಬಿದ್ರೆ ಅಷ್ಟೇ. ಅಮ್ಮಾ ಸ್ವಲ್ಪ ಆಚೀಚೆ ನೋಡು, ಸಮಾಜವನ್ನು ತಿಳ್ಕೋ. ಅಟ್ ಲೀಸ್ಟ್ ನಮ್ಮ ಮನೇಲಿ ಏನಾಗ್ತಿದೆ ಅನ್ನೋದನ್ನಾದರೂ ತಿಳ್ಕೋ. ನಿನ್ಗೆ ಸ್ವಲ್ಪ ಪುಸ್ತಕಗಳನ್ನು ಓದೋಕೆ ಏನು ದಾಡೆ? ಅಪ್ಪ ಹೇಳಿದ್ದನ್ನೆಲ್ಲ ಮಗುವಿನ ಹಾಗೆ ನಂಬ್ತಿಯಲ್ಲ. ನಿನ್ಗೆ ಬಟ್ಟೆ-ಬರೆ, ಒಡವೆ ಸಿಕ್ರೆ ಸಾಕು. ಅಷ್ಟಕ್ಕೇ ತೃಪ್ತಿ.. ಅವ್ರು ಈಗಾಗ್ಲೆ ಏನೇನು ಮಾಡಿದ್ದಾರೆ ಅಂತ ಗೊತ್ತಲ್ಲ. ಮುಂದೆ ಏನು ಮಾಡ್ತಾರೆ ಅದನ್ನಾದಾರೂ ತಿಳ್ಕೋ…ನಿನ್ನ ಇಬ್ರು ಹೆಣ್ ಮಕ್ಳಿಗೂ ಸ್ವಲ್ಪ ಅಪ್ಪನ ಬಗ್ಗೆ ಹೇಳು’ ಅಮ್ಮನಿಗೆ ಎಚ್ಚರಿಕೆಯನ್ನು ಕೊಟ್ಟ.
ಅಂದ್ರೆ ತಂದೆ ಮಕ್ಕಳ ನಡುವೆ ಏನಾದರೂ ಅಸಮಾಧಾನ ಇತ್ತೇ..? ಮಕ್ಕಿ ಪ್ರಶ್ನಿಸಿದ.
ಅಸಮಾಧಾನ ಅಂತ ಅಲ್ಲ ಮಕ್ಕಿ. ಅಲ್ಲಿ ಏನೋ ಸಮಸ್ಯೆ ಇತ್ತು. ಶಾಸ್ತ್ರಿಗಳ ನಡವಳಿಕೆಯ ಬಗ್ಗೆ ಏನೋ ಅನುಮಾನ ಇದ್ದ ಹಾಗೆ ಇತ್ತು. ಅದರಲ್ಲೂ ಅವರ ಮನೆಗೆ ಬಂದು ಕಾರುಬಾರು ನಡೆಸುತ್ತಿದ್ದ ಪದ್ಮಿನೀ ದೇವಿಯವರ ಬಗ್ಗೆ ಅಂತೂ ಎಲ್ಲರಿಗೆ ಅಸಮಾಧಾನವಿತ್ತು. ಜೊತೆಗೆ ದೇವಾಂಶು ಬಗೆಗೆ ಕೂಡಾ ಶಾಸ್ತ್ರಿಗಳ ಉಳಿದ ಮಕ್ಕಳಲ್ಲಿ ಅಷ್ಟು ಸಹನೆ ಇಲ್ಲ. ಆದರೆ ಶಾಸ್ತ್ರಿಗಳ ಎದುರಲ್ಲಿ ಮಾತಾಡುವ ಶಕ್ತಿ ಯಾರಿಗೂ ಇರಲಿಲ್ಲ. ಶಾಸ್ತ್ರಿಗಳು ಮೈಸೂರಿಗೆ ಬಂದ ಹೊಸತರಲ್ಲಿ ಅವರ ಅಭಿಮಾನಿಯಾಗಿ ಬಂದು ಸಹಾಯ ಮಾಡಿದ ಅನೇಕರಲ್ಲಿ ಪದ್ಮಿನೀ ದೇವಿಯವರೂ ಒಬ್ರು. ಮೈಸೂರು ಹೊರವಲಯದ ಇಲ್ವಾಲಾ ಗ್ರಾಮ ಪಂಚಾಯತ್‌ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಅವ್ರು ಸಂಗೀತ ಮತ್ತು ಭರತನಾಟ್ಯವನ್ನು ಅವರಿವರಿಂದ ಕಲಿತ್ತಿದ್ದೇನೆ ಎಂದು ಹೇಳುತ್ತಾ ಎಲ್ಲರ ಸ್ನೇಹವನ್ನು ಸಂಪಾದಿಸಿದವ್ರು. ಮೈಸೂರಿನ ಸುತ್ತಮುತ್ತಲ ಹಳ್ಳಿಯಲ್ಲಿ ಇವರ ಪರಿಚಯವಿಲ್ಲದವರು ಯಾರೂ ಇಲ್ಲ. ಆದ್ರೆ ಇವರ ಸಂಗೀತವನ್ನಾಗಲೀ ಅಥವಾ ನಾಟ್ಯವನ್ನಾಗಲೀ ನೋಡಿದವರು ಯಾರೂ ಇಲ್ಲ ಅಂತ ಕಾಣುತ್ತೆ. ಶಾಸ್ತ್ರಿಗಳಿಗೆ ಆರಂಭದಲ್ಲಿ ಮನೆ, ಮಕ್ಕಳು ಅಂತ ಅನೇಕ ತಾಪತ್ರಯಗಳು ಒಂದರ ಮೇಲೆ ಒಂದರಂತೆ ಬಂದೆರಗುತ್ತಿದ್ದವು. ಆಗೆಲ್ಲ ಈ ಪದ್ಮಿನೀ ದೇವಿಯ ಸಹಾಯಹಸ್ತ ಒದಗಿಬರುತ್ತಿತ್ತು. ಪದ್ಮಿನೀ ದೇವಿಯೂ ನಾಡಿನ ಒಬ್ಬ ದೊಡ್ಡ ಕಲಾವಿದರಿಗೆ ಸಹಾಯ ಮಾಡಿ ಬದುಕಿನಲ್ಲಿ ಸಾರ್ಥಕ್ಯವನ್ನು ಪಡೆದ ಅನುಭವವನ್ನು ಹೊಂದುತ್ತಿದ್ರು. ಬರ ಬರುತ್ತಾ ಶಾಸ್ತ್ರಿಗಳ ಮನೆಗೆ, ಮನೆಯವರಿಗೆ ಹತ್ತಿರವಾದ ಪದ್ಮಿನೀ ದೇವಿಯವರು ಆ ಮನೆಯ ಕುಟುಂಬದ ಸದಸ್ಯೆಯಂತೆಯೇ ಆಗಿ ಹೋದ್ರು. ಶಾಸ್ತ್ರಿಗಳು ತಾವು ಹೋದೆಡೆಗೆಲ್ಲ ತಮ್ಮ ಕಛೇರಿಯ ತಂಡದೊಂದಿಗೆ ಪದ್ಮಿನೀ ದೇವಿಯವರನ್ನು ಕರೆದೊಯ್ಯುತ್ತಿದ್ರು. ಅನೇಕ ವರ್ಷಗಳಿಂದ ಸ್ನೇಹ ಸಂಬಂಧ ಇಟ್ಟುಕೊಂಡಿದ್ದರಿಂದ ಪದ್ಮಿನೀ ದೇವಿಗೆ ಕ್ರಮೇಣ ಕಛೇರಿಯ ವೇದಿಕೆಯಲ್ಲಿ ಕುಳಿತುಕೊಳ್ಳುವ ಅವಕಾಶವನ್ನೂ ಶಾಸ್ತ್ರಿಗಳು ಒದಗಿಸಿಕೊಟ್ಟಿದ್ರು. ಕಛೇರಿಯ ನಿರೂಪಣೆಯ ಜವಾಬ್ದಾರಿಯನ್ನು ಈಕೆಗೆ ನೀಡಲಾಗುತ್ತಿತ್ತು. ಇದೆಲ್ಲ ಸರಿಯೇ. ಆದ್ರೆ ಕೆಲವೊಮ್ಮೆ ಪದ್ಮಿನೀ ದೇವಿ ಶಾಸ್ತ್ರಿಗಳ ಜೊತೆಗೆ ವಿಶೇಷ ಸಲುಗೆಯಿಂದ ವರ್ತಿಸುತ್ತಿದ್ರು. ನೋಡುವವರಿಗೆ ಇದು ಅಸಹಜವೆಂಬಂತೆ ತೋರುತ್ತಿದ್ದದ್ದು ಸತ್ಯವೇ. ನನಗೂ ಎಷ್ಟೊಂದು ಬಾರಿ ಹಾಗೆ ಅನ್ನಿಸುತ್ತಿತ್ತು ಮಕ್ಕಿ.’
ಹಾಗಾದ್ರೆ ಮರಿಯಾಳ ಜೋಗಿ ಹೇಳಿದಂತೆ ಶಾಸ್ತ್ರಿಗಳಿಗಿದ್ದ ಹೆಣ್ಣಿನ ಸಹವಾಸ ಪದ್ಮಿನೀ ದೇವಿಯದ್ದಾ…?
‘ಛೇ ಛೇ.. ನನ್ಗೆ ಶಾಸ್ತ್ರಿಗಳಲ್ಲಿ ಅದನ್ನೆಲ್ಲ ಕಲ್ಪಿಸಿಕೊಳ್ಳೋಕೆ ಸಾಧ್ಯಾನೇ ಇಲ್ಲ. ಶಾಸ್ತ್ರಿಗಳು ಮನೆಯಲ್ಲಿ ಯಾರಲ್ಲೂ ಹೆಚ್ಚು ಮಾತುಕತೆ ಇಟ್ಟುಕೊಂಡವರಲ್ಲ. ಆದ್ರೆ ಈ ಪದ್ಮಿನೀ ದೇವಿಯವರ ಜೊತೆಗೆ ತುಂಬಾ ಹೊತ್ತು ಮಾತಲ್ಲಿ ಬೀಳುತ್ತಿದ್ರು. ಅವರು ಪರಸ್ಪರ ತುಂಬಾನೇ ಸಂಗತಿಗಳನ್ನ ಹಂಚಿಕೊಳ್ಳುವ ಹಾಗೆ ಕಾಣುತ್ತಿತ್ತು. ಮನೆಯಲ್ಲಿ ಯಾರಲ್ಲೂ ಹೇಳದ ಸಂಗತಿಗಳನ್ನು ಶಾಸ್ತ್ರಿಗಳು ಅವರಲ್ಲಿ ಹೇಳಿರಬಹುದು. ಆದ್ರೆ ಅವರ ಮಾತು, ನಡವಳಿಕೆ ಅನುಮಾನವನ್ನೇ ಹುಟ್ಟಿಸುತಿರ್ಲಿಲ್ಲ. ಒಂದಂತೂ ಸತ್ಯ, ಶಾಸ್ತ್ರಿಗಳಿಗೆ ಆ ಪದ್ಮಿನೀ ದೇವಿಯವರ ಮೇಲೆ ಏನೋ ಒಂದು ಬಗೆಯ ಪ್ಲೆಟೋನಿಕ್ ಲವ್ ಅಂತರಾಲ್ಲ. ಅದಿತ್ತು ಅಂತ ಕಾಣಿಸುತ್ತೆ. ‘ಹೇಳೋದಕ್ಕೆ ದೊಡ್ಡ ಸಂಗೀತ ವಿದ್ವಾನ್‌ಗಳು, ಸಮಾಜಕ್ಕೆ ಮಾದರಿಯಾಗಿ ಇರ್ಬೇಕಾದೋರು. ಲೋಕಕ್ಕೆ ಹೇಳ್ಬೇಕಾದೋರು. ಬೆಳೆದು ನಿಂತ ಮಕ್ಳಿದ್ದಾರೆ. ಮದುವೆಯಾಗಿ ಮಕ್ಳಿರುವ ಹೆಣ್ಣಿನ ಸಹವಾಸದಲ್ಲಿ ಬಿದ್ದಿದ್ದಾರೆ. ಏನು ಅವಸ್ಥೆಯೋ ಏನೋ… ಒಂದಿಷ್ಟು ಮಾನ ಮರ್ಯಾದೆ ಇಲ್ಲ’ ಎಂದೆಲ್ಲ ಜನ ಅವರ ಸಂಬಂಧದ ಬಗ್ಗೆ ಆಡುತ್ತಿರುವುದನ್ನೂ ಕೇಳಿದ್ದೇನೆ. ಲೋಕ ಏನು ಮಾತಾಡಬಹುದು ಎನ್ನುವುದರ ಬಗ್ಗೆ ಶಾಸ್ತ್ರಿಗಳಿಗೆ ಅರಿವು ಇದ್ದಂತೆ ಕಾಣುತ್ತಿತ್ತು. ಹಾಗಾಗಿ ಪದ್ಮಿನೀ ದೇವಿಯವರು ಶಾಸ್ತ್ರಿಗಳ ಪಕ್ಕ ಬಂದು ಕುಳಿತಾಗಲೆಲ್ಲ ಶಾಸ್ತ್ರಿಗಳು ಜಾಗೃತರಾಗುತ್ತಿದ್ದುದನ್ನೂ ನಾನು ಕಂಡಿದ್ದೇನೆ. ಈ ತಾಯಿ ಮಾತ್ರ ವಿಚಿತ್ರವೇ. ಆದ್ರೆ ಒಂದಂತೂ ಸತ್ಯ ಅಂತನ್ನಿಸುತ್ತೆ. ಶಾಸ್ತ್ರಿಗಳ ವೈಯಕ್ತಿಕ ಬದುಕು ವರ್ಣರಂಜಿತವಾಗಿತ್ತು. ಬಾಲಿವುಡ್ ಸಿನಿಮಾ ನಟರಿಗೆ ಇರುವ ಹಾಗೆ ಹೆಂಗಸರ ಗಂಡಸು ಎಂಬ ಮಾತು ಅವರಿಗಿತ್ತು. ಇವರ ಹೆಸರು ಯಾವಾಗಲೂ ಒಬ್ಬಲ್ಲ ಒಬ್ಬ ಹೆಂಗಸಿನ ಜೊತೆಗೆ ಕೇಳಿ ಬರುತ್ತಿತ್ತು. ಒಮ್ಮೆ ಹೆಣ್ಣಿನ ಬಗ್ಗೆ ಇವರಿಗಿರುವ ಆಸಕ್ತಿ ಬಗ್ಗೆ ಖ್ಯಾತ ಪಿಟೀಲು ವಾದಕಿಯೊಬ್ಬರು ಸಾಹಿತ್ಯ ಬರೆದು ರಾಗ ಸಂಯೋಜನೆ ಮಾಡಿ ಅನೇಕ ಸಂಗೀತಗಾರರು ಸೇರಿದ್ದ ಸಂದರ್ಭವೊಂದರಲ್ಲಿ ಇವ್ರ ಉಪಸ್ಥಿತಿಯಲ್ಲೇ ಹಾಡಿದ್ರು. ಆಗ ಶಾಸ್ತ್ರಿಗಳಿಗೆ ಸ್ವಲ್ಪ ಮಟ್ತಿಗೆ ಇರುಸು ಮುರುಸಾದರೂ ತೋರಿಸಿಕೊಳ್ಳದೆ ಆಕೆಯ ಸುಂದರವಾದ ಸಂಗೀತಕ್ಕಾಗಿ ಸಿಹಿಯನ್ನು ತರಿಸಿ ಹಂಚಿದ್ರು.
ವಿಭಾಕರನ ಮಾತುಗಳಲ್ಲಿ ತನ್ನ ಪ್ರಶ್ನೆಗೆ ನೇರ ಉತ್ತರ ಇಲ್ಲದುದನ್ನು ಕಂಡು ಮಕ್ಕಿ ತನ್ನ ಮಾತನ್ನು ಮತ್ತೆ ದೇವಾಂಶ್‌ನ ಕಡೆಗೆ ತಿರುಗಿಸಿದ.
‘ಅದಿರ್ಲಿ ವಿಭಾಕರ್. ಆದ್ರೆ ಆ ದೇವಾಂಶು ಬಗ್ಗೆ ಏನೋ ಹೇಳಿದೆಯಲ್ಲ. ಅಲ್ಲಿ ಏನೋ ಗೋಪ್ಯತೆ ಇದ್ದ ಹಾಗೆ ಇದೆ. ಅವನನ್ನು ಕಂಡ್ರೆ ಶಾಸ್ತ್ರಿಗಳ ಉಳಿದ ಮಕ್ಳಿಗೆ ಅಷ್ಟಕ್ಕಷ್ಟೆ ಅಂದೆಯಲ್ಲ. ಏನದು? ಅವ್ನು ಅನಸೂಯಮ್ಮನ ಮಗನಲ್ವ..? ಅಥವಾ ಅವ್ನಿಗೂ ಪದ್ಮಿನೀ ದೇವಿಯವರಿಗೂ ಏನಾದರೂ ಸಂಬಂಧ…?’
ಈಗ ವಿಭಾಕರನಿಗೆ ಪೀಕಲಾಟ ಶುರುವಾಯಿತು. ತನಗೆ ಸರಿಯಾಗಿ ಗೊತ್ತಿಲ್ಲದ ವಿಷಯದ ಬಗ್ಗೆ ತಾನು ಮಾತನಾಡುವುದು ಸರಿಯಲ್ಲ ಎಂದು ಆತ ನಿರ್ಧರಿಸಿದ್ದ. ಈಗ ತಾನು ಏನು ಹೇಳಿದರೂ ಈ ಮಕ್ಕಿ ನಂಬುವವನಲ್ಲ ಎಂದು ಅರ್ಥ ಮಾಡಿಕೊಂಡ ವಿಭಾಕರ್, ‘ಸಂಜೆ ಸಿಗುವೆ, ಆಮೇಲೆ ಎಲ್ಲ ಮಾತಾಡುವ’ ಎಂದು ಹೇಳಿ ಅಲ್ಲಿಂದ ಜಾಗ ಖಾಲಿ ಮಾಡಿದ. ಮಕ್ಕಿಗೆ ಶಾಸ್ತ್ರಿಗಳ ಸಾಂಸಾರಿಕ ವಿಷಯದ ಬಗ್ಗೆ ಇನ್ನೂ ಕುತೂಹಲ ಹೆಚ್ಚಾಯಿತು. ಹೋಗುತ್ತಿದ್ದ ವಿಭಾಕರನನ್ನೇ ದಿಟ್ಟಿಸುತ್ತಿದ್ದ. ಇವನು ಏನೋ ಅಡಗಿಸುತ್ತಿದ್ದಾನೆ ಎಂದೆನಿಸಿತು. ದೇವಾಂಶುನ ಬಗ್ಗೆ ಸ್ವತ: ಅನಸೂಯಮ್ಮನವರಿಗೇ ಸರಿಯಾಗಿ ಗೊತ್ತಿಲ್ಲದಿರುವಾಗ ವಿಭಾಕರನಿಗಾದರೂ ಏನು ತಿಳಿದಿರಲು ಸಾಧ್ಯ?
ಶಾಸ್ತ್ರಿಗಳು ಮೈಸೂರಿಗೆ ಬಂದ ಮೊದಲ ತಿಂಗಳಲ್ಲೇ ಸನ್ ಟಿವಿಯಲ್ಲಿ ಕಾರ್ಯಕ್ರಮ ನೀಡಲೆಂದು ಮದ್ರಾಸಿಗೆ ಹೋಗಿದ್ದರು. ಶಾಸ್ತ್ರಿಗಳು ಆಗಿನ್ನೂ ಮೈಸೂರಿಗೆ ಹೊಸಬರು. ಅವರ ಮನೆಗೆ ವಿಭಾಕರ್, ಪದ್ಮಿನೀದೇವಿ ಪ್ರವೇಶವೇ ಆಗದಿದ್ದ ಕಾಲವದು. ಮದ್ರಾಸಿನಿಂದ ಬರುವಾಗ ನಲ್ವತ್ತು ದಿನಗಳ ಮಗುವೊಂದನ್ನು ತಂದು ಅನಸೂಯಮ್ಮನ ಕೈಯಲ್ಲಿ ಕೊಟ್ಟು, ಇದು ನಮ್ಮ ಮಗು. ಏನು ಎತ್ತ ಎಂದು ಕೇಳ್ಬೇಡ. ಅವರಿವರು ಏನೇ ಅಂದರೂ ನೀ ತಲೆಕೆಡಿಸ್ಕೋಬೇಡ. ನಾವು ಈ ಮಗುವನ್ನು ಸಾಕ್ಬೇಕು. ಇವನು ದೊಡ್ಡ ವ್ಯಕ್ತಿಯಾಗ್ಬೇಕು. ನಮ್ಮ ಮಕ್ಳು ಮಾಡದ್ದನ್ನು ಇವನಿಂದ ಮಾಡಿಸೋಣ. ಪತಿಯೇ ಸಾಕ್ಷಾತ್ ಪರದೈವ ಎಂದು ನಂಬಿಕೊಂಡು ಬಂದ ಅನಸೂಯಮ್ಮ ಉಸುರೆತ್ತದಂತೆ ಮಾತಾಡಿ ಮಗುವನ್ನು ಕೈಗಿಟ್ಟಿದ್ದರು. ಆದರೂ ಗಂಡನ ಬಗ್ಗೆ ಸಂಶಯದ ವಾಸನೆ ಬರದಿದ್ದೀತೆ? ‘ಅಲ್ಲಾರೀ ಯಾರದೋ ಮಗುವನ್ನು ತಂದು ಹೀಗೆ ಏಕಾಏಕಿ ಕೈಗೆ ಕೊಟ್ರೆ ನಾನು ಏನು ಮಾಡ್ಲಿ’ ಒಂದು ಮಾತು ಕೇಳಿಯೇ ಬಿಟ್ರು ಅನಸೂಯಮ್ಮ ಅಸಹನೆಯಿಂದ. ‘ಅದನ್ನೇ ನಾನು ಹೇಳಿದ್ದು, ಅದನ್ನೆಲ್ಲ ತಿಳ್ಕೊಂಡು ನಿನ್ಗೆ ಆಗಬೇಕಾದ್ದು ಏನೂ ಇಲ್ಲ ಅಂತ. ನೀನು ಮಾಡ್ಬೇಕಾದ್ದು ಇಷ್ಟೇ. ಈಗಾಗಲೇ ನಾಲ್ಕು ಮಕ್ಕಳನ್ನು ಸಾಕಿದ್ದೀಯಲ್ಲ. ಅದೇ ರೀತೀಲಿ ಇದರ ಲಾಲನೆ ಪಾಲನೆ ಮಾಡು ಸಾಕು.’ ಅನಸೂಯಮ್ಮನಿಗೆ ಬೇರೆ ವಿಧಿ ಇರಲಿಲ್ಲ. ಹೊಳೆಯುವ ಆ ಮುದ್ದಾದ ಗಂಡು ಮಗುವನ್ನು ಕಂಡಾಗ ನಾಲ್ಕು ಮಕ್ಕಳ ತಾಯಿ ಅನಸೂಯಮ್ಮ ಅಲ್ಲ ಹತ್ತು ಹೆತ್ತ ತಾಯಿಯೂ ಬೇಡವೆನ್ನಲು ಸಾಧ್ಯವಿರಲಿಲ್ಲ. ಅಷ್ಟು ಮೋಹಕ ಮೊಗದ ಮಗು. ಅಷ್ಟೇ ಅಲ್ಲದೆ ಪ್ರಪಂಚದಾದ್ಯಂತ ಹೆಸರು ಮಾಡಿದ ಗಂಡನ ಜೊತೆಗೆ ಮುನಿಸು, ಜಗಳ ಮಾಡುವ ಮನಸ್ಸು ಅವರದ್ದಾಗಿರಲಿಲ್ಲ. ಗಂಡ-ಹೆಂಡತಿ ಜೊತೆಯಾಗಿ ಹೆಸರಿಟ್ಟರು ದೇವಾಂಶು ಎಂದು. ದಿನಗಳುರುಳಿದಂತೆ ಮಗುವಿನ ಲಾಲನೆ ಪಾಲನೆಯಲ್ಲಿ ಸುಖವನ್ನು ಅನುಭವಿಸತೊಡಗಿದ ಅನಸೂಯಮ್ಮನವರು ತಮ್ಮ ಐದನೇ ಮಗುವಂತೆ ದೇವಾಂಶುವನ್ನು ಭಾರೀ ಕಾಳಜಿಯಿಂದ ಸಾಕಿದರು. ಪುಟ್ಟ ಕಂದಮ್ಮನ ಮೈ ಬಣ್ಣ, ಮುದ್ದಾದ ಮುಖವನ್ನು ಕಂಡಾಗ ಆಕೆಗೆ ಕೆಲವೊಮ್ಮೆ ಶಾಸ್ತ್ರಿಗಳ ನೆನಪಾಗುತ್ತಿತ್ತು. ತಕ್ಷಣ ಗಂಡನನ್ನು ಹಾಗೆಲ್ಲ ಅನುಮಾನಿಸುವುದು ಸರಿಯಲ್ಲ ಎಂಬ ಪ್ರಜ್ಞೆ ಜಾಗೃತವಾಗಿ ಸಹಧರ್ಮಿಣಿಯ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದರು. ಆ ಮಗುವಿನ ಆಗಮನದಿಂದ ಮನೆಯ ವಾತಾವರಣವೇ ಬದಲಾಗಿಬಿಟ್ಟಿತು. ಮನೆಯಲ್ಲಿ ಮಾತು ಕಡಿಮೆಯಾಗಿರುವ ಶಾಸ್ತ್ರಿಗಳು ಮಗುವಿನ ಜೊತೆಗೆ ಆಡುವ, ಕುಣಿಯುವಷ್ಟರ ಮಟ್ಟಿಗೆ ಬದಲಾಗಿದ್ದರು. ಸರಿಯಾದ ವಯಸ್ಸಿಗೆ ಬ್ರಹ್ಮೋಪದೇಶ ಶಾಸ್ತ್ರವೂ ಆಯಿತು. ಶಾಸ್ತ್ರಿಗಳಿಗೆ ದೇವಾಂಶುವಲ್ಲಿ ತಮ್ಮ ಸಂಗೀತದ ಸಾರ ಸರ್ವಸ್ವವನ್ನೂ ಕಾಣುವ ಆಸೆ, ತವಕ. ಅದಕ್ಕಾಗಿ ಅನಸೂಯಮ್ಮನವರಲ್ಲಿ’ಅನಸೂಯಾ, ಮಗುವಿಗೆ ಸಂಗೀತದ ಕಡೆಗೆ ಒಲವಿದೆಯಾ ನೋಡು. ಇದ್ರೆ ಒಳ್ಳೆದು. ಅವ್ನಿಗೆ ವೀಣೆ, ಮೃದಂಗ ಪಿಟೀಲು ಕೈಯಲ್ಲಿ ಹಿಡಿಸಿ ನೋಡು. ಹಾಡೋದಕ್ಕೆ ಖುಷಿ ಇದೆಯಾ ನೋಡು. ಏನಾದ್ರೂ ಮಾಡ್ತಾನಾ ಅಂಥ ಗಮನಿಸು. ಇದ್ರಲ್ಲಿ ಆಸಕ್ತಿ ಇಲ್ಲದಿದ್ರೆ ಏನಾದರೂ ಬೇರೆ ಮಾಡಿಕೊಳ್ಳಲಿ. ನಮ್ಮ ಉಳಿದ ಮಕ್ಕ್ಳಂತೆ ಶಾಲೆ ಕಾಲೇಜು ಅಂತ ಹೋದ್ರೆ ಅಂತಾದ್ದೇನೂ ದೊಡ್ಡದು ಆಗಲ್ಲ’ ಅನ್ನುತ್ತಿದ್ದರು. ಅನಸೂಯಮ್ಮನಿಗೆ ಸಂಗೀತ ಏನೇನೂ ತಿಳಿಯದಿದ್ದರೂ ಗಂಡನ ಮನಸ್ಸಿನಲ್ಲೇನಿದೆ ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಪ್ರತಿಭೆ ಚೆನ್ನಾಗಿಯೇ ಇತ್ತು. ಹಾಗಾಗಿ ದೇವಾಂಶುವನ್ನು ಹೇಗೇಗೋ ಮಾಡಿ ಸಂಗೀತದ ಕಡೆಗೆ ಸೆಳೆಯಲು ಪ್ರಯತ್ನಿಸಿದರು. ಶಾಸ್ತ್ರಿಗಳು ಸ್ವತ: ಪಕ್ಕದಲ್ಲಿ ಕೂರಿಸಿ ಸಪ್ತಸ್ವರಗಳ ಆರೋಹಣ ಅವರೋಹಣ ಹೇಳಿಸಿದರು. ಹೀಗೆ ಅಪ್ಪ-ಅಮ್ಮ ಗಂಟೆ ಗಟ್ಟಲೆ ಕುಳ್ಳಿರಿಸಿ ದೇವಾಂಶುವಿಗೆ ಸಂಗೀತದ ಪಾಠ ಹೇಳಿಕೊಡಲಾರಂಭಿಸಿದರು. ಆದರೆ ದೇವಾಂಶುವಿಗೆ ಅಪ್ಪನದ್ದು ಹಿಂಸೆ ಅನ್ನಿಸಿತು. ‘ಈ ಸಂಗೀತವೂ ಬೇಡ ಎಂತದೂ ಬೇಡ, ನಾನು ಡಾಕ್ಟರ್ ಆಗ್ತೇನೆ’ ಅನ್ನತೊಡಗಿದ. ದೇವಾಂಶು ಆಗಲೇ ಅಪ್ಪ-ಅಮ್ಮನ ಪ್ರಪಂಚದಿಂದ ದೂರ ಸರಿದಿದ್ದ. ಮುದ್ದಾಗಿ ಸಾಕಿದ ಅಪ್ಪ-ಅಮ್ಮನಿಗೆ ಇಷ್ಟವಾಗಿದ್ದ ಸಂಗೀತ ಅವನ ತಲೆಗೆ ಹತ್ತಲಿಲ್ಲ. ಶಾಸ್ತ್ರಿಗಳಿಗೆ ಇನ್ನ್ಯಾವುದೋ ರೀತಿಯಲ್ಲಿ ಮಗನನ್ನು ಮೇಲೆ ತರಬೇಕೆಂಬ ಯೋಚನೆ. ಶಾಲೆ ಕಾಲೇಜಿಗೆ ಹೋಗದೆ ಬೇರೆ ಕ್ಷೇತ್ರದಲ್ಲಿ ಹೆಸರು ಮಾಡಿದ ಅನೇಕ ಉದ್ಯಮಿಗಳ, ಕಲಾವಿದರ, ಯಶಸ್ವೀ ಪುರುಷರ ಯಶಸ್ಸಿನ ಗಾಥೆಯೂ ಶಾಸ್ತ್ರಿಗಳ ಮುಂದಿತ್ತು. ಭ್ರಷ್ಟ ಶೈಕ್ಷಣಿಕ ವ್ಯವಸ್ಥೆ, ಕಾರ್ಪೋರೇಟ್ ಶಿಕ್ಷಣ ನೀತಿ ಬದುಕು ಕಲಿಸುವುದಿಲ್ಲ, ನೀತಿ-ಮೌಲ್ಯಗಳನ್ನು ತಿಳಿಸುವುದಿಲ್ಲ ಎಂದು ಭಾವಿಸಿದ್ದರು. ಹಾಗಾಗಿ ಶಾಸ್ತ್ರಿಗಳು ಎಂಬಿಬಿಎಸ್, ಇಂಜಿನಿಯರಿಂಗ್ ಶಿಕ್ಷಣದ ಬಗ್ಗೆ ಸಂಪೂರ್ಣ ನಂಬಿಕೆ ಕಳೆದುಕೊಂಡು ಬಿಟ್ಟಿದ್ದರು. ಬೇರೆ ಏನಾದರೂ ಕೌಶಲ್ಯಾಧಾರಿತ ಶಿಕ್ಷಣ ಮಗನಿಗೆ ಕೊಡಿಸಬೇಕೆಂಬ ಯೋಚನೆ ಅವರದಾಗಿತ್ತು. ಇದು ದೇವಾಂಶುವಿಗೆ ಸುತಾರಾಂ ಇಷ್ಟ ಇರಲಿಲ್ಲ. ಸುಖದ ಜೀವನದ ಹಿಂದೆ ಬಿದ್ದಿದ್ದ ದೇವಾಂಶುವನ್ನು ಅವನ ಸುತ್ತಲಿನ ಅಸಂಖ್ಯ ಚಿತ್ರಗಳು, ಬಣ್ಣಗಳು, ವಾಸನೆಗಳು ಉನ್ಮಾದಗೊಳಿಸಿದ್ದವು. ಇಂಥಾ ಸ್ಥಿತಿಯಲ್ಲಿರುವ ಅವನಿಗೆ ತಂದೆಯ ಆದರ್ಶ ಹಳೇಕಾಲದ್ದು ಎನಿಸಿತು. ಅವನ ಕನಸುಗಳೇ ಬೇರೆ. ವಿಜ್ಞಾನದ ಶಿಕ್ಷಣ ಪಡೆದು ತಾನು ದೊಡ್ಡ ವ್ಯಕ್ತಿಯಾಗಬೇಕೆಂಬುದು ಅವನಾಸೆ. ಡಾಕ್ಟರ್ ಆಗಬೇಕು, ಆಫೀಸರ್ ಆಗಬೇಕು, ಇಲ್ಲ ಮಾಧ್ಯಮದಲ್ಲಿ ಆಗಾಗ ಕಾಣಿಸಿಕೊಳ್ಳಲು ಅವಕಾಶ ಇರುವ ರಾಜಕಾರಣಿ ಆಗಬೇಕೆಂಬ ಬಯಕೆ ಅವನದು. ಯಾರ್ಯಾರೋ ಅವನ ಮನಸ್ಸಲ್ಲಿ ಸುಳಿದಾಡುತ್ತಾರೆ. ಏನೇನೋ ಭವ್ಯ ಕನಸಲ್ಲಿ, ಯಾರನ್ನೋ ರೋಲ್ ಮಾಡೆಲ್ ಆಗಿ ಕಂಡಿದ್ದಾನೆ. ಶಾಸ್ತ್ರಿಗಳು ಕೊನೆಗೆ ಏನೂ ಹೇಳಲಾಗದೇ ದೇವಾಂಶುವಿನ ಇಚ್ಛೆಯಂತೆ ಲಕ್ಷ ಲಕ್ಷ ಖರ್ಚು ಮಾಡಿ ಮೆಡಿಕಲ್ ಓದಿಸಿದರು. ಎಂ ಡಿ ಯೂ ಆಯಿತು. ತಕ್ಷಣ ದೇವಾಂಶು ಕುವೆಂಪು ನಗರದಲ್ಲಿ ಕ್ಲಿನಿಕೊಂದನ್ನು ತೆರೆಯಲು ಮುಂದಾದ. ಆಗಲೂ ಶಾಸ್ತ್ರಿಗಳು ಈ ಖಾಸಗಿ ಕ್ಲಿನಿಕ್ ಬೇಡ ಅಂದಿದ್ದರು. ಕೊನೆಯ ಪಕ್ಷ ಮಗ ಸರಕಾರಿ ವೈದ್ಯನಾಗಿ, ಹಳ್ಳಿಗೆ ತೆರಳಿ ಜನಸಾಮಾನ್ಯರ ಸೇವೆ ಮಾಡಲಿ ಎಂಬುದು ಅವರ ಯೋಚನೆ. ಶಾಸ್ತ್ರಿಗಳು ಬದುಕಲ್ಲಿ ತಾವು ಸದಾ ಸಫಲರೆಂದು ಮತ್ತೆ ಮತ್ತೆ ಹೇಳುತ್ತಿದ್ದರು. ಆದರೆ ದೇವಾಂಶುವಿನ ವಿಷಯದಲ್ಲಿ ಅವರು ಒಳಗೊಳಗೆ ವಿಫಲರಾಗುತ್ತಿದ್ದರು. ಅದು ಅವರ ಪ್ರತಿಷ್ಠೆಗೆ ಪೆಟ್ಟುಕೊಟ್ಟಂತಾಗುತ್ತಿತ್ತು. ಹಾಗಾಗಿ ಅವನ ಕನಸಿಗೆ ಆಗಾಗ ನಿರ್ವಾಣದ ಮಂತ್ರವನ್ನು ಉಚ್ಛರಿಸುತ್ತಿದ್ದರು.
ಭಾಗ-೪
ಅಂದಿಗೆ ಶಾಸ್ತ್ರಿಗಳ ಮರಣವಾಗಿ ಹತ್ತನೇ ದಿನ. ಅಂದು ಧರ್ಮೋದಕದ ದಿನ. ಕನ್ನಿಕಾ ದೇವಿ ಕ್ಷೇತ್ರದ ಕಾವೇರಿ ನದಿ ತೀರದಲ್ಲಿ ಶಾಸ್ತ್ರಿಗಳ ಮೂರು ಮಂದಿ ಗಂಡು ಮಕ್ಕಳು ಮಾತ್ರವಲ್ಲದೇ ಇನ್ನೂ ಕೆಲವರು ಬಂಧು ಬಾಂಧವರು ಅಲ್ಲಿ ಸೇರಿದ್ದರು. ಮಂತ್ರ ಹೇಳುತ್ತ ನದಿಯಲ್ಲಿ ಸೊಂಟದವರೆಗೆ ಒದ್ದೆಯಾಗಿ ಬೊಗಸೆಯಲ್ಲಿ ನೀರು ತುಂಬಿ ತರ್ಪಣ ಬಿಡುತ್ತಿದ್ದ ದೇವಾಂಶು ಒಂದು ಕ್ಷಣ ತಾನು ಮಾಡುತ್ತಿರುವ ಕ್ರಿಯೆಯನ್ನು ನಿಲ್ಲಿಸಿ, ಹತ್ತು ದಿನಗಳ ಹಿಂದೆ ತೀರಿ ಹೋದ ತಂದೆಯ ಬಗ್ಗೆ ಯೋಚಿಸುತ್ತಾ ನಿಂತಿದ್ದ:
ಅಪ್ಪನ ಮನಸ್ಸಲ್ಲಿ ಏನಿತ್ತು…? ಅವರನ್ನು ನಾನು ಸರಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲಿಲ್ವೆ…? ಅವರ ಕೊನೆಯ ದಿನಗಳಲ್ಲಿ ನಮ್ಮ ನಡುವೆ ಪರಸ್ಪರ ಪ್ರೀತಿಯ ನೋಟಗಳೇ ಇರ್ಲಿಲ್ಲ… ಅವರ ಭಾವಪ್ರಪಂಚದಲ್ಲಿ ನನಗೊಂದು ಪುಟ್ಟ ಜಾಗಾನೇ ಇರ್ಲಿಲ್ಲ.
ಶಾಸ್ತ್ರಿಗಳ ನಿರ್ಗಮನದಿಂದ ವಿಚಲಿತರಾಗಿದ್ದ ಪದ್ಮಿನೀ ದೇವಿಯವರು ದೇವಿಯ ಸನ್ನಿಧಿಯಲ್ಲಿ ಸ್ವಲ್ಪ ಕಾಲ ಇದ್ದು ನದೀ ದಂಡೆಗೆ ಬಂದರು. ದೇವಾಂಶುವನ್ನು ದೂರದಿಂದಲೇ ಗಮನಿಸುತ್ತಾ ಅಲ್ಲೇ ನಿಂತಿದ್ದ ಅವರನ್ನು ತಿರುಗಿ ನೋಡಿದ ದೇವಾಂಶು ‘ಆಂಟೀ ಆಗ್ಲೇ ಬಂದ್ರಾ?’ ಎನ್ನುತ್ತಾ ನೀರಿನಿಂದ ಮೇಲೆ ಬಂದ. ಸ್ವಲ್ಪ ಹೊತ್ತು ಏನು ಮಾತಾಡಬೇಕೆಂದು ಇಬ್ಬರಿಗೂ ತೋಚಲಿಲ್ಲ.
ಕಳೆದ ಹತ್ತು ದಿನಗಳಿಂದ ಕ್ಷಣ ಕ್ಷಣಕ್ಕೂ ತನ್ನನ್ನು ಕೊರೆಯುತ್ತಿರುವ ವಿಷಯವನ್ನು ಅವನಿಗೆ ಯಾರಲ್ಲಾದರೂ ಹೇಳಲೇ ಬೇಕಿತ್ತು. ತನ್ನ ವರ್ತನೆಯಿಂದ ನೊಂದು ತಂದೆ ಮರಣಿಸಿದರೆಂದು ಬಗೆದಿದ್ದ ಅವನು ಪಾಪಪ್ರಜ್ಞೆಯಿಂದ ಬಳಲಿದ್ದ. ಹಾಗಾಗಿ ವಿಷಯವನ್ನೆಲ್ಲ ಈ ಪದ್ಮಿನೀ ದೇವಿಯವರಲ್ಲಿ ಹೇಳಿದರೆ ಹೇಗೆ ಎಂದು ಯೋಚಿಸಿದ. ‘ಹೇಗಿದ್ದರೂ ಈ ಆಂಟೀ ನಮ್ಮ ಮನೆಗೆ ಹತ್ತಿರದವರು ಜೊತೆಗೆ ಅಪ್ಪನಿಗೆ ತುಂಬಾ ಆತ್ಮೀಯರಾಗಿದ್ದವರು, ಇವರಲ್ಲಿ ಹೇಳಿದ್ರೆ ಏನೂ ಸಮಸ್ಯೆಯಾಗದು’ ಎಂದು ಭಾವಿಸಿ,
‘ಆಂಟೀ.. ಅಪ್ಪ ನಿಮ್ಮಲ್ಲಿ ಏನಾದ್ರೂ ಹೇಳಿದ್ರ?
‘ಏನು ಹೇಳ್ತಾರೆ..?’
‘ಅಲ್ಲ.. ನಮ್ಮ ನಡುವೆ… ನಡೆದ ಜಗಳದ ಬಗ್ಗೆ ಮತ್ತೆ…’
`ಇಲ್ವೆ, ನಂಗೇನೂ ಗೊತ್ತಿಲ್ಲ. ಏನಾಗಿತ್ತು ದೇವಾಂಶು..?’
`ನಾನು ಕ್ಲಿನಿಕ್ ತೆರೆಯಬೇಕೆಂದು ಹಠ ಹಿಡಿದಿದ್ದೆ. ಆವರಿಗೆ ಅದು ಇಷ್ಟ ಇರಲಿಲ್ಲ. ನಾನು ನನ್ನ ಪರಿಚಯಸ್ಥ ಮಂತ್ರಿಯೊಬ್ಬನನ್ನ ಹಿಡಿದು ನನ್ನ ಕೆಲಸ ಮಾಡಿಸ್ಕೊಂಡೆ. ಆ ಮಂತ್ರಿಗೆ ದುಡ್ಡು ಕೊಡ್ಬೇಕಾಗಿತ್ತು. ಆದ್ರೆ ಅಪ್ಪ ಲಂಚ ಕೊಡೋಕೆ ದುಡ್ಡು ಕೊಡಲ್ಲ ಅಂದ್ರು. ನನ್ಗೂ ಅವರೊಂದಿಗೆ ಸಾಕಾಗಿತ್ತು. ನಾನು ಸುಮ್ನಿರಲ್ಲ ಅಂದೆ. ಬೇಕಾದ್ದೂ ಮಾಡು ಅಂದ್ರು.’
`ಏನು ಮಾಡ್ದೆ?’
`ಅಪ್ಪ ಬಂಗಾಳದಲ್ಲಿ ರಬೀಂದ್ರನಾಥ ಠಾಗೂರರ ಗೀತೆಗಳನ್ನು ಶಾಸ್ತ್ರೀಯ ಶೈಲಿಯಲ್ಲಿ ಹಾಡಿದ್ದಕ್ಕೆ ಅಲ್ಲಿಯ ಸಂಗೀತ ವಿದ್ವಾಂಸರೆಲ್ಲರೂ ಸೇರಿ ಅಪ್ಪನಿಗೆ ‘ಗಾನಯೋಗಿ’ ಬಿರುದನ್ನು ನೀಡಿ ಕೋಲ್ಕೊತ್ತ ಕಡಗವನ್ನು ಕೈಗೆ ತೊಡಿಸಿದ್ದರು. ಸಂಗೀತಗಾರರೆಲ್ಲರೂ ಸೇರಿ ಸಂಗೀತಗಾರನಿಗೆ ಕಡಗ ತೊಡಿಸಿದ್ದು ಸಂಗೀತ ಲೋಕದ ಚರಿತ್ರೆಯಲ್ಲೇ ಅದೇ ಮೊದಲಾಗಿತ್ತು. ಹಾಗಾಗಿ ಆ ಕಡಗದ ಬಗ್ಗೆ ಅಪ್ಪನಿಗೆ ಏನೋ ಮೋಹ ಇತ್ತು. ಕಛೇರಿಗೆ ಹೋಗುವಾಗ ತಪ್ಪದೆ ಹಾಕುತ್ತಿದ್ದ ಕಡಗವದು. ವಜ್ರದ ಹರಳು ಮತ್ತು ಬಂಗಾರದಿಂದ ಮಾಡಿದ ಆ ಕಡಗ ದುಬಾರಿ ಬೆಲೆಯದ್ದು. ನನ್ನ ಕಣ್ಣು ಅದರ ಮೇಲೆ ಬಿತ್ತು. ಅದನ್ನು ರತ್ನ ವ್ಯಾಪಾರಿಗೆ ಮಾರಿದೆ. ಚೆಕ್ ಪುಸ್ತಕಕ್ಕೆ ಅಪ್ಪನ ಸಹಿಯನ್ನು ನನ್ನ ಗೆಳೆಯನೊಬ್ಬನಿಂದ ಪೋರ್ಜರಿ ಮಾಡಿಸಿ ಹಣ ಹಾರಿಸಿದೆ.’
`ದೇವಾಂಶು ಇದನ್ನೆಲ್ಲ ಮಾಡಲು ನಿನ್ಗೆ ಮನಸ್ಸಾದಾರೂ ಹೇಗಾಯ್ತು..?’
`ವಿಷ್ಯ ಗೊತ್ತಾದ ಅಪ್ಪ ಅಂದು ಬೆಳಿಗ್ಗೆ ನನ್ನನ್ನು ಪ್ರಶ್ನಿಸಿದ್ರು. ನಾನು ಗಾಬರಿಗೊಂಡಿದ್ದೆ. ಆದ್ರು ಧೈರ್ಯದಿಂದ ಅಪ್ಪನನ್ನು ಎದುರಿಸಿದೆ. ನನ್ಗೆ ಬೇರೆ ದಾರಿ ಇರ್ಲಿಲ್ಲ. ನಮ್ಮ ಮಧ್ಯೆ ಜಟಾಪಟಿ ಜೋರಾಯಿತು. ‘ಮನೆ ಬಿಟ್ಟು ಹೋಗ್ತೇನೆ, ಆಸ್ತಿ ಪಾಲು ಕೊಡಿ’ ಅಂದೆ. ಈಗ ಕೊಡೊಲ್ಲ ಅಂದ್ರು..’
‘ಅದ್ಕೆ..?’
‘ನನ್ನೊಳಗಿನ ಸ್ವಾಭಿಮಾನ ಮತ್ತು ಕೇಡಿಗತನ ಹುಚ್ಚೆದ್ದು ಕುಣಿಯುತ್ತಿತ್ತು. ನನ್ಗೆ ಬೇಕಾದ್ದನ್ನ ಇನ್ನೂ ಕೊಂಡೊಯ್ಯುತ್ತೇನೆ. ನನಗಿಂತ ಮೊದ್ಲು ಹುಟ್ಟ್ದೋರಿಗೆಲ್ಲ ಬೇಕಾದ್ದು ಮಾಡಿದ್ದೀರಿ. ನನ್ಗೆ ಮಾತ್ರ ಹೀಗೆ. ನಿಮ್ಮ ಕಚ್ಚೆಹರುಕತನಕ್ಕೆ ಎಷ್ಟು ಬೇಕಾದ್ರು ಖರ್ಚು ಮಾಡ್ತೀರಿ. ಮಕ್ಳ ಆಸೇನ ಈಡೇರಿಸ್ಲಿಕ್ಕೆ ಆಗದ ಮೇಲೆ ನಿಮ್ಮಂಥವರಿಗೆಲ್ಲ ಮಕ್ಳ ಹುಟ್ಟಿಸೋ ಕೆಲ್ಸ ಯಾಕೆ ಬೇಕು..? ನಿಮ್ಮನ್ನ ಸುಮ್ನೆ ಬಿಡೋದಿಲ್ಲ.’ ಅಂದೆ.
‘ಓ ಮೈ ಗಾಡ್..’
‘ಅದ್ಕೆ ಏನಂದ್ರು?’
`ಇಲ್ಲ ಆಂಟಿ. ಅವ್ರ ಮಾತು ಅಲ್ಲಿಗೇ ಕೊನೆಯಾಗಿತ್ತು..’
‘…ನೀನು ಚಿಕ್ಕವನಿದ್ದಾಗ ನಿನ್ನಪ್ಪ ಜಾತ್ರೆಗೆ ಕರೆದುಕೊಂಡು ಹೋಗಿದ್ರು. ಅಲ್ಲಿ ರಥವನ್ನು ನೋಡ್ಬೇಕೆಂದು ನೀನು ಹಠ ಹಿಡಿದಿದ್ದೆ. ನಿನ್ನಪ್ಪ ನಿನ್ನನ್ನ ಹೆಗಲ ಮೇಲೆ ಕೂರಿಸಿ ತೇರು ತೋರಿಸಿದ್ರು. ನಿನ್ನ ಸಂತೋಷಕ್ಕೆ ಪಾರವೇ ಇರ್ಲಿಲ್ಲ. ಆಗ ನಿನ್ಗೆ ಅಪ್ಪ ಅಂದ್ರೆ ಆಕಾಶ ಅಂತ ಗೊತ್ತಿರ್ಲಿಲ್ಲ. ಆದ್ರೆ ಈಗ್ಲೂ ಗೊತ್ತಾಗ್ಲೇ ಇಲ್ಲ. ನೀನು ತಪ್ಪು ಮಾಡಿ ಬಿಟ್ಟೆ ದೇವಾಂಶು…’
‘ನನ್ಗೆ ಅರ್ಥ ಆಗ್ತಿಲ್ಲ.’
‘ಹೌದು. ಇದೆಲ್ಲ ನಿನ್ಗೆ ಅರ್ಥ ಆಗದು. ಆದ್ರೆ ನೀನೀಗ ಎಲ್ಲವನ್ನು ಅರ್ಥ ಮಾಡಿಕೊಳ್ಳಲೇಬೇಕು. ದೇವಾಂಶು, ನೀನು ದೇವರ ಅಂಶದಿಂದ ಹುಟ್ಟಿದ ಹಾಗೆ ಹುಟ್ಟಿ ಬಂದವನು….’
`ಅಂದ್ರೆ…ಆಂಟೀ ಏನು ಹೇಳ್ತಿದ್ದೀರಾ..?’
‘ಹೌದು ದೇವಾಂಶು. ಗಂಡ, ಮಕ್ಕಳು ಎಂದು ನನ್ನದೇ ಸಂಸಾರ ಇದ್ದರೂ ಅವರನ್ನೆಲ್ಲ ನಿರ್ಲಕ್ಷಿಸಿ, ಸಮಾಜ ನಾಳೆ ಏನು ಹೇಳಬಹುದು ಎಂಬುದನ್ನೂ ಯೋಚಿಸದೆ ನನ್ನ ಗಮನವನ್ನು ಈ ಶಾಸ್ತ್ರಿ ಮತ್ತು ಅವರ ಕುಟುಂಬದ ಕಡೆಗೆ ಕೊಡುತ್ತಿದ್ದ ನನಗೆ ಶಾಸ್ತ್ರಿಗಳು ಎಲ್ಲಾನೂ ನನ್ನಲ್ಲಿ ಹೇಳ್ಬೇಕು ಅಂತ ನಿರೀಕ್ಷೆ ಇತ್ತು. ಆದ್ರೆ ಕೆಲವೊಮ್ಮೆ ಅವರ ಮಾತು, ನಡವಳಿಕೆಗಳು, ವಿಚಿತ್ರವಾಗಿದ್ದವು. ಅಲ್ಲಿ ಗೊಂದಲ ಇರುತ್ತಿತ್ತು. ಅದೂ ನಿನ್ನ ವಿಷ್ಯದಲ್ಲಂತೂ ಎಲ್ಲ ನಿಗೂಢವೇ.’
‘ನನ್ನ ಬಗ್ಗೆ ನಿಗೂಢತೆಯೇ..?’
‘ಹೌದು ದೇವಾಂಶು. ಮೊದ ಮೊದಲು ನಿನ್ನನ್ನೂ ಕಂಡಾಗಲೆಲ್ಲ ನನಗೆ ಇದ್ದದ್ದು ಸಂಶಯ, ಅಸಹನೆಯೇ. ಆದರೆ ಶಾಸ್ತ್ರಿಯವರ ಎದುರಲ್ಲಿ ಅದನ್ನು ತೋರಿಸಲಾಗುತ್ತಿರಲಿಲ್ಲ.
‘ನಾನು ನಿಮ್ಗೆ ಅಂಥಾದ್ದೇನು ಮಾಡಿದ್ದೆ ಆಂಟಿ?’
‘ನೀನು ಏನೂ ಮಾಡಿರ್ಲಿಲ್ಲ. ಅದು ನನ್ನ ಸಮಸ್ಯೆಯಾಗಿತ್ತು. ನಿನ್ನ ಕುರಿತಾಗಿ ಶಾಸ್ತ್ರಿಗಳಿಗೆ ಅವರ ಹೆಂಡತಿ ಮಕ್ಕಳಿಗಿಂತ ಹೆಚ್ಚು ಕಾಟ ನಾನೇ ಕೊಡುತ್ತಿದ್ದೆ. ಕೊನೆಗೊಂದು ದಿನ ನನ್ನ ನಿರಂತರ ಒತ್ತಾಯ, ಕಾಟ ತಡೆಯಲ್ಕೆ ಆಗದೆ ಅವರು ನಿನ್ನ ಕತೆಯನ್ನು ಹೇಳಲೇಬೇಕಾಯಿತು.’:
ಮದ್ರಾಸಿಗೆ ಹೋದಾಗೆಲ್ಲ ಒಬ್ಬಾಕೆ ನನ್ನ ಅಭಿಮಾನಿ ಅಂತ ಹೇಳ್ತಾ ಬಂದು ಮಾತನಾಡಿಸುತ್ತಿದ್ಳು. ಸಂಗೀತ, ನಾಟ್ಯವನ್ನು ಬಲ್ಲವಳಾಗಿದ್ಳು. ಚಾರುಲತಾ ಎಂಬ ಹೆಸರಿನ ಆಕೆ ಹಿಂದೋಳ ರಾಗದಲ್ಲಿ ನಾನು ಹಾಡುತ್ತಿದ್ದ ‘ಸಾಮಜ ವರ ಗಮನ ಸಾಧು ಹೃತ್ಸಾರಸಾಬ್ಜ ಪಾಲಕಾಲಾತೀತ ವಿಖ್ಯಾತ…’ ಹಾಡನ್ನು ತುಂಬಾ ಮೆಚ್ಚಿಕೊಂಡಿದ್ದೇನೆ ಅಂತ ಹೇಳ್ತಿದ್ಳು. ಬರಬರುತ್ತ ಅವಳ ಪರಿಚಯ ಸ್ನೇಹ ಹೆಚ್ಚಾಗಿ ತೀರಾ ಹತ್ತಿರವಾದ್ಳು. ಅವಳ ನಾಟ್ಯವನ್ನು ನೋಡಿದ್ದೆ. ಮಧುರೆ ಮೀನಾಕ್ಷಿ ದೇವಾಲಯದ ಜಾತ್ರಾ ಸಂದರ್ಭದ ಅವಳ ಜಾವಳಿ ನಾಟ್ಯ ಶ್ರೇಷ್ಠ ಮಟ್ಟದ್ದಾಗಿತ್ತು. ಆ ನಾಟ್ಯ ಪ್ರಕಾರದ ಬಗ್ಗೆ ನನ್ಗೆ ತಿಳಿಸಿಕೊಟ್ಟವಳು ಅವ್ಳೇ. ನಾಟ್ಯಶಾಸ್ತ್ರವನ್ನು ನನ್ಗೆ ಬಿಡಿಸಿ ಬಿಡಿಸಿ ಹೇಳಿದವ್ಳು ಕೂಡಾ ಅವ್ಳೇ. ನನ್ನ ಗಾಯನ, ವಾದನ, ಸಂಯೋಜನೆ ಎಲ್ಲವನ್ನೂ ಮತ್ತೆ ಮತ್ತೆ ಹೊಗಳುತ್ತಿದ್ಳು. ಈ ಕತೆಯನ್ನು ಕೇಳುತ್ತಿದ್ದಂತೆ ನನ್ನ ಆತಂಕ ಹೆಚ್ಚಾಗತೊಡಗಿತ್ತು. ಇವರಿಬ್ಬರ ಸಂಬಂಧ ಎಲ್ಲಿಗೆ ಮುಟ್ಟುತ್ತೆ ಅಂತ ಚಿಂತೆಗೀಡಾಗಿದ್ದೆ.
ನನ್ನನ್ನು ಸ್ವರಗಳ ಜೊತೆಗೆ ರೊಮ್ಯಾನ್ಸ್ ಮಾಡುವ ಸಂಗೀತಗಾರನೆಂದೂ, ನಾನು ಹಾಡುವಾಗ ಒಂದು ಆಟದಂತೆ ಮತ್ತು ಮುದಭರಿತ ನಾಟ್ಯದಂತೆ ಕಾಣುತ್ತದೆ ಎಂದೆಲ್ಲ ಹೇಳುತ್ತಿದ್ಳು. ನಾನೂ ಅಷ್ಟೇ ಅವಳ ನಾಟ್ಯವನ್ನು ಮೆಚ್ಚಿ ಅವಳಲ್ಲಿ ಮಾತಾಡುತ್ತಿದ್ದೆ. ನನ್ನೆಲ್ಲ ಶೃಂಗಾರ ರಚನೆಗಳ ಸ್ಫೂರ್ತಿಯಾಗಿದ್ದ ಚಾರುಲತೆ ಬರ ಬರುತ್ತ ನನ್ಗೆ ಹತ್ತಿರವಾಗತೊಡಗಿದ್ಳು. ಸಲುಗೆ ಹೆಚ್ಚಾದದ್ದೇ ಇದ್ದಕ್ಕಿದ್ದ ಹಾಗೆ ಆಕೆ ನನ್ನ ಸಂಪರ್ಕದಿಂದ ದೂರವಾದ್ಳು. ಆಮೇಲೆ ನಾನು ಮದ್ರಾಸಿಗೆ ಹೋದಾಗ ಅವ್ಳು ನನ್ನನ್ನು ಕಾಣೋಕೆ ಬರ್ತಿರ್ಲಿಲ್ಲ. ನನ್ನ ಕಣ್ಣು ಅವಳಿಗಾಗಿ ಹುಡುಕಾಡುತ್ತಿತ್ತು. ನಾನು ತೊಳಲಾಡಿದೆ. ಸುಮಾರು ಒಂದು ವರ್ಷ ಹತ್ರ ಹತ್ರ ನನ್ಗೆ ಕಾಂಟ್ಯಾಕ್ಟ್‌ಗೇ ಸಿಗ್ಲಿಲ್ಲ. ಅವಳ ಮನೆಯೂ ನನ್ಗೆ ಗೊತ್ತಿರ್ಲಿಲ್ಲ. ಒಂದಿಬ್ಬರಲ್ಲಿ ವಿಚಾರಿದಾಗ ಸರಿಯಾದ ಮಾಹಿತಿ ಸಿಗ್ಲಿಲ್ಲ. ಆದ್ರೆ ಒಂದು ದಿನ ಇದ್ದಕ್ಕಿದ್ದ ಹಾಗೆ ಫೋನ್ ಮಾಡಿ ನನ್ನನ್ನ ಮದ್ರಾಸಿಗೆ ಬರ ಹೇಳಿದ್ಳು. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಅದೇ ವೇಳೆಗೆ ಮದ್ರಾಸಿನಲ್ಲಿ ಸನ್ ಟಿವಿಯ ಕಾರ್ಯಕ್ರಮವೂ ನಿಗದಿಯಾಗಿತ್ತು. ಕಛೇರಿಯ ನಂತರ ಸಿಕ್ಕ ಅವಳು ನೇರವಾಗಿ ನನ್ನನ್ನು ಅವಳಿರುವ ಜಾಗಕ್ಕೆ ಕರೆದುಕೊಂಡು ಹೋದ್ಳು. ಅದೊಂದು ದೇವದಾಸಿ ನೃತ್ಯಾಂಗನೆಯರ ಕೇರಿ. ಅಲ್ಲೊಂದು ಹರುಕು ಮುರುಕು ಮನೆ. ಆ ಮನೆಯೊಳಗೆ ನಾವು ಕಾಲಿಡುತ್ತಿದ್ದಂತೆ ಇನ್ನೊಬ್ಬ ಗಂಡಸು ಚಾರುಲತೆಯ ಹೆಸರನ್ನು ಕೂಗಿಕೊಂಡು ಒಳಬಂದ. ಕುಡಿದ ಅಮಲಿನಲ್ಲಿದ್ದ ಅವನಿಗೆ ವಾಸ್ತವ, ಭ್ರಮೆಯ ಅರಿವಿರಲಿಲ್ಲ. ನನ್ನನ್ನು ನೋಡಿದವನೇ ಒಮ್ಮೆಲೇ ವ್ಯಗ್ರನಾಗಿ ಬಿಟ್ಟ. ಕೋಪೋದ್ರಿಕ್ತನಾಗಿ ನನ್ನನ್ನು ಹೊಡೆಯಲು ಧಾವಿಸಿ ಬಂದ. ಚಾರುಲತೆ ನಡುವೆ ಬಂದಳು. ನಾನೂ ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ. ನನಗಿಂತ ಗಟ್ಟಿಮುಟ್ಟಾದ ಆ ಮನುಷ್ಯನಿಂದ ಅಷ್ಟು ಸುಲಭದಲ್ಲಿ ತಪ್ಪಿಸಿಕೊಳ್ಳಲಾಗದೇ ನಾನು ಬಿದ್ದು ಬಿಟ್ಟೆ. ಅವನೂ ನನ್ನ ಮೇಲೆ ಹಾರಿ ಬಿದ್ದ. ಉಸಿರುಗಟ್ಟಿದಂತಾಯಿತು. ಕಣ್ಣಿಗೆ ಏನೂ ತೋಚುತ್ತಿರಲಿಲ್ಲ. ಅಚೀಚೆ ಕೈಯಾಡಿಸಿದಾಗ ಕೈಗೊಂದು ಬಡಿಗೆ ಸಿಕ್ಕಿತು. ಅದನ್ನು ಜೋರಾಗಿ ಬೀಸಿದೆ. ನನ್ನ ಮೇಲಿದ್ದ ವ್ಯಕ್ತಿ ಜಾರಿ ಬದಿಗೆ ಸರಿದಿದ್ದ. ನಾನು ಹೊಡೆದ ಏಟು ಯಾರಿಗೆ ತಾಗಿತ್ತು ಅಂತ ನನಗೆ ತಿಳಿವಳಿಕೆ ನನ್ನಲ್ಲಿರಲಿಲ್ಲ. ಆದರೆ ಕಣ್ತೆರೆದು ನೋಡಿದಾಗ ಚಾರುಲತೆ ರಕ್ತದ ಮಡುವಲ್ಲಿ ಬಿದ್ದಿದ್ದಳು. ಭಯಗೊಂಡಿದ್ದೆ. ಸಾವು ಬದುಕಿನ ನಡುವೆ ಆಕೆ ಹೋರಾಡುತ್ತಿದ್ದಂತೆ ಕಂಡಿತು. ಅವಳು ಮಾತನಾಡುವ ಶಕ್ತಿಯನ್ನು ಕಳಕೊಂಡಿದ್ದಳು. ಕೈಭಾಷೆಯಲ್ಲಿ ನನ್ನನ್ನು ಕರೆದಳು. ಅವಳನ್ನು ಸಮೀಪಿಸಿದ ನನ್ನನ್ನು ಅಲ್ಲೇ ತೂಗುತ್ತಿದ್ದ ತೊಟ್ಟಿಲ ಕಡೆಗೆ ಮೆಲ್ಲನೆ ತಳ್ಳಿದಳು. ತೊಟ್ಟಿಲ ನೋಡಿದರೆ ಅದರಲ್ಲೊಂದು ಸುಂದರವಾದ ಪುಟ್ಟ ಮಗು. ಚಾರುಲತೆ ಮತ್ತೆ ಕೈ ಸನ್ನೆಯಿಂದ ಏನನ್ನೋ ಹೇಳುತ್ತಿದ್ದಳು. ಅದನ್ನೇ ಪದೇ ಪದೇ ಮಾಡುತ್ತಿದ್ದಳು. ನನಗೆ ಏನೂ ಅರ್ಥವಾಗುತ್ತಿರಲಿಲ್ಲ. ಕೊನೆಗೆ ಆ ಮಗುವನ್ನು ಅಲ್ಲಿಂದ ನಾನು ಕೊಂಡು ಹೋಗುವಂತೆ ಅವಳು ಹೇಳುತ್ತಿದ್ದಾಳೆ ಅಂತನ್ನಿಸಿತು. ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ಇನ್ನಷ್ಟು ಅಧೀರನಾದೆ. ಕಛೇರಿಗೆಂದು ಬಂದವನು ಇಲ್ಲಿಂದ ಮಗುವನ್ನು ಎತ್ತಿಕೊಂಡು ಹೇಗೆ ಹೋಗಲಿ ಎಂದು ಸಂದಿಗ್ಧತೆಯಲ್ಲಿ ಬಿದ್ದಿದ್ದೆ. ಆದರೆ ಹೆಚ್ಚು ಯೋಚಿಸಲು ಅಲ್ಲಿ ಸಮಯವಿಲ್ಲದ ಕಾರಣ ತೊಟ್ಟಿಲಿಂದ ಮಗುವನ್ನು ಎತ್ತಿಕೊಂಡೆ. ರಕ್ತಲೇಪಿತ ತನ್ನ ಕೈಗಳಿಂದ ಚಾರುಲತೆ ನನ್ನನ್ನು ಅಲ್ಲಿಂದ ಹೊರಟು ಹೋಗುವಂತೆ ಮತ್ತೆ ಕೈ ಸನ್ನೆ ಮಾಡತೊಡಗಿದಳು. ನನ್ನ ಮೇಲೆ ಅಷ್ಟೊಂದು ಅಭಿಮಾನವನ್ನು ಇಟ್ಟುಕೊಂಡಿದ್ದ ಆಕೆಯನ್ನು ನಾನು ಒಂದಿಷ್ಟು ಉಪಚರಿಸದೇ ಕಲ್ಲು ಹೃದಯಿಯಾಗಿ ಮಗುವನ್ನು ಎತ್ತಿಕೊಂಡು ಬಂದು ಕಾರಲ್ಲಿ ಕೂತೆ. ಮುಂದೆ ಆದದ್ದು ಆಗಲಿ ಎಂದು ಅಲ್ಲಿಂದ ಹೊರಟು ಬಂದೆ. ಮಗುವನ್ನು ತಂದು ಅನಸೂಯನ ಕೈಗಿತ್ತೆ. ಆಮೇಲೆ ಏನಾಯ್ತೆಂದು ನನಗೆ ಗೊತ್ತಿಲ್ಲ.
ನನ್ಗೆ ಕುತೂಹಲವೂ, ಆತಂಕವೂ ಇತ್ತು. ಶಾಸ್ತ್ರಿಗಳು ಮಾತ್ರ ಕತೆ ಕೇಳಿದ ಮೇಲೆ ನನ್ನಲ್ಲಿ ಪ್ರಶ್ನೆಗಳೇ ಹುಟ್ಟಬಾರದು ಅನ್ನುವ ರೀತಿಯಲ್ಲಿ ಕತೆಯನ್ನು ನಿರೂಪಿಸಿದ್ದರು. ಹಾಗಾಗಿ ಗರುಡ ಮಂತ್ರಕ್ಕೆ ನಂಜು ಇಳಿಯುವಂತೆ ನನ್ನ ಮುಖ ಸಪ್ಪೆಯಾಗಿತ್ತು. ಆದರೂ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯೊಂದು ನನ್ನ ಮುಖದಲ್ಲಿ ಕಾಣಿಸಿದ್ದನ್ನು ಅಂದಾಜು ಮಾಡದಷ್ಟು ದಡ್ಡರಾಗಿರಲಿಲ್ಲ ಶಾಸ್ತ್ರಿಗಳು. ಆದ್ರೆ ಮುಂದೆ ಏನನ್ನೂ ಕೇಳುವ ಧೈರ್ಯ ನನ್ನಲ್ಲಿಯೂ ಇರಲಿಲ್ಲ.’
ದೇವಾಂಶುಗೆ ಸಿಡಿಲೆರಗಿದಂತಾಯಿತು. ನೆಲಕ್ಕೊರಗಿದ. ‘ಹಾಗಾದರೆ ನನ್ನ ಅಪ್ಪ ಶಾಸ್ತ್ರಿಗಳಲ್ಲವೇ? ತಾಯಿ ಚಾರುಲತೆಯೇ? ಇನ್ಯಾರೋ? ಅಥವಾ ನಾನು ಪಾಪದ ಹೂ..? ಅವರು ಯಾಕಾದರೂ ನನ್ನನ್ನು ತಂದರೋ? ಆಂಟೀ.. ನೀವಾದರೂ ಈ ಜನ್ಮ ರಹಸ್ಯವನ್ನು ಯಾಕಾದರೂ ಹೇಳಿದ್ರಿ..ನನ್ನನ್ನು ಜೀವಂತವಾಗಿ ಕೊಂದ್ರಲ್ಲ?’
`ನಿಜ, ಅಪ್ಪನ ಹೀರೋಯಿಕ್ ಪ್ರಪಂಚದ ಹತ್ತಿರ ಸುಳಿಯಲು ನನಗೆ ಸಾಧ್ಯವಾಗಲಿಲ್ಲ. ಆದರೆ ಅಪ್ಪನ ಜಗತ್ತು ನನ್ನ ಜಗತ್ತು ಆಗಬೇಕೇಕೆ? ನನ್ನದೇ ಆದ ಪ್ರಪಂಚದಲ್ಲಿ ನಾನು ಹೀರೋ ಆಗಲಾರೆನೆಂದು ಅವರು ಹೇಗೆ ಭಾವಿಸಿದ್ರು? ನನ್ನನ್ನು ನನ್ನದೇ ಜಗತ್ತಿನಲ್ಲಿ ಅರಳಲು ಅಪ್ಪ ಯಾಕೆ ಅವಕಾಶ ಕೊಡಲಿಲ್ಲ? ನನ್ನ ಆಸೆ-ಆಕಾಂಕ್ಷೆಗಳು ತಪ್ಪೆಂದು ಇವರಿಗೆಲ್ಲ ಯಾಕೆ ಅನ್ನಿಸ್ತು? ನನ್ನ ಕನಸನ್ನು ನನಸಾಗಿಸಲು ನನಗೆ ಸ್ವಾತಂತ್ರ್ಯ ಬೇಕಿತ್ತಲ್ಲವೇ? ನಾನು ಆ ಕೇರಿಯಲ್ಲೇ ಇರುತಿದ್ದರೆ ಬೆಳಗುತ್ತಿರಲಿಲ್ಲವೇ? ಆದರೀಗ ಎಲ್ಲರ ಕೈಯಿಂದ ಜಾರಿ ಬಿದ್ದಿದ್ದೇನೆ. ನನ್ನ ತುಮುಲವನ್ನು ಹೇಳಲು ಹೋಗಿ ನನ್ನ ಮೂಲವನ್ನು ನಾನೇ ಎಳೆದು ಮೈಮೇಲೆ ಹಾಕಿಕೊಂಡೆನಲ್ಲ. ಎಲ್ಲವನ್ನು ತಿಳಿದು ತಿಳಿಯದಂತೆ ಹೇಗೆ ಇರಲಿ? ಛೇ..!’
ಸೋನೆ ಮಳೆ ತುಂತುರು ಹನಿಯಲಾರಂಭಿಸಿತ್ತು. ಬರಿ ಮೈಯೊಡ್ಡಿ ನಿಂತಿದ್ದ ಅವನ ಮುಖದ ತುಂಬಾ ಮುತ್ತಿನಂತಹ ಬಿಂದುಗಳು. ಆಷಾಢದ ಗಾಳಿಯೂ ಜೋರಾಗಿತ್ತು. ಮೈಯಲ್ಲಿ ಜೋತು ಬಿದ್ದಿದ್ದ ಯಜ್ಞೋಪವೀತ ಬೀಸಿದ ಗಾಳಿಗೆ ಜಾರಿ ನೆಲಸ್ಪರ್ಶವಾಯಿತು. ಕಣ್ಣೀರ ಬಿಂದು ಮಳೆ ಹನಿಯೊಂದಿಗೆ ಮರಳನ್ನು ಸೇರಿ ಆಗಲೇ ಇಂಗಿ ಹೋಗಿತ್ತು. ಪದ್ಮಿನೀ ದೇವಿಯವರಲ್ಲಿ ಏನೋ ಕೇಳಬೇಕೆನಿಸಿತು ಅವನಿಗೆ. ಆದರೆ ಅವರು ಆಗಲೇ ಕನ್ನಿಕಾ ಗುಡಿಯ ಪ್ರಾಂಗಣವನ್ನು ತಲುಪಿದ್ದರು. ಅವನೊಳಗಿನ ಪ್ರಶ್ನೆಗಳಿಗೆ ಧ್ವನಿಯಾಗಲು, ಸ್ವಗತದ ಮಾತುಗಳಿಗೆ ಕಿವಿಯಾಗಲು ಅಲ್ಲಿ ಜನರೇ ಇರಲಿಲ್ಲ.

ಡಾ ದಿನೇಶ್ ನಾಯಕ್
ಸಹಾಯಕ ಪ್ರಾಧ್ಯಾಪಕರು
ಸಂತ ಅಲೋಶಿಯಸ್ ಕಾಲೇಜು(ಸ್ವಾಯತ್ತ)
ಮಂಗಳೂರು-೫೭೫೦೦೩
೯೪೪೯೨೫೫೦೫೬

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram